ಇದು ಯಾರು ಬರೆದ ಕಥೆಯೋ
‘ಅಜ್ಜಿ ಬಾ ಜ್ಯೋತಿಷ್ಯ ಕೇಳೋಣ’ ಎಂದು ಮೊಮ್ಮಗಳು ದಿಶಾ ಕಾಡಿದಾಗ ನಾನು ಬೆಚ್ಚಿ ಬಿದ್ದೆ. ‘ಬೇಡ ಪುಟ್ಟಾ, ಈ ಜ್ಯೋತಿಷಿಗಳ ಸಹವಾಸಾನೇ ಬೇಡ’ ಎಂದು ಅವಳನ್ನು ಮೆಲ್ಲನೆ ಪುಸಲಾಯಿಸಿ ಬೇರೆ ದಾರಿಯಲ್ಲಿ ವಾಕ್ ಕರೆದೊಯ್ದೆ. ಸ್ಕಾಟ್ಲ್ಯಾಂಡಿನಲ್ಲಿ ವಾಸವಾಗಿದ್ದ ದಿಶಾ, ಒಂದು ತಿಂಗಳ ರಜೆ ಎಂದು ಶಿವಮೊಗ್ಗಾಕ್ಕೆ ಬಂದಿದ್ದಳು. ಒಂದು ಸಂಜೆ ಅವಳ ಜೊತೆ ವಾಕ್ ಹೋಗುತ್ತಿರುವಾಗ ಹಾದಿಯಲ್ಲಿ ಕಂಡ ಫಲಕದಲ್ಲಿ, ‘ನಿಮ್ಮ ಮುಖ ನೋಡಿಯೇ ಭವಿಷ್ಯವನ್ನು ಹೇಳಲಾಗುವುದು’ ಎಂಬ ಬರಹ ಕಂಡವಳಿಗೆ ಎಂತಹದೋ ಕುತೂಹಲ. ಅವಳನ್ನು ತಡೆಯಲು ಕಾರಣ ನನ್ನ ಮನದಂಗಳದಲ್ಲಿ ಎದ್ದ ನೆನಪುಗಳ ಸುನಾಮಿ. ಜ್ಯೋತಿಷಿಯ ಭವಿಷ್ಯವಾಣಿಯಿಂದ ನನ್ನ ಪ್ರೀತಿಯ ಗೆಳತಿಯ ಬದುಕು ದಾರುಣವಾಗಿ ಕೊನೆಗೊಂಡ ಪ್ರಸಂಗ.
ಐದಾರು ವರ್ಷಗಳ ಹಿಂದೆ ನಡೆದಂತಹ ಘಟನೆ – ಕಾಲೇಜೊಂದರಲ್ಲಿ ನಾವು ಸುಮಾರು ಹತ್ತು ಜನ ಶಿಕ್ಷಕಿಯರು ಒಟ್ಟಾಗಿ ಕೆಲಸ ಮಾಡುತ್ತಿದ್ದೆವು. ‘ನೂರು ಜುಟ್ಟು ಒಟ್ಟಾಗಿ ಇರಬಲ್ಲವು ಆದರೆ ಎರಡು ಜಡೆ ಜೊತೆಯಾಗಿರಲು ಸಾಧ್ಯವಿಲ್ಲ ಎಂಬ ಕನ್ನಡ ನಾಣ್ಣುಡಿಯನ್ನು ಹುಸಿಗೊಳಿಸುತ್ತಾ ಸಾಗಿತ್ತು ನಮ್ಮ ನಡುವಿನ ಸ್ನೇಹ, ಬಾಂಧವ್ಯ. ನಾವೆಲ್ಲಾ ತಿಂಗಳಿಗೊಮ್ಮೆಯಾದರೂ ಒಟ್ಟಾಗಿ ಸೇರಿ ಸಂತೋಷದಿಂದ ಕಾಲ ಕಳೆಯುತ್ತಿದ್ದೆವು. ಹುಟ್ಟುಹಬ್ಬಗಳನ್ನು ಆಚರಿಸಿ ಗೊತ್ತಿಲ್ಲದ ನಾವು, ಈಗ ಗೆಳತಿರೆಲ್ಲರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದೆವು. ಇನ್ನು ಮಂಗಳಗೌರಿ ಪೂಜೆ, ತುಳಸಿ ಪೂಜೆ, ದುರ್ಗಾ ಪೂಜೆಯ ಸಮಯದಲ್ಲಿ ಒಬ್ಬರ ಮನೆಗೊಬ್ಬರು ತಪ್ಪದೇ ಭೇಟಿ ನೀಡುತ್ತಿದ್ದೆವು. ಗೃಹಪ್ರವೇಶ, ಮಕ್ಕಳ ಮದುವೆ ಸಮಾರಂಭ, ಮೊಮ್ಮಕ್ಕಳ ನಾಮಕರಣ ಹೀಗೆ ನಮ್ಮ ಸಂತೋಷಕೂಟಗಳ ಪಟ್ಟಿ ದಿನದಿಂದ ದಿನಕ್ಕೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇತ್ತು. ಕೆಲವು ಬಾರಿ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಲು ಒಟ್ಟಾಗಿ ಪ್ರವಾಸ ಕೈಗೊಳ್ಳುತ್ತಿದ್ದೆವು. ನಿಧಾನವಾಗಿ ಅಂತರ್ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಸುತ್ತಮುತ್ತಲಿರುವ ದೇಶಗಳನ್ನು ನೋಡಿದ್ದೂ ಉಂಟು. ಒಮ್ಮೆ ಅಮೆರಿಕಾದ ಬಾಸ್ಟನ್ ನಗರದಲ್ಲಿ ನಡೆಯಲಿದ್ದ ಕೆಮಿಸ್ಟ್ರಿ ಅಂತರ್ಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಉತ್ಸಾಹದಿಂದ ತಯಾರಿ ನಡೆಸಿದ್ದೆವು. ಅಲ್ಲಿನ ವೀಸಾ ಸಿಗಲು ಹರಸಾಹಸ ಪಡಬೇಕಾಯಿತು. ನಮ್ಮ ಎಲ್ಲಾ ದಾಖಲೆಗಳನ್ನು ದುರ್ಬೀನು ಹಾಕಿಕೊಂಡು ನೋಡಿದ ಮೇಲೆ, ಕೇವಲ ಒಂದು ವರ್ಷ ಅವಧಿಯ ವೀಸಾವನ್ನು ನಮಗೆ ನೀಡಿದರು. ನಾವು ಹೊರಡಲು ಇನ್ನು ಒಂದು ತಿಂಗಳು ಬಾಕಿ ಇತ್ತು. ಎಲ್ಲರಿಗಿಂತ ಉತ್ಸಾಹದಿಂದ ಹೊರಟವರು ಸುಮಾ ಮೇಡಂ. ಅವರಿಗೆ ಬಾಲ್ಯದಿಂದಲೂ ಅಮೆರಿಕಾ ಎಂದರೆ ಅದೇನೋ ಆಕರ್ಷಣೆ, ಅದು ಧರೆಗಿಳಿದ ಸ್ವರ್ಗ ಎಂಬ ಭಾವನೆ, ತನ್ನ ಜೀವನದಲ್ಲಿ ಒಮ್ಮೆಯಾದರೂ ಅಮೆರಿಕಾವನ್ನು ನೋಡಲೇಬೇಕೆಂಬ ಅದಮ್ಯ ಆಸೆ. ಅಂತೂ ಅವರ ಆಸೆ ಈಡೇರುವ ಅಮೃತಘಳಿಗೆ ಬಂದಿತ್ತು.
ಆಗ ನಡೆದಿತ್ತೊಂದು ಮರೆಯಲಾಗದ ಘಟನೆ – ಸುಮಾ, ಅವರ ಅಣ್ಣನ ಮಗನ ಉಪನಯನಕ್ಕೆಂದು ಎರಡು ದಿನದ ಮಟ್ಟಿಗೆ ತವರಿಗೆ ಹೋಗಿ ಬಂದವರು ಮಂಕಾಗಿ ಕುಳಿತುಬಿಟ್ಟರು. ಸದಾ ಉತ್ಸಾಹ, ಲವಲವಿಕೆಯಿಂದ ಇರುತ್ತಿದ್ದವರು, ಅರಳು ಹುರಿದಂತೆ ಮಾತನಾಡುತ್ತಿದ್ದವರು, ನಿಂತಲ್ಲಿ ನಿಲ್ಲದೆ ಹಕ್ಕಿಯಂತೆ ಹಾರಾಡುತ್ತಿದ್ದವರು ಹತಾಶರಾಗಿ ಕುಳಿತುಬಿಟ್ಟಿದ್ದರು. ಏನಾಯಿತು ಸುಮಾಗೆ ಎಂದು ನಾವೆಲ್ಲಾ ಚಡಪಡಿಸಿದೆವು. ಆಗ ಸುಮಾ ಒಂದು ಬಾಂಬ್ ಸಿಡಿಸಿದರು, ‘ನಾನು ಅಮೆರಿಕಾಗೆ ಬರುವುದಿಲ್ಲ, ನನಗೆ ಮೊದಲಿನ ಹಾಗೆ ನಡೆಯಲಾಗುತ್ತಿಲ್ಲ’, ಎಂದು. ನಮಗೆಲ್ಲಾ ಗಾಬರಿ, ಏಕೆಂದರೆ ಆಗಲೇ ನಮ್ಮೆಲ್ಲರ ಅಮೆರಿಕಾ ವೀಸಾ ಬಂದಾಗಿತ್ತು, ವಿಮಾನದ ಟಿಕೆಟ್ ಕೊಂಡಾಗಿತ್ತು, ನಾವು ತಕ್ಷಣ ತಪಾಸಣೆಗಾಗಿ ಅವರನ್ನು ವೈದ್ಯರ ಬಳಿಗೆ ಕರೆದೊಯ್ದೆವು. ಎಲ್ಲಾ ಪರೀಕ್ಷೆಗಳನ್ನು ಮಾಡಿದ ವೈದ್ಯರು, ‘ಇವರ ಆರೋಗ್ಯ ಚೆನ್ನಾಗಿದೆ, ಏನೂ ಸಮಸ್ಯೆ ಇಲ್ಲ, ಆರಾಮವಾಗಿ ಅಮೆರಿಕಾ ಪ್ರವಾಸಕ್ಕೆ ಹೋಗಿಬರಬಹುದು’ ಎಂದು ಹೇಳಿದರು. ನಾವೆಲ್ಲಾ ಸಂತಸದಿಂದ ಅವರ ಕೈ ಕುಲುಕಿದೆವು, ಆದರೆ ಸುಮಾಳ ಮುಖ ಮಾತ್ರ ಕಳಾಹೀನವಾಗಿತ್ತು. ಮನೆಗೆ ಬಂದ ತಕ್ಷಣ, ಅವರು ಹೇಳಿದ ಮಾತುಗಳು ನಮ್ಮ ಮನಸ್ಸನ್ನು ಕದಡಿಬಿಟ್ಟವು. ‘ನಮ್ಮ ಊರಿನಲ್ಲಿ ಹೊಸದಾಗಿ ಒಂದು ವೃದ್ಧಾಶ್ರಮ ಕಟ್ಟಿದ್ದಾರೆ. ಅಲ್ಲಿಗೆ ಒಂದು ಲಕ್ಷ ರೂಗಳನ್ನು ಮುಂಗಡ ಕೊಟ್ಟು ಬಂದಿದ್ದೇನೆ. ಪ್ರತಿ ತಿಂಗಳು ಹತ್ತು ಸಾವಿರ ರೂಗಳನ್ನು ಕಟ್ಟಬೇಕು. ಮುಂದಿನ ತಿಂಗಳು ನಾನು ವೃದ್ಧಾಶ್ರಮಕ್ಕೆ ಹೋಗುತ್ತಿದ್ದೇನೆ’, ಎಂದಾಗ ನಮಗೆಲ್ಲಾ ಗಾಬರಿ. ‘ಮೇಡಂ, ನಿಮ್ಮ ಮನೆಯವರೊಂದಿಗೆ ನೆಮ್ಮದಿಯಾಗಿ ನಿವೃತ್ತ ಜೀವನ ನಡೆಸುತ್ತಿದ್ದೀರ, ಆರೋಗ್ಯ ಚೆನ್ನಾಗಿಯೇ ಇದೆ, ನೀವು ಅಲ್ಲಿಗೆ ಹೋದರೆ ನಿಮ್ಮ ಮನೆ, ಯಜಮಾನರನ್ನು ನೋಡಿಕೊಳ್ಳುವವರು ಯಾರು?’
‘ನೀವೆಲ್ಲಾ ನನ್ನ ಅಚ್ಚುಮೆಚ್ಚಿನ ಗೆಳತಿಯರು, ನಿಮ್ಮ ಬಳಿ ಮುಚ್ಚುಮರೆ ಮಾಡಲಾರೆ. ನಾನು ತವರಿಗೆ ಹೋದಾಗ, ಅಣ್ಣನ ಜೊತೆ ಒಬ್ಬ ಜ್ಯೋತಿಷಿಯ ಬಳಿ ಹೋಗಿದ್ದೆ, ಅವನು ನನ್ನ ಮುಖ ನೋಡಿದ ತಕ್ಷಣ ಹೇಳಿದ – ಇನ್ನು ಎರಡು ವರ್ಷಗಳಲ್ಲಿ ನಿನ್ನ ಎರಡೂ ಕಾಲುಗಳೂ ಬಲಹೀನವಾಗುತ್ತವೆ, ನಿನಗೆ ನಡೆದಾಡಲೂ ಆಗುವುದಿಲ್ಲ, ಹಾಸಿಗೆ ಹಿಡಿಯುತ್ತೀಯಾ ಎಂದು ಬಿಟ್ಟ. ನಾನು ಅಣ್ಣನ ಮುಖ ನೋಡಿದೆ, ಮೌನವೇ ಅವನ ಉತ್ತರವಾಗಿತ್ತು. ಅಲ್ಲಿಗೆ ಬಂದವರೆಲ್ಲಾ, ‘ಈ ಜ್ಯೋತಿಷಿ ಹೇಳಿದ್ದೆಲ್ಲಾ ನೂರಕ್ಕೆ ನೂರು ಸತ್ಯ’ ಎಂದು ಮಾತಾಡಿಕೊಳ್ಳುತ್ತಿದ್ದರು. ಆ ದಿನವೆಲ್ಲಾ ನನ್ನ ಮನದಾಳದಲ್ಲಿ ಜ್ಯೋತಿಷಿಯ ಮಾತುಗಳೇ ಪ್ರತಿಧ್ವನಿಸುತ್ತಿದ್ದವು. ತುಂಬಾ ಯೋಚಿಸಿ ಈ ನಿರ್ಧಾರವನ್ನು ಕೈಗೊಂಡೆ. ನಾನು ಹಾಸಿಗೆ ಹಿಡಿದರೆ, ನನ್ನ ಯಜಮಾನರಿಗೆ ತುಂಬಾ ತೊಂದರೆಯಾಗುವುದು ಖಚಿತ. ಈಗಲೇ ವೃದ್ಧಾಶ್ರಮ ಸೇರಿಬಿಟ್ಟರೆ ಅವರೂ ಒಂಟಿ ಜೀವನಕ್ಕೆ ಹೊಂದಿಕೊಳ್ಳುವರು. ವೃದ್ಧಾಶ್ರಮದಲ್ಲಿ ನನ್ನನ್ನೂ ನೋಡಿಕೊಳ್ಳುವರು. ನನ್ನನ್ನು ಕ್ಷಮಿಸಿ ಬಿಡಿ, ನೀವೆಲ್ಲಾ ಅಮೆರಿಕಾಕ್ಕೆ ಹೋಗಿಬನ್ನಿ’ ಎಂದರು.
ಸುಮಾಳನ್ನು ಬಿಟ್ಟು ನಾವೆಲ್ಲಾ ಅಂತರ್ ರಾಷ್ಟ್ರೀಯ ಸಮ್ಮೇಳನಕ್ಕೆಂದು ಅಮೆರಿಕಾಗೆ ಹೋಗಿ ಬಂದೆವು. ಬಂದ ತಕ್ಷಣ ಸುಮಾ ಮೇಡಂ ಮನೆಗೆ ಹೋದೆವು – ಅವರು ಕಾಲಿಗೆ ಒಂದು ಪ್ಲಾಸ್ಟರ್ ಹಾಕಿಕೊಂಡು ಕುರ್ಚಿಯ ಮೇಲೆ ಕುಳಿತಿದ್ದರು. ಒಂದು ವಾರದ ಹಿಂದೆ ಮಂಚದಿಂದ ಇಳಿಯುವಾಗ ಕುಸಿದು ಬಿದ್ದು ಕಾಲಿಗೆ ಫ್ರಾಕ್ಚರ್ ಆಯಿತಂತೆ. ಆರು ವಾರ ಕಳೆದ ಮೇಲೆ ಪ್ಲಾಸ್ಟರ್ ತೆಗೆದ ವೈದ್ಯರು, ಮತ್ತೊಂದು ಎಕ್ಸ್ರೇ ಮಾಡಿದರು. ಏನೂ ತೊಂದರೆಯಿಲ್ಲ, ಮೂಳೆ ಕೂಡಿದೆ, ಒಂದು ತಿಂಗಳು ಫಿಸಿಯೋಥೆರೆಪಿ ಮಾಡಿಸಿಕೊಳ್ಳಿ, ಮೊದಲಿನ ಹಾಗೆಯೇ ಓಡಾಡಬಲ್ಲಿರಿ’ ಎಂದು ಹೇಳಿದರು. ಪ್ರತಿನಿತ್ಯ ಫಿಸಿಯೋಥೆರೆಪಿಸ್ಟ್ ಬಂದು ಅವರಿಗೆ ವ್ಯಾಯಾಮ ಮಾಡಿಸುತ್ತಿದ್ದ. ಮೇಡಂ ಮಾತ್ರ ಮತ್ತೆ ಮೊದಲಿನಂತೆ ಓಡಾಡಲೇ ಇಲ್ಲ, ಸದಾ ಕುರ್ಚಿಯ ಮೇಲೆ ಕುಳಿತುಬಿಡುತ್ತಿದ್ದರು, ಇಲ್ಲ ಮಂಚದ ಮೇಲೆ ಮಲಗುತ್ತಿದ್ದರು. ಅವರ ಮುಖದ ಮೇಲೆ ನಗುವನ್ನು ನಾವು ಕಾಣಲೇ ಇಲ್ಲ. ನಾವೆಲ್ಲಾ ಆಗಾಗ್ಗೆ ಅವರ ಮನೆಗೆ ಹೋಗಿ, ಅವರಲ್ಲಿ ಜೀವನೋತ್ಸಾಹ ತುಂಬಲು ಯತ್ನಿಸುತ್ತಿದ್ದೆವು. ಒಂದೆರೆಡು ತಿಂಗಳು ಕಳೆದಿರಬಹುದು, ಇದ್ದಕ್ಕಿದ್ದಂತೆ ಸುಮಾಗೆ ಹಾಸಿಗೆಯಿಂದ ಮೇಲೇಳಲು ಆಗಲೇ ಇಲ್ಲ, ಅವರಿಗೆ ತಮ್ಮ ಕಾಲುಗಳನ್ನು ಅಲ್ಲಾಡಿಸಲೇ ಆಗುತ್ತಿರಲಿಲ್ಲ. ಮತ್ತೆ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ವೈದ್ಯರು ಅವರ ಮೆದುಳಿನ ಸ್ಕಾನ್ ಮಾಡಬೇಕು ಎಂದಾಗ, ಮೇಡಂ ಸುತರಾಂ ಒಪ್ಪಲಿಲ್ಲ. ಮತ್ತೆ ಜ್ಯೋತಿಷಿಯ ಮಾತುಗಳನ್ನು ನೆನಪು ಮಾಡಿಕೊಂಡರು. ‘ನನ್ನ ಕಾಲುಗಳಲ್ಲಿ ನಿಧಾನವಾಗಿ ಶಕ್ತಿ ಕುಂದುತ್ತಿದೆ, ಹಾಗಾಗಿ ನಾನು ನಡೆಯಲಾರೆ, ನನ್ನ ಮೆದುಳಿಗೆ ಏನೂ ಆಗಿಲ್ಲ’ ಎಂದರು. ನಾನು, ‘ಮೇಡಂ, ಅವರು ನಿಮ್ಮ ಮೆದುಳಿನ ಫೋಟೋ ತೆಗೀತಾರೆ ಅಷ್ಟೇ, ಅವರು ಸ್ಮೈಲ್ ಎಂದಾಗ ಒಮ್ಮೆ ನಕ್ಕುಬಿಡಿ’ ಎಂದು ಅವರಿಗೆ ಸಮಾಧಾನ ಹೇಳಿ ಒಪ್ಪಿಸಿದ್ದೆ. ಮೆದುಳಿನ ಸ್ಕಾನ್ ಮಾಡಿದ ವೈದ್ಯರು – ‘ಅಲ್ಲಿ ಹೆಚ್ಚಿನ ದ್ರವ ತುಂಬಿರುವುದರಿಂದ, ಯಾವುದೋ ಒಂದು ಭಾಗಕ್ಕೆ ಒತ್ತಿದಾಗ, ಆ ಭಾಗದ ಅಂಗಾಂಗಗಳು ನಿಷ್ಕ್ರಿಯವಾಗುತ್ತವೆ’ ಎಂದು ಹೇಳಿದರು. ಹಾಗಾಗಿ ತಕ್ಷಣವೇ ಒಂದು ಆಪರೇಷನ್ ಮಾಡಬೇಕಾಗಿತ್ತು. ಅವರ ಆಪರೇಷನ್ ದಿನದಂದು ಅವರ ತಲೆಯ ಕೂದಲನ್ನು ಕತ್ತರಿಸಬೇಕಾದಾಗ, ಮತ್ತೆ ಮೇಡಂ ಅಳಲು ಶುರು ಮಾಡಿದರು. ಅರವತ್ತು ದಾಟಿದ್ದರೂ, ಅವರ ಕೂದಲು ಕಪ್ಪಗೆ ದಟ್ಟವಾಗಿತ್ತು. ನಾವೆಲ್ಲಾ ಬಿಳಿ ಕೂದಲಿಗೆ ಬಣ್ಣ ಹಚ್ಚಿ ಕಪ್ಪು ಹೆರಳು ಕಟ್ಟಿದರೆ ಅವರು ಮಾತ್ರ ಎಂದೂ ಬಣ್ಣ ಹಚ್ಚಿರಲಿಲ್ಲ. ಬಹುಶಃ ಕರಾವಳಿ ಚೆಲುವೆಯ ಬಳಿ ಬರಲು ಕಾಲ ಹಿಂದೇಟು ಹಾಕುತ್ತಿರುವನೇನೋ ಎಂದು ನಾವು ಸುಮಾಳನ್ನು ಗೇಲಿ ಮಾಡುತ್ತಿದ್ದೆವು. ಆದರಿಂದು ಮೆದುಳಿನ ಆಪರೇಷನ್ ಆಗಬೇಕಾಗಿದ್ದುದರಿಂದ ಅವರ ಕೂದಲನ್ನು ತೆಗೆಯಲೇ ಬೇಕಿತ್ತು. ನಾನು ಅವರ ತಲೆಯನ್ನು ಎದೆಗಾನಿಸಿಕೊಂಡು ರಾಘವೇಂದ್ರ ಸ್ತೋತ್ರವನ್ನು ಹೇಳುತ್ತಾ ಸಾಂತ್ವನ ಹೇಳಬೇಕಾಯಿತು. ಆಪರೇಷನ್ ಯಶಸ್ವಿಯಾಯಿತು, ಎರಡು ವಾರದ ಬಳಿಕ ಮನೆಗೆ ಕರೆದುಕೊಂಡು ಬಂದರು.
ಸುಮಾಗೆ ಮತ್ತೆ ಮೊದಲಿನಂತೆ ಬಾಳುವ ಮನೋಭಿಲಾಷೆಯೇ ಸತ್ತು ಹೋಗಿತ್ತು. ಅತ್ಯಂತ ದೈವಭಕ್ತರಾಗಿದ್ದ ಸುಮಾ ದೇವರ ಮನೆಯ ಕಡೆಗೆ ತಿರುಗಿಯೂ ನೋಡುತ್ತಿರಲಿಲ್ಲ. ಸೋಮವಾರ ಶಿವಾಲಯಕ್ಕೆ, ಗುರುವಾರ ರಾಘವೇಂದ್ರಸ್ವಾಮಿಗಳ ಮಠಕ್ಕೆ, ಶುಕ್ರವಾರ ಅಮ್ಮನವರ ಗುಡಿಗೆ, ಶನಿವಾರ ಆಂಜನೇಯನ ಗುಡಿಗೆ ತಪ್ಪದೇ ಹೋಗುತ್ತಿದ್ದವರು, ಈಗ ಎಲ್ಲಿಯೂ ಹೋಗುತ್ತಿರಲಿಲ್ಲ. ವೈದ್ಯರ ಪ್ರಕಾರ ಸುಮಾ ಆರೋಗ್ಯವಾಗಿದ್ದರು, ಆದರೆ ಜ್ಯೋತಿಷಿಯ ಮಾತುಗಳು ಅವರ ಆತ್ಮ ವಿಶ್ವಾಸವನ್ನೇ ಕಸಿದು ಬಿಟ್ಟಿತ್ತು. ಸದಾ ತಿಂಗಳುಗಳ ಲೆಕ್ಕಾಚಾರ ಹಾಕುತ್ತಾ, ತಾವು ಹಾಸಿಗೆ ಹಿಡಿಯುವ ದಿನವನ್ನು ಎದುರು ನೋಡುತ್ತಿದ್ದರು. ಒಂದು ದಿನ ಬಚ್ಚಲಲ್ಲಿ ಬಿದ್ದು ಸೊಂಟದ ಮೂಳೆಯನ್ನು ಮುರಿದುಕೊಂಡರು. ಮತ್ತೆ ಆಸ್ಪತ್ರೆಯ ಓಡಾಟ, ಮತ್ತೊಂದು ಆಪರೇಷನ್ ಆಯಿತು. ಈ ಬಾರಿ ಸೊಂಟದ ಮೂಳೆ ಕೂಡಲು ಒಂದು ರಾಡ್ ಹಾಕಿದರು. ಅವರ ಯಜಮಾನರು ಹಗಲೂ ರಾತ್ರಿ ಅವರ ಸೇವೆ ಮಾಡಿದರು. ಆದರೆ ಸುಮಾಳದು ಮಾತ್ರ ತಟಸ್ಥ ಮನೋಭಾವ, ಕುರ್ಚಿಯ ಮೇಲೇ ಕುಳಿತು ಮೇಲ್ಛಾವಣಿ ದಿಟ್ಟಿಸುತ್ತಾ ಕುಳಿತುಬಿಡುತ್ತಿದ್ದರು. ಜ್ಯೋತಿಷಿಯ ಭೇಟಿಯಾಗಿ ಒಂದು ವರ್ಷ ಕಳೆದಿತ್ತು. ಅವನ ಮಾತುಗಳು ಅವರ ಆತ್ಮವಿಶ್ವಾಸವನ್ನೇ ಕಸಿದು ಬಿಟ್ಟಿತ್ತು. ಸದಾ ಭಯ, ಹಾಸಿಗೆ ಬಿಟ್ಟೇಳುವಾಗ ಬೀಳುವ ಭಯ, ಕುರ್ಚಿಯಿಂದ ಮೇಲೇಳುವಾಗ ಕುಸಿಯುವ ಭಯ, ಶೌಚಾಲಯಕ್ಕೆ ಹೋಗಲೂ ಭಯ, ಓಡಾಡಲೂ ಭಯ. ಸೈಕಿಯಾಟ್ರಿಸ್ಟ್ ಬಳಿ ಅವರನ್ನು ಕರೆದುಕೊಂಡು ಹೋದರೂ ಯಾವ ಪ್ರಯೋಜನವೂ ಆಗಲಿಲ್ಲ. ಅವರ ಗಂಡ ಒಂದು ವೀಲ್ ಚೇರ್ ತಂದರು. ಹೋಮ್ ನರ್ಸ್ ಬಂದಳು, ಅವರ ಬಂಧುಗಳೆಲ್ಲಾ ಬಂದು ಹೋದರು. ಅವರಲ್ಲಿ ಧೈರ್ಯ ತುಂಬಲು ಎಲ್ಲರೂ ಇನ್ನಿಲ್ಲದ ಪ್ರಯತ್ನ ಮಾಡಿದರೂ ಫಲಿತಾಂಶ ಮಾತ್ರ ಸೊನ್ನೆ.
ಸುಮಾ ಹಾಸಿಗೆ ಹಿಡಿದಾಗ, ಅವರಣ್ಣನ ಮನೆಗೆ ಕರೆದುಕೊಂಡು ಹೋದರು. ಒಮ್ಮೆ ಅವರನ್ನು ನೋಡಲು ನಾವೆಲ್ಲಾ ಗೆಳತಿಯರು ಹೋದಾಗ, ಅವರು ‘ಇನ್ನಾರು ತಿಂಗಳು ಇದೆ’ ಎಂದರು. ತಿಂಗಳುಗಳು ಉರುಳಿದವು, ಸುಮಾಳ ಆರೋಗ್ಯ ಕ್ಷೀಣಿಸಿತ್ತು. ಅವರ ಮನದ ತುಂಬಾ ಕೇಳಿ ಬರುತ್ತಿದ್ದ ಧ್ವನಿ ಒಂದೇ, ‘ನಿಮಗೆ ಇನ್ನು ಓಡಾಡಲು ಆಗುವುದಿಲ್ಲ’. ಸುಮಾ ಜೀವವಿರುವ ಗೊಂಬೆಯಂತೆ ಬದುಕು ನೂಕುತ್ತಿದ್ದರು. ಗೆಳತಿ ಲತಾ, ‘ಆ ಜ್ಯೋತಿಷಿಯನ್ನು ಗುಂಡು ಹಾರಿಸಿ ಸುಟ್ಟು ಬಿಡೋಣ, ಸುಮಾಳ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿದ ಅವನನ್ನು ಸುಮ್ಮನೆ ಬಿಡಬಾರದು’ ಎಂದು ಸಿಟ್ಟಿನಿಂದ ಕೂಗಾಡುತ್ತಿದ್ದಳು. ಎರಡು ವರ್ಷ ಕಳೆದಿತ್ತು, ನಮ್ಮ ನಿರೀಕ್ಷಡಯಂತೆ ಸುಮಾಳ ಸಾವಿನ ಸುದ್ದಿ ಹೊತ್ತ ಫೋನ್ ಕರೆ ಬಂದಿತ್ತು.
ನಾವೆಲ್ಲಾ ಅವರ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವರ ಊರಿಗೆ ಹೊರಟೆವು – ಅವರ ಸಾವು ಎಲ್ಲರನ್ನೂ ಕಂಗೆಡಿಸಿತ್ತು. ಕಾಲೇಜಿನಲ್ಲಿ ವಿಜ್ಞಾನವನ್ನು ಬೋಧಿಸುತ್ತಿದ್ದ ಸುಮಾ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲೇ ಇಲ್ಲವೇ? ಜ್ಯೋತಿಷಿಗಳ ನುಡಿಗಳು ಅರ್ಥಪೂರ್ಣವೇ ಅಥವಾ ಅರ್ಥರಹಿತವೇ? ಇರಲಿ ಹುಟ್ಟಿದವರೆಲ್ಲಾ ಒಂದು ದಿನ ಸಾಯಲೇಬೇಕು. ಆದರೆ ಎರಡು ವರ್ಷಗಳ ಕಾಲ ಜ್ಯೋತಿಷಿಯ ಮಾತುಗಳನ್ನೇ ಧ್ಯಾನಿಸುತ್ತಾ ಸುಮಾ ಬದುಕನ್ನೇ ನರಕ ಮಾಡಿಕೊಂಡು ಬಿಟ್ಟರಲ್ಲಾ, ಇದು ಸರಿಯಾ? ಈ ಪ್ರಶ್ನೆಗಳಿಗೆ ಯಾರಲ್ಲಿ ಉತ್ತರ ಹುಡುಕಲಿ?
-ಡಾ.ಗಾಯತ್ರಿ ದೇವಿ ಸಜ್ಜನ್ , ಶಿವಮೊಗ್ಗ
ಬಹಳ ದುಃಖವಾಯಿತು ಎಲ್ಲಾ ಸರಿಯಾಗಿದ್ದರೂ ಅದೊಂದು ಮಾತನ್ನು ನಂಬಿ ನಿವೃತ್ತಿ ನಂತರದ ಬದುಕನ್ನು ನರಕಮಾಡಿಕೊಂಡು ಕೊನೆಗೆ ಅದರಲ್ಲಿ ಜೀವ ಬಿಟ್ಟ ಅವರ ಕಥೆ ಕೇಳಿ ಮನ ಮಮ್ಮಲ ಮರುಗಿತು. ನಾನು ಕೊನೆಯಲ್ಲಿ ಅವರಿಗೆ ಅರಿವಾಗಿ ಸರಿ ಹೋಗಬಹುದು ಆ ರೀತಿ ಇರುತ್ತೇ ಕಾದಿದ್ದೆ. ಹಾಗೇ ಆಗಲಿಲ್ಲ…… ತುಂಬಾ ಚೆನ್ನಾಗಿದೆ ಮೇಡಂ….
Thanks a lot for your response
ಗಾಯತ್ರಿ ಮೇಡಂ ಮನೋರೋಗ ಕ್ಕಿಂತ ಹಿರಿದು ಯಾವುದು ಇಲ್ಲ ಅದಕ್ಕೆ ಮದ್ದು ಇಲ್ಲ.. ಘಟನೆಯ ಸೊಗಸಾದ ನಿರೂಪಣೆ ಧನ್ಯವಾದಗಳು ..
ನೋವು ತುಂಬಿದ ಬರಹ
ತಮ್ಮ ನುಡಿಗಳಿಗೆ ವಂದನೆಗಳು
ಸುಮಾ ಮೇಡಂ ಅವರು ಮನೋದೈಹಿಕ ಕಾಯಿಲೆಗೆ ಗುರಿಯಾಗಲು ಕಾರಣವಾದ ಜ್ಯೋತಿಷಿಯ ಮಾತು ಕಾಕತಾಳೀಯವಾಗಿ ಪರಿಣಮಿಸಿದ್ದು ಮಾತ್ರ ದೊಡ್ಡ ದುರಂತ!
ಸಹಜವಾಗಿ ಮೂಡಿಬಂದ ಲೇಖನವು ಮನಸ್ಸನ್ನು ಆರ್ದ್ರಗೊಳಿಸಿತು.