ಧೌಮ್ಯರ ಉತ್ತಮ ಶಿಷ್ಯ ಉದ್ದಾಲಕ
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ।
ಗುರುಸಾಕ್ಷಾತ್ ಪರಮಬ್ರಹ್ಮ ತಸ್ಯೆ ಶ್ರೀ ಗುರುವೇ ನಮಃ
ಗುರುಗಳನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಿ ಆ ರೀತಿ ಕಲ್ಪಿಸಿ ಪೂಜೆ ಮಾಡಿ ಆಶೀರ್ವಾದ ಬೇಡಿಕೊಳ್ಳುವ ಪರಂಪರೆ ನಮ್ಮದು. ‘ಗುರುನೆಲೆ ಇಲ್ಲದೆ ಒರು ನೆಲೆ ಇಲ್ಲ’ ಎಂದು ಮಲೆಯಾಳದಲ್ಲಿ ಒಂದು ಸೂಕ್ತಿಯೂ ಇದೆ. ತಂದೆಯೂ ನೀನೆ ತಾಯಿಯೂ ನೀನೆ. ಬಂಧು-ಬಳಗ ಎಲ್ಲವೂ ನೀನೆ ಎಂದು ಸದ್ಗುರುವನ್ನು ಕೊಂಡಾಡುವುದನ್ನು ಕೇಳಿದ್ದೇವೆ. ಗುರು ಏನು ಹೇಳಿದರೂ ಅದನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಾ-ಗುರುಕೃಪೆ ಒದಗಿದರೆ ಅದುವೇ ಸಕಲ ಶ್ರೇಯಸ್ಸಿಗೆ ಕಾರಣ ಎಂಬುದಾಗಿ ತಿಳಿಯುವ ಕಾಲವಿತ್ತು. ಆದರೆ ಇಂತಹ ನಂಬಿಕೆಗಳೆಲ್ಲ ಇಂದಿನ ಪೀಳಿಗೆಗೆ ಊಹಿಸುವುದಕ್ಕೂ ಸಾಧ್ಯವಿಲ್ಲ. ಗುರುವು ಹೇಳಿದ ಯಾವುದೇ ಒಂದು ಕೆಲಸವನ್ನು ಸಮರ್ಪಕವಾಗಿ ಮಾಡಬೇಕು. ಆದರೆ ಆ ಪರಿಸ್ಥಿತಿಯಲ್ಲಿ ಆಗುತ್ತಿಲ್ಲ. ಅದಕ್ಕಾಗಿ ತನ್ನನ್ನು ತಾನೇ ಅರ್ಪಿಸಿಕೊಂಡವನಿದ್ದಾನೆ. ಆತನೇ ಉದ್ದಾಲಕ. ಈತನಿಗೆ ಗುರುವು ಹೇಳಿದ ಆದೇಶವೇನು? ಈತನು ಹೇಗೆ ತನ್ನನ್ನು ಅರ್ಪಿಸಿಕೊಂಡ ಎಂಬುದನ್ನು ನೋಡೋಣ.
ಪಾಂಡವ ಪುರೋಹಿತನಾದ ಧೌಮ್ಯ ಋಷಿ ( ಧೌಮ್ಯರ ಬಗ್ಗೆ ಇದೇ ಅಂಕಣದಲ್ಲಿ ಹಿಂದೆ ಬರೆದಿದ್ದೆ) ಪ್ರೀತಿಯ ಹಾಗೂ ಪ್ರಥಮ ಶಿಷ್ಯನೇ ಉದ್ದಾಲಕ. ಇವನು ಪಾಂಚಾಲದೇಶದವನು, ಈತನಿಗೆ ‘ ಅರುಣಿ’ ಎಂಬ ಹೆಸರೂ ಇದೆ. ಕುಶಿರಾಜನ ಮಗಳನ್ನು ಮದುವೆಯಾದ ಈತನಿಗೆ ಶ್ವೇತಕೇತು ಮತ್ತು ನಚಿಕೇತು ಎಂಬ ಗಂಡು ಮಕ್ಕಳೂ ‘ಸುಜಾತೆ’ ಎಂಬ ಮಗಳೂ ಇದ್ದರು.
ಅರುಣಿ ‘ಉದ್ದಾಲಕ’ನಾದ ಬಗೆ:
ಗುರುಗಳ ಆಶ್ರಮದಲ್ಲಿದ್ದುಕೊಂಡು ಅವರ ಸೇವೆಯನ್ನು ಮಾಡುತ್ತಾ ವೇದಾಧ್ಯಯನ ಮಾಡುತ್ತಿದ್ದ ಕಾಲವದು. ಅರುಣಿಯೂ ಇದಕ್ಕೆ ಹೊರತಾಗಿರಲಿಲ್ಲ. ಧೌಮ್ಯಋಷಿಗಳ ಆಶ್ರಮದಲ್ಲಿದ್ದು ವೇದಶಾಸ್ತ್ರ, ಪುರಾಣಗಳನ್ನು ಕಲಿಯುತ್ತಿದ್ದ. ಒಂದು ದಿನ ಧೌಮ್ಯರು ಶಿಷ್ಯನನ್ನು ಕರೆದು ‘ಅರುಣೀ…. ಗದ್ದೆಯ ತೂಬು ಕೊಚ್ಚಿ ಹೋಗಿ ನೀರೆಲ್ಲ ಹರಿದು ಹೋಗುತ್ತಿದೆ. ನೀನೊಮ್ಮೆ ಹೋಗಿ ನೋಡಿ ಗದ್ದೆಯ ಬದುವನ್ನು ಕಟ್ಟಿ ಬಾ‘ ಎಂದರು. ‘ಆಗಲಿ ಗುರುಗಳೇ’ ಎಂದು ಈ ಶಿಷ್ಯನು ಹಾರೆಯನ್ನೆತ್ತಿಕೊಂಡು ಗದ್ದೆಯ ಕಡೆಗೆ ನಡೆದ. ತೂಬಿನಿಂದ ಮಣ್ಣೆಲ್ಲ ಕೊಚ್ಚಿ ಹೋಗಿ ನೆಲಸಮವಾಗಿತ್ತು. ಅದನ್ನು ವೀಕ್ಷಿಸಿದವನು ಹಾರೆಯನ್ನೆತ್ತಿ ಗದ್ದೆಯನ್ನು ಅಗೆದು ಬದುವನ್ನು ಕಟ್ಟಲು ಪ್ರಯತ್ನಿಸಿದನು.ಆದರೇನು? ನೀರಿನ ಹರಿವಿನ ತೀವ್ರತೆಯಿಂದಾಗಿ ಅವನೆಷ್ಟು ಕಟ್ಟಿದರೂ ಅದು ನಿಲ್ಲುತ್ತಿರಲಿಲ್ಲ. ಮರಳಿ ಪ್ರಯತ್ನ ಮಾಡುತ್ತಿದ್ದನು. ಊಹೂಂ ತೂಬಿನಲ್ಲಿ ಮಣ್ಣು ನಿಲ್ಲದೆ ಎಲ್ಲವೂ ಕರಗಿ ಹೋಗುತ್ತಿತ್ತು. ಛಲಬಿಡದೆ ಅರುಣಿ ಪ್ರಯತ್ನಿಸುತ್ತಲೇ ಇದ್ದನು. ಮಣ್ಣು ಕರಗುತ್ತಲೇ ಇತ್ತು. ಈಗ ಏನು ಮಾಡಲಿ? ಇದನ್ನು ಇಲ್ಲಿಗೇ ಬಿಟ್ಟು ತಾನು ಹಿಂತಿರುಗಿದರೆ ಗುರುವಾಜ್ಞೆಯನ್ನು ಉಲ್ಲಂಘಿಸಿದಂತೆ, ಹೀಗೆ ಮುಂದುವರಿದರೆ ಎಷ್ಟೂಂತ ಕಟ್ಟಲಿ! ಕತ್ತಲಾಗುತ್ತಾ ಬಂತು. ಅರುಣಿ ಯೋಚಿಸಿದ. ತನ್ನೊಳಗೇ ಒಂದು ನಿರ್ಧಾರ ತಾಳಿದ, ಬದುವಿಗೆ ತಾನೇ ಅಡ್ಡವಾಗಿ ಮಲಗಿದ ಇನ್ನು ಮಣ್ಣಿನಂತೆ ತಾನು ಕರಗಲಾರೆ! ಬದುವು ಕಟ್ಟಿತು. ನೀರಿನ ಹರಿವು ನಿಂತಿತೆಂದು ಸಂತೋಷದಿಂದ ಇದ್ದ.
ಕತ್ತಲಾದರೂ ಅರುಣಿಯನ್ನು ಕಾಣುವುದಿಲ್ಲವೆಂದು ಧೌಮ್ಯರು ಇತರ ಶಿಷ್ಯರನ್ನು ಕೂಡಿಕೊಂಡು ಗದ್ದೆಯ ಕಡೆಗೆ ಬಂದರು. ಶಿಷ್ಯನನ್ನು ಕಾಣಿಸಲಿಲ್ಲ. ‘ಅರುಣೀ… ಅರುಣೀ…. ಎಲ್ಲಿರುವೆ ಮಗು? ಎಂದು ಕರೆದರು. ಆ ಕರೆ ಬದುವಿಗೆ ಅಡ್ಡಲಾಗಿ ಮಲಗಿದ್ದ ಅರುಣಿಗೆ ಕೇಳಿಸಿತು. ‘ಗುರುಗಳೇ ನಾನಿಲ್ಲಿ ಇದ್ದೇನೆ’ ಎಂದು ಗಟ್ಟಿಯಾಗಿ ಹೇಳಿದ್ದ. ಗುರುಗಳು ತನ್ನ ಪ್ರಿಯ ಶಿಷ್ಯನ ಸ್ವರ ಬಂದೆಡೆಗೆ ನೋಡಿ ಧಾವಿಸಿದರು. ಮಲಗಿದ್ದ ಅರುಣಿಯನ್ನುಕಂಡರು. ‘ಇದೇನು ಮಗು ಇಲ್ಲಿ ಹೀಗೆ ಮಲಗಿರುವೆ?” ಎಂದರು. ಅರುಣಿ ನಡೆದ ಸಂಗತಿಯನ್ನು ವಿವರವಾಗಿ ತಿಳಿಸಿದ. ಗುರುಗಳಿಗೆ ತುಂಬ ಸಂತಸವಾಯ್ತು.
ತಾನೇ ಶಿಷ್ಯನನ್ನು ಹಿಡಿದೆತ್ತಿ ತಲೆ ನೇವರಿಸಿ ‘ನಿನ್ನ ನಿಷ್ಠೆ, ಕಾರ್ಯ ತತ್ಪರತೆಯಿಂದ ನನಗೆ ಹೃದಯ ತುಂಬಿದೆ. ನೀನು ಬ್ರಹ್ಮಜ್ಞಾನಿಯಾದೆ. ನೀನು ಇನ್ನು ಕಲಿಯಬೇಕಾದ್ದು ಏನೂ ಉಳಿದಿಲ್ಲ. ಗದ್ದೆಯ ಬದುವನ್ನೊಮ್ಮೆ ಕಟ್ಟಿ ಪುನಃ ಭೇದಿಸಿಕೊಂಡು ಬಂದುದರಿಂದ ಇನ್ನು ಮುಂದೆ ನೀನು ‘ಉದ್ದಾಲಕ’ ಎಂಬ ಹೆಸರಿನಿಂದ ಕರೆಯಲ್ಪಡುವೆ’ ಎಂದು ಹರಸಿದರು. ಕರ್ತವ್ಯ ವಿಚಲಿತನಾಗದೆ ತಾನೊಪ್ಪಿದ ಕೆಲಸವನ್ನು ಪೂರೈಸುವುದಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಂಡ ಈತನು ಮುಂದೆ ‘ಉದ್ದಾಲಕ’ನೆಂಬಮಹಾಋಷಿಯಾಗಿ ಲೋಕಕ್ಕೆ ಮಾದರಿಯಾದನು.
–ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಧನ್ಯವಾದಗಳು. ಅಡ್ಮಿನರ್ ಹೇಮಮಾಲಾ ಹಾಗೂ ಓದುಗರಿಗೆ.
ಚೆನ್ನಾಗಿದೆ
ಉದ್ದಾಲಕನ ಕಥೆ ಚೆನ್ನಾಗಿ ಮೂಡಿಬಂದಿದೆ ವಿಜಯಾ ಮೇಡಂ
ಗುರುಗಳ ವಿಧೇಯ ವಿದ್ಯಾರ್ಥಿ ಉದ್ದಾಲಕನ ಕಥೆಯು ಉತ್ತಮ ಸಂದೇಶವಾಹಕವೂ ಹೌದು…ಧನ್ಯವಾದಗಳು ವಿಜಯಕ್ಕ.
ಬದ್ಧತೆ ಎಂದರೆ ಹೇಗಿರಬೇಕು ಎಂಬುದರ ಕುರಿತಾದ ಉದ್ದಾಲಕನ ಸೊಗಸಾದ ಪೌರಾಣಿಕ ಕಥೆಯ ನಿರೂಪಣೆ.