ನವನಿಧಿಗಳ ಒಡೆಯ ಕುಬೇರ

Share Button

ಧಾರಾಳ ದಾನ ಮಾಡುವವರನ್ನು ನಮ್ಮಲ್ಲಿ ‘ದಾನಶೂರ ಕರ್ಣ’ನೆಂದೂ ನ್ಯಾಯ-ಧರ್ಮ ಎಂದು ಬದುಕುವವರನ್ನು ಅವನೊಬ್ಬ ಧರ್ಮರಾಯನೆಂದೂ ಮಾತು ಮಾತಿಗೆ ಭೀಕರ ಪ್ರತಿಜ್ಞೆಯನ್ನು ಹೇಳುವಾತನನ್ನು ‘ಭೀಷ್ಮ’ ಎಂದೂ ಸತ್ಯವನ್ನೇ ಹೇಳುವಾತನನ್ನು ‘ಸತ್ಯ ಹರಿಶ್ಚಂದ್ರ’ನೆಂದೂ ಅಧಿಕ ಶಕ್ತಿ ಇದ್ದ ಬಲಾಡ್ಯನನ್ನು ನೀನೊಬ್ಬ ‘ಬಲಭೀಮ’ನೆಂದೂ ಧನ-ಕನಕ ಉಳ್ಳವನಂತೆ ವರ್ತಿಸುವಾತನನ್ನು ‘ಕುಬೇರ’ ಎಂದೂ ಹೀಗೆ ಹಲವುಪುರಾಣ ಪುರಷರ ಹೆಸರು ಉದಾಹರಿಸಿ ವಿಶೇಷಣ ಪದಗಳಿಂದ ಹೇಳುವುದುಂಟು. ಈ ಮಾತುಗಳಲ್ಲಿ ತುಸು ವ್ಯಂಗ್ಯ ಇಣುಕಿದರೂ ಹೇಳುವವನಿಗೂ ಹೇಳಿಸಿ ಕೊಳ್ಳುವಾತನಿಗೂ ಕೊರತೆ ಅವಮಾನಗಳಾಗದೆ ಬದಲಾಗಿ ಆತನಿಗೆ ಒಂದು ರೀತಿಯಒಣ ಪ್ರತಿಷ್ಠೆ ಬರುವಂತಹ ಹಾಸ್ಯ ಮಿಶ್ರಿತ ಮಾತದು.

ಹೌದು, ಕುಬೇರ ಶ್ರೀಮಂತ, ನವನಿಧಿಗಳ ಒಡೆಯ, ನವನಿಧಿಗಳೆಂದರೆ ಪದ್ಮ, ಮಹಾಪದ್ಮ, ಶಂಖ, ಮಕರ, ಕುಚ್ಛವ, ಕುಂದ, ಮುಕುಂದ, ನೀಲ, ಖರ್ವ, ಹೀಗೆ ಒಂಬತ್ತು ನಿಧಿಗಳೂ ಕುಬೇರನ ಸ್ವಾಧೀನದಲ್ಲಿದ್ದುವು. ಈ ಕುಬೇರನೆಂದರೆ ಯಾರು…? ಐಶ್ವರ್ಯದ ದೇವತೆ ಹೇಗಾದ?

ಕುಬೇರನು ಪುಲಸ್ತ್ಯ ಋಷಿಯ ಮಗನಾದ ‘ವಿಶ್ರವಸು’ಮುನಿಯ ಮಗ ಈತನ ತಾಯಿ ‘ಇಲಬಿಲಾ’ ಎಂಬವಳು. ಈಕೆಗೆ ‘ದೇವವರ್ಣಿ’ ಎಂಬ ಹೆಸರೂ ಇತ್ತು. ಕುಬೇರ (ಕುತ್ಸಿತವಾದ, ಬೇರ-ದೇಹವುಳ್ಳವನು)ನು ಜನಿಸುವಾಗ ದೇಹವು ವಿಕಾರವಾಗಿತ್ತಂತೆ. ವಿಶ್ರವಸು ಮುನಿಯು ಸೋಮನೆಂದು ಕರೆದ ಮೇಲೆ ಸೌಮ್ಯ ಶರೀರ ಹೊಂದಿದನಂತೆ. ಹಾಗಾಗಿ ಈತನಿಗೆ ಸೋಮನೆಂದೂ ಹೆಸರಿದೆ. ಅಲ್ಲದೆ ಇವನನ್ನು ‘ವೈಶ್ರವಣ’ನೆಂದೂ ಕರೆಯುತ್ತಾರೆ. ಕುಬೇರನು ಉತ್ತರ ದಿಕ್ಕಿನ ಒಡೆಯ. ರಾವಣ-ಕುಂಭಕರ್ಣರು ಇವನ ಮಲತಾಯಿಯ ಮಕ್ಕಳು. ‘ವಿಶ್ರವಸು’ವು ಸುಮಾಲಿ ಎಂಬ ರಾಕ್ಷಸನ ಮಗಳಾದ ಕೇಕಸಿಯನ್ನು ಮದುವೆಯಾಗಿ ಅವಳಲ್ಲಿ ರಾವಣ, ಕುಂಭಕರ್ಣ, ವಿಭೀಷಣ, ಶೂರ್ಪನಖಿಯರು ಜನಿಸಿದರು. ಕುಬೇರನ ಪತ್ನಿಯ ಹೆಸರು ‘ಋದ್ಧಿ’. ನಳಕೂಬರನು ಈತನ ಮಗ, ಇವನು ಅತ್ಯಂತ ಸುಂದರನಾಗಿದ್ದನಂತೆ. ಕುಬೇರನು ಮೊದಲು ಲಂಕೆಯಲ್ಲಿದ್ದು ರಾವಣ, ಕುಂಭಕರ್ಣರು ಅವನಲ್ಲಿದ್ದ ಪುಷ್ಪಕವಿಮಾನವನ್ನು ಅಪಹರಿಸಿ ಅಲ್ಲಿಂದ ಓಡಿಸಿದರಂತೆ, ಮುಂದೆ ಕುಬೇರನು ಶಿವನ ತಪಸ್ಸು ಮಾಡಿ ಕೈಲಾಸದಲ್ಲಿ ಸ್ಥಾನ ದೊರಕಿದ್ದಲ್ಲದೆ ಅಲಕಾನಗರವೂ ನವನಿಧಿಗಳೂ ಪ್ರಾಪ್ತಿಯಾದುವಂತೆ. ಶಿವನ ಮೂಲಕ ಈತನು ಐಶ್ವರ್ಯಕ್ಕೆ ಒಡೆಯನಾದನು.

ಅಲಕಾನಗರದ ಒಡೆಯನಾದ ಕುಬೇರನ ಮಂತ್ರಿ ‘ಪ್ರಹಸನ’ ಎಂಬುವನು. ಮಣಿಮಂತ್ರ, ಮಣಿಭದ್ರ, ಮಣಿಕಂದರ, ಮಣಿಭೂಷ ಇವರೆಲ್ಲ ಇವನ ಅನುಚರರು. ಕುಬೇರನ ಉದ್ಯಾನವನದಲ್ಲಿದ್ದ ಸೌಗಂಧಿಕ ಪುಷ್ಪದ ಸರೋವರವನ್ನು ಈ ಅನುಚರರು ರಕ್ಷಿಸುತ್ತಿದ್ದರು. ಈ ಉದ್ಯಾನದಲ್ಲಿದ್ದ ದಿವ್ಯವಾದ ಪುಷ್ಪವನ್ನು ದ್ರೌಪದಿಯ ಸಂತೋಷಕ್ಕಾಗಿ
ಭೀಮಸೇನನು ತಂದು ಕೊಟ್ಟಿದ್ದನು. ಶಿವನಿಂದ ಅರ್ಜುನನಿಗೆ ಪಾಶುಪತಾಸ್ತ್ರ ದೊರಕಿದರೆ; ಕುಬೇರನು ಅರ್ಜುನನಿಗೆ ದಿವ್ಯಾಸ್ತ್ರಗಳನ್ನು ನೀಡಿದನು. ಮಹಾವಿಷ್ಣುವು ಎಲ್ಲ ರಾಜರುಗಳ ದೊರೆತನವನ್ನು ಕುಬೇರನಿಗೆ ನೀಡಿದ್ದನು.

ಲೋಕದಲ್ಲಿ ಮಲತಾಯಿ ಹಾಗೂ ಆಕೆಯ ಮಕ್ಕಳಿಂದ ಮೊದಲ ಮಗುವಿಗೆ ಕಷ್ಟ, ನಷ್ಟ, ದುಃಖ ಪೀಡನೆಗಳು ಸರ್ವೇಸಾಮಾನ್ಯ. ಕುಬೇರನು ಅದಕ್ಕೆ ಹೊರತಾಗಿರಲಿಲ್ಲ. ರಾವಣ, ಕುಂಭಕರ್ಣಾದಿಗಳಿಂದ ಎಲ್ಲ ರೀತಿಯ ಅನ್ಯಾಯಗಳು ಅವನಿಗೆ ಬಾಧಿಸಲ್ಪಟ್ಟರೂ ಅವುಗಳೆಲ್ಲದರಿಂದಲೂ ಮುಕ್ತಿಯಾಗಿ ಶಿವನಿಂದ ಧನಾಧಿಪತ್ಯವೂ,
ವಿಷ್ಣುವಿನಿಂದ ರಾಜಾಧಿಪತ್ಯವೂ ದೊರಕಿ ಕುಬೇರನು ತ್ರೈಲೋಕ್ಯ ಪೂಜನೀಯ ಎನಿಸಿದನು.
ಧನಾಧಿಪತಯೇ ನಮಃ

-ವಿಜಯಾಸುಬ್ರಹ್ಮಣ್ಯ, ಕುಂಬಳೆ

5 Responses

  1. ನಯನ ಬಜಕೂಡ್ಲು says:

    Nice

  2. ಎಂದಿನಂತೆ ಬಂದಿರುವ ಪೌರಾಣಿಕಥೆಯಲ್ಲಿ ಈಸಾರಿಯ ಕುಬೇರನ ಕಥೆ ಚೆನ್ನಾಗಿದೆ…ಧನ್ಯವಾದಗಳು ವಿಜಯಾ ಮೇಡಂ

  3. Padma Anand says:

    ಐಶ್ವರ್ಯದೊಡೆಯ ಕುಬೇರನ ಕುರಿತಾದ ವಿವರಣಾತ್ಮಕ ಲೇಖನ ಅನೇಕ ಪೌರಾಣಿಕ ವಿಷಯಗಳನ್ನು ತಿಳಿಸಿಕೊಟ್ಟಿತು.

  4. ಶಂಕರಿ ಶರ್ಮ says:

    ಕುಬೇರನ ಕುರಿತ ಸೊಗಸಾದ ಪೌರಾಣಿಕ ಕಥೆಯು ನಮಗೆ ತಿಳಿಯದ ಬಹಳಷ್ಟು ಮಾಹಿತಿಗಳನ್ನು ಒಳಗೊಂಡಿದೆ…ಧನ್ಯವಾದಗಳು ವಿಜಯಕ್ಕ.

  5. Vijayasubrahmanya says:

    ಧನ್ಯವಾದಗಳು ಹೇಮಮಾಲ ಹಾಗೂ ಓದುಗರಿಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: