ಅವಿಸ್ಮರಣೀಯ ಅಮೆರಿಕ – ಎಳೆ 68

Share Button
ಅಬ್ರಹಾಂ ಲಿಂಕನ್ ಸ್ಮಾರಕ


(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಅಬ್ರಹಾಂ ಲಿಂಕನ್ ಸ್ಮಾರಕ

ಜಗದ್ವಿಖ್ಯಾತ, ಅದ್ಭುತ ವಸ್ತು ಸಂಗ್ರಹಾಲಯದ ನೆನಪಿನಲ್ಲೇ ಬೆಳಗಾಯಿತು, ಜೂನ್ 12ನೇ  ದಿನ ಬುಧವಾರ… ಈ ದಿನ ನಾವು ಮತ್ತೊಂದು ವಿಶೇಷವಾದ ಪ್ರವಾಸೀ ತಾಣದತ್ತ ಹೊರಟೆವು…ಅದುವೇ ಅಬ್ರಹಾಂ ಲಿಂಕನ್ ಸ್ಮಾರಕ (Abraham Lincoln Memorial). ಅಮೆರಿಕದ 16ನೇ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ಅಧ್ಯಕ್ಷರಾದ ಮಾತ್ರಕ್ಕೆ ಜಗದ್ವಿಖ್ಯಾತರಾದುದಲ್ಲ… ಅವರು ತಮ್ಮ ಅದ್ವಿತೀಯ ಜೀವನ ಕ್ರಮ ಹಾಗೂ ಅವರ ಗುರಿ ಸಾಧನೆಗೆ ಪ್ರಖ್ಯಾತರಾದವರು. “ಸೋಲೇ ಗೆಲುವಿನ ಮೂಲ” ಎನ್ನುವ ಮಂತ್ರವು ಇವರಿಂದಾಗಿ ಸಾರ್ಥಕತೆಯನ್ನು ಪಡೆದಿದೆ ಎನ್ನಬಹುದು. ಸೋಲುಂಡವರಿಗೆ, ಜೇಡ ಬಲೆ ಹೆಣೆದ ಕಥೆಯು ಹೇಗೆ ಸ್ಫೂರ್ತಿದಾಯಕವಾಗಿದೆಯೋ, ಅಂತೆಯೇ, ತಮ್ಮ ಜೀವನದಲ್ಲಿ ಕಂಡ ಸತತ ಸೋಲುಗಳು ಇವರನ್ನು ದಿಕ್ಕೆಡಿಸದೆ, ಗುರಿ ತಲಪುವ ಛಲವನ್ನು ಇನ್ನಷ್ಟು ಉದ್ದೀಪನಗೊಳಿಸಲು ಕಾರಣವಾದ ಇವರ ಜೀವನಗಾಥೆಯು ಸೋಲುಂಡು ಕಂಗೆಟ್ಟವರಿಗೆ ಸ್ಫೂರ್ತಿದಾಯಕವಾಗಿದೆ. 

ಮೊತ್ತ ಮೊದಲಿಗೆ ಇವರು ತಮ್ಮ 21ನೇ ವಯಸ್ಸಿನಲ್ಲಿ ಪ್ರಾರಂಭಿಸಿದ ವ್ಯಾಪಾರದಲ್ಲಿ ಸೋಲುಂಟಾಗಲು, ಅವರ ಮನ ರಾಜಕೀಯದ ಕಡೆಗೆ ವಾಲಿತು. ಮರುವರ್ಷ ಶಾಸನ ಸಭೆಗೆ ಸ್ಪರ್ಧಿಸಿ, ಅದರಲ್ಲಿ ಸೋಲನ್ನುಂಡರು. ಮತ್ತೆರಡು ವರ್ಷಗಳ ಬಳಿಕ ಪುನ: ವ್ಯಾಪಾರಕ್ಕೆ ಕೈ ಹಾಕಿದರೂ ಜಯಿಸಲಾಗಲಿಲ್ಲ. ತಮ್ಮ 26ನೇ ವಯಸ್ಸಿನಲ್ಲಿ ಪ್ರೇಯಸಿಯ ಸಾವು ಕಂಗೆಡಿಸಿದರೆ, ಮತ್ತೊಂದು ವರ್ಷಕ್ಕೆ ಅವರು ನರವ್ಯಾಧಿಗೆ ತುತ್ತಾದರು. ಆದರೂ ಎದೆಗುಂದದೆ 34ನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಪುನ: ಸೋಲಬೇಕಾಯಿತು. ಬಳಿಕ 47ನೇ ವಯಸ್ಸಿನಲ್ಲಿ ಉಪಾಧ್ಯಕ್ಷ ಚುನಾವಣೆಯಲ್ಲಿ ಮತ್ತು 49ನೇ ವಯಸ್ಸಿನಲ್ಲಿ ಸೆನೆಟ್ ಗೆ ಸ್ಪರ್ಧಿಸಿ ಸೋಲಬೇಕಾಯಿತು. ಆದರೂ ಎದೆಗುಂದದೆ ತಮ್ಮ 52ನೇ ವಯಸ್ಸಲ್ಲಿ ನಿಂತ ಚುನಾವಣೆಯಲ್ಲಿ ಗೆಲುವು ಪಡೆದು ಬೃಹತ್ ರಾಷ್ಟ್ರವೊಂದರ ಅಧ್ಯಕ್ಷ ಸ್ಥಾನದ ಪೀಠವನ್ನು ಏರಿಯೇ ಬಿಟ್ಟರು…ಎಡೆಬಿಡದ ಪ್ರಯತ್ನದಿಂದ ಜೀವನದ ಮಹದೋದ್ದೇಶವನ್ನು ಸಾಧಿಸಿಕೊಂಡೇ ಬಿಟ್ಟರು! 

ಅಮೆರಿಕದ ಅಂತರ್ಯುದ್ಧದ ಸಮಯವಾಗಿದ್ದ ಕಾಲ, ಅಂದರೆ 1861 ರಿಂದ ಅಧ್ಯಕ್ಷ ಪದವಿಯನ್ನು ವಹಿಸಿಕೊಂಡ ಬಳಿಕ ಜನ ಸಾಮಾನ್ಯರ, ಮುಖ್ಯವಾಗಿ ಗುಲಾಮರ ಜೀವನದ ಬಗ್ಗೆ ಬಹಳ ಕಾಳಜಿ ವಹಿಸಿದರು. ಅತ್ಯಂತ ಕ್ಲಿಷ್ಟ ಪರಿಸ್ಥಿತಿಯನ್ನು ಕೂಡಾ ಬಹಳ ಚಾಣಾಕ್ಷತನದಿಂದ ನಿಭಾಯಿಸಿ, ಅದಕ್ಕಾಗಿ ಇದ್ದಂತಹ ಒಕ್ಕೂಟದ ರಕ್ಷಣೆಯನ್ನು ಮಾಡಿದ ಹೆಗ್ಗಳಿಕೆ ಇವರದು. 1865, ಎಪ್ರಿಲ್ 14ರಂದು ದುಷ್ಕರ್ಮಿಗಳ ಗುಂಡೇಟಿಗೆ  ಗುರಿಯಾದರು.

ಇವರ ಸ್ಮರಣಾರ್ಥ ಹಾಗೂ ಗೌರವಾರ್ಥ 1914ರಲ್ಲಿ ಸ್ಮಾರಕವನ್ನು ನಿರ್ಮಿಸಲು ಪ್ರಾರಂಭಿಸಿ, 1922ರಲ್ಲಿ ಅದನ್ನು ಪೂರ್ಣಗೊಳಿಸಲಾಯಿತು. ಆತ್ಮಗೌರವದೊಂದಿಗೆ ಸ್ವಾತಂತ್ರ್ಯದ ಮೇಲೆ ಅಗಾಧ ನಂಬಿಕೆ ಇರಿಸಿದ್ದ ಲಿಂಕನ್ ಅವರು ನಡೆದು ಬಂದ ಕಲ್ಲು ಮುಳ್ಳುಗಳ ದಾರಿಯು ಅವರನ್ನು ಕಿಂಚಿತ್ತೂ ಎದೆಗುಂದಿಸದೆ, ಅವರಿಗೆ ಮುಂದೆ ಗೆಲುವಿನ ಹಾದಿಯನ್ನು ತೋರಿಸಿದ ಇತಿಹಾಸವು, ಎಂದೆಂದಿಗೂ ಹಚ್ಚಹಸಿರಾಗಿ ಗೋಚರಿಸುತ್ತಿರುವುದು ಸುಳ್ಳಲ್ಲ. 

ಇಲ್ಲಿಗೆ ನಾವು ತಲಪಿದಾಗ ಅದಾಗಲೇ ನಡುಹಗಲು. ಆವರಣದೊಳಕ್ಕೆ ಹೆಜ್ಜೆ ಇಟ್ಟೊಡನೆಯೇ ದಟ್ಟ ಹಸಿರಿನ ಎತ್ತರೆತ್ತರ ಮರಗಳಿರುವ ಸುಂದರ ಬನವು ನಮ್ಮನ್ನು ಸ್ವಾಗತಿಸಿತು. ಆವರಣದ ಬಲಭಾಗದಲ್ಲಿ ಮೇಲಕ್ಕಿರುವ  ಸ್ಮಾರಕ ಭವನಕ್ಕೆ ಹೋಗಲು ಉದ್ದ ಹಾಗೂ ಅಗಲಕ್ಕಿರುವ ಮೆಟ್ಟಿಲುಗಳು…ಎಲ್ಲವೂ ಅಮೃತಶಿಲೆ…ಸ್ವಚ್ಛ, ಬಿಳಿ.  ಇರುವ ಒಟ್ಟು 58 ಮೆಟ್ಟಿಲುಗಳಲ್ಲಿ, ಮೊದಲಿನ 56 ಮೆಟ್ಟಿಲುಗಳು, ಅವರು ಹುತಾತ್ಮರಾದಾಗ ಅವರ ವಯಸ್ಸನ್ನು ಸೂಚಿಸಿದರೆ, ಉಳಿದವೆರಡು, ಅವರು 2 ಬಾರಿ ಅಧ್ಯಕ್ಷರಾದುದನ್ನು ಸೂಚಿಸುತ್ತವೆ. ಇಲ್ಲಿ ನೂರಾರು ಪ್ರವಾಸಿಗರು ಓಡಾಡುತ್ತಿದ್ದರೂ ಎಲ್ಲೆಲ್ಲೂ ಅಚ್ಚುಕಟ್ಟು, ನೈರ್ಮಲ್ಯ ಎದ್ದು ತೋರುತ್ತದೆ. ಮುಂಭಾಗದಲ್ಲಿರುವ ಎತ್ತರದ 36ಕಂಬಗಳು ಬಹು ಅಂದದ ನೇರ ಕೆತ್ತನೆಗಳಿಂದ ಕೂಡಿವೆ. ಅಲ್ಲದೆ, ಇವುಗಳು ಲಿಂಕನ್ ಅವರ ಆಡಳಿತ ಕಾಲದಲ್ಲಿ ದೇಶದಲ್ಲಿದ್ದ 36 ರಾಜ್ಯಗಳನ್ನು ಸಂಕೇತಿಸುತ್ತವೆ.

ವಿಶಾಲವಾದ, ತೆರೆದ ಹಜಾರದ ಒಳಗಡೆಗೆ ಹೋಗುತ್ತಿದ್ದಂತೆಯೇ ಮುಂಭಾಗದಲ್ಲಿದೆ… ಎತ್ತರದ ಸಿಂಹಾಸನದಲ್ಲಿ ಕುಳಿತ ಲಿಂಕನ್ ಅವರ ಪ್ರತಿಮೆ. ಅತ್ಯಂತ ನೈಜರೂಪದಲ್ಲಿ ಕಡೆಯಲ್ಪಟ್ಟ ಈ ಮೂರ್ತಿಯು ಕುಳಿತ ಆಸನವು, ಮೂಲ ಆಸನದ ಪ್ರತಿಕೃತಿಯಾಗಿದ್ದು, ಅದರಲ್ಲಿ ಕುಳಿತಿದ್ದಾಗಲೇ ಅವರ ಹತ್ಯೆಗೈಯಲಾಯಿತೆನ್ನುವುದು ಇತಿಹಾಸ. ಈ ಹಜಾರದ ಒಳಗಡೆಯಲ್ಲಿ ಒಂದು ರೀತಿಯ ವಿಷಾದ ಭಾವದ ಅನುಭವವಾಗುವುದಂತೂ ನಿಜ. ಅಲ್ಲಿ, ಉತ್ಸಾಹೀ ಪ್ರವಾಸಿಗರು ಪ್ರತಿಮೆಯ ಮುಂದೆ ನಿಂತು ಛಾಯಾಚಿತ್ರಗಳನ್ನು ತೆಗೆಯುತ್ತಿದ್ದುದರಿಂದ ಸ್ವಲ್ಪಮಟ್ಟಿನ ನೂಕುನುಗ್ಗಲು ಆಗಿಬಿಟ್ಟಿತು. ನಾವು ನಮ್ಮ ಸರದಿಗಾಗಿ ಅರ್ಧಗಂಟೆ ಕಾಯಬೇಕಾಯಿತು. ವಿಗ್ರಹದ ಎಡಭಾಗದ ಭಿತ್ತಿಯ ಮೇಲೆ ಅವರ ಕೊನೆಯ ಅಧ್ಯಕ್ಷೀಯ ಭಾಷಣವನ್ನು ಕೆತ್ತಲಾಗಿದೆ.

ಮಧ್ಯಾಹ್ನದ ಬಿಸಿಲ ಝಳ ಹೊಡೆಯುತ್ತಿತ್ತು.  ಜೊತೆಗೆ ಬಲವಾದ ಕುಳಿರ್ಗಾಳಿಯು ಎತ್ತರದಲ್ಲಿದ್ದ ನಮ್ಮನ್ನು ಎತ್ತಿ ಎಸೆಯುವಂತೆ ಬೀಸುತ್ತಿತ್ತು. ಇಲ್ಲಿ ಮೆಟ್ಟಿಲುಗಳ ಪಕ್ಕದ ಜಾರುಕಲ್ಲಿನ ಮೇಲೆ ಜಾರುಬಂಡಿಯಾಡುವ ಮಕ್ಕಳ ನಗು ಕೇಕೆಗಳು ನಮ್ಮ ಮುಖದಲ್ಲೂ ಮಂದಹಾಸ ಮೂಡಿಸಿದವು. ಅಲ್ಲಿಂದ ಕೆಳಗಡೆ ಇಳಿದಾಗ ಎಡಗಡೆಯಲ್ಲಿದೆ, ನೀರಿನಿಂದ ತುಂಬಿ ತುಳುಕುವ ವಿಶಾಲವಾದ, ಆಯತಾಕಾರದ ಸರೋವರ. ಅದರ ನೇರಕ್ಕೆ ಬಹು ದೂರದಲ್ಲಿ ಅತ್ಯಂತ ಎತ್ತರದ ರಚನೆಯೊಂದು ಗಂಭೀರವಾಗಿ ನಿಂತಿದ್ದು, ಅದು ನೀರಿನಲ್ಲಿ ಪ್ರತಿಫಲಿಸಿ ತನ್ನ ಇರವನ್ನು ಸೂಚಿಸುತ್ತದೆ. ಸುಮಾರು ಒಂದು ಕಿ.ಮೀ. ಉದ್ದಕ್ಕಿರುವ ಈ ಕೊಳದ ಸುತ್ತಲೂ ದೊಡ್ಡ ದೊಡ್ಡ ಮರಗಳಿಂದ ಕೂಡಿದ ವಿಶಾಲವಾದ ಪಾರ್ಕ್ ಬಹು ಸೊಗಸಾಗಿದೆ. ಕೊಳದ ಬಲಗಡೆಯ ಪಾರ್ಕಿನಲ್ಲಿರುವ ವಿಶೇಷತೆಗಳನ್ನು ನೋಡೋಣ ಬನ್ನಿ…

ಸೊಗಸಾದ ರಸ್ತೆಯ ಮೇಲೆ ಹರಡಿ ನಿಂತ ಮರಗಳ ತಣ್ಣನೆಯ ನೆರಳು… ಅದರ ಇಕ್ಕೆಲಗಳಲ್ಲೂ ಚಂದದ ಕಾಲು ದಾರಿಗಳು.. ಅದರಲ್ಲಿ ಸುಮಾರು ಹತ್ತು ನಿಮಿಷ ನಡೆದಾಗ ದೂರದಲ್ಲಿ ಕಂಡಿತು, ಪುಟ್ಟ ಪೊದರು ಗಿಡಗಳ ನಡುವೆ ಬಿಳಿ ಬಣ್ಣದಲ್ಲಿ ಹತ್ತಾರು ವ್ಯಕ್ತಿಗಳ ಆಕೃತಿಗಳು….

ಕೊರಿಯಾ ಯುದ್ಧ ಸ್ಮಾರಕ (Korian War Memorial)


ಎರಡನೇ ಮಹಾಯುದ್ಧದ ಸಮಯದಲ್ಲಿ ನಡೆದ  ಕೊರಿಯಾ ಯುದ್ಧದಲ್ಲಿ, ಅಮೆರಿಕದ ಸೈನ್ಯದಲ್ಲಿ ಮಡಿದ ಸಾವಿರಾರು ಯೋಧರಿಗಾಗಿ  ಈ ಸ್ಮಾರಕವು 1995ರಲ್ಲಿ ರೂಪುಗೊಂಡಿತು. ಕಾಲುದಾರಿಯಲ್ಲಿ ನಡೆಯುತ್ತಾ ಸಾಗಿದಾಗ, ಬಲಭಾಗದಲ್ಲಿ, ಸುಮಾರು 164 ಅಡಿಗಳಷ್ಟು ಎತ್ತರದ ಕಪ್ಪು ಗ್ರಾನೈಟ್ ಶಿಲೆಯಲ್ಲಿ ಅಲ್ಲಲ್ಲಿ ಬಿಳಿ ಬಣ್ಣವು ಎದ್ದು ಕಾಣುತ್ತಿತ್ತು. ಅವುಗಳ ಪಕ್ಕದಲ್ಲಿ ಕೊರೆದ ಹೆಸರುಗಳನ್ನು ಕಂಡಾಗ ಬಹಳ ವಿಚಿತ್ರವೆನಿಸಿತು. ಸಮೀಪಕ್ಕೆ ಹೋಗಿ ಗಮನವಿಟ್ಟು ನೋಡಿದಾಗ ಬಹಳ ವಿಚಿತ್ರವೆನಿಸಿತು! ಅಲ್ಲಿ ಸಾವಿರಾರು ಯೋಧರ ಮುಖಗಳು ತೀವ್ರ ಭಾವನೆಗಳ ಸಹಿತ ಗೋಚರಿಸುತ್ತಿದ್ದವು, ಅವುಗಳು 41 ವಿಭಾಗಗಳಲ್ಲಿ ಅತ್ಯಂತ ನೈಜ ರೂಪದಲ್ಲಿ, ಸ್ಪಷ್ಟವಾದ ಮೂಡಿಸಲ್ಪಟ್ಟಿದ್ದವು! 50,000ಕ್ಕೂ ಅಧಿಕ ಸಂಖ್ಯೆಯಲ್ಲಿ ವಿಶೇಷ ರೀತಿಯಲ್ಲಿ ರೂಪಿಸಲ್ಪಟ್ಟ ಈ ರೂಪಗಳು; ಭೂ, ಜಲ ಮತ್ತು ವಾಯು, ಈ ಮೂರೂ ವಿಭಾಗಗಳಲ್ಲಿ ಕರ್ತವ್ಯ ನಿರತರಾಗಿದ್ದ ಹುತಾತ್ಮ ಯೋಧರ ಮೂಲ ಚಿತ್ರಗಳನ್ನು ಉಪಯೋಗಿಸಿ ತಯಾರಿಸಲಾಗಿವೆ. ಅಲ್ಲಿಯೇ ಎಡಭಾಗದಲ್ಲಿರುವ ಕುರುಚಲು ಪೊದೆ ಗಿಡಗಳ ನಡುವೆ ವಿವಿಧ ಭಂಗಿಗಳಲ್ಲಿರುವ ನೈಜ ಗಾತ್ರದ, ಬಡ ಕಾರ್ಮಿಕರಂತೆ ತೋರುವ 19ಸ್ಟೀಲ್ ಪ್ರತಿಮೆಗಳು; ಆ ದಿನಗಳಲ್ಲಿ ಅತೀ ಕಷ್ಟದಲ್ಲಿದ್ದ ಕೊರಿಯಾ ಜನಜೀವನದ ನೈಜ ಚಿತ್ರಣವಾಗಿದೆ. ಇದನ್ನು ಕಂಡು ಮನದಲ್ಲಿ ಮರುಕ ಮೂಡಿದುದು ಸುಳ್ಳಲ್ಲ. ಅಲ್ಲೇ ಮುಂದಕ್ಕೆ ಸ್ವಚ್ಛ ಜಲವು, ಸಣ್ಣದಾದ, ಆದರೆ ಅಗಲವಾದ ಝರಿ ರೂಪದಲ್ಲಿ ಹರಿಯುತ್ತಾ ಪುಟ್ಟ ಕೊಳದೊಳಗೆ  ಬೀಳುತ್ತದೆ. ನಮ್ಮಲ್ಲಿ ದೇಗುಲದ ಕೊಳದೊಳಗೆ ಭಕ್ತರು ನಾಣ್ಯಗಳನ್ನು ಎಸೆಯುವಂತೆ ಅದರೊಳಗೂ ಹಲವಾರು ನಾಣ್ಯಗಳು ಪುಣ್ಯಸ್ನಾನ ಮಾಡುವುದನ್ನು ಕಂಡೆ. ಇದರಿಂದ ಬೇಸತ್ತು , ಇಲಾಖೆಯವರು ಇಲ್ಲಿಯೂ ನೀರಿಗೆ ನಾಣ್ಯಗಳನ್ನು ಎಸೆಯದಂತೆ ಮನವಿ ಮಾಡಿದ ಬರಹ ಕಂಡು ನಗುಬಂತು… ಈ ಮೂಢನಂಬಿಕೆಯು ಸಾರ್ವತ್ರಿಕವೆಂದು!

ಅಲ್ಲಿಂದ ಹಿಂದಕ್ಕೆ ತೆರಳಿ, ಇತರ ಪ್ರವಾಸಿಗರೊಂದಿಗೆ ನಮ್ಮ ತಂಡ ಹೊರಟಿತು…ಪಾರ್ಕನ್ನು ಅಡ್ಡದಾಟುತ್ತಾ.. ಇನ್ನೊಂದು ವೀಕ್ಷಣೆಗೆ. ಮಧ್ಯ ಮಾರ್ಗದಲ್ಲಿ ಪಾರ್ಕಿನಲ್ಲಿರುವ ದಟ್ಟ ಹಸಿರಿನ ಮೇಲೆ ಓಡಾಡುತ್ತಿದ್ದ ಇಣಚಿಯು ವಿಚಿತ್ರವಾಗಿತ್ತು… ಆದರೆ ಬಹಳ ಅಂದವಾಗಿತ್ತು. ಯೋಸ್ಮಿಟಿಯಲ್ಲಿ ನೋಡಿದ್ದಂತೆ ಮೈಮೇಲೆ ಮೂರು ಗೆರೆಗಳಿಲ್ಲದಿದ್ದರೂ ಬಂಗಾರದ ಮೈಬಣ್ಣದಿಂದ ಕೂಡಿ ಮುದ್ದಾಗಿತ್ತು. ಅದರ ಕ್ಷೇಮವನ್ನು ವಿಚಾರಿಸುತ್ತಾ ತಂಪಾದ ನೆರಳಿನಲ್ಲಿ, ಹುಲ್ಲುಹಾಸಿನ ಮೇಲೆ ನಡೆಯುತ್ತಾ ಕೊಳದ ಇನ್ನೊಂದು ತುದಿಯಲ್ಲಿ ಸಾಗಿದಾಗ, ನಮ್ಮ ಬಲಭಾಗದಲ್ಲಿ ಹತ್ತಾರು ಸುಂದರ ಕಾರಂಜಿಗಳು ಗಮನಸೆಳೆದವು. ಬಹಳ ಎತ್ತರಕ್ಕೆ ಚಿಮ್ಮಿ ಕೆಳಕ್ಕೆ ಧುಮುಕುವ  ನೀರಿನ ಅಗಾಧ ಸದ್ದು ಕಿವಿ ಗಡಚಿಕ್ಕುವಂತಿತ್ತು. ಚಿಮ್ಮಿದ ನೀರು ನಡೆದಾಡುವ ಕಾಲುದಾರಿಯ ಮೇಲೆಯೂ ಹರಡಿ ಪಾದ ತೋಯಿಸಿತು.

ಅಗೋ…ಅನತಿ ದೂರದಲ್ಲಿ ಹಲವಾರು ಪ್ರವಾಸಿಗರು ಹೋಗುತ್ತಿರುವುದಾದರೂ ಎಲ್ಲಿಗೆ..??…ನೋಡೋಣ ಬನ್ನಿ..

ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಸ್ಮಾರಕ(Martin Luther King Junior Memorial)


ಸುಮಾರು ನಾಲ್ಕು ಎಕರೆಗಳಷ್ಟು ಪ್ರದೇಶದಲ್ಲಿ ರೂಪಿಸಲಾದ ಈ ಸ್ಮಾರಕವು; ನಾಗರಿಕ ಹಕ್ಕುಗಳಿಗಾಗಿ ಹೋರಾಡಿದ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರಿಗಾಗಿ ನಿರ್ಮಿಸಲಾಗಿದೆ.  1929ರಲ್ಲಿ ಜನಿಸಿದ ಇವರು, ಅಮೆರಿಕದ ಆಫ್ರಿಕನ್ ಅಮೆರಿಕನ್ ಪ್ರಜೆಯಾಗಿದ್ದು, ಇಲ್ಲಿಯ ಚರ್ಚೊಂದರಲ್ಲಿ ಬ್ಯಾಪ್ಟಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಮೆರಿಕದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದ ಇವರು; ಪ್ರಸಿದ್ಧ ವಾಕ್ಪಟು, ಭಾಷಣಗಾರ ಹಾಗೂ ಹೋರಾಟದ ಮನೋಪ್ರವೃತ್ತಿಯವರಾಗಿದ್ದರು. ಬಿಳಿಯರು ಕರಿಯರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದುದರಿಂದ; ಅವರ ಸಮಾನತೆಯ ಹಕ್ಕಿಗಾಗಿ ಉಗ್ರ ಹೋರಾಟ ನಡೆಸಿದ ಹೆಗ್ಗಳಿಕೆ ಇವರದು. ಬಾಪೂಜಿಯವರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದಿಂದ ಪ್ರಭಾವಿತರಾಗಿದ್ದ ಇವರು; 1950ರಿಂದ 1960ರ ವರೆಗೆ ಕರಿಜನರ ಸಮಾನತೆಗಾಗಿ ನಡೆಸಿದ ತೀವ್ರ ಹೋರಾಟವು ಇತಿಹಾಸವಾಗಿದೆ. ಇವರು 1968ರಲ್ಲಿ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾದರು.

ಈ ಸ್ಮಾರಕದ ಆವರಣದೊಳಕ್ಕೆ ಕಾಲಿಡುತ್ತಿದ್ದಂತೆಯೇ ವಿಚಿತ್ರ ಅನುಭವವಾಯಿತು. ಸಣ್ಣದಾದ ಬಯಲು ಪ್ರದೇಶದಲ್ಲಿ ಅಕ್ಕಪಕ್ಕ ನಿಲ್ಲಿಸಲಾಗಿದ್ದ ಬಹು ಎತ್ತರದ ಹತ್ತಾರು ಬಿಳಿ ಗ್ರಾನೈಟ್ ವಿಗ್ರಹಗಳು, ಸೊಂಟದ ಮೇಲಕ್ಕೆ ಮಾತ್ರ ಪೂರ್ಣಗೊಂಡು, ಕಲ್ಲಿನ ಬಂಡೆಗಳಿಂದ ಅರ್ಧಕ್ಕೆ ಮೇಲೆದ್ದ ಅಪೂರ್ಣ ಮಾನವರಂತೆ ತೋರುತ್ತವೆ! ಈ ಸ್ಮಾರಕದ ರಚನೆಗಾಗಿ ಸುಮಾರು 20ವರ್ಷಗಳ ಹಿಂದೆಯೇ 120ಮಿಲಿಯ ಡಾಲರ್ ಹಣ ವ್ಯಯಿಸಲು ಯೋಜನೆ ರೂಪುಗೊಂಡಿದ್ದರೂ, ನೆನೆಗುದಿಗೆ ಬಿದ್ದ ಈ ಕೆಲಸವು 2009ರಲ್ಲಿ ಪ್ರಾರಂಭಗೊಂಡು 2011ರಲ್ಲಿ ಈ ಅಪೂರ್ಣ ಸ್ಥಿತಿಯಲ್ಲಿ ಲೋಕಾರ್ಪಣೆಗೊಂಡಿತು. ಪ್ರಭಾವೀ ವ್ಯಕ್ತಿಯೊಬ್ಬರು ತಡೆಯೊಡ್ಡಿದುದೇ ಇದಕ್ಕೆ ಕಾರಣವೆಂಬುದು ಸರ್ವವಿದಿತ. 

ಈ ಸ್ಮಾರಕದ ಅವರಣದ ಮಧ್ಯದಲ್ಲಿ ದೊಡ್ಡದಾಗಿ ಬೆಳೆದ ಮರದ ಸುತ್ತಲೂ ಇರುವ ಸೊಗಸಾದ ಕಟ್ಟೆಯಲ್ಲಿ, ಬೀಸುತ್ತಿರುವ ತಂಗಾಳಿಗೆ ಮೈಯೊಡ್ಡಿ ಕುಳಿತೆವು. ಅಲ್ಲೇ ಪಕ್ಕದಲ್ಲಿ, ಸಮುದ್ರದ ಹಿನ್ನೀರಿನ ಅತ್ಯಂತ ವಿಶಾಲವಾಗಿ ಹರಡಿ ನಿಂತಿರುವ ಜಲರಾಶಿಯಲ್ಲಿ ತೇಲುತ್ತಿರುವ ಹಲವಾರು ದೋಣಿಗಳು ಗಮನ ಸೆಳೆದವು. ಇಲ್ಲಿರುವ ಹೂದೋಟವು ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದುದು; ಇಲ್ಲಿ ಇಂದಿಗೂ ಕರಿಜನಾಂಗದ ಮೇಲಿರುವ ಕೀಳು ಭಾವನೆಯು ಇನ್ನೂ ದಟ್ಟವಾಗಿರುವುದನ್ನು ಸೂಚಿಸುತ್ತದೆ. ಇದನ್ನು ಕಂಡು ನಮ್ಮ ಮನದಲ್ಲಿ ಜುಗುಪ್ಸೆ ಮೂಡಿದ್ದು ಸುಳ್ಳಲ್ಲ. ನೊಂದ ಮನದಿಂದಲೇ ಮುಂದಕ್ಕೆ ಹೊರಟೆವು…

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:     https://www.surahonne.com/?p=38886

-ಶಂಕರಿ ಶರ್ಮ, ಪುತ್ತೂರು.                  

4 Responses

  1. ಪ್ರವಾಸ ಕಥನ ದ ನಿರೂಪಣೆ ಚೆನ್ನಾಗಿ ಬಂದಿದೆ..ಅದಕ್ಕೆ ಪೂರಕ ಚಿತ್ರಗಳಳು ಚೆನ್ನಾಗಿ ವೆ…ಮೇಡಂ

  2. ನಯನ ಬಜಕೂಡ್ಲು says:

    Nice

  3. ಶಂಕರಿ ಶರ್ಮ says:

    ಪ್ರೀತಿಯಿಂದ ಓದಿ ಮೆಚ್ಚುಗೆಯ ನುಡಿಗಳನ್ನಾಡಿದ ನಾಗರತ್ನ ಮೇಡಂ ಅವರಿಗೆ ಧನ್ಯ ನಮನಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: