ಮಣಿಪಾಲದ ಮಧುರ ನೆನಪುಗಳು..ಭಾಗ 10
ಕಮಲ ಮಹಲ್
ಹಾಗೆಯೇ ಮುಂದಕ್ಕೆ ನಡೆದಾಗ ಎಡಪಕ್ಕದಲ್ಲಿದೆ, ಪೇಶಾವಾಡ ರಜಪೂತರ ಸುಂದರ ವಿಶಾಲವಾದ ಮನೆ. ನೋಡಲು ಕೆಂಪುಕಲ್ಲಿನ ಕಟ್ಟಡದಂತೆಯೇ ತೋರುತ್ತಿದ್ದರೂ ಅದು ಪೂರ್ತಿ ಮರದ ಮನೆಯಾಗಿದೆ. ಅದರ ಹೊರಗಿನ ಜಗಲಿಗೆ ಅಳವಡಿಸಿದ ಜಗಲಿಯ ಬದಿಗೆ ತಡೆಯಾಗಿರುವ ಕುಸುರು ಕೆತ್ತನೆಯ ಗ್ರಿಲ್ ನೋಡಲು ಕಬ್ಬಿಣದಂತಿದೆ. ಅದರೆ ನಿಜವಾಗಿಯೂ ಅದು ಮರದ್ದಾಗಿರುವುದನ್ನು ನಂಬುವಂತೆಯೇ ಇಲ್ಲ.. ಅಷ್ಟು ಅದ್ಭುತವಾಗಿದೆ ಅದರ ಅತ್ಯಂತ ಸುಂದರ ಕೆತ್ತನೆ! ಆ ಮನೆಯ ದುರಸ್ತಿ ಕೆಲಸ ನಡೆಯುತ್ತಿದ್ದುದರಿಂದ ಅದರ ಒಳಗಡೆಗೆ ಪ್ರವೇಶವಿರಲಿಲ್ಲ.
ಮುಂದಕ್ಕೆ ಸಾಗುತ್ತಿದ್ದಂತೆ, ಹಿಂದಿನ ಕಾಲದಲ್ಲಿ ಪ್ರಯಾಣ ಹಾಗೂ ಸರಕು ಸಾಗಾಣಿಕೆಗೆ ಉಪಯೋಗಿಸುತ್ತಿದ್ದ ಚಂದದ ಕುದುರೆಗಾಡಿ(ಸಾರೋಟು) ಕಂಡುಬಂತು. ಅಲ್ಲೇ ಪಕ್ಕದಲ್ಲಿ ಛಾವಣಿ ಮೇಲ್ಗಡೆ ದೊಡ್ಡ ತೊಟ್ಟಿಲಿನಂತಹದೊಂದು ತೂಗಾಡುತ್ತಿತ್ತು. ನಮ್ಮ ಮಾರ್ಗದರ್ಶಕಿಯು ನಮ್ಮೊಡನೆ “ಅದೇನೆಂದು ಹೇಳಿ ನೋಡೋಣ?” ಎಂದಾಗ ಎಲ್ಲರೂ ದೊಡ್ಡ ತೊಟ್ಟಿಲು ಎಂದೇ ಹೇಳಿದೆವು. ಆದರೆ ಅವರು ನಸು ನಗುತ್ತಾ, “ಹೌದು, ಆದರೆ ಬಂದಾಗ ಮಲಗುವ ತೊಟ್ಟಿಲಲ್ಲ… ಹೋಗುವಾಗ ಮಲಗುವಂತಹುದು” ಎಂದಾಗ ಎಲ್ಲರ ತಲೆ ಒಳಗೆ ಒಮ್ಮೆಲೇ ಬೆಳಕು ಮೂಡಿತು! ಅದ್ಭುತ ಕಲಾನೈಪುಣ್ಯತೆಯಿಂದ ಅದ್ಭುತ ಕಲಾನೈಪುಣ್ಯತೆಯಿಂದ ತಯಾರಿಸಲಾದ ಮುಸ್ಲಿಂ ಸಮುದಾಯದವರ ಶವ ಪೆಟ್ಟಿಗೆಯಾಗಿತ್ತದು! ಅಲ್ಲೇ ನೆಲದ ಬಳಿ , ಬರಹಗಳನ್ನು ಕೆತ್ತಲಾದ ಚಂದದ ಚಪ್ಪಟೆ ಕಲ್ಲೊಂದನ್ನು ನಿಲ್ಲಿಸಿದ್ದರು. ಆದರೆ ಆಶ್ಚರ್ಯಕರ ರೀತಿಯಲ್ಲಿ ಅದರಲ್ಲೊಂದು ವೃತ್ತಾಕಾರದ ರಂಧ್ರವಿರುವುದು ಕಂಡುಬಂತು. ಅದರ ಬಗ್ಗೆ ಕೇಳಿದಾಗ ತಿಳಿಯಿತು.. ಅದೊಂದು ವೀರಗಲ್ಲು ಆಗಿತ್ತು. ಸಾಮಾನ್ಯ ಜನರಿಗೆ ಅದರ ಬಗ್ಗೆ ತಿಳುವಳಿಕೆ ಇಲ್ಲದುದರಿಂದ ಅದನ್ನು ಶೌಚಾಲಯದ ಬಳಕೆಗೆ ಸಿದ್ಧಗೊಳಿಸಿದ್ದರು! ಪುಣ್ಯವಶಾತ್ ಶೆಣೈಯವರ ಗಮನಕ್ಕೆ ಬಂದುದರಿಂದ ಅದು ಇಲ್ಲಿ ಸುರಕ್ಷಿತವಾಗಿದೆ. ಮುಂದಕ್ಕೆ, ನಮ್ಮ ಮುಂದಿತ್ತು ಕಮಲ ಮಹಲ್.
ಸುಮಾರು 680ವರ್ಷಗಳ ಹಿಂದೆ, ಕೊಪ್ಪಳ ಜಿಲ್ಲೆಯ ಕೋಕನೂರು ಎಂಬಲ್ಲಿ ವಿಜಯನಗರ ಸಾಮ್ರಾಜ್ಯದ ರಾಜನಾಗಿದ್ದ ಒಂದನೇ ಹರಿಹರನಿಂದ ಸುಮಾರು 1341ನೇ ಇಸವಿಯಲ್ಲಿ ಕಟ್ಟಲ್ಪಟ್ಟಿತ್ತು, ಈ ಕಮಲ ಮಹಲ್. ಜೀರ್ಣಾವಸ್ಥೆಯಲ್ಲಿದ್ದ ಈ ಅತ್ಯಪೂರ್ವ ಮಹಲ್, ಶೆಣೈಯವರ ಸಮರ್ಥ ನೇತ್ರತ್ವದಲ್ಲಿ ಹೆರಿಟೇಜ್ ವಿಲೇಜ್ ನಲ್ಲಿ ಯಥಾಪ್ರಕಾರ ಸ್ಥಾಪಿಸಲಾಗಿದೆ. ಈ ಕಮಲ ಮಹಲ್ ಒಳಗಡೆಗೆ ಎದುರು ಭಾಗವು ಅರಸರ ಅಥವಾ ಸೈನ್ಯದ ಸೇನಾಧಿಕಾರಿಯ (Army commander in chief) ದರ್ಬಾರ್ ಹಾಲ್ ಆಗಿ ಉಪಯೋಗಿಸಲ್ಪಟ್ಟರೆ; ಹಿಂದುಗಡೆಯ ಭಾಗ ಅರಸರ ವಿಶ್ರಾಂತಿ ಕೋಣೆಯಾಗಿ ಉಪಯೋಗಿಸಲ್ಪಡುತ್ತಿತ್ತು. ಒಳಗಡೆಗೆ ಹೋಗುತ್ತಿದ್ದಂತೆಯೇ ಅದ್ಭುತ ಕಲಾ ಜಗತ್ತೇ ಕಣ್ಮುಂದೆ ತೆರೆದಂತೆನಿಸಿತು.
ಅಲ್ಲಿ ಎರಡು ಹಂತದ ಜಗುಲಿಗಳಿದ್ದು, ಮೇಲಿನ ಜಗುಲಿ ವಿಸ್ತಾರವಾಗಿದೆ. ಅದರ ಮೇಲ್ಭಾಗದಲ್ಲಿದೆ ತಾವರೆಯಾಕಾರದ ಮರದ ಕೆತ್ತನೆಯ ಕಲಾವೈಭವ! ಅಲ್ಲಿ ಮೇಲಧಿಕಾರಿಗಳಿಗಾಗಿ ಆಸನಗಳಿದ್ದರೆ, ಕೆಳಗಿನ ಜಗುಲಿಯಲ್ಲಿ ಸೈನಿಕ ವರ್ಗದವರು ಅವರವರ ಸ್ಥಾನಕ್ಕೆ ತಕ್ಕಂತೆ ನಿಲ್ಲಬೇಕಿತ್ತು. ಒಂದನೇ ಹರಿಹರರ ಕಾಲದ ವಿಜಯನಗರದ ಅರಸರು, ಸಂಗೀತ, ಸಾಹಿತ್ಯ, ಚಿತ್ರಗಳಂತಹ ಎಲ್ಲಾ ತರಹದ ಕಲಾಪ್ರಕಾರಗಳನ್ನು ಪ್ರೋತ್ಸಾಹಿಸುತ್ತಿದ್ದರು. ಅಂತಹದೇ ಶೈಲಿಯ ವಿವಿಧ ತರಹದ ಚಿತ್ರಗಳನ್ನು ಯುವ ಕಲಾವಿದರಿಂದ ಶೆಣೈಯವರು ಮಾಡಿಸಲು ಪ್ರಯತ್ನಿಸಿ, ಅಲ್ಲಿಯ ಗೋಡೆಯ ತುಂಬಾ ಹಾಕಿಸಿರುವರು. ಕಲಂಕಾರಿ, ತಂಜಾವೂರು, ಗಂಜೀಫಾ, ದೇವರ ಮೂರ್ತಿ ಹಿಂದುಗಡೆ ಇರಿಸುವಂತಹ ವಿಶೇಷ ಚಿತ್ರಗಳು, ತಂಜಾವೂರಿನ ಚಿನ್ನದ ರೇಕಿಗಳನ್ನು ಉಪಯೋಗಿಸಿ ಮಾಡಿದ ಚಿತ್ರಕಲೆಗಳು ವಿಶೇಷ ರೀತಿಯಲ್ಲಿ ನಮ್ಮ ಕಣ್ಮನ ಸೆಳೆಯುತ್ತವೆ.
ಇನ್ನು, ಇಲ್ಲಿನ ಕಮಲದಾಕಾರದ, ಮರದಲ್ಲಿ ತಯಾರಿಸಿದ ನೈಜ ಪುಷ್ಪದಂತೆ ಅರಳಿ ನಿಂತ ಸಹಸ್ರಾರು ಮರದ ಕಮಲದ ಹೂಗಳ ಕಲಾಕೃತಿಗಳಿಂದ ಅತ್ಯಂತ ವಿಶೇಷ ರೀತಿಯಲ್ಲಿ, ಅತ್ಯದ್ಭುತವಾಗಿ ಕಟ್ಟಲ್ಪಟ್ಟ ಮರದ ಕಮಲ ಮಹಲ್ ಅಂತೂ ಹೆಸರಿಗೆ ತಕ್ಕಂತೆ ಅದರ ಕಣ್ಮನ ಸೆಳೆಯುವ ಕೆತ್ತನೆ ಹಾಗೂ ಜೋಡಣೆಯಿಂದ ನಮ್ಮ ಮೈಮರೆಸುವುದಂತೂ ನಿಜ! ಸುತ್ತಲೂ ಇರುವ ಹನ್ನೆರಡು ನುಣುಪಾದ ಕಂಬಗಳು ಮಿರಿ ಮಿರಿ ಮಿಂಚುತ್ತಿದ್ದರೆ, ಅದರ ತುಂಬಾ ಅರಳಿ ನಿಂತ ಕಮಲದ ಕೆತ್ತನೆ ಹೂಗಳು ಪೂಜೆಗೆ ಸಿದ್ಧವಾಗಿವೆಯೇನೋ ಎಂದೆನಿಸುತ್ತವೆ. ಕಂಬಗಳ ಜೋಡಣಾ ರೀತಿಯೋ ಅತ್ಯದ್ಭುತ! ಮೂರು ಆಯಾಮಗಳ ಈ ಕಂಬಗಳಲ್ಲಿ ಒಂದರ ಮೇಲೊಂದರಂತೆ ಹತ್ತು ಮೇಲ್ಜೋಡಣೆಗಳಿದ್ದು, ಅವುಗಳೆಲ್ಲಾ ಬರೇ ಒಂದೇ ಒಂದು ಮೊಳೆಯ ಆಧಾರದಲ್ಲಿ ಬಂಧಿಸಲ್ಪಟ್ಟಿವೆ. ಆ ಒಂದು ಮೊಳೆ ಕಳಚಿದರೆ, ಆ ಕಂಬದ ಮೇಲ್ಭಾಗದಲ್ಲಿ, ಮರದಲ್ಲಿಯೇ ಒಂದಕ್ಕೊಂದು ಅಚ್ಚಿನಂತೆ ಸೇರಿಸಿ ಮಾಡಿದ ಇಡೀ ಜೋಡಣೆಯನ್ನೇ ಕಳಚಿ ಪುನಃ ಜೋಡಿಸಬಹುದಾದ ಅದ್ಭುತವಾದ ವ್ಯವಸ್ಥೆ ನಮ್ಮನ್ನು ನಿಬ್ಬೆರಗಾಗಿಸುವುದಂತೂ ಸತ್ಯ! ಸುಪ್ರಸಿದ್ಧ ಚಿತ್ರ ಕಲಾವಿದ ಜಗದೀಶ್ ಕಾಂಬ್ಲೆಯವರ ಸುಡುಪುರ್ ಖ್ಯಾತಿಯ ಕಲಾಕೃತಿಗಳನ್ನು ಆ ಕೋಣೆಯ ಸುತ್ತಲಿನ ಗೋಡೆಗಳಲ್ಲಿ ಪೂರ್ತಿ ಹಾಕಲಾಗಿದ್ದುವು… ನಮ್ಮ ಕಣ್ಮನಗಳು ತುಂಬಿದ್ದುವು…
ದಖನಿ ನವಾಬ್ ಮಹಲ್
ಕಣ್ಣು ಕೀಲಿಸದೆ ಕಣ್ತುಂಬಿಕೊಂಡ ಕಮಲ ಮಹಲ್ ಬಿಟ್ಟು ಬರಲಾರದೆ..ಮುಂದಕ್ಕೆ ಹೆಜ್ಜೆ ಹಾಕಿದೆವು. ಅರೇ..ಪಕ್ಕದಲ್ಲಿಯೇ ಇದೆ ನೋಡಿ ಮುಸ್ಲಿಂ ಶೈಲಿಯ ಸುಂದರವಾದ ಕಟ್ಟಡ… ದಖನಿ ನವಾಬ್ ಮಹಲ್. ಹುಮ್ನಾಬಾದ್ ನಿಂದ 60 ಕಿ.ಮೀ ದೂರದಲ್ಲಿರುವ ಒಂದು ಪುಟ್ಟ ಹಳ್ಳಿಯಲ್ಲಿದ್ದ ಈ ಭವ್ಯ ಮಹಲನ್ನು ಹಿಂದಿನ ನವಾಬರ ವಂಶಸ್ಥರಾದ ಅದಿಲ್ ಶಾ,ಬದಿಲ್ ಶಾ ನೋಡಿಕೊಳ್ಳುತ್ತಿದ್ದರು.19ನೆಯ ಶತಮಾನದಲ್ಲಿ; ಅಂದರೆ, ಸುಮಾರು 140ವರ್ಷಗಳಷ್ಟು ಹಳೆಯದಾದ ಈ ಮಹಲನ್ನು, ವಿಜಯನಗರ ಸಾಮ್ರಾಜ್ಯದ ಅರಸರನ್ನು ಸೋಲಿಸಿ, ಅಲ್ಲಿಂದ ಕೊಳ್ಳೆ ಹೊಡೆದು ತಂದ ಸಂಪತ್ತಿನಿಂದ ಕಟ್ಟಲಾಯಿತೆನ್ನುವರು. ಅದನ್ನು ನೋಡಿಕೊಳ್ಳುತ್ತಿದ್ದ ನವಾಬ ವಂಶಸ್ಥರ ಸಮ್ಮತಿ ಮೇರೆಗೆ, ಈ ನವಾಬ್ ಮಹಲ್ ನ್ನು,1998ರಲ್ಲಿ ಇಲ್ಲಿಗೆ ತಂದು ಪುನರ್ನಿರ್ಮಾಣ ಮಾಡಲಾಯಿತು.
ಇಟಾಲಿಯನ್ ಅಮೃತಶಿಲೆಯಿಂದ ತಯಾರಿಸಲಾದ ಕಾರಂಜಿಯನ್ನು ಹೊಂದಿರುವ ಹುಲ್ಲುಹಾಸಿನ ಅಂಗಳದೆದುರು ಶೋಭಿಸುತ್ತದೆ ನವಾಬ್ ಮಹಲ್. ಕಾರಂಜಿಯು ನೀರು ಚಿಮ್ಮುವ ಸಮಯದಲ್ಲಿ ನೋಡಲು ಚೆನ್ನ..ಆದರೆ ಅಲ್ಲಿ ಚಿಮ್ಮುವ ನೀರು ಇಲ್ಲದುದರಿಂದ ನಮಗೆ ಆ ಭಾಗ್ಯ ಒದಗಲಿಲ್ಲ. ಮಹಲ್ ನ ಒಳಗಡಿಯಿಟ್ಟರೆ ಅಂದಿನವರ ಅದ್ಧೂರಿ ಜೀವನ ಶೈಲಿಯ ದರ್ಶನವಾಗುತ್ತದೆ. ನೆಲವು ಜರ್ಮನಿಯಿಂದ ತಂದ ಅಮೂಲ್ಯ ಟೈಲ್ಸ್ ಗಳಿಂದ ಅಲಂಕೃತವಾಗಿದ್ದರೆ, ಮೇಲ್ಗಡೆ ಇರುವ ಬಣ್ಣಬಣ್ಣದ ಗಾಜುಗಳ ದುಂಡಾಕಾರದ ಛಾವಣಿಯು ನಮ್ಮನ್ನು ಅದ್ಭುತ ಲೋಕಕ್ಕೆ ಒಯ್ಯುತ್ತದೆ. ಈ ವಿಶಾಲವಾದ ಸಭಾಂಗಣದಲ್ಲಿ ವಿವಿಧ ಹಂತಗಳಿವೆ. ಅದರಲ್ಲಿ ಎದುರುಗಡೆಗೇ ಸ್ವಲ್ಪ ಎತ್ತರದಲ್ಲಿದೆ ಅಲಂಕೃತಗೊಂಡು ಸಜ್ಜಾಗಿರುವ ಸಿಂಹಾಸನಯುಕ್ತ ವೇದಿಕೆ.. ನವಾಬರಿಗೋಸ್ಕರ. ಸಿಂಹಾಸನದ ಎರಡೂ ಪಕ್ಕಗಳಲ್ಲಿ ಅವರಿಗೆ ತಂಪಾದ ಗಾಳಿ ಬೀಸಲು ಸಿದ್ಧವಾಗಿರುವ ಎರಡು ಪಂಕಪುಲ್ಲಗಳು.. ಎಂದರೆ ದೊಡ್ಡದಾದ ಚಾಮರಗಳನ್ನು ಹಗ್ಗದಿಂದ ಬಿಗಿದು ಕಟ್ಟಲಾಗಿದೆ. ವಿಚಿತ್ರವೆಂದರೆ, ಅವುಗಳನ್ನು ಬೀಸಲು, ಕಿವುಡ ಮತ್ತು ಮೂಕ ಸೇವಕರನ್ನೇ ಇರಿಸಿಕೊಳ್ಳುತ್ತಿದ್ದರಂತೆ, ನವಾಬರು ಚರ್ಚಿಸಿದ ರಹಸ್ಯ ವಿಷಯಗಳು ಹೊರಗಡೆಗೆ ತಿಳಿಯಬಾರದೆಂದು! ಅಲ್ಲಿರುವ ವೃತ್ತಾಕಾರದ ಕಂಬಗಳು, ಅವುಗಳಿಗೆ ಜೋಡಿಸಿದ ಕಮಾನುಗಳು ಗಮನ ಸೆಳೆಯುತ್ತವೆ. ಇಲ್ಲಿರುವ ಒಂದೊಂದು ಪೀಠೋಪಕರಣವೂ ಒಂದೊಂದು ಬಗೆಯದು. ನೆಲದ ಹಾಸಿನಲ್ಲಿ ಹೂವಿನ ಚಿತ್ತಾರ, ಗೋಡೆಯಲ್ಲಿ ಬಣ್ಣದ ವಿನ್ಯಾಸ, ಬೆಲ್ಜಿಯಂ ಗ್ಲಾಸಿನ ಕಿಟಿಕಿ, ಆಸ್ಟ್ರೇಲಿಯಾದ ವೈಭವೋಪೇತ ಬಣ್ಣದ ಗಾಜಿನ ಗೊಂಚಲುಗಳು ಮತ್ತು ಮೇಲಿನ ಗ್ಯಾಲರಿಯನ್ನು ಮುಚ್ಚಲು ಕಡು ಕೆಂಪು ಬಣ್ಣದ ರೇಷ್ಮೆ ವಸ್ತ್ರದ ಪರದೆ.. ಇವೆಲ್ಲವೂ ಅಂದಿನವರ ವಿಲಾಸಿ ಜೀವನ ಶೈಲಿಯ ದಿನಗಳನ್ನು ನೆನಪಿಸುತ್ತವೆ.
ಹಳೆಯದಾದ ಭಾರತೀಯ ತಂತಿ ವಾದ್ಯಗಳನ್ನು ವೀಕ್ಷಣೆಗಾಗಿ ಇರಿಸಿದ್ದರೂ, ಅದರ ತಂತಿಗಳು ಹಾಳಾಗಬಾರದೆಂದು ವಾದ್ಯದ ಒಳಗಡೆಗೆ ಮಡಚಿ ಇರಿಸಲಾಗಿದೆ. ಒಂದೆಡೆಯಲ್ಲಿ ವಿದೇಶಿ ಮದ್ಯದ ಹಾಗೂ ಸುಗಂಧ ದ್ರವ್ಯಗಳ, ವಿಶಿಷ್ಟ ವಿನ್ಯಾಸದ ಖಾಲಿ ಜಾಡಿಗಳನ್ನು, ಹಾಗೆಯೇ, ಹಜಾರದ ಗೋಡೆಯಲ್ಲಿನ ಗಾಜಿನ ಕಪಾಟುಗಳಲ್ಲಿ ಅತ್ಯಂತ ಬೆಲೆಬಾಳುವ ಮದ್ಯದ ಆಕರ್ಷಕ ಖಾಲಿ ಬಾಟಲಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ. ಇನ್ನೊಂದೆಡೆಯಲ್ಲಿ ಧೂಮಪಾನಿಗಳಿಗಾಗಿ ಕಲಾತ್ಮಕವಾದ ಹುಕ್ಕವಿದೆ. ಕಾಲಕ್ಷೇಪ ಮಾಡಲು ಚದುರಂಗ ಆಟದ ಮಣೆ, ಗಂಜೀಫಾ ಇಸ್ಪೀಟು ಎಲೆಗಳಿವೆ. ವಿಶೇಷವೆಂದರೆ, ಯುದ್ಧೋಪಾಯಗಳನ್ನು ಚರ್ಚಿಸಿ, ಅದಕ್ಕೆ ತಕ್ಕಂತೆ ನಡೆಗಳನ್ನು ಸಿದ್ದಪಡಿಸಲು ಚಿಕ್ಕಂದಿನಿಂಲೇ ಅವರಿಗೆ ಈ ಚದುರಂಗದಾಟದ ಮೂಲಕ ತರಬೇತಿಯನ್ನು ನೀಡಲಾಗುತ್ತಿತ್ತು ಎಂದು ತಿಳಿಯಿತು. ಸಂಗೀತದ ರಸದೌತಣಕ್ಕೆ ಫೋನೋಗ್ರಾಫ್ ತಯಾರಾಗಿ ಕುಳಿತಂತಿದೆ. ಉಪ್ಪರಿಗೆಯು ಮಹಿಳೆಯರಿಗಾಗಿ ಮೀಸಲಾಗಿರುವ ಜನಾನವಾಗಿತ್ತು. ಅಂತೂ ನವಾಬರ ಈ ಅಭೂತಪೂರ್ವ ಅರಮನೆಯ ದರ್ಶನವು; ಆ ವೈಭವವನ್ನು ನೋಡುವಾಗ ಮನಸ್ಸಿಗೆ ಖುಷಿ ಎನಿಸಿದರೂ, ನಮ್ಮಲ್ಲಿಂದಲೇ ಕೊಳ್ಳೆಹೊಡೆದ ಐಶ್ವರ್ಯದಿಂದ ಪಡೆದ ವೈಭವವೆಂಬುದು ಖೇದಕರ. ಮನಸ್ಸಿಗೆ ನೋವನ್ನುಂಟುಮಾಡುವ ಕಟು ಸತ್ಯ!
ಮುಂದುವರಿಯುವುದು……
ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=33934
-ಶಂಕರಿ ಶರ್ಮ, ಪುತ್ತೂರು.
ಮಣಿಪಾಲದ ಮಧುರ ನೆನಪುಗಳ ಲೇಖನ ಬಹಳ ಆಪ್ತವಾಗಿ ಬರೆದಿದ್ದೀರಿ ಚಿತ್ರಗಳ ಮೂಲಕ ಹಾಜರುಪಡಿಸಿ ರುವುದರಿಂದ ಬಹಳ ಮುದ ತಂದಿತು ಧನ್ಯವಾದಗಳು ಮೇಡಂ
ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ನಾಗರತ್ನ ಮೇಡಂ ಅವರಿಗೆ.
ಬಹಳ ಸವಿಯಾಗಿದೆ ಮಧುರ ನೆನಪುಗಳು
ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.
ನಿಮ್ಮ ಬರಹವನ್ನು ಓದುತ್ತಿದ್ದರೆ ವಿಜಯನಾಥ ಶೆಣೈ ಯವರ ಅಸಾಧಾರಣ ವಾದ ಕಾಯ೯ವನ್ನು ನೆನೆದು ಮತ್ತೆ ಮತ್ತೆ ಮನಸ್ಸು ತುಂಬಿ ಬರುತ್ತದೆ.
ಪ್ರೀತಿಯ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು.. ಮಹೇಶ್ವರಿ ಮೇಡಂ.
ಮಣಿಪಾಲದ ಮಧುರ, ಆಪ್ತ ಚಿತ್ರ!
ಲೇಖನದಲ್ಲಿ, ಕಲಾನೈಪುಣ್ಯದ ವಿಸ್ತೃತ ವಿವರಣೆಯೊಂದಿಗೆ ಚಾರಿತ್ರಿಕ ವಿವರಗಳನ್ನೂ ನೀಡಿರುವುದು ಮನಸ್ಸಿನ ಮೇಲೆ ಹೆಚ್ಚು ಪ್ರಭಾವವನ್ನು ಬೀರಿದೆ.