ವರಾಹಿ ನದಿ… ಭೂಗರ್ಭ ವಿದ್ಯುದಾಗಾರ
ಪಶ್ಚಿಮ ಘಟ್ಟಗಳ ಸಾಲಿನಲ್ಲಿ, ಗಿರಿಶಿಖರಗಳ ನಡುವೆ, ಹೊನ್ನಿನ ಮುಕುಟದಂತೆ ಕಂಗೊಳಿಸುವ ಆಗುಂಬೆಯ ಮಡಿಲಲ್ಲಿ ಜನಿಸಿದ ವರಾಹಿಯ ಯಶೋಗಾಥೆಯನ್ನು ಕೇಳೋಣ ಬನ್ನಿ. ಪುರಾಣಗಳಲ್ಲಿ ಪ್ರಸ್ತುತ ಪಡಿಸಿರುವ ದಶಾವತಾರಗಳಲ್ಲೊಂದಾದ ವರಾಹಾವತಾರ ಎಲ್ಲರಿಗೂ ಚಿರಪರಿಚಿತವೇ. ಅಸುರರಿಂದ ಭೂದೇವಿಯನ್ನು ರಕ್ಷಿಸಲು ವಿಷ್ಣುವು ವರಾಹವತಾರ ತಾಳಿದನೆಂದು ಐತಿಹ್ಯ. ವರಾಹನ ಸಹಧರ್ಮಿಣಿ ವರಾಹಿ ಎಂಬ ಪೌರಾಣಿಕ ಹಿನ್ನೆಲೆಯಿದೆ.
ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೆಬ್ಬಾಗಿಲೆಂಬ ಪುಟ್ಟ ಹಳ್ಳಿಯಲ್ಲಿ ಉದ್ಭವಿಸಿದ್ದಾಳೆ ವರಾಹಿ. ಸಮುದ್ರ ಮಟ್ಟದಿಂದ ಸುಮಾರು 2,400 ಅಡಿ ಎತ್ತರದಲ್ಲಿ ಹುಟ್ಟಿದ ಈ ನದಿ, ಹಲವು ಹಳ್ಳ ಕೊಳ್ಳಗಳೊಂದಿಗೆ ಸೇರಿ ಮುಂದೆ ಸಾಗುವಳು. ವರಾಹಿಯು – ಹಾಲಡಿ, ಬಸ್ರೂರು, ಕುಂದಾಪುರ ಹಾಗೂ ಗಂಗೊಳ್ಳಿಗಳ ಮೂಲಕ ಸಾಗುತ್ತಾ ಉಪನದಿಗಳಾದ ಸೌಪರ್ಣಿಕಾ, ಕೇದಗಿ, ಚಕ್ರ, ಕುಬ್ಜ ಹೊಳೆಗಳೊಂದಿಗೆ ಸೇರಿ ‘ಪಂಚ ಗಂಗಾವಲಿ’ ಎಂಬ ನಾಮಧೇಯ ಹೊಂದುವಳು. ಅಂತಿಮವಾಗಿ, ವರಾಹಿಯು ಅರಬ್ಬೀ ಸಮುದ್ರದಲ್ಲಿ ಲೀನವಾಗುವಳು.
ಪ್ರಕೃತಿಯ ರಮಣೀಯವಾದ ಪ್ರದೇಶದಲ್ಲಿ ಜನಿಸುವ ವರಾಹಿಯು, ಪ್ರವಾಸಿಗರ ಕಣ್ಮನ ತಣಿಸುವಳು. ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಕಣಿವೆಗಳಲ್ಲಿ ನಲಿಯುತ್ತಾ ಸಾಗುವ ಕವಲು ಕವಲಾದ ಹಳ್ಳಕೊಳ್ಳಗಳು, ಆಗಸದೆತ್ತರಕ್ಕೆ ಮೆಲ್ಲ ಮೆಲ್ಲನೆ ಚಲಿಸುವ ಮೋಡಗಳು ಎಂತಹವರನ್ನೂ ಮರುಳುಗೊಳಿಸುತ್ತವೆ. ವರಾಹಿಯು, ಹೊಸನಗರ ತಾಲ್ಲೂಕಿನಲ್ಲಿ, ‘ಕುಂಚಿಕಲ್ ಜಲಪಾತವಾಗಿ’ ಬಂಡೆಗಲ್ಲುಗಳ ಮೇಲೆ ಧುಮುಕುವ ಪರಿ ಮನಮೋಹಕವಾಗಿದೆ. ಮುಂದೆ ಸಾಗುವ ನದಿಗೆ ‘ಮಾಣಿಬೈಲು’ ಎಂಬ ಗ್ರಾಮದ ಬಳಿ ಒಂದು ಜಲಾಶಯವನ್ನು ನಿರ್ಮಿಸಲಾಗಿದೆ. ಇದೇ ‘ಮಾಣಿ ಜಲಾಶಯ’.ಜನರಿಗೆ ನೀರುಣಿಸಲು, ರೈತ ಬಾಂಧವರು ಬೆಳೆಯುವ ಬೆಳೆಗಳಿಗೆ ಜೀವ ತುಂಬಲು ನಿಂತಿದ್ದಾಳೆ ವರಾಹಿ. ಇಲ್ಲಿಂದ ಮುಂದೆ ಸಾಗುವ ವರಾಹಿಗೆ ಹೊಸ ರೂಪವನ್ನೇ ನೀಡಿದ್ದಾರೆ ನಮ್ಮ ಇಂಜಿನಿಯರ್‌ಗಳು. ಉಡುಪಿ ಜಿಲ್ಲೆಯ ಹೊಸಂಗಡಿಯ ಬಳಿ ಒಂದು ಭೂಗರ್ಭ ವಿದ್ಯುದಾಗಾರವಾಗಿ, ಒಂದು ಶಕ್ತಿ ಕೇಂದ್ರವಾಗಿ ಪರಿವರ್ತನೆಯಾಗಿದ್ದಾಳೆ. ಎಲ್ಲರಿಗೂ ಬೆಳಕು ನೀಡುತ್ತಾ, ಮಾನವ ನಿರ್ಮಿತ ಉಪಕರಣಗಳಿಗೆ ಪ್ರಾಣಶಕ್ತಿ ನೀಡುತ್ತಾ ನಿಂತಿರುವಳು ಈ ಮಹಾತಾಯಿ ವರಾಹಿ.
ಬನ್ನಿ, ವರಾಹಿ ಭೂಗರ್ಭ ವಿದ್ಯುದಾಗಾರದ ತಾಂತ್ರಿಕ ವಿವರಗಳನ್ನು ತಿಳಿಯಲು ಯತ್ನಿಸೋಣ. ಈ ವಿದ್ಯುದಾಗಾರವು ಶಿವಮೊಗ್ಗಾದಿಂದ ಸುಮಾರು 115 ಕಿ.ಮೀ. ದೂರದಲ್ಲಿದೆ. ಏಷ್ಯಾ ಖಂಡದಲ್ಲಿ ಎರಡನೇ ಸ್ಥಾನದಲ್ಲಿರುವ ವರಾಹಿ ಭೂಗರ್ಭ ವಿದ್ಯುದಾಗಾರವು ಭಾರತದಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಕರ್ನಾಟಕದ ಪ್ರಪ್ರಥಮ ಭೂಗರ್ಭ ವಿದ್ಯುದಾಗಾರವಾಗಿದ್ದು, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಂಗೊಳಿಸುತ್ತಿದೆ. ಮಾಣಿ ಜಲಾಶಯ ನಿರ್ಮಾಣವಾದ ನಂತರ, ಅಲ್ಲಿನ ಭೌಗೋಳಿಕ ಪರಿಸರವನ್ನು ಅಧ್ಯಯನ ಮಾಡಿದ ತಜ್ಞರು, ಜಲ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ನಿರ್ಮಿಸುವ ಯೋಜನೆ ಸಿದ್ಧಪಡಿಸಿದರು. ನಂತರದ ದಿನಗಳಲ್ಲಿ, ಕೆಲವು ಇಂಜನಿಯರ್‌ಗಳು, ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು, ಹಲವಾರು ವಿಷಯಗಳನ್ನು ಕೂಲಂಕುಷವಾಗಿ ಚರ್ಚಿಸಿದರು. ಈ ಯೋಜನೆಗೆ ನಿಗದಿಯಾದ ವೆಚ್ಚವನ್ನು ಕಡಿಮೆಮಾಡಲು, ಪರಿಸರಕ್ಕಾಗುವ ಹಾನಿಯನ್ನು ತಗ್ಗಿಸಲು ಹಾಗೂ ತಾಂತ್ರಿಕ ಕೌಶಲ್ಯದ ಬಳಕೆಮಾಡಲು – ವರಾಹಿ ವಿದ್ಯುದಾಗಾರವನ್ನು ಭೂಮಿಯ ಮೇಲೆ ನಿರ್ಮಿಸುವ ಬದಲಿಗೆ ಭೂಗರ್ಭದಲ್ಲಿ ನಿರ್ಮಿಸುವ ಯೋಜನೆ ರೂಪಿಸಿದರು.
ಪ್ರಾಕೃತಿಕ ಶ್ರೀಮಂತಿಕೆಯ ಮಧ್ಯೆ ಕಂಗೊಳಿಸುವ ಮಾಣಿ ಜಲಾಶಯವನ್ನು ಹನ್ನೊಂದು ಬೆಟ್ಟಗಳ ಮಧ್ಯೆ ನಿರ್ಮಿಸಲಾಗಿದೆ. ಇದನ್ನು ‘ಪರ್ವತಗಳ ಮೇಲಿನ ಬಟ್ಟಲಂದೂ’ ಕರೆಯಲಾಗುವುದು. ಕೆ.ಪಿ.ಸಿ ತಂತ್ರಜ್ಞರು ನಿರ್ಮಿಸಿದ ಮೊದಲ ಜಲಾಶಯ ಇದು. ಸುಮಾರು 565 ಮೀ ಉದ್ದವಿದ್ದು, 59 ಮೀ ಎತ್ತರವಿದೆ. ಈ ಜಲಾಶಯ 31 ಟಿ.ಎಂ.ಸಿ. ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಹಾಗೂ ವಾರ್ಷಿಕವಾಗಿ ನಲವತ್ತು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದು. ಮಾಣಿ ಜಲಾಶಯದಿಂದ ಸುಮಾರು 26 ಕಿ.ಮೀ. ದೂರದಲ್ಲಿರುವ ವರಾಹಿ ಭೂಗರ್ಭ ವಿದ್ಯುದಾಗಾರವು ಒಂದು ಇಂಜಿನಿಯರಿಂಗ್ ಕೌತುಕ ಎಂದು ಹೇಳಲಾಗುತ್ತದೆ. ತಂತ್ರಜ್ಞರು ಬೆಟ್ಟವನ್ನು ಕೊರೆದು ಸುರಂಗವನ್ನು ನಿರ್ಮಿಸಿ ವಿದ್ಯುತ್ ಉತ್ಪಾದಿಸಲು ತಮ್ಮ ತಾಂತ್ರಿಕ ಕೌಶಲವನ್ನು ಬಳಸಿದ್ದಾರೆ. ಸುರಂಗದೊಳಗೆ ಪ್ರವೇಶ ಮಾಡುತ್ತಿದ್ದಂತೆ, ವರಾಹಿ ನದಿಯು ವೀಕ್ಷಕರ ಮೇಲೆ ಜಲ ಪ್ರೋಕ್ಷಣೆ ಮಾಡುತ್ತಾಳೆ. ಅಲ್ಲಲ್ಲಿ ನೀರಿನ ಒರತೆಗಳು ಹರಿಯುವುದು ಕಂಡು ಬರುತ್ತದೆ. ನೈಸರ್ಗಿಕವಾದ ತಂಪು ಗಾಳಿ ಮನಸ್ಸಿಗೆ ಮುದ ನೀಡುತ್ತದೆ. ಬೃಹದಾಕಾರದ ಯಂತ್ರಗಳು, ಅವುಗಳಿಂದ ಹೊಮ್ಮುವ ಕಿವುಡಾಗುವಂತಹ ಸದ್ದು ನಮ್ಮನ್ನು ಸ್ವಾಗತಿಸುತ್ತವೆ. ಸುಮಾರು ಆರೂವರೆ ಕಿ.ಮೀ. ಉದ್ದವಿರುವ ಈ ಸುರಂಗವು ತಂತ್ರಜ್ಞರ ನೈಪುಣ್ಯತೆಯನ್ನು ಎತ್ತಿಹಿಡಿಯುತ್ತಿದೆ.
ಮೊದಲನೇ ಹಂತದಲ್ಲಿ 230 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಪೆಲ್ಟಾನ್ ಮಾದರಿಯ ಟರ್ಬೈನ್‌ಗಳನ್ನು ಅಳವಡಿಸಿದರು, ಎರಡನೇ ಹಂತದಲ್ಲಿಯೂ 230 ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸುವ ಟರ್ಬೈನ್‌ಗಳನ್ನು ಹಾಕಲಾಯಿತು. ನಾಲ್ಕು ಟರ್ಬೈನ್‌ಗಳಿಂದ 460 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. (4 x 115 MW =460). ಈಗ ಪ್ರತಿ ವರ್ಷ ಸರಾಸರಿ 1100 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಇಲ್ಲಿನ ವಿದ್ಯುತ್ ಉತ್ಪಾದನಾ ವೆಚ್ಚವನ್ನು ಇತರೆ ವಿದ್ಯುದಾಗಾರಗಳಿಗೆ ಹೋಲಿಸಿದರೆ ಕಡಿಮೆ ಎಂದು ಹೇಳಲಾಗುವುದು. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನ ಬಳಕೆದಾರರು – ಕರ್ನಾಟಕ, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೆಲವು ದಕ್ಷಿಣ ಭಾರತದ ರಾಜ್ಯಗಳು.
ಉಡುಪಿ ಜಿಲ್ಲೆಯ ಹೊಸಂಗಡಿಯಲ್ಲಿ ಸ್ಥಾಪಿತವಾಗಿರುವ ವರಾಹಿ ಭೂಗರ್ಭ ವಿದ್ಯುತ್ ಮಂಡಳಿಯ ನಿರ್ಮಾಣದ ಹೊಣೆ ಹೊತ್ತವರು – ಕರ್ನಾಟಕ ವಿದ್ಯುತ್ ನಿಗಮ ಮಂಡಳಿ. ಇದನ್ನು ನಿರ್ಮಿಸಿದ ಕೀರ್ತಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಇವರಿಗೆ ಸೇರುತ್ತದೆ. 1979 ರಲ್ಲಿ ಆರಂಭವಾದ ಈ ವಿದ್ಯುದಾಗಾರವು 1989 ರಲ್ಲಿ ಪೂರ್ಣಗೊಂಡಿತು ಹಾಗೂ 1993 ರಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಆರಂಭಿಸಿತು.
ಜಲ ವಿದ್ಯುತ್ ಯೋಜನೆಗಳು – ನೀರಿನ ರಭಸವಾದ ಚಲನೆಯಿಂದ ತಿರುಗುವ ಟರ್ಬೈನ್‌ಗಳಿಂದ ಉಂಟಾಗುವ ಶಕ್ತಿಯನ್ನು ಜನರೇಟರ್‌ಗಳಿಗೆ ವರ್ಗಾಯಿಸಿ ವಿದ್ಯುತ್‌ಚ್ಛಕ್ತಿಯನ್ನು ಉತ್ಪಾದಿಸುತ್ತವೆ. ಭೂಗರ್ಭದಲ್ಲಿ ಸುರಂಗ ಕೊರೆದು ನಿರ್ಮಿಸಲಾಗುವ ಜಲವಿದ್ಯುತ್ ಕೇಂದ್ರಗಳಿಗೆ ಸುದೀರ್ಘ ಆಯುಷ್ಯ ಪರಿಸರ ಮಾಲಿನ್ಯ ಉಂಟಾಗುವುದಿಲ್ಲ. ವಿದ್ಯುತ್ ಉತ್ಪಾದನೆಯ ನಂತರ ಆ ನೀರನ್ನು ಕುಡಿಯಲು, ನೀರಾವರಿಗಾಗಿ ಹಾಗೂ ಕಾರ್ಖಾನೆಗಳಿಗೆ ಬಳಸಬಹುದು. ಆದರೆ ಜಲಾಶಯಗಳನ್ನು ನಿರ್ಮಿಸಲು, ವಿದ್ಯುದಾಗಾರಗಳನ್ನು ಕಟ್ಟಲು ಅಪಾರವಾದ ಹಣ ಬೇಕಾಗುವುದು. ಆ ಪ್ರದೇಶದಲ್ಲಿ ವಾಸ ಮಾಡುವ ಜನರ ಸ್ಥಳಾಂತರ ಮಾಡಬೇಕಾಗುವುದು.
ಭಾರತದಲ್ಲಿರುವ ಇನ್ನಿತರ ಭೂಗರ್ಭ ವಿದ್ಯುದಾಗಾರಗಳ ಬಗ್ಗೆ ಮಾಹಿತಿ ಪಡೆಯೋಣ ಬನ್ನಿ. ಹಿಮಾಚಲ್ ಪ್ರದೇಶದಲ್ಲಿ ಸಟ್ಲೆಜ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ – ನಾಥ್‌ಪಾ ಝಕ್ರಿ ಜಲಾಶಯದ ಬಳಿ ನಿರ್ಮಿಸಲಾಗಿರುವ ಜಲವಿದ್ಯುತ್ ಕೇಂದ್ರವು, ಏಷ್ಯಾದಲ್ಲಿ ನಿರ್ಮಾಣವಾದ ಪ್ರಪ್ರಥಮ ಭೂಗರ್ಭ ಜಲವಿದ್ಯುತ್ ಕೇಂದ್ರ. ಇದು ಅತ್ಯಂತ ದೊಡ್ಡದಾದ ವಿದ್ಯುದಾಗಾರ. ಕೇರಳದಲ್ಲಿರುವ ಪೆರಿಯಾರ್ ನದಿಗೆ ಅಡ್ಡಲಾಗಿ ಕಟ್ಟಿರುವ ಇಡುಕ್ಕಿ ಜಲಾಶಯದ ಬಳಿ ಕಟ್ಟಲಾಗಿರುವ ಭೂಗರ್ಭ ಜಲವಿದ್ಯುತ್ ಕೇಂದ್ರ, ಮಹಾರಾಷ್ಟ್ರದ ಕೊಯ್ನಾ ಜಲಾಶಯದ ಬಳಿ ನಿರ್ಮಿಸಿರುವ ಭೂಗರ್ಭ ಜಲವಿದ್ಯುತ್ ಕೇಂದ್ರ, ಉತ್ತರಾಖಂಡದ ತಾನ್ಸ್ ಜಲಾಶಯದ ಬಳಿ ಕಟ್ಟಲಾಗಿರುವ ಭೂಗರ್ಭ ಜಲವಿದ್ಯುತ್ ಕೇಂದ್ರ ಹಾಗೂ ಜಮ್ಮು ಕಾಶ್ಮೀರದ ಝೇಲಂ ನದಿ ಅಣೆಕಟ್ಟಿನ ಸಮೀಪ ನಿರ್ಮಾಣವಾಗಿರುವ ಭೂಗರ್ಭ ಜಲವಿದ್ಯುತ್ ಕೇಂದ್ರ.
ವರಾಹಿ ಭೂಗರ್ಭ ವಿದ್ಯುದಾಗಾರಕ್ಕೆ ಭೇಟಿ ನೀಡಬೇಕೆ? ರಸ್ತೆ ಮಾರ್ಗವಾಗಿ ಬರುವವರು ಹೊಸಂಗಡಿಯ ಮೂಲಕ ಆಗಮಿಸಬಹುದು. ರೈಲಿನಲ್ಲಿ ಪಯಣಿಸುವವರು, 29 ಕಿ.ಮೀ. ದೂರದಲ್ಲಿರುವ ಕುಂದಾಪುರ ರೈಲು ನಿಲ್ದಾಣಕ್ಕೆ ಬರಬೇಕಾಗುತ್ತದೆ. ವಿಮಾನದಲ್ಲಿ ಬರುವವರು ಬಜ್ಪೆ ವಿಮಾನ ನಿಲ್ದಾಣದಿಂದ 88 ಕಿ.ಮೀ.ಕ್ರಮಿಸಬೇಕಾಗುವುದು.
ಹಾ! ಎಚ್ಚರಿಕೆ. ವರಾಹಿ ಭೂಗರ್ಭ ವಿದ್ಯುದಾಗಾರವನ್ನು ಸಂದರ್ಶಿಸಲು ಬೇಕೇ ಬೇಕು ಕೆ.ಪಿ.ಸಿ.ಯವರ ಪೂರ್ವಾನುಮತಿ. ಹೊಸಂಗಡಿಯಲ್ಲಿರುವ ಕೆ.ಪಿ.ಸಿ.ಯವರಿಂದ ಅನುಮತಿ ಪಡೆದು ಈ ಅಪರೂಪದ ವಿದ್ಯುದಾಗಾರವನ್ನು ನೋಡಲು ಮರೆಯದಿರಿ.
– ಡಾ.ಗಾಯತ್ರಿ ಸಜ್ಜನ್
ಮಾಹಿತಿಪೂರ್ಣ
ವರಾಹ ಭೂಗರ್ಭವಿದ್ಯುದಾಗರ ಮಾಹಿತಿಯನ್ನು ಅಚ್ಚು ಕಟ್ಟಾಗಿ ತಿಳಿಸಿ ರುವ ನಿಮಗೆ ಧನ್ಯವಾದಗಳು ಮೇಡಂ
ಹಲವು ವರುಷಗಳ ಹಿಂದೆ ವಾರಾಹಿ ಜಲವಿದ್ಯುದಾಗಾರಕ್ಕೆ ಕೊಟ್ಟಿದ್ದ ಭೇಟಿಯ ನೆನಪಾಯಿತು. ತುಂಬು ಮಾಹಿತಿಗಳುಳ್ಳ ಬರೆಹಕ್ಕಾಗಿ ಧನ್ಯವಾದಗಳು ಗಾಯತ್ರಿ ಮೇಡಂ.
ಸಚಿತ್ರಿಸಿರುವಿರಿ ವಿಶದತೆಯಲಿ ವರಾಹಿ ನದಿಯ/
ನಿರೂಪಿಸಿರುವಿರಿ ಬಣ್ಣನೆಯಲ್ಲಿ ಯಶೋಗಾಥೆಯ/
ಸಚಿತ್ರಿಸಿರುವಿರಿ ವಿಶದತೆಯಲಿ ವರಾಹಿ ನದಿಯ/
ವಿವರಿಸುರಿವಿರಿ ವರ್ಣನೆಯಲ್ಲಿ ಹರಿಯುವ ಹಾದಿಯ/
ಪಶಿಮಘಟ್ಟಗಳ ಪಾವನದಲ್ಲಿ ಉಗನಮಿ ಹೆಬ್ಬಾಗಿಲಲಿ/
ಹರಿಯುವಳು ಜೊತೆಗೂಡಿ ಉಪನದಿಗಳ ಜೊತೆಯಲಿ/
ಮೆರೆಯುವಳು ಮೋಹಕದಲ್ಲಿ ಕುಂಚಿಕಲ್ ಜಲಪಾತದಲ್ಲಿ/
ಸೇರುವಳು ಸಮುದ್ರವ ಪಂಚಗಂಗಾವಲಿಯ ಹೆಸರಿನಲಿ/
ಮಾಣಿಬೈಲು ಜಲಾಶಯಕ್ಕೆ ಶಕ್ತಿಯಾಗಿರುವಳು ಬೆಳಕಿಗೆ
ಜೀವಶಕ್ತಿಯಾಗಿರುವಳು ನಿಷ್ಠೆಯಲಿ ದುಡಿಯುವ ರೈತರಿಗೆ/
ಆಸರೆಯಾಗಿರುವಳು ಹೊಲ ಗದ್ದೆಗಳ ಪಲವತ್ತಿನ ಪಸಿಲಿಗೆ/
ಬೂಗರ್ಬ ವಿದ್ಯುದಾಗಾರವಾಗಿ ನೆರವಾಗಿರುವಳು ವಿದ್ಯುತ್ತಿಗೆ/
ಪರಿಸರದ ಗ್ರಾಮಗಳಿಗೆ ಜೀವಸತ್ವವಾಗಿ ವರವಾಗಿರುವಳು/
ವರಾಹ ಅವತಾರದ ಪೂಜ್ಯ ಪಾವನದಲಿ ಹರಿಯುತಿರುವಳು/
ಸುತ್ತ ಮುತ್ತಲಿನ ರೈತ ಬಂದುಗಳಿಗೆ ಕೊಡುಗೆಯಾಗಿರುವಳು/
ದೈವದಾಶೀರ್ವಾದದಲ್ಲಿ ಕರುನಾಡಿಗೆ ಒಸಗೆಯಾಗಿರುವಳು/
ವರಾಹಿಯ ಪೌರಾಣಿಕ ಹಿನ್ನೆಲೆಯೊಂದಿಗೆ ಪ್ರಾರಂಭವಾದ ಲೇಖನ ನಿಸರ್ಗದ ಬಣ್ಣನೆಯೊಂದಿಗೆ ಮುಂದುವರೆದು, ತಾಂತ್ರಿಕ ವಿವರಣೆಗಳನ್ನೂ ನೀಡುತ್ತಾ ದೇಶದ ಇನ್ನಿತರ ಭೂಗರ್ಭ ವಿದ್ಯುದಾಗಾರಗಳ ವಿವರಣೆಗಳೊಂದಿಗೆ ಮಾಹಿತಿಪೂರ್ಣವಾಗಿ ಮುಕ್ತಾಯಗೊಂಡುದುದು, ಅಭಿನಂದನೀಯ ಎನ್ನಿಸಿತು