ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 4
(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..)
ಮುಂದೆ ಮುಂದೆ ನಡೆಯುತ್ತಾ ಇದ್ದ ಹಾಗೆ, ದೈಹಿಕ ಶಕ್ತಿ ಕುಂಠಿತವಾಗತೊಡಗಿತು. ಗಂಟಲೊಣಗಿ ಬಾಯಾರತೊಡಗಿತು. ನನ್ನ ಕೆಲವೇ ಅಗತ್ಯ ವಸ್ತುಗಳನ್ನೂ ¸ ಸಹ ಹೊರಲಾಗದು ಎಂದು ಗೊತ್ತಿದ್ದರಿಂದ, ಅಂದರೆ ಮುಂಚೆಯೇ ಟ್ರಾವಲ್ಸ್ ನವರು ತಿಳಿಸಿದ್ದರಿಂದ, ನೇಮಿಸಿಕೊಂಡಿದ್ದ ಶರ್ಪಾ ಸಹ ನನ್ನ ನಡಿಗೆಯ ನಿಧಾನಕ್ಕೆ ರೋಸಿಹೋಗಿ, ಮುಂದೆ ಎಲ್ಲೋ, ಕಣ್ಣಿಗೂ ಕಾಣದಷ್ಟು ದೂರ ಹೋಗಿಯಾಗಿತ್ತು. ನೀರಿನ ಬಾಟಲಿಯೂ ಸಹ ಅದೇ ಚೀಲದಲ್ಲಿತ್ತಾದರಿಂದ ನಿಶ್ಯಕ್ತಿ ವಿಪರೀತವಾಗಿ ಒಂದೊಂದು ಹೆಜ್ಜೆ ಎತ್ತಿಡುವುದೂ ಕಷ್ಟವಾಗತೊಡಗಿತು. ನಮಗೆ ಮುಂಚೆಯೇ ಸೂಚಿಸಿದ್ದರು, ನಿಮ್ಮೊಂದಿಗೆ ಒಂದು ಪುಟ್ಟ ಶಿಲ್ಪಿ, ಅಂದರೆ ವಿಶಲ್ ಅನ್ನು ಇಟ್ಟುಕೊಂಡಿರಿ, ಅದನ್ನು ಊದಿದರೆ ಸಹಾಯಕ್ಕೆ ಬರುತ್ತೇವೆ ಎಂದು. ಆದರೆ ಪುಟ್ಟ ಕೈ ಚೀಲಕ್ಕಿದ್ದ ಜಿ಼ಪ್ ಎಳೆದು ಅದರಲ್ಲಿದ್ದ ವಿಶಲ್ ತೆಗೆಯಲೂ, ಅಲ್ಲಿದ್ದ ಬಿಸ್ಕತ್ ಪೊಟ್ಟಣ ತೆಗೆಯಲೂ ಸಧ್ಯವಾಗದಷ್ಟು ನಿತ್ರಾಣ. ಏನೂ ಮಾಡಲು ತೋಚದೆ, ಕಣ್ಮುಚ್ಚಿ ಒಂದು ಪಕ್ಕಕ್ಕೆ ನಿಂತೆ. – ʼಮಾಜಿ, ಕ್ಯಾ ಹುವಾ‛, ಒಂದು ಬಾಲಧ್ವನಿ ಕೇಳಿದಂತಾಯಿತು. ಕಣ್ಣು ತೆರೆದರೆ, 14 – 15 ವರ್ಷದ ಒಬ್ಬ ಹುಡುಗ ಕೇಳುತ್ತಿದ್ದ. ಕೈಯಲ್ಲಿ ಒಂದು ಕಿಟ್ ಬ್ಯಾಗ್ ಇತ್ತು.
ನಾನು ಹೇಳಿದೆ ”ನನ್ನ ಚೀಲವನ್ನು ಹೊತ್ತಿರುವ ಶರ್ಪಾ ಮುಂದೆ ಹೋಗಿಯಾಗಿದೆ, ತುಂಬಾ ಸುಸ್ತಾಗುತ್ತಾ ಇದೆ, ಕುಡಿಯಲು ನೀರೂ ಸಹ ಇಲ್ಲ”.
ಕೋಯಿ ಬಾತ್ ನಹೀ ಮಾಜಿ, ಮೇ ದೇತಾ ಹುಂ – ಎಂದು ಹೇಳುತ್ತಾ ತನ್ನ ಬ್ಯಾಗ್ ತೆರೆದು, ಅದರೊಳಗಿನ ಫ್ಲಾಸ್ಕ್ ನಿಂದ ಗ್ಲೂಕೋಸ್ ಬೆರೆಸಿದ ಒಂದು ನೋಟ ಬಿಸಿ ಬಿಸಿ ನೀರನ್ನು ಬಗ್ಗಿಸಿ ಕೊಟ್ಟ. ಕುಡಿದ ನಂತರ ಶಕ್ತಿ, ಉತ್ಸಾಹ ಸ್ವಲ್ಪ ಮಟ್ಟಿಗೆ ಮರುಕಳಿಸಿದಂತಾಯಿತು. ಇನ್ನೇನು ಚಿಂತೆಯಿಲ್ಲ, ನಿಧಾನವಾಗಿ ಬನ್ನಿ ಅಮ್ಮ, ನಾನು ಮುಂದೆ ಹೋಗಬೇಕಿದೆ- ಎನ್ನುತ್ತಾ ಹೊರಟ.
ಆ ಹುಡುಗನನ್ನು ಧನ್ಯತೆಯಿಂದ ನೀಡುತ್ತಾ ನಿಂತಾಗ, ಮತ್ತೆ ಮನದಲ್ಲಿ, ನನ್ನ ಈಶ್ವರನೇ ನನಗಾಗಿ ತನ್ನ ಗಣದಲ್ಲೊಬ್ಬರನ್ನು ಕಳುಹಿಸಿರಬಹುದೆಂಬ ಭಾವ ಆವರಿಸಿತು. ಮತ್ತೆ ಸುಮಾರು ಅರ್ಧ – ಮುಕ್ಕಾಲು ಕಿ.ಮಿ.ನಷ್ಟು ದೂರ ನಿರಾಯಾಸವಾಗಿ ಕ್ರಯಿಸಿತು. ಕೈ ಚೀಲದಲ್ಲಿದ್ದ ಬಿಸ್ಕತ್ತೂ ಖಾಲಿಯಾಯಿತು, ಹಾಗೆಯೇ ಮತ್ತೆ ನಿತ್ರಾಣ ಪ್ರಾರಂಭವಾಯಿತು. ನಿಂತು ಪ್ರಕೃತಿ ಸೌಂದರ್ಯ ನೋಡಲು, ಮನಸ್ಸು ಮುದಗೊಳ್ಳುತ್ತಿತ್ತು, ಆದರೆ ಮುಂದೆ ಸಾಗಲು, ಇನ್ನೂ ಇರುವ 2-3 ಕಿ.ಮಿ.ಗಳಷ್ಟು ಕ್ರಮಿಸಲು ಸಾಧ್ಯವೇ ಆಗದೇನೋ ಎನ್ನುವ ಸ್ಥಿತಿಗೆ ಬಂದು ದೇಹ ನಿಂತಿತು.
ಅಷ್ಟೇ, ಇಲ್ಲೇ ಕುಳಿತು ಬಿಡೋಣ, ಹಿಂದೆ ನಮ್ಮವರು ಯಾರಾದರೂ ಬರಬಹುದು, ಅವರು ಏನಾದರೂ ಪರಿಹಾರ ಹೇಳಬಹುದು, ಇನ್ನು ನನ್ನ ಕೈಲಿ ಸಾಧ್ಯವೇ ಇಲ್ಲ ಎಂಬಂತಾದಾಗ, ಟ್ರಾವಲ್ಸ್ ನವರು ಸೂಚನೆಗಳನ್ನು ಕೊಟ್ಟಾಗ ಹೇಳಿದ್ದು ನೆನಪಿಗೆ ಬಂತು. ”ಪರಿಕ್ರಮ ಮಾಡುವಾಗ, ಸುಸ್ತಾಗಿ, ಆಮ್ಲಜನಕದ ಕೊರತೆ ಎನ್ನಿಸಿ, ಆಯಾಸವಾದಾಗ್ಯೂ, ನಿಧಾನದಲ್ಲಿ ನಿಧಾನವಾಗಿಯಾದರೂ ನಡೆಯುತ್ತಿರಿ, ಇಲ್ಲದಿದ್ದಲ್ಲಿ ರಕ್ತ ಪರಿಚಲನೆಗೆ ತೊಂದರೆಯುಂಟಾಗಿ ಉಸಿರಾಟಕ್ಕೆ ಕಷ್ಟವಾಗಬಹುದು” ಎಂದಿದ್ದರು.
ಈಗ ಏನಪ್ಪಾ ಮಾಡಲಿ, ಎಂದು ಯೋಚಿಸುತ್ತಿರುವಂತೆಯೇ, ನನ್ನ ಈಶ್ವರ ತನ್ನ ಮತ್ತೊಬ್ಬ ದೂತನನ್ನು ಕಳುಹಿಸಿದನೇನೋ ಅನ್ನುವಂತೆ ಹತ್ತಾರು ಹೆಜ್ಜೆ ಮುಂದೆ ಇದ್ದ ಒಬ್ಬ ಯುವಕ ತನ್ನ ಪ್ಲಾಸ್ಕ್ ನೊಂದಿಗೆ ಹಿಂದೆ ಬಂದು, – ಟೀ ಕುಡಿಯಿರಿ ಅಮ್ಮಾ, ಶಕ್ತಿ ಬರುತ್ತದೆ – ಎಂದೆನ್ನುತ್ತಾ, ಒಂದು ದೊಡ್ಡ ಲೋಟದ ತುಂಬಾ ಬಿಸಿ ಬಿಸಿ ಟೀ ಬಗ್ಗಿಸಿ ಕೊಟ್ಟ. ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಮನೋಲ್ಲಾಸ ಮರುಕಳಿಸಿತು.
ಎಷ್ಟಪ್ಪಾ ದುಡ್ಡು?, ಎನ್ನಲು, ”ಏನೂ ಬೇಡಮ್ಮಾ, ನಿಮಗೆ ಶಕ್ತಿ ಬಂದು ಒಂದು ಸ್ವಲ್ಪ ಆರಾಮ ಅನ್ನಿಸುತ್ತಿದೆಯಲ್ಲಾ ಅಷ್ಟೇ ಸಾಕು” ಎನ್ನುತ್ತಾ, ಕಣ್ಮರೆಯಾಗಿಬಿಟ್ಟ. ಓ ಈಶ್ವರಾ ನಿನ್ನ ಕರುಣಾ ಲೀಲೆಗಳಿಗೆ ನಮೋಃ ನಮಃ ಎನ್ನುತ್ತಾ ಮುಂದಕ್ಕೆ ಸಾಗತೊಡಗಿದೆ. ಆದರೂ ಹೆಜ್ಜೆ ಹೆಜ್ಜೆಗೂ ಆಯಾಸವಾಗತೊಡಗಿತು. ಹವಾಮಾನವೂ ತನ್ನ ವೈಪರೀತ್ಯತೆಗಳಿಂದ ಕೂಡಿತ್ತು. ಒಮ್ಮೆ ಹಿಮ ಬೀಳ ತೊಡಗಿದರೆ, ಮತ್ತೊಮ್ಮೆ ಬಿಸಿಲು ಕಾಣಿಸುತ್ತಿತ್ತು. ಮಗದೊಮ್ಮೆ ತಣ್ಣಗೆ ಕೊರೆಯುವ ಕುಳಿರ್ಗಾಳಿ ಭರ್ರೆಂದು ಬೀಸುತ್ತಾ ದೇಹವನ್ನು ನಡುಗಿಸುತ್ತಿತ್ತು. ನಮಗೆ ಈ ಮುಂಚೆಯೇ ಬಾಯಿ, ಮೂಗುಗಳು ಮುಚ್ಚುವಂತೆ ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದರು. ಕಣ್ಣಿಗೆ ತಂಪು ಕನ್ನಡಕ ಧರಿಸಲು ಹೇಳಿದ್ದರು.
ಮಾಸ್ಕ ಹಾಕಿದರೆ, ಉಸಿರಾಡಲು ತೊಂದರೆಯಾಗುತ್ತಿತ್ತು, ತೆಗೆದರೆ ಗಾಳಿಯ ರಭಸಕ್ಕೆ ದೇಹದೊಳಗೆ ಛಳಿಗಾಳಿ ತೂರಿದಂತಾಗಿ ದೇಹ ಗದಗುಟ್ಟತೊಡಗುತ್ತಿತ್ತು. ಕನ್ನಡಕದ ಮೇಲೆಲ್ಲಾ ಹಿಮಗಳ ಕಣಗಳು ಕೂರುತ್ತಿದೆಯೆಂದು ತೆಗೆದರೆ, ಸೂರ್ಯನ ಕಿರಣಗಳು ಆಗಮಿಸಿ ಕಣ್ಣುಗಳು ಚುಚ್ಚತೊಡಗುತ್ತಿದ್ದವು. ಕೆಲ ಹೆಜ್ಜೆ ಮುಂದೆ ಸಾಗುವಷ್ಟರಲ್ಲಿಯೇ ಮಂಜು ಜೋರಾಗಿ ಬೀಳ ತೊಡಗಿತು, ಮನದ ಧೈರ್ಯ ಉಡುಗತೊಡಗಿತು. ಉಸಿರಾಟ ಕಷ್ಟವಾಗತೊಡಗಿತು. ದೇಹ ಅಷ್ಟೂ, ಆರೂ ಸೆಟ್ ಬಟ್ಟೆಗಳು ಧರಿಸಿದ್ದಾಗ್ಯೂ ನಡುಗ ತೊಡಗಿತು. ಒಂದೊಂದೇ ಹೆಜ್ಜೆ ಇಡುತ್ತಿದ್ದೆ. ಕೈಯಲ್ಲಿದ್ದ ಕೋಲನ್ನು ಎತ್ತಿ ಮುಂದೆ ಊರಲೂ ಕಷ್ಟವಾಗುತ್ತಿತ್ತು. ಕೋಲು ಹಿಡಿದ ಕೈಗೆ ಶಕ್ತಿ ಇದೆ ಅನ್ನಿಸಿದರೆ, ಮತ್ತೊಂದು ಕೈ ಮರಗಟ್ಟಿದಂತೆ ಆಗುತ್ತಿತ್ತು. ಹತ್ತತ್ತು ಹೆಜ್ಜೆಗಳಿಗೂ ಕೋಲನ್ನು ಎರಡೂ ಕೈಗಳಿಗೆ ಬದಲಾಯಿಸಿಕೊಳ್ಳುತ್ತಾ ನಡೆಯ ತೊಡಗಿದೆ. ಅನತಿ ದೂರದಲ್ಲೊಂದು ಕಟ್ಟಡ ಕಾಣತೊಡಗಿತು.
ಈಶ್ವರಾ ಅದೇ ನಮ್ಮ ಇಂದಿನ ಕ್ಯಾಂಪ್ ಆಗಿರಲಪ್ಪಾ ಎಂದು ಅಂದುಕೊಳ್ಳುವಷ್ಟರಲ್ಲೇ, ಹಿಂದಿನಿಂದ,
,
‘ಓ ಮಾಜಿ, ನೀವು ಇಲ್ಲಿದ್ದೀರಾ, ನಿಲ್ಲಿ ಬಂದೆ’ – ಎಂಬ ಕೂಗು ಕೇಳಿ ಹಿಂದಿರುಗಿ ನೋಡಿದರೆ, ನನ್ನ ಹಿಂದೆ ಇದ್ದ, ನಮ್ಮ ಗುಂಪಿನ ಹಲವಾರು ಸದಸ್ಯರಲ್ಲಿ ಮೂರು ಜನ, ಹಾಗೂ ನಮ್ಮ ಕೇರ್ ಟೇಕರ್ ಶರ್ಪಾ ಬರುತ್ತಿದ್ದರು. ಎರಡು ನಿಮಿಷ ನಿಂತೆ. ದೇಹ ನಡುಗುತ್ತಿತ್ತು. ಅಲ್ಲಿಂದ ಬೇಗ ಬೇಗ ಹತ್ತಿರ ಬಂದ ಶರ್ಪಾ, ಅವರ ಹತ್ತಿರ ಇದ್ದ ಫ್ಲಾಸ್ಕ್ ನಿಂದ ನೀರು ಬಗ್ಗಿಸಿ ಕೊಟ್ಟರು. ಮತ್ತೆ, ಅಮ್ಮಾ, ನೀವು ಬರಲಿಲ್ಲ ಅಂದುಕೊಂಡಿದ್ದೆ, ಬಂದೇ ಬಿಟ್ಟಿದ್ದೀರಿ, ಇದೇ ಇಂದು ನಾವು ತಲುಪಬೇಕಾದ ‘ಧೀರಾಪುಕ್’ ಎನ್ನುವ ತಾಣ. ಅದೋ ಅಲ್ಲಿ ಕಾಣುತ್ತಿದೆಯಲ್ಲ ಅದೇ ನಮ್ಮ ಇಂದಿನ ತಂಗುದಾಣ, ಅಭಿನಂದನೆಗಳು, ನೀವು ಒಂದು ದಿನದ ಪರಿಕ್ರಮ ಮುಗಿಸಿದ್ದೀರಿ – ಎಂದಾಗ ಮನಸ್ಸು ಸಂತೋಷದಿಂದ ಗರಿಗೆದರಿದಂತಾದರೂ ದೇಹ ತತ್ತರಿಸತೊಡಗಿತು. ಅಲ್ಲೇ ಹಲವಾರು ಮಾರು ದೂರ ಇರುವ ಕ್ಯಾಂಪ್ ತಲುಪಲೂ ನಡೆಯಲು ಕಷ್ಟ ಅನ್ನಿಸತೊಡಗಿತು. ಭುಜದ ಮೇಲೆ ಒಂದು ಕೈ ಹಾಕಿ, ಇನ್ನೊಂದು ಕೈನಿಂದ, ಕೈ ಹಿಡಿದು ನಡೆಸುತ್ತಾ ಕರೆದೊಯ್ದರು.
ಈ ಪ್ರವಾಸಕಥನದ ಹಿಂದಿನ ಕಂತು ಇಲ್ಲಿದೆ : https://surahonne.com/?p=34291
(ಮುಂದುವರಿಯುವುದು)
-ಪದ್ಮಾ ಆನಂದ್
ಪ್ರವಾಸದ ಪ್ರಯಾಸದ ಅನುಭವ ನೋಡಲೇಬೇಕೆಂಬ ಛಲ ದಾರಿ ಯಲ್ಲಿ ನೆರವಾದವರೆಲ್ಲಾ ದೇವನೇ ಕಳಿಸಿದ್ದಾನೆ ಎಂಬನಂಬಿಕೆ ವಿಶ್ವಾಸ..
ಎಲ್ಲಾ.. ಆಪ್ತವಾಗಿ ಮೂಡಿ ಬಂದು ಮುಂದಿನ ಕಾಂತಿಗೆ ಕಾಯುವಂತೆ ಮಾಡಿದೆ.. ಅದಕ್ಕೆ ಪೂರಕವಾಗಿ ಚಿತ್ರಗಳು ಚೆನ್ನಾಗಿ ಮೂಡಿ ಬಂದಿವೆ… ಧನ್ಯವಾದಗಳು ಗೆಳತಿ ಪದ್ಮಾ
ತಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು
ಚೆನ್ನಾಗಿದೆ
ಧನ್ಯವಾದಗಳು
ಹೆಜ್ಜೆ ಹೆಜ್ಜೆಗೂ ದೇವದೂತರ ದರ್ಶನ….ಪ್ರಕೃತಿಯ ಏರುಪೇರುಗಳ ನಡುವೆಯೂ ಧೃತಿಗೆಡದೆ ಮುನ್ನಡೆದ ತಮ್ಮ ಮಾನಸಿಕ ಸ್ಥೈರ್ಯ…ಬಹಳ ಸಂತೋಷವಾಯ್ತು ಮೇಡಂ, ತಮ್ಮ ಲೇಖನ ಓದಿ. ತಮ್ಮೊಡನೆ ಹೆಜ್ಜೆ ಹಾಕುತ್ತಾ ನಾನೂ ಆಯಾಸಗೊಂಡೆ ನೋಡಿ!!
ತಮ್ಮ ನಲ್ನುಡಿಗಳಿಗಾಗಿ ವಂದನೆಗಳು. ಮುಂದಿನ ಕಂತಿನ ಹೊತ್ತಿಗೆ ಆಯಾಸ ಪರಿಹರಿಸಿಕೊಂಡು ಬಿಡಿ
ನಮಸ್ಕಾರ. ನೀವು ಪುಣ್ಯವಂತರು.