ಅವಿಸ್ಮರಣೀಯ ಅಮೆರಿಕ-ಎಳೆ 24

Share Button

ಮಳೆ ಕಾಡಿನೊಳಗೆ….!

ಜಗತ್ಪ್ರಸಿದ್ಧ ತೂಗುಸೇತುವೆ ಗೋಲ್ಡನ್ ಗೇಟ್ ಬ್ರಿಜ್ ಮೇಲೆ ಹೆಮ್ಮೆಯಿಂದ ನಡೆದಾಡಿದ ಬಳಿಕ, ನಮ್ಮ ಭೇಟಿ, ಅಲ್ಲಿಯೇ ಸಮೀಪದ, ಅತ್ಯಂತ ಹಳೆಯ, ಸಾಂಪ್ರದಾಯಿಕ ಚಾಕಲೇಟ್ ಕಾರ್ಖಾನೆಗೆ… ಅದುವೇ ಘಿರಾರ್ ಡೆಲ್ಲಿ(Ghirardelli). 1852ರಷ್ಟು ಹಿಂದೆಯೇ ಪಾರಂಪರಿಕವಾಗಿ ಚಾಕಲೇಟನ್ನು ತಯಾರಿಸಿದ ಹೆಗ್ಗಳಿಕೆ ಇದರದು.

ಇದರೊಳಗೆ ಹೋದಾಗ ನನಗೆ ನಿಜವಾಗಿಯೂ ಆಶ್ಚರ್ಯವಾಯ್ತು… ನೋಡಲು ಗಾತ್ರದಲ್ಲಿ ಅಷ್ಟು ಚಿಕ್ಕದಾಗಿತ್ತು ಅದು. ನಮ್ಮ ಏಶಿಯಾ ಖಂಡದಲ್ಲೇ ಅತೀ ದೊಡ್ಡದೆಂದು ಹೆಸರು ಪಡೆದ, ಹೆಮ್ಮೆಯ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯು ನಮ್ಮೂರಲ್ಲಿಯೇ ಇರುವುದರಿಂದ, ಇದನ್ನು ನೋಡಲು ಹೆಚ್ಚು ಉತ್ಸಾಹ ಉಂಟಾಗಲಿಲ್ಲ ಎನ್ನಬಹುದು. ಪುಟ್ಟ ಕೋಣೆಯೊಂದರಲ್ಲಿ ಕೋಕೋ ಚಾಕಲೇಟ್ ಮಾಡುವ ವಿವಿಧ ಹಂತಗಳ ಪ್ರಾತ್ಯಕ್ಷಿಕೆ ನಡೆದಿತ್ತು. ಒಣಗಿದ ಕೋಕೋ ಬೀಜಗಳು ಒಂದು ಕಡೆಯಲ್ಲಿ ನುಣ್ಣನೆ ಪುಡಿಯಾಗಿ ಬಿದ್ದು, ಮುಂದಕ್ಕೆ ಒಂದು ಸಣ್ಣ ತೊಟ್ಟಿಯಲ್ಲಿ ಅದು ಸಕ್ಕರೆ, ಹಾಲುಪುಡಿಯೊಂದಿಗೆ ಮಿಶ್ರವಾಗಿ, ಕಲ್ಲಲ್ಲಿ ಅರೆಯಲ್ಪಡುತ್ತಿತ್ತು. ನಂತರ ನಿಯಮಿತ ಉಷ್ಣತೆಯ ಮೂಲಕ ಹಾಯ್ದು ಗಟ್ಟಿಗೊಂಡು, ಚಾಕಲೇಟ್ ರೂಪದಲ್ಲಿ ಹೊರಬರುತ್ತಿತ್ತು. ಇವಿಷ್ಟನ್ನೂ ನಾವು ಅದರ ಬಳಿಯಲ್ಲೇ ನಿಂತು ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದರು. ಚಾಕಲೇಟ್ ಸುವಾಸನೆಯ ನಡುವೆಯೇ ಅದರ ವ್ಯಾಪಾರವೂ ಜೋರಾಗಿಯೇ ನಡೆದಿತ್ತು. ಇದರೊಂದಿಗೆ ಅಲ್ಲಿಯ ವಿಶೇಷ ರುಚಿಯ ಐಸ್ ಕ್ರೀಂ ಸವಿಯಲು ಜನರ ದೊಡ್ಡ ದಂಡೇ ಸರತಿಯಲ್ಲಿ ಕಾದು ನಿಂತಿತ್ತು. ಆ ಪುಟ್ಟ ಕಾರ್ಖಾನೆಯ ಒಳಗಡೆ ಮಾತ್ರವಲ್ಲದೆ, ಸಾಮಾನ್ಯ ಹೋಟೇಲಿನಂತೆ, ಹೊರಗಡೆಗೆ ಅಂಗಳದಲ್ಲಿ ಕೂಡಾ, ಗಿರಾಕಿಗಳಿಗಾಗಿ ಕುರ್ಚಿ ಮೇಜುಗಳು ಸಿದ್ಧವಾಗಿದ್ದವು. ಕಟ್ಟಡದ ಎದುರುಗಡೆಗೆ ಕಾರಂಜಿ ಕೊಳದಲ್ಲಿ ಪುಟ್ಟ ಕಾರಂಜಿಯು ಹಾರುತ್ತಾ ಮಕ್ಕಳನ್ನು ಆಕರ್ಷಿಸಿತ್ತು. ಅದರ ಸುತ್ತಲೂ ಇರುವ ನಾಲ್ಕೈದು  ಮೆಟ್ಟಲುಗಳ ಮೇಲೆ,… ಹಿರಿಯರು ಕಿರಿಯರೆನ್ನದೆ, ಜೊತೆಗೆ ನಾವೆಲ್ಲರೂ  ಕೂಡಾ ಕುಳಿತು, ಖರೀದಿಸಿದ ಚಾಕಲೇಟ್ ಚಪ್ಪರಿಸಿ, ರುಚಿಯಾದ ಐಸ್ ಕ್ರೀಂ ಮೆದ್ದು ಆನಂದಿಸಿದೆವು.

ಮುಂದೆ, ಅಲ್ಲೇ ಪಕ್ಕದಲ್ಲಿರುವ ಸೊಗಸಾದ  ಬಂದರು, ಪಿಯರ್ 39ನತ್ತ ನಡೆದಾಗ, ಅಲ್ಲಿಯ ಜನಜಂಗುಳಿ ಕಂಡು ದಂಗಾದೆ. ಇಲ್ಲಿ ಏನುಂಟು..ಏನಿಲ್ಲ?! ದಿನವಿಡೀ ಜಾತ್ರೆಯಂತೆ ಜನ ಸಂದಣಿ. ಸುಮಾರು 45 ಎಕರೆಗಳಷ್ಟು ಜಾಗದಲ್ಲಿ ಹಬ್ಬಿರುವ ಈ ಬಂದರು ಪ್ರದೇಶವು ವರ್ಷವಿಡೀ ಮಿಲಿಯಗಟ್ಟಲೆ ಪ್ರವಾಸಿಗರಿಂದ ವೀಕ್ಷಿಸಲ್ಪಡುತ್ತದೆ. ಇಲ್ಲಿ 13 ವಿಶೇಷ ತರದ ರೆಸ್ಟೋರೆಂಟ್ ಗಳು, 90ಕ್ಕೂ ಮಿಕ್ಕಿ ಅಂಗಡಿಗಳು ವ್ಯಾಪಾರ ನಡೆಸುತ್ತಿವೆ. ಸುಮಾರು ಎರಡು ಕಿ.ಮೀ. ಉದ್ದದ ಅಗಲವಾದ ರಸ್ತೆಯ ಒಂದು ಪಕ್ಕದಲ್ಲಿ ಮೀನುಗಾರರ ಸರಕುಕಟ್ಟೆ, ವಿವಿಧ ಸರಕುಗಳ ಮಳಿಗೆಗಳು, ಬ್ರೆಡ್ ಮಾಡುವ ಪ್ರಾತ್ಯಕ್ಷಿಕೆ ನಡೆಯುತ್ತಿದ್ದರೆ, ಇನ್ನೊಂದು ಪಕ್ಕದಲ್ಲಿ ನಮ್ಮೂರಿನಂತೆ ಚಿಕ್ಕ ಚಿಕ್ಕ ಅಂಗಡಿಗಳಲ್ಲಿ ನೇತುಹಾಕಿದ ಉಡುಪುಗಳು, ನೆನಪಿಗಾಗಿ ಕೊಂಡುಕೊಳ್ಳಬಹುದಾದಂತಹ ತರೆಹೇವಾರು ವಸ್ತುಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ.. ಇವುಗಳಲ್ಲಿ ಹೆಚ್ಚಾಗಿ, ಆಯಸ್ಕಾಂತ ಹೊಂದಿರುವ, ಅಲ್ಲಿಯ ವಿಶೇಷ ಸ್ಥಳಗಳ ಪ್ರತಿರೂಪವು ನೋಡುಗರನ್ನು ಆಕರ್ಷಿಸುವುದರಿಂದ, ಸ್ಥಳದ ನೆನಪಿಗಾಗಿ ಪ್ರವಾಸಿಗರು ಇವುಗಳನ್ನು  ಕೊಳ್ಳುವುದು ಮಾಮೂಲಿ. ನಾವು ಕೂಡಾ ಹತ್ತು ಡಾಲರುಗಳಿಗೆ ಮೂರು ಶರ್ಟ ಗಳು, ನೆನಪಿಗಾಗಿ ಈ ಫ್ರಿಜ್ ಮ್ಯಾಗ್ನೆಟ್ ನಂತಹ ಕೆಲವು ವಸ್ತುಗಳನ್ನು ಖರೀದಿಸಿ ಖುಶಿಪಟ್ಟೆವು.   ಹೀಗೆಯೇ ಇರಬೇಕು…ಪ್ರವಾಸ ಪ್ರಿಯರಾದ ಮಗಳು ಅಳಿಯ ಹೋದೆಡೆಗಳಿಂದ ತಂದ  ಫ್ರಿಜ್ ಮ್ಯಾಗ್ನೆಟ್ ಗಳು ಅವರ ಮನೆಯ ದೊಡ್ಡದಾದ ತಂಪು ಪೆಟ್ಟಿಗೆಯ ಶರೀರವಿಡೀ ಅಂಟಿಕೊಂಡು, ತುಂಬಿ ತುಳುಕುತ್ತಾ ಪ್ರಪಂಚ ದರ್ಶನ ಮಾಡಿಸುತ್ತವೆ!

ಆಗಲೇ ಮಗಳು ಕರೆದೊಯ್ದುಳು,  ಒಂದು ವಿಶೇಷವಾದ ಹೋಟೇಲಿಗೆ.. ಅದರ ಹೆಸರೇ ವಿಚಿತ್ರ.. Rain Forest..! ಹೌದು.. ಒಳ ಹೊಕ್ಕೊಡನೆ ನಿಜವಾಗಿಯೂ ದಟ್ಟ ಕಾಡಿನೊಳಗೆ ಹೋದ ಅನುಭವ! ಜೋರಾಗಿ ಮಳೆ ಬರುವಂತಹ ಸದ್ದು, ಕಾಡಿನ ಕೀಟಗಳ ಧ್ವನಿಗಳು ಕಿವಿಗೆ ರಾಚುತ್ತದೆ. ಒಳಗೆ ಹೊಕ್ಕೊಡನೆ ತಲೆಯ ಮೇಲೆಯೇ ದೊಡ್ಡದಾದ ಹಾವೊಂದು ಬಾಯ್ತೆರೆದು ಭುಸ್ ಎಂದು ನಾಲಿಗೆ ಹೊರಚಾಚಿತು! ಇನ್ನೊಂದು ಪಕ್ಕದಲ್ಲಿ ಆನೆಯೊಂದು ತನ್ನ ಪುಟ್ಟ ಮರಿಯೊಂದಿಗೆ ನಿಂತು, ಸೊಂಡಿಲನ್ನು ಆಡಿಸಿ ಘೀಳಿಡುತ್ತಾ ನೋಡುತ್ತಿದೆ.. ಅದೋ ..ಮುಂದೆ ಭೋರ್ಗರೆವ ಜಲಪಾತ.. ಮೊಲ, ಕರಡಿಗಳ ನೆಗೆದಾಟ ನಡೆದಿದೆ. ಚಿಕ್ಕ ಪುಟ್ಟ ಪೊದರುಗಳು ಸೊಗಸಾಗಿ ಅಲ್ಲಲ್ಲಿ ಹರಡಿದರೆ, ಎತ್ತರದ ಮರಗಳು ಕೆಲವು ಕಡೆ ತಲೆ ಎತ್ತಿ ನಿಂತಿವೆ.  ಇಷ್ಟೆಲ್ಲಾ ಚಿತ್ರ ವಿಚಿತ್ರಗಳನ್ನು ಸಂಯೋಜಿಸಿದ ಪರಿ ಅನನ್ಯ!  ಯಾವುದೂ ಕೃತಕವೆಂದು ಅನಿಸುವುದೇ ಇಲ್ಲ..ಅಷ್ಟು ನೈಜವಾಗಿವೆ! ಭಯ ಮಿಶ್ರಿತ ಕುತೂಹಲದಿಂದ ನೋಡುತ್ತಿದ್ದ ನನ್ನನ್ನು ಕಂಡು ಮಗಳಿಗೋ ನಗು. ಇಡೀ ಹೋಟೇಲಿನಲ್ಲಿ ಮಂದ ಬೆಳಕು ಹರಡಿ, ಇಡೀ ವಾತಾವರಣಕ್ಕೆ ವಿಶೇಷ ಮೆರುಗನ್ನು ನೀಡಿದ್ದಂತೂ ನಿಜ… ಆದರೆ ನಾನು ಮಾತ್ರ ನಡೆದಾಡಲು ಕಷ್ಟಪಟ್ಟೆ! ಪ್ರತಿಯೊಂದು ಗೋಡೆ, ಬಾಗಿಲು, ಮೇಜು ಕುರ್ಚಿಗಳು ಬಿದಿರಿನಿಂದ ತಯಾರಿಸಲಾಗಿವೆ. ಹಾಗೆಯೇ, ಒಂದೆಡೆ ಕುಳಿತು ನಮ್ಮ ಫಲಾಹಾರ ಮುಗಿಸಿದೆವು. 

ನಮ್ಮಲ್ಲಿಯಂತೆ, ರಸ್ತೆ ಪಕ್ಕದ ಕಾಲುದಾರಿಗಳಲ್ಲಿ, ನಡೆದಾಡಲೂ ಕಷ್ಟವಾಗುವಂತೆ ಪುಟ್ಟ ವ್ಯಾಪಾರಿಗಳಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ. ಅವರಲ್ಲಿ ವಿಶೇಷವಾಗಿ, ಅದ್ಭುತ ಕಲಾಗಾರರನ್ನು ಕಂಡೆ.. ಐದು ನಿಮಿಷಗಳಲ್ಲಿ ನಮ್ಮ ಪ್ರತಿರೂಪದ ಚಿತ್ರ ಬಿಡಿಸುವ ಕೈಚಳಕ, ಲೋಹದ ತಟ್ಟೆಗೆ ಗ್ಯಾಸ್ ಬಳಸಿ ಮಾಡುವ ಬಹುವರ್ಣ ಚಿತ್ರಗಳನ್ನು ನೋಡುತ್ತಾ ಮೈಮರೆತೆ. ಇವುಗಳಿಂದ ಅವರ ದಿನದ ಆದಾಯವೂ ಜೋರಾಗಿಯೇ ನಡೆದಿತ್ತೆನ್ನಬಹುದು.ಇನ್ನೊಂದೆಡೆ ಪಿಟೀಲು ಬಾರಿಸುತ್ತಾ ಹಿನ್ನೆಲೆ ಸಂಗೀತದೊಂದಿಗೆ ಸುಶ್ರಾವ್ಯವಾಗಿ ಹಾಡುವವನ ಮುಂಭಾಗದಲ್ಲಿ ಹರಡಿದ ಬಟ್ಟೆ ಮೇಲೆ ಹಣವನ್ನು ಹಾಕಿ, ಅಲ್ಲೇ ಕುಳಿತು ಅವನ ಹಾಡನ್ನು ಆಲಿಸಿ ಹೋಗುತ್ತಿದ್ದರು ಕೆಲವು ಸಂಗೀತಪ್ರಿಯರು.  ಮತ್ತೊಂದೆಡೆಯಲ್ಲಿ ಇದೆ.. ಮಕ್ಕಳಿಗಾಗಿ ಮನೋರಂಜನಾ ತಾಣ. ಬಣ್ಣ ಬಣ್ಣದ, ವಿವಿಧ ರೀತಿಯ ಆಟಗಳ ತೊಟ್ಟಿಲುಗಳು ಮನಸೆಳೆಯುತ್ತವೆ. ಇಡೀ ರಸ್ತೆಯಿಂದ, ಗೋಲ್ಡನ್ ಗೇಟ್ ಬ್ರಿಡ್ಜ್ ನ ವಿಹಂಗಮ ನೋಟ ಅತ್ಯಂತ ಸುಂದರ.

ಬಂದರಿನ ಪಕ್ಕದ ಮೀನುಗಾರರ ಸರಕು ಕಟ್ಟೆಯ ಕೆಳಗಡೆ ನೀರಲ್ಲಿ ಈಜುತ್ತಾ, ಅಲ್ಲೇ ಇರುವ ಕರಿಬಂಡೆಗಳ ಮೇಲೆ ವಿಶ್ರಾಂತಿ ಪಡೆಯುವ, ಬಹು ದೊಡ್ಡದಾದ, ಅಪರೂಪದ ಕಡಲ ಸಿಂಹಗಳನ್ನು ನೋಡಲೆಂದೇ ಬಹು ದೂರದಿಂದ ಪ್ರವಾಸಿಗರು ಇಲ್ಲಿಗೆ ಬರುವರು. ಇಲ್ಲಿ, ಅವುಗಳಿಗೆ ಸಿಗುವ ಸಮೃದ್ಧ ಕಡಲ ಆಹಾರವು, ಅವುಗಳು ಆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರಲು ಕಾರಣವಾಗಿದೆ. ಬೆಳಗ್ಗೆ 11ಗಂಟೆಯಿಂದ ಸಂಜೆ 4ಗಂಟೆಯ ವರೆಗೆ ಮಾತ್ರ ನೂರಾರು ಕಡಲ ಸಿಂಹಗಳನ್ನು ಇಲ್ಲಿ ಕಾಣಬಹುದು. ಅಲ್ಲಿಯ ಕಡಲ ತೀರದಲ್ಲಿ ದೋಣಿ ವಿಹಾರದ ಸೌಲಭ್ಯವಿದ್ದು, ಜನರಿಗೆ ಸಾಕಷ್ಟು  ಮನೋರಂಜನೆಯನ್ನು ಒದಗಿಸುತ್ತದೆ. ಸಮಯದ ಅಭಾವದಿಂದಾಗಿ ನಮ್ಮ ದೋಣಿ ವಿಹಾರ ತಪ್ಪಿಹೋಯಿತು.

SFO ವು ಕಡಿದಾದ ಬೆಟ್ಟ ಗುಡ್ಡಗಳ ಪ್ರದೇಶವಾಗಿದೆ. ಅದನ್ನು, ಇರುವಂತೆಯೇ ವಾಸಕ್ಕೆ ಬಳಸಿ, ಪ್ರವಾಸ ತಾಣವಾಗಿಯೂ ಮಾರ್ಪಡಿಸಿಕೊಂಡಿರುವುದು ಅಲ್ಲಿಯ ಜನರ ಸೃಜನಶೀಲತೆಗೆ ಸಾಕ್ಷಿ. ಅಳಿಯ ಅಲ್ಲಿಯ ಏರು ರಸ್ತೆಯಲ್ಲಿ ಕಾರು ಚಲಾಯಿಸಿದಾಗ ಅದರೊಳಗಿರುವ ನಾವು ಪೂರ್ತಿ ಹಿಂಬದಿಗೆ  ವಾಲಿಬಿಡುತ್ತಿದ್ದೆವು… ಅಂದರೆ, ಸುಮಾರು 45° ಕೋನಕ್ಕಿತಲೂ ಹೆಚ್ಚು ಏರುವಿಕೆ ಇರುತ್ತಿತ್ತು. ನಾನಂತೂ, ಕಾರು ಹಿಂದಕ್ಕೆ ಬೀಳುವ ಭಯದಿಂದ, ನನ್ನನ್ನು ಕಾರಿನಿಂದ ಕೆಳಗಿಳಿಸಲು ಗೋಗರೆಯುತ್ತಿದ್ದುದು ನೆನಪಾಗಿ ಈಗ ನಗು ಬರುತ್ತದೆ. ಇಂತಹದೇ ಒಂದು  ರಸ್ತೆಯನ್ನು ನೋಡಲು ಹೊರಟೆವು.. ಅದೇ Crooked Street!

ಕ್ರೂಕೆಡ್ ಸ್ಟ್ರೀಟ್

ಹೆಸರೇ ಹೇಳುವಂತೆ, ಇದೊಂದು ವಿಚಿತ್ರವಾದ, ಆಕರ್ಷಣೀಯವಾದ ಪ್ರವಾಸೀ ಸ್ಥಳವಾಗಿದೆ. ಅತೀ ಎತ್ತರದ, ಗುಡ್ಡದಂತಹ ಸ್ಥಳದಿಂದ, ಅತ್ಯಂತ ಕ್ಲಿಷ್ಟಕರ ತಿರುವು(Hairpin curve)ಗಳನ್ನು ಹೊಂದಿದ ರಸ್ತೆಯಾಗಿದೆ. ಇದು ಇಂತಹ ಐದು ತಿರುವುಗಳನ್ನು ಹೊಂದಿದ್ದು, ರಸ್ತೆಯ ಎರಡೂ ಪಕ್ಕಗಳಲ್ಲಿ ಅತ್ಯಂತ ಸುಂದರವಾದ ಹೂದೋಟವನ್ನು ನಿರ್ಮಿಸಲಾಗಿದೆ…ಅದನ್ನು ನೋಡಲು ಎರಡೂ ಕಣ್ಣುಗಳೂ ಸಾಲವೇನೋ! ನೋಡು ನೋಡುತ್ತಿದ್ದಂತೆಯೇ, ಆಳಿಯ, ನಮ್ಮ ಕಾರನ್ನು ಅದರೊಳಗೆ ನುಗ್ಗಿಸಿಯೇ ಬಿಟ್ಟ..ಕಾರು ಮೇಲಿನಿಂದ ಕೆಳಕ್ಕೆ ಇಳಿಯುತ್ತಿತ್ತು. ಆ ರಸ್ತೆಯ ತಿರುವುಗಳೋ.. ಅಬ್ಬಾ..ನೋಡಲೇ ನನಗೆ ಭಯ!..ಕಾರಿನ ಹಿಂಭಾಗ, ಮುಂಭಾಗ ಎಲ್ಲಿ ಜಜ್ಜಿ ಹೋಗುವುದೋ ಎನ್ನುವ ನನ್ನ ಆತಂಕದ ನಡುವೆಯೇ ನಮ್ಮ ಕಾರು ಕೆಳಗಡೆ ತಲಪಿತ್ತು. ಭಯದಿಂದ ಕಂಪಿಸುತ್ತಾ ಅದರೊಳಗೆ ಇದ್ದವಳಿಗೆ ಪಕ್ಕದಲ್ಲಿದ್ದ ಬಹು ಅಂದದ ಹೂದೋಟದ ಕಡೆಗೆ ಕಣ್ಣು ಹಾಯಿಸಲೂ ಆಗಲಿಲ್ಲ. ಅಳಿಯನ ಚಾಲನಾ ನೈಪುಣ್ಯತೆಯು ಅತ್ಯುತ್ತಮವಾಗಿತ್ತೇನೋ ನಿಜ.. ಆದರೆ, ನನ್ನ ಹೆದರಿಕೆ ಅದಕ್ಕಿಂತ ಮಿಗಿಲಾಗಿತ್ತು! ಆಮೇಲೆ, ಕೆಳಗಡೆಯಿಂದ ಮನ:ಪೂರ್ತಿ ಅದರ ಸೌಂದರ್ಯವನ್ನು ಕಣ್ತುಂಬಿಕೊಂಡೆನೆನ್ನಿ. ಈ ರಸ್ತೆಯ ಒಂದು ಪಕ್ಕದಲ್ಲಿ ಮೇಲೇರಿ ಹೋಗಲು ಸೊಗಸಾದ ಮೆಟ್ಟಲುಗಳೂ ಇವೆ. ಅಲ್ಲದೆ, ಅದರ ಒತ್ತಟ್ಟಿಗೇ ಇರುವ ಸಾಂಪ್ರದಾಯಿಕ ಮನೆಗಳನ್ನು ನೋಡಲು ಮೋಜೆನಿಸುತ್ತದೆ. ಮೆಟ್ಟಿಲುಗಳ ಮೇಲೇರಿ ಹೋಗಿ, ಎತ್ತರದಿಂದ, ಬಹುವರ್ಣ ಪುಷ್ಪಗಳ ರಂಗೋಲಿ ಮಧ್ಯೆ ಎಳೆದ ಅಂಕುಡೊಂಕಾದ ಗೆರೆಯಂತೆ ಕಾಣುವ ಆ ಕ್ರೂಕೆಡ್ ಸ್ಟ್ರೀಟ್ ನ್ನು ಇನ್ನೊಮ್ಮೆ ಕಣ್ಮನದಲ್ಲಿ ತುಂಬಿಕೊಂಡೆ..

ಮುಂದುವರಿಯುವುದು…..

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ  : http://surahonne.com/?p=35465

–ಶಂಕರಿ ಶರ್ಮ, ಪುತ್ತೂರು. 

8 Responses

  1. ನಾಗರತ್ನ ಬಿ. ಆರ್ says:

    ಅಮೆರಿಕದ ಪ್ರವಾಸ ಕಥನದಲ್ಲಿ..ಈ ಸಾರಿ
    ಅಲ್ಲಿ…ಕಂಡುಂಡ ಅನುಭವವನ್ನು ಅಭಿವ್ಯಕ್ತ ಪಡಿಸಿರುವ ರೀತಿ.. ಸೊಗಸಾಗಿ ಬಂದಿದೆ….ಧನ್ಯವಾದಗಳು ಮೇಡಂ.

    • . ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು ನಾಗರತ್ನ ಮೇಡಂ.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

    • . ಶಂಕರಿ ಶರ್ಮ says:

      ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.

  3. Padma Anand says:

    ಕಣ್ಣಿಗೆ ಕಟ್ಟುವಂತಹ ಸುಂದರ ವರ್ಣನೆಯೊಂದಿಗೆ ಚಂದದಿಂದ ಮುಂದುವರೆಯುತ್ತಿದೆ ಪ್ರವಾಸೀ ಕಥನ.

    • . ಶಂಕರಿ ಶರ್ಮ says:

      ಮೆಚ್ಚುಗೆಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ನಮನಗಳು ಪದ್ಮಾ ಮೇಡಂ.

  4. . ಶಂಕರಿ ಶರ್ಮ says:

    ಧನ್ಯವಾದಗಳು ನಯನಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: