ತಾಳ್ಮೆ, ವಿವೇಕಗಳ ಖನಿ ಮುದ್ಗಲ
ಬಾಳಿನ ನೆಮ್ಮದಿಯ ತಳಹದಿಯೇ ತಾಳ್ಮೆ. ‘ತಾಳಿದವ ಬಾಳಿಯಾನು’ ಎಂಬ ಗಾದೆಯನ್ನು ಕೇಳದವರಿಲ್ಲ.‘ತಾಳುವಿಕೆಗಿಂತ ತಪವು ಇಲ್ಲ’ ಎಂದು ದಾಸರು ಹಾಡಿರುವ ವಚನ. ಗಳನ್ನವನ್ನಾದರೂ ತಣಿಸಿ ಉಣ್ಣು’ ಎಂಬುದು ಇದೇ ಅರ್ಥವನ್ನು ಕೊಡುವ
ಇನ್ನೊಂದು ಸೊಲ್ಲು, ಹೌದು, ತಾಳ್ಮೆ ಎಂಬುದು ಮಾನವೀಯ ಮೌಲ್ಯ ಮನಸ್ಸಿನ ಭಾವನೆಗಳನ್ನು ನಿಯಂತ್ರಿಸಿ ಆ ಭಾವನೆಗಳಿಂದಾಗ ತಕ್ಕ ಅಪಾಯಗಳನ್ನು ತಪ್ಪಿಸಿ ಸದ್ವ್ಯಕ್ತಿಗಳನ್ನಾಗಿ ರೂಪಿಸಬಲ್ಲ ಒಂದು ದಿವ್ಯ ಶಕ್ತಿಯ ಗುಣ.
ಆದರ ಈ ತಾಳ್ಮೆಯ ಮಿತಿ ಎಷ್ಟು? ಯಾರಿಗೆ ಹೇಗೆ ಇದ್ದೀತು? ಎಂಬುದು ಪ್ರಶ್ನೆ. ನನ್ನ ತಾಳ್ಮೆಗೂ ಒಂದು ಮಿತಿ ಇದೆ. ಅದನ್ನು ಪರೀಕ್ಷಿಸಬೇಡ ಎಂಬುದಾಗಿ ಹೇಳುವವರನ್ನು ಕೇಳಿದ್ದೇವೆ. ಒಂದಷ್ಟು ಸಹಿಸಿಕೊಂಡು ಮತ್ತೆ ಉದ್ರೇಕದಲ್ಲಿ ಹೇಳುವ ಮಾತದು. ತಾಯಿಯೋ ಪತ್ನಿಯೋ ಅಕ್ಕನೋ ತಂಗಿಯೋ ಮನೆಯಲ್ಲಿ ಊಟಹಾಕುವವರು ಸ್ವಲ್ಪ ಹೊತ್ತು ವಿಳಂಬ ಮಾಡಿದರೆ, ಹಸಿವೆ ತಡೆದುಕೊಳ್ಳುವುದಕಾಗುವುದಿಲ್ಲ. ಏನಿವತ್ತು ಊಟ ಇಲ್ಲವೇ!? ಉಪವಾಸವೇ ಗತಿಯೇ? ಎಂದು ಸಿಡುಕುತ್ತಾರೆ. ಹೀಗಿರುವಾಗ ಒಂದು ದಿನ ಆಹಾರ ಸಿಗದಿದ್ದರೆ…!? ಸಹಜವಾಗಿ ಸಿಟ್ಟು, ಮಾತ್ಸರ್ಯ, ಉದ್ವೇಗ ಹುಟ್ಟುತ್ತದೆ. ಆದರೆ… ನಾನಿಲ್ಲಿ ತಿಳಿಯಪಡಿಸುವುದು ಒಂದು…ದಿನ ಅಲ್ಲಿ ಎರಡು ದಿನ ಅಲ್ಲ, ನಾಲ್ಕು…. ದಿನವೂ ಅಲ್ಲ, ಎಂಟು….. ದಿನವೋ? ಅದೂ ಅಲ್ಲ. ಮತ್ತೆಷ್ಟು? ಹದಿನೈದು ದಿನಗಳಿಗೊಮ್ಮೆ ಆಹಾರ ಸೇವಿಸುವವರು ಏನು ಮಾಡಬೇಕು? ಒಂದು ವೇಳೆ ಅಂತಹವರು ಊಟ ಮಾಡುವಾಗಲು ಕುಳಿತಾಗ ಬೇರೆಯವರು ಅದನ್ನು ಕಸಿಯಲು ಬಂದರೆ..? ಅವರ ಪ್ರತಿಕ್ರಿಯೆ ಹೇಗಿದ್ದೀತು? ಅಂತಹವರು ಏನಾದರೂ ಸಬೂಬು ಹೇಳಿ ಬಂದವರನ್ನು ಸಾಗಹಾಕಬಹುದು, ಅಥವಾ ಬಾಗಿಲು ಭದ್ರಪಡಿಸಿಕೊಂಡು ಊಟ ಮಾಡಬಹುದು, ಎಂಬುದು ನಮ್ಮ ಊಹೆ. ಆದರಿಲ್ಲಿ ಹಾಗೆ ಮಾಡದೇ ಬಂದವರನ್ನು ‘ಅತಿಥಿ ದೇವೋಭವ’ ಎಂದುಪಚರಿಸಿ ತನ್ನ ಊಟವನ್ನಿಕ್ಕಿ ಪೂಜೆ ಮಾಡಿ ಕಳುಹಿಸುತ್ತಾನೆ. ನಮ್ಮ ಪುರಾಣ ಪುರುಷ ರತ್ನನೊಬ್ಬ. ಅದೂ ಒಂದು ಬಾರಿಯಲ್ಲ! ಸತತವಾಗಿ ಆರು ಬಾರಿ!! ಆತನೇ ಮುದ್ಗಲ ಮುನಿ. ಮುದ್ಗಲನು ಕುರುಕ್ಷೇತ್ರವಾಸಿ. ಈತನು ಭರ್ಯಾಶ್ವರಾಜನ ಮಗ. ಇವನ ಮಗನ ಹೆಸರು ಜೀವೋದಾಸ. ಮುದ್ಗಲನ ಮಗಳೇ ಗೌತಮ ಋಷಿ ಪತ್ನಿಯಾದ ಅಹಲ್ಯ ಈಕೆ ಪಂಚಕನೈಯರಲ್ಲಿ ಒಬ್ಬಳು.
ಮುದ್ಗಲನು ‘ಶಿಲೋಂಭ’ ವೃತ್ತಿಯಿಂದ ತನ್ನ ಹೊಟ್ಟೆಯನ್ನು ಹೊರೆದುಕೊಳ್ಳುತ್ತಿದ್ದ. ಹಾಗೆಂದರೆ ಗದ್ದೆಯಲ್ಲಿ ಬಿದ್ದಿರುವ ಕಾಳುಗಳನ್ನು ಹೆಕ್ಕುವುದು ಎಂದರ್ಥ. ಹದಿನೈದು ದಿನಗಳಿಗೊಮ್ಮೆ ಬರುವ ಹುಣ್ಣಿಮೆ ಮತ್ತು ಅಮವಾಸ್ಯೆಗಳಲ್ಲಿ ಅವನು ಹೆಕ್ಕುತ್ತಿದ್ದ, ಭತ್ತದ ಹೊಲಗಳಲ್ಲಿ ರೈತರು ಪೈರನ್ನು ಕೊಯ್ದು, ಮನೆಗೆ ಒಯ್ದು, ಉಳಿದುದನ್ನು ಒಂದೊಂದೇ ಹೆಕ್ಕಿ ತನ್ನ ಅನ್ನವನ್ನು ತಾನೇ ಸಂಪಾದಿಸುತ್ತಿದ್ದ. ಹೀಗೆ ಶೇಖರಿಸಿದ ಧಾನ್ಯಗಳಿಂದ ಭೋಜನವನ್ನು ತಯಾರಿಸಿ ತಾನು ಊಟ ಮಾಡುವ ಹೊತ್ತಿಗೆ ಅತಿಥಿಗಳು ಬಂದರೆ ಅವರಿಗೆ ಕೊಟ್ಟು ಮಿಕ್ಕಿದ್ದನ್ನು ತಾನು ಸ್ವೀಕರಿಸುತ್ತಿದ್ದ. ಇದನ್ನು ತಿಳಿದ ದೂರ್ವಾಸಮುನಿಗಳು ಈತನನ್ನು ಪರೀಕ್ಷಿಸಬೇಕೆಂದು ಮನದಲ್ಲೇ ಲೆಕ್ಕ ಹಾಕಿದರು.
ಹೀಗಿರಲು ಒಂದು ದಿನ ಮುದ್ಗಲನ ಆಶ್ರಮಕ್ಕೆ ದೂರ್ವಾಸಮುನಿಗಳ ಆಗಮನವಾಯಿತು. ಅಂದು ಅವನು ಆಹಾರ ಸೇವಿಸಲು ಅಣಿಯಾಗಿದ್ದ ದಿನವಾಗಿತ್ತು. ಅವರು ಭೋಜನಕ್ಕಾಗಿಯೇ ಬಂದಿದ್ದರು. ಮುದ್ಗಲನು ತನ್ನ ನಿಯತ್ತಿನಂತೆ ದೂರ್ವಾಸರಿಗೆ
ಭೋಜನವಿಕ್ಕಿ ಸತ್ಕಾರ ಮಾಡಿದ. ದೂರ್ವಾಸರಾದರೋ ಅವನ ಅನ್ನದ ಪಾತ್ರೆಯಲ್ಲಿ ಒಂದು ಅಗಳನ್ನೂ ಬಿಡದೆ ಭುಂಜಿಸಿದರು. ಒಂದು ಅಗಳಾದರೂ ಉಳಿದಿದ್ದರೆ ಅದನ್ನು ವೃದ್ಧಿಪಡಿಸುವ ಶಕ್ತಿ ಮುದ್ಗಲನಿಗೆ ಇತ್ತು. ಆದರೆ ಒಂದಗಳೂ ಉಳಿದಿರಲಿಲ್ಲ. ಈ ರೀತಿ ಒಂದಲ್ಲ, ಎರಡಲ್ಲ, ಮೂರಲ್ಲ, ಆರು ಬಾರಿ ಸತತವಾಗಿ ನಡೆಯಿತು. ಅಂದರ ಮೂರು ತಿಂಗಳು ಆತನಿಗೆ ಊಟ ಇಲ್ಲದಾಯಿತು. ಮುದ್ಗಲನ ತಾಳ್ಮೆ ಕುಂದಲೇ ಇಲ್ಲ! ಶಾಂತಿ ಕಳೆದು ಹೋಗಿರಲಿಲ್ಲ. ಮುಖ ಮಾಸಿರಲಿಲ್ಲ. ದೂರ್ವಾಸರ ಪರೀಕ್ಷೆಯಲ್ಲಿ ಮುದ್ಗಲ ಗೆದ್ದಿದ್ದ!
‘ನೀನು ಸಶರೀರನಾಗಿ ಸ್ವರ್ಗಕ್ಕೆ ಹೋಗು’ ಎಂಬ ‘ವರ’ ದೂರ್ವಾಸರ ಬಾಯಿಯಿಂದ ಹೊರಬಿತ್ತು. ಕೂಡಲೇ ದೇವದೂತರು ವಿಮಾನದಲ್ಲಿ ಬಂದು ನಿನ್ನ ಅನ್ನದಾನದ ಮಹಿಮೆಯಿಂದ ಸ್ವರ್ಗವನ್ನು ಗೆದ್ದಿರುವ ವಿಮಾನವನ್ನು ಏರು’ ಎಂದಾಗ, ಮುದ್ಗಲ;
ಸ್ವರ್ಗದ ಗುಣದೋಷಗಳನ್ನು ಪ್ರಶ್ನಿಸಿದ. ಆಗ ದೇವದೂತ ‘ಭೂಮಿಯಲ್ಲಿ ಮಾಡಿದ ಪುಣ್ಯಗಳಿಗನುಗುಣವಾಗಿ ಸ್ವರ್ಗದಲ್ಲಿ ಸುಖ. ಆ ಪುಣ್ಯ ಮುಗಿಯಲು ವಾಪಾಸು ಭೂಮಿಗೆ ಬರಬೇಕು’ ಎಂದ. ಆಗ ಮುದ್ಗಲ ಕೂಡಲೇ ಪ್ರಶ್ನಿಸಿದ್ದೇನೆಂದರೆ ಸ್ವರ್ಗಕ್ಕಿಂತಲೂ ಮಿಗಿಲಾದ ಲೋಕವೊಂದಿದೆ, ಅದನ್ನು ‘ಪರಮಪದ’ ಎಂದು ಕರೆಯುತ್ತಾರೆ. ಅಲ್ಲಿಯ ಆನಂದ ಇಲ್ಲಿಯ ಯಾವುದಕ್ಕೂ ಸಮವಲ್ಲ. ಅಲ್ಲಿ ಹೋದವರು ಮರಳಿ ಬರುವುದಿಲ್ಲ’ ಎಂದ, ಮುದ್ಗಲ ಸ್ವಲ್ಪ ಹೊತ್ತು ಚಿಂತಿಸಿ `ನಾನು ಸ್ವರ್ಗಸುಖ ಬಯಸುವುದಿಲ್ಲ ಬದಲಾಗಿ ದುಃಖ-ಆಯಾಸದ ಪುನರಾವೃತ್ತಿ ಇಲ್ಲದ ನಾಶವಿಲ್ಲದಿರತಕ್ಕ ಲೋಕವನ್ನು ಅಂದರೆ… ಪರಮಪದವನ್ನ ಬಯಸುತ್ತೇನೆ’ ಎಂದು ಬಿಟ್ಟು ದೇವದೂತನನ್ನು ಹಿಂದಕ್ಕೆ ಕಳುಹಿಸಿದ. ಮುದ್ಗಲನು ಮುಂದೆ…. ನಿಂದೆ-ಸ್ತುತಿಗಳಲ್ಲೂ, ಮಣ್ಣು-ಚಿನ್ನಗಳಲ್ಲೂ ಸಮಬುದ್ಧಿ ಉಳ್ಳವನಾಗಿ ಬ್ರಹ್ಮಜ್ಞಾನವನ್ನು ಪಡೆದು ಶಾಶ್ವತವಾದ ಮೋಕ್ಷವನ್ನು ಹೊಂದಿದನು. ‘ತಾಳ್ಮೆ ಕಹಿಯಾದರೂ ಅದರ ಫಲವು ಸಿಹಿಯಾಗಿದೆ’ ಎಂದು ಈತನ ಚರಿತ್ರೆಯಿಂದ ತಿಳಿಯಬಹುದು.
ಗಂಗಾ-ಸರಯೂ ನದಿಗಳ ಸಂಗಮದಲ್ಲಿ ಮುದ್ಗಲರ ಆಶ್ರಮವಿತ್ತು. ಒಮ್ಮೆ ದೀಪಾವಳಿ ಹಬ್ಬಕ್ಕಾಗಿ ದಶರಥ ಕೌಸಲ್ಯೆಯರು ರಾಮಾದಿಗಳೊಡನೆ ಮಿಥಿಲೆಗೆ ಹೋಗಿ ಹಿಂದಿರುಗುವಾಗ ಸೀತಾಸ್ವಯಂವರದಲ್ಲಿ ಪರಾಜಿತರಾದ ಕೆಲವು ಕ್ಷತ್ರಿಯ ರಾಜರೆಲ್ಲ ಒಟ್ಟುಗೂಡಿ ಮಿಥಿಲೆಯ ಮೇಲೆ ದಂಡೆತ್ತಿ ಬರಲು, ಶ್ರೀರಾಮ, ಭರತ, ಲಕ್ಷಣ, ಶತ್ರುಘ್ನರು ಎಚ್ಚರ ತಪ್ಪಿಬಿದ್ದರಂತೆ. ಶ್ರೀರಾಮನು ಬೇಗ ಎಚ್ಚರಗೊಂಡು ಒಂದಿಷ್ಟು ಶೈತ್ಯೋಪಚಾರಗಳಿಂದ ಶುಶ್ರೂಷೆ ಮಾಡಲು ಉಳಿದವರೆಲ್ಲ ಎಚ್ಚರಗೊಂಡರೂ ಭರತ ಮಾತ್ರ ಎಚ್ಚರಗೊಳ್ಳಲಿಲ್ಲವಂತೆ. ಶ್ರೀರಾಮನು ಲಕ್ಷ್ಮಣನಿಗೆ, ಇಲ್ಲೇ ಸಮೀಪದಲ್ಲಿ ಮುದ್ಗಲರ ಆಶ್ರಮವಿದೆ. ಅಲ್ಲಿ ಅಮೃತ ಸಂಜೀವಿನಿ ಮಹೌಷಧಗಳ ಲತೆಗಳಿವೆ. ಅವನ್ನು ತೆಗೆದುಕೊಂಡು ಬಾ ಎಂದನಂತೆ, ಲಕ್ಷ್ಮಣ ಹಾಗೆಯೇ ಮಾಡಲು ರಾಮನು ಅದರ ಸಹಾಯದಿಂದ ಭರತನನ್ನು ಬದುಕಿಸಿದನಂತೆ, ಮುದ್ಗಲ ಮುನಿಯ ಆಶ್ರಮ ಪರಿಸರಕ್ಕೇ ಅಷ್ಟು ಮಹೌಷಧಿಗಳ ಮಹತ್ವವಿದೆ ಎಂದ ಹಾಗಾಯ್ತು.
ಮುದ್ಗಲ ಮಹರ್ಷಿಯ ದಶರಥನಿಗೆ ಶ್ರೀರಾಮನು ಶ್ರೀಮನ್ನಾರಾಯಣನ ಅವತಾರವೆಂದೂ ಅವನು ಹತ್ತು ಸಾವಿರ ವರ್ಷ ಕಾಲ ಅಯೋಧ್ಯೆಯಲ್ಲಿ ರಾಜ್ಯಭಾರ ಮಾಡುವನೆಂದೂ ಶ್ರೀರಾಮನಿಗೆ ಇಬ್ಬರು ಗಂಡು ಮಕ್ಕಳೂ, 24 ಮಂದಿ ಮೊಮ್ಮಕ್ಕಳು ಆಗುವರೆಂದು ದಶರಥನಿಗೆ ಭವಿಷ್ಯ ಹೇಳಿದ್ದನೆಂದು ಚರಿತ್ರೆಯಿಂದ ತಿಳಿದು ಬರುತ್ತದೆ.
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಸುರಹೊನ್ನೆ ಅಡ್ಮಿನರ್ ಹೇಮಮಾಲಾ ಹಾಗೂ ಓದುಗರಿಗೆ ಅನಂತ ಧನ್ಯವಾದಗಳು.
ಧನ್ಯವಾದಗಳು
ಎಂದಿನಂತೆ ಪುರಾಣ ಕಥೆ ಗಳಲ್ಲಿ ಈ ಸಾರಿಯ ಮುದ್ಗಲಮುನಿಯ ಕಥೆ.. ತುಂಬಾ ಚೆನ್ನಾದ ನಿರೂಪಣೆಯೊಂದಿಗೆ ಮೂಡಿಬಂದಿದೆ.. ಧನ್ಯವಾದಗಳು ಮೇಡಂ
ಮುದ್ಗಲ ಮುನಿಯ ಕಥೆ ಕುತೂಹಲಕಾರಿಯಾಗಿದೆ…ಧನ್ಯವಾದಗಳು ವಿಜಯಕ್ಕಾ.
ಅಪರೂಪದ ಕಥೆ.
ಕುತೂಹಲಭರಿತ ಮುದ್ಗಲ ಮುನಿಯ ಕಥೆ ಎಂದಿನಂತೆ ನಿಮ್ಮ ನಿರೂಪಣೆಯಲ್ಲಿ ಸೊಗಸಾಗಿ ತಾಳ್ಮೆಯ ಮಹತ್ವವನ್ನು ಸಾರುತ್ತಾ ಸಾಗಿ ಬಂದಿದೆ. ಅಭಿನಂದನೆಗಳು.