ಅವಿಸ್ಮರಣೀಯ ಅಮೆರಿಕ-ಎಳೆ 6
ತಪ್ಪಿದ ದಾರಿ ....!
ಮುಂದಿನ ಮೂರ್ನಾಲ್ಕು ದಿನಗಳಲ್ಲಿ ನನ್ನ ಜೆಟ್ ಲ್ಯಾಗ್ ತೊಂದರೆಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬಂತು. ಸಂಜೆ ಹೊತ್ತಿಗೆ ವಾಕಿಂಗ್ ಹೋಗುವ ಅಭ್ಯಾಸ ಮಾಡಿಕೊಂಡೆ. ನಾವಿದ್ದ ಜಾಗದ ಹೆಸರು ಮೌಂಟೆನ್ ವ್ಯೂ. ಸಾಂತಾಕ್ರೂಝ್ ಬೆಟ್ಟದ ಸಾಲುಗಳ ತಪ್ಪಲಿನಲ್ಲಿ ಇರುವ ಸಮತಟ್ಟಾದ ಬಯಲು ಪ್ರದೇಶದಲ್ಲಿ ದಟ್ಟ ಹಸಿರಿನ ನಡುವೆ ಹರಡಿರುವ ಪುಟ್ಟ ಪಟ್ಟಣ..ಬಹು ದೂರದಲ್ಲಿ ಕಾಣುವ ಹಸಿರು ಬೆಟ್ಟದ ಸಾಲಿನ ಸೊಬಗು ಕಣ್ಮನ ಸೆಳೆಯುತ್ತದೆ. ಎಲ್ಲಿ ನೋಡಿದರಲ್ಲಿ ಚಂದದ ಹೂದೋಟಗಳು …ವಿವಿಧ ಜಾತಿಯ, ಬಣ್ಣಗಳ ಹೂಗಳು.. ಮುಖ್ಯವಾಗಿ ಗುಲಾಬಿ ಹೂಗಳ ವೈಭವ!!
ಹೊಸ ಜಾಗ, ಹೊಸ ಭಾಷೆ. ಸ್ಥಳೀಯರು ನಮ್ಮೊಡನೆ ಹೇಗೆ ವ್ಯವಹರಿಸಬಹುದೆಂಬ ಕುತೂಹಲದ ಜೊತೆಗೆ ಸ್ವಲ್ಪ ಅಳುಕು. ಯಾಕೆಂದು ಗೊತ್ತಲ್ಲ.. ವರ್ಣಭೇದ ನೀತಿ! ಬಿಳಿಯರು ಬೇರೆ ವರ್ಣೀಯರನ್ನು ಕೀಳಾಗಿ ಕಾಣುತ್ತಾರೆಂಬ ಯೋಚನೆ ನಮ್ಮದು. ನಮ್ಮಲ್ಲಿಗೆ ಪ್ರವಾಸಿಗರಾಗಿ ಬರುವ ಬಿಳಿಯರನ್ನು ನಾವು ನೋಡುವ ದೃಷ್ಟಿ ಬೇರೆ ಅಲ್ಲವೇ? ನನ್ನ ವಾಕಿಂಗ್ ಸಮಯದಲ್ಲಿ, ಕಾಲುದಾರಿಯಲ್ಲಿ, ಒಂದೆರಡು ಜನ ಸಿಕ್ಕಿದರೆ ಪುಣ್ಯ. ನಾನಂತೂ, ಸೀರೆಯುಟ್ಟು ಹೋದರೆ, ಅಲ್ಲಿಯವರು ಯಾವುದೋ ಹೊಸ ಪ್ರಾಣಿಯನ್ನು ನೋಡಿದಂತೆ ನೋಡಬಹುದೆಂಬ ಅಳುಕಿದ್ದರೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ನಾನಂದುಕೊಡಂತೆ ನಡೆಯಲೇ ಇಲ್ಲ. ಅಪರೂಪಕ್ಕೆ ಯಾರಾದರೂ ಎದುರಿಗೆ ಸಿಕ್ಕಿದರೆ ಲಿಂಗ ಭೇದವಿಲ್ಲದೆ ‘ಹಲೋ’, ‘ಹಾಯ್’, ‘ಹೌ ಡು ಯು ಡು?’ ಎಂದು ಮಾತನಾಡಿಸಿ ಮುಗುಳ್ನಕ್ಕು ಮುಂದುವರಿಯುವುದನ್ನು ಕಂಡಾಗ ನಿಜಕ್ಕೂ ಬೆರಗಾದೆ. ಮೊದಲೆರಡು ಬಾರಿ ಅಪರಿಚಿತರಿಗೆ ‘ಹಲೋ’ ಹೇಳುವಾಗ ಸಂಕೋಚ ಎನಿಸಿದರೂ, ಆಮೇಲೆ ಅಭ್ಯಾಸವಾಗಿ ಬಿಟ್ಟಿತು. ನಮ್ಮೂರಲ್ಲಿ, ನೂರಾರು ಜನರ ಮಧ್ಯೆ ಇರುವ ನಾವು, ಅಪರಿಚಿತರೊಡನೆ ಮಾತನಾಡುವುದು ಬಿಡಿ.. ಪರಿಚಿತರೊಡನೆ ಮಾತ್ತನಾಡಿದರೆ ಕೂಡಾ ಅವರಿಗೆ ನಮ್ಮೊಡನೆ ಸರಿಯಾಗಿ ಮಾತ್ಡಲು ವ್ಯವಧಾನವಿರುವುದಿಲ್ಲ..ಅಲ್ಲವೇ?
ಹೀಗೊಂದು ದಿನ ಸಂಜೆ ವಾಕಿಂಗ್ ಹೊರಟಾಗ ಯಾವಾಗಲೂ ನಡೆದಾಡುವ ದಾರಿಗಿಂತ ಸ್ವಲ್ಪ ಬೇರೆ ದಾರಿಯಲ್ಲಿ ಹೋಗೋಣವೆಂದುಕೊಂಡು ಹೊರಟೆ. ದಾರಿ ಬದಲಿಸುವಾಗ ಆ ಜಾಗದ ಸ್ವಲ್ಪ ಗುರುತನ್ನೂ ನೆನಪಿಟ್ಟುಕೊಂಡೆ.. ದಾರಿ ತಪ್ಪಬಾರದಲ್ಲ. ಧೈರ್ಯದಿಂದ ನಡೆದದ್ದೇ ನಡೆದದ್ದು. ಕತ್ತಲಾಗುತ್ತಾ ಬಂದಿತ್ತು. ಇನ್ನು ಹಿಂತಿರುಗೋಣವೆಂದು ತಿರುಗಿ ಬಂದರೆ, ನಾನು ಹೋಗಬೇಕಿದ್ದ ದಾರಿಯೇ ತಪ್ಪಿದಂದಾಯಿತು. ನಾನು ಗುರುತು ಇಟ್ಟುಕೊಡಿದ್ದ ಹೂವಿನ ಪೊದೆಯಿರುವ ಜಾಗ, ಹೂವರಳಿ ನಗುವ ವೃತ್ತದಂತಹುಗಳೇ ಬೇರೆ ಬೇರೆ ಕಡೆಗಳಲ್ಲಿ ಕಂಡಾಗ ದಿಗ್ಭ್ರಾಂತಳಾದೆ! ಅಲೀಬಾಬನ ಕಥೆ ನೆನಪಾಯ್ತು.. ಮುಂದೇನು ಮಾಡುವುದೆಂದು ತೋಚದೆ ಪುನ: ಹಿಂದಕ್ಕೆ ನಡೆದೆ. ಕೈಯಲ್ಲಿ ಫೋನಿಲ್ಲ, ಮನೆಯ ವಿಳಾಸ ತಿಳಿದಿಲ್ಲ, ಯಾರ ಪರಿಚಯವೂ ಇಲ್ಲ…ನನ್ನ ಪರಿಸ್ಥಿತಿಯನ್ನು ನೀವೇ ಊಹಿಸಿ! ಅಮೆರಿಕಕ್ಕೆ ಬಂದು ನಾಲ್ಕೇ ದಿನಗಳಲ್ಲಿ ಕಳೆದು ಹೋಗುವ ಮಹಾಭಾಗ್ಯ ನನ್ನದಾಗಲಿದೆಯೆಂದು ಯೋಚಿಸಿಯೇ ಹೈರಾಣವಾಗಿ ಹೋದೆ. ಭಯದಿಂದ ಆ ಚಳಿಯಲ್ಲೂ ಮೈ ಬೆವರಿ ಒದ್ದೆಯಾಗಿತ್ತು. ಕತ್ತಲೆ ಆವರಿಸಿ ದಾರಿ ದೀಪ ಬೆಳಗಲು ಪ್ರಾರಂಭವಾಗಿತ್ತು. ಆದದ್ದಾಗಲೆಂದು ಒಂದು ತಿರುವಿನಲ್ಲಿ ತಿರುಗಿ ಅಲ್ಲೇ ನೇರವಾಗಿ ನಡೆಯುತ್ತಿದ್ದಾಗ, ದೂರದಿಂದ ಅಳಿಯನ ಸ್ವರ ಕೇಳಿಸಿತು, ‘ವಾಕಿಂಗ್ ಆಯ್ತಾ ಅತ್ತೆ, ಬನ್ನಿ ಹೋಗೋಣ’ ಎಂದು ಅವನ ಕಾರಿಗೆ ಕರೆಯುತ್ತಿದ್ದ. ಅಬ್ಬಾ.. ನನ್ನ ಸಂತಸವನ್ನು ಏನೆಂದು ಹೇಳಲಿ..?! ದೇವರ ಸಹಾಯದ, ಕರುಣೆಯ ದಿವ್ಯದರುಶನವಾಗಿತ್ತು ನನಗೆ! ‘ಬದುಕಿದೆಯಾ ಬಡ ಜೀವವೇ..!!’ ಎಂದುಕೊಂಡೆ. ಆದರೆ, ನನಗಾದ ತೊಂದರೆಯನ್ನು ತಿಳಿಸಿದರೆ ನಗೆಪಾಟಲಿಗೆ ಈಡಾಗುವೆನೆಂದು ತಿಳಿದಿತ್ತು. ಹಾಗಾಗಿ, ‘ಕವುಚಿ ಬಿದ್ದರೂ ಮೂಗು ಮೇಲೆ ಮಾಡಲು’, ‘ಇಲ್ಲ..ಇಲ್ಲ.. ನೀನು ಹೋಗು, ನಾನು ನಡೆದೇ ಬರುವೆ’ ಎಂದು ಬೊಗಳೆ ಬಿಟ್ಟೆ!..ಯಾಕೆಂದರೆ, ಅದಾಗಲೇ ನನಗೆ ಧೈರ್ಯ ಬಂದು ಬಿಟ್ಟಿತ್ತು..ನಾನು ಹೋಗುತ್ತಿರುವ ದಾರಿ ಸರಿ ಇದೆಯೆಂದು. ಆದರೂ ಅವನ ಒತ್ತಾಯಕ್ಕೆ ಹೋದೆನೆಂಬಂತೆ ನಟಿಸಿ ಅವನ ಜೊತೆ ಕಾರಲ್ಲಿ ಹೋದೆನೆನ್ನಿ. ಇಂದಿಗೂ ಅವರಿಗೆ ಇದರ ಬಗ್ಗೆ ತಿಳಿದಿಲ್ಲ! ಆವತ್ತು ನಾನು ಕಲಿತ ಪಾಠ ಮುಂದಿನ ನನ್ನ ಪ್ರಯಾಣಗಳಲ್ಲಿ ಬಹಳ ಮಹತ್ವದ ಸ್ಥಾನ ಪಡೆಯಿತು. ಈಗಿನಂತೆ ಮೊಬೈಲ್ ಆ ದಿನಗಳಲ್ಲಿ ಇರದುದರಿಂದ, ಕೈಯಲ್ಲಿ, ಮನೆ ವಿಳಾಸ, ಫೋನ್ ನಂಬರ್ ತಪ್ಪದೆ ಇರುತ್ತಿತ್ತು.
ಆಮೇಲೆ ಸರಿಯಾಗಿ ಗಮನಿಸಿದಾಗ ತಿಳಿದುದೇನೆಂದರೆ, ಪ್ರತಿಯೊಂದು ರಸ್ತೆ ಪಕ್ಕದ ಕಾಲುದಾರಿಯಲ್ಲಿ ನೇರವಾಗಿ ನಡೆದರೆ ನಾವು ಮೊದಲಿದ್ದಲ್ಲಿಗೇ ವಾಪಾಸು ತಲಪುತ್ತೇವೆ.. ಅಂದರೆ ಒಂದು ವೃತ್ತ ಪೂರ್ತಿಯಾಗುತ್ತದೆ..ಅಷ್ಟು ವ್ಯವಸ್ಥಿತವಾಗಿದೆ ಅಲ್ಲಿಯ ರಸ್ತೆಯ ರಚನೆ.. ರಸ್ತೆ ಅಡ್ಡ ದಾಟಿದರೆ ಮಾತ್ರ ದಾರಿ ತಪ್ಪುವ ಸಾಧ್ಯತೆ ಇದೆ. ಇದನ್ನು ನೆನಪಿಟ್ಟುಕೊಂಡ ಬಳಿಕ ಎಲ್ಲಿ ಬೇಕೆಂದರಲ್ಲಿ ಅಳುಕಿಲ್ಲದೆ ನಡೆದಾಡಲು ಸಾಧ್ಯವಾಯಿತೆನ್ನಿ!
ಸ್ವಚ್ಛತೆ ಮತ್ತು ಅದರ ಬಗೆಗಿನ ಇಲ್ಲಿಯವರ ಕಾಳಜಿಯನ್ನು ಮೆಚ್ಚಲೇಬೇಕು. ಅದು ಮಾತ್ರವಲ್ಲ, ವಿವಿಧ ಕಾನೂನು, ಅದರ ಪಾಲನೆ ಎಲ್ಲಾ ತುಂಬಾ ಅಚ್ಚುಕಟ್ಟು. ವಿಶಾಲವಾದ ಅಂಗಡಿಗಳಲ್ಲಿ ಸಾಮಾನುಗಳನ್ನು ಗಿರಾಕಿಗಳಿಗೆ ತೋರಿಸಲು ಜನಗಳೇ ಇರುವುದಿಲ್ಲ. ಯಾವುದಕ್ಕೂ ಚರ್ಚೆ ಮಾಡುವಂತೆಯೇ ಇಲ್ಲ.. ಜನರಿದ್ದರೆ ತಾನೇ ಚರ್ಚೆಗೆ ಅವಕಾಶ! ಬೇಕಾದ ಸಾಮಾನನ್ನು ಆರಿಸಿದರೆ ಆಯ್ತು. ದುಡ್ಡು ಪಡಕೊಳ್ಳಲು ಒಬ್ಬರು ಕ್ಯಾಶಿಯರ್ ಬಿಟ್ಟರೆ ಒಂದಿಬ್ಬರು ಸಹಾಯಕರು ಗ್ರಾಹಕರ ಸಹಾಯಕ್ಕೆ ಲಭ್ಯವಿರುತ್ತಾರೆ. ಅದರಲ್ಲೂ ಕ್ರೆಡಿಟ್ ಕಾರ್ಡ್ ವ್ಯವಹಾರವೇ ಹೆಚ್ಚು. ಕೆಲವೊಂದು ಕಡೆ ಯಾರೂ ಇರುವುದೇ ಇಲ್ಲ. ಬೇಕಾದ್ದನ್ನು ತೆಗೆದುಕೊಂಡು, ಅದರ ಮೇಲೆ ನಮೂದಿಸಿದ ಮೊತ್ತವನ್ನು ಅದಕ್ಕೆಂದೇ ಇರುವ ಬಾಕ್ಸ್ ನಲ್ಲಿ ಹಾಕಿ ಚಿಲ್ಲರೆ ಬಾಕಿ ಇದ್ದರೆ ನಾವೇ ಅಲ್ಲಿಂದ ತೆಗೆದುಕೊಳ್ಳಬಹುದು. ವಾಹನಗಳಿಗೆ ಇಂಧನ ತುಂಬಿಸುವಲ್ಲಿಯೂ ಯಾರೂ ಇರುವುದಿಲ್ಲ.. ಎಲ್ಲಾ ಯಾಂತ್ರೀಕೃತ. ಅದೂ ಅಲ್ಲದೆ, ತಾವೇ ವಾಹನಗಳನ್ನು ಸ್ವಚ್ಛಗೊಳಿಸುದಾದರೆ ಅದಕ್ಕಾಗಿ ನೀರಿನ ಪೈಪ್, ಸೋಪ್, ಉದ್ದ ಹಿಡಿಕೆಯ ಬ್ರಷ್ ಎಲ್ಲಾ ಅಲ್ಲಿಯೇ ಲಭ್ಯವಿರುತ್ತವೆ..ಉಚಿತವಾಗಿ. ಇನ್ನು ರಸ್ತೆಯ ಇಕ್ಕೆಲಗಳಲ್ಲೂ ಇರುವ ಅಗಲವಾದ ಕಾಲುದಾರಿಗಳು ಪಾದಾಚಾರಿಗಳಿಗೆ ಮಾತ್ರವಲ್ಲ, ಸೈಕಲ್ ತುಳಿಯುವವರೂ ಅದನ್ನು ಉಪಯೋಗಿಸಬೇಕು. ಪುಟ್ಟ ಮಕ್ಕಳನ್ನು ಕೈ ಅಥವಾ ಸೊಂಟದಲ್ಲಿ ಎತ್ತಿಕೊಳ್ಳದೆ, ಅದಕ್ಕೆಂದೇ ಇರುವ ಕೈಗಾಡಿಯಲ್ಲಿ(Stroller) ತಳ್ಳಿಕೊಂಡು ಇದೇ ಕಾಲುದಾರಿಯಲ್ಲಿ ಹೋಗಬೇಕು. ಎಲ್ಲಾ ಕಡೆಗಳಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಸೊಗಸಾದ ಹೂಗಿಡಗಳು, ಮರಗಳು ಚಂದ ಚಪ್ಪರದಂತೆ ನೆರಳು ನೀಡುತ್ತವೆ.
ಇಲ್ಲಿ ಜನರಿಗಿಂತ ಕಾರುಗಳೇ ಜಾಸ್ತಿ. ಬಸ್ಸಿನಂತಹ ಸಾರಿಗೆ ಸೌಕರ್ಯಗಳು ಬಹಳ ಕಡಿಮೆ. ರಿಕ್ಷಾಗಳು ಇಲ್ಲವೇ ಇಲ್ಲ. ಬೇಕಾದ ಸಾಮಾನು ತರಲು ಕಡಿಮೆಯೆಂದರೂ ಮೈಲಿಗಳಷ್ಟು ಹೋಗಲು ಕಾರುಗಳು ಅತೀ ಅಗತ್ಯ. ಎಷ್ಟೇ ಬಡವರಾದರೂ ಕಾರು ಇದ್ದೇ ಇರುತ್ತದೆ. ರಸ್ತೆಯಲ್ಲಿ ಚಲಿಸುವ ತರಹೇವಾರಿ ಕಾರುಗಳು ಆಯಾಯ ಲೇನ್ ಗಳಲ್ಲಿ ನಿಗದಿತ ವೇಗದಲ್ಲಿಯೇ ಚಲಿಸಬೇಕು. ಹೆಚ್ಚು ಕಡಿಮೆಯಾದರೆ ತಕ್ಷಣ ಬರುವ ಟ್ರಾಫಿಕ್ ಪೋಲೀಸರು ಅಲ್ಲಿಯೇ ಕಾರು ನಿಲ್ಲಿಸಿ ಫೈನ್ ಜಡಿಯುವರು. ಕೆಲವೊಮ್ಮೆ ಡ್ರೈವಿಂಗ್ ಲೈಸೆನ್ಸ್ ಹಿಂದಕ್ಕೆ ಪಡಕೊಂಡು ಕೆಲವು ದಿನಗಳ ಚಾಲನಾ ತರಬೇತಿಯನ್ನು ಪಡೆಯುವ ಶಿಕ್ಷೆಯನ್ನೂ ಕೊಡುವರು. ಯಾವುದಕ್ಕೂ ನಮ್ಮಲ್ಲಿಯಂತೆ ಲಂಚ ಎನ್ನುವ ಮಾತೇ ಇಲ್ಲ. ಈ ತರಹ ನಮ್ಮಲ್ಲೂ ಇದ್ದರೆ ಎಷ್ಟು ಒಳ್ಳೆದಿತ್ತು ಅನಿಸುತ್ತದೆ. ರಸ್ತೆಯ ನಿಯಮಗಳನ್ನು ಪಾದಾಚಾರಿಗಳೂ ಸರಿಯಾಗಿ ಪಾಲಿಸಬೇಕಾಗುತ್ತದೆ. ಝೀಬ್ರಾ ಕ್ರಾಸ್ ನಲ್ಲಿ ದಾಟುವುದಕ್ಕಾಗಿ, ಅದಕ್ಕಾಗಿ ಇರುವ ಗುಂಡಿಯನ್ನು ಒತ್ತಿ, ಸೂಚನೆ ಬರುವ ತನಕ ಕಾಯಬೇಕಾಗುತ್ತದೆ. ಸೂಚನೆ ಬಂದು ನಿಗದಿತ ಸಮಯದೊಳಗೆ ದಾಟಬೇಕು. ಆದರೆ ರಸ್ತೆ ದಾಟುವವರು ನಿಯಮ ತಿಳಿಯದೆ ಅಕಸ್ಮಾತ್ ರಸ್ತೆ ದಾಟಿದರೂ, ಪೂರ್ತಿಯಾಗಿ ದಾಟುವ ವರೆಗೆ ವಾಹನ ಚಾಲಕರು ತುಂಬಾ ಗೌರವದಿಂದ ಕಾದು, ಆಮೇಲೆ ಮುಂದಕ್ಕೆ ಹೋಗುವುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ನಮ್ಮಲ್ಲಿ ಹೀಗೇನಾದರೂ ಆದರೆ, ನಾವು ಬೈಗುಳ ಮಳೆಯಲ್ಲಿ ಒದ್ದೆಯಾಗುವುದು ಗ್ಯಾರಂಟಿ..!
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=34688
ಮುಂದುವರಿಯುವುದು………
– ಶಂಕರಿ ಶರ್ಮ, ಪುತ್ತೂರು.
ಚೆನ್ನಾಗಿದೆ
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು
ಆಹಾ ನಿಮ್ಮ ಅಮೇರಿಕಾ ಪ್ರವಾಸ ಕಥನ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತಿದೆ.ನಿರೂಪಣೆ ಸೊಗಸಾಗಿ ಮೂಡಿಬರುತ್ತಿದೆ.. ಧನ್ಯವಾದಗಳು ಮೇಡಂ.
ಮೆಚ್ಚುಗೆಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ನಮನಗಳು