ಶ್ರವಣಕುಮಾರನ ಪಿತೃಪೂಜನೆ

Share Button


ಋಣಾನುಬಂಧ ರೂಪೇಣ ಪಶು, ಪತಿ, ಸುತಾಲಯಾ’ ಎಂಬ ಸೂಕ್ತಿ ಇದೆ . ಒಳ್ಳೆಯ ಗೋಸಂಪತ್ತು, ಇಚ್ಛೆಯರಿತು ನಡೆಯುವ ಪತ್ನಿ, ಸತ್ಪುತ್ರರು, ವಾಸಕ್ಕೆ ಯೋಗ್ಯವಾದ ಮನೆ ಹೀಗೆ ಜೀವನಕ್ಕೆ ಅತೀ ಅಗತ್ಯವೆನಿಸುವ ಬಂಧಗಳು ದೊರಕಬೇಕಿದ್ದರೆ ಋಣಾನುಬಂಧ ಬೇಕೇಬೇಕು. ಇಂತಹ ಅದೃಷ್ಟ ಎಲ್ಲರಿಗೂ ಸಿಗಲಾರದು. ಮನದಿಚ್ಛೆಯರಿತು ನಡೆವ ಸತಿಯಿದ್ದೊಡೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ, ಮನದ ಅಭಿಲಾಷೆಯನ್ನರಿತು ನಡೆವ ಪತ್ನಿ ಇದ್ದರೆ ಗೃಹಸ್ಥನಿಗೆ ತನ್ನ ವಾಸದ ಮನೆಯೇ ಸ್ವರ್ಗಕ್ಕೆ ಸಮಾನ ಎಂದು ಸರ್ವಜ್ಞ ಕವಿ ಅಭಿಪ್ರಾಯ ಪಟ್ಟಿದ್ದಾನೆ.

ಒಬ್ಬ ಗೃಹಸ್ಥಾಶ್ರಮ ಸ್ವೀಕರಿಸಿದವನಿಗೆ ಮಕ್ಕಳು ಬೇಕು ನಿಜ, ಆದರೆ ಎಂತಹ ಮಕ್ಕಳು ? ತಮ್ಮ ತಮ್ಮ ರೆಕ್ಕೆ ಬಲಿಯುವ ತನಕ ಅವರಿಗೆ ಅಪ್ಪ-ಅಮ್ಮನ ನೆನಪಾ? ತಮ್ಮ ಕರ್ತವ್ಯ ಬಾಧ್ಯತೆಯನ್ನು ಅರಿಯುವವರಾ? ಅಥವಾ ಒಂದಷ್ಟು ನಿಗದಿ ಪಡಿಸಿದ ದುಡ್ಡು ಎಸೆದು ಬಿಟ್ಟು ನಿಶ್ಚಿಂತೆಯಿಂದಿರುವವರಾ? ಎಂಬುದು ಈಗ ವಾಸ್ತವ ಸಮಾಜದಲ್ಲಿ ಗಮನಿಸಬೇಕಾದ ಅಂಶ.

ಆಧುನಿಕ ಸಮಾಜದಲ್ಲಿ ದಂಪತಿಗಳಿಗೆ ಒಂದು ಅಥವಾ ಎರಡು ಮಗು. ಆ ಮಕ್ಕಳಿಗೆ ಕಷ್ಟಪಟ್ಟು ವಿದ್ಯಾಭ್ಯಾಸ (ತಮ್ಮಿಚ್ಛೆಯಂತೆ ತುರುಕಿ) ಕೊಡಿಸಿ, ಅವರು ಒಂದು ಉದ್ಯೋಗ ಹಿಡಿದು ನೆಲೆಯೂರುವುದು ಮಹಾ ನಗರಗಳಲ್ಲಿಯೋ ವಿದೇಶದಲ್ಲೇ ಆಗಿರುತ್ತದೆ. ಅವರ ಅಪ್ಪ-ಅಮ್ಮ ವೃದ್ದಾಪ್ಯಕ್ಕೆ ಬಂದವರು, ಹೊಲ -ಮನೆ ಇದ್ದವರು ಹಳ್ಳಿಯಲ್ಲಿ, ಒಂಟಿಯಾಗಿಯೋ ಕಾಲ ಕಳೆಯಬೇಕು. ಉದ್ಯೋಗದಲ್ಲಿದ್ದು ನಿವೃತ್ತಿ ಹೊಂದಿದವರು ಪೇಟೆ ಮನೆಯಲ್ಲಿ ಅಥವಾ ಅನಾಥಾಶ್ರಮದಲ್ಲಿ ಕಾಲದೂಡಬೇಕು. ವೃದ್ದಾಶ್ರಮಕ್ಕೋ, ಅನಾಥಾಶ್ರಮಕ್ಕೋ ಮಾಡಿ ಅಲ್ಲಿಯ ಶುಲ್ಕ ಒಂದಿಷ್ಟು ಕೊಟ್ಟಿತೂಂದ್ರೆ ತಮ್ಮ ಕರ್ತವ್ಯ ತೀರಿತು ಎಂಬ ಭಾವನೆ ಸರ್ವತ್ರ ವ್ಯಾಪಿಸಿದೆ.

ದೇವಋಣ, ಋಷಿಋಣ, ಪಿತೃಋಣ ಈ ಮೂರು ಋಣತ್ರಯಗಳು ಮನುಷ್ಯನ ಮೇಲೆ ಇವೆಯಂತೆ. ಅವುಗಳಲ್ಲಿ ದೇವಋಣವನ್ನು ಭಕ್ತಿಮಾರ್ಗದಲ್ಲಿ, ಪೂಜಾ ಕೈಂಕರ್ಯದಲ್ಲಿ, ಜನತಾ ಸೇವೆಯಿಂದ ತೀರಿಸಬಹುದು. ಇನ್ನು ಋಷಿ ಋಣ-ಗುರು ಆದೇಶದಂತೆ ನಡೆಯುವುದರಿಂದ, ಫಲಾಪೇಕ್ಷೆಯಿಲ್ಲದೆ ಬೇರೆಯವರಿಗೆ ತಾನು ಕಲಿತ ವಿದ್ಯೆಯನ್ನು ಹೇಳಿಕೊಡುವುದರಿಂದ, ಗುರುದಕ್ಷಿಣೆ ಕೊಡುವುದು ಮುಂತಾದ ಎಲ್ಲಾ ವಿಷಯಗಳಿಂದಲೂ ಸ್ವಲ್ಪ ತೀರಿಸಬಹುದು. ಆದರೆ ತೀರಿಸಲಾಗದ ಒಂದು ಋಣವಿದೆ. ಅದುವೇ ಪಿತೃಋಣ. ಅಂದರೆ…. ಮಾತಾ-ಪಿತರ ಋಣ. ಅದರಲ್ಲೂ ಪಿತನ ಋಣವನ್ನಾದರೂ ಸತ್ಪುತ್ರರನ್ನು ನೀಡುವ ಮೂಲಕ, ವೃದ್ಧಾಪ್ಯದಲ್ಲಿ ಸೇವೆ ಮಾಡುವ ಮೂಲಕ ಕಿಂಚಿತ್ ಆದರೂ ತೀರಬಹುದು. ಆದರೆ ಮಾತೆಯ ಋಣ ತೀರುವ ಮಾತೇ ಇಲ್ಲ. ಅರ್ಥಾತ್ ಹೆತ್ತ ಮಾತೆಯಿಂದ ಋಣಮುಕ್ತರಾಗುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ನಮ್ಮ ಹಿರಿಯರು.

ತಂದೆ-ತಾಯಿಯರನ್ನು ಹೇಗೆ ನೋಡಿಕೊಳ್ಳಬೇಕು ಎಂಬುವಂತಾದ್ದು ದೇವತಾಪುರುಷ ಶ್ರೀರಾಮ ನಮಗೆ ಕಲಿಸುತ್ತಾನೆ. ಪಿತೃವಾಕ್ಯ ಪರಿಪಾಲನೆಯ ಅಂಶವನ್ನು ರಾಮ ನಮಗೆ ತಿಳಿಸಿದರೆ; ಇನ್ನೋರ್ವ ಸತ್ಪುತ್ರ ಶ್ರವಣಕುಮಾರ ತನ್ನ ವೃದ್ಧ ಮಾತಾ- ಪಿತರನ್ನು ಅವರ ಬಯಕೆಯಂತೆ, ಅದೂ ಕಣ್ಣು ಕಾಣದೆ ನಡೆಯಲಾರದೆ ಇರುವಂತಹ ಪರಿಸ್ಥಿತಿಯಲ್ಲಿ ಹೇಗೆ ತೀರ್ಥಯಾತ್ರೆಗೆ ಕರೆದೊಯ್ದ ಎಂಬುದನ್ನು ತಿಳಿಯೋಣ.

ಪುರಾತನ ಕಾಲದಲ್ಲಿ ತಾಂಡವ ಮುನಿಯೆಂಬ ಒಬ್ಬ ಬ್ರಾಹ್ಮಣನಿದ್ದನು. ವಿದ್ಯಾಪಾರಂಗತನಾಗಿದ್ದ ಈತನು ಓರ್ವ ಕನ್ನಿಕೆಯನ್ನು ವಿವಾಹವಾಗಿ ಇಬ್ಬರೂ ಸದಾಕಾಲ ಮಹಾವಿಷ್ಣುವನ್ನು ಆರಾಧಿಸಿದ ಫಲವಾಗಿ ಇಳಿವಯಸ್ಸಿನಲ್ಲಿ ಅವರಿಗೊಬ್ಬ ಮಗ ಹುಟ್ಟಿದ. ಅವನಿಗೆ ‘ಶ್ರವಣಕುಮಾರ’ನೆಂದು ಹೆಸರಿಟ್ಟರು. ದಿನಗಳೆದಂತೆ ವೃದ್ಧರಿಬ್ಬರಿಗೂ ಕಣ್ಣಿನ ಶಕ್ತಿ ಕುಂದಿ ಹೋಗಿ ಕಣ್ಣು ಕಾಣಿಸದಾಯಿತು. ಬಾಲಕ ಶ್ರವಣ ಕುಮಾರ ತನ್ನ ತಂದೆ-ತಾಯಿಗಳ ಸೇವೆಯನ್ನು ಭಕ್ತಿಯಿಂದಲೂ ಮುತುವರ್ಜಿಯಿಂದಲೂ ಮಾಡುತ್ತಿದ್ದ. ಬಾಲಕ ಬೆಳೆದು ಯೌವನಾವಸ್ಥೆ ತಲುಪಿದಂತೆ ವೃದ್ಧರಿಬ್ಬರಿಗೂ ತೀರ್ಥಯಾತ್ರೆ ಮಾಡಿ ಪುಣ್ಯ ಗಳಿಸಬೇಕೆಂಬ ಇಚ್ಛೆಯುಂಟಾಯಿತು. ಆದರೆ ಕಣ್ಣು ಕಾಣಿಸಲೊಲ್ಲದು. ದೂರದ ಪುಣ್ಯಕ್ಷೇತ್ರಗಳಿಗೆ ಹೋಗುವುದಾದರೂ ಹೇಗೆ ಈಗಿನಂತೆ ವಾಹನ ಸೌಕರ್ಯವೇನು ಇರಲಿಲ್ಲವಲ್ಲಾ! ಶ್ರವಣ ಯೋಚಿಸಿ ತಕ್ಕಡಿಯಂತಹ ಒಂದು ಉಪಕರಣವನ್ನು ಮರದಿಂದ ತಯಾರಿಸಿದ. ಇದಕ್ಕೆ ‘ಕಾವಡಿ’ಯೆಂದು ಕರೆಯುತ್ತಾರೆ. ಇದರ ಎರಡು ಸೀಟುಗಳಲ್ಲಿ ಮಾತಾ-ಪಿತ ಇಬ್ಬರನ್ನೂ ಕುಳ್ಳಿರಿಸಿಕೊಂಡು ಪ್ರಯಾಣ ಹೊರಟ, ಗುಡ್ಡ, ಬೆಟ್ಟ, ನದಿಗಳನ್ನು ದಾಟುತ್ತಾ ಮುಂದೆ ಸಾಗಿದ. ಜನನಿ-ಜನಕರ ಬಯಕೆಯನ್ನು ಈಡೇರಿಸುವ ಭಾಗ್ಯ ತನಗೆ ದೊರೆಯಿತಲ್ಲಾ ಎಂಬ ಸಂತೋಷದಲ್ಲಿ ಅವನಿಗೆ ಆಯಾಸವಾಗಲೇ ಇಲ್ಲ.

ಯಾವುದೇ ಶ್ರಮದ ಕೆಲಸವನ್ನಾದರೂ ಶ್ರಮದ ಮಗ್ಗುಲಿನಿಂದಲೇ ನೋಡದೆ ಸಕಾರಾತ್ಮಕವಾಗಿ ಚಿಂತಿಸಿದರೆ ಅದೊಂದು ಹೊರೆಯೆನಿಸುವುದಿಲ್ಲ. ಅಲ್ಲವೇ? ಶ್ರವಣನಿಗೂ ಹಾಗೆಯೇ ಆಯಿತು. ತಾಂಡವ ದಂಪತಿಗಳಿಗೂ ತಮ್ಮ ಪುತ್ರನ ಬಗ್ಗೆ ಹೆಮ್ಮೆಯನಿಸಿ ಧನ್ಯತಾಭಾವ ಉಂಟಾಯ್ತು. ಹಸಿದರೆ ಒಂದೆಡೆ ಮರದ ನೆರಳಿನಲ್ಲಿ ವಿಶ್ರಮಿಸಿ ಕಾಡಿನಲ್ಲಿರುವ ಗೆಡ್ಡೆ ಗೆಣಸೋ, ಹಣ್ಣು ಹಂಪಲೋ ತಂದು ಕೊಡುವುದು,ಬಾಯಾರಿದರೆ ಜಲಾಶಯದ ಬಳಿ ಕುಳಿತು ನೀರಡಿಕೆ ನೀಗಿಸುವುದು ಹೀಗೆ ಮಾಡುತ್ತಾ ಪ್ರಯಾಣ ಬೆಳೆಸುತ್ತಿದ್ದ ಶ್ರವಣ.

ಹೀಗಿರಲು ಒಂದು ರಾತ್ರಿ ಪ್ರಯಾಣಿಸುತ್ತಿದ್ದಾಗ ವೃದ್ಧರಿಗೆ ತೃಷೆಯಿಂದ ಗಂಟಲೊಣಗಿ ಬಂತು. ಒಂದು ಕೊಳದ ಸನಿಹ ಕಾವಡಿಯನ್ನಿಸಿಳಿದ ಶ್ರವಣಕುಮಾರ ತನ್ನ ಕಮಂಡಲುವನ್ನು ಹಿಡಿದು ನೀರು ತರಲು ಕೊಳದತ್ತ ಧಾವಿಸಿದ. ನೀರು ಮೊಗೆದ. ದಶರಥ ಮಹಾರಾಜನು ಬೇಟೆಯಾಡಿ ದಣಿದವನು ಅಲ್ಲೆಲ್ಲೋ ದೂರದಲ್ಲಿ ವಿಶ್ರಮಿಸುತ್ತಿದ್ದವನಿಗೆ ಕೊಳದ ಬದಿಯಿಂದ ಗುಳು ಗುಳು ಶಬ್ದ ಕೇಳಿ, ಇದು ಆನೆ ನೀರು ಕುಡಿಯುವ ಸದ್ದು ಎಂದೆಣಿಸಿ ಶಬ್ದವೇದಿ ತಿಳಿದಿದ್ದ ರಾಜ ಬಾಣ ಹೂಡಿದ. ಅದು ಹೋಗಿ ಅವನ ಎದೆಗೆ ನಾಟಿತು. ಆತ ನೋವಿನಿಂದ ಚೀರುತ್ತ ಕುಸಿದು ಬಿದ್ದನು. ಇದು ಆನೆಯಲ್ಲಿ ಬೇರೇನೋ ಪ್ರಮಾದವಾಗಿ ಹೋಯಿತೆಂದು ಬಗೆದ ಮಹಾರಾಜ ಧಾವಿಸಿ ಬಂದು ನೋಡಿದಾಗ ಮುನಿಪುತ್ರ ರಕ್ತದ ಮಡುವಿನಲ್ಲಿ ಹೊರಳುತ್ತಿದ್ದ . ತನ್ನಿಂದ ತಪ್ಪಾಗಿ ಹೋಯ್ತಂದು ಕ್ಷಮೆ ಬೇಡಿದ. ಪ್ರಾಣ ಸಂಕಟದಲ್ಲಿದ್ದವ ತೊದಲುತ್ತಾ ಹೇಳಿದ, ನನ್ನ ತಂದೆ-ತಾಯಿಗಳ ವೃದ್ದಾಪ್ಯದ ಆಸೆಯನ್ನು ಈಡೇರಿಸುವುದಕ್ಕಾಗಿ ಕಣ್ಣು ಕಾಣಿಸದೆ ನಡೆಯಲಾರದ ಅವರನ್ನು ಕಾವಡಿಯಲ್ಲಿ ಹೊತ್ತುಕೊಂಡು ತೀರ್ಥಯಾತ್ರೆಗೆ ಹೊರಟವನು, ಈ ಕೊಳಕ್ಕೆ ನೀರು ಮೊಗೆಯಲು ಬಂದವನು ನಿನಗೆ ನಾನು ಯಾವ ಅಪರಾಧವನ್ನು ಮಾಡಿದ್ದೇನೆ? ನನ್ನನ್ನು ಕೊಂದೆ ಮಾತ್ರವಲ್ಲ; ನನ್ನ ಮಾತಾ-ಪಿತರ ಆಸೆಯನ್ನೂ ನಾಶಮಾಡಿದೆ ಎಂದು ಹೇಳುತ್ತಾ ಶ್ರವಣಕುಮಾರ ಪ್ರಾಣ ತೊರೆದ.

ದಶರಥ ತನ್ನ ತಪ್ಪಿಗಾಗಿ ಪರಿತಾಪ ಪಡುತ್ತಾ ವೃದ್ಧ ದಂಪತಿಯಿದ್ದೆಡೆಗೆ ಬಂದ ಮಗನು ತರುವ ನೀರಿಗಾಗಿ ಕಾಯುತ್ತಿದ್ದವರು ಮಗನೆಂದೇ ತಿಳಿದು ಮಾತಾಡಿದರು. ಅವರನ್ನು ನೋಡಿ ದಶರಥನ ಎದೆಗೆ ಕೊಳ್ಳಿ ಇಟ್ಟಂತಾಯಿತು. ಸಾವರಿಸಿಕೊಂಡು ನಡೆದ ಘಟನೆಯನ್ನು ತಿಳಿಸಿದ. ಮಗ ಸತ್ತು ಹೋದ ಸಂಗತಿ ತಿಳಿದ ಅವರಿಗೆ ನಿಂತ ನಿಲುವೇ ಕುಸಿದಂತಾಯಿತು. ನಮ್ಮ ಕೊನೆಗಾಲದಲ್ಲಿ ನಮ್ಮ ಪುತ್ರನನ್ನು ನಮ್ಮಿಂದ ಅಗಲಿಸಿದೆಯಲ್ಲ! ನಿನಗೂ ನಿನ್ನ ಕೊನೆಗಾಲಕ್ಕೆ ನಿನ್ನ ಮಗನು ನಿನ್ನಿಂದ ದೂರವಾಗಲಿ ಎಂದು ಶಾಪವಿತ್ತು ಅಸುನೀಗಿದರು. ಈ ಶಾಪದ ಫಲವೇ ಮುಂದೆ ದಶರಥನಿಗೆ ಕೊನೆಗಾಲಕ್ಕೆ ಶ್ರೀರಾಮನು ದೂರವಾಗಲು ಕಾರಣವಾಯಿತು ಎಂಬ ಕತೆಯಿದೆ. ಅಂತೂ ಪಿತೃಋಣ ತೀರಿಸಲು ಹೊರಟ ಶ್ರವಣಕುಮಾರನ ಭಕ್ತಿ ಅನನ್ಯವಾದುದು, ಆಚಂದ್ರಾರ್ಕ ಉಳಿಯಿತು. ಲೋಕಮಾನ್ಯವಾಯಿತು.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

  1. Vijayasubrahmanya says:

    ಸುರಹೊನ್ನೆ ಅಡ್ಮಿನರ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. ಉತ್ತಮ ಸಂದೇಶ ಸಾರುವ ಕಥೆ..
    ಅದರ. ಜೊತೆಗೆ..ಎಚ್ಚರಿಕೆಯಿಂದ. ಕೆಲಸಾಡಬೇಕೆಂಬ..ಸೂಚನೆ..ಉತ್ತಮ ನಿರೂಪಣೆ.. ಧನ್ಯವಾದಗಳು ಮೇಡಂ

  4. ಶ್ರವಣಕುಮಾರನ ಕಥೆ ಈಗಿನ ಜನಾಂಗಕ್ಕೆ ಮಾದರಿಯಾಗಿದೆ ಧನ್ಯವಾದಗಳು

  5. . ಶಂಕರಿ ಶರ್ಮ says:

    ಪಿತೃಋಣ ತೀರಿಸಿದ ಶ್ರವಣಕುಮಾರನ ಕಥೆಯು ಇಂದಿನ ಯುವಜನಾಂಗಕ್ಕೆ ಪಾಠ ಹೇಳುವಂತಿದೆ…ಧನ್ಯವಾದಗಳು ವಿಜಯಕ್ಕ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: