ಯೋಗ ದಿನ-ಜೂನ್ 21

Share Button

ಯೋಗಶಾಸ್ತ್ರವು ವಿಶ್ವಕ್ಕೆ ಭಾರತವು ನೀಡಿರುವ ಒಂದು ಅಮೂಲ್ಯವಾದ ಪ್ರಾಚೀನ ಕೊಡುಗೆ. ಮಾನವನ ಸರ್ವತೋಮುಖ ಬೆಳವಣಿಗೆಗೆ, ಅಂದರೆ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಬಾರತವು ನೀಡಿರುವ ಮಹಾವಿದ್ಯೆ.. ಯೋಗಶಾಸ್ತ್ರವು ಭಾರತದ ಪುರಾತನವಾದ ಆಧ್ಯಾತ್ಮಿಕ ವಿಜ್ಞಾನ. ಯೋಗವು ಕೇವಲ ಒಂದು ದೈಹಿಕ ವ್ಯಾಯಾಮವಾಗಿರದೆ, ಉತ್ತಮ ಜೀವನ ನಡೆಸುವ ಒಂದು ಅದ್ಭುತ ಕಲೆಯಾಗಿದೆ.

ನಾವು ಎಂಟನೆಯ ಅಂತರ್ ರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದ್ದೇವೆ. 2014 ಸೆಪ್ತೆಂಬರ್ ನಲ್ಲಿ, ಪ್ರಧಾನಿಯವರಾದ ಸನ್ಮಾನ್ಯ ನರೇಂದ್ರ ಮೋದಿಯವರು ಅಂತರ್ ರಾಷ್ಟ್ರೀಯ ಯೋಗ ದಿನದ ಆಚರಣೆಯ ಪ್ರಸ್ತಾವನೆಯನ್ನು ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ಮುಂದೆ ಮಂಡಿಸಿದರು. ಸಂಸ್ಥೆಯು ಈ ಪ್ರಸ್ತಾವನೆಯನ್ನು ಅಧ್ಯಯನ ಮಾಡಿ, ಅಂತರ್ ರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು, ವಿಶ್ವದಾದ್ಯಂತ ಆಚರಿಸಲು ಕರೆ ನೀಡಿತು. ವಿಶ್ವದ 192 ರಾಷ್ಟ್ರಗಳು ಇಂದು ಅಂತರ್ ರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿವೆ.

ಅಂತರ್ ರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ಆಚರಿಸಲು ಅನೇಕ ಕಾರಣಗಳಿವೆ. ಖಗೋಳ ಶಾಸ್ತ್ರಜ್ಞರು ಸೌರ ಚಲನೆಯ ಅಧ್ಯಯನ ಮಾಡಿ ಜೂನ್ 21 ಕರ್ಕಾಟಕ ಆಯನ ಸಂಕ್ರಾಂತಿಯಾಗಿರುವುದರಿಂದ ಅತ್ಯಂತ ಸುದೀರ್ಘ ಹಗಲು ಎಂದು ಗುರುತಿಸಿದರು. ಆ ದಿನ ಸೂರ್ಯನು ಉತ್ತರ ಧೃವಕ್ಕೆ ಅತ್ಯಂತ ಸನಿಹದಲ್ಲಿರುವನು. ಭಾರತವನ್ನೊಳಗೊಂಡಂತೆ ಉತ್ತರ ಗೋಳದ ಎಲ್ಲಾ ದೇಶಗಳಿಗೆ ಆಗ ಸುದೀರ್ಘ ಹಗಲು. ಉತ್ತರ ಧೃವದಲ್ಲಿಯಂತೂ 24 ಗಂಟೆಯೂ ಹಗಲೆ. ಯೋಗಿಗಳ ದೃಷ್ಟಿಕೋನದಲ್ಲಿ ಇದು ಅತ್ಯಂತ ಮಹತ್ವದ ದಿನವಾಗಿದೆ. ಸೂರ್ಯಾಭಿಮುಖವಾಗಿ ನಿಂತು ಯೋಗಾಸನಗಳನ್ನು ಮಾಡಿದಾಗ ಸಾಧಕರಲ್ಲಿ ಧೀ ಶಕ್ತಿ ಉದ್ದೀಪನಗೊಳ್ಳುತ್ತದೆಂದು ನಂಬಲಾಗಿದೆ. ಲೋಕದ ಕಣ್ಣಾಗಿರುವ ಭಾಸ್ಕರನಿಗೆ ಯೋಗಶಾಸ್ತ್ರದಲ್ಲಿ ವಿಶೇಷವಾದ ಮನ್ನಣೆ ಇದೆ.

ಹೀಗಾಗಿ ಜೂನ್ 21 ರಂದು ಅಂತರ್ ರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಒಂದೊಂದು ಕೇಂದ್ರ ವಿಷಯವನ್ನು ಇಟ್ಟುಕೊಂಡು ಈ ದಿನವನ್ನು ಆಚರಿಸಲಾಗುತ್ತಿದೆ. 2015 ರಂದು ಶಾಂತಿ ಮತ್ತು ಸಾಮರಸ್ಯಕ್ಕಾಗಿ ಯೋಗ, ೨೦೧೬ ರಲ್ಲಿ ಯುವಕರಲ್ಲಿ ಸಹಬಾಳ್ವೆ ( ( yoga for connecting youth) , 2017 ರಲ್ಲಿ ಆರೋಗ್ಯಕ್ಕಾಗಿ ಯೋಗ, ೨೦೧೮ ರಲ್ಲಿ ಶಾಂತಿಗಾಗಿ ಯೋಗ, ೨೦೧೯ ರಲ್ಲಿ ಹೃದಯದ ಸ್ವಾಸ್ಥ್ಯಕ್ಕಾಗಿ ಯೋಗ, ೨೦೨೦ ರಲ್ಲಿ ಕೊವಿಡ್ -೧೯ ವೈರಾಣುವಿನ ಉಪಟಳವಿದ್ದುದರಿಂದ ಕುಟುಂಬದೊಂದಿಗೆ ಮನೆಯಲ್ಲಿಯೇ ಯೋಗ, ೨೦೨೧ ರಲ್ಲಿ ಸ್ವಾಸ್ಥ್ಯಕ್ಕಾಗಿ ಯೋಗ. ಈ ವರ್ಷದ ವಿಷಯ – ಮಾನವೀಯತೆಗಾಗಿ ಯೋಗ (Yoga for Humanity) .

ಒಮ್ಮೆ ಆದಿಗುರು ಶಂಕರರು ದೇಶದ ಉದ್ದಗಲಕ್ಕೂ ಸಂಚರಿಸುತ್ತಾ, ಒಂದು ಗ್ರಾಮದಲ್ಲಿ ವಾಸ್ತವ್ಯ ಹೂಡುತ್ತಾರೆ. ಅಲ್ಲಿಗೆ ಬಂದ ರೈತನೊಬ್ಬ, ಯೋಗವೆಂದರೇನು ಎಂದು ಶಂಕರರನ್ನು ಪ್ರಶ್ನಿಸುವನು. ಆಗ ಶಂಕರರು ನೀಡಿದ ಉತ್ತರ ಬಹಳ ಅರ್ಥಪೂರ್ಣವಾಗಿದೆ. ನಾವು ಹಗಲಿನಲ್ಲಿ ನಮ್ಮ ಕಣ್ಣುಗಳ ಮೂಲಕ, ಸೂರ್ಯನ ಬೆಳಕಿನ ಸಹಾಯದಿಂದ ಜಗತ್ತನ್ನು ಕಾಣುತ್ತೇವೆ, ಇರುಳಿನಲ್ಲಿ ಚಂದ್ರ, ನಕ್ಷತ್ರಗಳ ಬೆಳಕಿನಲ್ಲಿ ಈ ಜಗತ್ತನ್ನು ಕಾಣುತ್ತೇವೆ. ಆದರೆ ಕಣ್ಣು ಕಂಡದ್ದನ್ನು ಅರ್ಥೈಸಿಕೊಳ್ಳಲು ನಮಗೆ ಬೇಕು ಅರಿವೆಂಬ ಒಳಗಣ್ಣು. ನಮ್ಮ ತನು ಮನವ ಸಂತೈಸಿ ಅರಿವಿನ ಒಳಗಣ್ಣು ತೆರೆಯಿಸುವುದೇ ಯೋಗ. ಬುದ್ಧಿಯಿಂದ ಸತ್ಯವನ್ನು ಅರಿಯುವುದು ಜ್ಞಾನಯೋಗ. ಕೈಗಳಿಂದ ಸತ್ಕರ್ಮಗಳನ್ನು ಮಾಡುವುದು ಕರ್ಮಯೋಗ. ಮನಸ್ಸು ನಿರಂತರವಾಗಿ ಸತ್ಯಶೋಧನೆಯಲ್ಲಿ ನೆಲೆಯಾದರೆ ಅದೇ ಧ್ಯಾನಯೋಗ. ಹೃದಯವು ಸತ್ಯವನ್ನು ಅನನ್ಯವಾಗಿ ಪ್ರೀತಿಸಿದರೆ ಅದೇ ಭಕ್ತಿಯೋಗ. ಹೀಗೆ ಸ್ವಾಮಿ ವಿವೇಕಾನಂದರು ಯೋಗದ ಪ್ರಾಕಾರಗಳನ್ನು ವಿವರಿಸಿದ್ದಾರೆ..
ಯೋಗೇನ ಚಿತ್ತಸ್ಯ, ಪದೇನ ವಾಚಾಮ್ / ಮಲಂ ಶರೀರಸ್ಯ ಚ ವೈದ್ಯಕೇನ / ಯೋಪಾಕರೋತಮ್ ಪ್ರವರಮ್ ಮುನೀನಾಮ್/ ಪತಂಜಲಿ ಪ್ರಾಂಜಲಿ ರಾಣತೋಸ್ಮಿ.

ಯೋಗವು ನಮಗೆ ಶಾರೀರಿಕ ಸಧೃಡತೆಯನ್ನೂ, ಮಾನಸಿಕ ಸ್ಥಿರತೆಯನ್ನೂ ಹಾಗೂ ಅಮೃತದಂತಹ ನುಡಿಗಳನ್ನೂ ಕಲಿಯಲು ಮಾರ್ಗ ತೋರುವುದು. ಅಂದರೆ ಕಾಯಾ, ವಾಚಾ ಮನಸಾ ಪರಿಶುದ್ಧವಾಗುವ ಮಾರ್ಗ ಸಾಧಕರಿಗೆ ತೋರುವುದು.
ಹಿಮಾಲಯದ ತಪ್ಪಲಲ್ಲಿರುವ ಕಾಂತಿ ಸರೋವರದ ಬಳಿ ಆದಿಯೋಗಿ ಶಿವನು – ಈ ದಿವ್ಯ ಜ್ಞಾನವನ್ನು ಸಪ್ತರ್ಷಿಗಳಿಗೆ ಬೋಧಿಸಿದನೆಂಬ ಐತಿಹ್ಯವಿದೆ. ಹಿರಣ್ಯಗರ್ಭ, ಸನತಕುಮಾರ ಮುಂತಾದ ಮಹಾಯೋಗಿಗಳೂ ಯೋಗಶಾಸ್ತ್ರವನ್ನು ಬೋಧಿಸಿದರೆಂಬ ಐತಿಹ್ಯವೂ ಪ್ರಚಲಿತವಾಗಿವೆ. ಸಪ್ತರ್ಷಿಗಳು ವಿಶ್ವದ ನಾನಾ ಭಾಗಗಳಿಗೆ ತೆರಳಿ ಯೋಗಶಾಸ್ತ್ರವನ್ನು ಪ್ರಚುರಪಡಿಸಿದರೆಂಬ ದಾಖಲೆಯಿದೆ. ಅಗಸ್ತ್ಯ ಮುನಿಗಳು ಭಾರತದ ಉದ್ದಗಲಕ್ಕೂ ಸಂಚರಿಸಿ ಯೋಗಶಾಸ್ತ್ರವನ್ನು ಪ್ರಚಾರ ಮಾಡಿದರೆಂದೂ ಹೇಳಲಾಗುವುದು. ಯೋಗ ಪದದ ಮೂಲವು ಸಂಸ್ಕೃತದ ‘ಯುಜ್’ ಎಂಬ ಧಾತುವಿನಿಂದ ಬಂದಿದೆ. ಇದರ ಅರ್ಥ ಬಂಧಿಸು, ಕೂಡಿಸು, ಚಿತ್ತವನ್ನು ಕೇಂದ್ರೀಕರಿಸು ಇತ್ಯಾದಿ. ಇದು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಪ್ರಕೃತಿ ಮತ್ತು ಪುರುಷನ ನಡುವೆ ಸಾಮರಸ್ಯ ಉಂಟುಮಾಡುವುದು. ಯೋಗ ಎಂಬ ಪದವು ಮೊದಲಿಗೆ ಕಂಡುಬರುವುದು. ಕಠೋಪನಿಷತ್ತಿನಲ್ಲಿ. ವೇದೋಪನಿಷತ್ತುಗಳಲ್ಲಿ, ಶೃತಿಶಾಸ್ತ್ರ ಪುರಾಣಗಳಲ್ಲಿ, ಭಗವದ್ಗೀತೆ ಮತ್ತು ಇತಿಹಾಸಗಳಲ್ಲಿ ಯೋಗದ ಬಗ್ಗೆ ಉಲ್ಲೇಖಗಳಿವೆ. ಭಾರತೀಯ ದರ್ಶನಗಳಲ್ಲಿ ಎರಡನೆಯ ಸ್ಥಾನದಲ್ಲಿರುವುದು – ಯೋಗ ದರ್ಶನ. ಬೌದ್ಧ ಧರ್ಮ, ಜೈನ ಧರ್ಮದಲ್ಲೂ ಯೋಗಶಾಸ್ತ್ರದ ಉಲ್ಲೇಖವಿದೆ.

ಶ್ರೀ ಕೃಷ್ಣನು ಗೀತೆಯಲ್ಲಿ – ಯೋಗದ ಅರ್ಥ ನೋವು ಮತ್ತು ದುಃಖದಿಂದ ಬಿಡುಗಡೆ ಎಂದರೆ, ಸ್ವಾಮಿ ವಿವೇಕಾನಂದರು ಯೋಗವು ಪ್ರಜ್ಞಾಪೂರ್ವಕವಾಗಿ ಮನಸ್ಸಿನ ಮೇಲೆ ಪ್ರಭುತ್ವವನ್ನು ಸಂಪಾದಿಸುವ ಕ್ರಿಯೆ ಎಂದು ಹೇಳುತ್ತಾರೆ. ಪತಂಜಲಿ ಮಹರ್ಷಿಗಳು ‘ಯೋಗ ಚಿತ್ತ ವೃತ್ತಿ ನಿರೋಧಃ’ ಎಂದು ಸಾರಿದ್ದಾರೆ.

‘ರಾಜಯೋಗ’ ವು ಪತಂಜಲಿ ಮಹರ್ಷಿಗಳ ಕೊಡುಗೆಯಾದ ಅಷ್ಟಾಂಗಯೋಗದ ತಳಹದಿಯ ಮೇಲೆಯೇ ನಿಂತಿದೆ. ಅಷ್ಟಾಂಗ ಯೋಗದ ಮೊದಲನೆಯ ಹಂತ ಸಾರ್ವತ್ರಿಕ ನೀತಿ ನಿಯಮಗಳಾದ ಪಂಚ ಯಮಗಳು – ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ. ಎರಡನೆಯದು ವೈಯುಕ್ತಿಕ ಮೌಲ್ಯಗಳಾದ ಪಂಚ ನಿಯಮಗಳು – ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿದಾನ. ಮೂರನೆಯ ಹಂತ ಶಾರೀರಿಕ ಸಧೃಡತೆ ನೀಡುವ ಆಸನಗಳು. ಆಸನಗಳಿಂದ ಆರೋಗ್ಯ, ಶಾರೀರಿಕ ಲಘುತ್ವ ದೊರೆಯುವುದು. ಶರೀರವು ದೇವಾಲಯವಿದ್ದಂತೆ, ಸಾಧಕನು ಯೊಗಾಸನಗಳಿಂದ ತನ್ನ ದೇಹವನ್ನು ಸುಂದರ ದೇಗುಲವನ್ನಾಗಿ ಪರಿವರ್ತಿಸುವನು. ನಾಲ್ಕನೆಯದು ಪ್ರಾಣಾಯಾಮ – ಇದು ಉಸಿರಾಟದ ವೈಜ್ಞಾನಿಕ ವಿಧಾನವನ್ನು ತಿಳಿಸುತ್ತದೆ. ಯೋಗಿಯು ಲಯಬದ್ಧವಾದ, ದೀರ್ಘವಾದ, ನಿಧಾನವಾದ ಉಸಿರಾಟವನ್ನು ನಡೆಸುತ್ತಾನೆ. ಮನಸ್ಸಿನಲ್ಲಿರುವ ಭ್ರಮೆಯನ್ನು ನಿವಾರಿಸುವುದೇ ರೇಚಕ, ನಾನು ಆತ್ಮ ಎನ್ನುವ ಅನುಭೂತಿಯೇ ಪೂರಕ ಹಾಗೂ ಮನಸ್ಸಿನ ಚಂಚಲತೆಯನ್ನು ದೂರ ಮಾಡುವುದೇ ಕುಂಭಕ, ಎಂದು ಶಂಕರರು ಬೋಧಿಸಿದ್ದಾರೆ. ಐದು ಮತ್ತು ಆರನೆಯ ಅಂಗಗಳಾದ – ಪ್ರತ್ಯಾಹಾರ ಮತ್ತು ಧಾರಣ ಇಂದ್ರಿಯಗಳನ್ನು ನಿಗ್ರಹಿಸಿ, ಚೈತನ್ಯವನ್ನು ಜಾಗೃತಗೊಳಿಸುವುದು. ಧಾರಣದಿಂದ ಧ್ಯಾನದ ಸ್ಥಿತಿ ಉಂಟಾಗುವುದು. ಏಳನೆಯ ಮತ್ತು ಎಂಟನೆಯ ಅಂಗಗಳು – ಧ್ಯಾನ ಮತ್ತು ಸಮಾಧಿ. ಕೊನೆಯ ಹಂತದಲ್ಲಿ ಸಾಧಕನು ಮುಕ್ತಿಪಥದತ್ತ ಸಾಗುತ್ತಾನೆ. ನಿಯಮಿತವಾದ ಹಾಗೂ ನಿರಂತರವಾದ ಯೋಗಾಭ್ಯಾಸದಲ್ಲಿ ತೊಡಗಿದ ಸಾಧಕನು ‘ತಾನಾರು ಎಂಬ ಚಿಂತನೆಯಲ್ಲಿ ತೊಡಗಿ – ನಶ್ವರವಾದ ಯಾವ ವಸ್ತುವೂ ತಾನಲ್ಲ, ಸತ್ ಚಿತ್ ಆನಂದ ಸ್ವರೂಪನಾದ ಆ ಪರಬ್ರಹ್ಮನೇ ನಾನು ಎಂಬುದನ್ನು ಅರಿಯುತ್ತಾನೆ.

ಯೋಗದಿಂದ ಮಾನವನ ದೈಹಿಕ, ಮಾನಸಿಕ, ಭಾವನಾತ್ಮಕ, ಆದ್ಯಾತ್ಮಿಕ ಬೆಳವಣಿಗೆಯಾಗುತ್ತದೆ. ಇಡೀ ಸಮಾಜ ಶ್ರೇಷ್ಟ ಮಾನವ ಸಮಾಜವಾಗಿ ರೂಪುಗೊಳ್ಳುತ್ತದೆ. ‘ಯೋಗ ಕರ್ಮ ಕೌಶಲಂ – ವಿಶೇಷವಾದ ಕೌಶಲ್ಯದಿಂದ ಸೃಜನಶೀಲತೆ ಹಗೂ ಮಾನಸಿಕ ಧೃಡತೆ ಲಭಿಸುವುದು. ಇದು ಮನಸ್ಸನ್ನು ಶಾಂತಗೊಳಿಸುವ ಚತುರವಾದ ತಂತ್ರ ಎಂದೂ ಹೇಳಲಾಗಿದೆ. ಯೋಗವು ಪ್ರಶಾಂತತೆ, ಆರೋಗ್ಯ, ಸಂತೋಷ ಮತ್ತು ದಕ್ಷತೆಯನ್ನು ನೀಡುವುದು. ಆಧುನಿಕ ಪ್ರಪಂಚದಲ್ಲಿ ಮಾನಸಿಕ ಒತ್ತಡ, ಆತಂಕ, ಖಿನ್ನತೆ ಹೆಚ್ಚಾಗಿ ಕಾಡುತ್ತಿದೆ. ಕೇವಲ ಹಣ ಮತ್ತು ಅಧಿಕಾರದಿಂದಲೇ ಮನವನ ಉನ್ನತಿ ಸಾಧ್ಯ್ಯ ಎನ್ನುವ ಭಾವನೆ ಇಂದಿನ ಜನಾಂಗದಲ್ಲಿ ಮೂಡಿದೆ. ಇದರಿಂದ ಮಾನವನಲ್ಲಿ ಅತೃಪ್ತಿ, ನಿರಾಶೆ ಹಾಗೂ ಮನೋದೈಹಿಕ ರೋಗಗಳು ಕಂಡುಬರುತ್ತಿದೆ. ಯೋಗವು ಇಂತಹ ಭ್ರಮೆಗಳನ್ನು ನಿವಾರಿಸಿ ಆದರ್ಶ ಸಮಾಜವನ್ನು ನಿರ್ಮಿಸಲು ನೆರವಾಗುವುದು.

ಯೋಗವು ಒಂದು ಉತ್ತಮ ಜೀವನ ವಿಧಾನವಾಗಿದೆ. ಇದು ಮೌಲ್ಯಾಧಾರಿತ, ಆನಂದದಾಯಕ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ದಾರಿದೀಪವಾಗಿದೆ. ಆಧುನಿಕ ಜೀವನದ ಒತ್ತಡಗಳನ್ನು ನಿರ್ವಹಣೆ ಮಾಡುವ ಕೌಶಲವನ್ನು ಕಲಿಸುವುದು. ಇಂದು ವಿಜ್ಞಾನ, ತಂತ್ರಜ್ಞಾನದ ಯುಗದಲ್ಲಿ ಮೌಲ್ಯಾಧಾರಿತ ಸಮಾಜವನ್ನು ನಿರ್ಮಿಸಲು ಯೋಗಶಾಸ್ತ್ರದ ನರವು ಅತ್ಯಗತ್ಯ. ಯೋಗವು ಒಂದು ವಿಜ್ಞಾನವಾಗಿದ್ದು – ಇದನ್ನು ಎಲ್ಲಾ ವಯಸ್ಸಿನ ಜನರೂ ಅಭ್ಯಸಿಸುತ್ತಾರೆ. ಇದು ಸ್ವೇಚ್ಛಾಚಾರದಿಂದ ದೂರ ಉಳಿದು, ನೈತಿಕತೆಯ ಚೌಕಟ್ಟಿನೊಳಗೆ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯವನ್ನು ನೀಡುತ್ತದೆ. ಹೀಗೆ ಯೋಗಶಾಸ್ತ್ರವು – ಶಾಂತಿ, ನೆಮ್ಮದಿ, ತೃಪ್ತಿ ಇರುವ ಜನಾಂಗವನ್ನು ರೂಪಿಸುತ್ತಾ, ಸ್ವಸ್ಥ ಸಮಾಜದ ರಚನೆಗೆ ಸಹಕಾರಿಯಾಗಿದೆ.

-ಡಾ.ಗಾಯತ್ರಿ ದೇವಿ ಸಜ್ಜನ್

4 Responses

  1. ಯೋಗದ ಬಗ್ಗೆ ಉತ್ತಮ ಲೇಖನ..
    ಧನ್ಯವಾದಗಳು ಮೇಡಂ

  2. ನಯನ ಬಜಕೂಡ್ಲು says:

    Nice

  3. Padma Anand says:

    ಹಲವಾರು ವಿವರಗಳನ್ನೊಳಗೊಂಡ ಸುಂದರ, ಸಂದರ್ಭೋಚಿತ ಲೇಖನ.

  4. . ಶಂಕರಿ ಶರ್ಮ says:

    ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ನೀಡುವ ಯೋಗದ ಮಹತ್ವದ ಕುರಿತು ಸೊಗಸಾದ ಲೇಖನ. ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: