ಅವಿಸ್ಮರಣೀಯ ಅಮೆರಿಕ – ಎಳೆ 52

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)

ಸೆಂಟ್ರಲ್ ಪಾರ್ಕ್

ಸಾಂತಾಕ್ಲಾರಾದಲ್ಲಿ ನಾವಿರುವ ಮನೆಯಿಂದ ಕೇವಲ ಐದು ನಿಮಿಷಗಳ ನಡಿಗೆಯ ದೂರದಲ್ಲಿರುವ ಅತ್ಯಂತ ವಿಶೇಷವಾದ ಪಾರ್ಕಿನ ಬಗ್ಗೆ ಹೇಳದಿರಲು ಸಾಧ್ಯವೇ? ಹೌದು…ಅದುವೇ ಸೆಂಟ್ರಲ್ ಪಾರ್ಕ್. ಇದು ನನ್ನ ಅತ್ಯಂತ ಪ್ರೀತಿಯ ತಾಣವೂ ಹೌದು. ಸಾಮಾನ್ಯ ರೀತಿಯ ಉದ್ಯಾನವನದಂತಿರದ ಇದು ಸುಮಾರು 52ಎಕರೆಗಳಷ್ಟು ವಿಸ್ತಾರಕ್ಕೆ ವ್ಯಾಪಿಸಿದೆ. ಈ ವಿಶಾಲವಾದ ಪಾರ್ಕ್ ಎರಡು ಮುಖ್ಯ ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ.  ಪಶ್ಚಿಮದ ಭಾಗದಲ್ಲಿ; ಗುಂಪು ಮತ್ತು ವೈಯಕ್ತಿಕ ಪಿಕ್ ನಿಕ್ ಗಳಿಗಾಗಿ ಸುವ್ಯಸ್ಥಿತವಾದ ಪ್ರತ್ಯೇಕ ಸ್ಥಳಗಳಿವೆ. ಪುಟ್ಟ ಹಾಗೂ ದೊಡ್ಡ ಮಕ್ಕಳಿಗಾಗಿ ಹಲವಾರು ಜೋಕಾಲಿಗಳು, ಜಾರುಬಂಡಿಗಳು ಇತ್ಯಾದಿ ಹೊರಾಂಗಣ ಆಟಗಳನ್ನಾಡಲು ಇರುವ ತಾಣಗಳು ಅತ್ಯಂತ ಸ್ವಚ್ಛ, ಸುರಕ್ಷಿತವಾಗಿ ನಿಭಾಯಿಸಲ್ಪಟ್ಟಿವೆ.  ಸಾರ್ವಜನಿಕರಿಗಾಗಿ ಇರುವ ಬಹು ಚಂದದ, ದೊಡ್ಡದಾದ ಬಯಲು ರಂಗಮಂದಿರವು ಮುಖ್ಯವಾಗಿ, ಬಹಳ ವಿಶೇಷವಾಗಿ ನಮ್ಮ ಗಮನಸೆಳೆಯುತ್ತದೆ. ಸುಮಾರು ಮೂರು ಎಕರೆಗಳಷ್ಟು ಜಾಗದಲ್ಲಿ ವೃತ್ತಾಕಾರದಲ್ಲಿ , ಸಭಿಕರು ಕೂರುವ ಜಗಲಿ ಮೇಲೆ ತಂತಿ ಚಪ್ಪರದ ಮೇಲೆ ದಟ್ಟವಾಗಿ ಹರಡಿರುವ ಚಂದದ ಹಸಿರೆಲೆಗಳಿಂದ ತುಂಬಿರುವ ಬಳ್ಳಿಗಳು, ತಮ್ಮ ಮೈಮೇಲೆ ತುಂಬಾ ವಿವಿಧ ಬಣ್ಣಗಳ ಹೂವುಗಳಿಂದ ಕಂಗೊಳಿಸುತ್ತವೆ. ಮಧ್ಯಭಾಗದಲ್ಲಿ ಫಿರಮಿಡ್ ಆಕೃತಿಯಲ್ಲಿ ತಂತಿಗಳನ್ನು ಹೆಣೆಯಲಾಗಿದ್ದು, ಇದಕ್ಕೂ ಬಳ್ಳಿಗಳನ್ನು ಹಬ್ಬಿಸುವ.ಪ್ರಯತ್ನ ಸಾಗಿದೆ ಈ ಬಳ್ಳಿಗಳ  ಕಾಂಡಗಳೋ, ತೆಂಗಿನಮರದ ಕಾಂಡದಷ್ಟು ದಪ್ಪಗಿವೆ! ಇದನ್ನು ನೋಡಿ ನನಗೆ ಇವುಗಳ ಪ್ರಾಯವೆಷ್ಟಿರಬಹುದೆಂದು ಯೋಚನೆಗಿಟ್ಟುಕೊಂಡಿತು! ಮುಂದಕ್ಕೆ ಅಲ್ಲಿ ವಾಹನಗಳ ನಿಲುಗಡೆಯ ಸ್ಥಳ, ಸ್ವಚ್ಛ ಶೌಚಾಲಯಗಳು, ಬಾಸ್ಕೆಟ್ ಬಾಲ್ ಕೋರ್ಟುಳ ಜೊತೆಗೆ, ರಾತ್ರಿ ಹೊತ್ತಿಗೂ ಆಡಲು ಅನುಕೂಲವಾಗುವಂತೆ ಉತ್ತಮ ಬೆಳಕಿನ ವ್ಯವಸ್ಥೆ ಇರುವ ಎರಡು ಟೆನ್ನಿಸ್ ಕೋರ್ಟುಗಳಿವೆ. ಈ ಉದ್ಯಾನವನದ ಮುಂಭಾಗದಲ್ಲಿಯೇ ಇರುವ ಆ ಪ್ರದೇಶದ ಹುತಾತ್ಮ ಯೋಧರ ಸ್ಮಾರಕದ ಬಳಿ 57 ಧ್ವಜಗಳನ್ನು ರಾಷ್ಟ್ರೀಯ ರಜಾದಿನಗಳಂದು ಹಾರಿಸುವರು. ಸ್ಮಾರಕದಲ್ಲಿ ಹುತಾತ್ಮರ ಬಗ್ಗೆ ವಿವರಗಳನ್ನೂ ಕಾಣಬಹುದು.

ಇಲ್ಲಿರುವ ಸುಮಾರು 30,000 ಚ.ಅಡಿಗಳಷ್ಟು ವಿಸ್ತಾರದ ಕಟ್ಟಡವೊಂದು ಅಲ್ಲಿಯ ಸಮುದಾಯದ ಜನರ ಮನೋರಂಜನಾ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಆಸಕ್ತರಿಗೆ ನಿಗದಿತ ಶುಲ್ಕದೊಂದಿಗೆ ಚಿತ್ರಕಲೆ, ಸಂಗೀತ, ಇತ್ಯಾದಿಗಳನ್ನು ಕಲಿಸಲಾಗುವುದು. ಇಲ್ಲಿಯೇ ಪಕ್ಕದಲ್ಲಿದೆ;  ಅತ್ಯಂತ ಸುಸಜ್ಜಿತ, ಜನಮೆಚ್ಚುಗೆ ಪಡೆದ, ಸುವ್ಯವಸ್ಥಿತ ಆಟದ ಬಯಲು ಹೊಂದಿದ, ಪ್ರೈಮರಿ ಮಕ್ಕಳಿಗಾಗಿ ಇರುವ ಸರಕಾರಿ ಶಾಲೆ. 

ಇನ್ನು ಪೂರ್ವಭಾಗದಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಹೊರಾಂಗಣ ಕ್ರೀಡೆಗಳಿಗಾಗಿ ವಿಶಾಲವಾದ ಆಟದ ಮೈದಾನ, ಇಲ್ಲಿಯೂ ಉತ್ತಮ ಬೆಳಕಿನ ವ್ಯವಸ್ಥೆ ಇರುವ ಎರಡು ಟೆನ್ನಿಸ್ ಕೋರ್ಟುಗಳು, ತರಬೇತಿಗಾಗಿ ಪ್ರತ್ಯೇಕ ಸ್ಥಳ, ವ್ಯಾಯಾಮ ಶಾಲೆ, ಬಹು ವಿಶಾಲವಾದ ಲಾನ್, ಬಿಳಿ ನೊರೆ ಚೆಲ್ಲುತ್ತಾ ಎತ್ತರಕ್ಕೆ ಚಿಮ್ಮುವ ಸುಂದರವಾದ ಕಾರಂಜಿ ಸಹಿತದ ಸರೋವರ, ಪಿಕ್ ನಿಕ್ ಗಾಗಿ ಅಚ್ಚುಕಟ್ಟಾದ ಸುವ್ಯವಸ್ಥಿತ ತಾಣಗಳು, ಮಕ್ಕಳಿಗೆ ಆಟವಾಡಲು ಉಯ್ಯಾಲೆ, ಜಾರುಬಂಡಿ ಇತ್ಯಾದಿಗಳು ಇರುವ ಜಾಗ ಮಾತ್ರವಲ್ಲದೆ ಬಹು ಉತ್ತಮ ಸಾರ್ವಜನಿಕ ಗ್ರಂಥಾಲಯವಿದೆ. ಈ ಗ್ರಂಥಾಲಯವು 1903ರಲ್ಲಿ ಸ್ಥಾಪಿಸಲ್ಪಟ್ಟಿದ್ದು, ಮುಂದೆ ಕಾಲ ಕಾಲಕ್ಕೆ ವಿಸ್ತರಣೆಗೊಳ್ಳುತ್ತಾ, ಈಗ ಸುಮಾರು 36,000 ಚ.ಅಡಿಗಳಷ್ಟು ವಿಸ್ತಾರವಾದ ಎರಡು ಅಂತಸ್ತಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಈ ಉದ್ಯಾನವನಕ್ಕೆ ಆಗಾಗ ಮೊಮ್ಮಕ್ಕಳ ಜೊತೆಗೆ ನಮ್ಮ ಭೇಟಿ ಆಗುತ್ತಲೇ ಇರುತ್ತದೆ. ಒಮ್ಮೆ ಇಲ್ಲಿ ಒಬ್ಬರು ಅಮೆರಿಕನ್ನರು ಕೆಲವು ಮಕ್ಕಳಿಗೆ ನಮ್ಮ ಯೋಗ ಹಾಗೂ ಸೂರ್ಯ ನಮಸ್ಕಾರಗಳನ್ನು ಕಲಿಸುತ್ತಿರುವುದು ಕಂಡು ಆಶ್ಚರ್ಯವಾಯಿತು. ಇನ್ನೊಮ್ಮೆ, ಹಲವಾರು ಮುಸ್ಲಿಂ ಮಹಿಳೆಯರು ಒಟ್ಟುಗೂಡಿ ಭಾಷಣ, ಚರ್ಚೆ ನಡೆಸುತ್ತಿದ್ದರು. ಅಲ್ಲಿಯೂ ಅವರ ಒಗ್ಗಟ್ಟು ಕಂಡು ದಂಗಾದೆ! ಪೂರ್ತಿ ಪಾರ್ಕ್ ಅತ್ಯಂತ ಶುಚಿಯಾಗಿದ್ದರೂ; ಸರೋವರದ ಸುತ್ತಲೂ ಬಾತುಕೋಳಿಗಳ ಹೊಲಸು ಮಡುಗಟ್ಟಿತ್ತು. “ಇದ್ಯಾಕೆ ಹೀಗೆ?” ಎಂದು ಮಗಳಲ್ಲಿ ಕೇಳಿದಾಗ, ಆ ಜಾಗವನ್ನು ಪ್ರಕೃತಿ ಸಹಜವಾಗಿ ಇರಿಸಲಾಗಿದ್ದು, ಬಾತುಕೋಳಿಗಳನ್ನು ಸ್ವತಂತ್ರವಾಗಿ ಬಿಡಲಾಗಿದೆ ಎಂದಳು. ಬಹು ಚಂದದ ವಿವಿಧ ಬಣ್ಣಗಳ ಬಾತುಗಳು ಮನುಷ್ಯ ಸ್ನೇಹಿಗಳೂ ಆಗಿದ್ದುದು ಕಂಡುಬಂತು. ನಾವು ಅವುಗಳ ಪಕ್ಕ ಹೋಗಿ ನಿಂತರೂ ಕೊಂಚವೂ ಭಯವಿಲ್ಲದೆ ಓಡಾಡುತ್ತಿದ್ದವು. ಸರೋವರದ ನೀರಿನಲ್ಲಿ ನಿರ್ಭೀತಿಯಿಂದ ವಿಹರಿಸುವ ನೂರಾರು ಬಾತುಕೋಳಿಗಳನ್ನು ನೋಡುತ್ತಾ ಕುಳಿತರೆ ಸಮಯ ಸರಿದುದೇ ತಿಳಿಯದು.

 ಉದ್ಯಾನವನದೊಳಗೆ ಸರೋವರದ ಸುತ್ತಲು ಮಾತ್ರ ಹೂದೋಟವಿದೆ. ಉಳಿದಂತೆ, ಎಲ್ಲೆಡೆ ಹಸಿರು ಚಿಮ್ಮುವ, ವಿಶಾಲವಾಗಿ ಟೊಂಗೆಗಳನ್ನು ಹರಡಿ ಎತ್ತರೆತ್ತರ ಬೆಳೆದ ಮರಗಳು ಇಡೀ ಪಾರ್ಕಿಗೆ ನೆರಳಿನ ಚಪ್ಪರವನ್ನು ಹಿಡಿದಿವೆ. ಸಂಜೆ ಹೊತ್ತಿನ ನಮ್ಮ ಸುತ್ತಾಟದ ಸಮಯದಲ್ಲಿ ಇಡೀ ಪಾರ್ಕ್ ಸುತ್ತಿದರೆ, ಮಕ್ಕಳ ಕಲರವ, ಯುವಕ, ಯುವತಿಯರ ಆಟೋಟಗಳು, ಹಿರಿಯರ ದೀರ್ಘ ನಡಿಗೆ ಇತ್ಯಾದಿಗಳು ನಮ್ಮನ್ನು ಉಲ್ಲಾಸಗೊಳಿಸುತ್ತವೆ. ಪೂರ್ತಿ ಪಾರ್ಕಿನಲ್ಲಿ ಓಡಾಡಲು ಇರುವ ಸುವ್ಯವಸ್ಥಿತ, ಸ್ವಚ್ಛ ಕಾಲುದಾರಿಗಳು ಮನಸ್ಸನ್ನು ಅಹ್ಲಾದಗೊಳಿಸುತ್ತವೆ. ನಮ್ಮ ಮನೆಯಿಂದ ಪಾರ್ಕಿಗೆ ಹೋಗುವ ಒಂದು ಅಡ್ಡರಸ್ತೆಯ ಹೆಸರು Pepper Tree…ಎಂದರೆ ಕಾಳುಮೆಣಸಿನ ಮರ ಎಂದಿತ್ತು. ಇದನ್ನು ನೋಡಿ ನನಗೆ ಅಳಬೇಕೋ ನಗಬೇಕೋ ತಿಳಿಯದಾಯಿತು! ಅಲ್ಲಾ…ಇಲ್ಲಿಯವರಿಗೆ ಕಾಳುಮೆಣಸು ಬಳ್ಳಿಯಲ್ಲಿ ಬೆಳೆಯುವುದೆಂದು ತಿಳಿಯದೇ? ಎಂದು ಬಹಳ ಆಶ್ಚರ್ಯವೂ ಆಯಿತೆನ್ನಿ!

ಮನೆಯ ಕೈತೋಟದಲ್ಲಿ…..

        ವಿರಾಮದ ವೇಳೆ, ಮಗಳ ಮನೆಯ ಮುಂಭಾಗ ಮತ್ತು ಹಿಂಭಾಗಗಳಲ್ಲಿರುವ ಖಾಲಿ ಜಾಗಗಳಲ್ಲಿ ಕಿತ್ತಳೆ, ಸೇಬು, ನಿಂಬೆ ಇತ್ಯಾದಿ ಗಿಡಗಳನ್ನು ನೆಡುವ ಕೆಲಸಗಳು ನಡೆದುವು. ನಮ್ಮ ಕೈಯಾರೆ ಅಮೆರಿಕದ ಮಣ್ಣಲ್ಲಿ ನೆಟ್ಟು ಬೆಳೆದ ಗಿಡಗಳು ಮುಂದೆ ಹಣ್ಣು ಬಿಡುವಾಗ ಆಗುವ ಆನಂದವನ್ನು ಆಗಲೇ ಯೋಚಿಸಿ ಬೀಗಿದುದೂ ಆಯಿತು. ಯಾಕೆಂದರೆ, ಇಲ್ಲಿ ಎಲ್ಲರ ಮನೆಗಳ ಕೈತೋಟಗಳಲ್ಲಿರುವ ಹಣ್ಣಿನ ಗಿಡಗಳಲ್ಲಿ ತುಂಬಿ ತುಳುಕಾಡುವ ಹಣ್ಣುಗಳನ್ನು ದೂರದಿಂದಲೇ ನೋಡಿ ತೃಪ್ತಿ ಪಡುವ ನಮಗೆ, ಮುಂದೆ ನಮ್ಮದೇ ಗಿಡಗಳಲ್ಲಿ ಅಂತಹುದೇ ಹಣ್ಣುಗಳನ್ನು ಬುಟ್ಟಿ ತುಂಬಾ ಕೊಯ್ಯುವ ಭಾಗ್ಯ ಬೇಗನೇ ಬರುವುದೆಂದು ತಿಳಿದಿದೆ…ಇಲ್ಲಿಯ ಫಲವತ್ತಾದ ಮಣ್ಣು ಮತ್ತು ಹಿತವಾದ ಹವೆಯ ಜೊತೆಗೆ ನರ್ಸರಿಯಲ್ಲಿ ಕೊಡುವ ಆರೋಗ್ಯವಂತ ಗಿಡಗಳು ಯಾವತ್ತೂ ಬಹು ಬೇಗನೆ ಫಲ ನೀಡುತ್ತವೆ!

ಮರಳಿ ಗೂಡಿಗೆ….

ಅಮೆರಿಕದಲ್ಲಿ ನನ್ನ ಆರು ತಿಂಗಳ (180ದಿನಗಳ) ವಾಸ್ತವ್ಯದ ಅವಧಿ ಮುಗಿಯುತ್ತಾ ಬಂದಿತ್ತು…ಜೂನ್ ತಿಂಗಳ ಹತ್ತನೇ ತಾರೀಕಿನಂದು ಹಿಂತಿರುಗುವ ದಿನವೆಂದು ನಾನು ಅಮೆರಿಕಕ್ಕೆ ಬರುವಾಗಲೇ ನಿಗದಿಯಾಗಿ, ಹಿಂತಿರುಗುವ ಟಿಕೆಟ್ ಕೂಡಾ ಕೈಯಲ್ಲಿ ಸಿದ್ಧವಾಗಿತ್ತು.  ಹಿಂತಿರುಗುವ ದಿನ ಹತ್ತಿರವಾದಂತೆ, ನಮ್ಮ ಸೂಟ್ಕೇಸ್, ಬ್ಯಾಗುಗಳು ಹೊಟ್ಟೆ ಬಿರಿಯುವಂತೆ ತುಂಬಿದವು… ನಮ್ಮ ಹೃದಯ ಭಾರವಾದವು. ಜೂನ್ 10ನೇ ತಾರೀಕಿನಂದು ನಾವು ಕುಳಿತ ವಿಮಾನ ದುಬೈಯತ್ತ ಹಾರಿತು. ಅಲ್ಲಿಂದ ಇನ್ನೊಂದು ವಿಮಾನದಲ್ಲಿ ಬೆಂಗಳೂರು ತಲಪಿದಾಗ, ಮಳೆರಾಯ ಒದ್ದೆ ಮಾಡಿದ ತಾಯ್ನಾಡಿನ ಮಣ್ಣಿನ ಘಮಲು ಮನಸ್ಸಿಗೆ ಹಿತವೆನಿತು. ಮರುದಿನ, ಧಾರಾಕಾರ ವರ್ಷಧಾರೆಯ ನಡುವೆ ಮನೆಯ ಮುಂಭಾಗದ ತೋಟದ ಒಳಗೆ ಕಾಲಿಟ್ಟಾಗ, ಆರು ತಿಂಗಳ ಅಗಲುವಿಕೆಯಿಂದ ನೊಂದಿದ್ದ ಸುತ್ತುಮುತ್ತಲಿನ ಗಿಡಮರಗಳು ಪ್ರೀತಿಯಿಂದ ಸ್ವಾಗತಿಸಿದವು.  

(ಮುಂದುವರಿಯುವುದು…)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=38248

-ಶಂಕರಿ ಶರ್ಮ, ಪುತ್ತೂರು.       

7 Responses

  1. ಎಂದಿನಂತೆ ಪ್ರವಾಸ ಕಥನ ಸೊಗಸಾದ ನಿರೂಪಣೆ ಯೊಂದಿಗೆ ಸಾಗಿದೆ…ಮನಕ್ಕೆ ಮುದನೀಡುವಂತೆ …ತರುವ ನಿಮಗೆ ನನ್ನ ವಂದನೆಗಳು.. ಶಂಕರಿ ಮೇಡಂ.

  2. ನಯನ ಬಜಕೂಡ್ಲು says:

    Nice

  3. ಮಹಾಬಲ says:

    ವಿವರಣೆ ಸೊಗಸಾಗಿದೆ

  4. Padmini Hegde says:

    ಅಮೆರಿಕಾ ನಿಮ್ಮಂದ ಅವಿಸ್ಮರಣೀಯ ಆಯಿತು!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: