ಸಮನ್ವಿತ ಸತ್ಯಭಾಮೆ
ತಾನೇ ಮೇಲು, ತನ್ನಿಂದ ಮಿಕ್ಕಿ ಯಾರೂ ಇಲ್ಲ, ತಾನು ಹೇಳಿದಂತೆ ಮನೆ ಮಂದಿ ಕೇಳಬೇಕು, ತನ್ನಿಂದ ಮತ್ತೆಯೇ ಇನ್ನುಳಿದವರೆಲ್ಲಾ ಎಂಬ ಗರ್ವಭಾವ ಸಂಸಾರವಂದಿಗರಾದ ಹೆಂಗಳೆಯರಲ್ಲಿ ಸರ್ವೇ ಸಾಮಾನ್ಯ. ಅದೂ ವಾರಗಿತ್ತಿಯರಲ್ಲಿ ಈ ಕುತ್ಸಿತ ಬುದ್ಧಿ ಅಧಿಕವೆಂದೇ ಹೇಳಬೇಕು. ಆದರೆ ಇಂತಹ ಸಣ್ಣಬುದ್ಧಿಯನ್ನು ಅರಿತುಕೊಂಡು ತಿದ್ದುವವರು ಮಾತ್ರ ವಿರಳ.ಸ್ವತಃ ಅರಿತು ನಿಮಗೆ ನೀವೇ ತಿದ್ದಿಕೊಂಡು ಯೋಗ್ಯರಾಗಿ ಬಾಳಿರಿ ಎಂದು ಶ್ರೀಕೃಷ್ಣನ ಪತ್ನಿ ಸತ್ಯಭಾಮೆ ತನ್ನ ಕತೆಯ ಮೂಲಕ ಸ್ತ್ರೀ ಲೋಕಕ್ಕೆ ಎಚ್ಚರಿಸುತ್ತಾಳೆ.ಸತ್ಯಭಾಮೆಯ ಅಹಂಭಾವ ಯಾವುದರ ಮೂಲಕ ವ್ಯಕ್ತವಾಯಿತು? ಯಾಕೆ ಸೋತಳು?ಅವಳ ಗರ್ವ ಹೇಗೆ ಇಳಿಯಿತು? ಎಂಬುದನ್ನು ಪರಿಶೀಲಿಸೋಣ.
ಯದುವಂಶದ ಸತ್ರಾಜಿತನ ಮಗಳು ಸತ್ಯಭಾಮೆ. ಶ್ರೀಕೃಷ್ಣ ಪರಮಾತ್ಮನ ಅಷ್ಟ ಪತ್ನಿಯರಲ್ಲಿ ರುಕ್ಮಿಣಿ,ಸತ್ಯಭಾಮೆ ಶ್ರೇಷ್ಠರು.ರುಕ್ಮಿಣಿ ಸಾಧು ಸ್ವಭಾವದವಳಾಗಿ ಸಜ್ಜನಳಾದರೆ; ಸತ್ಯಭಾಮೆ ‘ಅಹಂ ಗುಣ’ ಇದ್ದವಳು. ಗರ್ವಿಷ್ಠೆ. ಪತಿಯಾದ ಶ್ರೀಕೃಷ್ಣನಿಗೆ ಹೆಚ್ಚಾಗಿ ತಾನೇ ಬೇಕಾದವಳು,ತಾನೇ ಸುಂದರಿ,ತಾನೇ ಮೇಲು ಎಂಬ ಅಹಂಭಾವ ಅವಳಲ್ಲಿ ಅಧಿಕ ಮನೆಮಾಡಿತ್ತು. ಒಮ್ಮೆ ರುಕ್ಮಿಣಿಯು ಉಪವಾಸ ವ್ರತಾದಿಗಳನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಶ್ರೀಕೃಷ್ಣನೂ ಅವಳ ಜೊತೆಗಿದ್ದು ಅವಳಿಂದ ಅನೇಕ ದಾನಧರ್ಮಾದಿಗಳನ್ನು ಮಾಡಿಸುತ್ತಾನೆ.ಇದೇ ಸಮಯಕ್ಕೆ ದೇವಲೋಕದಿಂದ ಬಂದ ನಾರದರು ಒಂದು ಪಾರಿಜಾತ ಪುಷ್ಪವನ್ನು ಶ್ರೀಕೃಷ್ಣನಿಗೆ ನೀಡುತ್ತಾರೆ. ಶ್ರೀಕೃಷ್ಣನು ತನ್ನ ಬಳಿಯಿದ್ದ ನಾರದರು ನೀಡಿದ; ಆ ವಿಶೇಷ ಹೂವನ್ನು ರುಕ್ಮಿಣಿಗೆ ಕೊಡುತ್ತಾನೆ.
ಇದನ್ನರಿತ ಸತ್ಯಭಾಮೆ ತನ್ನೊಳಗೆ ಕುದಿಯತೊಡಗುತ್ತಾಳೆ. ಕೋಪೋದ್ರಿಕ್ತಳಾಗಿ ಕೃಷ್ಣನ ಮುಂದೆ ತನಗೀಗಲೇ ಆ ಪಾರಿಜಾತ ವೃಕ್ಷವನ್ನೇ ತಂದು ಕೊಡಬೇಕೆಂದು ಪಟ್ಟು ಹಿಡಿಯುತ್ತಾಳೆ. ಸತ್ಯಭಾಮೆಯ ಹಠ ತಡೆಯಲಾರದೆ ಶ್ರೀಕೃಷ್ಣ ದೇವಲೋಕದಿಂದ ಪಾರಿಜಾತ ವೃಕ್ಷವನ್ನೇ ತರಿಸಿಕೊಂಡು ಸತ್ಯಭಾಮೆಯ ಮನೆಯಂಗಳದಲ್ಲಿ ನೆಡಿಸುತ್ತಾನೆ. ಸತ್ಯಭಾಮೆಯ ಅಂಗಳದಲ್ಲಿ ಪಾರಿಜಾತ ವೃಕ್ಷವಿದ್ದರೂ ದಿನಾಲೂ ಅದರ ಸುವಾಸನೆಭರಿತ ಹೂ ಅಲ್ಲೇ ಕೆಳಗಿದ್ದ ರುಕ್ಮಿಣಿಯ ಅಂಗಳಕ್ಕೆ ಉದುರಿ ಹೂವಿನ ರುಕ್ಮಿಣಿಯ ಮನೆ ಬಾಗಿಲಿನಲ್ಲಿ ಹರಡುತ್ತದೆ.ಇಲ್ಲಿ ನಾವು ಗಮನಿಸಬೇಕಾದ ಅಂಶ; ತಾನೇ ಮೇಲೆಂಬ ಗರ್ವದವಳ ಮನೆ ಎತ್ತರದಲ್ಲಿದ್ದು ತಗ್ಗಿ ಬಗ್ಗಿ ನಡೆಯುವ ಸದ್ಭಾವನೆಯ ರುಕ್ಮಿಣಿ ಮನೆ, ಕೆಳಗಡೆ ಇದೆ. “ತಗ್ಗಿದ ಗದ್ದೆಗೆ ಮೂರು ಬೆಳೆ” ಎಂಬ ಜಾನಪದೀಯರ ನಾಣ್ಣುಡಿ ಇಲ್ಲಿ ನೆನಪಾಗದಿರದು. ತಗ್ಗಿ ಬಗ್ಗಿದ ಸದ್ಬುದ್ಧಿಗೆ ಅಧಿಕ ಫಲ. ಜೊತೆಗೆ ಮರದ ಬುಡ ಎಲ್ಲಿದೆ ಎಂಬುದು ಮುಖ್ಯವಲ್ಲ. ಅದರ ಫಲ ಎಲ್ಲಿ ಹೇಗಿದೆ ಎಂಬುದೇ ತತ್ವ.
ಒಬ್ಬರ ದೂರು ಮತ್ತೊಬ್ಬರಲ್ಲಿ ಹೇಳಿಕೊಂಡು ಆಚೀಚೆ ತಾಂಟಿಸಿ ಸಮಸ್ಯೆ ಬಿಗಡಾಯಿಸಿದರೆ ಪರಿಹಾರ ಮಾಡುವಂತಹ ಉಪಾಯವೂ ನಾರದರ ಜಾಯಮಾನ. ಅಂದರೆ ತ್ರಿಲೋಕ ಸಂಚಾರಿಯಾದ ನಾರದರಿಗೆ ಕಲಹಪ್ರಿಯ ಎಂಬ ಹೆಸರೂ ಲೋಕ ಪ್ರಸಿದ್ಧ. ಹೆಚ್ಚಿನ ಸಂದರ್ಭದಲ್ಲೂ ನಾರದರ ಈ ಬುದ್ಧಿ ಲೋಕಕಲ್ಯಾಣಾರ್ಥಕ್ಕಾಗಿಯೇ ಎನ್ನದೆ ವಿಧಿಯಿಲ್ಲ.ಇಲ್ಲಿಯೂ ಅಷ್ಟೆ. ಕೃಷ್ಣನಿಗೆ ಪಾರಿಜಾತ ಪುಷ್ಪ ಕೊಟ್ಟು ತೆರಳಿದ ನಾರದರು; ಕೃಷ್ಣ ಆ ಹೂವನ್ನು ರಾಣಿಯರ ಪೈಕಿ ಯಾರಿಗೆ ನೀಡುತ್ತಾನೆ ಎಂಬ ಕೂಲಂಕುಷವನ್ನು ಅರಿತುಕೊಂಡೇ ಮುಂದಡಿಯಿಡುತ್ತಾರೆ. ಮತ್ತೆ ಸುಮ್ಮನೆ ಕೂರುವುದಿಲ್ಲ ಸತ್ಯಭಾಮೆಯೊಡನೆ “ನೀನೇನೋ ಹಠಮಾಡಿ ಶ್ರೀಕೃಷ್ಣನಲ್ಲಿ ಕಾಡಿ-ಬೇಡಿ ಪಾರಿಜಾತ ವೃಕ್ಷವನ್ನೇ ತರಿಸಿಕೊಂಡು ನಿನ್ನ ಮನೆಯಂಗಳದಲ್ಲಿ ನೆಡಿಸಿದೆಯಾದರೂ ಕೃಷ್ಣನಿಗೆ ಅಧಿಕ ಪ್ರೀತಿ ರುಕ್ಮಿಣಿಯೊಡನೆಯೇ ಸರಿ.ನಿನ್ನಲ್ಲಿ ಅಲ್ಲ”. ಎಂಬ ಸಂಶಯದ ಬೀಜ ಬಿತ್ತುವ ಕೆಲಸ ಮಾಡುತ್ತಾರೆ. ಸಂಶಯದ ಬೀಜ ಕೆಲಸ ಮಾಡಬೇಕಾದರೆ ಸತ್ಯಭಾಮೆಯೇ ತಕ್ಕವಳೆಂದು ನಾರದರಿಗೂ ಗೊತ್ತಿದೆ. ಒಡನೆಯೇ ಸತ್ಯಭಾಮೆ “ಕೃಷ್ಣನಿಗೆ ಅಧಿಕ ಪ್ರೀತಿ ನನ್ನಲ್ಲಿಯೇ ಹೊರತು ರುಕ್ಮಿಣಿಯಲ್ಲಿ ಅಲ್ಲ. ಇದನ್ನು ಮನದಟ್ಟು ಮಾಡಲು ನಾನೇನು ಮಾಡಬೇಕು ಹೇಳಿ!” ಎಂದು ನಾರದರಲ್ಲಿ ಯಾಚಿಸುತ್ತಾಳೆ. ಅದಕ್ಕುತ್ತರವಾಗಿ ನಾರದರು ಅವಳಿಗೆ “ನೀನು ಮಾಡಬೇಕಾದುದು ಇಷ್ಟೇ. ನೀವಿಬ್ಬರೂ ಇರುವಲ್ಲಿಗೆ ಕೃಷ್ಣನನ್ನು ಕರೆಸಿಕೊಂಡು ನಿಮ್ಮಿಬ್ಬರನ್ನು ತಕ್ಕಡಿಯಲ್ಲಿ ತೂಗಿಕೊಳ್ಳಿ.ಆಗ ಯಾರಲ್ಲಿ ಅಧಿಕ ಪ್ರೀತಿಯೆಂಬ ವಿಚಾರ ತಿಳಿದೇ ಬಿಡುತ್ತದೆಯಲ್ಲ!”. ಎನ್ನುತ್ತಾರೆ. ಸತ್ಯಭಾಮೆ ಮತ್ತೆ ಸುಮ್ಮನೆ ಕೂರುವುದಕ್ಕೆ ಸಾಧ್ಯವೇ? .ಅಕ್ಕನನ್ನೂ ಪತಿಯನ್ನೂ ಕರೆದು ನಾರದರ ಸಮಕ್ಷಮದಲ್ಲಿ ಕೃಷ್ಣನನ್ನು ತೂಗುವ ಕಾರ್ಯ ಆರಂಭವಾಗುತ್ತದೆ.
ಮೊದಲು ಸತ್ಯಭಾಮೆಯ ಸರದಿ. ತಕ್ಕಡಿಯ ಒಂದು ತಟ್ಟೆಯಲ್ಲಿ ಕೃಷ್ಣನನ್ನು ಕೂರಿಸಿ ಮತ್ತೊಂದರಲ್ಲಿ ತನ್ನಲ್ಲಿರುವ ವಜ್ರ, ವೈಢೂರ್ಯ,ಧನ,ಕನಕಗಳನ್ನೆಲ್ಲಾ ಒಂದೊಂದೇ ತಂದಿಡುತ್ತಾಳೆ ಸತ್ಯಭಾಮೆ. ಊಹೂಂ ತಕ್ಕಡಿ ಸಮತೂಕಕ್ಕೆ ಬರುವುದೇ ಇಲ್ಲ. ತನ್ನೆಲ್ಲಾ ಸಂಪತ್ತನ್ನೂ ಒಂದೊಂದೇ ಎತ್ತಿ ಇಡುತ್ತಿದ್ದಂತೆ ಮೆಲ್ಲ ಮೆಲ್ಲನೆ ತನ್ನ ಗರ್ವವೂ ಕರಗಿ ಹೋದಂತೆ ಭಾಸವಾದ ಸತ್ಯಭಾಮೆ ಕೊನೆಗೆ ಆರ್ತಳಾಗಿ ರುಕ್ಮಿಣಿಯಲ್ಲಿ ಬೇಡಿಕೊಳ್ಳುತ್ತಾಳೆ. “ಅಕ್ಕಾ…ನಾನು ಸೋತು ಬಿಟ್ಟೆ. ಇನ್ನು ನೀನು ಮುಂದುವರಿಸು ನೀನು ತೆಗೆದುಕೋ” ಎನ್ನುತ್ತಾಳೆ.ಅಷ್ಟರಲ್ಲಿ ಸಾಧ್ವಿಯೂ ಜಾಣೆಯೂ ಆದ ರುಕ್ಮಿಣಿ, ಆಭರಣಗಳನ್ನೋ ಧನಕನಕಗಳನ್ನೋ ಇಡದೆ ಪರಮಾತ್ಮ ಸ್ವರೂಪಿಯಾದ ತನ್ನ ಪತಿದೇವನಿಗೆ ಪ್ರಿಯವಾದ ತುಳಸೀದಳವೊಂದನ್ನು ಭಕ್ತಿಯಿಂದ ಇಡುತ್ತಾಳೆ. ಪರಮಾಶ್ಚರ್ಯ!. ರುಕ್ಮಿಣಿ ಪ್ರೀತಿಯಿಂದ ತುಳಸೀದಳ ಇಟ್ಟೊಡನೆಯೇ ಶ್ರೀಕೃಷ್ಣನ ತಟ್ಟೆ ಮೇಲೇಳುತ್ತದೆ. ಇಷ್ಟೊತ್ತಿಗಾಗಲೇ ಸತ್ಯಭಾಮೆಗೆ ತನ್ನ ಅಹಂಭಾವವೆಲ್ಲ ಕರಗಿಹೋಗಿ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಉಂಟಾಗಿತ್ತದೆ.
ಬದುಕು ಅದೆಷ್ಟೋ ಪಾಠವನ್ನು ನಮಗೆ ಕಲಿಸುತ್ತದೆ. ಜೀವನಾನುಭವದಿಂದ ಕಲಿತ ನೀತಿಪಾಠ ಮುಂದಿನವರ ಬಾಳಿಗೆ ದಾರಿದೀಪವಾಗುತ್ತದೆ ಎಂಬುದನ್ನು ಸತ್ಯಭಾಮೆ ಈ ಮೂಲಕ ಸಾರುತ್ತಾಳೆ.
– ವಿಜಯಾಸುಬ್ರಹ್ಮಣ್ಯ ಕುಂಬಳೆ.
ಪುರಾಣ ಕಥೆ ಕೇಳಿ ದ್ದೇ ಆದರೂ..ನೀವು ಬರದುದನ್ನು ಓದುವುದರಿಂದ ಮತ್ತೆ ನೆನಪಿಸಿಕೊಳ್ಳುವಂತಾಗುತ್ತದೆ…ವಿಜಯಾ ಮೇಡಂ
ಚೆನ್ನಾಗಿದೆ
ಚಂದದ ನಿರೂಪಣೆ
ಸತ್ಯಭಾಮೆಯ ಅಹಂಕಾರವನ್ನು ಇಳಿಸಿದ, ಶ್ರೀಕೃಷ್ಣನನ್ನು ತೂಗುವ ಕಥೆಯು, ಪರಮಾತ್ಮನು ಸರಳ ಭಕ್ತಿಯನ್ನು ಇಷ್ಟಪಡುವನೆಂಬ ಸಂದೇಶವನ್ನೂ ಹೊಂದಿದೆ. ಪೌರಾಣಿಕ ಕಥೆಗಳು ಯಾವಾಗಲೂ ಅತ್ಯುತ್ತಮ ಜೀವನ ಮೌಲ್ಯಗಳನ್ನು ಒಳಗೊಂಡಿರುತ್ತವೆ…ಧನ್ಯವಾದಗಳು ಅಕ್ಕ.
ಎಲ್ಲಾ ಓದುಗರಿಗೂ ಹೃತ್ಪೂರ್ವಕ ಧನ್ಯವಾದಗಳು.
ಗೊತ್ತಿರುವ ಕಥಯೇ ಆದರೂ ಚಂದದ ನಿರೂಪಣೆಯೊಂದಿಗೆ ಮನ ಮುಟ್ಟಿತು. ಜೀವನದಲ್ಲಿ ಸಮಸ್ಥಿತಿ ಸಾಧಿಸಲು ಇಂತಹ ಕಥೆಗಳನ್ನು ಆಗಾಗ್ಗೆ ಓದುತ್ತಲೇ ಇರಬೇಕು.