ಅವಿಸ್ಮರಣೀಯ ಅಮೆರಿಕ-ಎಳೆ 10
ಭಯದ ಮಜಾ…!
ಮರುದಿನ ಬೆಳ್ಳಂಬೆಳಗ್ಗೆ ಎಚ್ಚರವಾದಾಗ ಯಾರೂ ಇನ್ನೂ ಎದ್ದಿರಲಿಲ್ಲ. ಸ್ನಾನ ಮುಗಿಸಿಕೊಂಡು ಬಂದಾಗ ಕೆಲವರು ಅಡುಗೆಕೋಣೆಯಲ್ಲಿ ಕಾಫಿ, ಟೀಗಳ ತಯಾರಿಯಲ್ಲಿರುವುದು ಕಂಡು ಬಂತು. ನಾನೇ ಗುಂಪಿನ ಹಿರಿಯಳಾದುದರಿಂದ ಆ ದಿನದ ತಿಂಡಿಯ ಜವಾಬ್ದಾರಿಯನ್ನು ವಹಿಸಿಕೊಂಡು, ತಂದಿದ್ದ ಸಾಮಾನುಗಳಿಂದ ಸೊಗಸಾದ ಪುಳಿಯೊಗರೆ ಸಿದ್ಧಗೊಳಿಸಲಾಯಿತು. ಒಂಭತ್ತು ಗಂಟೆಗೆ ಎಲ್ಲರೂ ಹೊರಟು, ಅಲ್ಲಿಯ ಮುಖ್ಯತಾಣಕ್ಕೆ ತಲಪಿ, ಪ್ರತಿಯೊಬ್ಬರಿಗೂ $20 ತೆತ್ತು, ಒಂದು ವಾರದ ಪಾಸ್ ಖರೀದಿಸಿದೆವು. ಅದರಲ್ಲಿ, ಅಲ್ಲಿರುವ ಎಲ್ಲ ತರಹದ ಸಾಹಸಕ್ರೀಡೆಗಳಲ್ಲಿ ಪಾಲ್ಗೊಳ್ಳುವ, ಎಲ್ಲಾ ಕಡೆಯಲ್ಲೂ ಸುತ್ತಾಡಿ ನೋಡಿ ಆನಂದಿಸುವ ಅವಕಾಶವಿದೆ. ನನ್ನ ಪುಟ್ಟ ಮೊಮ್ಮಗಳಿಗೆ ಮೊದಲ ಬಾರಿಯ ಭೇಟಿಯಾದ್ದರಿಂದ, ಅವಳಿಗಾಗಿ ವಿಶೇಷವಾಗಿ, ಚಂದದ ಬ್ಯಾಜ್ ಮತ್ತು ಅವಳಿದ್ದ ನೂಕು ಕುರ್ಚಿಗೆ “First Visit” ಎಂದು ಬರೆದಿರುವ ಕಾರ್ಡನ್ನು ಹಚ್ಚಿದರು. ಹಾಗೆಯೇ, ಯುನಿವರ್ಸಲ್ ಸ್ಟುಡಿಯೊದಲ್ಲಿ ನಾವು ನೋಡಬೇಕಾದ ಎಲ್ಲಾ ಜಾಗಗಳ ಮತ್ತು ಆಹಾರ, ನೀರು ಸಿಗುವ ಸ್ಥಳ, ರೆಸ್ಟ್ ರೂಮುಗಳ ಲಭ್ಯತೆ ಇತ್ಯಾದಿಗಳ ವಿವರವಾದ ನಕ್ಷೆಯನ್ನು ಕೂಡಾ ಕೈಯಲ್ಲಿಟ್ಟರು..ಅಂತೂ ಮಹಾನಗರಿಯೊಳಕ್ಕೆ ಬಂದಾಯ್ತು!
ಬಹು ವಿಸ್ತಾರವಾದ ಈ ಜಾಗದಲ್ಲಿ ಹರಡಿರುವ ಹಾಲಿವುಡ್ ನ ಯುನಿವರ್ಸಲ್ ಸ್ಟುಡಿಯೋ , ಮೇಲಿನ ಹಾಗೂ ಕೆಳಗಿನ ಎರಡು ಸ್ತರಗಳನ್ನು ಹೊಂದಿದೆ. ವಿವಿಧ ಮನೋರಂಜನೆಗಳ ಪ್ರದರ್ಶನದ ತಾಣವಾಗಿರುವ ಇವುಗಳಲ್ಲಿ, ತಮ್ಮದೇ ಆದ ಮುಖ್ಯ ವಿಷಯವೊಂದರ ಮೇಲೆ ಕೇಂದ್ರೀಕೃತವಾದ ಮನೋರಂಜನೆಯನ್ನು, ಅತ್ಯಂತ ಸುವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಏರ್ಪಡಿಸಿರುತ್ತಾರೆ. ಇಲ್ಲಿ ಪ್ರವಾಸಿಗರಿಗೆ ಪಾಲ್ಗೊಳ್ಳಲು ಹಾಗೂ ನೋಡಲು, 9 ಸಾಹಸ ಕ್ರೀಡೆಗಳು, 2 ರೋಲರ್ ಕಾಸ್ಟರ್ ಹಾಗೂ 7 ಪ್ರದರ್ಶನಗಳಿವೆ.
ನಾವು ಮೊದಲನೆಯದಾಗಿ, ಅಲ್ಲಿಯ ಪ್ರಸಿದ್ಧ Griffith Observatoryಯಲ್ಲಿರುವ ತಾರಾಲಯವನ್ನು (Planitorium) ನೋಡಲು ಅದಾಗಲೇ ಇದ್ದ ಮೈಲುದ್ದದ ಸರತಿಸಾಲಿಗೆ ಸೇರಿಕೊಂಡೆವು. ನೋಡಿದರೆ, ಸ್ಥಳೀಯರಿಗಿಂತ ಜಾಸ್ತಿ ನಮ್ಮ ದೇಶದವರೇ ಕಂಡು ಬಂದರು! ಕೆಲವರನ್ನು ಮಾತನಾಡಿಸಿಯೂ ಆಯಿತೆನ್ನಿ. ಅರ್ಧ ತಾಸಿನ ಬಳಿಕ, ಮಗುವಿನ ಜೊತೆಗೆ ಅಳಿಯ ಹೊರಗೆ ಉಳಿದು, ನಾವು ಮೂರು ಮಂದಿ ಒಳಗಡೆ ಹೋದಾಗ ಅಲ್ಲಿ ಪೂರ್ತಿ ಕತ್ತಲೆ..ಕೈಯಲ್ಲಿದ್ದ ಟಾರ್ಚ್ ಹಿಡಿದು ನಮ್ಮ ಕುರ್ಚಿ ತೋರಿಸಿಕೊಟ್ಟರು, ಅಲ್ಲಿಯ ಸಿಬ್ಬಂದಿ. ನೆಲದಿಂದ ನಾಲ್ಕಡಿ ಎತ್ತರದಲ್ಲಿ, ಜೋಕಾಲಿಯಂತಿದ್ದ ಕುರ್ಚಿಯಲ್ಲಿ ಕಷ್ಟಪಟ್ಟು ಕುಳಿತು, ಅದರಲ್ಲಿದ್ದ ಬೆಲ್ಟನ್ನು ಬಿಗಿಯಾಗಿ ಸೊಂಟಕ್ಕೆ ಕಟ್ಟಿದಾಗಲೇ ಪ್ರಾರಂಭವಾಯಿತು ಪ್ರದರ್ಶನ. ನಾನು ಮೊದಲು ನೋಡಿದ್ದ ತಾರಾಲಯ ಮತ್ತು ಇದಕ್ಕೆ ಇತ್ತು, ಅಜಗಜಾಂತರ ವ್ಯತ್ಯಾಸ! ಪ್ರದರ್ಶನ ಪ್ರಾರಂಭವಾಯ್ತು.. ತಲೆಯ ಮೇಲಿನ 360 ಡಿಗ್ರಿ ಪರದೆಯಲ್ಲಿ ಗ್ರಹಗಳು ಕಾಣಲಾರಂಭಿಸಿದವು. ನೋಡು ನೋಡುತ್ತಿದಂತೆಯೇ ನಾನು ಕುಳಿತಿದ್ದ ಕುರ್ಚಿ ಚಲಿಸಲಾರಂಭಿಸಿತು! ಅದರ ಸಹಿತ ನಾವು ಕೂಡಾ ಗ್ರಹಗಳ ನಡುವೆ ಓಡಾಡುವಂತೆ ಭಾಸವಾಗತೊಡಗಿತು. ನನಗೋ ಎಲ್ಲಾ ಆಯೋಮಯ! ..ಬಹಳ ಭಯವಾಗತೊಡಗಿತು. ಮಗಳಲ್ಲಿ ಹೇಳೋಣವೆಂದರೆ, ಅಲ್ಲಿ ಮಾತಾಡುವಂತಿಲ್ಲ.. ಕಣ್ಣುಮುಚ್ಚಿ ಕುಳಿತುಬಿಟ್ಟೆ! ಆದರೆ ಕುರ್ಚಿ ಚಲಿಸುತ್ತಲೇ ಇತ್ತು..ಕಣ್ಣು ತೆರೆಯಲು ಧೈರ್ಯ ಸಾಲದಾಯಿತು. ಕೆಲವೊಮ್ಮೆ ಕಣ್ಣು ತೆರೆಯುವ ಸಾಹಸ ಮಾಡಿದರೂ ತಲೆಸುತ್ತು ಬರುವಂತಾಯಿತು. ಯಾಕಾಗಿ ಬಂದೆನೋ ಎಂದು ಅನಿಸಿದ್ದು ಸುಳ್ಳಲ್ಲ. ಇಪ್ಪತ್ತು ನಿಮಿಷಗಳ ಪ್ರದರ್ಶನವನ್ನು ಎಲ್ಲರೂ ಆಸ್ವಾದಿಸಿದರು..ನನ್ನನ್ನು ಬಿಟ್ಟು! ನಿಜವಾಗಿಯೂ ನಾವು ಕುಳಿತಿದ್ದ ಕುರ್ಚಿ ಇದ್ದಲ್ಲೇ ಓಲಾಡುತ್ತಿದ್ದರೂ, ಆ ಕತ್ತಲೆಯಲ್ಲಿ ನಮ್ಮನ್ನು ವಿಶಾಲ ನಕ್ಷತ್ರಕಾಯಗಳ ನಡುವೆ ಓಡಾಡಿಸಿದಂತೆ ಭ್ರಮೆ ಹುಟ್ಟಿಸಿದ ಅವರ ಜಾಣ್ಮೆಗೆ ಮೆಚ್ಚಲೇಬೇಕು ಅಲ್ಲವೇ?
ಮುಂದಕ್ಕೆ ಸ್ವಲ್ಪ ಹೊತ್ತಿನಲ್ಲಿ ಅತ್ಯಾಕರ್ಷಕವಾದ ಬಹು ದೊಡ್ಡ ಕಟ್ಟಡದ ಮುಂದೆ ನಿಂತಿದ್ದೆವು…ಅದೇ ವಿಖ್ಯಾತ Hollywood Tower. ಇದು Tower of terror ಎಂದೂ ಯಾಕೆ ಪ್ರಖ್ಯಾತ ಎಂಬುದಕ್ಕೆ, ಒಂದೊಮ್ಮೆ ಅಲ್ಲಿ ನಡೆದ ಘಟನೆಯೇ ಕಾರಣವಾಗಿರುತ್ತದೆ. ಇದನ್ನು 1930ರಲ್ಲಿ, 13 ಅಂತಸ್ತಿನ, ಅದ್ಭುತ ಆಕರ್ಷಕ ಹೋಟೇಲಾಗಿ ನಿರ್ಮಾಣ ಮಾಡಲಾಗಿತ್ತು. ವಿಶೇಷ ವಿನ್ಯಾಸದಿಂದ ಇದು ಇಡೀ ಲಾಸ್ ಏಂಜಲ್ಸ್ ನಲ್ಲಿಯೇ ಅತ್ಯಂತ ಆಕರ್ಷಣೆಯ ಕೇಂದ್ರವಾಗಿತ್ತು. ಇದರ ಅತ್ಯಂತ ಮೇಲಿನ ಅಂತಸ್ತಿನಲ್ಲಿ ರಾತ್ರಿ ಹೊತ್ತಿಗೆ ಆಯೋಜಿಸಲಾಗುತ್ತಿದ್ದ ವಿವಿಧ ಮನೋರಂಜನೆಗಳನ್ನು ವೀಕ್ಷಿಸಲು ದೇಶದ ನಾನಾ ಕಡೆಗಳಿಂದ ಪ್ರಸಿದ್ಧ ಕಲಾವಿದರು ಬರುತ್ತಿದ್ದರು. 1939ನೇ ಇಸವಿಯ ಅಂತಹದೇ ಒಂದು ದಿನ, ಐದು ಮಂದಿ ಪ್ರಸಿದ್ಧ ಕಲಾವಿದರು ಹೋಟೇಲಿಗೆ ಬರುತ್ತಾರೆ. ಮಧ್ಯರಾತ್ರಿ ಹೊತ್ತು… ಮಧ್ಯದ ಒಂದೇ ಒಂದು ಲಿಫ್ಟ್ ಬಿಟ್ಟು ಬೇರೆಲ್ಲಾ ಲಿಫ್ಟ್ ಗಳು ಹಾಳಾಗಿರುತ್ತವೆ. ಅವರು 13ನೇ ಅಂತಸ್ತಿಗೆ ಹೋಗಲು ಆ ಲಿಫ್ಟ್ ನ್ನು ಪ್ರವೇಶಿಸಿ ಮೇಲೇರತೊಡಗಿ, ಅಲ್ಲಿಗೆ ತಲಪುವುದರೊಳಗಾಗಿ, ಆದರ ಮೇಲ್ಗಡೆಗೆ ಬಹು ದೊಡ್ಡದಾದ ಸಿಡಿಲು ಅಪ್ಪಳಿಸಿ, ಲಿಫ್ಟ್ ಮೇಲಿನಿಂದ ಕೆಳಗೆ ನೆಲಕ್ಕೆ ಬಹಳ ರಭಸದಿಂದ ಎಸೆಯಲ್ಪಟ್ಟು ಅದರಲ್ಲಿರುವವರೆಲ್ಲಾ ಮೃತರಾಗುತ್ತಾರೆ…ಆ ಕರಾಳರಾತ್ರಿಯಂದು! ಹೋಟೆಲ್ ಮಾಲಿಕನು ಹೊರಪ್ರಪಂಚಕ್ಕೆ ತಿಳಿಯುವ ಮೊದಲೇ ಶವಗಳನ್ನು ಅಲ್ಲಿಂದ ಸಾಗಿಸಿ ದಫನ್ ಮಾಡಿಬಿಡುವನು. ಈಗಲೂ ಅವರ ಆತ್ಮಗಳು ಅಲ್ಲೇ ಸುತ್ತುತ್ತಿವೆ ಎಂಬ ನಂಬಿಕೆಯಿದೆ. (ಈ ವಿಷಯ ಅದರೊಳಗೆ ಹೋಗುವಾಗ ತಿಳಿದಿರಲಿಲ್ಲ…ತಿಳಿದಿದ್ದರೆ ಹೋಗ್ತಾನೂ ಇರಲಿಲ್ಲ!)
ಮಗಳು ನಮ್ಮಿಬ್ಬರನ್ನು ಅದರೊಳಗೆ ಕರೆದೊಯ್ದಾಗ ಅಷ್ಟೇನೂ ಜನಸಂದಣಿ ಇರಲಿಲ್ಲ. ಮೊದಲನೆಯ ನಸುಗತ್ತಲ ಪುಟ್ಟ ಕೋಣೆಗೆ ಪ್ರವೇಶಿಸಿದಾಗ ಪ್ರತಿಯೊಬ್ಬರನ್ನೂ ಪ್ರತ್ಯೇಕವಾದ ಚೌಕದೊಳಗೆ ನಿಲ್ಲಿಸಿದರು. ಅಲ್ಲಿ ಪುಟ್ಟ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಹೃದಯ ಸಂಬಂಧೀ ಕಾಯಿಲೆ ಇರುವವರಿಗೆ ಪ್ರವೇಶವಿಲ್ಲ. ಆಗಲೇ ನನಗೇನೋ ಅನುಮಾನ ಕಾಡಲಾರಂಭಿಸಿತು. ಮಗಳಲ್ಲಿ ಕೇಳಿದಾಗ, “ಭಯಬೇಡ ಅಮ್ಮ , ನಾನಿಲ್ವಾ?” ಎನ್ನಬೇಕೇ? ಆಗಲೇ ನಮ್ಮನ್ನು, ಆರು ಜನರು ತುಂಬುವಂತಹ ಸಣ್ಣ ಲಿಫ್ಟ್ ನೊಳಕ್ಕೆ ಕಳುಹಿಸಿದರು. ಕ್ಷಣ ಮಾತ್ರದಲ್ಲಿ ಕಟ್ಟಡದ ಅತ್ಯಂತ ಮೇಲಿನ ಮಹಡಿಯಲ್ಲಿದ್ದೆವು. ಅಲ್ಲಿ ನೋಡಿದರೆ, ಸುಮಾರು ಮೂವತ್ತು ಜನರು ಕುಳಿತುಕೊಳ್ಳಬಹುದಾದಂತಹ ನಸುಗತ್ತಲೆ ಕೋಣೆಯಲ್ಲಿ, ಚಿತ್ರಮಂದಿರಗಳಲ್ಲಿ ಇರುವಂತಹ ಕುರ್ಚಿಗಳಲ್ಲಿ ಎಲ್ಲರೂ ಕುಳಿತಿದ್ದರು..ನಾವು ಕೊನೆಯ ಸರದಿಯವರು. ಎಲ್ಲಾ ಕುರ್ಚಿಗಳು ಭರ್ತಿಯಾದ ತಕ್ಷಣ ಅತ್ಯಂತ ಬಲವಾದ ಬೆಲ್ಟಿನಿಂದ ನಮ್ಮನ್ನು ಕುರ್ಚಿಗೆ ಬಿಗಿದರು. ಅದರ ಮೇಲಿಂದ ಇನ್ನೊಂದು ಕಬ್ಬಿಣದ ಸಲಾಕೆಯಿಂದ ನಮ್ಮನ್ನು ಭದ್ರಪಡಿಸಿದರು. ಆಗಲೇ ನನ್ನ ಸಂಶಯ ಇನ್ನೂ ಬಲವಾಗತೊಡಗಿ, ಮುಂದಿನ ಅಪಾಯಕ್ಕೆ ಸಿದ್ಧಳಾದೆ.. ಹೇಗೂ ಪಂಜರದೊಳಗೆ ಸೇರಿಯಾಗಿತ್ತಲ್ಲ! ಆಷ್ಟರಲ್ಲಿ, ಅಲ್ಲಿ ನಡೆಯುವ ಸಾಹಸಕ್ರೀಡೆಯ ಬಗ್ಗೆ ವಿವರವಾಗಿ ಹೇಳಲಾರಂಭಿಸಿದರು. ಪೂರ್ತಿ ಸರಿಯಾಗಿ ಅರ್ಥವಾಗದಿದ್ದರೂ,ಅಷ್ಟು ಎತ್ತರದ ಮಹಡಿಯಿಂದ ನಾವು ಕುಳಿತಿದ್ದ ಇಡೀ ಕೋಣೆಯೇ ಸೆಕೆಂಡಿನ ಒಳಗಾಗಿ, ಅಂದರೆ ಗುರುತ್ವಾಕರ್ಷಣ ಶಕ್ತಿಗಿಂತಲೂ ವೇಗವಾಗಿ ತಳಕ್ಕೆ ಎಸೆಯಲ್ಪಡುತ್ತದೆ ಎಂಬುದು ತಿಳಿಯಿತು! (ಇದು ಮೇಲೆ ತಿಳಿಸಿದ ಘಟನೆಯನ್ನೇ ಪುನರಾವರ್ತಿಸುವ ಸಾಹಸಕ್ರೀಡೆ!!) ‘ದೇವರೇ.. ಇದೆಂತಹ ಸಂಕಷ್ಟಕ್ಕೆ ಗುರಿ ಮಾಡಿದೆಯಪ್ಪಾ’ ಎಂದು ಬೇಡಿಕೊಂಡು ಕಣ್ಣುಮುಚ್ಚಿದೆ. ನನಗೋ ಮೊದಲೇ, ಎತ್ತರದಿಂದ ಕೆಳಗೆ ನೋಡಲೇ ವಿಪರೀತ ಭಯ! ಕ್ಷಣ ಮಾತ್ರದಲ್ಲಿ ಭಯಾನಕ ಶಬ್ದದೊಂದಿಗೆ ನಾವಿದ್ದ ಕೋಣೆಯು ಕೆಳಗೆ ಬಿದ್ದೇಬಿಟ್ಟಿತು. ನಾನು ‘ಅಯ್ಯೋ’ ಎಂದು ಕಿರುಚಿದ್ದು ನನಗೆ ಮಾತ್ರ ಕೇಳಿಸಿತ್ತು.. ಯಾಕೆಂದರೆ ಉಳಿದವರೆಲ್ಲಾ ಖುಶಿಯಿಂದ ಕಿರುಚುತ್ತಿದ್ದರು. ನಾನಂತೂ ವಿಪರೀತ ಭಯದಿಂದ ಬೆವತು ಹೋಗಿದ್ದೆ. ಅದರಿಂದ ಇಳಿದು ಹೊರಗೆ ಬಂದಾಗ ಇನ್ನೊಂದು ವಿಚಿತ್ರ ಕಾದಿತ್ತು.
ನಾವು ಬೀಳುವ ಕೊನೆಯ ಹಂತದಲ್ಲಿ ಸ್ವಯಂಚಾಲಿತ ಕ್ಯಾಮರದಿಂದ ನಮ್ಮ ಫೋಟೋ ಕ್ಲಿಕ್ಕಿಸಿ ಅಲ್ಲಿ ಪರದೆಯ ಮೇಲೆ ಹಾಕಿದ್ದರು. ಬೇಕೆಂದರೆ ಐದು ಡಾಲರ್ ಕೊಟ್ಟು ಅದರ ಪ್ರಿಂಟನ್ನು ಪಡೆಯಬಹುದಿತ್ತು .. ನೆನಪಿಗೋಸ್ಕರ. ನನ್ನದನ್ನು ನೋಡಿದಾಗ, ಭಯದಿಂದ ಬಿಳುಚಿ, ಬಲವಾಗಿ ಕಣ್ಣುಮುಚ್ಚಿ ಕುಳಿತದ್ದು ಕಂಡುಬಂತು. ಹಾಗಾಗಿ ಫೋಟೋ ಪ್ರಿಂಟ್ ತೆಗೆದುಕೊಳ್ಳುವ ತಪ್ಪು ಮಾಡಲಿಲ್ಲವೆನ್ನಿ! ನನಗೆ ಒಂದಂತೂ ಅರ್ಥವಾಯ್ತು.. ಅಲ್ಲಿ ಮನೋರಂಜನೆ ಎಂದರೆ ಭಯಾನಕವಾಗಿರುತ್ತದೆ…ಯಾವಾಗಲೂ ಎಚ್ಚರವಾಗಿರಬೇಕೆಂದು!
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=34831
ಮುಂದುವರಿಯುವುದು………
-ಶಂಕರಿ ಶರ್ಮ, ಪುತ್ತೂರು.
ಸೊಗಸಾಗಿದೆ
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ.
ತಮ್ಮ ಅಮೆರಿಕ ಪ್ರವಾಸ ಕಥನ ದಲ್ಲಿ ಮನೋರಂಜನೆ ಎಂದು ಹೋದಾಗ ಆದ ಅನುಭವದ ಅನಾವರಣ ಬಹಳ ಸೊಗಸಾಗಿ ಮೂಡಿ ಬಂದಿದೆ ಧನ್ಯವಾದಗಳು ಮೇಡಂ
ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಾಗರತ್ನ ಮೇಡಂ.
ಚಂದದ ನಿರೂಪಣೆ ವಂದನೆಗಳು
ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು ಗಾಯತ್ರಿ ಮೇಡಂ.
‘ಭಯ’ದ ನಿರೂಪಣೆ ಸೂಪರ್..ಆದರೂ ನೀವು ಧೈರ್ಯವಂತರೆ…ಹೆದರಿದರೂ, ಸಾಹಸಕ್ರೀಡೆಯಲ್ಲಿ ಭಾಗವಹಿಸಿದ್ದೀರಿ.
ನಾನು ಕೆಲವು ವರ್ಷಗಳ ಹಿಂದೆ ಹಾಂಗ್ ಕಾಂಗ್ ಗೆ ಹೋಗಿದ್ದಾಗ, ಅಲ್ಲಿ ಪ್ರಸಿದ್ಧವಾದ ‘ಬಂಗಿ ಜಂಪ್’ ಎಂಬ ಸಾಹಸ ಕ್ರೀಡೆಯನ್ನು ನೋಡಿ, ಬೆಚ್ಚಿ, ಭಾಗವಹಿಸದೇ ಪುಕ್ಕಲುತನ ಪ್ರದರ್ಶಿಸಿದ್ದೆ. (ಬಂಗಿ ಜಂಪ್ ಎಂದರೆ, ಭಾಗವಹಿಸುವ ವ್ಯಕ್ತಿಗೆ ಸಕಲ ಸುರಕ್ಷಾ ವಿಧಾನಗಳನ್ನು ತೊಡಿಸಿ, ಉಕ್ಕಿನ ಹಗ್ಗವನ್ನು ಬೆನ್ನಿಗೆ ಬಾಲದಂತ ಕಟ್ಟಿ , 80 ನೇ ಮಹಡಿಯಿಂದ ‘ತಳ್ಳುವುದು’. ಆ ವ್ಯಕ್ತಿ ಒಂದೆರಡು ನಿಮಿಷ ‘ತ್ರಿಶಂಕು ಸ್ವರ್ಗ’ ದಲ್ಲಿ ಗಾಳಿಯಲ್ಲಿ ಬೀಳುವ/ತೇಲಾಡುವ ಭಯಾನಕ ಮೋಜು ಅನುಭವಿಸುತ್ತಾನೆ!)
ಲೇಖನವನ್ನು ಪ್ರೀತಿಯಿಂದ ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ತಮಗೆ ಹೃತ್ಪೂರ್ವಕ ಧನ್ಯವಾದಗಳು. ಈ ಬಂಗಿ ಜಂಪ್ ಬಗ್ಗೆ ಯೋಚಿಸಿದರೆ ಭಯಂಕರ ಹೆದರಿಕೆ ಆಗ್ತಾ ಇದೆ. ಅಮೆರಿಕದಲ್ಲಿರುವ ನನ್ನ ಮಗಳು ಅಲ್ಲಿ ಹಾರಿದ ಮೇಲೆ ನಮಗೆ ತಿಳಿಸಿ, ನಮ್ಮ ಕೈಯಲ್ಲಿ ಸರೀ ಪೂಜೆ ತೆಗೆದುಕೊಂಡಳು! ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು ಮಾಲಾ.
ಈ ತರಹ ಕೆಲವು ನಾನೂ ಅನುಭವಿಸಿದೆ.
ಸೊಗಸಾದ ನಿರೂಪಣೆ,, ನಿಜಕ್ಕೂ ಭಯಂಕರ ವಾದ ಮನೋರಂಜನೆ
ಅವಿಸ್ಮರಣೀಯ ಎಳೆಗಳ ಅನಾವರಣ ಸುಂದರವಾಗಿ ಮೂಡಿ ಬರುತ್ತಿದೆ. ಎಷ್ಟೇ ಸುರಕ್ಷತೆಯ ಗ್ಯಾರಂಟಿಯಿದ್ದರೂ ಉಂಟಾಗುವ ಭಯದ ಮಜದ ವರ್ಣನೆ ಚಂದಿದೆ.