ಅವಿಸ್ಮರಣೀಯ ಅಮೆರಿಕ-ಎಳೆ 16

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು…)

ಹಣ್ಣು ಬೇಕೇ…ಹಣ್ಣು..!! 

ಅಮೆರಿಕವು ಅತ್ಯಂತ ಸ್ವಚ್ಛ ರಾಷ್ಟ್ರ ಎಂಬುದು ಸರ್ವವಿದಿತ. ಇಲ್ಲಿ, ಮನುಷ್ಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಿರುವುದರಿಂದ ಸಹಜವಾಗಿ ಇಂಧನದ ಹೊಗೆಯು, ಗಾಳಿಯನ್ನು ಹೆಚ್ಚು ಮಲಿನಗೊಳಿಸುತ್ತದೆ, ಹಾಗೂ ಅತಿ ನೇರಳೆ ಕಿರಣಗಳಿಂದ ನಮ್ಮನ್ನು ರಕ್ಷಿಸುವ ಛತ್ರಿ…ಓಝೋನ್ ಪದರವನ್ನು ಬೇರೆಲ್ಲಾ ರಾಷ್ಟ್ರಗಳಿಗಿಂತ ಹೆಚ್ಚು ನಾಶಗೊಳಿಸುತ್ತದೆ ಎಂಬುದು ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಆರೋಪಣಾಯುಕ್ತ ಬಹು ಚರ್ಚಿತ ವಿಷಯವೂ ಹೌದು.  ಆದರೆ, ನಮ್ಮಲ್ಲಿಯಂತೆ, ಯಾವುದೇ ವಾಹನದಿಂದ ದಟ್ಟ ಹೊಗೆ ಹೊರಸೂಸುವುದನ್ನು ಎಲ್ಲೂ ಕಾಣಲಾರೆವು. ಎಲ್ಲಾ ಕಾರ್ಖಾನೆಗಳೂ, ಸರಿಯಾಗಿ, ಕಾನೂನಿನ ಚೌಕಟ್ಟಿನೊಳಗೇ ಕಾರ್ಯ ನಿರ್ವಹಿಸುತ್ತವೆಯಾದ್ದರಿಂದ, ಅಲ್ಲಿಯೂ ಮಲಿನ ಹೊಗೆ ಗಾಳಿಗೆ ಸೇರ್ಪಡೆಯಾಗುವುದಿಲ್ಲ. ಆದರೂ ಕಣ್ಣಿಗೆ ಕಾಣದಂತಹ ಹೊಗೆ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇಲ್ಲಿ ಮಣ್ಣು, ಧೂಳಿನ ಕಾಟವೇ ಇಲ್ಲ. ಆದ್ದರಿಂದ ಅಲ್ಲಿಯ ಗಾಳಿಯು ಅತ್ಯಂತ ಸ್ವಚ್ಛ, ಪಾರದರ್ಶಕವಾಗಿ, ಫಳಫಳ ಹೊಳೆಯುವ ಶುಭ್ರ ಆಗಸವನ್ನು ಸದಾಕಾಲ ನೋಡಬಹುದು. ಇದರಿಂದಾಗಿ, ಜನರ ರೋಗ ನಿರೋಧಕ ಶಕ್ತಿಯು ಅತೀ ಕಡಿಮೆಯಾಗಿರುವುದು ನಂಬಲಸಾಧ್ಯವಾದರೂ ನಿಜ! ನಮ್ಮಲ್ಲಿ ಕಲುಷಿತ ವಾತಾವರಣದ ನಡುವೆ ಬದುಕುವ ಬೀದಿ ಬದಿಯಲ್ಲಿ ಜೀವಿಸುವವರ ಹಾಗೂ ಕೆಲಸಗಾರರ ಮಕ್ಕಳ ರೋಗ ನಿರೋಧಕ ಶಕ್ತಿಯು ಅತ್ಯಂತ ಹೆಚ್ಚಾಗಿರುವುದರಿಂದ, ಶ್ರೀಮಂತರ ಮಕ್ಕಳಿಗಿಂತ  ಆ ಮಕ್ಕಳು ಹೆಚ್ಚು ಆರೋಗ್ಯವಂತರಾಗಿರುವುದನ್ನು ಕಾಣಬಹುದು ಅಲ್ಲವೇ? 

ಇಲ್ಲಿ, ವಸಂತಕಾಲದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಾಡು ಹೂಗಳ ವೈಭವ..ಹೂ ಸ್ವರ್ಗವೇ ಧರೆಗಿಳಿದು ಬಂದಂತೆ! ಕಣ್ಣಳತೆಯ ದೂರದ ವರೆಗೂ, ಬಯಲು, ಪುಟ್ಟ ಬೆಟ್ಟಗಳು ಪೂರ್ತಿ ವಿವಿಧ ಹೂಗಳಿಂದ ತುಂಬಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಜೊತೆಗೇ ಗಾಳಿಯಲ್ಲಿ ಅವು ಹರಡುವ ಪರಾಗರೇಣುವಿನಿಂದಾಗಿ, ಹೆಚ್ಚಾಗಿ ಪುಟ್ಟ ಮಕ್ಕಳಿಗೆ ಅಲರ್ಜಿಯುಂಟಾಗಿ, ಕಣ್ಣುರಿ, ಕಣ್ಣು ಕೆಂಪಾಗಿ ವಿಪರೀತ ಕಣ್ಣೀರು ಸುರಿಯುವುದು, ಚರ್ಮದಲ್ಲಿ ತುರಿಕೆ  ಇತ್ಯಾದಿಗಳು ಸಾಮಾನ್ಯ. ಬೇಸಿಗೆಯಲ್ಲಿ, ಸೂರ್ಯನ ಕಿರಣಗಳು ಅಡೆತಡೆಯಿಲ್ಲದೆ ನೇರವಾಗಿ  ನೆಲ ತಲಪುವುದರಿಂದ, ಮೈಯನ್ನು ತಂಪಾದ ಹತ್ತಿ ಬಟ್ಟೆಯಿಂದ ಮುಚ್ಚಿ, ಕಣ್ಣಿಗೆ ತಂಪು ಕನ್ನಡಕ ಹಾಕದೆ ಹೊರ ಹೊರಡುವ ಹಾಗೇ ಇಲ್ಲ.  ನಮ್ಮಲ್ಲಿ ಧೂಳು ಜಾಸ್ತಿ ಎನಿಸಿದರೂ, ಈ ತರಹದ ತೊಂದರೆಗಳಿಂದ ನಾವು ಬಚಾವ್ ಎನ್ನೋಣವೇ?!

ಇಲ್ಲಿಯ ಕೃಷಿಯನ್ನು, ತೋಟಗಳನ್ನು ನೋಡುವಾಗ ಹೀಗೂ ಉಂಟೇ..?! ಎಂದು ಆಶ್ಚರ್ಯವಾಗುತ್ತದೆ. ಆಹಾ.. ಅದನ್ನು ನೋಡುವುದೇ ಕಣ್ಣುಗಳಿಗೆ ಒಂದು ಹಬ್ಬ! ಹೆಕ್ಟೇರ್ ಗಟ್ಟಲೆ ವಿಸ್ತಾರವಾದ ಸಮತಟ್ಟಾದ ಜಾಗದಲ್ಲಿ ನೇರ ನೂಲು ಹಿಡಿದಂತೆ ನೆಟ್ಟ, ಸೊಂಪಾಗಿ ಬೆಳೆದ ಗಿಡ ಮರಗಳು, ಅವುಗಳಲ್ಲಿ ತುಂಬಿ ತುಳುಕುವ ಆರೋಗ್ಯವಂತ ಫಲಗಳು,  ಕಣ್ತುಂಬಿ ನಗುವ ಸೊಗಸಾದ ಕಾಯಿ, ಹಣ್ಣುಗಳು.. ಒಂದೇ..ಎರಡೇ.. ಬರಹದಲ್ಲಿ ವರ್ಣಿಸಲಸಾಧ್ಯವಾದ ನೋಟವದು! ಮಣ್ಣು ಹದ ಮಾಡುವುದು, ಬಿತ್ತನೆ, ಸಸಿ ನೆಡುವುದು, ಗೊಬ್ಬರ, ನೀರು ಉಣಿಸುವುದು, ಕಳೆ ಕೀಳುವುದು, ಕೀಟನಾಶಕ ಸಿಂಪರಣೆ, ಹೀಗೆ ಪ್ರತಿಯೊಂದೂ ಯಂತ್ರಗಳ ಮೂಲಕವೇ ನಡೆಯುತ್ತದೆ. ಪ್ರತಿ ಸಾಲಿನ ಮಧ್ಯದಲ್ಲಿ ವಾಹನ ಚಲಿಸಲು ಸೊಗಸಾದ ರಸ್ತೆ, ಸ್ವಚ್ಛವಾದ ಹೊಲ, ತೋಟಗಳು ಕಣ್ಣು ತುಂಬುತ್ತವೆ. ಬೃಹದಾಕಾರದ ನೀರು ಸಿಂಪರಣಾ ಯಂತ್ರಗಳು ಕಾರ್ಯ ನಿರ್ವಹಿಸುವ ವೈಖರಿಯನ್ನು ನೋಡುವುದೇ ಚಂದ. ಕಂಡು ಕೇಳರಿಯದ, ವಿವಿಧ ರುಚಿ ಬಣ್ಣಗಳ ಹಣ್ಣುಗಳು ಇಲ್ಲಿ ಲಭ್ಯ. ತೋಟಗಳು ಅತ್ಯಂತ ಸ್ವಚ್ಚ, ಸುಂದರ. ಸುವ್ಯವಸ್ಠಿತವಾಗಿ, ಅಚ್ಚುಕಟ್ಟಾಗಿರುವ, ಫಲಭರಿತ  ಆರೋಗ್ಯವಂತ ಮರಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ತೋಟದ ಪ್ರತಿ ಮರಕ್ಕೂ ತುಂತುರು ನೀರಾವರಿ ವ್ಯವಸ್ಥೆಯನ್ನು ಕಾಣಬಹುದು.

ಇಲ್ಲಿಯ ಇನ್ನೊಂದು ವಿಶೇಷವೆಂದರೆ; ಹಣ್ಣಿನ ತೋಟಗಳಲ್ಲಿ ಮರಗಳ ತುಂಬಾ ಹಣ್ಣುಗಳು ತುಂಬಿ ಕಂಗೊಳಿಸುತ್ತಿರುವಾಗ ಅವುಗಳನ್ನು ಕೀಳದೆ, ಸಾರ್ವಜನಿಕರಿಗಾಗಿ ತೋಟವನ್ನು ತೆರೆದಿರುತ್ತಾರೆ. ತೋಟದಲ್ಲಿ ಹಣ್ಣಗಳು ಕಳಿತು, ಕೀಳಲು ಸಿದ್ಧವಾಗುತ್ತಿದ್ದಂತೆಯೇ, ಜಾಹೀರಾತು ಹಾಕಿಬಿಡುತ್ತಾರೆ…’ಇಂತಹ ಕಡೆಯಲ್ಲಿ, ಇಂತಹ ಹಣ್ಣಿನ ತೋಟದಲ್ಲಿರುವ ಹಣ್ಣು ಕೀಳಲು ಬರಬಹುದು’ ಎಂದು. ವಿಶೇಷವೆಂದರೆ ಇಂತಹ ವಿವಿಧ ಹಣ್ಣುಗಳ ತೋಟಗಳು ಅಕ್ಕಪಕ್ಕದಲ್ಲೇ ಇದ್ದು, “ಇನ್ನು  ಆಯ್ಕೆ ನಿಮ್ಮದು!” ಎಂದು ಆನಂದದಿಂದ ಎಲೆಗಳೇ ಕಾಣದಷ್ಟು ಹಣ್ಣು ತುಂಬಿದ ಮರಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ.  ಅಲ್ಲಿಗೆ ಹೋಗಿ, ಬೇಕಾದ ಹಣ್ಣುಗಳನ್ನು ಕಿತ್ತು, ಹೊಟ್ಟೆ ತುಂಬ, ಬೇಕಾದ ಹಣ್ಣುಗಳನ್ನು, ಬೇಕಾದಷ್ಟು  ತಿನ್ನಬಹುದು..ಇದು ಉಚಿತ! ನಮ್ಮ ಮಹಾಭಾರತದ ಬಕಾಸುರ ಇದ್ದರೆ, ಎಲ್ಲಾ ಮರಗಳನ್ನೂ ಒಮ್ಮೆಲೇ ಖಾಲಿ ಮಾಡಿ  ಬಿಡುತ್ತಿದ್ದನೋ ಏನೋ!

ಇದಂತೂ ನನಗೆ ಅತ್ಯಂತ ಸೋಜಿಗದ ಸಂಗತಿ! ತಿಂದ ಬಳಿಕ ಬೇಕೆಂದರೆ ನಾವೇ ಕೈಯಾರೆ ಕಿತ್ತ ಹಣ್ಣುಗಳನ್ನು ದುಡ್ಡು ತೆತ್ತು ಮನೆಗೆ ಒಯ್ಯಬಹುದು. ಇಂತಹ ಒಂದು ಒಳ್ಳೆಯ ಅವಕಾಶ ನಮಗೂ ಒದಗಿಬಂತು. ಎಕರೆಗಟ್ಟಲೆ ಹೊಲದಲ್ಲಿ ಬೆಳೆಸಿದ್ದ , ಕೆಂಪಾದ ಸ್ಟ್ರಾ ಬೆರಿ, ಬ್ಲಾಕ್ ಬೆರಿ ಹಣ್ಣುಗಳನ್ನು ರುಚಿ ನೋಡಿ; ಚೆರಿ, ಸೇಬು, ಇತ್ಯಾದಿಗಳನ್ನು ತೋಟಗಳಲ್ಲಿದ್ದ ಏಣಿ ಏರಿ ಬೇಕಾದಷ್ಟು ಹಣ್ಣುಗಳನ್ನು ಹೊಟ್ಟೆ ಬಿರಿಯುವಷ್ಟು ತಿಂದು; ನಾವೇ ಆರಿಸಿ ಕೊಯ್ದ ಎರಡು ಬುಟ್ಟಿ ಹಣ್ಣುಗಳನ್ನು ಮನೆಗೂ ಒಯ್ದದ್ದಾಯ್ತು.  ಹೀಗೆ ಖರೀದಿಸಿದ ಹಣ್ಣುಗಳು ಮಾರುಕಟ್ಟೆಯ ಹಣ್ಣುಗಳಿಗಿಂತ ಸ್ವಲ್ಪ ದುಬಾರಿ. ಇದು, ಕಡಿಮೆ ಜನಸಂಖ್ಯೆಯ ರಾಷ್ಟ್ರವಾದ್ದರಿಂದ, ಕೆಲಸಕ್ಕೆ ಕೂಲಿಗಳೇ ಸಿಗುವುದಿಲ್ಲ. ಆದ್ದರಿಂದಲೇ, ಅವರ ತೋಟದ ಬೆಳೆಗಳ ವಿಲೇವಾರಿಗೆ ಈ ವ್ಯವಸ್ಥೆ ಮಾಡಿರುವುದೆಂದು ತಿಳಿಯಿತು. ಇದು ಅವರಿಗೆ, ಕೊಯ್ಯುವ, ಸಾಗಾಣಿಕೆಯ, ಮಾರುಕಟ್ಟೆಯ ಸಮಸ್ಯೆಗಳನ್ನು ನಿಭಾಯಿಸುವ ತಂತ್ರವೂ ಹೌದು.

ಒಂದು ದಿನ, “ಅಮ್ಮಾ, ನೀನು ಮಧ್ಯಾಹ್ನದ ಅಡುಗೆಗೆ ವಿಶೇಷವೇನೂ ಮಾಡ್ಬೇಡ..”  ಮಗಳು ಉವಾಚ. ಏನಪ್ಪಾ ಇದು ಅಂತೀರಾ..ಇಲ್ಲಿ ಕೇಳಿ..

ತಾಜಾ ತರಕಾರಿ, ಹಣ್ಣು ಯಾರಿಗಿಷ್ಟವಿಲ್ಲ ಹೇಳಿ? ಅಮೆರಿಕಾದಲ್ಲಿ, ಅಯಾಯ ಪ್ರದೇಶಗಳಲ್ಲಿ, ನಮ್ಮಲ್ಲಿರುವ ವಾರದ ಸಂತೆಯಂತೆ, ವಾರದಲ್ಲೊಂದು ದಿನ..ಹೆಚ್ಚಾಗಿ ಭಾನುವಾರ, ಬೆಳಗ್ಗಿನಿಂದ ಮಧ್ಯಾಹ್ನ ಎರಡು ಗಂಟೆಯ ವರೆಗೆ, ರೈತರಿಗಾಗಿ ವಿಶೇಷ ಮಾರುಕಟ್ಟೆಯಿದೆ. ಅಲ್ಲಿ ಹೋದಾಗ, ನಮ್ಮೂರ ಸಂತೆಯೇ ಕಣ್ಣೆದುರು ಬಂತು ಬಿಡಿ.. ಆದರೆ, ” ಬನ್ನಿ.. ಬನ್ನಿ..ಎರಡು ಕೆ.ಜಿಗೆ ಬರೇ ಹತ್ರೂಪಾಯ್.. ತಾಜಾ ಟೊಮೊಟೋ ” ಎಂದು ಯಾರೂ ಗಟ್ಟಿಯಾಗಿ ಕೂಗಾಡುವುದಿಲ್ಲ. ಗಿರಾಕಿಗಳೊಡನೆ ನಯವಾಗಿ ಮಾತಾಡಿ ವ್ಯವಹರಿಸುವುದೇ ನೋಡಲು ಖುಷಿ. ದೊಡ್ಡ ದೊಡ್ಡ ಛತ್ರಿಗಳಿಂದ ಕೂಡಿದ ಬಟ್ಟೆಯ ಡೇರೆಗಳ ತಣ್ಣನೆಯ ನೆರಳಿನಲ್ಲಿ, ತಾಜಾ ತರಕಾರಿ, ಹಣ್ಣು, ಹೂಗಳಲ್ಲದೆ ವಿವಿಧ ರೀತಿಯ ಪಾನೀಯ, ತಿಂಡಿ, ಉಪ್ಪಿನಕಾಯಿ ಇತ್ಯಾದಿಗಳ ಅಂಗಡಿಗಳೂ ಕಾಣಸಿಗುತ್ತವೆ. ಇಲ್ಲಿ ಬೆಲೆ ಜಾಸ್ತಿ ಎನಿಸಿದರೂ, ಸಾವಯವ ಕೃಷಿಯಲ್ಲಿ ಬೆಳೆದ ತರಕಾರಿ, ಹಣ್ಣುಗಳಿಗೆ ಒಳ್ಳೆಯ ಬೇಡಿಕೆಯಿದೆ.

ಅಲ್ಲಿ , ಉತ್ತರ ಭಾರತದವರೊಬ್ಬರ ತಾಜಾ ಪರೋಟದ ಮಳಿಗೆಯೊಂದು ಕಂಡು ಬಂತು. ಅವರೊಡನೆ ಹಿಂದಿಯಲ್ಲಿ ಮಾತಾಡಿ, ತಿಂಡಿ ರುಚಿ ನೋಡಿ, ಒಂದೆರಡು ಪರೋಟಗಳನ್ನೂ ಕಟ್ಟಿಸಿಕೊಂಡೆವು.  ಮಾರಾಟಕ್ಕಿಟ್ಟಿದ್ದ ವಿವಿಧ ರುಚಿ, ವಿಶೇಷ ಪರಿಮಳಗಳ ಜೇನುತುಪ್ಪಗಳು; ವಿವಿಧ ರೀತಿಯ ಕಾಡು ಹೂ, ಸೇಬು ಹೂ, ಕಿತ್ತಳೆ ಹೂ, ಲವಂಗ ಹೂ,ಇತ್ಯಾದಿಗಳಿಂದ ಪಡೆದವುಗಳಾಗಿದ್ದು, ಅವುಗಳ ರುಚಿಯನ್ನು ಸವಿದೇ ನೋಡಬೇಕು! ಅವುಗಳ ಪಕ್ಕದಲ್ಲಿರಿಸಿದ ಚಂದದ ಪುಟ್ಟ ಕಡ್ಡಿಯನ್ನು ಅದರಲ್ಲಿ ಮುಳುಗಿಸಿ ತೆಗೆದು ಚಪ್ಪರಿಸಬಹುದು! ಒಣ ಹಣ್ಣುಗಳ ವಿಭಾಗವಂತೂ ತುಂಬಾ ಚೆನ್ನಾಗಿತ್ತು. ಬೆಳ್ಳುಳ್ಳಿ, ಉಪ್ಪು,ಜೇನುತುಪ್ಪ, ಕಾಫಿ, ಎಳ್ಳು, ಇತ್ಯಾದಿಗಳೊಂದಿಗೆ ಬೇರೆ ಬೇರೆಯಾಗಿ ಒಣಗಿಸಿದ ಬಾದಾಮಿನ ರುಚಿಯೋ..ಆಹಾ..!! ತರಕಾರಿಗಳನ್ನು ಬಿಟ್ಟು, ಬೇರೆ ಎಲ್ಲವನ್ನೂ ನಾವು ರುಚಿನೋಡಿ ಖರೀದಿಸುವ ಅವಕಾಶ ನಿಜಕ್ಕೂ ಖುಷಿಯೆನಿಸುತ್ತದೆ. ಪ್ರತಿಯೊಂದನ್ನೂ ಮಾರಾಟಗಾರರು  ಪುಟ್ಟ ಪುಟ್ಟ ಬಟ್ಟಲುಗಳಲ್ಲಿ, ಪ್ರತ್ಯೇಕವಾಗಿ, ರುಚಿ ನೋಡಲು ಚಮಚಗಳೊಂದಿಗೆ  ಇರಿಸುತ್ತಾರೆ. ನಾನು ಅರಿವಿಲ್ಲದೆ ಬರಿಗೈ ಹಾಕಲು ಹೋಗಿ ಮಗಳಲ್ಲಿ ಉಪದೇಶ ಪಡೆಯಬೇಕಾಯಿತು. ನಮಗೆ ಇಷ್ಟವಾದರೆ ಮಾತ್ರ ಖರೀದಿಸಬಹುದು, ಆದರೂ ಬೇಕಾದಷ್ಟು ತಿನ್ನಲು ಕರೆ ಕರೆದು ಕೊಡುತ್ತಾರೆ. ನಾವು ಖರೀದಿಸುವ ವಸ್ತುಗಳನ್ನು, ಕೈ ಹಾಕಿ, ನಾವೇ ಆರಿಸಿಕೊಳ್ಳುವ ಅವಕಾಶ! ಇಡೀ ಮಾರುಕಟ್ಟೆ ಸುತ್ತಿ ಬರುವಾಗ ಎಲ್ಲರ ಹೊಟ್ಟೆಯೂ ಭರ್ಜರಿ ತುಂಬಿರುತ್ತದೆ. ಕೆಲವಂತೂ, ಕಂಡು ಕೇಳರಿಯದ, ಅದ್ಭುತ ರುಚಿ, ಸುವಾಸನೆಗಳ, ವಿವಿಧ ಗಾತ್ರಗಳ, ವಿವಿಧ ಬಣ್ಣಗಳ  ಹಣ್ಣುಗಳು..!  ಮುಸುಂಬಿ ಗಾತ್ರದ ನಿಂಬೆ, ಸುಲಿದ ತೆಂಗಿನ ಗಾತ್ರದ ನೀರುಳ್ಳಿ, ಬೆಳ್ಳುಳ್ಳಿ, ಕೈಯಷ್ಟು ದೊಡ್ಡದಾದ ಹಾಗಲಕಾಯಿ..ಆಹಾ ..ನಾನು ನೋಡಿಯೇ ಬಾಕಿ! ..ಈ ಬೃಹದಾಕಾರದ ತರಕಾರಿಗಳು  ನೋಡಲು ಬಲು ಚಂದವಾಗಿದ್ದರೂ,  ರುಚಿ ಪರಿಮಳಗಳು ಸ್ವಲ್ಪ ಕಡಿಮೆ ಎನ್ನಬಹುದು. ಜೊತೆಗೇ, ನಮಗೆ, ಬೆಲೆಯ ಬಗ್ಗೆ ಯಾವುದೇ ರೀತಿಯ ಚೌಕಾಶಿ ಮಾಡಲು ಅವಕಾಶವಿಲ್ಲದ್ದು ಸ್ವಲ್ಪ ಪಿಚ್ಚೆನಿಸುವುದು ಖಚಿತ. ಅಪರೂಪವಾದ, ನಮ್ಮಲ್ಲಿರುವ ಹೀರೇಕಾಯಿ, ಹಾಗಲಕಾಯಿ, ನುಗ್ಗೆಸೊಪ್ಪು, ಹರಿವೆ, ಬಸಳೆಗಳೂ ನಳನಳಿಸಿ ನಗುವುದು ಕಂಡಾಗ ಖುಷಿಯಾಗುತ್ತದೆ.

ಎಲ್ಲವನ್ನೂ ನೋಡುತ್ತಾ, ಸವಿಯುತ್ತಾ ನಮ್ಮ ಲೋಕದಲ್ಲೇ ನಾವಿದ್ದಾಗ, ಹಿಂದಿನಿಂದ ನನ್ನ ಹೆಸರನ್ನು ಕೂಗಿ ಕರೆದಂತಾಯ್ತು… ಆಶ್ಚರ್ಯವೋ.. ಆಶ್ಚರ್ಯ!! ಇಲ್ಲಿ.. ಏಳು ಸಮುದ್ರಗಳಾಚೆಯೂ ನನ್ನ ಹೆಸರನ್ನು ಬಲ್ಲವರು ಯಾರಪ್ಪಾ ಎಂದುಕೊಂಡು ತಿರುಗಿದಾಗ, ಮಗಳು,”ನೋಡಿದ್ಯಾ ಅಮ್ಮ.. ನೀನೆಷ್ಟು ಫೇಮಸ್ ಎಂದು..ಇಷ್ಟು ದೂರದಲ್ಲಿಯೂ ನಿನ್ನ ಗುರುತು ಹಿಡಿದಿದ್ದಾರೆ” ಎಂದು ಒಗ್ಗರಣೆ ಹಾಕಿದಳು. ನೋಡಿದರೆ ಮುಖ ಪರಿಚಯವಿಲ್ಲದ ಯುವತಿಯೊಬ್ಬಳು ಬಳಿ ಬಂದು, ” ನಾನು, ನಿಮ್ಮ ಗೆಳತಿ ಮಗಳು..ಅರ್ಚನಾ” ಎಂದಾಗ ತುಂಬಾ ಸಂತೋಷವಾಯ್ತು. ಆದರೆ ನನ್ನ ಗುರುತು ಹೇಗೆ ಹಿಡಿದಳೆಂಬ ಸಂಶಯದಿಂದ ಕೇಳಿದಾಗ, ಅವಳಮ್ಮ ಕಳುಹಿಸಿದ ಫೋಟೋ, ಹಾಗೂ ನಮ್ಮ ಸಂಭಾಷಣೆಯನ್ನು ಕೇಳಿ !.. ಅಂತೂ, ಯೋಗಾಯೋಗವೆಂದರೆ ಇದೇ ಅಲ್ಲವೇ?!

ಮಾರುಕಟ್ಟೆಯಲ್ಲಿ ಎಷ್ಟು ಜನಸಂದಣಿ ಇದ್ದರೂ, ಗಲೀಜೆಂಬುದು ಇನಿತೂ ಇಲ್ಲದಿರುವುದು ನಿಜಕ್ಕೂ ಆಶ್ಚರ್ಯ! ಪುಟ್ಟ ಮಕ್ಕಳೂ ಅಲ್ಲಲ್ಲಿರುವ ಕಸದ ಬುಟ್ಟಿಗಳನ್ನು ಉಪಯೋಗಿಸುವುದು ನೋಡಿದರೆ ಸಂತೋಷವಾಗುತ್ತದೆ.  ಮಧ್ಯವರ್ತಿಗಳೇ ರಾಜರಾಗಿರುವ ಈ ಕಾಲದಲ್ಲಿ, ರೈತ ತಾನು ಕಷ್ಟಪಟ್ಟು ಬೆಳೆಸಿದುದನ್ನು, ಗ್ರಾಹಕರಿಗೆ ತಾನೇ ಸ್ವತಃ ತಲಪಿಸಿ, ಬಂದ ಲಾಭಾಂಶವನ್ನು ಪಡೆಯುವುದು ಸಂತೋಷದ ವಿಷಯ. 

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ : http://surahonne.com/?p=35072

ಮುಂದುವರಿಯುವುದು….

-ಶಂಕರಿ ಶರ್ಮ, ಪುತ್ತೂರು.

7 Responses

  1. ನಯನ ಬಜಕೂಡ್ಲು says:

    ಓದುವಾಗ ಚಿತ್ರಗಳು ಮನಸಿನ ಪಟಲದ ಮೇಲೆ ಹಾಗೆಯೇ ಮೂಡುತ್ತವೆ. ನೈಸ್.

    • . ಶಂಕರಿ ಶರ್ಮ says:

      ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ನಯನಾ ಮೇಡಂ.

  2. ನಾಗರತ್ನ ಬಿ. ಆರ್ says:

    ಅಮೆರಿಕದ ವ್ಯಾಪಾರ ವಹಿವಾಟು ಅದರಲ್ಲಿ ಹಣ್ಣು ತರಕಾರಿಗಳ ಬಗ್ಗೆ ಸುವಿಸ್ತಾರವಾದ ನೋಟ ಅದನ್ನು ನಮ್ಮ ದೇಶದ ವಹಿವಾಟಕ್ಕೆ ಹೋಲಿಸಿ ಹೇಳಿರುವ ರೀತಿ ಸೊಗಸಾದ ನಿರೂಪಣೆಯಲ್ಲಿ ತಿಳಿಸಿ ರುವ ನಿಮಗೆ ಧನ್ಯವಾದಗಳು ಮೇಡಂ

    • . ಶಂಕರಿ ಶರ್ಮ says:

      ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಾಗರತ್ನ ಮೇಡಂ.

  3. ಡಾ. ಕೃಷ್ಣಪ್ರಭ ಎಂ says:

    ಕಣ್ಣಿಗೆ ಕಟ್ಟುವಂತಿದೆ ನಿಮ್ಮ ಲೇಖನ

  4. Padma Anand says:

    ಅಮೆರಿಕಾ ಯಾತ್ರೆಯಲ್ಲಿ ನಿಮ್ಮ ಗಮನಕ್ಕೆ ಬಂದ ಪ್ರತಿಯೊಂದು ಕೌತುಕವನ್ನೂ ಸೊಗಸಾಗಿ ನಿರೂಪಿಸುವ ಪರಿ ನಿಜಕ್ಕೂ ಅಭಿನಂದನೀಯ.

  5. Padma Anand says:

    ನಿಮ್ಮ ಅಮೆರಿಕಾ ಪ್ರವಾಸದಲ್ಲಿ ಗಮನಿಸಿದ ಪ್ರತಿಯೊಂದು ಕೌತುಕಮಯ ಸನ್ನಿವೇಶವನ್ನೂ ಕಣ್ಣಿಗೆ ಕಟ್ಟುವಂತೆ ವರ್ಣಿಸುವ ನಿರೂಪಣಾ ಶೈಲಿ ಚಂದವಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: