ಮಹಾವೀರ ಜಸ್ವಂತ್‌ಸಿಂಗ್ ರಾವತ್
ನವೆಂಬರ್ ಒಂಭತ್ತು 2022 ಬುಧವಾರ ನನ್ನ ಜೀವನದಲ್ಲಿ ಒಂದು ಅವಿಸ್ಮರಣೀಯ ದಿನ. ಅಂದು ಭಾರತ ಮಾತೆಯ ಮಹಾವೀರ ಪುತ್ರ ಜಸ್ವಂತ್ ಸಿಂಗ್ ರಾವತ್ ಅವರ ಸ್ಮರಣೆಯ ಸ್ಥಳ ಜಸವಂತಗಢ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ. ಭಾವನೆಗಳ ಮಹಾಪೂರದಲ್ಲಿ ಕೊಚ್ಚಿ ಹೋದೆ. ಅಲ್ಲಿ ಕಾಲಿಟ್ಟ ಕೂಡಲೇ ಕಣ್ಣುಗಳು ಅಶ್ರುತರ್ಪಣವನ್ನು ಈ ವೀರ ಸೈನಿಕನಿಗೆ ಅರಿವಿಲ್ಲದೆಯೇ ಸಲ್ಲಿಸಿದವು. ಮೊದಲು ಜಸ್ವಂತ್ ಸಿಂಗ್‌ನ ಎದೆಯ ಮಟ್ಟದ ಮೂರ್ತಿಗೆ ತಲೆಬಾಗಿ ವಂದಿಸಿದೆ. ಈ ಪವಿತ್ರ ನೆಲದ ಪಾದಸ್ಪರ್ಶವು ನನ್ನಲ್ಲಿ ಧನ್ಯತಾ ಭಾವವನ್ನು ಮೂಡಿಸಿತು. ನಮ್ಮ ಮಾರ್ಗದರ್ಶಿಗಳಾದ ಶ್ರೀ ಮಾಧವಾನಂದ ದಾಸರು ಜಸ್ವಂತ್ ಸಿಂಗ್‌ನ ಬಗ್ಗೆ ಸ್ವಲ್ಪ ಮಾಹಿತಿ ನೀಡಿದರು. ನಂತರ ನಾನು ಇನ್ನೂ ಒಂದಿಷ್ಟು ಮಾಹಿತಿಯನ್ನು ಕಲೆಹಾಕಿದ್ದೇನೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತನ್ನ ಬಲಿದಾನವನ್ನು ನೀಡಿದ ಜಸ್ವಂತ್ ಸಿಂಗ್‌ನ ರಾವತ್ ಅವರನ್ನು ನೆನೆಯುವುದು ನಮ್ಮ ಕರ್ತವ್ಯ.
ಜಸ್ವಂತ್ ಸಿಂಗ್ ರಾವತ್ ಹುಟ್ಟಿದ್ದು 19ನೇ ಆಗಸ್ಟ್ 1941 ರಲ್ಲಿ ಉತ್ತರಾಖಂಡದ ಬಾರಿಯೂನ್ ಎನ್ನುವ ಹಳ್ಳಿಯಲ್ಲಿ. ಬಂದೂಕುಧಾರಿ ಸೈನಿಕನಾಗಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದರು. ಅಪ್ರತಿಮ ಸೇವೆಯಲ್ಲಿ ಹುತಾತ್ಮನಾದ ಈ ಸೈನಿಕನಿಗೆ ಮಹಾವೀರ ಚಕ್ರವನ್ನು ಮರಣೋತ್ತರವಾಗಿ ನೀಡಲಾಗಿದೆ. ಜಸ್ವಂತ್ ಸಿಂಗ್ ದೇಶದ ಗಡಿ ಕಾಯುತ್ತಿದ್ದುದು ನೇಫಾದಲ್ಲಿ ಅಂದರೆ ಈಗಿನ ಅರುಣಾಚಲ ಪ್ರದೇಶ. ಘರ್‌ವಾಲ್ ನಾಲ್ಕನೆಯ ರೈಫಲ್ಸ್ ರೆಜಿಮೆಂಟಿನಲ್ಲಿ ಸೇವೆ, ಈ ಗಡಿ ಚೀನಾ ದೇಶದ ಗಡಿಯಾಗಿದೆ. ಬಹಳ ಎತ್ತರದ ಪ್ರದೇಶ 13700 ಅಡಿ ಎತ್ತರದಲ್ಲಿರುವ ಸೇಲಾ ಪಾಸ್, ನೂರಾನಂಗ್ ಎನ್ನುವ ಸ್ಥಳದಲ್ಲಿದೆ. ಎರಡು ಬಾರಿ ನುಗ್ಗಿ ಬಂದ ಚೀನೀಯರನ್ನು ನಾಲ್ಕನೆಯ ಘರ್‌ವಾಲ್ ರೈಫಲ್ಸ್‌ನ ಸೈನಿಕರು ಹೊಡೆದೋಡಿಸಿದ್ದರು. ಮೂರನೆಯ ಬಾರಿ ಚೀನಾದ ಮಷಿನ್‌ಗನ್ ನಮ್ಮ ಪಡೆಗೆ ತೀರ ಹತ್ತಿರ ಬಂದು, ಕರಾರುವಕ್ಕಾಗಿ ನಮ್ಮ ಸೈನಿಕರಿರುವ ಸ್ಥಳಕ್ಕೇ ಫೈರ್ ಮಾಡುತ್ತಿತ್ತು. ಆಗ ಜಸ್ವಂತ್‌ಸಿಂಗ್ ರಾವತ್, ಲ್ಯಾನ್ಸ್ ನಾಯಕ ತ್ರಿಲೋಕ್ ಸಿಂಗ್ ನೇಗಿ ಮತ್ತು ಇನ್ನೊಬ್ಬ ಬಂದೂಕುಧಾರಿ ಸೈನಿಕ ಗೋಪಾಲ್ ಸಿಂಗ್ ಗುಸೈನ್ ಈ ದಾಳಿಯನ್ನು ತಡೆಯಲು ಮುಂದಾದರು. ಇವರ ದಾಳಿಯಿಂದ 5 ಮಂದಿ ಚೀನೀ ಯೋಧರು ಹತರಾದರು. ನಂತರ ಈ ಮೂವರೂ ವಾಪಸ್ ಬರುವಾಗ ಗುಸೈನ್ ಮತ್ತು ನೇಗಿ ಹತರಾದರು. ಜಸ್ವಂತ್ ಸಿಂಗ್‌ಗೆ ಗಂಭೀರ ಗಾಯಗಳಾಯಿತು. ಆದರೂ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳೊಂದಿಗೆ ಹಿಂದಿರುಗಿದರು. ಈ ಯುದ್ಧದಲ್ಲಿ 300 ಚೀನೀ ಸೈನಿಕರು ಮಡಿದರು. ನಮ್ಮ ಕಡೆ ಇಬ್ಬರು ಮಡಿದರು, ಎಂಟು ಜನರಿಗೆ ಗಾಯಗಳಾದುವು. ರಾವತನ ಬೆಟಾಲಿಯನ್ ವಾಪಸಾಗಲು ಯೋಚಿಸಿತು. ಆದರೆ ರಾವತ್ ಜಗ್ಗಲಿಲ್ಲ.
ಸ್ಥಳೀಯ ಮೊನ್ಪ ಎನ್ನುವ ಜಾತಿಯ ಹುಡುಗಿಯರಾದ ಸೇಲಾ ಮತ್ತು ನೂರ ಸಹಾಯ ಮಾಡಿದರು. ಇಬ್ಬರೂ ಜಸ್ವಂತ್‌ಸಿಂಗ್‌ಗೆ ಆಹಾರ ಒದಗಿಸುತ್ತಿದ್ದರು. ಜಸ್ವಂತ್ ಒಬ್ಬನೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಗುಂಡು ಹಾರಿಸುತ್ತಿದ್ದರು. ಮೂರು ದಿನ ಹೀಗೆ ಎಲ್ಲ ಪೋಸ್ಟ್ (ಸ್ಥಳ)ಗಳನ್ನೂ ನಿಭಾಯಿಸಿದರು. ಚೀನೀಯರು ಅನೇಕ ಮಂದಿ ಯೋಧರು ನಮ್ಮ ಕಡೆಯಲ್ಲಿದ್ದಾರೆ ಎಂದೇ ನಂಬಿದ್ದರು. ಆದರೆ ಅವರು ಸೆರೆಹಿಡಿದ ಒಬ್ಬ ಸ್ಥಳೀಯನಿಂದ ಒಬ್ಬನೇ ಯುದ್ಧ ಮಾಡುತ್ತಿರುವ ವಿಷಯ ಗೊತ್ತಾಯಿತು. ಆಗ ಚೀನೀಯರು ರಾವತ್ ಇರುವ ಸ್ಥಳವನ್ನು ಆಕ್ರಮಣ ಮಾಡಿದರು. ಜಸ್ವಂತ್ ಸಿಂಗ್‌ನ ಪ್ರಾಣಾರ್ಪಣೆಯಾಯಿತು. ಕೆಲವರ ಪ್ರಕಾರ ಜಸ್ವಂತ್ ತಾನೇ ಶೂಟ್ ಮಾಡಿಕೊಂಡ. ಇನ್ನೊಂದು ವರದಿ ಅವನನ್ನು ಸೆರೆಹಿಡಿದು, ಚೀನೀಯರು ಕೊಂದರು ಎನ್ನುತ್ತದೆ.
ಸೇಲಾಳನ್ನು ಚೀನೀಯರು ಕೊಂದರು. ನೂರಾಳನ್ನು ಸೆರೆಹಿಡಿದು ಕರೆದೊಯ್ದರು. ಆಮೇಲೇನಾಯಿತು ಎಂದು ತಿಳಿದಿಲ್ಲ. ಸೇಲಾಳ ದೇಶಸೇವೆಗೆ ಹತ್ತಿರದಲ್ಲೇ ಇರುವ ಪಾಸ್ (ದಾರಿ)ಗೆ ಸೇಲಾ ಪಾಸ್ ಎಂದೂ, ಸ್ವಲ್ಪ ಕೆಳಗಿರುವ ಸುಂದರ ಸರೋವರಕ್ಕೆ ಸೇಲಾ ಸರೋವರ ಎಂದೂ ಹೆಸರಿಡಲಾಗಿದೆ. ನೂರಾಳ ಹೆಸರಿನಲ್ಲಿ ಕದನ ನಡೆದ ಸ್ಥಳಕ್ಕೆ ನೂರಾನಾಂಗ್ ಎಂದು ಕರೆಯಲಾಗುತ್ತದೆ.
ಜಸ್ವಂತ್‌ಸಿಂಗ್ ಇದ್ದ ಸೇನಾ ಪೋಸ್ಟ್ ಅನ್ನು ‘ಜಸ್ವಂತ್ ಗಢ್‘ ಎಂದು ಕರೆಯಲಾಗುತ್ತದೆ. ಇಲ್ಲಿಂದಲೇ 300 ಚೀನೀಯರ ಜೊತೆ ಹೊಡೆದಾಡಿ ಕೊಂದದ್ದು ಜಸ್ವಂತ್. ಇಲ್ಲಿಯೇ ಜಸ್ವಂತ್ ಸಿಂಗ್ ಸ್ಮರಣಸ್ಥಳ (ಮೆಮೋರಿಯಲ್) ವನ್ನು ನಿರ್ಮಾಣ ಮಾಡಿದ್ದಾರೆ. ಇದೊಂದು ಪವಿತ್ರ ಸ್ಥಳ. ಪ್ರತಿಯೊಬ್ಬ ಭಾರತೀಯನೂ ನೋಡಬೇಕಾದ ಸ್ಥಳ. ಇಲ್ಲಿ ಒಂದು ಮ್ಯೂಸಿಯಂ ಕೂಡ ಇದೆ. ಇಂದಿಗೂ ಜಸ್ವಂತ್ ಸಿಂಗ್‌ಗೆ ಊಟ ತಯಾರು ಮಾಡಿ ಇಡುತ್ತಾರೆ. ಶೂಗಳನ್ನು ಪಾಲಿಶ್ ಮಾಡಿ ಇಡುತ್ತಾರೆ. ಧರಿಸಿದ್ದ ಸಮವಸ್ತ್ರವನ್ನೂ ಪ್ರದರ್ಶಿಸಿದ್ದಾರೆ. ಬಲಿದಾನ ಮಾಡಿದ ಸ್ಥಳದಲ್ಲಿದ್ದ ಮರದ ಕೊಂಬೆಯೂ ಇದೆ. ಇಲ್ಲೊಂದು ಲಂಗರ್ ಕೂಡ ಇದೆ. ಅಂದರೆ ಉಚಿತ ಊಟದ ವ್ಯವಸ್ಥೆ, ನಾವು ರಸ್ತೆಯಲ್ಲಿದ್ದ ಬಸ್ ಹತ್ತಲು ಬಂದಾಗ ಅಲ್ಲಿ ಚಹಾ ಕೊಡುವ ವ್ಯವಸ್ಥೆಯಿದೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಭಾರತದೇಶದ ಎಲ್ಲ ವೀರ ಯೋಧರಿಗೂ ನಮನಗಳು.
ಜೈಹಿಂದ್.
– ಡಾ.ಎಸ್.ಸುಧಾ, ಮೈಸೂರು
ಬಹಳ ಉತ್ತಮ ಕಥನ. ಅಭಿನಂದನೆಗಳು ಸುಧಾ
ವಂದನೆಗಳು ನಿರ್ಮಲ
Informative and makes the reader emotinal & much patriotic . Nice write up madam. Thanks for sharing
Thanks mamatha. You were in NCC. As my student I request you to inculcate deshabhimana in your student s as a cadet and under officer.
ಆ ಸೈನಿಕನ ಶೌರ್ಯ ಬಲಿದಾನದ ಕಥೆ ಓದಿ ನೀವೇ ಬರೆದ ಹಾಗೇ ಕಣ್ಣೀರು ತುಂಬಿ ಬಂತು ಸೇನೆಗೆ ಸಹಾಯ ಮಾಡಿದ ಸ್ಥಳೀಯರ ದೇಶಪ್ರೇಮ ನಮ್ಮ ಹೃದಯ ತುಂಬುವಂತೆ ಮಾಡಿತು……ಸ್ವಾತಂತ್ರ್ಯ ದಿನಾಚರಣೆಯ ಸಂಧರ್ಭದಲ್ಲಿ ಸೂಕ್ತ ಲೇಖನ…… ತುಂಬಾ ಚೆನ್ನಾಗಿದೆ ಮೇಡಂ
ಆ ಸ್ಥಳವನ್ನು ನೋಡಿಯೇ ಬರೆದಿದ್ದೇನೆ. ಧನ್ಯವಾದ ಶರಣಬಸವೇಶರೆ
ಸ್ವಾತಂತ್ರ್ಯ ದಿನಾಚರಣೆ ಯ ಸಂದರ್ಭದಲ್ಲಿ.. ಜಸ್ವಂತ್ ಸಿಂಗ್ ರಾವಂತ್ ಬಗ್ಗೆ ತಿಳಿಸಿ ಆಸ್ಥಳವನ್ನು ನೋಡಿ..ಕೃತಜ್ಞತೆ ಸೂಚಿಸಿರುವ ರೀತಿ ಓದಿ.. ಮನತುಂಬಿ ಬಂತು..ವಂದನೆಗಳು ಸುಧಾಮೇಡಂ..
ವಂದನೆಗಳು ನಾಗರತ್ನ
Very nice
ವಂದನೆಗಳು ನಯನ
ಇಂತಹ ಅಪರೂಪದ ವೀರನ ಬಗ್ಗೆ ಪ್ರಕಟಿಸಿದ್ದಕ್ಕೆ. ಧನ್ಯವಾದ ಗಳು
ಸ್ವಾತಂತ್ರೋತ್ಸವದ ಈ ಸಂದರ್ಭದಲ್ಲಿ ಬಹಳ ಪ್ರಸ್ತುತವೆನಿಸುವ ಮಹಾವೀರ ರಾವತ್ ಅವರ ವೀರಗಾಥೆಯ ಲೇಖನವು ಅಭಿಮಾನದಿಂದ ಮನ ತುಂಬುವಂತೆ ಮಾಡಿತು.
ಹೌದು. ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ನೆನೆಯಬೇಕು. ವ೦ದನೆಗಳು ಶಂಕರಿಯವರೇ
ವಂದನೆಗಳು ಶಂಕರಿಯವರೇ