ಅಪ್ರತಿಮ ಹರಿಭಕ್ತ ಅಂಬರೀಷ

Share Button

ಯಾವನಾದರೂ ಒಬ್ಬ ಯಾವುದಾದರೊಂದು ವಿಷಯದಲ್ಲಿ ಸಾಧನೆ, ಬುದ್ಧಿ, ತಪಸ್ಸುಗೈದು ಆತನ ಪ್ರತಿಭೆ ಬೆಳಕಿಗೆ ಬಂದರೆ ಸಮಾಜದಲ್ಲಿ ತಾನೇ ಗಣ್ಯವ್ಯಕ್ತಿ, ತನ್ನನ್ನು ಮೀರಿಸುವವರು ಯಾರೂ ಇಲ್ಲ ಎಂದು ಬೀಗುತ್ತಾ ದುರಹಂಕಾರ ಪಡುವವರನ್ನು ಎಲ್ಲೆಡೆ ಕಾಣುತ್ತೇವೆ. ಜಗತ್ತಿನಲ್ಲಿ ಅವರನ್ನು ಮೀರಿಸುವವರು ಇದ್ದಾರೆ ಎಂಬುದು ಅವರ ಗಮನಕ್ಕದು ಬರುವುದೇ ಇಲ್ಲ. ಆದರೆ ತಮ್ಮ ಅಹಂನ್ನು ತೋರಿಸುತ್ತಾ ಮೆರೆದಾಡುವವರು ಒಂದಿಲ್ಲೊಂದು ದಿನ ಯಾರೊಂದಿಗೋ ಪಾಠ ಕಲಿಯುವುದಂತೂ ಶತಸಿದ್ಧ. ಇಂತಹ ಉದಾಹರಣೆಗಳು ಇಂದು-ನಿನ್ನೆಯದಲ್ಲ, ಪುರಾಣ ಕಾಲದಿಂದ ಈ ನಿಟ್ಟಿನಲ್ಲಿ ದೂರ್ವಾಸರೊಮ್ಮೆ ತಮ್ಮ ಅಹಂನಲ್ಲಿ ತಾವೇ ಸಿಕ್ಕಿಬೀಳುವ ಸಂದರ್ಭ! ಯಾರಿಂದ? ಯಾವ ಸನ್ನಿವೇಶದಲ್ಲಿ ಎಂಬುದನ್ನು ನೋಡೋಣ.

ವೈವಸ್ವತ ಮನುವಿನ ಮೊಮ್ಮಗನೂ, ನಾಭಾಗನ ಮಗನೇ ಅಂಬರೀಷ, ಈತನು ಸೂರ್ಯವಂಶದ ರಾಜ. ವಿಷ್ಣುವಿನ ಪರಮ ಭಕ್ತ. ಈ ರಾಜ, ಗದ್ದುಗೆ ಏರಿದರೂ ಸ್ವತಃ ವಿರಾಗಿಯಂತಿರುತ್ತಾನೆ. ಭಗವಂತನ ಅತೀವ ಭಕ್ತನಾಗಿ ಆ ರೀತಿಯಲ್ಲೇ ಕಾಲ ಕಳೆಯುತ್ತಾನೆ. ‘ಯಥಾ ರಾಜ ತಥಾ ಪ್ರಜಾ’ ಎಂಬಂತೆ ಅಂಬರೀಷನ ಪ್ರಜೆಗಳೂ ಕೂಡ ನಿತ್ಯ ನಿರಂತರವಾಗಿ ಶ್ರೀಕೃಷ್ಣನ ಭಕ್ತರಾಗಿದ್ದರು. ಅಂಬರೀಷನಿಗೆ ರಾಜವೈಭೋಗ, ಅಷ್ಟೆಶ್ವರ್ಯಗಳು ಆತ್ಮಾನಂದದ ಮುಂದೆ ತುಚ್ಛವಾಗಿ ಕಾಣುತ್ತಿದ್ದವು. ಈತನು ಭಕ್ತಿಯೋಗದಿಂದ, ತಪಸ್ಸಿನಿಂದ, ಪ್ರಜಾಪಾಲನ ರೂಪವಾದ ಸ್ವಧರ್ಮದ ಮೂಲಕವಾಗಿ ಭಗವಂತನನ್ನು ಪ್ರಸನ್ನಗೊಳಿಸುತ್ತಾ ಎಲ್ಲ ವಿಧದ ಆಸಕ್ತಿಗಳನ್ನು ಒಂದೊಂದೇ ಪರಿತ್ಯಾಗ ಮಾಡುತ್ತಾ ಇದ್ದನು. ಅಂಬರೀಷನ ಅನನ್ಯ ಪ್ರೇಮಮಯವಾದ ಭಕ್ತಿಗೆ ಸುಪ್ರೀತನಾದ ಶ್ರೀಹರಿಯು ತನ್ನ ಭಕ್ತನ ರಕ್ಷಣೆಗೆ ತನ್ನ ಸುದರ್ಶನ ಚಕ್ರವನ್ನು ನಿಯಮಿಸಿದ್ದನು. ಅಂಬರೀಷನಿಗೆ ತಕ್ಕಂತೆಯೇ ಆತನ ಪತ್ನಿಯೂ ಇದ್ದಳು. ಧರ್ಮನಿಷ್ಠಳೂ, ಭಕ್ತಿ ಪರಾಯಣಳೂ, ಸುಗುಣಶೀಲೆಯೂ ಆಗಿದ್ದಳು. ಒಮ್ಮೆ ಅಂಬರೀಷನು ಸಪತ್ನಿಸಹಿತನಾಗಿ ಒಂದು ವರ್ಷದ ದ್ವಾದಶಿ ಪ್ರಧಾನವಾದ ಏಕಾದಶಿ ವ್ರತವನ್ನು ಕೈಗೊಂಡನು. ವ್ರತಗಳಲ್ಲೆಲ್ಲ ಏಕಾದಶಿ ವ್ರತವು ಶ್ರೇಷ್ಠವಾದುದು. ತಿಂಗಳಲ್ಲಿ ಎರಡು ಬಾರಿ ಅಂದರೆ ಶುಕ್ಲ, ಕೃಷ್ಣ ಪಕ್ಷಗಳಲ್ಲಿ ಆಚರಣೆ, ಏಕಾದಶಿ ದಿನ ಉಪವಾಸವಿದ್ದು, ಮಾರನೇ ದಿನ ಅಂದ್ರೆ ದ್ವಾದಶಿ ದಿನ ಶ್ರೀಹರಿಯ ಪೂಜೆ ಮಾಡಿ ತೀರ್ಥಪ್ರಸಾದ ತಕ್ಕೊಂಡು ದ್ವಾದಶಿ ಪಾರಣೆ (ದೇವರ ನೈವೇದ್ಯ) ಮಾಡುವ ವಿಧಿ ವಿಧಾನಗಳು ಈ ವ್ರತದ ವಿಶೇಷ .

ರಾಜನಾದ ಅಂಬರೀಷನು ಏಕಾದಶಿ ವ್ರತ ಕೈಗೊಂಡನಲ್ಲವೇ? ಅರಸನ ಪೂಜೆ,ವ್ರತಾಚರಣೆ ಎಂದರೆ ಕೇಳಬೇಕೇ? ಸಕಲ ವಿಧಿ ವಿಧಾನಗಳಿಂದ ಆಚರಿಸಿದನು. ಒಂದು ವರ್ಷದಲ್ಲಿ ಏಕಾದಶಿ ವ್ರತವನ್ನಾಚರಿಸಿ ಕೊನೆಯಲ್ಲಿ ಮೂರು ರಾತ್ರಿಗಳು ಉಪವಾಸವಿದ್ದು, ಯಮುನಾ ನದಿಯಲ್ಲಿ ಸ್ನಾನ ಮಾಡಿ ಮಧುವನದಲ್ಲಿ ಭಗವಾನ್ ಶ್ರೀಹರಿಯನ್ನು ಪೂಜಿಸಿದನು. ಅಂತೆಯೇ ಬ್ರಾಹ್ಮಣ ಶ್ರೇಷ್ಠರನ್ನು ಭಕ್ತಿಪೂರ್ವಕವಾಗಿ ಸತ್ಕರಿಸಿದನು ಹಾಗೂ ಬ್ರಾಹ್ಮಣರಿಗೆ ಧನ-ಕನಕಗಳೊಂದಿಗೆ ಗೋವುಗಳನ್ನೂ ದಾನ ನೀಡಿದನು. ಅಷ್ಟರಲ್ಲಿ ಶಾಪಾನುಗ್ರಹ ಶಕ್ಯರಾದ ದೂರ್ವಾಸ ಮಹಾಮುನಿಗಳು ಆಗಮಿಸಿದರು. ಸದ್ಭಕ್ತನೂ, ವ್ರತನಿಷ್ಠನೂ ಆದ ಅಂಬರೀಷನು ಮಹರ್ಷಿಗಳನ್ನು ಕುಳ್ಳಿರಿಸಿ, ಆದರಿಸಿ ಪೂಜಿಸಿದನು. ಅಲ್ಲದೆ ಭೋಜನಕ್ಕಾಗಿ ಪ್ರಾರ್ಥಿಸಿಕೊಂಡನು. ದೂರ್ವಾಸರು ರಾಜನ ಪ್ರಾರ್ಥನೆಯನ್ನು ಮನ್ನಿಸಿ ತನ್ನ ಸ್ನಾನಾದಿ ಅವಶ್ಯ ಕರ್ಮಗಳನ್ನು ತೀರಿಸಿ ಬರುವೆನೆಂದು ನದೀ ತೀರಕ್ಕೆ ತೆರಳಿದರು.

ಶೀಘ್ರ ಬರುವುದಾಗಿ ತಿಳಿಸಿಹೋದ ಮುನಿಗಳು ಎಷ್ಟು ಹೊತ್ತಾದರೂ ಬಾರದಿರಲು ರಾಜನು ಧರ್ಮಸಂಕಟಕ್ಕೊಳಗಾದನು. ಕಾರಣ ಇನ್ನು ದ್ವಾದಶಿಯು ಕೇವಲ ಒಂದು ಗಳಿಗೆ ಮಾತ್ರವಿದೆ! ಅತಿಥಿಯಾಗಿ ಬಂದ ಬ್ರಾಹ್ಮಣೋತ್ತಮರಿಗೆ ಭೋಜನ ನೀಡದೆ ತಾನು ಮಾಡುವುದು ದೋಷ. ಹಾಗೆಯೇ ದ್ವಾದಶಿ ಕಾಲ ಮುಗಿದ ಮೇಲೆ ತಾನು ಪಾರಣೆ ಮಾಡುವುದು ಎರಡೂ ದೋಷಯುಕ್ತವಾಗಿದೆ!. ಏನು ಮಾಡುವುದೆಂದು ಅತೀವ ಚಿಂತೆಗೊಳಗಾದನು. ರಾಜನು ಬ್ರಾಹ್ಮಣ ಶ್ರೇಷ್ಠರನ್ನೂ, ಮಂತ್ರಿಮಂಡಲವನ್ನೂ ಕರೆದು ಪರಿಹಾರಕ್ಕಾಗಿ ವಿಚಾರ ವಿಮರ್ಶಿಸಿ ದೇವರ ತೀರ್ಥ ಪ್ರಸಾದ ಸ್ವೀಕರಿಸಿ ಇತರ ಬ್ರಾಹ್ಮಣರಿಗೆ ಭೋಜನ ವ್ಯವಸ್ಥೆಗೆ ಏರ್ಪಾಡು ಮಾಡಿಸಿದನು.

ಅತ್ತ ನದಿ ತೀರಕ್ಕೆ ತೆರಳಿದ ದೂರ್ವಾಸರು ರಾಜನ ಸಮಯ, ಸಂದರ್ಭ ತಿಳಿದೂ ಬೇಕೆಂದೇ ವಿಳಂಬ ಮಾಡಿ ಹಿಂತಿರುಗಿದ್ದರು. ರಾಜನು ಅವರ ಮುಂದೆ ಹೋಗಿ ಅಭಿನಂದಿಸಿದಾಗ ರಾಜನ ಪಾರಣೆ ಮುಗಿದಿರಬೇಕೆಂದು ಅನುಮಾನಿಸಿದರು. ಹಸಿದಿರುವ ದೂರ್ವಾಸರಿಗೆ ಸಿಟ್ಟು ಬಂದು ಥರ ಥರ ನಡುಗಿದರು. ಕೆರಳಿದ ಮುನಿವರ್ಯರು ‘ನಾನು ಅತಿಥಿಯಾಗಿ ಈ ಅಂಬರೀಷ ಅರಸನಲ್ಲಿಗೆ ಬಂದಿರುವೆನು. ನನ್ನನ್ನು ಸತ್ಕರಿಸಿ ಭೋಜನ ನೀಡುವ ಮೊದಲು ಈತನು ಊಟ ಮಾಡಿರುವನು. ಇವನ ಧರ್ಮ ವ್ಯತಿಕ್ರಮಕ್ಕೆ ಫಲವನ್ನು ತೋರಿಸಿಕೊಡುತ್ತೇನೆ’ ಎಂದವರೇ ತನ್ನ ಒಂದು ಜಟೆಯನ್ನು ಕಿತ್ತು ಅದರಿಂದ ಅಂಬರೀಷನನ್ನು ಕೊಂದು ಬಿಡಲು ಒಂದು ಕೃತ್ಯೆ (ಮಾಟಗಾತಿ)ಯನ್ನು ನಿರ್ಮಿಸಿದರು. ಅದು ಬೆಂಕಿಯನ್ನು ಉಗುಳುತ್ತಾ, ಖಡ್ಗವನ್ನು ಝಳಪಿಸುತ್ತಾ ರಾಜನನ್ನು ಆಕ್ರಮಿಸಿತು.

ರಾಜನಾದರೋ ನಿಂತ ಜಾಗದಿಂದ ಕದಲದೆ ಶ್ರೀಹರಿಯನ್ನೇ ಧ್ಯಾನಿಸುತ್ತಾ ನಿಂತಿದ್ದನು. ಭಗವಂತನು ತನ್ನ ಭಕ್ತನ ರಕ್ಷಣೆಗಾಗಿ ತನ್ನ ಸುದರ್ಶನ ಚಕ್ರವನ್ನು ಮೊದಲೇ ನಿಯುಕ್ತಗೊಳಿಸಿದ್ದನು. ಸುದರ್ಶನ ಚಕ್ರವು ದೂರ್ವಾಸರ ಕೃತ್ಯೆಯನ್ನು ಭಸ್ಮ ಮಾಡಿತು. ಮತ್ತೆ ಅದು ದೂರ್ವಾಸರ ಕಡೆಗೆ ತಿರುಗಿತು. ಈಗ ನಿಜವಾಗಿ ದೂರ್ವಾಸರು ಭಯಗೊಂಡು ಓಡಿದರು. ಅವರು ಓಡಿದಂತೆಲ್ಲ ಅದು ಅಟ್ಟಿಸಿತು. ದಶದಿಕ್ಕುಗಳಲ್ಲಿ ಪಲಾಯನ ಮಾಡಿದರೂ ಸುದರ್ಶನ ಚಕ್ರವು ದೂರ್ವಾಸರ ಬೆನ್ನು ಬಿಡದೆ ಹಿಂಬಾಲಿಸಿತು. ಆಕಾಶ, ಪೃಥ್ವಿ, ಅತಲ-ವಿತಲಗಳನ್ನೂ ಓಡಿದರೂ ಯೋಜನವಾಗಲಿಲ್ಲ. ತಾನು ಬದುಕುಳಿಯುವ ಸಾಧ್ಯತೆಯಿಲ್ಲವೆಂದರಿತ ದೂರ್ವಾಸರು ಬ್ರಹ್ಮದೇವರ ಬಳಿಗೋಡಿ ಅವರಲ್ಲಿ ತನ್ನ ಸಂಕಟವನ್ನು ನಿವೇದಿಸಿಕೊಂಡರು. ‘ಸುದರ್ಶನ ಚಕ್ರದ ಹಿಡಿತದಿಂದ ತಪ್ಪಿಸಿ ನಿನಗೆ ರಕ್ಷಣೆ ನೀಡಲು ನನ್ನಿಂದ ಅಸಾಧ್ಯ ನೀನು ಕೈಲಾಸಕ್ಕೆ ಹೋಗಿ ಪರಶಿವನಲ್ಲಿ ಮೊರೆಯಿಡು’ ಎಂದನು. ದೂರ್ವಾಸರು ಹಾಗೆಯೇ ಮಾಡಿದರು. ಆಗ ಪರಶಿವನು ‘ಇದು ನನ್ನಿಂದಲೂ ಅಸಾಧ್ಯ ನೀನು ಶ್ರೀಹರಿಯಲ್ಲಿಯೇ ಹೋಗಿ ಬೇಡಿಕೋ’ ಎಂದನು. ನಿರ್ವಾಹವಿಲ್ಲದೆ ದೂರ್ವಾಸರು ಶ್ರೀಹರಿಯ ಬಳಿಗೆ ಬಂದರು. ಭಗವಂತನ ಚರಣಗಳಲ್ಲಿ ಅಡ್ಡಬಿದ್ದು ‘ನನ್ನ ಅಪರಾಧವನ್ನು ಮನ್ನಿಸಿ ನನಗೆ ರಕ್ಷಣೆ ನೀಡು, ನಿನ್ನ ಪ್ರಿಯ ಭಕ್ತನಿಗೆ ನಾನು ಅಪರಾಧ ಮಾಡಿಬಿಟ್ಟೆ. ನನ್ನ ದುಡುಕಿನಿಂದಾದ ಈ ತಪ್ಪನ್ನು’ ಮನ್ನಿಸಿ ಪಾರು ಮಾಡು’ ಎಂದು ಅಂಗಲಾಚಿ ಬೇಡಿಕೊಂಡರು.

ಆಗ ಶ್ರೀಹರಿಯು ‘ಇದು ನನ್ನಿಂದಲೂ ಅಸಾಧ್ಯವಾದ ಕೆಲಸ, ತಾವು ಅಂಬರೀಷನಲ್ಲಿಗೇ ಹೋಗಿ ಆತನ ಕಾಲಿಗೆರಗಿ ಕ್ಷಮೆ ಯಾಚಿಸುವುದೇ ಈಗ ಉಳಿದಿರುವ ಮಾರ್ಗ, ಅಂತೆಯೇ ಮಾಡಿರಿ ಎಂದನು. ವಿಧಿಯಿಲ್ಲದೆ ದೂರ್ವಾಸರು ಅಂಬರೀಷನ ಕಾಲಬುಡಕ್ಕೆ ಬಂದು ತಪ್ಪೊಪ್ಪಿದರು. ಅಂಬರೀಷನು ಶ್ರೀಹರಿಯನ್ನು ಅನನ್ಯ ಧ್ಯಾನಿಸಿಕೊಂಡು ಬ್ರಾಹ್ಮಣೋತ್ತಮರಾದ ದೂರ್ವಾಸರ ಪ್ರಾಣಕ್ಕೆ ಬಂದ ವಿಪತ್ತನ್ನು ಹೋಗಲಾಡಿಸಿ ಮಂಗಲವನ್ನುಂಟುಮಾಡಲು ಕೇಳಿಕೊಂಡನು ಹಾಗೂ ಸುದರ್ಶನ ಚಕ್ರವನ್ನು ರಾಜಾ ಅಂಬರೀಷನು ವಿಧ ವಿಧವಾಗಿ ಸ್ತುತಿಸಿದನು. ಆಗ ಸೂರ್ಯ ಕಿರಣದಿಂದ ಮಂಜುಗಡ್ಡೆ ಕರಗುವಂತೆ ಸುದರ್ಶನ ಚಕ್ರದ ಉರಿಯು ಮೆಲ್ಲಮೆಲ್ಲನೆ ಕರಗಿ ಶಾಂತವಾಯಿತು. ಆಗ ದೂರ್ವಾಸರ ಅಹಂಭಾವವೂ ಹೇಳ ಹೆಸರಿಲ್ಲದೆ ಓಡಿಹೋಗಿತ್ತು. ದೂರ್ವಾಸರು ಓಡಿಹೋದ ಮೇಲೆ ಅಂಬರೀಷನೂ ಭೋಜನವನ್ನು ಮಾಡಿರಲಿಲ್ಲ. ಈಗ ಅವನು ದೂರ್ವಾಸರನ್ನೂ ಸಂತೋಷಪಡಿಸಿ ವಿಧಿವತ್ತಾಗಿ ಅವರೊಂದಿಗೆ ಭೋಜನವನ್ನು ಮಾಡಿದನು.

ಯಾರೇ ಆದರೂ ತಮಗೆ ತಿಳಿದ ವಿಶೇಷ ವಿದ್ಯೆ ಅಥವಾ ಪ್ರತಿಭೆಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂಬುದೇ ಈ ಕತೆಯ ತಿರುಳು. ತನಗೆ ಅಪಕಾರ ಮಾಡಿದವನಿಗೂ ಸಮಯ-ಸಂದರ್ಭವರಿತು ಉಪಕಾರ ಮಾಡು ಎಂಬುದೇ ಅಂಬರೀಷನ ದಿವ್ಯ ಸಂದೇಶ. ಪುಟ್ಟ ಸಂಗತಿಯನ್ನು ಬೆಟ್ಟದಷ್ಟು ಮಾಡಿ ಕೋಪಿಸಿಕೊಂಡು ಹಾರಾಡುವವರನ್ನು ದೂರ್ವಾಸ ಮುನಿಯಂತಾಗಬೇಡ ಎನ್ನುತ್ತಾರಲ್ಲವೇ?

ವಿಜಯಾಸುಬ್ರಹ್ಮಣ್ಯ ಕುಂಬಳೆ

5 Responses

  1. Anonymous says:

    ಸುರಹೊನ್ನೆಯ ಸಂಚಾಲಕಿ , ಹಾಗೂ ಲೇಖಕಿ ವೃಂದಕ್ಕೆ ಧನ್ಯವಾದಗಳು.

  2. ನಯನ ಬಜಕೂಡ್ಲು says:

    Nice

  3. ಪುರಾಣ ಕಥೆ ಎಂದಿನಂತೆ ಓದಿಸಿಕೊಂಡುಹೋಯಿತು.. ಮರೆತಂತಿರುವ ಕಥೆಗಳನ್ನು ಮತ್ತೆ ನೆನಪಿಸುವಂತೆ ಮಾಡುವ ನಿಮಗೆ ಧನ್ಯವಾದಗಳು ಮೇಡಂ.

  4. ಶಂಕರಿ ಶರ್ಮ says:

    ಉತ್ತಮ ಸಂದೇಶವನ್ನು ಒಳಗೊಂಡ ಹರಿಭಕ್ತ ಅಂಬರೀಷನ ಕಥೆ ಬಹಳ ಚೆನ್ನಾಗಿದೆ.

  5. ವೆಂಕಟಾಚಲ says:

    ಒಳ್ಳೆಯ ಕಥೆ….

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: