ಸೀತೆಯ ಕಾಲುಂಗುರ ಬಿದ್ದಿದೆ ಇಲ್ಲಿ…

Share Button


ಭಾರತದ ಉದ್ದಗಲಕ್ಕೂ ರಾಮಾಯಣದ ಘಟನೆಗಳಿಗೆ ಸಂಬಂಧಿಸಿದ ಕುರುಹುಗಳನ್ನು ಜನರು ಗುರುತಿಸುತ್ತಾರೆ. ರಸವತ್ತಾದ ದಂತಕತೆಗಳೂ, ಜಾನಪದ ಕತೆಗಳೂ ಸೃಷ್ಟಿಯಾಗಿರುತ್ತವೆ. ಸ್ಠಳೀಯ ಪೌರಾಣಿಕ ಕಲಾಪ್ರಕಾರಗಳಲ್ಲಿ ರಾಮಾಯಣದ ಪಾತ್ರಗಳು ತಮ್ಮದೇ ಛಾಪು ಮೂಡಿಸುತ್ತವೆ. ದೇಶದ ಹಲವಾರು ಪ್ರದೇಶಗಳಲ್ಲಿ ಆಯಾಯ ಸ್ಥಳದ ಭೌಗೋಳಿಕ ಸ್ಥಿತಿಗತಿಗಳಿಗೆ ಥಳಕು ಹಾಕಿಕೊಂಡ ರಾಮಾಯಣದ ಬಗೆಗಿನ ದಂತಕತೆಗಳು ಹರಿದಾಡುತ್ತಿರುತ್ತವೆ.

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ, ನಾನು ವಾಸವಾಗಿರುವ ಗ್ರಾಮೀಣ ಪರಿಸರದಲ್ಲಿ, ನಮ್ಮ ಮನೆಯಿಂದ 4 ಕಿ.ಮೀ ದೂರದಲ್ಲಿ ಸೀತಂಗೋಲಿ ಎಂಬ ಹೆಸರಿನ ಊರು ಇದೆ. ಈ ಸ್ಥಳಕ್ಕೆ ‘ಸೀತಂಗೋಲಿ‘ ಎನ್ನುವ ಹೆಸರು ಹೇಗೆ ಬಂತು ಎಂಬುದಕ್ಕೆ ಪ್ರಚಲಿತವಿರುವ ಸ್ವಾರಸ್ಯಕರವಾದ ದಂತ ಕತೆ ಹೀಗಿದೆ. ತ್ರೇತಾಯುಗದ ಶ್ರೀರಾಮನು, ಸೀತೆ ಹಾಗೂ ಲಕ್ಷ್ಮಣರೊಂದಿಗೆ ವನವಾಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಪ್ರದೇಶಕ್ಕೆ ಬಂದಿದ್ದಾಗ ಸೀತೆಯ ಕಾಲಿನ ಉಂಗುರವು ಇಲ್ಲಿ ಬಿದ್ದಿತ್ತಂತೆ. ಉಂಗುರ ಎಂಬ ಶಬ್ದವು ಸ್ಥಳೀಯ ತುಳು ಭಾಷೆಯಲ್ಲಿ ‘ಉಂಗಿಲು’ ಎಂಬುದಾಗಿ ಕರೆಯಲ್ಪಡುತ್ತದೆ. ಹಾಗಾಗಿ, ಸೀತಾಮಾತೆಯ ಕಾಲುಂಗುರ ಅಥವಾ ಸೀತೆಯ ಉಂಗಿಲು ಬಿದ್ದ ಸ್ಥಳವು ಆಡುಭಾಷೆಯಲ್ಲಿ ‘ಸೀತಾಂಗೋಲಿ’ ಎಂಬುದಾಗಿ ಕರೆಯಲ್ಪಟ್ಟಿತು.

ಇದೀಗ ಅಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣವಾದ ಹಿನ್ನೆಲೆಯಲ್ಲಿ ಭಾರತದ ಕಣಕಣವೂ ಸಂಭ್ರಮಿಸುತ್ತಿದೆ. ಈ ಸಂದರ್ಭದಲ್ಲಿ, ನಮ್ಮ ಆಸುಪಾಸಿನಲ್ಲಿ ಸೀತಾಮಾತೆಯ ಹೆಸರನ್ನು ಹೊಂದಿದ ಊರಿನ ಸ್ಥಳ ಪರಿಚಯ ಮಾಡುವ ಪ್ರಯತ್ನವಿದು.

ಎಂ.ಕೆ.ಶಾಮ ಭಟ್ , ಕಳತ್ತೂರು

10 Responses

  1. Savithri bhat says:

    ಈ ದಂತ ಕಥೆ ನನಗೆ ಗೊತ್ತಿರಲಿಲ್ಲ..ತಿಳಿಸಿದ್ದಕ್ಕೆ .ಸುರಹೊನ್ನೆಗೂ ಲೇಖಕರಿಗೂ ಧನ್ಯವಾದಗಳು.

  2. ಈ ದಂತಕತೆಗಳೆಂದರೆ ನನಗೆ ಬಹಳ ಇಷ್ಟ ಅದು ಎಷ್ಟು ಸರಿ ತಪ್ಪೋ ಗೊತ್ತಿಲ್ಲ..ಓದಿ ತಿಳಿದು ಕೊಳ್ಳಲು ಬಹಳ ಇಷ್ಟ..ಈಕಥೆ ನಿಜವಾಗಲೂ ಗೊತ್ತಿರಲಿಲ್ಲ.. ತಿಳಿಸಿ ದಕ್ಕೆ ಧನ್ಯವಾದಗಳು ಸಾರ್

  3. ವಿದ್ಯಾ says:

    ನಮ್ಮೂರು ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಸೀತರು ವನವಾಸದಲ್ಲಿ ಇಲ್ಲಿ ಉಳಿದು ಹೋಗಿದ್ದಾರೆ ಎಂಬ ಐತಿಹ್ಯ ವಿದೆ,,,ಬೆಟ್ಟ ಮನೋಹರ ವಾಗಿದೆ,,ಈಗ ಪ್ರಮುಖ ಪ್ರವಾಸಿ ತಾಣವಾಗಿದೆ

    • ಆಶಾ ನೂಜಿ says:

      ಪಕ್ಕದ ಊರಾದರೂ ನನಗೆ ಇದರ ದಂತಕಥೆಂತ ಗೊತ್ತಿರಲಿಲ್ಲ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಅಣ್ಣಾ ..

  4. ನಯನ ಬಜಕೂಡ್ಲು says:

    ಹತ್ತಿರದ ಊರೇ ಆದರೂ ಈ ಹೆಸರಿನ ಹಿಂದೆ ಇಂತಹ ಹಿನ್ನಲೆ ಇರಬಹುದು ಎಂಬ ಕಲ್ಪನೆಯೇ ಬರಲಿಲ್ಲ ಯಾವತ್ತೂ. Nice.

  5. M.K.Shama Bhat says:

    ಬರಹವನ್ನು ಮೆಚ್ಚಿದ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

    ಇಂತಹ ಒಂದು ದಂತ ಕಥೆ ಸೀತಂಗೋಲಿಯ ಕುರಿತಾಗಿ ಇದೆ ಎಂದು ಅಲ್ಲಿ ವಾಸಿಸುವವರಿಗೆ ಗೊತ್ತಿಲ್ಲ. ವಾಸ್ತವಿಕವಾಗಿ ಇದನ್ನು ತೊಂಡ ಮೂಲೆ ನಾರಾಯಣ ಭಟ್ ಇವರು ಬರೆದ ಹೆಸರಿನಲ್ಲಿ ಏನಿದೆ ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಒಂದೊಂದು ಪ್ರದೇಶದ ಬಗ್ಗೆ ಒಂದೊಂದು ದಂತೆ ಕಥೆಗಳಿರುತ್ತದೆ ಆದರೆ ಆ ವಿಚಾರಗಳು ಅಲ್ಲಿ ವಾಸಿಸುವವರಿಗೆ ಗೊತ್ತಿಲ್ಲ. ಏಕೆಂದರೆ ಆಧುನಿಕ ಜಗತ್ತಿನಲ್ಲಿ ಅದನ್ನೆಲ್ಲ ಹೇಳುವ ಹಿರಿಯರು ಈಗ ಯಾರು ಇಲ್ಲ.
    ಎಂ.ಕೆ.ಶಾಮ ಭಟ್

  6. ಶಂಕರಿ ಶರ್ಮ says:

    ಹತ್ತಿರದ ಚಿರಪರಿಚಿತ ಊರಾದರೂ ಅದರ ಹೆಸರಿನ ಹಿಂದಿರುವ ಕಥೆ ಗೊತ್ತಿರಲಿಲ್ಲ. …ಚಂದದ ದಂತಕಥೆಗಾಗಿ ಧನ್ಯವಾದಗಳು.

  7. ಪದ್ಮಾ ಆನಂದ್ says:

    ಈ ಲೇಖನವನ್ನೋದಿದ ಕ್ಷಣದಿಂದಲೇ ಸೀತಾಮಾತೆಯ ಕಾಲುಂಗರ ಬಿದ್ದ ʼ ಸೀತಂಗೋಲಿ”ಯನ್ನು ನೋಡುವ ತವಕ ಮನದಲ್ಲಿ ಹುಟ್ಟಿತು. ಮಾಹಿತಿಪೂರ್ಣ ಪುರಪರಿಚಯ.

    • M.K.Shama Bhat says:

      ಸೀತಂಗೋಲಿ ಈಗ ಮೊದಲಿನಂತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ, ಪ್ರಕೃತಿ ರಮಣೀಯವಾದ ಭೂಮಿಯಲ್ಲಿ ಬೃಹತ್ ಕೈಗಾರಿಕಾ ವಲಯ ಸ್ಥಾಪನೆಯಾಗಿದೆ. ಕಾಸರಗೋಡು ಜಿಲ್ಲೆಯ ಏಕೈಕ ಸರೋವರ ಕ್ಷೇತ್ರ ಅನಂತಪುರ (ಇಲ್ಲಿ ವಾಸವಾಗಿದ್ದ ಬಬಿಯಾ ಎಂಬ ಮೊಸಳೆಯ ಬಗ್ಗೆ ಇತ್ತೀಚೆಗೆ ಮಾಧ್ಯಮದಲ್ಲಿ ಸುದ್ದಿಯನ್ನು ತಾವು ಗಮನಿಸಿರಬಹುದು) ಸೀತಾಂಗೋಲಿಯ ಸಮೀಪದಲ್ಲಿದೆ. ‘ಮುಜುಂಗಾವು’ ಎಂಬ ಹೆಸರಿನ ಇನ್ನೊಂದು ಪ್ರಸಿದ್ಧ ತೀರ್ಥಕ್ಷೇತ್ರವೂ ಹತ್ತಿರದಲ್ಲಿವೆ. ಈ ಸ್ಥಳವು ಪ್ರಕೃತಿ ರಮಣೀಯವಾಗಿದೆ ಹಾಗೂ ಇಲ್ಲಿಗೆ ಆಗಮಿಸುವವರಿಗೆ ಸ್ವಾಗತ.
      ಎಂ.ಕೆ.ಶಾಮ ಭಟ್

  8. Anonymous says:

    ನಮ್ಮ ಊರಲ್ಲೂ ಈ ಒಂದು ಪುರಾಣ ಅನಿಸಿಕೆ ಚಾಲ್ತಿಯಲ್ಲಿತ್ತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: