ಯುವಕ್ರೀತನ ಜ್ಞಾನೋದಯ
ವಿದ್ಯಾರ್ಥಿ ಜೀವನವೆಂದರೆ ಒಬ್ಬ ವ್ಯಕ್ತಿಯ ಜೀವಿತದ ವಸಂತಕಾಲ, ಪ್ರಾಥಮಿಕ ಹಂತದಲ್ಲಿ ಮಕ್ಕಳು; ಹೆತ್ತವರು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದರೆ ಪ್ರೌಢ ತರಗತಿಗಳಿಗೆ ತಲುಪಿದಾಗ ಸ್ವತಃ ಆಲೋಚನಾ ಶಕ್ತಿ, ವಿಚಾರ, ವಿನಿಮಯ ಬೆಳೆಯುತ್ತದೆ. ಉತ್ಸಾಹ, ಹುಮ್ಮಸ್ಸು ಸುರಿಸುತ್ತದೆ. ಯಾವುದೇ ಒಂದು ಸಾಧನೆಯತ್ತ ಗುರಿಮುಟ್ಟಲು ಯೋಗ್ಯ ತಳಹದಿಯನ್ನು ಹಾಕಿಕೊಳ್ಳಬೇಕಾಗುತ್ತದೆ. ಇಲ್ಲದೆ ಹೋದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಕೆಲವರಿಗೆ ಬುದ್ಧಿ ಶಕ್ತಿಯನ್ನೂ ಕಲಿಯುವ ಅವಕಾಶ ತಪ್ಪಿಹೋಗಿ ತಮ್ಮ ಗೆಳೆಯರೂ, ತಮ್ಮದೇ ವಯಸ್ಸಿನವರು ಓದಿ ಮುಂದೆ ಬಂದಾಗ ತಾವು ಅವರಂತೆಯೇ ಓದಬೇಕಿತ್ತು. ಕಲಿಯಬೇಕಿತ್ತು ಎಂಬ ಅರಿವು ಉಂಟಾಗುತ್ತದೆ. ಆದರೆ ಎಚ್ಚರವಾದಾಗ ಸಮಯ ಮೀರಿ ಹೋಗಿ ಪಶ್ಚಾತಾಪ ಪಡುವವರೇ ಅಧಿಕ.
ಹಿಂದೆ ಋಷಿ ಪರಂಪರೆಯಲ್ಲಿ ಭಾರದ್ವಾಜ ಎಂಬ ಒಬ್ಬ ಮುನಿಯದ್ದ. ಆತನಿಗೆ ಯುವಕ್ರೀತ ಎಂಬ ಒಬ್ಬ ಪುತ್ರನಿದ್ದ. ಭಾರದ್ವಾಜನಾದರೋ ತನ್ನ ತಪಸ್ಸಿನಲ್ಲಿ ಬಹುಕಾಲ ನಿರತನಾಗಿದ್ದು, ಪುತ್ರನಿಗೆ ವಿದ್ಯೆ ಕಲಿಸಬೇಕೆಂಬ ವಿಷಯವನ್ನೇ ಮರೆತಿದ್ದ, ಭಾರದ್ವಾಜನ ಸ್ನೇಹಿತನ ಮಕ್ಕಳೆಲ್ಲ ವಿದ್ಯಾಭ್ಯಾಸ ಹೊಂದಿದವರಾಗಿದ್ದು ಅವರನ್ನೆಲ್ಲಾ ಸಮಾಜದಜನರು ಗೌರವದಿಂದ ಕಾಣುತ್ತಿದ್ದರು. ಯುವಕ್ರೀತನನ್ನು ಉಪೇಕ್ಷಿಸುತ್ತಿದ್ದರು. ಇದರಿಂದಾಗಿ ಯುವಕ್ರೀತನು ಬಹಳ ಖಿನ್ನನಾಗತೊಡಗಿದನು. ದಿನ ಕಳೆದಂತೆ ಆತ ತಾನೂ ವಿದ್ಯಾಭ್ಯಾಸ ಹೊಂದಬೇಕು, ಎಲ್ಲರ ಗೌರವಾದರಗಳಿಗೆ ಪಾತ್ರನಾಗಬೇಕೆಂಬ ಅಭಿಲಾಷೆ ಅಂಕುರಿಸಿದ್ದೇ ಅಲ್ಲದೆ ಬೆಳೆಯತೊಡಗಿತು. ಆದರೆ ಯುವಕ್ರೀತ ಈಗ ಹಿಂದಿನಂತೆ ಬಾಲಕನಲ್ಲ, ಬೆಳೆದು ಯುವಕನಾಗಿ ಬಿಟ್ಟಿದ್ದಾನೆ. ಗುರುಗಳಲ್ಲಿಗೆ ಹೋಗಿ ವಿದ್ಯೆ ಕಲಿಸಿರಿ ಎಂದರೆ ಗುರುಗಳು ಒಪ್ಪಿದರೆ ಕಲಿಯಬಹುದು. ಆದರೆ ಎಲ್ಲರ ಅಪಹಾಸ್ಯಕ್ಕೆ ಒಳಗಾಗಬೇಕು.ಇದಕ್ಕೇನು ಮಾಡೋಣ? ಎಂದು ಮನದಲ್ಲೇ ಚಿಂತಿಸಿ ಒಂದು ನಿರ್ಧಾರಕ್ಕೆ ಬಂದ,ಕಠಿಣವಾದ ತಪಸ್ಸು ಮಾಡಿ ದೇವರನೊಲಿಸಿಕೊಂಡು ತಾನೇ ವಿದ್ಯೆ ಕಲಿಯುವುದು ಎಂದು ನಿರ್ಧರಿಸಿ ದಟ್ಟವಾದ ಅರಣ್ಯಕ್ಕೆ ತೆರಳಿ ಘೋರವಾದ ತಪಸ್ಸು ಮಾಡಲುತೊಡಗಿದ. ದೇವರ ಒಡೆಯನಾದ ದೇವೇಂದ್ರನನ್ನು ಕುರಿತು ಧ್ಯಾನಾಸಕ್ತನಾದ .ಯುವಕ್ರೀತನ ಮನದಲ್ಲಿ ಬೇರೆ ಯಾವುದೇ ವಿಚಾರ ಲವಲೇಶವೂ ನುಸುಳದಾಯಿತು.
ಕಾಲಕ್ರಮದಲ್ಲಿ ಯುವಕ್ರೀತನ ತಪದ ಕಾವು ದೇವೇಂದ್ರನನ್ನು ತಲುಪಿತು. ಯುವಕ ಯುವಕ್ರೀತನಿಗೆ ದರ್ಶನ ಕೊಡದೆ ನಿರ್ವಾಹವಿಲ್ಲವೆಂದಾಯಿತು ದೇವೇಂದ್ರನಿಗೆ, ಸರಿ, ಪ್ರತ್ಯಕ್ಷನಾಗಿ ಯುವಕ್ರೀತ, ನಿನ್ನ ತಪಸ್ಸಿನ ಕಾರಣವೇನು? ಎಂದು ಪ್ರಶ್ನಿಸಿದ. ಆಗ ಆತ’ಗುರುಗಳು ಹೇಳಿಕೊಡದೆಯೇ ಬ್ರಾಹ್ಮಣರಿಗೆ ವೇದವಿದ್ಯೆಯು ತನ್ನಿಂತಾನೇ ಸ್ಫುರಿಸುವಂತಾಗಬೇಕು ಎಂಬುದೇ ನನ್ನ ತಪಸ್ಸಿನ ಗುರಿ, ಅದನ್ನು ದಯಪಾಲಿಸಬೇಕು’ ಎಂದು ಕೇಳಿಕೊಂಡನು. ಆಗ ದೇವೇಂದ್ರನು ‘ವಾ… ಅದು ಆಗದ ಮಾತು’ ಎಂದು ಬಿಟ್ಟು ಅದೃಶ್ಯನಾದನು. ಆದರೆ ಯುವಕ್ರೀತ ತನ್ನ ಛಲವನ್ನು ಬಿಡಲಿಲ್ಲ. ಮನಃ ತನ್ನ ಕಠಿಣ ತಪಸ್ಸನ್ನು ಮುಂದುವರಿಸಿದನು. ಒಬ್ಬ ಋಷಿ ಮುನಿ ತಪಸ್ಸು ಮಾಡಿ ಅದರ ಕಾವೇರಿದಾಗ ಸಂಬಂಧಪಟ್ಟ ದೇವತೆಗಳು ಒಲಿಯದೆ ಹೋದರೆ ಜಗತ್ತಿನ ಇತರ ಜೀವಜಂತುಗಳಿಗೆ ತೊಂದರೆ ಎಂಬುದನ್ನು ಪುರಾಣದಿಂದ ಕೇಳಿದ್ದೇವೆ. ಹಾಗೆಯೇ ಆಯಿತು. ಲೋಕ ತಲ್ಲಣಗೊಂಡಾಗ ದೇವೇಂದ್ರ ಪ್ರತ್ಯಕ್ಷನಾದ. ‘ನಿನ್ನ ತಪಸ್ಸನ್ನು ಬಿಟ್ಟು ಬಿಡು’ ಎಂದ. ‘ಇಲ್ಲ ನನ್ನ ಉದ್ದೇಶ ಈಡೇರದೆ ತಪಸ್ಸನ್ನು ಕೈ ಬಿಡಲಾರೆ’ ಎಂದ ಯುವಕ್ರೀತ.
ಇನ್ನೀಗ ಯುವಕ್ರೀತನಿಗೆ ಮನದಟ್ಟು ಮಾಡಿಸುವ ಸರದಿ ದೇವೇಂದ್ರನ ಪಾಲಿಗಾಯಿತು. ಮುಂದೆಯೂ ತನ್ನ ದೈನಂದಿನ ದೇಹಬಾಧೆ, ಸ್ನಾನಾದಿಗಳನ್ನು ಪೂರೈಸಿಕೊಂಡು ತಪಸ್ಸಿಗೆ ಹೋಗುತ್ತಿದ್ದ ಯುವಕ್ರೀತ. ಹೀಗಿರಲು ಒಂದು ದಿನ ಸ್ನಾನಕ್ಕೆಂದು ನದಿ ತೀರಕ್ಕೆ ಹೋದ ಯುವಕ್ರೀತ ಒಬ್ಬ ಮುದುಕ ನದೀ ದಡದಿಂದ ಒಂದೊಂದೇ ಹಿಡಿ ಮಣ್ಣನ್ನು ಹರಿಯುವ ನದಿಗೆ ಅಡ್ಡಲಾಗಿ ಇಟ್ಟು ವಾಪಾಸು ಹೋಗಿ ಮತ್ತೊಂದು ಹಿಡಿ ಮಣ್ಣನ್ನು ತಂದಿಡುತ್ತಿದ್ದ. ಯುವಕ್ರೀತನು ಮುದುಕನ ಮರುಳು ಬುದ್ಧಿಯನ್ನು ವೀಕ್ಷಿಸಿದ.
ಯುವಕ್ರೀತನು ‘ಎಲೈ ಮುದುಕನೇ, ನೀನೇನು ಮಾಡುತ್ತಿರುವೆ?’ ಎಂದು ಪ್ರಶ್ನಿಸಿದ. ‘ನಾನು ನದಿಗೆ ಸೇತುವೆಯನ್ನು ಕಟ್ಟುತ್ತಿದ್ದೇನೆ’ ಎಂದುತ್ತರಿಸಿದ ಮುದುಕ. ಆಗ ಯುವಕ್ರೀತ ‘`ಏನು ಹುಚ್ಚಾಟವಯ್ಯ ನಿನ್ನದು? ನಿನ್ನ ಈ ಹಿಡಿ ಮಣ್ಣಿನಿಂದ ನದಿಗೆ ಸೇತುವೆಯನ್ನು ಕಟ್ಟಲು ಹೊರಟಿದೆಯಲ್ಲಾ ನಿನಗೆ ವಯಸ್ಸಾಗಿದೆಯೇ ಹೊರತು ವಿವೇಕವಿಲ್ಲ. ವೃಥಾಶ್ರಮ ಪಡಬೇಡ ಆರಾಮವಾಗಿ ಮನೆಯಲ್ಲಿ ಮಲಗು ಹೋಗು’ ಎಂದು ಯುವಕೀತ ನುಡಿದಾಗ ಆ ಮುದುಕ ನಗುತ್ತ ‘ನೀನು ಅಧ್ಯಯನ ಮಾಡದೆಯೇ ಗುರುಗಳ ಪಾಠವಿಲ್ಲದೆಯೇ ವೇದವಿದ್ಯೆಯನ್ನು ಒಲಿಯಬೇಕೆಂದು ತಪಸ್ಸು ಮಾಡುತ್ತಿರುವೆಯಲ್ಲಾ ಇದು ವೃಥಾಶ್ರಮವಲ್ಲದೆ ಸಾಧ್ಯವಾಗುವ ಮಾತೇ ಹೇಳು’ ಎಂದನು. ಯುವಕ್ರೀತ ಒಂದು ಕ್ಷಣ ಬೆರಗಾಗಿ ‘ವಿದ್ಯಾರ್ಜನೆಗೆ ಪರಾವಲಂಬನೆ ತಪ್ಪಬೇಕೆಂಬುದೇ ನನ್ನ ಉದ್ದೇಶ ಎಂದಾಗ ಮುದುಕ ‘ನಾನೂ ಕೂಡಾ ದೋಣಿ ನಡೆಸುವವರನ್ನು ಅವಲಂಬಿಸುವುದು ತಪ್ಪಿಸಬೇಕೆಂಬುದೇ ನನ್ನ ಗುರಿ’ ಎಂದನು. ಈಗ ಯುವಕ್ರೀತನಿಗೆ ಜ್ಞಾನೋದಯವಾಯಿತು. ನೀವಾರು? ನಿಜ ಹೇಳಿ’ ಎಂದನು.
ನಾನು ಬೇರಾರು ಅಲ್ಲ. ನೀನು ವರ ಪಡೆಯುವುದಕ್ಕಾಗಿ ಒಲಿಸಿಕೊಳ್ಳಬೇಕೆಂದು ತಪಸ್ಸು ಮಾಡುವ ದೇವೇಂದ್ರ ನಾನು ಎಂಬುದಾಗಿ ಪ್ರಕಟವಾಗಿ ನುಡಿದು, ‘ಯುವಕ್ರೀತಾ,ಗುರುಗಳಿಲ್ಲದೆ, ಶ್ರಮವಿಲ್ಲದೆ, ವಿದ್ಯೆ ಒಲಿಯಲು ಸಾಧ್ಯವಿಲ್ಲ. ವಿದ್ಯಾರ್ಜನೆಗೆ ವಯಸ್ಸಿನ ಮಿತಿ ಇಲ್ಲ’ ಇನ್ನಾದರೂ ನೀನು ಗುರುಮುಖೇನ ವಿದ್ಯೆ ಕಲಿಯಬಹುದು. ಗುರುಸೇವೆಯನ್ನು ಮಾಡಿ ವಿನಯಶೀಲದಿಂದ ವಿದ್ಯಾವಂತನಾಗು’ ಎಂದು ದೇವೇಂದ್ರ ಹರಸಿ ಅದೃಶ್ಯನಾದಾಗ ಯುವಕ್ರೀತನಿಗೆ ದೇವೇಂದ್ರ ಹೇಳಿದ್ದು ಸರಿ ಎಂದು ಕಂಡಿತು. ಜ್ಞಾನೋದಯವಾಯಿತು.
ನಮ್ಮ ಸಮಾಜದಲ್ಲಿ ಈಗಲೂ ಸಹ ನಾವು ಕಾಣುವಂತಹ, ಕೇಳುವಂತಹ, ವಿಷಯವೇನೆಂದರೆ ಹಿರಿಯರು ಕಿರಿಯರಿಗೆ ಎಷ್ಟೇ ಉಪದೇಶ, ತಮ್ಮ ಅನುಭವಗಳನ್ನು ಹೇಳಿದರೂ ಕೆಲವರು ತಮ್ಮ ಮೊಂಡು ಹಠವನ್ನು ಬಿಡಲೊಲ್ಲರು. ಆದರೆ ಮೇಲೆ ಹೇಳಿದಂತಹ ಕೆಲವು ದೃಷ್ಟಾಂತಗಳು ಅವರ ಅನುಭವಕ್ಕೆ ಬಂದಾಗಲೇ ಅವರ ಕೊಂಕು ತರ್ಕಕ್ಕೆ ತೆರೆಬೀಳುತ್ತದೆ ಎಂಬುದಂತೂ ಸತ್ಯ. ಇದುವೇ ಯುವಕ್ರೀತನಿಂದ ನಾವು ಕಲಿಯುವಂತಹ ಪ್ರಮುಖ ಪಾಠ.
–-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಧನ್ಯವಾದಗಳು ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ.
ಯುವಕ್ರೀತನ ಕಥೆ…ಚೆನ್ನಾಗಿ ಮೂಡಿಬಂದಿದೆ ವಿಜಯಾ ಮೇಡಂ. ಅದಕ್ಕಿಂತ ಹೆಚ್ಚಾಗಿ…ಪ್ರಸ್ತುತ ವಿಷಯಕ್ಕೂ..ತಂದು ಮುಕ್ತಾಯ ಮಾಡಿರುವುದು…ನನಗೆ ಇಷ್ಟ ವಾಯಿತು..
ವಿದ್ಯೆಯನ್ನು ಗುರು ಮುಖೇನ ಕಲಿಯಬೇಕೆನ್ನುವ ಸರಳ ಸಂದೇಶ ಹೊತ್ತ ಪೌರಾಣಿಕ ಕಥೆ ಚೆನ್ನಾಗಿದೆ ವಿಜಯಕ್ಕ.
ವಿದ್ಯೆಯ ಮಹತ್ವವನ್ನು ಮನಗಾಣಿಸುವ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಸುಂದರ..,
ಕಥೆ