ಮಲೆನಾಡಿನ ಜೀವನಾಡಿಗಳು; ಇವಳ ಹೆಸರು ಬಲ್ಲೆಯೇನು? ಅಂಕ-6
ಇವಳೇ ಕರಾವಳಿಯ ಕಣ್ಣಾದ ನೇತ್ರಾವತಿ. ಚಿಕ್ಕಮಗಳೂರಿನ ಸಂಸೆಯ ಬಳಿಯಲ್ಲಿರುವ ಗಂಗಾಮೂಲದಲ್ಲಿ ಜನಿಸಿದ ತ್ರಿವಳಿ ಸೋದರಿಯರಲ್ಲಿ ಒಬ್ಬಳಾದ ನೇತ್ರಾವತಿ. ಇವಳ ಉಗಮ ಸ್ಥಾನದಲ್ಲಿ ಕಂಡುಬರುವ ದೃಶ್ಯ – ಕಣ್ಣಿನಾಕಾರದ ಬಂಡೆಗಳ ಮೂಲಕ ಭೂಗರ್ಭದಿಂದ ಹೊರಜಗತ್ತಿಗೆ ಹೆಜ್ಜೆಯಿಡುತ್ತಿರುವ ನೀರಿನ ಝರಿ. ಹಾಗಾಗಿ ನೇತ್ರಾವತಿಯೆಂಬ ನಾಮಧೇಯ ಇವಳದು. ಹಿರಣ್ಯಾಕ್ಷನೆಂಬ ಅಸುರನನನ್ನು ಸಂಹರಿಸಲು ಧರೆಗವತರಿಸಿದ ವಿಷ್ಣುವಿನ ಮೂರನೆಯ ಅವತಾರವಾದ ವರಾಹ ಸ್ವಾಮಿಯ ನೇತ್ರಗಳಿಂದ ಧಾರಾಕಾರವಾಗಿ ಸುರಿದ ಅಶ್ರುಧಾರೆಯಿಂದ ಜನಿಸಿದಳೆಂಬ ಐತಿಹ್ಯವೂ ಇದೆ. ಮಲೆನಾಡಿನ ಪಶ್ಚಿಮಘಟ್ಟಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಹುಟ್ಟಿದ ನೇತ್ರಾವತಿ, ಸಮತಟ್ಟಾದ ಬಯಲು ಪ್ರದೇಶವಾದ ಕರಾವಳಿಯತ್ತ ಸಾಗುವಳು. ತಾನು ಸಾಗುವ ಹಾದಿಯಲ್ಲಿ ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ, ಮಂಗಳೂರು, ಧರ್ಮಸ್ಥಳ ಇತ್ಯಾದಿ ಪ್ರದೇಶಗಳನ್ನು ಪಾವನಗೊಳಿಸುವ ಪುಣ್ಯನದಿ ಇವಳು. ತನ್ನ ತಟದಲ್ಲಿ ವಾಸಿಸುವ ಜನರನ್ನು ತನ್ನ ಮಮತೆಯ ಮಡಿಲಲ್ಲಿಟ್ಟು ಸಲಹಿದ ಮಹಾಮಾತೆ. ಪ್ರಮುಖ ಉದ್ದಿಮೆಗಳಾದ ಕೃಷಿ ಹಾಗೂ ಮೀನುಗಾರಿಕೆಯ ಮೂಲಕ ಸಹಸ್ರ ಸಹಸ್ರ ಜನರನ್ನು ಪೋಷಿಸುವಳು. ಬಂಡಾಜೆಯ ಬಳಿ ಎದುರಾಗುವ ಬಂಡೆಗಳಿಂದ ಧುಮ್ಮಿಕ್ಕಿ ಬಂಡಾಜೆ ಜಲಪಾತವೆಂಬ ಹೆಸರು ಪಡೆವಳು.
ಮಲೆನಾಡಿನ ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಮೆಣಸು, ತೆಂಗು ಕಂಗಿನ ಕಂಪನ್ನು ಸೂಸುತ್ತಾ ಸಾಗುವಳು. ಇವಳ ಪರಿಮಳದಿಂದ ಆಕರ್ಷಿತರಾದ ಹಲವು ಹಳ್ಳಕೊಳ್ಳಗಳು, ಓಡೋಡಿ ಬಂದು ಇವಳ ಜೊತೆಗೂಡುವರು. ಚಾರ್ಮಾಡಿ ಹೊಳೆ, ನೆರಿಯಾ ಹೊಳೆ, ಶಿಶಿಲಾ ಹೊಳೆ, ಏರುಮಲೆ ಹೊಳೆ, ಕೆಂಪು ಹೊಳೆ, ಎಳನೀರ ಹೊಳೆ, ಮೃತ್ಯುಂಜಯ ಹೊಳೆ, ಕಪಿಲಾ ಹೊಳೆ ಹಾಗೂ ಫಲ್ಗುಣಿ ಹೊಳೆ ಸೇರಿ ತನ್ನ ವಿಸ್ತಾರವನ್ನು ಹಿಗ್ಗಿಸಿಕೊಳ್ಳುತ್ತಾ ಮುಂದೆ ಸಾಗುವಳು. 160 ಕಿ.ಮೀ. ಕ್ರಮಿಸಿದ ನೇತ್ರಾವತಿ, ಮುಂದೆ ಉಪ್ಪಿನಂಗಡಿಯಲ್ಲಿ ತನ್ನ ಜೀವದ ಗೆಳತಿಯಾದ ಕುಮಾರಧಾರಾ ನದಿಯೊಂದಿಗೆ ಸಂಗಮಿಸಿ ಅರಬ್ಬೀಸಮುದ್ರದಲ್ಲಿ ಐಕ್ಯಳಾಗುವಳು. ನೇತ್ರಾವತಿಯು ದಕ್ಷಿಣ ಕನ್ನಡ ಜಿಲ್ಲೆಯ ಅಸ್ಮಿತೆಯಾಗಿ ನಿಲ್ಲುವಳು.
ನೇತ್ರಾವತಿಯು ಮಲೆನಾಡಿನ ಪಶ್ಚಿಮಘಟ್ಟಗಳನ್ನು ಕರಾವಳಿಯ ಅರಬ್ಬೀಸಮುದ್ರದೊಂದಿಗೆ ಬೆಸೆಯುವ ಕರುಳಬಳ್ಳಿಯಾಗುವಳು. ಇವಳ ಹರಿವಿಗೆ ಎರಡು ಕಡೆ ತಡೆಯೊಡ್ಡಲಾಗಿದೆ – ಬಂಟ್ವಾಳ ಹಾಗೂ ಹಂಚಿಕಟ್ಟೆಗಳಲ್ಲಿ ನಿರ್ಮಿಸಲಾಗಿರುವ ಜಲಾಶಯಗಳು ಸುಮಾರು ಮೂರು ಸಾವಿರ ಹೆಕ್ಟೇರು ಭೂಮಿಯಲ್ಲಿ ಭತ್ತ, ತೆಂಗು, ಅಡಿಕೆ, ಗೇರುಬೀಜ ಹಾಗೂ ದವಸಧಾನ್ಯ ಬೆಳೆಯಲು ಭೂಮಿಗೆ ನೀರುಣಿಸುತ್ತಿವೆ. ನೇತ್ರಾವತಿಯು ಹಲವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಕ್ಷೇತ್ರಗಳ ನೆಲವೀಡು. ಇವಳ ತಟದಲ್ಲಿ ಹಲವು ಪುರಾಣ ಪ್ರಸಿದ್ಧ ದೇಗುಲಗಳಿವೆ.
ಇವುಗಳಲ್ಲಿ ರಾಷ್ಟ್ರೀಯ ಖ್ಯಾತಿ ಪಡೆದಿರುವ ದೇಗುಲ – ಶ್ರೀಕ್ಷೇತ್ರ ಧರ್ಮಸ್ಥಳ. ಶ್ರೀ ಮಂಜುನಾಥಸ್ವಾಮಿಯ ದೇಗುಲಕ್ಕೆ ಏಳುನೂರರಿಂದ ಎಂಟುನೂರು ವರ್ಷಗಳ ಇತಿಹಾಸವಿದೆ. ಇದು ಜೈನ ಹಾಗೂ ಶೈವ ಧರ್ಮಗಳ ಸಹಿಷ್ಣುತೆ ಹಾಗೂ ಸಾಮರಸ್ಯವನ್ನು ಸಾರುತ್ತಿರುವ ಪುಣ್ಯಕ್ಷೇತ್ರ. ಇಲ್ಲಿನ ಆರಾಧ್ಯ ದೈವ ಮಂಜುನಾಥಸ್ವಾಮಿಯನ್ನು ಕದ್ರಿಯಿಂದ ತಂದು ಉಡುಪಿಯ ಯತಿಗಳಾದ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರೆಂಬ ಪ್ರತೀತಿಯಿದೆ. ಸ್ವಾಮಿಯನ್ನು ಪೂಜಿಸುವವರು ವೈಷ್ಣವ ಪಂಥದ ಅನುಯಾಯಿಗಳಾದರೆ, ಆರಾಧಿಸುವವರು ಪೆರ್ಗಡೆ ವಂಶದವರು. ಇವರು ಇಪ್ಪತ್ತು ತಲೆಮಾರುಗಳಿಂದ ಶ್ರೀ ಕ್ಷೇತ್ರದ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ. ಇಲ್ಲಿ ಒಂದು ಸುಂದರವಾದ ಏಕಶಿಲೆಯ ಗೊಮ್ಮಟನ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗಿದೆ. ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರವನ್ನು ಧಾರ್ಮಿಕ, ನೈತಿಕ ಹಾಗೂ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾರ್ಪಡಿಸಿದ್ದಾರೆ.
ನೇತ್ರಾವತಿ ನದಿ ಅರಬ್ಬೀಸಮುದ್ರದಲ್ಲಿ ವಿಲೀನವಾಗುವದಕ್ಕಿಂತ ಮೊದಲು, ಕೆಲವು ಬಯಲುಸೀಮೆಯ ನಗರಗಳಿಗೆ ಕುಡಿಯುವ ನೀರನ್ನು ಪೂರೈಸುವುದಕ್ಕಾಗಿ ಎತ್ತಿನಹೊಳೆಯ ಬಳಿ ಎತ್ತಿನಹೊಳೆ ತಿರುವು ಯೋಜನೆಯಡಿಯಲ್ಲಿ ನೇತ್ರಾವತಿ ನದಿಯ ಪಾತ್ರವನ್ನೇ ಬದಲಿಸುತ್ತಿದ್ದಾರೆ. ಇದರಿಂದ ನದಿಯ ಸಿಹಿನೀರು ಸಮುದ್ರಕ್ಕೆ ಸೇರದೆ, ಸಮುದ್ರದಲ್ಲಿ ಉಪ್ಪಿನಂಶ ಹೆಚ್ಚಾಗಿ,ಮೀನುಗಳ ಸಂತತಿ ಕ್ಷೀಣಿಸಬಹುದು ಹಾಗೂ ನದಿಯೇ ಬತ್ತಿಹೋಗಬಹುದೆಂದು ಪರಿಸರವಾದಿಗಳು ವಾದ ಮಂಡಿಸುತ್ತಿದ್ದಾರೆ. ಆದರೆ ಸರ್ಕಾರ ಇವರ ಮಾತುಗಳಿಗೆ ಕಿವುಡಾಗಿ, ಎತ್ತಿನ ಹೊಳೆ ಯೋಜನೆಯನ್ನು ಭರದಿಂದ ಮುನ್ನೆಡೆಸುತ್ತಿದೆ. ಹಾಗಾಗಿ ಈ ಯೋಜನೆಗೆ ಸ್ಥಳೀಯರಿಂದ ವ್ಯಾಪಕ ವಿರೋಧವೂ ವ್ಯಕ್ತವಾಗುತ್ತಿದೆ.
ಹನಿ ಹನಿಗೂಡಿದರೆ ಹಳ್ಳ, ಹಳ್ಳದಿಂದ ಹೊಳೆ, ಹೊಳೆಯಿಂದ ನದಿ, ನದಿಯಿಂದ ಸಮುದ್ರ. ಹನಿ-ಹಳ್ಳ-ಹೊಳೆ- ನದಿ-ಸಮುದ್ರ ಹೀಗೆ ಸಾಗುವುದು ನೀರ ಪಯಣ. ಮಲೆನಾಡಿನ ದಟ್ಟವಾದ ಅರಣ್ಯದಲ್ಲಿ ಜನಿಸಿ,ಬಯಲುಸೀಮೆಯ ಮೂಲಕ ಸಾಗಿ, ಕಡಲ ಸೇರುವ ನೀರು – ರವಿಯ ಶಾಖಕ್ಕೆ ಆವಿಯಾಗುವ ನೀರು ಮುಗಿಲಾಗಿ, ಮಳೆಯಾಗಿ, ಮರಳಿ ಹನಿಯಾಗಿ, ಹಳ್ಳವಾಗಿ, ನದಿಯಾಗಿ ಕಡಲ ಸೇರುವ ಪ್ರಕ್ರಿಯೆ ಅದ್ಭುತವಲ್ಲವೇ? ಈ ಜಲಮೂಲಗಳಿಗೆ ಹೆಸರಿಟ್ಟವರ್‍ಯಾರು? ಪೌರಾಣಿಕ ಐತಿಹ್ಯಗಳನ್ನು ಹೆಣೆದವರ್‍ಯಾರು? ಇವಳು ಸಾಗುವ ಹಾದಿಯಲ್ಲಿ ದೇಗುಲಗಳನ್ನು ನಿರ್ಮಿಸಿದವರ್‍ಯಾರು ಎಂದೆಲ್ಲಾ ಆಲೋಚಿಸುತ್ತಾ ನಿದ್ದೆಗೆ ಜಾರಿದೆ.
ಮಗೂ, ಗಮನವಿಟ್ಟು ಕೇಳು ನನ್ನ ಮಾತುಗಳನ್ನು – ನಿಮ್ಮ ಬದುಕನ್ನು ಹಸನುಗೊಳಿಸಿದವಳು ನಾನು, ಬಾಯಾರಿಕೆಯಾದಾಗ ನೀರುಣಿಸಿ, ಹಸಿವಾದಾಗ ಅನ್ನ ನೀಡಿ, ಉಡಲು ಬಟ್ಟೆ, ವಾಸಿಸಲು ಮನೆ ಕೊಟ್ಟವಳು ನಾನು. ಆದರಿಂದು, ನನ್ನ ಸ್ಥಿತಿ ಚಿಂತಾಜನಕವಾಗಿದೆ, ನೀವು ನಿರ್ಮಿಸಿದ ನಗರಗಳ ಕೊಳಚೆ, ಕೃಷಿಯಿಂದ ಹರಿದು ಬರುವ ಕ್ರಿಮಿನಾಶಕಗಳು, ಕೈಗಾರಿಕೆಯಿಂದ ಹೊರಬರುವ ರಾಸಾಯನಿಕಗಳು ನನ್ನನ್ನು ಮಲಿನಗೊಳಿಸಿವೆ. ನಿಮ್ಮ ಮಾಲಿನ್ಯವನ್ನು ತೊಳೆದೂ ತೊಳೆದೂ ನಾನು ಕಲುಷಿತಗೊಂಡಿದ್ದೇನೆ. ನನಗೆ ಉಸಿರು ಕಟ್ಟುತ್ತಿದೆ, ನಾನು ಬದುಕುಳಿಯಲು ನೆರವಾಗುತ್ತೀಯಾ? ನಾನು ಹರಿಯುವ ಹಾದಿಯಲ್ಲಿ ಗಿಡಮರಗಳನ್ನು ನೆಡು, ಕೈಗಾರಿಕೆಗಳ ಮಾಲಿನ್ಯವನ್ನು ಪರಿಷ್ಕರಿಸಿ ನಂತರ ಹೊರಗೆ ಬಿಡು. ನಾನಿಲ್ಲದೆ ನೀನು ಬದುಕುಳಿಯಲಾರೆ, ಎಚ್ಚರ. ಕಣ್ಣು ತೆರೆದಾಗ ಕಂಡದ್ದು – ಶರಾವತಿ, ತುಂಗೆ, ಭದ್ರೆ, ನೇತ್ರಾವತಿಯರು ಭೂತಾಯಿಗೆ ಹಸಿರುಡುಗೆ ಉಡಿಸುತ್ತಾ ಸಾಗುವ ದೃಶ್ಯ. ನದಿಗಳಿಂದ ಸಸ್ಯ ಸಮೃದ್ಧಿ, ಅಂತರ್ಜಲ ವೃದ್ಧಿ, ಜನ ಜೀವನದ ಸುಖ ಸಮೃದ್ಧಿಯಾಗುವುದು. ಇತ್ತೀಚಿನ ದಿನಗಳಲ್ಲಿ ಪ್ರಗತಿಯ ಹೆಸರಿನಲ್ಲಿ ನಾವು ಪರಿಸರವನ್ನು ವಿನಾಶದ ಅಂಚಿಗೆ ತಳ್ಳಿದ್ದೇವೆ. ಮರ ಗಿಡಗಳನ್ನು ಕಡಿದು, ನದೀಮೂಲಗಳನ್ನು ಒಣಗಿಸಿ, ಬರಗಾಲ ಕ್ಷಾಮಕ್ಕೆ ನಾಂದಿ ಹಾಡುತ್ತಿದ್ದೇವೆ.
ಬನ್ನಿ ಎಲ್ಲರೂ ಕೈ ಜೋಡಿಸೋಣ – ಸಾಲು ಮರದ ತಿಮ್ಮಕ್ಕನೊಂದಿಗೆ, ಮರಗಳನ್ನು ನೆಡೋಣ, ಪರಿಸರ ಸಂರಕ್ಷಿಸೋಣ.
(ಇಲ್ಲಿಗೆ ಮಲೆನಾಡಿನ ಜೀವನಾಡಿಗಳ ಕಥನ ಮುಗಿಯಿತು)
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ.
ಮಲೆನಾಡಿನ ನದಿಗಳ ವಿಶಿಷ್ಟ ವಿಚಾರಗಳನ್ನು ವಿವರವಾಗಿ ಪ್ರಸ್ತುತ ಪಡಿಸಿದ ಲೇಖನ ಸರಣಿ ಚೆನ್ನಾಗಿ ಮೂಡಿ ಬಂತು.
ಲೇಖನಗಳನ್ನು ಪ್ರಕಟಿಸಿದ್ದಕ್ಕೆ ತಮಗೆ ಧನ್ಯವಾದಗಳು
ಮಲೆನಾಡಿನ ನದಿಗಳ ವಿಚಾರಗಳನ್ನು ಸೊಗಸಾದ ನಿರೂಪಣೆಯ ನಿಮ್ಮ ಲೇಖನ ನನಗೆ ಬಹಳ ಮುದ ಕೊಟ್ಟಿತು ಗಾಯತ್ರಿ ಮೇಡಂ..
ವಂದನೆಗಳು ಸಹೋದರಿ
ಬಹಳ ಸುಂದರವಾಗಿ ಮೂಡಿ ಬಂತು ಮಲೆನಾಡಿನ ಜೀವನಾಡಿಗಳ ಕಥನ.
ವಂದನೆಗಳು ಗೆಳತಿ
ಮಲೆನಾಡಿನ ಜೀವನಾಡಿಗಳಲ್ಲಿ; ಜೀವಂತ ನದಿಗಳ ಉಗಮ, ಹರಿವು, ಸಾಗಿದ ಪಾತ್ರಗಳಲ್ಲಿ ಅವುಗಳ ಪಾತ್ರ ಎಲ್ಲವೂ ಸೇರಿ ಉತ್ಕೃಷ್ಟ, ಸಂಗ್ರಹಯೋಗ್ಯ ಲೇಖನಮಾಲೆಯಾಗಿ ಮೂಡಿಬಂದಿದೆ. ಧನ್ಯವಾದಗಳು ಮೇಡಂ.
ಅತ್ಯಂತ ಸುಂದರ ವರ್ಣನೆಗಳೊಂದಿಗೆ ಮಲೆನಾಡ ಜೀವನದಿಗಳ ವಿವರವಾದ ಲೇಖನಮಾಲೆ ಸೊಗಸಾಗಿ, ಮಾಹಿತಿಪೂರ್ಣವಾಗಿ ಮೂಡಿ ಬಂತು.
ತಮ್ಮ ಅಮೂಲ್ಯವಾದ ಅನಿಸಿಕೆಗಳಿಗೆ ಧನ್ಯವಾದಗಳು
ನದಿಗಳ ಕಥನ ಚೆನ್ನಾಗಿತ್ತು