ಜವರಾಯ ಬಂದು ಕರೆದಾಗ…

Share Button

ಮುಂಜಾನೆ ಆರೂವರೆಯಾಗಿತ್ತು. ಅಂದು ಶುಕ್ರವಾರವಾಗಿದ್ದರಿಂದ ಯೋಗಕೇಂದ್ರದಲ್ಲಿ ಧ್ಯಾನ ಮತ್ತು ಪ್ರಾಣಾಯಾಮದ ತರಗತಿ ನಡೆದಿತ್ತು. ಶೀಲ ಮೇಡಂ ಜೊತೆ ಎಲ್ಲರೂ ಒಟ್ಟಾಗಿ ಪಂಚಾಕ್ಷರೀ ಮಂತ್ರವನ್ನು ಜಪಿಸುತ್ತಿದ್ದೆವು. ಇದ್ದಕ್ಕಿದ್ದಂತೆ ನನ್ನ ಪಕ್ಕದಲ್ಲಿ ಪಾರಿವಾಳವೊಂದು ಪಟಪಟನೇ ರೆಕ್ಕೆ ಬಡಿಯುತ್ತಾ ದೊಪ್ಪೆಂದು ಕೆಳಗೆ ಬಿತ್ತು. ತಕ್ಷಣವೇ ಜಯಮ್ಮ ಪಾರಿವಾಳವನ್ನು ಮಗುವಿನಂತೆ ಎತ್ತಿಕೊಂಡರು, ವೀಣಾ ನೀರು ತಂದು ಹಕ್ಕಿಯ ಬಾಯಿಗೆ ಹನಿಸಿದಳು. ಆದರೆ ಪಾರಿವಾಳವು ತನ್ನ ಇಹಲೋಕದ ಪಯಣ ಮುಗಿಸಿತ್ತು.

ಹುಟ್ಟು ಸಾವಿನ ನಡುವಿನ ಅಂತರವಾದರೂ ಎಷ್ಟು? ಜವರಾಯನ ಕರೆ ಬರುವವರೆಗೂ ನೀಲ ಆಗಸದಲ್ಲಿ ಸ್ವಚ್ಛಂದವಾಗಿ ಹಾರುತ್ತಿದ್ದ ಪುಟ್ಟ ಹಕ್ಕಿ, ಒಂದೇ ಕ್ಷಣದಲ್ಲಿ ಕೊನೆಯುಸಿರೆಳೆದಿತ್ತು. ಅದು ನೆಲಕ್ಕೆ ಬಿದ್ದಾಗ ಮುದುಡಿದ್ದ ರೆಕ್ಕೆಗಳು ನಿಧಾನವಾಗಿ ಹರಡಿದವು, ಪುಟ್ಟ ತಲೆ ಪಕ್ಕಕ್ಕೆ ವಾಲಿತ್ತು. ಉಸಿರು ನಿಂತ ಮೇಲೆ ಹಕ್ಕಿಯ ಅಸ್ತಿತ್ವ ಎಲ್ಲಿ ಹೋಯಿತು?

ಹುಟ್ಟಿದ ಮೇಲೆ ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇ ಬೇಕು’, ಎಂದು ಸಾವಿನ ಮನೆಯಲ್ಲಿ ಎಲ್ಲರೂ ಹೇಳುವ ಮಾತುಗಳು. ಆದರೆ ನಾನು ಸಾಯುವೆನೇ..ಎಂದು ನನ್ನನ್ನು ನಾನು ಕೇಳಿಕೊಂಡರೆ ಬರುವ ಉತ್ತರ ಏನು ಗೊತ್ತೆ? ಛೇ, ಛೇ, ಖಂಡಿತಾ ಇಲ್ಲ. ನಾನು ಸಾವಿಲ್ಲದ ಸರದಾರ. ಹುಟ್ಟು ಸಾವಿನ ನಡುವೆ ಇರುವ ಬದುಕಾದರೂ ಎಂತಹ ಜಾದೂಗಾರ ಗೊತ್ತೇ? ಒಂದರೆಘಳಿಗೆಯೂ ಬದುಕು ನಶ್ವರ ಎನ್ನಿಸುವುದೇ ಇಲ್ಲ. ಬದುಕಿನ ಎಲ್ಲಾ ಹಂತಗಳೂ ಸೊಗಸಾದ ಕವನಗಳಂತೆ ತೋರುವುವು. ಹುಟ್ಟುವಾಗ ಚೀರಿ ಚೀರಿ ಅಳುವ ಮಗು, ಅಮ್ಮನ ಚೈತನ್ಯವನ್ನು ಹೀರುತ್ತಾ ಉಸಿರಾಟದ ಕ್ರಿಯೆ ಕಲಿಯುವುದು ಸೋಜಿಗದ ಸಂಗತಿಯಲ್ಲವೇ? ಕ್ಷಣಕ್ಕೊಂದು ರಂಗಿನ ಚಿತ್ತಾರವನ್ನು ಮೂಡಿಸುವ ಬದುಕಿನ ಪರಿ ಅತ್ಯದ್ಭುತ.

ಬೆಳಗಾಗೆದ್ದು ತಿರುಗಾಡಲು ಹೊರಟೆ. ಮನದ ತುಂಬಾ ಮಡಿದ ಪಾರಿವಾಳದ ಚಿತ್ರವೇ ತುಂಬಿತ್ತು. ಮಾರುಕಟ್ಟೆಯ ಪ್ರಾಂಗಣದ ರಸ್ತೆಯ ಎರಡೂ ಬದಿಯಲ್ಲಿ ಹಸಿರು ಉಕ್ಕಿಸುವ ಹೊಂಗೆ ಮರಗಳು, ಆ ಮರಗಳ ರೆಂಬೆ ಕೊಂಬೆಗಳಲ್ಲಿ ಕುಳಿತು ಮಧುರವಾಗಿ ಉಲಿಯುವ ಹಕ್ಕಿಗಳು, ಮೆಲ್ಲಮೆಲ್ಲನೆ ಸುಳಿಯುತ್ತಿದ್ದ ತಂಗಾಳಿ ಹಿಮ್ಮೇಳ ಹಾಡುವಂತಿತ್ತು. ಮೂಡಣದಲ್ಲಿ ಉದಯಿಸುತ್ತಿರುವ ರವಿ ತನ್ನ ಹೊಂಗಿರಣಗಳಿಂದ ಭೂತಾಯಿಯನ್ನು ಅಲಂಕರಿಸಿದ್ದ. ಈ ಸುಂದರ ಮುಂಜಾವಿನಲ್ಲಿ ಬದುಕು ಹೇಗೆ ತಾನೆ ನಶ್ವರವೆನ್ನಿಸಲು ಸಾಧ್ಯ?

ನಾನು ಸಾಗುತ್ತಿದ್ದ ಹಾದಿಯಲ್ಲಿ ಚಿಲಿಪಿಲಿಗುಟ್ಟುವ ಮಕ್ಕಳ ಕಲರವ ಹಿತವಾಗಿತ್ತು. ಸ್ಕೇಟಿಂಗ್ ಆಡುತ್ತಾ ಕೇಕೆ ಹಾಕುವ ಮಕ್ಕಳು ಒಂದೆಡೆ, ಪುಟಾಣಿ ಸೈಕಲ್ ಮೇಲೆ ಸವಾರಿ ಹೊರಟ ಮಕ್ಕಳು, ಇಳಿಜಾರು ರಸ್ತೆಗಳಲ್ಲಿ ವೇಗವಾಗಿ ಸೈಕಲ್ ತುಳಿಯುತ್ತಾ ‘ನಾನೇ ರಾಜಕುಮಾರ’ ಎಂಬ ಠೀವಿಯಲ್ಲಿ ಮುನ್ನುಗ್ಗುವ ಮಕ್ಕಳು ಇನ್ನೊಂದೆಡೆ, ಹೂಂ, ಹಾಂ, ಎನ್ನುತ್ತಾ ಕರಾಟೆ ಕಲಿಯುತ್ತಿರುವ ಮಕ್ಕಳು ಮತ್ತೊಂದೆಡೆ – ಅಬ್ಬಾ ಈ ಮಕ್ಕಳಲ್ಲಿ ಎಷ್ಟೊಂದು ಉತ್ಸಾಹ, ಲವಲವಿಕೆ. ಅಲ್ಲಿ ಮರದ ಕೆಳಗಿದ್ದ ಕಟ್ಟೆಯ ಮೇಲೆ ಕುಳಿತು, ಕುಣಿದಾಡುತ್ತಿದ್ದ ಮಕ್ಕಳನ್ನು ನೋಡುತ್ತಾ, ಅವರಿಂದ ಹೊಮ್ಮುತ್ತಿದ್ದ ಚೈತನ್ಯದ ಅಲೆಗಳನ್ನು ಕೆಲವು ಕ್ಷಣ ಆಸ್ವಾದಿಸಿದೆ, ನನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ.

ಮುಂದೆ ಸಾಗಿದ ಹಾಗೆಯೇ ಕಂಡರು ಯುವಜೋಡಿಗಳು. ಕೊವಿಡ್ – 19 ಬಂದಾಗಿನಿಂದ ‘ಮನೆಯಿಂದಲೇ ಕೆಲಸ’ ಎಂಬ ಬದಲಾವಣೆಯೊಂದಿಗೇ ತಮ್ಮ ತಮ್ಮ ಗೂಡಿಗೆ ಹಿಂದಿರುಗಿರುವ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಬೆಳಗಾಗೆದ್ದು ಜಾಗಿಂಗ್ ಸೂಟ್ ಧರಿಸಿ ಓಡುತ್ತಿದ್ದರು. ಕೆಲವರು ಅಲ್ಲಿದ್ದ ಜಿಮ್‌ನಲ್ಲ್ಲಿ ಕಸರತ್ತು ಮಾಡುತ್ತಿದ್ದರು. ನಿಂತಲ್ಲೇ ನಿಲ್ಲುವ ಸೈಕಲ್ ತುಳಿಯುವ ಮಂದಿ, ನಡೆದೂ ನಡೆದೂ ಸುಸ್ತಾದರೂ ಒಂದು ಹೆಜ್ಜೆಯೂ ಮುಂದೆ ಹೋಗದೆ ಇರುವ ಯಂತ್ರದ ಮೇಲೆ ನಡೆಯುವ ಮಂದಿಯನ್ನು ನೋಡಿದರೆ ಅಯ್ಯೋ ಪಾಪ ಎಂದೆನಿಸುತ್ತಿತ್ತು. ಪಕ್ಕದ ಬೀದಿಯಲ್ಲಿರುವ ಅಂಗಡಿಗೆ ಹೋಗಲೂ ಬೈಕ್‌ನಲ್ಲಿಯೇ ತೆರಳುವ ಮಂದಿ ಇವರು. ಇರಲಿ ಬಿಡಿ, ಇದು ಇಂದಿನ ಫ್ಯಾಷನ್ ಅಲ್ಲವೇ? ಇನ್ನು ಷಟಲ್ ಬ್ಯಾಡ್‌ಮಿಂಟನ್ ಆಡುತ್ತಾ ಬೆವರು ಹರಿಸುವ ಯುವಕರು ಬಹಳ ಮಂದಿ. ಹೀಗೆ ದೈಹಿಕ ಸಧೃಢತೆ ಪಡೆಯುವ ಹಂಬಲ ಇವರದ್ದು. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿ, ಹುಚ್ಚು ಹೊಳೆಯಂತೆ ಕಳೆದಿದ್ದ ನನ್ನ ಯೌವ್ವನದ ದಿನಗಳನ್ನು ಸ್ಮರಿಸುತ್ತಾ ಮುಂದೆ ಸಾಗಿದೆ.

ಜೀವನದ ಎರಡು ಅವಸ್ಥೆಗಳನ್ನು ಕಳೆದವಳು, ವಾನಪ್ರಸ್ಥಾಶ್ರಮಕ್ಕೆ ಹೆಜ್ಜೆ ಹಾಕುತ್ತಿದ್ದವರನ್ನು ಗಮನಿಸುತ್ತಾ ನಡೆದೆ. ಅರವತ್ತು ದಾಟಿದವರು, ಕೆಲಸದಿಂದ ನಿವೃತ್ತಿ ಹೊಂದಿದವರು, ತಮ್ಮ ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತಾ, ಸಮಯದ ಪರಿವೆಯಿಲ್ಲದೆ ನಡೆಯುತ್ತಿದ್ದರು. ಕೆಲವರು ಮಂಡಿನೋವಿನಿಂದ ಕುಂಟುತ್ತಾ ಸಾಗಿದರೆ, ಮತ್ತೆ ಕೆಲವರು ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದರು. ಅರೆಬರೆ ಬೆಳ್ಳಗಾದ ಕೂದಲು, ಚರ್ಮ ಸುಕ್ಕುಗಟ್ಟಿರುವ ಮುಖ, ಮೂಗಿನ ಮೇಲೊಂದು ಕನ್ನಡಕ, ಮೈಮೇಲೆ ಜೋತು ಬೀಳುವ ಉಡುಪು ಧರಿಸಿ ತಮಗಾದ ಆಪರೇಷನ್‌ಗಳ ಬಗ್ಗೆ ಚರ್ಚೆ ಮಾಡುತ್ತಾ ಸಾಗಿದ್ದರು. ತಮ್ಮ ಮೊಮ್ಮಕ್ಕಳ ಮುಂದೆ ಕಟ್ಟಸಿದ ಹಲ್ಲಿನ ಸೆಟ್ಟು ತೆಗೆದಿರಿಸಿ, ಈ ಮ್ಯಾಜಿಕ್ ನೋಡಿ ಎಂದು ಬೊಚ್ಚು ಬಾಯಲ್ಲಿ ನಗುತ್ತಿದ್ದರು.

ವಾಕ್ ಮುಗಿಸಿ ಮನೆಯತ್ತ ಸಾಗುವಾಗ ಹಿಂದಿನಿಂದ ಕೇಳಿಬಂತು ಪಟಾಕಿಯ ಸದ್ದು, ‘ರಾಮ್ ನಾಮ್ ಸತ್ಯ್ ಹೈ’ ಎಂಬ ಮಾತುಗಳು. ಹಿಂತಿರುಗಿ ನೋಡಿದರೆ ಹೂ ಮಾಲೆಗಳಿಂದ ಸಿಂಗರಿಸಿದ ಹೆಣವನ್ನು ಚಟ್ಟದ ಮೇಲೆ ಹೊತ್ತು ಸಾಗುತ್ತಿದ್ದರು. ಹೂವು, ನಾಣ್ಯಗಳನ್ನು ಮಂಡಕ್ಕಿಯೊಂದಿಗೆ ತೂರುತ್ತಾ ಹೊರಟಿತ್ತು ಅವನ ಕೊನೆಯ ಪಯಣ. ಯೂರೋಪ್ ರಾಷ್ಟ್ರಗಳಿಗೆ ಪ್ರವಾಸ ಹೋದಾಗ ಸ್ಮಶಾನವೊಂದರಲ್ಲಿ ಕಂಡ ಫಲಕವೊಂದರಲ್ಲಿ ಬರೆದ ಮಾತುಗಳು ನೆನಪಿಗೆ ಬಂದವು, ಇಲ್ಲಿ ಮಲಗಿರುವವರಿಗೆ ತೊಂದರೆ ಕೊಡಬೇಡಿ. ಅವರು ಚಿರಶಾಂತಿಯಲ್ಲಿ ವಿರಮಿಸಲು ಬಿಡಿ.

ತೊಟ್ಟಿಲಿನಿಂದ ಸಮಾಧಿಯವರೆಗೆ ನಡೆದಿತ್ತು ಈ ಬದುಕಿನ ಪಯಣ. ಮನದಲ್ಲಿ ಹಲವು ಪ್ರಶ್ನೆಗಳು ಕಾಡುತ್ತಿದ್ದವು – ನಾನು ನಾನೆಂಬ ಅಹಂಕಾರದಲ್ಲಿ ಬಂದಿಯಾಗಿರುವೆವು ನಾವೆಲ್ಲಾ. ಹಣ ಮತ್ತು ಅಧಿಕಾgದ ಹಿಂದೆ ಓಡುತ್ತಿರುವೆವು ನಾವೆಲ್ಲಾ. ದ್ವೇಷ, ಅಸೂಯೆಗಳಿಂದ ಎಲ್ಲವನ್ನೂ ಎಲ್ಲರನ್ನೂ ನಾಶಪಡಿಸಲು ಹೊರಟಿರುವೆವು ನಾವೆಲ್ಲಾ.

ಜವರಾಯನ ನೆನಪು ಈಗ ಏಕೆ? ಕಾಲ ಬಂದಾಗ ನೋಡಿದರಾಯಿತಲ್ಲವೇ? ಕಾಲದ ಕಡಲಲಿ ತೇಲುವ, ಮುಳುಗುವ ಹಡಗಿನಂತೆ ನಾವು
ಹುಸಿ ನಗುತ ಬಂದೇವ, ನಸು ನಗುತ ಬಾಳೋಣ
ತುಸು ನಗುತ ತೆರಳೋಣ, ಬಡನೂರು ವರುಷಾನ
ಹರುಷಾದಿ ಕಳೆಯೋಣ, ಯಾಕಾರ ಕೆರಳೋಣ

ವರ ಕವಿ ಬೇಂದ್ರೆಯವರು ಈ ಕವನದಲ್ಲಿ ಜೀವನದ ಮೌಲ್ಯಗಳನ್ನು ಎಷ್ಟು ಅರ್ಥಪೂರ್ಣವಾಗಿ ನಮ್ಮ ಮುಂದೆ ಉಣಬಡಿಸಿದ್ದಾರಲ್ಲವೇ?

ಡಾ.ಗಾಯತ್ರಿದೇವಿ ಸಜ್ಜನ್

5 Responses

  1. ಜವರಾಯ ಬಂದು ಕರೆದಾಗ…ಉತ್ತಮ..ನಿರೂಪಣೆ ಯೊಂದಿಗೆ.. ಸೊಗಸಾಗಿ ಮೂಡಿಬಂದಿದೆ..
    ಧನ್ಯವಾದಗಳು ಮೇಡಂ.

  2. ನಯನ ಬಜಕೂಡ್ಲು says:

    Beautiful article

  3. Padma Anand says:

    ಜಾತಸ್ಯ ಮರಣಂ ದೃವಂ, ಎಂದು ಗೊತ್ತಿದ್ದರೂ, ಜೀವನದುದ್ದಕ್ಕೂ ಜೀವನೋತ್ಸಾಹವನ್ನು ಉಳಿಸಿಕೊಳ್ಳುವುದೇ ಜೀವನ – ಚಂದದ ಲೇಖನ.

  4. ಆಶಾ ನೂಜಿ says:

    ಚೆನ್ನಾಗಿ ಬರೆದಿರುವಿರಿ ಜವರಾಯನುಕರೆದಾಗ ಹೋಗಲೇ ಬೇಕು ಸತ್ಯ

  5. ಶಂಕರಿ ಶರ್ಮ says:

    ಚಿಂತನಾತ್ಮಕ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: