ಗುರುವಿನ ಮಾತು ಈಡೇರಿಸಿದ ಗಾಲವ
ಮಾನವನ ಮೇಲೆ ಋಣತ್ರಯಗಳು ಇವೆ ಎನ್ನುತ್ತಾರೆ. ಅವುಗಳೆಂದರೆ ದೇವಋಣ, ಪಿತೃಋಣ, ಋಷಿ (ಆಚಾರ್ಯ) ಋಣಗಳೆಂದು ಮೂರು ವಿಧ. ಅವುಗಳಿಂದ ಮುಕ್ತರಾಗಬೇಕೆಂದಾದಲ್ಲಿ ಅವರಿಗೆ ಸಲ್ಲಬೇಕಾದುದನ್ನು ಸಲ್ಲಿಸಬೇಕು.
ಜನ್ಮಕೊಟ್ಟ ತಂದೆಗೆ ಮಕ್ಕಳು ಮಾಡಬೇಕಾದ ಕರ್ತವ್ಯವನ್ನು ಮಾಡುವುದು, ವೃದ್ಧಾಪ್ಯದಲ್ಲಿ, ಕಾಯಿಲೆಗಳಲ್ಲಿ, ಅವರ ಸೇವೆಯನ್ನು ಭಕ್ತಿ ಶ್ರದ್ಧೆಯಿಂದ ಮಾಡುವುದರ ಮೂಲಕ ಪಿತನ ಋಣ ತೀರಿಸುವುದಂತೆ. ಹೆತ್ತಮಾತೆಗೂ ಈ ಎಲ್ಲ ಸೇವೆಗಳನ್ನು ಚಾಚೂ ತಪ್ಪದೆ ಮಾಡಬೇಕು. ಮಾಡಿದರೆ ಮಾಡಿದಷ್ಟು ಫಲವಿದೆ. ಆದರೆ ತಾಯಿಯಿಂದ ಋಣ ಮುಕ್ತನಾದೆ ಎನಿಸಿಕೊಳ್ಳಲು ಸಾಧ್ಯವಿಲ್ಲವಂತೆ.
ಋಷಿಋಣ ಅಥವಾ ಆಚಾರ್ಯ ಋಣ: ಆಯಾ ಧರ್ಮ ಗುರುಗಳಿಗೆ, ಮನೆತನದ ಪುರೋಹಿತರಿಗೆ, ಕಲಿಸಿದ ಗುರುಗಳ ಸೇವೆ ಕಾಣಿಕೆಯನ್ನು ಒಪ್ಪಿಸುವಂತಾದ್ದು ಅಗತ್ಯ. ಯಾವುದೇ ವಿದ್ಯೆ ಫಲ ಸಿಗಬೇಕಾದರೆ ಕಲಿಸಿದ ಗುರುವಿಗೆ ಶಿಷ್ಯನು ‘ಗುರುದಕ್ಷಿಣೆ’ಯನ್ನು ಕೊಡಬೇಕಾಗುತ್ತದೆ. ಇದು ಸನಾತನ ಋಷಿ ಪರಂಪರೆಯಿಂದ ಬಂದಂತಹ ರೂಢಿ, ಆಗ ಗುರುಕುಲ ಪದ್ಧತಿಯಲ್ಲಿ ವಿದ್ಯೆ ಕಲಿಸುತ್ತಿದ್ದರು. ಗುರು ಹಾಗೂ ಗುರುಪತ್ನಿ ಸೇವೆ ಮಾಡಿಕೊಂಡು ವಿದ್ಯಾರ್ಥಿ ಕಲಿಯಬೇಕು.ಅವನ ಶಿಕ್ಷಣ ಮುಗಿದ ಮೇಲೆ ಶಿಷ್ಯರನ್ನು ಅವರವರ ಮನೆಗೆ ಹಿಂತಿರುಗಿ ಕಳಿಸುವುದಕ್ಕೆ ಮೊದಲು ಕೆಲವು ಸತ್ವ ಪರೀಕ್ಷೆಗಳನ್ನೊಡ್ಡುತ್ತಿದ್ದರು. ಅದರಲ್ಲಿ ಆತ ಉತ್ತೀರ್ಣನಾದರೆ ಗುರುಗಳಿಗೆ ತೃಪ್ತಿಯಾದರೆ ಗುರುಗಳ ಸಂಪೂರ್ಣ ಆಶೀರ್ವಾದ ಲಭಿಸಿದರೆ ಸದ್ಯೋಭವಿಷ್ಯದಲ್ಲಿ ಅವರು ಗೆದ್ದಂತೆಯೇ, ಈ ಸಂದರ್ಭದಲ್ಲಿ ಗುರುದಕ್ಷಿಣೆಯನ್ನು ನೀಡಿ ವಿದ್ಯಾರ್ಥಿಗಳು ಹಿಂತಿರುಗುತ್ತಿದ್ದರು. ಅರಸು ಮನೆತನದವರು, ಶ್ರೀಮಂತರು, ಉಳ್ಳವರು ಧನ-ಕನಕ, ಭೂಮಿ ಮೊದಲಾದವುಗಳನ್ನು ಗುರುವಿಗೆ ದಕ್ಷಿಣೆ ರೂಪದಲ್ಲಿ ನೀಡಿ ಕೃತಕೃತ್ಯರಾದವರ ಬಗ್ಗೆ ಓದಿದಿದ್ದೇವೆ, ಕೇಳಿದ್ದೇವೆ. ಹಾಗೆಯೇ ಗುರು ಯಾವುದನ್ನು ಬಯಸುತ್ತಾನೋ ಅದನ್ನು ನೀಡಲು ಕಷ್ಟ, ನಷ್ಟ, ನೋವು ಆಘಾತ ಯಾವುದನ್ನೂ ಲೆಕ್ಕಿಸುವುದಿಲ್ಲ. ಈ ನಿಟ್ಟಿನಲ್ಲಿ ನಾವು ಏಕಲವ್ಯನನ್ನು ಮರೆಯದೆ ನೆನಪಿಸುತ್ತೇವೆ. ಕೆಲಸ ಕಾರ್ಯಗಳಲ್ಲಿ ಪ್ರಧಾನ ಪಾತ್ರ ವಹಿಸುವ ಮನುಷ್ಯನ ಪ್ರಮುಖ ಅಂಗಗಳಲ್ಲಿ ಒಂದಾದ ಹೆಬ್ಬೆರಳನ್ನೇ ಗುರುವಿನ ಅಣತಿಯಿಂತೆ ದಾನ ಮಾಡಿದ ಮಹಾ ಗುರುಭಕ್ತನವನು!
ಗುರುವಿನೊಡನೆ, ಯಾವ ರೂಪದಿಂದ ದಕ್ಷಿಣೆ ಕೊಡಬೇಕೆಂದು ನಿವೇದಿಸಿಕೊಂಡು ಗುರುವಿನ ವಿಶಿಷ್ಟ ಇಷ್ಟಾರ್ಥವನ್ನು ಪೂರೈಸಿದ ಇನ್ನೊಬ್ಬ ಗುರುಭಕ್ತನಿದ್ದಾನೆ. ಅವನ ಬಗ್ಗೆ ತಿಳಿಯೋಣ. ಸಪ್ತಋಷಿಗಳಲ್ಲಿ ಒಬ್ಬರಾದ, ರಾಜನಾಗಿದ್ದವ ಬ್ರಹ್ಮರ್ಷಿಯಾದ ಬಗ್ಗೆ ಗಾಯತ್ರಿ ಮಂತ್ರ ದ್ರಷ್ಟಾರನೆನಿಸಕೊಂಡುದು ಮುಂತಾದ ವಿಷಯಗಳನ್ನು ವಿಶ್ವಾಮಿತ್ರನ ಅಂಕಣದಲ್ಲಿ ತಿಳಿದಿದ್ದೇವೆ. ವಿಶ್ವಾಮಿತ್ರರ ಶಿಷ್ಯನಾದ ‘ಗಾಲವ’ ಋಷಿಯೇ ನಮ್ಮ ಈ ಬಾರಿಯ ಪುರಾಣ ಪುರುಷ ಈತನು ವಿಶ್ವಾಮಿತ್ರನ ಗುರುಕುಲದಲ್ಲಿ ವಿದ್ಯೆ ಕಲಿತು ಪೂರ್ತಿಯಾದ ಬಳಿಕ ‘ಗುರುಗಳೇ, ತಮಗೆ ಏನು ದಕ್ಷಿಣೆ ಕೊಡಲಿ?’ ಎಂದು ಕೇಳಿದನು. ಗುರುಗಳು ‘ಏನೂ ಬೇಡ ನೀನು ಚೆನ್ನಾಗಿದ್ದುಕೋ’ ಎಂದರೂ ಆತ ಒತ್ತಾಯಿಸುತ್ತಾನೆ. ಇವನಿಗೆ ಸ್ವಲ್ಪ ಅಹಂಕಾರ ಬಂದಿದೆ ಬುದ್ಧಿ ಕಲಿಸಬೇಕೆಂದುಕೊಂಡ ಅವರು ‘ನೀನು ನನಗೆ ದಕ್ಷಿಣೆ ಕೊಡಲೇಬೇಕೆಂದು ಬಯಸುವಿಯಾದರೆ ಮೈಯಿಡೀ ಬಿಳಿಯಾಗಿದ್ದು ಒಂದು ಕಿವಿ ಮಾತ್ರ ಕಪ್ಪಾದ ಎಂಟುನೂರು ಕುದುರೆಗಳನ್ನು ತಂದುಕೊಡು’ ಎಂದು ಹೇಳುತ್ತಾರೆ.
ಗುರುವಿನ ಹೇಳಿಕೆಯನ್ನು ಶಿಷ್ಯ ಪಾಲಿಸದೆ ಇರುತ್ತಾನೆಯೇ ಸರಿ. ಆತ ಊರಿಡೀ, ರಾಜ್ಯವಿಡೀ, ದೇಶವಿಡೀ ಸುತ್ತಿದ. ಹುಡುಕಾಡಿದ. ಆದರೆ ಗುರುಗಳು ತಿಳಿಸಿದಂತಹ ಒಂದೇ ಒಂದು ಕುದುರೆ ಆತನ ಕಣ್ಣಿಗೆ ಬೀಳಲಿಲ್ಲ. ಸೋತು ಹೋದ ‘ಗಾಲವ’ ಮಹಾವಿಷ್ಣುವಿನ ಕುರಿತಾಗಿ ತಪಸ್ಸು ಮಾಡಿದ, ಕಠೋರ ತಪಸ್ಸು ಮಾಡುತ್ತಾನೆ ಗಾಲವ! ಅದೂ ಗುರುವಿನ ಕೋರಿಕೆ ಈಡೇರಿಸುವ ಉಪಾಯಕ್ಕಾಗಿ ಗಾಲವನಿಗೆ ವಿಷ್ಣು ಪ್ರತ್ಯಕ್ಷನಾದ. ಗಾಲವ ತನ್ನಳಲನ್ನು ಮಹಾವಿಷ್ಣುವಿನಲ್ಲಿ ನಿವೇದಿಸಿಕೊಂಡ. ತನ್ನ ಭಕ್ತನ ನಿಸ್ವಾರ್ಥ ಬುದ್ಧಿ, ಗುರುವಿನ ಮೇಲಿನ ಭಕ್ತಿ, ಇವುಗಳನ್ನೆಲ್ಲ ಮನಗಂಡ ಶ್ರೀಮನ್ನಾರಾಯಣನನ್ನು ತನ್ನ ವಾಹನವಾದ ಗರುಡನನ್ನು ಕುದುರೆ ಹುಡುಕಾಟಕ್ಕೆಂದು ಗಾಲವನಿಗೆ ನೀಡಿದ. ಗರುಡನ ಮೇಲೇರಿ ಹೊರಟ ಗಾಲವ ದೇಶವೆಲ್ಲಾ ಸಂಚರಿಸಿದ ಗರುಡ ಹಸ್ತಿನಾವತಿಯ ಯಯಾತಿ ರಾಜನ ಪ್ರತಿಷ್ಠಾನಪುರದಲ್ಲಿಳಿಸಿದ. ಯಯಾತಿಗೆ ಗಾಲವನ ವಿಚಾರ ತಿಳಿಸಿದ ಗರುಡ, ಮಹಾವಿಷ್ಣುವಿನ ವಾಹನದಲ್ಲಿ ಬಂದಿದ್ದಾನೆ ಗಾಲವ! ದೇಹಿ ಎಂದು ಬೇಡಿದವರಿಗೆ ಇದುವರೆಗೆ ಹಾಗೆಯೇ ಕಳಿಸಲಿಲ್ಲ. ಏನು ಮಾಡುವುದು? ಎಂದು ಚಿಂತಿಸಿದ ರಾಜ, ತನ್ನ ಮಗಳಾದ ‘ಮಾಧವಿ’ ಯನ್ನು ಮದುವೆ ಮಾಡಿಕೊಟ್ಟ.
ತನಗೆ ನೀಡಿದ ಕನ್ಯೆಯನ್ನು ಬೇಕಾದಂತೆ ಉಪಯೋಗಿಸಲು ಹೇಳಿದ್ದಾನಲ್ಲ! ಈಕೆಯನ್ನೇ ನೀಡಿ ಕುದುರೆಗಳನ್ನು ಪಡೆಯುವುದೆಂದು ಗಾಲವ ನಿರ್ಧರಿಸಿದೆ. ಇಲ್ಲಿ ಗಾಲವನಿಗೆ ಗುರುಕೋರಿಕೆಯ ಗುರಿಯೇ ಕಣ್ಣ ಮುಂದೆ ಸುಳಿಯಿತಲ್ಲದೆ ಬೇರೇನೂ ಕಾಣಲಿಲ್ಲ. ಅವನು ಇಕ್ಷಾಕು ರಾಜನಲ್ಲಿಗೆ ಹೋದ. ಅಲ್ಲಿ ಇನ್ನೂರು ಕುದುರೆಗಳು ಕಂಡುವು. ಗಾಲವನು ಆ ರಾಜನಿಗೆ ವಿಷಯ ತಿಳಿಸಿ ಒಂದು ವರ್ಷದ ಮಟ್ಟಿಗೆ ಮಾಧವಿಯನ್ನು ಅವನ ಸೇವೆಗೆ ಬಿಟ್ಟು ಇನ್ನೂರು ಕುದುರೆಗಳನ್ನು ಪಡೆದ ಒಂದು ವರ್ಷದ ಬಳಿಕ ಮಾಧವಿಯನ್ನು ಪಡೆದು ದೀವೋದಾಸ ರಾಜನಲ್ಲಿ ಕುದುರೆಗಳಿರುವುದನ್ನು ತಿಳಿದು ಮಾಧವಿಯನ್ನು ಒಂದು ವರ್ಷದ ಮಟ್ಟಿಗೆ ಆ ರಾಜನಲ್ಲಿ ಬಿಟ್ಟು ಇನ್ನೂರು ಕುದುರೆಗಳನ್ನು ಪಡೆದ. ಅಲ್ಲಿಯೂ ಒಂದು ವರ್ಷದ ಅವಧಿ ಮುಗಿದ ಮೇಲೆ ಮಾಧವಿಯನ್ನು ಪಡೆದು ‘ಉಷೀನರ’ನೆಂಬ ಭೋಜರಾಜನಲ್ಲಿಗೆ ಹೋದ.ಇಲ್ಲಿಯೂ ತನ್ನ ಹೆಣ್ಣನ್ನು ರಾಜನ ಬಳಿ ಒಂದು ವರ್ಷಕ್ಕೆ ಬಿಟ್ಟು ಅವಧಿ ಮುಗಿದ ಮೇಲೆ ಹೋಗಿ ಇನ್ನೂರು ಕುದುರೆಗಳನ್ನೂ ಮಾಧವಿಯನ್ನೂ ಪಡೆದ. ಇಲ್ಲಿಗೆ ಎಂಟುನೂರು ಕುದುರೆಗಳಿಗೆ ಇನ್ನೂರು ಬಾಕಿಯಿತ್ತು. ಬೇರೆಲ್ಲೂ ಹಯಗಳು ಸಿಗದಿದ್ದಾಗ ಗುರುಗಳಾದ ವಿಶ್ವಾಮಿತ್ರರ ಬಳಿಗೆ ತೆರಳಿ ನಡೆದ ವಿಚಾರಗಳನ್ನೆಲ್ಲ ನಿವೇದಿಸಿಕೊಂಡು ಆರುನೂರು ಕುದುರೆಗಳನ್ನೂ ಮಾಧವಿಯನ್ನು ಗುರುದಕ್ಷಿಣೆಯಾಗಿ ನೀಡಿದ. ಗುರುದಕ್ಷಿಣೆ ಬೇಡವೆಂದು ಹೇಳಿದರೂ ಈತನ ಕೇಳಲಿಲ್ಲ. ಇರಲಿ, ಎಂದು ವಿಶ್ವಾಮಿತ್ರನು ಗುರುಕಾಣಿಕೆ ಸ್ವೀಕರಿಸಿದರು.
ಮಾಧವಿಯ ಇಕ್ಷಾಕು ರಾಜನಿಂದ ‘ವಸುಮಾನ’ನೆಂಬ ಮಗನನ್ನೂ ದೀವೋದಾಸ ರಾಜನಿಂದ ‘ಪ್ರತರ್ದನ’ನೆಂಬ ಮಗನನ್ನೂ ‘ಉಷೀನರ’ನಿಂದ ‘ಶಿಬಿ’ಯನ್ನೂ, ವಿಶ್ವಾಮಿತ್ರನಿಂದ ‘ಅಷ್ಟಕ’ನೆಂಬ ಮಕ್ಕಳನ್ನು ಪಡೆದಳು. ತಮ್ಮ ಹೆಂಡತಿಯನ್ನು ಇತರರಿಗೆ ಮಾರಬಹುದೇ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಗಾಲವ ಮಾನಸಿಕವಾಗಿ, ಶಾರೀರಿಕವಾಗಿ ಮಾಧವಿಯನ್ನು ಪತ್ನಿಯನ್ನಾಗಿ ಸ್ವೀಕರಿಸಿರಲಿಲ್ಲ. ಆದರೆ ಪುರಾಣ ಕಾಲದಲ್ಲಿ ಇಂತಹ ಸಂಗತಿಗಳು ಹೇರಳವಾಗಿ ಸಿಗುತ್ತದೆ. ಇಲ್ಲಿ ನಾವು ಅರ್ಥೈಸಿಕೊಳ್ಳುವ ಅಂಶವೆಂದರೆ, ಗುರುವಿನಾಜ್ಞೆ ಪೂರೈಕೆ ಅದಕ್ಕಾಗಿ ಸಾಧಿಸುವ ಗುರಿ, ಸತತ ಪರಿಶ್ರಮ ತನ್ನ ಬಗ್ಗೆ, ತನ್ನ ಸುಖದ ಬಗ್ಗೆ, ಸ್ವಾರ್ಥದ ಬಗ್ಗೆ ಯೋಚಿಸದೆ ಗುರುವಿನಾಸೆ ಈಡೇರಿಸಿದ ಗಾಲವ ಶ್ರೇಷ್ಠ ಸಾಧಕ, ‘ಸಾಧಿಸಿದರೆ ಸಪಳ ನುಂಗಬಹುದು’ ಎಂಬ ನಾಣ್ಣುಡಿ ಇಲ್ಲಿ
ನೆನಪಾಗುತ್ತಿದೆಯಲ್ಲವೆ?
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಧನ್ಯವಾದಗಳು ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ.
ಅಪರೂಪದ ಕಥೆ, ಚೆನ್ನಾಗಿದೆ.
ಚೆನ್ನಾಗಿದೆ
ಈ ವಿಷಯವನ್ನಾಧರಿಸಿ ಡಾ..ಅನುಪಮಾನಿರಂಜನ ಮಾಧವಿ ಎನ್ನುವ ಕಾದಂಬರಿ ಬರದಿದ್ದಾರೆ..ಈಗ ಮತ್ತೊಂದು ಸಾರಿ ಆ ಮಹಾರಾಯ ಗಾಲವನ..ಗುರುಋಣ ತೀರಿಸುವ..ಪ್ರಸಂಗ ಓದಿ..ವ್ಯಥೆಯಾಯಿತು…ಎಲ್ಲೇ..ಹುಟ್ಟಿರಲಿ ಬೆಳೆದಿರಲಿ..ಕರ್ಮಾನುಸಾರ ನೆಡೆಯಲೇ ಬೇಕೆಂಬ ತತ್ವಕ್ಕೆ ಕನ್ನಡಿ ಹಿಡಿದಿದೆ.ಅದರಲ್ಲೂ ಹೆಚ್ಚು ಶೋಷಿತಳಾಗುವವಳು..ಹೆಣ್ಣೇ.ಧನ್ಯವಾದಗಳು ವಿಜಯಾ ಮೇಡಂ
ಎಂದಿನಂತೆ, ಈ ಪೌರಾಣಿಕ ಕತಾ ನಿರೂಪಣೆ ಸೊಗಸಾಗಿದೆ. ಡಾ.ಅನುಪಮಾ ನಿರಂಜನ ಅವರ ‘ಮಾಧವಿ’ ಕಾದಂಬರಿಯನ್ನೂ ಹಿಂದೊಮ್ಮೆ ಓದಿದ್ದೇನೆ. ಒಟ್ಟಿನಲ್ಲಿ, ‘ಗಾಲವ’ನ ಗುರುದಕ್ಷಿಣೆಯಲ್ಲಿ ಯಾವ ತ್ಯಾಗವೂ ಇಲ್ಲ. ಗುರು-ಶಿಷ್ಯರ ಅಹಂಗೆ ಬಲಿಯಾದವಳು ನಿರ್ದೋಷಿಯಾದ ರಾಜಕುಮಾರಿ!
ಓದುಗ ಬಳಗಕ್ಕೆ ಹಾಗೂ ಅಡ್ಮಿನ್ ಹೇಮಮಾಲಾ ಇವರಿಗೆ ಮತ್ತೊಮ್ಮೆ ಆದರಣೀಯ ಧನ್ಯವಾದಗಳು.
ಗಾಲವನ ಗುರುಭಕ್ತಿಗೆ ಎರವಾದ ಮುಗ್ದ ರಾಜಕುಮಾರಿ ಮಾಧವಿ ಬಗ್ಗೆ ಕನಿಕರ ಮೂಡುತ್ತದೆ. ಎಂದಿನಂತೆ ಸರಳ ಸುಂದರ ಪೌರಾಣಿಕ ಕಥೆ.
ಗಾಲವನ ಗುರುಭಕ್ತಿಯನ್ನೇನೋ ಮೆಚ್ಚಬೇಕಾದ್ದೇ. ಆದರೆ ಮಾಧವಿಯ ಮನಃಸ್ಥಿತಿ, ದೇಹಸ್ಥಿತಿ ಕನಿಕರ ಮೂಡಿಸುತ್ತದೆ. ಸೊಗಸಾದ ನಿರೂಪಣೆಯ ಮತ್ತೊಂದು ಪೌರಾಣಿಕ ಪ್ರಸಂಗ. ಅಭಿನಂದನೆಗಳು.
ಪೌರಾಣಿಕ ಕಥೆಗಳಲ್ಲಿ ಬರುವ ಹೆಣ್ಣಿನ ಕಣ್ಣೀರಿನ ಕಥೆಗಳನ್ನು ಕೇಳಿದಾಗ ಗಾಬರಿಯಾಗುತ್ತದೆ
ಸೊಗಸಾದ ನಿರೂಪಣೆ