ಅವಿಸ್ಮರಣೀಯ ಅಮೆರಿಕ : ಎಳೆ 82

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಕಾಡಿನೊಳಗೆ ಕೈ ಚಾಲಿತ ಟ್ರಾಮ್ (Hand Tram) !

ಸಹಪ್ರವಾಸಿಗರು ಹಾಗೂ ಮಕ್ಕಳ ಜೊತೆಗೆ ನಮ್ಮ ಕಾಲ್ನಡಿಗೆಯು Girdwood ಎನ್ನುವ ಈ ಕಾಡಿನೊಳಗೆ ಇರುವ ಅಗಲವಾದ ಕಾಲುದಾರಿಯಲ್ಲಿ ಆರಂಭವಾದಾಗ ಸಂಜೆ ಗಂಟೆ 4:30. ದಿನಕ್ಕೆ ನೂರಾರು ಪ್ರವಾಸಿಗರು ಓಡಾಡಿದ ಕಾಡಿನೊಳಗೆ ಒಂದೇ ಒಂದು ಚೂರು ಪ್ಲಾಸ್ಟಿಕ್ ಕಸ, ಬಾಟಲಿಗಳು ಕಾಣಸಿಗಲಿಲ್ಲ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ನಡೆದಾಗ, ಒಂದು ಕಿರು ತಿರುವಿನಲ್ಲಿ, ದಟ್ಟ ಪೊದೆಯ ಪಕ್ಕದಲ್ಲಿ ಕಂಡಿತು … ವಿಶೇಷವಾದ ಸುಸಜ್ಜಿತ ವ್ಯವಸ್ಥೆ. ಅದುವೇ ಅಲ್ಲೇ ಮುಂಭಾಗದಲ್ಲಿ ಹರಿಯುತ್ತಿದ್ದ ದೊಡ್ಡದಾದ ತೊರೆಯೊಂದನ್ನು ದಾಟಲು ಇರುವ ಕೈ ಚಾಲಿತ ಟ್ರಾಮ್ ಅಳವಡಿಕೆ.. ಇದುವೇ ಇಲ್ಲಿಯ ವಿಶೇಷ ಆಕರ್ಷಣೆಯೂ ಹೌದು.

ಬಹಳ ಗಟ್ಟಿಯಾದ ಕಬ್ಬಿಣದ ಚೌಕಾಕಾರದ ತೊಟ್ಟಿಲು…ಅದರ ನಾಲ್ಕೂ ಸುತ್ತಲೂ ಸುರಕ್ಷಾ ಕವಚವಾಗಿ ಕಬ್ಬಿಣದ ಸರಳುಗಳಿವೆ. ಅತ್ಯಂತ ಬಲವಾದ ಉಕ್ಕಿನ ಹಗ್ಗವೊಂದು ದೊಡ್ಡದಾದ ಚಕ್ರವೊಂದಕ್ಕೆ ಸುತ್ತುವರಿದು ತೊರೆಯ ಇನ್ನೊಂದು ದಡದಲ್ಲಿರುವ ಇಂತಹದೇ ಇನ್ನೊಂದು ಚಕ್ರವನ್ನು ಸುತ್ತುವರಿಯುತ್ತದೆ. ಅಲ್ಲಿಂದ ಪುನ: ಹಿಂತಿರುಗುವ ಹಗ್ಗವು ಮೊದಲಿನ ಚಕ್ರಕ್ಕೆ ಬಂದು ಸೇರುತ್ತದೆ. ಈ ರೀತಿಯಲ್ಲಿ ಹಗ್ಗದ ಚಕ್ರವು ಪೂರ್ಣಗೊಳ್ಳುತ್ತದೆ. ಎರಡೂ ಕಡೆಗಳಲ್ಲಿರುವ ಚಕ್ರಗಳಿಗೆ ಬಲವಾದ ಹಿಡಿಗಳನ್ನು ಅಳವಡಿಸಲಾಗಿದೆ. ಒಮ್ಮೆಗೆ ಈ ತೊಟ್ಟಿಲಲ್ಲಿ ದೊಡ್ಡವರಾದರೆ ಎರಡು ಮಂದಿ ಮಾತ್ರ ಹೋಗಬಹುದು. ಇದರಲ್ಲಿ ಕುಳಿತುಕೊಳ್ಳಲು ಅವಕಾಶವಿಲ್ಲ. ಅಲ್ಲದೆ, ಇಲ್ಲಿ ಯಾವ ಸಿಬ್ಬಂದಿಗಳೂ ಇಲ್ಲದಿರುವುದರಿಂದ ನಮ್ಮ ಸಹಾಯಕ್ಕೆ ಯಾರೂ ಸಿಗುವುದಿಲ್ಲ. ನಾವು ಪ್ರವಾಸಿಗರೇ ಒಬ್ಬರಿಗೊಬ್ಬರು ಸಹಾಯ ಮಾಡಿ ಈ ಚಕ್ರವನ್ನು ತಿರುಗಿಸಿದಾಗ ತೊಟ್ಟಿಲು ತೊರೆಯ ಇನ್ನೊಂದು ಪಕ್ಕ ತಲಪುತ್ತದೆ. ಅಲ್ಲಿಯೂ ಚಕ್ರ ಅಳವಡಿಸಿದ ಕಂಬಕ್ಕೆ ಸುತ್ತಿ ತೊಟ್ಟಿಲು ಬರುವುದರೊಳಗೆ ಅಲ್ಲಿ ಇಳಿಯಬೇಕಾಗುತ್ತದೆ. ಆ ಪಕ್ಕವು ಸ್ವಲ್ಪ ಎತ್ತರದಲ್ಲಿರುವುದರಿಂದ ಅಲ್ಲಿಂದ ತೊಟ್ಟಿಲು ಹೆಚ್ಚು ಪ್ರಯತ್ನವಿಲ್ಲದೆ ಈ ಕಡೆಗೆ ಜಾರಿ ಬರುತ್ತದೆ. ಆದರೆ ಈ ಪಕ್ಕದಲ್ಲಿರುವ ತೊಟ್ಟಿಲು ಮುಂದಕ್ಕೆ ಹೋಗಬೇಕಾದರೆ, ಒಳ್ಳೆಯ ಶಕ್ತಿಯುಳ್ಳವರು ಹಿಡಿಕೆಯ ಸಹಾಯದಿಂದ ಚಕ್ರವನ್ನು ತಿರುಗಿಸಬೇಕಾಗುತ್ತದೆ.


ನಾವು ಸರದಿಯ ಪ್ರಕಾರ ಮೊದಲಿಗೆ ಮಕ್ಕಳನ್ನು ತೊರೆಯ ಇನ್ನೊಂದು ಪಕ್ಕಕ್ಕೆ ಕಳುಹಿಸಿ, ಆ ಮೇಲೆ ನಾವು ಹೋಗುವಾಗ ಅಲ್ಲಿಗೆ ಮೊದಲೇ ಬಂದಿದ್ದ ಪ್ರವಾಸಿಗರು ಚಕ್ರ ತಿರುಗಿಸಲು ಸಹಾಯ ಮಾಡಿದರು. ಆ ಕಡೆಗೆ ದಾಟಿದ ಬಳಿಕ, ಎತ್ತರದ ದಿಬ್ಬವನ್ನು ಹತ್ತಿ, ತಣ್ಣಗೆ ಹರಿಯುತ್ತಿರುವ ತೊರೆಯ ಪಕ್ಕದಲ್ಲಿರುವ ಸೊಗಸಾದ ಕಾಲುದಾರಿಯಲ್ಲಿ ಕಾಡಿನೊಳಗೆ ನಡೆದೆವು. ಸುರಕ್ಷಿತ ತಾಣವೊಂದರಲ್ಲಿ, ರಭಸದಿಂದ ಹರಿಯುತ್ತಿರುವ ನೀರಿನಲ್ಲಿ ಆಟವಾಡಲು ಮಕ್ಕಳು ಇಳಿದಾಗ, ಅವರನ್ನು ಹಿಂದಕ್ಕೆ ಕರೆತರಲು ಸ್ವಲ್ಪ ಕಷ್ಟವೇ ಆಯ್ತೆನ್ನಿ. ಮುಂದಕ್ಕೆ, ವಾಹನ ಚಲಿಸಲು ಸೂಕ್ತವಾದ, ಅಗಲವಾದ ರಸ್ತೆಯನ್ನು ನೋಡಿ ಆಶ್ಚರ್ಯವಾಯಿತು. ಈ ರಸ್ತೆಯು, ಕಾಡಿನ ಇನ್ನೊಂದು ಪಕ್ಕದಿಂದ ಬರುತ್ತಿತ್ತು. ಆದರೆ ಸ್ವಲ್ಪ ದೂರದಲ್ಲಿ ತೊರೆಗೆ ಅಡ್ಡಲಾಗಿ ಹಾಕಿದ್ದ ಮರದ ಸೇತುವೆಯು ಅರ್ಧ ಮುರಿದ ಸ್ಥಿತಿಯಲ್ಲಿ ಇದ್ದುದನ್ನು ಕಂಡು, ಮುಂದಕ್ಕೆ ಹೋಗುವ ಸಾಹಸ ಮಾಡಲಿಲ್ಲ.

ಹಿಂತಿರುಗುವ ಸಮಯದಲ್ಲೂ ಚಕ್ರವನ್ನು ತಿರುಗಿಸಲು  ಬೇರೆಯವರ ಸಹಾಯವನ್ನು ಪಡೆಯಬೇಕಾಯಿತು. ಈ ಸರ್ತಿ ದೊಡ್ಡವರೆಲ್ಲರೂ ತೊರೆಗೆ ಇಳಿದು, ಚಳಿಯಿಂದ ಕೊರೆಯುವ ನೀರಿನಲ್ಲಿ ಕಾಲಾಡಿಸಿ ಬಂದೆವು. ಹಿಂತಿರುಗುವಾಗ ತಿರುವು ಒಂದರಲ್ಲಿ ಇದ್ದ ಅಡ್ಡ ಕಾಲುದಾರಿಯಲ್ಲಿ ನಡೆದು  ನಮ್ಮಿಬ್ಬರಿಗೆ ದಾರಿ ತಪ್ಪಿ ಸ್ವಲ್ಪ ಹೊತ್ತು ಆತಂಕವಾಯಿತು. ಅಷ್ಟರಲ್ಲೇ ನಮ್ಮ ಜೊತೆಗೆ ಬೇರೆಯವರು ಸೇರಿಕೊಂಡರೂ, ಮುಖ್ಯ ರಸ್ತೆಗೆ ಸೇರುವ ದಾರಿ ತಪ್ಪಿಯೇ ಹೋಗಿತ್ತು. ಆದ್ದರಿಂದ ನಮ್ಮ ವಾಹನವಿರುವಲ್ಲಿಗೆ ಮತ್ತಷ್ಟು ಹೆಚ್ಚು ದೂರ ನಡೆಯಬೇಕಾಯಿತೆನ್ನಿ! ಅಂತೂ, ದಿನದ ಹೊಸ ಅನುಭವಗಳು, ಆ ದಿನವನ್ನು ಒಂದಷ್ಟು ಸಮಯ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದವು. ಹೋಟೇಲ್ ಗೆ ಹಿಂತಿರುಗಿ ಮರುದಿನದ ನಮ್ಮ ಮರುಪ್ರಯಾಣದ ಸಿದ್ಧತೆಯಲ್ಲಿ ತೊಡಗಿಸಿಕೊಂಡೆವು.. ನಮ್ಮ ಈ  ಹನ್ನೊಂದು ದಿನಗಳ ಅವಿಸ್ಮರಣೀಯ ಅನುಭವಗಳನ್ನು ಮೆಲುಕು ಹಾಕುತ್ತಾ…

   ಸಂತಸದಿಂದ ಮುಗಿದ ಪ್ರವಾಸದ ಮಧುರಕ್ಷಣಗಳ ನೆನಪಿನಲೆಗಳಲ್ಲಿ ತೇಲುತ್ತಾ ತಿರುಗಿ ನಮ್ಮೂರಿನತ್ತ ವಿಮಾನ ಹೊರಟಾಗ,  ನೆಲ- ಜಲ-ವಾಯು ಮಾರ್ಗಗಳಲ್ಲಿ ಸಂಚರಿಸಿ ಅಲಾಸ್ಕಾದ ಪ್ರಕೃತಿ ಸೌಂದರ್ಯವನ್ನು ಮನಃಪೂರ್ತಿ ಸವಿದ ಸಾರ್ಥಕ್ಯ ಭಾವವು ನಮ್ಮೆಲ್ಲರ ಹೃದಯವನ್ನು ತುಂಬಿತ್ತು.

(ಮುಂದುವರಿಯುವುದು…)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: https://www.surahonne.com/?p=39809

ಶಂಕರಿ ಶರ್ಮ, ಪುತ್ತೂರು.

9 Responses

  1. ನಯನ ಬಜಕೂಡ್ಲು says:

    ಆತಂಕದ ಕ್ಷಣಗಳಿದ್ದರೂ ಕುತೂಹಲಕಾರಿಯಾಗಿ ಸಾಗಿದೆ ಪ್ರವಾಸ ಕಥನ.

  2. ಅಯ್ಯಪ್ಪ… ಪರದೇಶಗಳಿಗೆ ಹೋದಾಗ ಹೀಗಾದರೆ ಏನು ಗತಿ ಒಂದುಕ್ಷಣ..ಭಯವಾಯಿತು..ನಂತರ ಆತಂಕ ನಿವಾರಣೆಯಾಯಿತು.ಪ್ರವಾಸ ಕಥನ ಓದಿಸಿಕೊಂಡು ಹೋಯಿತು ಮೇಡಂ.

    • ಶಂಕರಿ ಶರ್ಮ says:

      ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು, ನಾಗರತ್ನ ಮೇಡಂ.

  3. ಚಂದದ ಪ್ರವಾಸ ಕಥನ
    ಧನ್ಯವಾದಗಳು ಮೇಡಂ

  4. Padmini Hegde says:

    ಕಣ್ಣಿಗೆ ಕಟ್ಟುವ ಪ್ರವಾಸ ಕಥನ!

  5. Padma Anand says:

    ಎಂದಿನಂತೆ ಕೌತುಕಮಯವಾಗಿ ಓದಿಸಿಕೊಂಡ ಅಮೆರಿಕಾ ಪ್ರವಾಸದ ಈ ಕಂತೂ ಸುರಕ್ಷಿತ ಮುಕ್ತಾಯದೊಂದಿಗೆ ಮುದ ನೀಡಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: