ಅವಿಸ್ಮರಣೀಯ ಅಮೆರಿಕ – ಎಳೆ 51
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಸರೋವರದ ತಟದಲ್ಲಿ…
ಮುಂದೆ, ನಮ್ಮ ವಾಹನದ ಚಕ್ರಗಳು ತಿರುಗಿದವು, ಬೆಟ್ಟದ ತಪ್ಪಲಲ್ಲಿರುವ ಒಂದು ವಿಶಾಲವಾದ ಸರೋವರದೆಡೆಗೆ. ಜ್ವಾಲಾಮುಖಿ ಸ್ಫೋಟದಿಂದ ರೂಪುಗೊಂಡ ಈ ಸರೋವರದಲ್ಲಿ, ಶೀತಲ ಜಲವು ಅತ್ಯಂತ ವಿಸ್ತಾರವಾಗಿ ಹರಡಿ ನಿಂತು, ಹೆಚ್ಚಿನ ನೀರು ಆ ಸರೋವರದಿಂದ ಹೊರಗಡೆಗೆ ಸಣ್ಣಕಾಲುವೆ ರೂಪಿಸಿಕೊಂಡು ಹರಿದು ಹೋಗುತ್ತಿತ್ತು. ಸರೋವರದ ಸುತ್ತಲೂ ವಿವಿಧ ರೀತಿಯ ಮರಗಳಿಂದ ತುಂಬಿದ ದಟ್ಟವಾದ ಕಾಡು ಮತ್ತು ಹುಲ್ಲು ಜೊಂಡುಗಳು ತುಂಬಿದ್ದವು. ಸರೋವರದ ನೀರಿನಲ್ಲಿ ಅಡ್ಡಾದಿಡ್ಡಿಯಾಗಿ, ಸಹಜವಾಗಿ ಬಿದ್ದ ಮರಗಳು ಜ್ವಾಲಾಮುಖಿಯ ಸ್ಪೋಟದ ತೀವ್ರತೆಯನ್ನು ಬಿತ್ತರಿಸುವಂತಿದ್ದವು. ಪ್ರವಾಸಿಗರ ನೌಕಾಯಾನವು ಬಹು ದೂರದಲ್ಲಿ ಗೋಚರಿಸುತ್ತಿತ್ತು. ಸರೋವರದ ಸುತ್ತಲೂ ಅಲ್ಲಲ್ಲಿ, ಪ್ರವಾಸಿಗರ ಅನುಕೂಲತೆಗಾಗಿ ಮೀಸಲಿಟ್ಟಿರುವ ಅಚ್ಚುಕಟ್ಟಾದ, ಸುರಕ್ಷಿತವಾದ ಆಸನಗಳು ಮನಸೆಳೆದವು. ಆ ಕಾಡಿನಲ್ಲಿಯೂ, ಸ್ವಚ್ಛ ಶೌಚಾಲಯ, ಕುಡಿಯುವ ನೀರು, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಇತ್ಯಾದಿಗಳನ್ನು ನೋಡಿ ದಂಗುಬಡಿದು ಹೋದೆ. ಸಂಜೆ ತನಕದ ಸುಂದರ ಸರೋವರದ ಸಾಮೀಪ್ಯ ಬಹಳ ಅಹ್ಲಾದಕರವಾಗಿತ್ತು.
ಕೊಲಂಬಿಯಾ ನದಿಯ ನೋಟ…
ಉತ್ತರ ಅಮೆರಿಕದ ವಾಯವ್ಯ ಭೂಪ್ರದೇಶದಲ್ಲಿ ಹರಿಯುವ ಅತ್ಯಂತ ದೊಡ್ಡದಾದ ಈ ಕೊಲಂಬಿಯಾ ನದಿಯು ಸುಮಾರು 2,000ಕಿ.ಮೀ ಉದ್ದವಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಕಲ್ಲಿನ ಬೆಟ್ಟಗಳಲ್ಲಿದೆ, ಇದರ ಉಗಮಸ್ಥಾನ. ಈ ನದಿಯ ಮುಖಜ ಭೂಮಿಯ ಬಗ್ಗೆ 1775ರಲ್ಲಿ ಹೊರಜಗತ್ತಿಗೆ ತಿಳಿಯಿತು ಮತ್ತು 1792ರಲ್ಲಿ ಈ ನದಿಯ ಮೂಲಕ ಅಮೆರಿಕದ ಹಡಗುಗಳು ಸಂಚರಿಸಲಾರಂಭಿಸಿದವು.
ಈ ಮಹಾನದಿಯು ವಾಯವ್ಯ ದಿಕ್ಕಿನಿಂದ ದಕ್ಷಿಣದತ್ತ ಚಲಿಸಿ ವಾಷಿಂಗ್ಟನ್ ರಾಜ್ಯದತ್ತ ತೆರಳಿ ಆ ಬಳಿಕ ಪೆಸಿಫಿಕ್ ಮಹಾಸಾಗರವನ್ನು ಸೇರುತ್ತದೆ. ಇದು ಅಗಾಧ ಜಲರಾಶಿಯನ್ನು ಹೊಂದಿದ್ದು; ಅಮೆರಿಕದ ಯಾವುದೇ ನದಿಗಳಿಗಿಂತ ಹೆಚ್ಚು ನೀರನ್ನು ಸಮುದ್ರದತ್ತ ಒಯ್ಯುತ್ತದೆ! ಇಡೀ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ನೀರು ಒಳಗೊಂಡಿರುವ ನದಿಗಳಲ್ಲಿ; ಈ ನದಿಯು 37ನೇ ಸ್ಥಾನವನ್ನು ಹೊಂದಿದೆ. ಇದರ ಉಪನದಿಗಳಲ್ಲಿ ಸ್ನೇಕ್ ರಿವರ್ ಎಂಬುದು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಉಪನದಿಯು ಅಮೆರಿಕದ ಏಳು ರಾಜ್ಯಗಳಲ್ಲಿ ಹರಿದು ಕೊನೆಯಲ್ಲಿ ಕೊಲಂಬಿಯಾ ನದಿಯನ್ನು ಸೇರುತ್ತದೆ. ಒರೆಗಾನ್ ರಾಜ್ಯದ ಒಳಗೆ ಹರಿಯುವ ಕೊಲಂಬಿಯಾ ನದಿಯು ಪ್ರಾರಂಭದಲ್ಲಿ ಸುಮಾರು ಐದು ಮೈಲುಗಳ ವರೆಗೆ 55ಅಡಿಗಳಷ್ಟು ಆಳ ಮತ್ತು 2,640ಆಡಿಗಳಷ್ಟು ಅಗಲವಾಗಿದ್ದರೆ; ಆ ಮೇಲಿನ 100ಮೈಲುಗಳಷ್ಟು ದೂರಕ್ಕೆ 43ಆಡಿಗಳಷ್ಟು ಆಳ ಮತ್ತು 600ಅಡಿಗಳಷ್ಟು ಆಗಲವಾಗಿದೆ.
ಪೋರ್ಟ್ ಲ್ಯಾಂಡಿನಲ್ಲಿರುವ ಪ್ರಸಿದ್ಧ ವೀಕ್ಷಣಾ ಸ್ಥಳವಾದ Portland Women’s Forum State Scenic Viewpoint ಎಂಬಲ್ಲಿ ಅತ್ಯಂತ ಎತ್ತರದಿಂದ ಕೊಲಂಬಿಯಾ ನದಿಯ ವಿಹಂಗಮ ನೋಟವು ಲಭ್ಯವಿದೆ. ನಾವು ಅಲ್ಲಿಗೆ ತಲಪುವಾಗ ಸಂಜೆ ಆರು ಗಂಟೆ…ಭಾಸ್ಕರನ ಹೊಂಬಣ್ಣದ ಕಿರಣಗಳ ಚಾದರವು ಭೂರಮೆಯ ಮೇಲೆ ಹರಡಲು ಅದಾಗಲೇ ಪ್ರಾರಂಭವಾಗಿತ್ತು. ಆ ಬೆಟ್ಟದ ಮೇಲಕ್ಕೆ ವಾಹನವು ಚಲಿಸುವಾಗಲೇ ಈ ಸುಂದರ ದೃಶ್ಯವು ಕಣ್ತುಂಬಿತು. ಮೇಲಕ್ಕೆ ವಿಶಾಲವಾದ ಸುಮಾರು ನಲ್ವತ್ತು ಅಡಿಗಳಷ್ಟು ಎತ್ತರದ ವೀಕ್ಷಣಾ ಗೋಪುರವು ನಮ್ಮನ್ನು ಕಾದು ನಿಂತಂತೆ ಕಂಡರೂ, ಸಮಯ ಮೀರಿದುದರಿಂದ ಅದಾಗಲೇ ಮುಚ್ಚಿತ್ತು. ಆದರೆ ಅದರ ಎದುರುಗಡೆಗೆ ಇರುವ ವಿಶಾಲವಾದ ಪ್ರದೇಶದ ಮುಂಭಾಗದಲ್ಲಿ ಕಬ್ಬಿಣದ ಬಲವಾದ ಬೇಲಿಯನ್ನು ಹಾಕಲಾಗಿತ್ತು. ಅಲ್ಲಿಂದ ಕೊಲಂಬಿಯಾ ನದೀಪಾತ್ರ ಹಾಗೂ ಆಳವಾದ ಕಣಿವೆಯ ವಿಸ್ತೃತ ನೋಟವು ಮನಸೆಳೆಯುವಂತಿತ್ತು. ಬಹು ದೂರಕ್ಕೆ ಆಳದಲ್ಲಿ ಘನಗಂಭೀರವಾಗಿ, ನಿರಾತಂಕವಾಗಿ ತುಂಬಿ ಹರಿಯುವ ಮಹಾನದಿಯನ್ನು ಮನದಣಿಯುವಷ್ಟು ನೋಡಲೂ ಸಮಯದ ಅಭಾವವಾಗಿಬಿಟ್ಟಿತ್ತು… ಸೂರ್ಯನು ತನ್ನ ದಿನದ ಕೆಲಸ ಮುಗಿಸಿ ಅಂತರ್ಧಾನನಾಗಲು ಕ್ಷಣ ಗಣನೆಯಾಗುತ್ತಿತ್ತು. ಆ ಸುಂದರ ದೃಶ್ಯವನ್ನು ಕ್ಯಾಮರಾದಲ್ಲಿ ಸಾಧ್ಯವಾದಷ್ಟು ಸೆರೆ ಹಿಡಿದಿಟ್ಟುಕೊಂಡೆವು…ಮನಸ್ಸಿಲ್ಲದ ಮನಸ್ಸಿನಿಂದ ಹಿಂತಿರುಗಿದೆವು…ನಮ್ಮ ಮನೆಯೆಡೆಗೆ.
ಅಂತಾರಾಷ್ಟೀಯ ಗುಲಾಬಿ ಪರೀಕ್ಷಾ ಉದ್ಯಾನವನ (International Rose Testing Garden)
ಮರುದಿನ ಮೇ 30, ಶನಿವಾರ. ಬೆಳಗ್ಗೆ 10:30ಕ್ಕೆ, ಅಲ್ಲಿಯ ಪ್ರಸಿದ್ಧ ಗುಲಾಬಿ ತೋಟದ ವೀಕ್ಷಣೆಗಾಗಿ ನಾವೆಲ್ಲರೂ ಹೊರಟಾಗ, ಈ ಮೊದಲೇ ಸೆನೋಸೆ ಎಂಬಲ್ಲಿ ನೋಡಿದ್ದ ಅದ್ಭುತ ಗುಲಾಬಿ ಉದ್ಯಾನವನದ ನೆನಪು ಮಾಡಿಕೊಂಡೆ… ಇಲ್ಲಿಯ ಗುಲಾಬಿ ತೋಟ ಹೇಗಿರಬಹುದು ಎಂಬ ಕುತೂಹಲದೊಂದಿಗೆ. ನಮ್ಮ ಕಾರು GPS ಹಾಕಿ ಸಾಗುತ್ತಿದ್ದಂತೆಯೇ, ನಾವು ಹೋದ ರಸ್ತೆಯಲ್ಲಿಯೇ ಪುನ: ಬರುತ್ತಾ ಅಲ್ಲೇ ಗಿರಕಿ ಹೊಡೆಯುವುದನ್ನು ಆಶ್ಚರ್ಯದಿಂದ ನೋಡುತ್ತಿದ್ದೆ…ಅಲ್ಲಾ… ಅಮೆರಿಕದಲ್ಲೂ ದಾರಿ ತಪ್ಪುವುದು ಎಂದರೇನು?! ಹಾಗೆಯೇ ನಾಲ್ಕು ಸುತ್ತು ಹೊಡೆದು, ವಿಳಾಸವನ್ನು ಪುನ: GPS ಗೆ ಕೊಟ್ಟು, ಆಮೇಲೆ ಮತ್ತೊಂದು ಹತ್ತು ನಿಮಿಷಗಳಲ್ಲಿ ಹೂದೋಟದ ಪಕ್ಕದಲ್ಲಿದ್ದೆವು.
1889ರಲ್ಲಿ ಪೋರ್ಟ್ ಲ್ಯಾಂಡಿನ ಪ್ರಸಿದ್ಧ ಹಿರಿಯ ಮಹಿಳೆಯೊಬ್ಬರು ತಮ್ಮದೇ ಆದ ಬಹು ಚಂದದ ಗುಲಾಬಿ ತೋಟವನ್ನು ಹೊಂದಿದ್ದರು. ಗುಲಾಬಿ ಪ್ರಿಯರಾದ ಅವರ ಇತರ ಗೆಳತಿಯರಿಗೂ ಅವರ ಪ್ರೀತಿಯ ತೋಟದಲ್ಲಿ; ತಮ್ಮ ತಮ್ಮ ಗುಲಾಬಿ ಹೂಗಳನ್ನು ಪ್ರದರ್ಶಿಸಲು ಒಮ್ಮೆ ಆಹ್ವಾನಿಸಿದರು. ಮುಂದಕ್ಕೆ ಅದೇ ಪದ್ಧತಿ ಮುಂದುವರೆದು, ನಗರದಲ್ಲಿ ಗುಲಾಬಿ ತಳಿಗಳ ಅಭಿವೃದ್ಧಿಗಾಗಿಯೇ ವಿಶೇಷವಾದ ಸಂಸ್ಥೆಯೊಂದು ಸ್ಥಾಪಿಸಲ್ಪಟ್ಟಿತು. ಇದು ಜಗತ್ತಿನಾದ್ಯಂತ ದೊರೆಯುವ ವಿಶೇಷ ತಳಿಗಳನ್ನು ಸಂಗ್ರಹಿಸಿ ಅಭಿವೃದ್ಧಿ ಪಡಿಸುವುದರ ಜೊತೆಗೆ; ಅವುಗಳ ಆರೈಕೆ, ರೋಗಗಳ ತಡೆಗಟ್ಟುವಿಕೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಔಷಧಿಗಳ ಸಂಶೋಧನೆ ಇತ್ಯಾದಿಗಳಿಗಾಗಿ ಪ್ರಸಿದ್ಧಿ ಪಡೆದಿದೆ. ಹಾಗೆಯೇ, ಮೊದಲನೇ ವಿಶ್ವಸಮರದ ಸಂದರ್ಭದಲ್ಲಿ ಯುರೋಪಿನಲ್ಲಿ ಬೆಳೆದ ಹೈಬಿಡ್ ಗುಲಾಬಿ ತಳಿಗಳು ನಾಶದಂಚಿಗೆ ತಲಪಿದವು. ಆ ಸಮಯದಲ್ಲಿ ಅವುಗಳ ಸುರಕ್ಷಿತ ಧಾಮವಾಗಿಯೂ ಇದು ರೂಪುಗೊಂಡಿತೆನ್ನಬಹುದು. ಸುಮಾರು 1918ರಿಂದ ಜಗತ್ತಿನೆಲ್ಲೆಡೆಯಿಂದ ವಿವಿಧ ಗುಲಾಬಿ ತಳಿಗಳು ಇಲ್ಲಿಗೆ ಬರಲು ಪ್ರಾರಂಭವಾದವು.1924ರಲ್ಲಿ ಈ ಉದ್ಯಾನವನವು ಸಾರ್ವಜನಿಕರಿಗಾಗಿ ತೆರೆಯಲ್ಪಡುವಾಗ ಇಲ್ಲೊಂದು ಉತ್ತಮ ಬಯಲು ರಂಗಮಂದಿರವೂ ನಿರ್ಮಿಸಲ್ಪಟ್ಟಿತು.
ವಾಷಿಂಗ್ಟನ್ ಪಾರ್ಕ್ ಎಂದೂ ಕರೆಯಲ್ಪಡುವ, ಸುಮಾರು 4.5 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿಕೊಂಡಿರುವ ಈ ಉದ್ಯಾನವನವು ಮುಖ್ಯವಾಗಿ ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ರಾಯಲ್ ರೊಸಾರಿಯನ್ ಹೂದೋಟ, ಶೇಕ್ಸ್ ಪಿಯರ್ ಹೂದೋಟ ಮತ್ತು ಅತಿ ಸಣ್ಣಗಾತ್ರದ ಗುಲಾಬಿ ಹೂಗಳ ತೋಟ. ಸುಮಾರು 10,000 ಕ್ಕಿಂತಲೂ ಹೆಚ್ಚು ಗುಲಾಬಿ ಗಿಡಗಳಿರುವ ಈ ತೋಟದಲ್ಲಿ ಸುಮಾರು 610 ವಿವಿಧ ಗುಲಾಬಿಗಳ ಪ್ರಭೇದಗಳಿವೆ. ಇಲ್ಲಿಗೆ ವರ್ಷಂಪ್ರತಿ 70 ಲಕ್ಷಕ್ಕಿಂತಲೂ ಹೆಚ್ಚು ಪ್ರವಾಸಿಗರು ಭೇಟಿ ಕೊಡುವರು. ಪ್ರತೀ ವರ್ಷ ಕಡಿಮೆಯೆಂದರೆ, ಗುಲಾಬಿಯ ಸುಮಾರು ಇಪ್ಪತ್ತು ಹೊಸ ತಳಿಯ ಹೂಗಳು ಈ ತೋಟದಿಂದ ಹೊರಜಗತ್ತಿಗೆ ಪರಿಚಯಿಸಲ್ಪಡುತ್ತವೆ.
ಈ ಗುಲಾಬಿ ತೋಟದ ಮುಂಭಾಗಕ್ಕೆ ನಾವು ತಲಪಿದಾಗ, ಅತ್ಯಂತ ಸುಂದರ ಹೂಗಳಿಂದ ತುಂಬಿದ ಗುಲಾಬಿ ಬಳ್ಳಿಯ ಕಮಾನು ನಮ್ಮನ್ನು ಸ್ವಾಗತಿಸಿತು. ತೋಟದ ಸುತ್ತಲೂ ಭದ್ರವಾದ ಬೇಲಿ…ಅದರಲ್ಲೂ ತುಂಬಿಕೊಂಡು ನಗುತ್ತಿರುವ ವಿವಿಧ ಬಣ್ಣಗಳ ರಾಣಿಯರು! ಆಳೆತ್ತರ ಬೆಳೆದ ಗಿಡಗಳ ನಡುವೆ ಓಡಾಡುವ ಗುಲಾಬಿ ಪ್ರಿಯರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಬಿಸಿಲ ಕಾವಿನಿಂದ ಮೈ ಚುರುಗುಟ್ಟುತ್ತಿದ್ದರೂ, ಹೂ ಗಿಡ ಹಾಗೂ ಅರಳಿ ಕಂಪು ಬೀರುವ ಸಹಸ್ರಾರು ಸುಮಗಳ ಎಡೆಯಿಂದ ಮೆಲ್ಲನೆ ಬೀಸುತ್ತಿರುವ ತಂಪಾದ ಗಾಳಿಯು ನವಿರು ಸುವಾಸನೆಯನ್ನು ಹೊತ್ತು ತಂದು, ಮೈಮನಗಳನ್ನು ಅಹ್ಲಾದಗೊಳಿಸುತ್ತಿತ್ತು. ಗುಲಾಬಿ ಗಿಡಗಳ ಪಾತಿಗಳು ಅತ್ಯಂತ ವ್ಯವಸ್ಥಿತವಾಗಿದ್ದರೂ, ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವಂತೆ ನಾಜೂಕಾಗಿ ರೂಪಿಸಲ್ಪಟ್ಟಿರಲಿಲ್ಲ, ಯಾಕೆಂದರೆ, ಈ ತೋಟವು ನೋಡುಗರನ್ನು ತನ್ನತ್ತ ಸೆಳೆಯಲೋಸುಗ ಮಾತ್ರವಲ್ಲದೆ, ಗುಲಾಬಿ ತಳಿಗಳ ಅಭಿವೃದ್ಧಿಗೋಸ್ಕರ ರೂಪುಗೊಂಡ ಪ್ರಯೋಗಶಾಲೆಯಾಗಿದೆ. ಗಿಡಗಳು ಅಡ್ಡಾದಿಡ್ಡಿಯಾಗಿ ಬೆಳೆದರೂ ಅದರಲ್ಲಿ ಗೊಂಚಲು ಗೊಂಚಲಾಗಿ ಬೊಗಸೆಯಗಲ ಅರಳಿ ನಿಂತ ಬಣ್ಣ ಬಣ್ಣದ ಗುಲಾಬಿ ಹೂಗಳು ನಮ್ಮನ್ನು ಅವುಗಳ ಬುಟ್ಟಿಯೊಳಗೆ ಹಾಕಿಬಿಟ್ಟವು! ಇಲ್ಲಿಯ ಹೂಗಳ ಇನ್ನೊಂದು ವಿಶೇಷತೆಯೆಂದರೆ ಅವುಗಳ ಗಾಢ ಸುವಾಸನೆ. ನನಗಂತೂ ಹೂಗಳನ್ನು ಮನಸೋಯಿಚ್ಛೆ ಆಘ್ರಾಣಿಸಿ ಸಾಕೆನಿಸಲೇ ಇಲ್ಲ! ಮೂರು ಹಂತಗಳಲ್ಲಿ ಬೆಳೆಸಿದ್ದ ಸಾವಿರಾರು ಗಿಡಗಳಲ್ಲಿ ಕೆಲವು ಅನಾರೋಗ್ಯ ಪೀಡಿತ ಗಿಡಗಳು ತಮ್ಮ ಉಳಿವಿಗಾಗಿ ಹೋರಾಡುತ್ತಿರುವಂತೆನಿಸಿದವು. ನಡೆದು ಕಾಲುಗಳಿಗೆ ಸುಸ್ತೆನಿಸಿದರೂ, ನೋಡುವ ಉತ್ಸಾಹವೇನೂ ಕಡಿಮೆಯಾಗಲಿಲ್ಲ. ಹೂದೋಟದೊಳಗೆ ಎಲ್ಲೆಂದರಲ್ಲಿ ಗುಲಾಬಿ ಕಮಾನುಗಳು ವಿಜೃಂಭಿಸುತ್ತಿದ್ದವು. ಗುಂಪು ಗುಂಪಾಗಿ ಬೆಳೆದ ಪೊದರಿನಂತಹ ಗಿಡಗಳಲ್ಲಿ ಅಸಂಖ್ಯ ಹೂಗಳು ಸ್ವರ್ಗವನ್ನೇ ಸೃಷ್ಟಿಸಿದ್ದವು! ಅಲ್ಲೇ ಕೆಳಗಡೆಗಿದ್ದ ಬಯಲು ರಂಗಮಂದಿರವು ಬಿಕೋ ಎನ್ನುತ್ತಿತ್ತು…ಆದರೆ, ಅಲ್ಲೇ ಇದ್ದ ಬಯಲಿನಲ್ಲಿ ಚಿಣ್ಣರ ಕೇಕೇ ಆಟಗಳು ನಡೆದಿದ್ದವು…ಅವರ ಹೆತ್ತವರು ಅಲ್ಲಿರುವ ಆಸನಗಳಲ್ಲಿ ಕುಳಿತು ಅಸ್ವಾದಿಸುವುದನ್ನು ನೋಡಲು ಮೋಜೆನಿಸಿತು. ಅದಾಗಲೇ ನಡು ಇಳಿಹಗಲು..ಗಂಟೆ ಎರಡಾಗಿತ್ತು…ನಮ್ಮ ಗಮನ ಮನೆಯತ್ತ.. ಉದರ ನಿಮಿತ್ತ..!
ನಾವಿದ್ದ ಮನೆಯ ಬಳಿ ಹರಿಯುವ ಪುಟ್ಟ ತೊರೆ, ಸುತ್ತಲೂ ಆಕಾಶದೆತ್ತರ ಬೆಳೆದ ಹಸಿರು ಮರಗಳು ಪರಿಸರವನ್ನು ಇನ್ನಷ್ಟು ಅಹ್ಲಾದಗೊಳಿಸಿದ್ದವು. ಪಕ್ಕದ ಹತ್ತಾರು ಎಕರೆಗಳಷ್ಟು ವಿಸ್ತಾರವಾದ ಬಯಲು, ವಾಕಿಂಗ್ ಹೋಗುವವರ, ಚಿಣ್ಣರ ಆಟದ ಮುಖ್ಯ ಕೇಂದ್ರವಾಗಿದೆ ಎನ್ನಲಡ್ಡಿಯಿಲ್ಲ. ಬೃಹದಾಕಾರದ ವಿದ್ಯುತ್ ಸರಬರಾಜಿನ ಕಂಬಗಳನ್ನು ನೆಡುವುದಕ್ಕೋಸ್ಕರವೇ ಆ ಬಯಲು ಪ್ರದೇಶವು ರೂಪುಗೊಂಡಿದೆ.
ಮರುದಿನ ಮೇ 31..ಭಾನುವಾರ… ಬಂಧುಗಳ ಪುಟ್ಟ ಮಗುವಿನ ಮೊದಲನೇ ಹುಟ್ಟುಹಬ್ಬದ ಸಂಭ್ರಮ. ಮನೆ ಪಕ್ಕದಲ್ಲಿರುವ ಅಚ್ಚುಕಟ್ಟಾದ ಸುಸಜ್ಜಿತ ಮನೋರಂಜನಾ ಸಭಾಂಗಣದಲ್ಲಿ ಆ ದಿನ ಸಂಜೆಗೆ ಆಮಂತ್ರಿತರಿಗಾಗಿ ಭರ್ಜರಿ ಔತಣಕೂಟದ ಏರ್ಪಾಡಾಗಿತ್ತು. ಹಸಿರು ಬಣ್ಣದ ಬೆಲೂನುಗಳನ್ನು ಕಟ್ಟಿ, ಮಗುವಿಗಿಷ್ಟದ ಕಾಡಿನ ಥೀಮ್ ನಲ್ಲಿ ಶೃಂಗರಿಸಿದ ಹಾಲ್ ಪುಟ್ಟ ಮಕ್ಕಳ ಸಂಭ್ರಮದಿಂದ ತುಂಬಿ ತುಳುಕಾಡಿತ್ತು. ನನಗೋ ಈ ಥೀಮ್ ಬಗ್ಗೆ ಅರಿವಿರದೆ ಬೇರೆ ಬೇರೆ ಬಣ್ಣಗಳ ಬೆಲೂನುಗಳಿಗೆ ಗಾಳಿಯೂದಿ ಸಿದ್ಧಪಡಿಸಿದ್ಧೆ…ಶೃಂಗರಿಸಲು. ವಿಷಯ ತಿಳಿದ ಬಳಿಕ ಅವುಗಳನ್ನು ಬೇರೆ ಕಡೆಗೆ ರವಾನಿಸಿದೆ ಎನ್ನಿ. ಮಗು ವಿವಸ್ವಾನ್ ನ ಪ್ರಥಮ ಜನುಮದಿನದ ಆಚರಣೆಯು; ನಮ್ಮೂರ ಪಾಯಸ, ಹಲುವ, ಪಲಾವುಗಳಿಂದ ಕೂಡಿದ, ಅಪರೂಪದ ರುಚಿಕರವಾದ ಸವಿ ತಿನಸುಗಳೊಂದಿಗಿನ ರಾತ್ರಿಯೂಟ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಮರುದಿನ ಮುಂಜಾನೆ ಮರಳಿ ಗೂಡಿಗೆ..ನಮ್ಮ ಪಯಣ. ಸುಂದರ ಸುಮಗಳ ರಾಣಿಯ ಭೇಟಿ, ಧುಮ್ಮಿಕ್ಕುವ ಜಲಪಾತಗಳೊಡನೆ ಮಾತು, ಜ್ವಾಲಾಮುಖಿಯ ರುದ್ರ ರಮಣೀಯ ನೋಟ…ಇವುಗಳನ್ನೆಲ್ಲ ನೆನೆಯುತ್ತಾ, ಬಹು ಚಂದದ, ಸ್ನಿಗ್ಧ ಸೌಂದರ್ಯವನ್ನು ಹೊತ್ತು ನಿಂತ ಗುಲಾಬಿ ನಗರ ಪೋರ್ಟ್ ಲ್ಯಾಂಡಿಗೆ ಭಾರವಾದ ಮನಸ್ಸಿನಿಂದಲೇ ವಿದಾಯ ಹೇಳುತ್ತಾ…ಹಾರಿದೆವು…ನಮ್ಮ ಮನೆಯತ್ತ..
(ಮುಂದುವರಿಯುವುದು…)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=38211
-ಶಂಕರಿ ಶರ್ಮ, ಪುತ್ತೂರು.
Very nice
ಧನ್ಯವಾದಗಳು ನಯನಾ ಮೇಡಂ.
ಚೆನ್ನಾಗಿದೆ ಅಕ್ಕಾ ಓದಿಸಿಕೊಂಡು ಹೋಯಿತು
ಧನ್ಯವಾದಗಳು ಆಶಾ ತಂಗೀ…
ಪ್ರವಾಸ ಕಥನ ಎಂದಿನಂತೆ ಓದಿ ಸಿಕೊಂಡು ಹೋಯಿತು..ನಿಮ್ಮ ಅನುಭವ ದ ಅನಾವರಣ ಕ್ಕೆನನ್ನದೊಂದು ಸಲಾಮ್ ಶಂಕರಿ ಮೇಡಂ.
ಧನ್ಯವಾದಗಳು…ನಾಗರತ್ನ ಮೇಡಂ.