ವೀರ ಬಬ್ರುವಾಹನ
‘ಕಾದಿ ಕ್ಷತ್ರಿಯನಾಗು’ ಎಂಬ ಒಂದು ಸೂಕ್ತಿಯಿದೆ. ಧರ್ಮಯುದ್ಧವೇ ಕ್ಷತ್ರಿಯರ ವೀರೋಚಿತವಾದ ಲಕ್ಷಣವಂತೆ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಇದನ್ನೇ ಬೋಧಿಸುತ್ತಾನೆ. ನಿಜವಾದ ವೀರ ಅಥವಾ ಅರಸ ನ್ಯಾಯವಾದ ಯುದ್ಧಕ್ಕೆ ಎದೆಗುಂದುವುದಿಲ್ಲ. ಎದುರಿಗೆ ಬಂದ ವೈರಿಯು ತನ್ನ ಜನ್ಮದಾತನೇ ಆದರೂ ಯುದ್ಧದಲ್ಲಿ ಹಿಮ್ಮೆಟ್ಟುವುದಿಲ್ಲ. ಅದು ಅವನ ಲಕ್ಷಣವೂ ಅಲ್ಲ. ಆತನಿಗದು ಶೋಭೆಯೂ ಅಲ್ಲ. ಅಣ್ಣ-ತಮ್ಮಂದಿರ ನಡುವೆ, ಅದೂ ದಾಯಾದಿಗಳಲ್ಲಿ ನಡೆದ ಕಾಳಗವೇ ಮಹಾಭಾರತ ಯುದ್ಧವೆಂದು ನಾವು ತಿಳಿದಿದ್ದೇವೆ. ಹಾಗೆಯೇ ನಮ್ಮ ಪುರಾಣದೊಳಗೆ, ಅಪ್ಪ-ಮಕ್ಕಳ ಮಧ್ಯೆ ನಡೆದ ಯುದ್ಧ ರಾಮಾಯಣದಲ್ಲೂ ಮಹಾಭಾರತದೊಳಗೂ ಇದೆ. ಇಂತಹ ಒಂದು ದೃಷ್ಟಾಂತ ಬಬ್ರುವಾಹನನ ಕತೆಯಿಂದ ತಿಳಿದುಬರುತ್ತದೆ.
ಮಣಿಪುರ ಎಂಬ ರಾಜ್ಯದಲ್ಲಿ ಪ್ರವೀರ ಎಂಬ ರಾಜನಿದ್ದ. ಆತನ ಮಗಳಾದ ಚಿತ್ರಾಂಗದೆ ಹಾಗೂ ಮಧ್ಯಮ ಪಾಂಡವನಾದ ಅರ್ಜುನನ ಮಗನೇ ಬಬ್ರುವಾಹನ. ಅರ್ಜುನ-ಚಿತ್ರಾಂಗದೆಯರು ಪತಿ-ಪತ್ನಿಯರಾದುದು ಹೇಗೆ? ಅದೂ ಒಂದು ಕುತೂಹಲಕಾರಿ ಕತೆ.
ಪಾಂಡವರೈವರ ಪತ್ನಿ ದೌಪದಿ. ನಮಗೆಲ್ಲಾ ತಿಳಿದ ವಿಚಾರ. ಅವರ ವನವಾಸ ಕಾಲದಲ್ಲಿ ನಡೆದ ಸ್ವಯಂವರ ಪಣದಲ್ಲಿ ಅರ್ಜುನನೊಬ್ಬನೇ ದೌಪದಿಯನ್ನು ಗೆದ್ದು ತಂದರೂ, ಗೆದ್ದು ತಂದೆನೆಂಬ ಸಂತೋಷ ತಾಯಿಗೆ ವ್ಯಕ್ತಪಡಿಸಿದಾಗ, ವಸ್ತು ಯಾವುದೆಂದು ಅರಿಯದ ಕುಂತಿ ಐವರೂ ಹಂಚಿಕೊಳ್ಳಿ ಎಂಬುದಾಗಿ ತಿಳಿಸುತ್ತಾಳೆ. ಗೆದ್ದ ವಸ್ತು ಬೇರೇನೂ ಆಗಿರದೆ ಒಬ್ಬಳು ಕನ್ಯೆ ಎಂದು ತಿಳಿದಾಗಲೂ ಅಮ್ಮನ ಬಾಯಿಯಿಂದ ಬಿದ್ದ ಮಾತು ಕಾರ್ಯರೂಪಕ್ಕೆ ಬಂದೇ ಬಿಡುತ್ತದೆ. ಈ ಸಂದಿಗ್ಧ ಸ್ಥಿತಿಯಲ್ಲಿ ವೇದವ್ಯಾಸರು ಬಂದು, ದೌಪದಿಯು ಪಾಂಡವರೈವರಿಗೆ ಪತ್ನಿಯೇನೋ ಹೌದು. ಆದರೆ ಆ ದಾಂಪತ್ಯದಲ್ಲಿ ಒಂದು ನಿಯಮಿಕೆ ಬೇಕು. ಒಬ್ಬೊಬ್ಬರು ಒಂದೊಂದು ವರ್ಷದಂತೆ ದಾಂಪತ್ಯ ನಡೆಸಬೇಕು. ಅಂತಹ ಸಮಯದಲ್ಲಿ ಇನ್ನುಳಿದ ನಾಲ್ವರಲ್ಲಿ ಯಾರಾದರೂ ಮಧ್ಯ ಪ್ರವೇಶಿಸಿದರೆ ಅಥವಾ ವೀಕ್ಷಿಸಿದರೆ ಅವರು ಒಂದು ವರ್ಷ ತೀರ್ಥಯಾತ್ರೆ ಮಾಡಿ ಬರಬೇಕೆಂದು ನಿಯಮಿಸಿ ಈ ಷರತ್ತಿಗೆ ಒಪ್ಪುತ್ತಾರೆ. ಹೀಗಿರಲು ಒಂದು ದಿನ ರಾತ್ರಿ ಬ್ರಾಹ್ಮಣರ ಅಗ್ರಹಾರಕ್ಕೆ ಕಳ್ಳರು ಪ್ರವೇಶಿಸಿದರು. ಬ್ರಾಹ್ಮಣರನ್ನು ರಕ್ಷಿಸುವುದಕ್ಕಾಗಿ ಅರ್ಜುನನು ತನ್ನ ಶಸ್ತ್ರಾಸ್ತ್ರ ತರಲು ಹೋಗುತ್ತಾನೆ. ಅದು ಧರ್ಮಜ ದ್ರೌಪದಿ ಮಲಗಿದ ಕೊಠಡಿಯೊಳಗೆ ಇದೆ ಎಂದು ತಿಳಿದರೂ ತಾನು ಬ್ರಾಹ್ಮಣರಿಗೆ ರಕ್ಷಣೆ ಒದಗಿಸುವುದು ಆದ್ಯ ಕರ್ತವ್ಯವೆಂದು ಅರ್ಜುನ ಪ್ರವೇಶಿಸಿ ಕಳ್ಳರನ್ನು ಬಡಿದೋಡಿಸುವ ಕೆಲಸ ಮಾಡುತ್ತಾನೆ. ಅಣ್ಣ ಮತ್ತು ದ್ರೌಪದಿಯ ಕೋಣೆಯೊಳಗೆ ಪ್ರವೇಶಿಸಿದ ಪಾಪ ಪರಿಹಾರಕ್ಕಾಗಿ ತೀರ್ಥಯಾತ್ರೆ ಕೈಗೊಳ್ಳುತ್ತಾನೆ. ಈ ತೀರ್ಥಯಾತ್ರೆ ಸಂದರ್ಭದಲ್ಲಿ ಮಣಿಪುರವನ್ನೂ ಪ್ರವೇಶಿಸುತ್ತಾನೆ. ಅಲ್ಲಿ ಚಿತ್ರಾಂಗದೆ ಅರ್ಜುನನನ್ನು ಮೋಹಿಸಿ ಇಬ್ಬರೂ ವಿವಾಹವಾಗುತ್ತಾರೆ. ಅಲ್ಲಿ ಕೆಲದಿನ ಚಿತ್ರಾಂಗದೆಯೊಂದಿಗೆ ತಂಗಿದ್ದ ಫಲವಾಗಿ ಚಿತ್ರಾಂಗದೆ ಗರ್ಭವತಿಯಾಗುತ್ತಾಳೆ. ಮುಂದೆ ಬಬ್ರುವಾಹನ ಜನಿಸುತ್ತಾನೆ. ಆ ರಾಜನಿಗೆ ಗಂಡು ಮಕ್ಕಳಿರಲಿಲ್ಲವಾದ್ದರಿಂದ ಕ್ರಮೇಣ ಬಬ್ರುವಾಹನನೇ ರಾಜನಾಗುತ್ತಾನೆ.
ಮಹಾಭಾರತ ಯುದ್ಧದ ಬಳಿಕ ರಾಜ್ಯವನ್ನು ಪಡೆದ ಪಾಂಡವರು ಬಂಧು ಹತ್ಯಾ ದೋಷ ಪರಿಹಾರಾರ್ಥವಾಗಿ ಅಶ್ವಮೇಧ ಯಾಗ ಕೈಗೊಳ್ಳುತ್ತಾರೆ. ಯಜ್ಞಾಶ್ವದ ಬೆಂಗಾವಲಿಗೆ ಅರ್ಜುನನೇ ನಿಲ್ಲುತ್ತಾನೆ. ಯಾವ ನಾಡಿಗೆ ಕುದುರೆ ಕಾಲಿಟ್ಟಿತೋ ಅಲ್ಲಿನ ಅರಸರು ಕುದುರೆಯನ್ನು ಕಟ್ಟಿಹಾಕಿ ಯುದ್ಧ ಮಾಡಬೇಕು. ಇಲ್ಲವೇ ಶರಣಾಗಿ ಕಪ್ಪ ಕಾಣಿಕೆಗಳನ್ನು ಒಪ್ಪಿಸಬೇಕಾಗಿತ್ತು. ಎಲ್ಲಿಯ ಕುದುರೆ? ಏನು ಉದ್ದೇಶ? ಮುಂತಾದ ವಿವರಗಳನ್ನು ಕುದುರೆಯ ಹಣೆಯಲ್ಲಿ ಕಟ್ಟಿರುತ್ತಾರೆ.
ಕುದುರೆ ಹಲವಾರು ಊರುಗಳನ್ನು ಸಂಚರಿಸಿ ಸ್ತ್ರೀ ರಾಜ್ಯವಾದ ಪ್ರಮಿಳಾ ದೇಶಕ್ಕೆ ಬಂದಾಗ ಪ್ರಮೀಳೆಯು ಮೊದಲಿಗೆ ಯುದ್ಧ ಮಾಡಿದರೂ ಮುಂದೆ ವಿಷಯ ತಿಳಿದು ಯಜ್ಞಕ್ಕೆ ಬೆಂಬಲವನ್ನು ಸೂಚಿಸುತ್ತಾಳೆ. ಮತ್ತೆ ಕುದುರೆ, ಮಣಿಪುರವನ್ನು ಪ್ರವೇಶಿಸಿತು. ಮಣಿಪುರದ ಯುವರಾಜನಾದ ಬಬ್ರುವಾಹನನಿಗೆ ಕುದುರೆ ನಗರಕ್ಕೆ ಪ್ರವೇಶಿಸಿದ ವಿಷಯ ತಿಳಿಯಿತು.
ಕುದುರೆಯ ಹಣೆ ಲಿಖಿತವನ್ನು ಓದಿದ ಬಬ್ರುವಾಹನ ಕುದುರೆಯನ್ನು ಕಟ್ಟಿಹಾಕಿದ. ಆದರೆ ಬಂದವನು ತನ್ನ ತಂದೆಯೆಂಬ ವಿಚಾರ ಅವನಿಗೆ ತಿಳಿಯದು. ಬಂದುದು ಪಾಂಡವರ ಯಜ್ಞಾಶ್ವವೆಂದೂ ಸ್ವತಃ ಅರ್ಜುನನೇ ಬೆಂಗಾವಲಿಗೆ ಬಂದಿರುವನೆಂದೂ ದೂತೆಯೋರ್ವಳು ತಿಳಿಸಿದಳು. ಇದರಿಂದ ಚಿತ್ರಾಂಗದೆಗೆ ಹರ್ಷವಾಯಿತು. ಅಷ್ಟರಲ್ಲಿ ಬಬ್ರುವಾಹನ ಯುದ್ಧಕ್ಕೆ ಸನ್ನದ್ಧನಾಗಿ ಹೊರಟಾಗಿತ್ತು. ಅಪ್ಪನಲ್ಲಿ ಯುದ್ಧ ಸಲ್ಲದು, ಕಪ್ಪ ಕಾಣಿಕೆಗಳನ್ನಿತ್ತು ಯಜ್ಞಕ್ಕೆ ಬೆಂಬಲವನ್ನು ನೀಡು ಎಂಬ ಅಮ್ಮನ ಮಾತಿಗೆ ಮನ್ನಣೆಯನ್ನಿತ್ತ ಬಬ್ರುವಾಹನ, ತನ್ನ ಮಂತ್ರಿ ಸುಬುದ್ಧಿಯೊಡನೆ ಸಮಾಲೋಚಿಸಿ ತಂದೆಯ ಸ್ವಾಗತಕ್ಕೆ ಸಿದ್ಧನಾದ. ಯುದ್ಧಕ್ಕೆ ಹೊರಟ ಬಾಲಕ ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು, ಹೇಡಿಯಂತೆ ತಲೆಬಾಗುತ್ತಾನಲ್ಲಾ! ಇವನಾರೋ ವೇಶ್ಯೆಯ ಮಗನಿರಬೇಕೆಂದು ಜರೆದು ಮಾತನಾಡಿದ ಅರ್ಜುನ. ತನ್ನನ್ನೂ ತನ್ನ ತಾಯಿಯನ್ನೂ ಜರೆದು ಮಾತನಾಡಿದ ಅರ್ಜುನನ ಮೇಲೆ ಬಬ್ರುವಾಹನನಿಗೆ ಅಸಾಧ್ಯ ಸಿಟ್ಟು ಬಂತು. ”ನಿನ್ನ ಬಾಯಿಯಿಂದಲೇ ನಾನು ನಿನ್ನ ಮಗನೆಂದು ಹೇಳಿಸುತ್ತೇನೆ” ಎಂದು ಪ್ರತಿಜ್ಞೆ ಮಾಡಿದ. ಚಿತ್ರಾಂಗದೆಯು ಇನ್ನಿಲ್ಲದಂತೆ ಮಗನಿಗೆ ಬುದ್ಧಿವಾದ ಹೇಳಿದರೂ ಈಗ ಅವನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಪೂರ್ವ ವಿಷಯ ಅರ್ಜುನನಿಗೆ ನೆನಪಿಗೆ ಬರಲಿಲ್ಲವಾದರೂ ಯುದ್ಧದಲ್ಲಿ ಚಿತ್ರಾಂಗದೆ ಪತಿಯ ಪರವಾಗಿಯೇ ನಿಂತಳು. ‘ಪತಿಯೇ ಪರದೈವ’ ಎಂದು ಪತಿಯನ್ನು ದೇವರಂತೆ ಪೂಜಿಸುವ ಭಾರತೀಯ ನಾರಿ. ಒಂದು ವೇಳೆ ತಂದೆ-ಮಕ್ಕಳಲ್ಲಿ ಬಿರುಕು ಬಿಟ್ಟರೆ ಅರ್ಥಾತ್ ಕಲಹ ಉಂಟಾದರೆ ಆ ಮಹಿಳೆಯು ಗಂಡನ ಪರ ವಹಿಸುತ್ತಿದ್ದಳೇ ವಿನಃ ಮಕ್ಕಳ ಜೊತೆಗೂಡಿ ಪತಿಯನ್ನು ವಿರೋಧಿಸಲಾರಳು ಎಂಬುದನ್ನು ಇಲ್ಲಿ ಗಮನಿಸಬಹುದು.
ತಂದೆ-ಮಗನಿಗೆ ಘೋರ ಯುದ್ಧವಾಯಿತು. ಅರ್ಜುನ ಬಬ್ರುವಾಹನರ ಯುದ್ಧವೆಂದರೆ ಮಹಾಭಾರತದ ಇತಿಹಾಸದಲ್ಲಿ ವಿಶಿಷ್ಟ ಸನ್ನಿವೇಶ. ಅರ್ಜುನನ ಸಕಲ ಸೇನೆಗಳೂ ಉರುಳಿ ಬಿದ್ದು ಆತನೊಬ್ಬನೇ ಉಳಿದು ಧೃತಿಗೆಟ್ಟನು. ತಾನು ಅದೃಷ್ಟ ಹೀನನಾದೆನೋ, ‘ಶಿವ ಶಿವಾ ಶ್ರೀಹರಿಯು ಯಾಗವನ್ನು ಹೇಗೆ ಪೂರ್ತಿಗೊಳಿಸುವನೋ’ ಎಂದು ಪ್ರಲಾಪಿಸಿದನು. ಆಗ ಶ್ರೀಕೃಷ್ಣ ಓಡಿ ಬಂದು ಅರ್ಜುನನನ್ನು ತಡೆದನು. ಬಬ್ರುವಾಹನನಲ್ಲೂ ವಿಷಯ ವಿಶದೀಕರಿಸಿದನು. ಶ್ರೀಕೃಷ್ಣನು ತಂದೆ ಮತ್ತು ಮಗನ ನಡುವೆ ಸಂಧಾನ ನಡೆಸಿ ರಾಜಿ ಮಾಡಿಸಿದ. ತಂದೆಯು ಮಗನನ್ನು ಮಗನೇ ಎಂದು ಅಪ್ಪಿದ. ತಂದೆ-ಮಗನ ಮಿಲನ ಕಂಡು ಪುಷ್ಪವೃಷ್ಟಿಯಾಯಿತು. ಬಬ್ರುವಾಹನನ ಪ್ರತಿಜ್ಞೆ ಈಡೇರಿತು.
ಅರ್ಜುನ-ಬಬ್ರುವಾಹನರ ಯುದ್ಧವು ಇಂದಾರ್ಜುನರ (ಅವರೂ ತಂದೆ-ಮಗನೇ) ಯುದ್ಧಕ್ಕೆ ಸಮಾನವಾಗಿತ್ತಂತೆ. ಹಾಗೆಯೇ ಶ್ರೀರಾಮ-ಕುಶಲವರ ಕಾಳಗ ಹೀಗೆ ಅಪ್ಪ- ಮಕ್ಕಳ ಕಾದಾಟ. ಈ ಎಲ್ಲ ಸಂದರ್ಭಗಳಲ್ಲೂ ಅವರು ತಮ್ಮ ಸಂಬಂಧ ತಿಳಿಯದೆ ತಮ್ಮ ತಮ್ಮ ಕರ್ತವ್ಯ (ಕ್ಷತ್ರಿಯ ಧರ್ಮ) ಪರಿಪಾಲಿಸಿದರು. ಮಿಂಚು, ಗುಡುಗು ಮಳೆ ಬಡಿದು ಕೆಲವು ಕ್ಷಣದಲ್ಲಿ ತಂಪಾದ ಇಳೆ ತಂಪಾಗುವಂತೆ ಆಗಿತ್ತು. ಬಬ್ರುವಾಹನನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಆತನ ಕೆಚ್ಚು ಕೆದರಿ ವೀರತ್ವ ಪ್ರಕಟವಾಯ್ತು.
-ವಿಜಯಾಸುಬ್ರಹ್ಮಣ್ಯ, ಕುಂಬಳೆ
ಚಲನ ಚಿತ್ರದಲ್ಲಿ ನೋಡಿದ್ದರೂ ಓದುವಾಗ ನಾವೇ ಕಲ್ಪಿಸಿಕೊಳ್ಳುವ ದೃಶ್ಯಗಳು ಮುದ ನೀಡುತ್ತವೆ. ಎಲ್ಲಾ ವಿವರಗಳು ಚೆನ್ನಾಗಿ ನೆನಪಲ್ಲಿ ಉಳಿಯುತ್ತವೆ ಚೆನ್ನಾಗಿ ಮೂಡಿ ಬಂದಿದೆ ಬಬ್ರುವಾಹನ ಕಥನ ಮೇಡಂ
ಎಂದಿನಂತೆ ಪುರಾಣ ಕಥೆ ಓದಿಸಿಕೊಂಡು ಹೋಯಿತು ವಿಜಯಾ ಮೇಡಂ..
ಚೆನ್ನಾಗಿದೆ ಮೇಡಂ
ಸುರಹೊನ್ನೆಯ ಹೇಮಮಾಲಾ ಹಾಗೂ ಓದುಗಬಳಗದ ಸೋದರಿಯರು ಬಿ.ಆರ್ ನಾಗರತ್ನ, ನಯನ ಬಜಕ್ಕೋಡ್ಳು ಹಾಗೂ ಶ್ರೀ ಶರಣಬಸವೇಶ್ವರ ಎಲ್ಲರಿಗೂ ವಂದನೆಗಳು.
ಬಭ್ರುವಾಹನ ಚಲನಚಿತ್ರದಿಂದಾಗಿ ಕಥೆಯು ಮನ:ಪಟಲದಲ್ಲಿ ಅಚ್ಚಳಿಯದೆ ಉಳಿದಿದೆ ಎನ್ನಬಹುದೇನೋ… ಎಂದಿನಂತೆ ಸುಂದರ ನಿರೂಪಣೆಯ ಪೌರಾಣಿಕ ಕಥೆ.