ಮಣಿಪಾಲದ ಸುಂದರ ನೆನಪುಗಳು-ಭಾಗ 1
ತುಂಬಾ ದಿನಗಳಿಂದ, ಮಣಿಪಾಲದಲ್ಲಿರುವ ನಮ್ಮ ಕುಟುಂಬ ಸ್ನೇಹಿತರ ಮನೆಗೆ ಹೋಗಲು ಮನಸ್ಸು ಮಾಡಿದ್ದರೂ, ದಿನ ಮುಂದೋಡುತ್ತಲೇ ಇತ್ತು. ಅಷ್ಟು ದೂರ ಹೋದ ಮೇಲೆ ಅಲ್ಲಿಯೇ ಅಕ್ಕ ಪಕ್ಕದಲ್ಲಿರುವ ಯಾವುದಾದರೂ ವಿಶೇಷ ಸ್ಥಳವನ್ನೂ ಕಾಣುವ ಅವಕಾಶವಿದ್ದರೆ ಚೆನ್ನಾಗಿತ್ತೆಂಬ ಅನಿಸಿಕೆ ನಮ್ಮದಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ತರಂಗ ವಾರಪತ್ರಿಕೆಯಲ್ಲಿ ಬಂದ ಒಂದು ಲೇಖನ ಗಮನ ಸೆಳೆಯಿತು… ಮಣಿಪಾಲದಲ್ಲಿರುವ, ಹೆರಿಟೇಜ್ ವಿಲೇಜ್.. ಗ್ರಾಮ ಸಂಸ್ಕೃತಿಯ ವಿಶ್ವದರ್ಶನ ಬಗ್ಗೆ ವಿವರವಾದ ಲೇಖನವಾಗಿತ್ತದು. ಹದಿನೈದು ವರ್ಷಗಳ ಹಿಂದೆಯೇ ಅದರ ಬಗೆಗೆ ಅಲ್ಪಸ್ವಲ್ಪ ತಿಳಿದಿತ್ತಾದರೂ ಹೋಗಲು ಅವಕಾಶವಾಗಿರಲಿಲ್ಲ. ಈ ಅವಕಾಶವನ್ನು ಬಿಡಬಾರದೆಂದು, ಬೆಂಗಳೂರಿನಲ್ಲಿರುವ ಮಗ ಮನೆಗೆ ಬರುವ ಸಮಯಕ್ಕೆ ಸರಿಯಾಗಿ ಒಂದು ಆದಿತ್ಯವಾರವನ್ನುಅಲ್ಲಿಗೆ ಹೋಗಲು ನಿಗದಿಪಡಿಸಲಾಯಿತು. ಅಂತರ್ಜಾಲದ ಮೂಲಕ ಅದು ತೆರೆಯುವ ಸಮಯ, ಟಿಕೆಟ್ ದರ ಎಲ್ಲವನ್ನೂ ತಿಳಿದುಕೊಂಡೆವು.
ಅಂತೆಯೇ, ಮಾರ್ಚ್ 8ನೇ ತಾರೀಕು ಆದಿತ್ಯವಾರದಂದು ಮೊದಲೇ ನಿಗದಿಪಡಿಸಿದಂತೆ ಹೊರಡುವ ತಯಾರಿ ನಡೆಯಿತು. ಪುತ್ತೂರಿನಿಂದ ಮಣಿಪಾಲಕ್ಕೆ ಸ್ವಂತ ವಾಹನದಲ್ಲಿ ಪಯಣಿಸಲು, ಸುಮಾರು ಎರಡೂವರೆ ತಾಸು ಸಾಕಾಗಬಹುದಾದರೂ ನಾವು ಮೂರು ಮಂದಿ ಬೆಳ್ಳಂಬೆಳಗ್ಗೆ ಆರು ಗಂಟೆಗೇ ಹೊರಟೆವು. ಹತ್ತು ಗಂಟೆಯ ವೀಕ್ಷಣೆಯ ಗುಂಪಿಗೆ ಸೇರುವುದು ನಮ್ಮ ಆಶಯವಾಗಿತ್ತು. ಇಲ್ಲಿ, ವಾರಕ್ಕೊಮ್ಮೆ ಸೋಮವಾರದಂದು ಮಾತ್ರ ರಜೆಯಿದ್ದು ಪ್ರತಿದಿನ ಬೆಳಿಗ್ಗೆ 10ಗಂಟೆ, 11.30 ಮತ್ತು ಮಧ್ಯಾಹ್ನ 2ಗಂಟೆಗೆ ಮತ್ತು ಸಂಜೆ 4ಗಂಟೆಗೆ ಹೀಗೆ ನಾಲ್ಕು ಹಂತಗಳಲ್ಲಿ ವೀಕ್ಷಣೆಗೆ ಅವಕಾಶವಿದೆ. ಜೊತೆಗೆ ವೀಕ್ಷಕರಿಗೆ ವಿವರಣೆ ನೀಡಲು ಓರ್ವ ಮಾರ್ಗದರ್ಶಿಯೂ ಇರುವರು. ಒಂದು ವೀಕ್ಷಣೆಯಲ್ಲಿ ಹೆರಿಟೇಜ್ ವಿಲೇಜ್ ನ ಒಂದು ಪಾರ್ಶ್ವವನ್ನು ಮಾತ್ರವೀಕ್ಷಿಸಬಹುದಾಗಿದೆ. ಪ್ರತೀ ವೀಕ್ಷಣೆಗೆ ರೂ. 300/- ಅದನ್ನೇಮುಂದುವರಿಸಿ ಎರಡನೇ ಪಾರ್ಶ್ವವನ್ನೂ ವೀಕ್ಷಿಸುವುದಾದರೆ ರೂ 500/-, ಅಂದರೆ ರೂ 100/- ರಿಯಾಯಿತಿ. ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಅರ್ಧ ಶುಲ್ಕ. ರಾಷ್ಟೀಯ ಹೆದ್ದಾರಿಯಲ್ಲಿ ಮುಂಜಾನೆಯ ನಮ್ಮ ಪ್ರಯಾಣ ಸುಖಕರವಾಗಿಯೇ ಸಾಗಿತು. ಬೆಳಗ್ಗೆ ಎಂಟು ಗಂಟೆ ಮೊದಲೇ ಕಾಪುವಿಗೆ ತಲಪಿ, ರುಚಿಯಾದ ಮಸಾಲೆದೋಸೆ ಸಹಿತದ ಫಲಾಹಾರವು ‘ವೃಂದಾವನ್ ನೆಸ್ಟ್’ ಎನ್ನುವ ಒಳ್ಳೆಯ ಹೋಟೇಲೊಂದರಲ್ಲಿ ಉದರದೊಳಗಿಳಿಯಿತು. ಅಲ್ಲಿಂದ ಕೇವಲ ಹನ್ನೆರಡು ಕಿ.ಮೀ. ದೂರದಲ್ಲಿದೆ ನಾವು ನೋಡಬೇಕಿದ್ದ ಹೆರಿಟೇಜ್ ವಿಲೇಜ್.
ಮೊದಲ ಹಂತದ ವೀಕ್ಷಣಾ ಸಮಯ ಹತ್ತು ಗಂಟೆಗೆಪ್ರಾರಂಭವಾಗುವುದರಿಂದ, ಇನ್ನೂ ಬೇಕಾದಷ್ಟು ಹೊತ್ತು ನಮ್ಮ ಮುಂದಿತ್ತು. ಆದ್ದರಿಂದ, ಹಳ್ಳಿಯ ಹಸಿರುಸಿರಿಯನ್ನು ವೀಕ್ಷಿಸುತ್ತಾ ಸ್ವಲ್ಪ ಬಳಸು ದಾರಿಯಲ್ಲಿಯೇ ನಮ್ಮ ವಾಹನವು ಸಾಗಿತು. ಆದರೂ, ಒಂದರ್ಧ ಗಂಟೆ ಮೊದಲೇ ನಾವು ಅಲ್ಲಿಗೆ ತಲಪಿದೆವು. ಹೊರಗಿನಿಂದ ನೋಡುವಾಗ, ದೊಡ್ಡ ದೊಡ್ಡ ಹಂಚಿನ ಮನೆಗಳು ಮಾತ್ರ ಕಂಡುಬಂದುದರಿಂದ ಎಲ್ಲೋ ಹಳ್ಳಿಗೆ ಬಂದತೆನಿಸಿತು. ಫೊಟೋಗಳಲ್ಲಿ ಇರುವಂತಹ ಸುಂದರ ಕೆತ್ತನೆಯ ಕಲಾಕೃತಿಗಳನ್ನು ನಿರೀಕ್ಷಿಸಿದ್ದ ನನಗೆ ಸ್ವಲ್ಪ ನಿರಾಸೆಯೂ ಆಯಿತೆನ್ನಬಹುದು. ಟಿಕೆಟ್ ಖರೀದಿಸಿ, ಅಲ್ಲೇ ಸುತ್ತು ಮುತ್ತಲು ಕಣ್ಣಾಡಿಸುತ್ತಾ, ಮನೆಯೊಂದರ ಎದುರು ಭಾಗದ ಕೆಂಪುಸಾರಣೆಯ ಎತ್ತರದ ಜಗಲಿಯಲ್ಲಿ, ಪಕ್ಕದಲ್ಲಿನ ಹಸಿರು ವೃಕ್ಷಗಳ ಎಡೆಯಿಂದ ಬರುವ ತಂಗಾಳಿಗೆ ಮೈಯೊಡ್ಡಿ ಹತ್ತು ಗಂಟೆಯಾಗಲು ಕಾದು ಕುಳಿತೆವು. ಸಮಯ ಮೀರಿದರೂ ನಾವು ಕುಳಿತಿದ್ದ ಮನೆಯ ಎದುರಿನ ದೊಡ್ಡದಾದ ಬಾಗಿಲು ತೆರೆಯಲಿಲ್ಲ. ಜೊತೆಗೆ, ನಾವು ಮೂರು ಮಂದಿ ಬಿಟ್ಟು ಬೇರೆ ಪ್ರವಾಸಿಗರು ಯಾರೂ ಕಾಣಿಸಲಿಲ್ಲ. ಆದ್ದರಿಂದ, ಹತ್ತು ಗಂಟೆಯ ಸರದಿಯಲ್ಲಿ ನಮಗೆ ನೋಡಲವಕಾಶ ಇದೆಯೋ ಇಲ್ಲವೋ ಎಂಬ ಸಂಶಯ ಬರತೊಡಗಿತು. ಅಷ್ಟರೊಳಗೆ ಮುಂದಿನ ಬಾಗಿಲು ಮೆಲ್ಲನೆ ತೆರೆಯಿತು. ಬಾಗಿಲ ಎಡೆಯಿಂದ ತಲೆ ಮಾತ್ರ ಹೊರಹಾಕಿ, ಒಬ್ಬರು ಮಹಿಳೆ “ಒಳಗಡೆಗೆ ಪೂರ್ತಿ ಸ್ವಚ್ಛತಾ ಕಾರ್ಯವು ನಡೆಯುತ್ತಿದೆ. ಅದು ಮುಗಿದ ತಕ್ಷಣ ನಿಮ್ಮನ್ನು ಒಳಗೆ ಕರೆಯುತ್ತೇವೆ” ಎಂದು ತಿಳಿಸಿದಾಗ ಸ್ವಲ್ಪ ನೆಮ್ಮದಿಯಾಯಿತು. ಹತ್ತು ನಿಮಿಷಗಳ ಬಳಿಕ ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡರು. ಕಾರ್ಕಳದ ಮನೀಷ ನಮ್ಮ ಮಾರ್ಗದರ್ಶಿಯಾಗಿದ್ದರು. ಮೊದಲನೆಯದಾಗಿ, ಗ್ರಾಮ ಸಂಸ್ಕೃತಿಯ ವಿಶ್ವದರ್ಶನ ಮಾಡಿಸುವಂತಹ ಮಣಿಪಾಲದ ಹೆಮ್ಮೆ, ಹೆರಿಟೇಜ್ ವಿಲೇಜ್ ಸಂಸ್ಥಾಪಕರಾದ ವಿಜಯನಾಥ ಶೆಣೈ ಅವರ ಬಗ್ಗೆ ತಿಳಿಸಿದರು.
ಸಿಂಡಿಕೇಟ್ ಬ್ಯಾಂಕಿನಲ್ಲಿ ಸಾದಾ ನೌಕರರಾಗಿದ್ದ ಶೆಣೈಯವರು ತಮ್ಮ ನಿವೃತ್ತಿಯ ಬಳಿಕ, ತಮ್ಮ ಹವ್ಯಾಸವಾದ ಸಂಗೀತ ಮತ್ತು ಚಿತ್ರಕಲೆಗಳ ಸಂಗ್ರಹಕ್ಕಾಗಿ ಊರೂರು ಸುತ್ತುತ್ತಿದ್ದರು. ಹಾಗೆಯೇ, ಹಳ್ಳಿಗಳಲ್ಲಿನ ಜನಜೀವನದ ಬಗ್ಗೆ ತಿಳಿಯುವ ಕುತೂಹಲಿಗಳಾಗಿದ್ದರು. ಕೆಲವು ಕಡೆ ಹಳ್ಳಿಗಳಲ್ಲಿ ಜನರು, ಸಗಣಿ ಸಾರಿಸಿದ ಮಣ್ಣಿನ ನೆಲ ಅಥವಾ ಕೆಂಪು ಕಾವಿ ನೆಲದಲ್ಲಿ ಕುಳಿತು ಬಾಳೆಲೆಯಲ್ಲಿ ಊಟಮಾಡುವುದು ಕಂಡು ಖುಷಿಪಟ್ಟರು. ಹಾಗೆಯೇ ಇನ್ನೊಂದೆಡೆ ಅತಿ ಪುರಾತನ ಕಾಲದ, ದಪ್ಪ ದಪ್ಪಕಂಬಗಳ ದೊಡ್ಡ ಮನೆಯಲ್ಲಿ ಕುರ್ಚಿ ಮೇಜಿನೂಟ ಕಂಡು ಅವರಿಗೆ ಬೇಸರಗೊಂಡರು. ಶೆಣೈಯವರು ಆ ಮನೆಯವರಿಗೆ, ” ಈ ಹಳೆ ಪರಂಪರೆಯ ಕಂಬ ಬಾಗಿಲುಗಳನ್ನು ದಯಮಾಡಿ ಉಳಿಸಿ. ಹಿಂದಿನ ಕಾಲದಲ್ಲಿ ನಿಮ್ಮ ಹಿರಿಯರು ಯಾವ ರೀತಿಯಲ್ಲಿ ಬಾಳಿದರೆಂಬ ತಿಳುವಳಿಕೆ ಮುಂದಿನ ಪೀಳಿಗೆಗೆ ಇರಬೇಕು” ಎಂಬುದಾಗಿ ಬುದ್ಧಿ ಹೇಳಿದರು. ಆದರೆ ಮನೆಯವರು ಸಿಟ್ಟಾಗಿ,” ಇದು ನಮ್ಮ ಸ್ವತ್ತು. ನಾವು ಏನು ಬೇಕಾದ್ರೂ ಮಾಡ್ತೇವೆ..ನೀವ್ಯಾರು ಅದನ್ನು ಕೇಳಲು?” ಎಂದು ಗದರಿದರು. ಇದರಿಂದ ತುಂಬಾ ಬೇಸತ್ತ ಶೆಣೈಯವರು, ಇದನ್ನೆಲ್ಲಾ ತಾವೇ ಉಳಿಸುವ ಪಣ ತೊಡುತ್ತಾರೆ.. ಹಾಗೆಯೇ,1982ರಲ್ಲಿ ಕೆಲಸವನ್ನು ತಾವೇ ಸ್ವತ: ಪ್ರಾರಂಭಿಸುವರು. ಎಲ್ಲಿ ಹೋದರೂ, ಹಳೆಯ ವಸ್ತುಗಳು ಏನು ಸಿಕ್ಕರೂ ತೆಗೆದುಕೊಂಡು ಬಂದು ಸಂಗ್ರಹಿಸಿಡಲು ಪ್ರಾರಂಭಿಸುವರು. ದಿನ ಕಳೆದಂತೆ ಅವರಿದ್ದ ಪುಟ್ಟ ಬಾಡಿಗೆ ಮನೆಯಲ್ಲಿ ಅವರು ತಂದ ವಸ್ತುಗಳನ್ನು ಇರಿಸಲು ಸ್ಥಳವಿಲ್ಲದಂತಾಯಿತು. ಹತ್ತು ವರ್ಷಗಳ ಕಠಿಣ ಪರಿಶ್ರಮದ ಬಳಿಕ ಹಳೆ ಮಾದರಿಯಲ್ಲಿ ರಚಿತವಾದ ಸುಂದರ ‘ಹಸ್ತಶಿಲ್ಪ’ ಮನೆಯು ಶಿಲಾನಗರಿ ಮಣಿಪಾಲದಲ್ಲಿ ಅರಳಿ ನಿಂತಿತು. ಅವರ ಪ್ರತಿಯೊಂದು ಕಾರ್ಯಗಳಿಗೂ ಅವರ ಪತ್ನಿಯ ಬೆಂಬಲ ಸದಾ ಇರುತ್ತಿತ್ತು. ತುಂಬಾ ಸುಂದರವಾದ ಆ ಮನೆಯನ್ನು ನೋಡಲೆಂದೇ ದಿನಾಲೂ 200-300 ಜನ ಬರತೊಡಗಿದರು. ಆ ಮನೆಯು ಹಗಲು ಹೊತ್ತಿನಲ್ಲಿ ವಸ್ತು ಪ್ರದರ್ಶನಾಲಯವಾಗಿಯೂ, ರಾತ್ರಿಯಲ್ಲಿ ಅವರ ಮನೆಯಾಗಿಯೂ ಉಪಯೋಗಿಸಲ್ಪಡುತ್ತಿತ್ತು.
ಆ ಸಮಯದಲ್ಲಿ ಮಣಿಪಾಲವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿತ್ತು. ಆಗಿನ ಜಿಲ್ಲಾಧಿಕಾರಿಗಳು ಒಮ್ಮೆ ಅಲ್ಲಿಗೆ ಭೇಟಿ ನೀಡಿದಾಗ; ಎಲ್ಲವನ್ನೂ ಕಂಡು ಬಹಳ ಸಂತಸಗೊಂಡರು ಮತ್ತು ಶೆಣೈಯವರಲ್ಲಿ ಅವರ ಮುಂದಿನ ಯೋಜನೆಗಳ ಬಗ್ಗೆ ವಿಚಾರಿಸಿದರು. ನಮ್ಮ ಪ್ರಾಚೀನ ಪರಂಪರೆಯನ್ನು ಉಳಿಸಬಲ್ಲಂತಹ, ಹಸ್ತಶಿಲ್ಪದಂತಹ ಮನೆಗಳನ್ನೇ ಬೇರೆ ಕಡೆಯಿಂದ ಇಲ್ಲಿಗೆ ಸ್ಥಳಾಂತರಿಸುವ ಯೋಜನೆಯ ಬಗ್ಗೆ ಶೆಣೈಯವರು ಅವರಿಗೆ ತಿಳಿಸುವರು. ಅದಕ್ಕಾಗಿ ಸುಮಾರು ಆರೂವರೆ ಎಕರೆಗಳಷ್ಟು ಜಾಗವನ್ನು ದೀರ್ಘಾವಧಿ ಗುತ್ತಿಗೆ ಮೇಲೆ ಕೊಡುವ ಬಗ್ಗೆ ಆ ಹಿರಿಯ ಅಧಿಕಾರಿ ಆಶ್ವಾಸನೆ ನೀಡುವರು. ಆದರೆ ಶೆಣೈಯವರ ಬಳಿ ಅಷ್ಟೊಂದು ಹಣ ಎಲ್ಲಿಂದ ಬರಬೇಕು? ಅಲ್ಲದೆ ಸ್ಥಳಾಂತರಿಸುವ ಕಾರ್ಯಗಳಿಗೂ ಲಕ್ಷಾಂತರ ರೂಪಾಯಿಗಳು ಖರ್ಚಾಗುತ್ತದೆ! ಆದರೆ ಶೆಣೈಯವರು ತಮ್ಮ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಧೈರ್ಯದಿಂದ ಕಾರ್ಯ ಪ್ರಾರಂಭಿಸಿಯೇ ಬಿಟ್ಟರು… ಅದಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ನೆಲಸಮವಾಗಲು ಸಿದ್ಧವಾಗುತ್ತಿರುವ ಹಳೆಯಮನೆಗಳನ್ನು ಇದ್ದಂತೆಯೇ ತಂದು ಮರುನಿರ್ಮಿಸುವ ಸಲುವಾಗಿ 1998ರಲ್ಲಿ ಸಂಸ್ಕೃತಿ ಗ್ರಾಮವನ್ನು ಕಟ್ಟುವ ಯೋಜನೆಯನ್ನು ಕೈಗೆತ್ತಿಕೊಂಡರು.
……ಮುಂದುವರಿಯುವುದು.
– ಶಂಕರಿ ಶರ್ಮ, ಪುತ್ತೂರು.
ಚೆನ್ನಾಗಿದೆ..ಮುಂದಿನ ಕಂತಿಗೆ ನಿರೀಕ್ಷೆ
ತಮ್ಮ ಪ್ರೀತಿಯ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು
ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ಅಕ್ಕಾ
ಮಣಿಪಾಲದ ಸುಂದರ ನೆನಪುಗಳ ಮಾಲಿಕೆಯ ನಿರೂಪಣೆ ಸೊಗಸಾದ ಪ್ರಾರಂಭ… ಮುಂದಿನ ಸಂಚಿಕೆಗಳಿಗಾಗಿ .. ಕಾತುರದಿಂದ ಕಾಯುವಂತಾಗಿದೆ.. ಅಭಿನಂದನೆಗಳು ಮೇಡಂ
ಪ್ರೀತಿಯ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ನಾಗರತ್ನ ಮೇಡಂ ಅವರಿಗೆ.
ತುಂಬಾ ಚೆನ್ನಾಗಿದೆ ಲೇಖನ
ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು..ನಯನಾ ಮೇಡಂ.
ಚೆನ್ನಾಗಿ ದೆ ವಿವರಣೆ ನನಗೂ ಹೋಗಬೇಕು ವೀಕ್ಷಿಸಲು
ಎಂದಾಗುತ್ತೆ ನೀವು ವಿವರಿಸಿ ಬರೆದ ಹೆರ್ ಟೇಜು ವಿಲೇಜ್
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಆಶಾ..
ಹಸ್ತ ಶಿಲ್ಪದ ಭೇಟಿಯ ನೆನಪು ಗಳು ಮರುಕಳಿಸಿದ ವು ನಿಮ್ಮ ಬರಹವನ್ನುಓದಿ. ವಿಜಯನಾಥ ಶೆಣೈಯವರೇ ನಮಗೆ ವಿವರಣೆ ನೀಡಿದ್ದರು. ಅವರ ಕಣ್ಣುಗಳು ಹೇಗೆ ಮಿಂಚುತ್ತಿದ್ದವು ಎನ್ನುವುದನ್ನು ನೆನೆದು ಕೊಳ್ಳುತ್ತೇನೆ. ಆ ಹಿರಿಯ ಜೀವಿಯ ಕಲಾ ಪ್ರಜ್ಞೆಗೆ ನಮಿಸುತ್ತೇನೆ.
ಹೆರಿಟೇಜ್ ವಿಲೇಜ್ ನ ಸುಂದರ ವಿವರಣೆ ಮುಂದಿನ ಕಂತಿಗೆ ಕುತೂಹಲದಿಂದ ಕಾಯುವಂತೆ ಮಾಡಿದೆ.
Very nice description. i want to visit.