ಪುಸ್ತಕ ಪರಿಚಯ: ದಾಕ್ಷಾಯಣಿ ನಾಗರಾಜ ಮಸೂತಿ ಅವರ ‘ಊದ್ಗಳಿ’

Share Button

ಪುಸ್ತಕದ ಹೆಸರು :- ಊದ್ಗಳಿ
ಕವಯಿತ್ರಿ :- ದಾಕ್ಷಾಯಣಿ ನಾಗರಾಜ ಮಸೂತಿ
ಪ್ರಕಾಶಕರು :- ದುಡಿಮೆ ಪ್ರಕಾಶನ

ತಮ್ಮ ಸಣ್ಣ ಸಣ್ಣ, ಆದರೂ ಆಕರ್ಷಕ ಹನಿಗವನಗಳ ಮೂಲಕ ಪರಿಚಿತರಾದವರು ದಾಕ್ಷಾಯಣಿಯವರು. ಈಗ ಅವರ ಕವನಗಳೆಲ್ಲವೂ ಪುಸ್ತಕ ರೂಪ ಪಡೆದು ಕೈ ಸೇರಿರುವುದು ಸಂತಸದ ವಿಚಾರ. ಈ ಕವನ ಸಂಕಲನಕ್ಕೆ “ಊದ್ಗಳಿ” ಎಂಬ ಹೆಸರು ಏಕೆ ನೀಡಲಾಯಿತು ಹಾಗೂ ಅದರ ಅರ್ಥವೇನು ಅನ್ನೋದನ್ನ ಸ್ವತಃ ದಾಕ್ಷಾಯಿಣಿಯವರೆ ಈ ಪುಸ್ತಕದಲ್ಲಿ ತಿಳಿಸಿದ್ದಾರೆ.

ನಾವು ಹೇಗೆ ಇದ್ದರೂ ಈ ಸಮಾಜ ನಿಂದಿಸುವುದನ್ನು ಬಿಡುವುದಿಲ್ಲ. ಕುಹಕವಾಡುವುದನ್ನು  ಬಿಡುವುದಿಲ್ಲ. ಹಾಗಿರುವಾಗ ಒಂದು ಹೆಣ್ಣು ಏಕೆ ಈ ಸಮಾಜಕ್ಕೆ ತನ್ನನ್ನು ತಾನು ಸಾಬೀತುಪಡಿಸಬೇಕು, ಇದು ಅವಳ ಬದುಕು, ಇದರಿಂದ ಉಳಿದವರಿಗೆ ಏನೂ ಆಗಬೇಕಾದದ್ದಿಲ್ಲ.  ಇಲ್ಲಿ ಎಲ್ಲರೂ ತಮಗೆ ಇಷ್ಟ ಬಂದ ರೀತಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸ್ವತಂತ್ರರು. ಸ್ವತಃ ಸೀತೆಯೇ ತನ್ನ ಪರಿಶುದ್ಧತೆಯನ್ನು ಸಾಬೀತುಗೊಳಿಸಲಾಗಿಲ್ಲ ಇಲ್ಲಿ ಅನ್ನುವ ಉದಾಹರಣೆಯೊಂದಿಗೆ ಹೆಣ್ಣಿನ ಬವಣೆಯನ್ನು ಬಿಚ್ಚಿಟ್ಟ ಒಂದು ಕವನ  “ನಲವತ್ತರ ಹುಡುಗಿ”.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದರೂ ಮತ್ತೆ ಜಗತ್ತು ಅಜ್ಞಾನದ ಕೂಪದಲ್ಲಿ ಮುಳುಗಿ ಅಂಧಕಾರದತ್ತ ಸಾಗುತ್ತಿದೆ. ದೊರೆತಿರುವ ಸ್ವಾತಂತ್ರ್ಯಕ್ಕೆ ಅರ್ಥವೇ ಇಲ್ಲದಂತಾಗಿದೆ. ಮಹಾತ್ಮನ ಪರಿಶ್ರಮ ಮತ್ತೆ ಬರೀ ಇತಿಹಾಸದ ಪುಟಗಳಲ್ಲಿ ಉಳಿದುಬಿಡುವಂತಹ ಪರಿಸ್ಥಿತಿ ಕಣ್ಣಮುಂದೆ ಬರತೊಡಗಿದೆ ಅನ್ನೋ ಆಶಯವನ್ನು ವ್ಯಕ್ತಪಡಿಸುವ  ಒಂದು ಕವನ.

ಮಂದಿರ, ಮಸೀದಿ, ಭಾಷೆ, ಜಾತಿಗಳ ಕಿತ್ತಾಟ ದೊಳಗೆ ಮಾನವೀಯತೆಯನ್ನು ಮರೆತ ಮಾನವರನ್ನು ಎಚ್ಚರಿಸುವ, ಆಡದೇ ಉಳಿದ ಮನದೊಳಗೆಯೇ ಮೌನವಾಗ ಹೊರಟ ಮಾತುಗಳನ್ನು ಹೊರ ಹಾಕುವ ತವಕ ಹೊಂದಿರುವ ಸಾಲುಗಳು ಇಲ್ಲಿ ಕವನ ರೂಪ ಪಡೆದಿವೆ.

ಪ್ರೀತಿಸಿ ಮೋಸ ಹೊಂದಿ ಮತ್ತೆ ಹೃದಯದ ಬಾಗಿಲು ತೆರೆಯಲು ಒಪ್ಪದ ಒಲವಿನ ಕನವರಿಕೆಗಳು, ಪ್ರಕೃತಿಯೊಳಗೆಯೆ ಅಡಗಿರುವ ಬದುಕಿನ ಪಾಠವ ಅರಿಯದ ಬರಡು ಮನಸ್ಸುಗಳ ಅನಾವರಣ, ಬಾಲ್ಯದಿಂದ ಹಿಡಿದು ಯವ್ವನದ ವರೆಗಿನ ಭಾವಗಳ ಪಯಣ, ಮೌನದಲ್ಲಿ ಅಡಗಿರುವ ಪ್ರೇಮ ಭಾಷೆ, ಬದುಕೆಂಬ ಸಂತೆಯಲ್ಲಿ  ಕಾಣಸಿಗುವ ಬಗೆ ಬಗೆಯ ಮುಖವಾಡ ತೊಟ್ಟ ಮುಖಗಳ ಚಿತ್ರಣ ಹೀಗೆ ಒಂದಲ್ಲ ಹಲವಾರು ಭಾವಗಳ ಸಮ್ಮಿಲನವೆ ಈ ಕವನ ಸಂಕಲನ “ಊದ್ಗಳಿ”.  ಭಾವಜೀವಿಗಳಿಗೆ ಇಷ್ಟವಾಗುವಂತಹ ಕವಿತೆಗಳು ಇವೆ ಇದರಲ್ಲಿ.

ಹಲವಾರು ಬಾರಿ ಕವನಗಳು ನೇರವಾಗಿ ವ್ಯಕ್ತಪಡಿಸಲಾಗದ ಭಾವದ ಅಭಿವ್ಯಕ್ತಿಯಾಗಿರುತ್ತದೆ. ಮನಸ್ಸಿನ ತೊಳಲಾಟ, ಸಂತಸ, ವಿರಹ, ಉದಾಸೀನ ಭಾವ ಹಲವಾರು ಬಾರಿ ಅಕ್ಷರ ರೂಪ ಪಡೆದು ಸರತಿಯಲ್ಲಿ ಸಾಲು ಹಿಡಿದು ಕವನವೆನ್ನಿಸಿಕೊಳ್ಳುತ್ತದೆ.  ದಾಕ್ಷಾಯಿಣಿಯವರು ಈ ಪ್ರಕಾರದಲ್ಲಿ ಹಿಡಿತ ಸಾಧಿಸಿರುವುದನ್ನು ಈ ಕವನ ಸಂಕಲನ  ಸಾಬೀತುಪಡಿಸುತ್ತದೆ.

– ನಯನ ಬಜಕೂಡ್ಲು

1 Response

  1. ಶಂಕರಿ ಶರ್ಮ says:

    ವಿಚಿತ್ರ ಶೀರ್ಷಿಕೆ..ಊದ್ಗಳಿ, ಅರ್ಥ ಆಗ್ಲಿಕ್ಕೆ ಪುಸ್ತಕ ಓದ್ಬೇಕು. ಸೊಗಸಾಗಿ ಕವನ ಸಂಕಲನವನ್ನು ವಿಮರ್ಶಿಸಿ ಪರಿಚಯಿದ್ದಾರೆ ನಯನಾ ಮೇಡಂ ಅವರು..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: