ಬ್ರಹ್ಮಪುತ್ರ ಪುಲಸ್ತ್ಯ

Share Button

ಸಕಲ ಚರಾಚರ ಸೃಷ್ಟಿಗೆ ಬ್ರಹ್ಮನೇ ಅಧಿಪತಿ. ‘ಬ್ರಹ್ಮಸೃಷ್ಟಿ’ ಎಂಬುದು ಲೋಕೋಕ್ತಿ. ಬ್ರಹ್ಮನಿಂದಲೇ ಎಲ್ಲವೂ ಸೃಷ್ಟಿಯಾಯಿತು ಎಂಬುದು ನಿರ್ವಿವಾದ. ಮಹಾವಿಷ್ಣುವಿನ ಶಕ್ತಿಯಿಂದ ಸಂಪನ್ನನಾದ ಬ್ರಹ್ಮದೇವನು ಸೃಷ್ಟಿ ಮಾಡಲು ಸಂಕಲ್ಪಿಸಿದಾಗ ಮೊದಲಿಗೆ ಬ್ರಹ್ಮನಿಗೆ ಹತ್ತು ಮಂದಿ ಪುತ್ರರು ಜನಿಸಿದರು. ಮರೀಚಿ, ಅತ್ರಿ, ಅಂಗಿರಸ್ಸು, ಪುಲಸ್ತ್ಯ. ಪುಲಹ, ಕ್ರತು,ಭೃಗು, ವಸಿಷ್ಠ, ದಕ್ಷ ಮತ್ತು ನಾರದ. ಇವರೇ ಆ ಹತ್ತು ಮಂದಿ ಶ್ರೇಷ್ಠರು. ಬ್ರಹ್ಮ ಈ ದಶಸುತ್ರರಲ್ಲಿ ಮರೀಚಿ ಮೊದಲನೆಯವ. ನಾರದನು ಕೊನೆಯವನು. ಇವರಿಂದಲೇ ಮುಂದೆ ಪ್ರಜಾಭಿವೃದ್ಧಿಯಾಯಿತು ಎಂದು ಭಾಗವತ ಪುರಾಣದಲ್ಲಿ ಹೇಳಲ್ಪಡುತ್ತದೆ. ಇವರಲ್ಲಿ ಒಬ್ಬೊಬ್ಬರದು ಒಂದೊಂದು ತರದ ಹುಟ್ಟು ವಿಶೇಷಗಳು. ಮರೀಚಿಯು ಬ್ರಹ್ಮನ ಮನದಿಂದ ಉತ್ಪತ್ತಿಯಾದರೆ ಅತ್ರಿಯು ನೇತ್ರಗಳಿಂದ ಉದಿಸಿದನು. ಅಂಗಿರಸ್ಸು ಬಾಯಿಯಿಂದಲೂ, ಪುಲಸ್ತ್ಯ  ಕಿವಿಯಿಂದಲೂ, ಪುಲಹ ನಾಭಿಯಿಂದಲೂ ,ಕ್ರತು ಕೈಯಿಂದಲೂ,  ಭೈಗು ತ್ವಚೆಯಿಂದಲೂ,  ವಸಿಷ್ಠರು ಪ್ರಾಣದಿಂದಲೂ,  ದಕ್ಷನು ಅಂಗುಷ್ಠದಿಂದಲೂ, ನಾರದನು ತೊರೆಯಿಂದಲೂ ಉತ್ಪತ್ತಿಯಾದರು.

ಪುಲಸ್ತ್ಯನು ಬ್ರಹ್ಮ ಮಾನಸ ಪುತ್ರನು ಎಂದಾಯಿತು. ಈತನಿಗೆ ವಿಶ್ವವಸು ಎಂಬ ಇನ್ನೊಂದು ಹೆಸರೂ ಇದೆ. ಪುಲಸ್ತ್ಯನು ಕರ್ದಮ ಪ್ರಜಾಪತಿಯ ಮಗಳಾದ ಹವಿರ್ಭುಕ್ ಎಂಬುವಳನ್ನು ಮದುವೆಯಾದನು. ಹಾಗೆಯೇ ಪುಲಸ್ತ್ಯನಿಗೆ ಇಲೆಬಿಲೆ, ಪ್ರೀತಿ, ಸಂಧ್ಯಾ , ಪ್ರತಿಚ್ಛಾ, ಗೋ, ಕೇಶಿನಿ ಎಂಬ ಕೆಲವು ಪತ್ನಿಯರೂ ಇದ್ದರು. ಕೇಶಿನಿಗೆ ಕೈಕಸಿ ಎಂಬ ಹೆಸರೂ ಇತ್ತು. ಹವಿರ್ಭುಕ್‌ನಲ್ಲಿ ಅಗಸ್ತ್ಯ ಮಹರ್ಷಿ ಜನಿಸಿದನು. ಇಲೆಬಲೆಯಲ್ಲಿ ಕುಬೇರನು ಜನಿಸಿದರೆ ಕೈಕಸಿಯಲ್ಲಿ ಹುಟ್ಟಿದ ಮಕ್ಕಳೇ ರಾವಣ,ಕುಂಭಕರ್ಣಾದಿಗಳು, ಪ್ರೀತಿ ಎಂಬಾಕೆಯಲ್ಲಿ ದಂಬೋಲಿ, ಗೋ ಎಂಬುವಳಲ್ಲಿ ವೈಶ್ರವಣ ಜನಿಸಿದನು.ಇವನು ತಂದೆಯಾದ ಪುಲಸ್ತ್ಯನನ್ನು ಬಿಟ್ಟು ತಾತನಾದ ಬ್ರಹ್ಮದೇವನ ಸನ್ನಿಧಿಗೆ ಹೋದನು. ಇದರಿಂದ ಪುಲಸ್ತ್ಯನು ಅತ್ಯಂತ ಕೋಪಗೊಂಡನು. ಕೋಪಿಷ್ಠನಾದ ಪುಲಸ್ತ್ಯ, ಬ್ರಹ್ಮನ ಅರ್ಧ ಶರೀರದಿಂದ ವಿಶ್ರವಸ್ಸೆಂಬ ಮತ್ರನನ್ನು ಸೃಷ್ಟಿಸಿದನು.

ರಾವಣನು ಕಾರ್ತಿವೀರ್ಯಾರ್ಜುನನ  ಸೆರೆಯಲ್ಲಿ ಸಿಕ್ಕಿಬಿದ್ದಾಗ ರಾವಣನು   ಸೆರೆಯಲ್ಲಿ ಸಿಕ್ಕಿಬಿದ್ದಾಗ ಪುಲಸ್ತ್ಯನು ಬಂದು ರಾವಣನನ್ನು ಬಿಡಿಸಿದನು, ಪರಾಶರ ಮುನಿಯ ತಂದೆಯಾದ ಶಕ್ತಿ ಮಹರ್ಷಿಯನ್ನು ರಾಕ್ಷಸರು ಕೊಂದಿದ್ದರು. ಈ ಕಾರಣದಿಂದ ಕೋಪಗೊಂಡ ಪರಾಶರರು ರಾಕ್ಷಸರ ನಾಶಕ್ಕಾಗಿ ಒಂದು ಯಜ್ಞವನ್ನು ಕೈಗೊಂಡಿದ್ದರು. ಈ ಯಜ್ಞವು ಮುಂದುವರಿದರೆ ರಾಕ್ಷಸರು ಮಾತ್ರವಲ್ಲ ಲೋಕವೇ ನಾಶವಾಗಬಹುದೆಂದು ತಿಳಿದ ಪುಲಸ್ತ್ಯರು ಅದನ್ನು ಮುಂದುವರಿಯದಂತೆ ತಡೆದರು.

ತ್ರಿಕಾಲ ಜ್ಞಾನಿಗಳಾದ ಮುನಿ ಶ್ರೇಷ್ಠರಿಗೆ ತಿಳಿಯದೆ ಇರುವಂತಾದ್ದೇನೂ ಇಲ್ಲ. ರಾವಣನು ಶ್ರೀರಾಮನಿಂದಲೇ ಸಂಹರಿಸಲ್ಪಡಬೇಕೆಂದು ತಿಳಿದಿದ್ದ ಪುಲಸ್ತ್ಯನು  ರಾವಣನನ್ನು ಕಾರ್ತಿವೀರ್ಯನ ಸೆರೆಯಿಂದ ಬಿಡಿಸಿರುವುದು ದೂರದೃಷ್ಟಿ ಹಾಗೂ  ಕೋಪೋದ್ರಿಕ್ತರಾದ ಪರಾಶರರನ್ನು ಲೋಕಕಲ್ಯಾಣಕ್ಕಾಗಿ ಶಮನಪಡಿಸಿ ಅವರು ಕೈಗೊಂಡ ಯಜ್ಞ ನಡೆಯದಂತೆ ತಡೆದಿರುವುದು. ಇದೆಲ್ಲ ಮಹಾಮಹಿಮ  ಪುಲಸ್ತ್ಯನ ಮಹಾಗುಣವನ್ನು ಎತ್ತಿ ತೋರಿಸುತ್ತದೆ. ಪುರಾಣ ಪುರುಷರ ಚರಿತ್ರೆ ಎಂದೆಂದಿಗೂ ಅನುಸರಣೀಯ. ಇಂತಹವುಗಳನ್ನೋದಿದ ಬಾಲಕರ ವ್ಯಕ್ತಿತ್ವ ವಿಕಸನವಾಗಲೆಂದು ಹಾರೈಕೆ. 

 -ವಿಜಯಾಸುಬ್ರಹ್ಮಣ್ಯ, ಕುಂಬಳೆ

4 Responses

  1. ಎಂದಿನಂತೆ ಪುರಾಣ ಕಥೆ ಓದಿಸಿಕೊಂಡು ಹೋಯಿತು..ಆಕಥೆಗಳನ್ನು..ಬರೆದು ನೆನಪು ಮಾಡಿಕೊಳ್ಳುವಂತೆ ಮಾಡುವ ನಿಮಗೆ ಧನ್ಯವಾದಗಳು.. ಮೇಡಂ.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. Vijayasubrahmanya says:

    ಧನ್ಯವಾದಗಳು ಸೋದರಿಯರಿಗೆ.
    ನಯನ ಬಜಕೂಡ್ಳು ಹಾಗೂ ಬಿ.ಆರ್.ನಾಗರತ್ನ
    ಧನ್ಯವಾದಗಳು…

  4. ಶಂಕರಿ ಶರ್ಮ says:

    ಬ್ರಹ್ಮಪುತ್ರ ಪುಲಸ್ತ್ಯ ಮಹರ್ಷಿಗಳ ಹುಟ್ಟು ಮತ್ತು ಅವರ ಮಹಾನ್ ಗುಣಗಳನ್ನು ವಿಶದೀಕರಿಸಿದ ಪೌರಾಣಿಕ ಕಥೆಯು ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: