ಸಿಹಿ ಕಹಿ ನೆನಪುಗಳ ಬುತ್ತಿ
‘ನೀನು ವಿಜ್ಞಾನದ ವಿಧ್ಯಾರ್ಥಿಯಾಗಲು ಲಾಯಕ್ಕಿಲ್ಲ’ ಎಂದು ಅಪ್ಪ ತೀರ್ಪು ನೀಡಿದ್ದು ನನ್ನ ಪಿ.ಯು.ಸಿ. ಫಲಿತಾಂಶ ನೋಡಿದ ಮೇಲೆಯೇ. ನನಗೆ ಖುಷಿಯೋ ಖುಷಿ. ಸಧ್ಯ ಅರ್ಥವಾಗದ ವಿಷಯಗಳಿಂದ ಬಿಡುಗಡೆ ದೊರೆಯಿತು ಎಂದು. ನಾನು ಬಿ.ಎ. ಗೆ ಸೇರುವಾಗ ಇಂಗ್ಲಿಷ್ ಸಾಹಿತ್ಯದ ಜೊತೆ ಇತಿಹಾಸ ಆಯ್ಕೆ ಮಾಡಿದೆ. ಚಿತ್ರದುರ್ಗದ ಕನ್ನಡ ಶಾಲೆಗಳಲ್ಲಿ ಓದಿದ ನಾನು ಒಮ್ಮೆಲೆ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಹೆಜ್ಜೆ ಇಟ್ಟಾಗ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸಿದೆ. ಠಸ್ ಪುಸ್ ಎಂದು ಅರಳು ಹುರಿದಂತೆ ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದ ಜಂಬದ ಹುಡುಗಿಯರು, ತುಂಡು ಉಡುಗೆ ಧರಿಸಿ, ಲಿಪ್ ಸ್ಟಿಕ್ ಹಚ್ಚಿ ಕಾಲೇಜಿನ ಪ್ರಾಂಗಣದಲ್ಲಿ ಅಲೆದಾಡುತ್ತಿದ್ದ ಬೆಡಗಿಯರು, ಪರದೆ ಹಾಕಿದ ಮೈಸೂರು ಟಾಂಗಾದೊಳಗೆ ಕುಳಿತು ಕಾಲೇಜಿಗೆ ಬರುತ್ತಿದ್ದ ಬುರ್ಖಾ ಧರಿಸಿದ ಹುಡುಗಿಯರು, ಕಾಲೇಜು ಕಾಂಪೌಂಡಿನ ಮೇಲೆ ಕುಳಿತು ದಾರಿಯಲ್ಲಿ ಹೋಗುತ್ತಿದ್ದ ಬೈಕ್ ಸವಾರರನ್ನು ಚುಡಾಯಿಸುತ್ತಿದ್ದ ಲಲನೆಯರನ್ನು ಕಂಡು ಹೌಹಾರಿದೆ. ಇನ್ನು ಕಾಲೇಜಿನ ಮುಂಭಾಗದಲ್ಲಿದ್ದ ನೀರಿಲ್ಲದ ಫೌಂಟೆನ್ ಸುತ್ತ ಕುಳಿತು – ಹೊಸದಾಗಿ ಕಾಲೇಜಿಗೆ ಸೇರಿದ ಹುಡುಗಿಯರ ರ್ಯಾಗಿಂಗ್ ಮಾಡುತ್ತಿದ್ದ ಹಿರಿಯ ವಿಧ್ಯಾರ್ಥಿನಿಯರು. ಗಾಬರಿಯಿಂದ ನಾನು ಆಗ ತಾನೆ ಪರಿಚಯವಾಗಿದ್ದ ಪ್ರತಿಭಾಳ ನೆರಳಿನಂತೆ ಕಾಲೇಜಿನ ಒಳಹೊಕ್ಕೆ. ಪ್ರತಿಭಾ ಮೈಸೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಹುಡುಗಿ. ಇಂಗ್ಲಿಷಿನಲ್ಲಿ ಸರಾಗವಾಗಿ ಹರಟುತ್ತಿದ್ದಳು. ಅವಳಿಗೆ ಅವರೆಲ್ಲಾ ಸ್ನೇಹಿತರೇ. ಹಾಗಾಗಿ ನಾನು ಬಚಾವ್ ಆದೆ.
ಮೊದಲನೆ ತರಗತಿಗೆ ಹೋದಾಗ – ಅದು ಸಿನೆಮಾ ಹಾಲಿನಂತೆ ಮೆಟ್ಟಿಲು ಮೆಟ್ಟಿಲಾಗಿತ್ತು. ಅದನ್ನು ಗ್ಯಾಲರಿ ಕೊಠಡಿ ಎಂದೇ ಕರೆಯುತ್ತಿದ್ದರು. ಮೊದಲನೇ ಪೀರಿಯಡ್ ಇಂಗ್ಲಿಷ್ ಕ್ಲಾಸಿತ್ತು. ಎರಡು ಮೂರು ಕ್ಲಾಸುಗಳನ್ನು ಕಂಬೈನ್ ಮಾಡಿದ್ದರು. ಸುಮಾರು 250 ಹುಡುಗಿಯರು ಇದ್ದಿರಬಹುದು. ಉಪನ್ಯಾಸಕರು ಹಾಜರಿ ಹಾಕುವ ಹೊತ್ತಿಗೆ ಅರ್ಧ ಗಂಟೆ ಕಳೆದಿತ್ತು. ಅವರು ಬೋರ್ಡ್ ಕಡೆ ತಿರುಗಿ ಅಂದಿನ ಪಠ್ಯದ ಹೆಸರು ಬರೆಯುವ ಹೊತ್ತಿಗೆ ಅರ್ಧ ತರಗತಿ ಖಾಲಿ. ಹುಡುಗಿಯರು ಹಿಂಬಾಗಿಲಿನಿಂದ ಹೊರಗೆ ಹೋಗಿದ್ದರು. ಪ್ರತಿಭಾ ಸಹ ಅವರ ಜೊತೆ ಸೇರಿದ್ದಳು. ನನಗೆ ಸನ್ನೆ ಮಾಡಿದಳು. ನನ್ನ ಹೃದಯದ ಬಡಿತ ಜೋರಾಗಿತ್ತು. ನಾನೂ ಅವಳನ್ನು ಹಿಂಬಾಲಿಸಿದೆ. ಏನೋ ಸಾಹಸ ಮಾಡಿದ ಭಾವ. ನಮ್ಮ ಗೆಳತಿಯರ ಬಳಗ ಹೆಚ್ಚಾಗುತ್ತಾ ಬಂತು. ಸರಸ್ವತೀಪುರಂನ ಹನ್ನೆರಡನೇ ಮೈನ್ನಿಂದ ನಮ್ಮ ಸವಾರಿ ಹೊರಟರೆ ಒಂದನೇ ಮೈನ್ ತನಕ ಗೆಳತಿಯರು ಜೊತೆಗೂಡುತ್ತಿದ್ದರು. ಬೃಂದಾ, ಪ್ರತಿಭಾ, ರಾಧಾ, ವಸಂತ, ರುಕ್ಕಿ, ಮಾಲತಿ, ಲಕ್ಷ್ಮಿ, ತಾರ, ವಿಜಿ..ಶಕ್ಕು – ಎಲ್ಲರೂ ಸೇರಿದ ಮೇಲೆಯೇ ನಮ್ಮ ಮೆರವಣಿಗೆ ಹೊರಡುತ್ತಿದ್ದುದು. ಈ ಹುಡುಗಿಯರು ಕಾಲೇಜಿಗೆ ಹೋದ ನಂತರ ಮಳೆ ಬಂದು ನಿಂತ ಹಾಗಾಗುತ್ತದೆ ಎಂದು ಅಲ್ಲಿನ ಜನ ಮಾತಾಡಿಕೊಳ್ಳುತ್ತಿದ್ದುದೂ ಉಂಟು. ದಾರಿಯಲ್ಲಿ ಸಿಗುವ ಹುಡುಗರ ಹಾಸ್ಟೆಲ್ಲಿನವರು-‘ನಿಮ್ಮ ಮುಖ ಸೌಂದರ್ಯಕ್ಕೆ ಸನ್ಲೈಟ್ ಸೋಪನ್ನೇ ಬಳಸಿ’-ಎಂದು ಚುಡಾಯಿಸುತ್ತಿದ್ದರು. ಅದು ಬಟ್ಟೆಗೆ ಹಾಕುವ ಸೋಪಾಗಿತ್ತು. ಅದೇ ಸಮಯಕ್ಕೆ ಅಠಾರ ಕಛೇರಿಯ ಬಳಿ ಒಂದು ರೈಲು ಬರುತ್ತಿತ್ತು. ನಾನಂತೂ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಜೋರಾಗಿ ಕೈ ಬೀಸುತ್ತಿದ್ದೆ. ಪ್ರತಿಭಾ -‘ನೀನು ಪ್ರೈಮರಿ ಶಾಲೆಯ ವಿಧ್ಯಾರ್ಥಿಯಾ?’ ಎಂದು ನಗಾಡುತ್ತಿದ್ದಳು. ವಾರಕ್ಕೊಮ್ಮೆ ತಪ್ಪದೇ ಟೀಚರ್ಸ್ ಕ್ಯಾಂಟೀನ್ಗೆ ಹೋಗಿ ಮಸಾಲೆ ದೋಸೆ ತಿನ್ನುತ್ತಿದ್ದೆವು. ದುಡ್ಡಿಲ್ಲದಿದ್ದಾಗ ಸ್ನೇಹಿತರ ಬಳಿ ಸಾಲ ಮಾಡಿಯಾದರೂ ಕ್ಯಾಂಟೀನ್ಗೆ ಹೋಗುತ್ತಿದ್ದೆವು.
ನಮ್ಮ ಉಪನ್ಯಾಸಕರಲ್ಲಿ -ರೇಷ್ಮೆ ಸೀರೆ ಧರಿಸಿ, ತುರುಬು ಕಟ್ಟಿ ಗತ್ತಿನಿಂದ ಬರುತ್ತಿದ್ದ ಮೇಡಂಗಳು, ಸೂಟು ಬೂಟು ಧರಿಸಿ ಠೀವಿಯಿಂದ ಅಡ್ಡಾಡುವ ಸರ್ಗಳೂ ಇದ್ದರು. ಹುಡುಗಿಯರು ಅವರಿಗೆ ಇಟ್ಟ ಅಡ್ಡ ಹೆಸರುಗಳು ಹಲವು. ಸ್ಕೂಟರ್ ಕಿಕ್ ಹೊಡೆದೂ ಹೊಡೆದೂ ಹೈರಾಣಾಗುತ್ತಿದ್ದ ಸರ್ಗೆ ‘ನಟರಾಜ’ ಎಂದೂ, ಗುಂಡ ಗುಂಡಗೆ ಇದ್ದ ಸರ್ಗೆ ‘ಫುಟ್ಬಾಲ್’ ಎಂದೂ, ಯಾವಾಗಲೂ ಬೂದು ಬಣ್ಣದ ಸೂಟ್ ಧರಿಸಿ ಬರುತ್ತಿದ್ದ ಸರ್ಗೆ ‘ಯೂನಿಫಾರ್ಮ್’ ಎಂದೂ, ಮ್ಯಾಚಿಂಗ್ ಸೀರೆ, ವ್ಯಾನಿಟಿ ಬ್ಯಾಗ್, ಚಪ್ಪಲಿ ಧರಿಸಿ ಬರುತ್ತದ್ದ ಮೇಡಂಗೆ ‘ಮ್ಯಾಚಿಂಗ್ ಕ್ವೀನ್’. ಹೋಳಿ ಹಬ್ಬ ಬಂತೆಂದರೆ ಹುಡುಗಿಯರು ಯಾವ ಭಿಡೆಯೂ ಇಲ್ಲದೆ ಎಲ್ಲರಿಗೂ ಬಣ್ಣ ಎರಚುತ್ತಿದ್ದರು. ಒಮ್ಮೆ ಹೊಸದಾಗಿ ಬಂದಿದ್ದ ಇತಿಹಾಸ ಪ್ರಾಧ್ಯಾಪಕರೊಬ್ಬರು ಬಣ್ಣ ಎರಚುತ್ತಿದ್ದ ಹುಡುಗಿಯರಿಗೆ ಬಯ್ಯುತ್ತಿರುವಾಗ ಅವರ ಹಿಂದಿನಿಂದ ಬಂದ ಹುಡುಗಿಯೊಬ್ಬಳು ಬಿಳಿ ಷರ್ಟಿನ ಮೇಲೆ ಕೆಂಪು ಬಣ್ಣದ ಹಸ್ತದ ಮುದ್ರೆ ಹಾಕಿದ್ದಳು. ಎಷ್ಟೋ ಮಂದಿ ಸರ್ಗಳು ಹುಡುಗಿಯರ ಪುಂಡಾಟಕ್ಕೆ ಹೆದರಿ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದೂ ಉಂಟು. ಒಮ್ಮೆ ಹಾಸ್ಟೆಲ್ಲಿನಲ್ಲಿದ್ದ ಹುಡುಗಿಯರಿಬ್ಬರು ಒಂದು ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಹಾಸ್ಟೆಲ್ಲಿಗೆ ಮರಳಿದಾಗ ಅಲ್ಲಿದ್ದ ವಾರ್ಡನ್ ಜೋರು ಮಾಡಿದರು, ‘ಇಷ್ಟು ತಡ ಮಾಡಿ ಬಂದಿದ್ದೀರ. ಗೇಟಿನ ಬಾಗಿಲು ತೆಗೆಯುವುದಿಲ್ಲ’ ಎಂದರು. ಅವರ ಜೊತೆ ಬಂದಿದ್ದ ಹುಡುಗರಿಬ್ಬರು, ‘ಹಾಗಾದರೆ ಹುಡುಗಿಯರನ್ನು ಬೆಳಿಗ್ಗೆ ಕರೆದುಕೊಂಡು ಬರುವುದಾ?’ ಎಂದಾಗ ಗಾಬರಿಯಾದ ವಾರ್ಡನ್ ತಕ್ಷಣವೇ ಗೇಟು ತೆಗೆಸಿ ಅವರನ್ನು ಒಳಬಿಟ್ಟರು.
ಕಾಲೇಜಿಗೆ ಹೊಸದಾಗಿ ಸೇರಿದವರಲ್ಲಿ ಮೈಸೂರು ಮಹಾರಾಜರ ಇಬ್ಬರು ಮಕ್ಕಳೂ ಇದ್ದರು. ಸಿನಿಮಾಗಳಲ್ಲಿ, ಕಾದಂಬರಿಗಳಲ್ಲಿ ರಾಜಕುವರಿಯರನ್ನು ಕಂಡಿದ್ದ ನಾನು ಅವರನ್ನು ನೋಡಲು ಕಾತುರಳಾಗಿದ್ದೆ. ಆದರೆ ಅವರು ನಮ್ಮ ನಿಮ್ಮೆಲ್ಲರ ಹಾಗೇ ಸಾಧಾರಣ ರೂಪಿನವರಾಗಿದ್ದರು. ಅವರು ಎಲ್ಲರೊಡನೆ ಬಹಳ ಸ್ನೇಹದಿಂದ ಬೆರೆಯುತ್ತಿದ್ದರು. ಅವರಿಗೆಂದೇ ಒಂದು ಕೊಠಡಿ ಮೀಸಲಾಗಿದ್ದರೂ ಎಂದೂ ಅವರು ಅಲ್ಲಿ ಕುಳಿತಿದ್ದಿಲ್ಲ. ಅವರ ಶಾರೀರಿಕ ನಿಲುವು, ಅವರ ದೊಡ್ಡದಾದ ಪ್ಲೈಮೌತ್ ಕಾರು, ಅವರ ಎಂಟು ಬಟ್ಟಲಿನ ಊಟದ ಕ್ಯಾರಿಯರ್ ಎಲ್ಲವೂ ಯಾರು ಹೆಚ್ಚು ಗಾತ್ರ ಎಂದು ಸ್ಪರ್ಧೆ ನಡೆಸುವಂತಿದ್ದವು.
ಇನ್ನು ಸಾಂಪ್ರದಾಯಿಕ ಉಡುಗೆಯಾದ ಲಂಗ ದಾವಣಿ, ಸೀರೆ ಧರಿಸಿ ಬರುವ ಮಂದಿಯೇ ಹೆಚ್ಚಿದ್ದರು. ಇವರು ಕ್ಲಾಸ್ಗೆ ಚಕ್ಕರ್ ಹಾಕಿ, ಮರದ ಕೆಳಗೆ ಕುಳಿತು ಕಡ್ಲೆಕಾಯಿ ಬೆಲ್ಲ ಮೆಲ್ಲುತ್ತಾ ಕನ್ನಡ ಮಾತಾಡುವ ಮಂದಿ. ಸಿನಿಮಾ ಹಾಡು ಗುನುಗುತ್ತಾ ತಮ್ಮ ಕನಸಿನ ರಾಜಕುಮಾರನನ್ನು ನಿರೀಕ್ಷಿಸುತ್ತಾ ಕಾಲ ಹಾಕುತ್ತಿದ್ದರು. ಮದುವೆಯಾಗುವವರೆಗೂ ಕಾಲೇಜಿಗೆ ಹೋಗಿ ಬರುತ್ತಿರಲಿ ಎಂಬುವ ಮನೋಭಾವ ಪೋಷಕರದು. ಗೆಳತಿ ಪದ್ಮಳಿಗಂತೂ ‘ಹೆಣ್ಣು’ ನೋಡಲು ಬರುವರೆಂದರೆ ಸಂಭ್ರಮವೋ ಸಂಭ್ರಮ. ಅಂದು ಅತ್ತಿಗೆಯ ಹೊಸ ರೇಷ್ಮೆ ಧರಿಸಿ, ಅವರ ಮುತ್ತಿನ ಹಾರ, ಬಳೆ ಧರಿಸಿ, ಗಂಡಿನವರಿಗೆ ಮಾಡಿದ್ದ ಸಿಹಿ ತಿಂಡಿ ತಿನ್ನುವ ಅವಕಾಶ. ಅವಳಿಗೆ ಮದುವೆ ಎಂದರೆ ಹೊಸ ಸೀರೆ, ಒಡವೆ ಧರಿಸಿ ಗಂಡನ ಜೊತೆ ಸಿನೆಮಾ, ಪಾರ್ಕು, ಹೊಟೇಲು ಅಂತ ಸುತ್ತುವುದು ಎನ್ನುವ ಭಾವ. ಆದರೆ ಕೆಲವು ಗೆಳತಿಯರಿಗೆ ‘ಹೆಣ್ಣು’ ನೋಡಲು ಬರುತ್ತಾರೆಂದರೆ ಬೇಸರ ಮಾಡಿಕೊಳ್ಳುತ್ತಿದ್ದರು. ‘ನಾವೇನು ಮಾರಾಟಕ್ಕಿಟ್ಟಿರುವ ವಸ್ತುಗಳೇ?’ ಎಂದು. ಇನ್ನೂ ಕೆಲವರು ಪ್ರೇಮ ವಿವಾಹ, ಅಂತರ್ಜಾತೀಯ ವಿವಾಹದ ಬಗ್ಗೆ ಗಂಭೀರವಾದ ಚರ್ಚೆ ನಡೆಸುತ್ತ್ತಿದ್ದರು. ಮಧ್ಯಮ ವರ್ಗದಿಂದ ಬಂದಿದ್ದ ಹುಡುಗಿಯರಿಗೆ ಚೆನ್ನಾಗಿ ಓದಿ, ಒಳ್ಳೆಯ ಅಂಕ ಗಳಿಸಿ, ಸ್ನಾತಕೋತ್ತರ ಪದವಿ ಮಾಡುವ ಹಂಬಲ. ಕೆಳ ಮಧ್ಯಮ ವರ್ಗದವರಿಗೆ ಬ್ಯಾಂಕ್, ಪೋಸ್ಟ್ ಆಫೀಸ್ ಅಥವಾ ಸರ್ಕಾರಿ ಕಛೇರಿಗಳಲ್ಲಿ ಕೆಲಸ ಸಿಗುವವರೆಗೆ ಕಾಲೇಜಿನ ಓದು. ಕೆಲವು ಮಂದಿ ಫ್ಯಾಷನ್ ಷೋಗಳಲ್ಲಿ ಭಾಗವಹಿಸಿದ್ದೂ ಉಂಟು. ಅವರಲ್ಲಿ ಒಬ್ಬಳಾದ ಸೀತಮ್ಮ – ಗಗನ ಸಖಿಯಾಗಿ ಆಯ್ಕೆಯಾದಾಗ ಇಡೀ ಕಾಲೇಜೇ ಸಂಭ್ರಮ ಪಟ್ಟಿತು.
ಮಹಾರಾಣಿ ಕಾಲೇಜಿನಲ್ಲಿ ಟೆನ್ನಿಸ್ ಕೋಚಿಂಗ್, ಭರತ ನಾಟ್ಯ, ಶಾಸ್ತ್ರೀಯ ಸಂಗೀತ ತರಗತಿಗಳೂ ನಡೆಯುತ್ತಿದ್ದವು. ನಾನು ಬೃಂದಾಳ ಜೊತೆ ಇದ್ದು ಅವಳು ಸಂಗೀತ ಅಭ್ಯಾಸ ಮಾಡುವುದನ್ನು ನೋಡುತ್ತಾ ನಿಂತಿರುತ್ತಿದ್ದೆ. ಪ್ರತಿಭಾ ಭರತ ನಾಟ್ಯ ಕಲಿಯುವುದನ್ನು ನೋಡುತ್ತಾ ನಿಂತಲ್ಲಿಯೇ ನಿಂತು ಹೆಜ್ಜೆ ಹಾಕುತ್ತಿದ್ದೆ. ಅಪ್ಪನ ಬಳಿ ಮೆಲ್ಲನೆ ಉಸಿರಿದೆ ‘ನನಗೂ ಸಂಗೀತ, ಡ್ಯಾನ್ಸ್, ಕಲಿಸಿ’ ಎಂದು. ಅಪ್ಪ ‘ಓದು ಒಂದು ತಪಸ್ಸಿನ ಹಾಗೆ. ಮನಸ್ಸಿಟ್ಟು ಓದು’ ಎಂದು ಗದರಿದಾಗ ಸುಮ್ಮನಾದೆ, ಕೊನೆಗೆ ಎನ್.ಸಿ.ಸಿ. ಗೆ ಸೇರಲಾ? ಎಂದಾಗ ಅದಕ್ಕೂ ಬ್ರೇಕ್ ಹಾಕಿದರು. ನಾನು ಎರಡು ದಿನ ಮಂಕಾಗಿದ್ದೆ. ನನ್ನನ್ನು ಗಮನಿಸಿದ ‘ಸೂರ್ಯನಾರಾಯಣ್’ ಸರ್ರವರು ನನಗೆ ವರ್ಡ್ಸ್ವರ್ತ್ನ ಕವನ ‘ಡ್ಯಾಫೋಡಿಲ್ಸ್’ ಬಗ್ಗೆ ಪ್ರಬಂಧ ಬರೆದುಕೊಂಡು ಬರಲು ತಿಳಿಸಿದರು. ನಾನು ರಾತ್ರಿ, ಹಗಲು ಒಂದು ಮಾಡಿ ಪ್ರಬಂಧ ಬರೆದೆ. ತರಗತಿಯಲ್ಲಿ ಓದಲು ಹೇಳಿದರು. ನಾನು ಪ್ರಬಂಧ ಓದಿದಾಗ ಹುಡುಗಿಯರು ಮುಸಿ ಮುಸಿ ನಗುತ್ತಿದ್ದರು. ಅಳುಮೋರೆ ಮಾಡಿದ್ದ ನನ್ನನ್ನು ಕರೆದು ಸರ್ ನನ್ನ ತಪ್ಪುಗಳನ್ನು ತಿದ್ದಿದರು. ಹಾಗೆಯೇ ‘ಓದುಗರ ಬಳಗ’ಕ್ಕೆ ಸದಸ್ಯಳನ್ನಾಗಿ ಮಾಡಿದರು. ವಾರಕ್ಕೊಂದು ಪ್ರಬಂಧ ಬರೆಯಬೇಕಿತ್ತು. ನಾವು ಬರೆದಂತಹ ವಿಶ್ಲೇಷಣೆಗಳನ್ನು ತಾಳ್ಮೆಯಿಂದ ತಿದ್ದುತ್ತಿದ್ದರು. ಅವರು ಹೇಳುತ್ತಿದ್ದ ಪುಸ್ತಕಗಳನ್ನು ಲೈಬ್ರರಿಯಿಂದ ತೆಗೆದುಕೊಂಡು ಓದುತ್ತಿದ್ದೆ. ಜೇನ್ ಆಸ್ಟಿನ್, ಡಿಕನ್ಸ್, ಹಾರ್ಡಿ, ಟಾಲ್ಸ್ಟಾಯ್ ಜೊತೆ ಜೊತೆಗೇ ಅನಕೃ, ತರಾಸು, ತ್ರಿವೇಣಿ, ವಾಣಿ, ಕಾರಂತರು, ಬೈರಪ್ಪ, ಕುವೆಂಪು, ಬೇಂದ್ರೆ- ಹೀಗೆ ಓದುಗರ ಬಳಗ ಕನ್ನಡ ಮತ್ತು ಇಂಗ್ಲಿಷಿನ ಮೇರುಕೃತಿಗಳನ್ನು ನಮಗೆ ಪರಿಚಯಿಸಿತು.
ನಮ್ಮ ಪರೀಕ್ಷಾ ಪದ್ಧತಿ ವಿಭಿನ್ನವಾಗಿತ್ತು. ಇಂದಿನ ಸೆಮಿಸ್ಟರ್, ಟ್ರೈಮಿಸ್ಟರ್ನಂತಲ್ಲ. ಮೊದಲನೇ ವರ್ಷ ಆಯಾ ಕಾಲೇಜಿನ ಮಟ್ಟದಲ್ಲಿಯೇ ನಡೆಯುವ ಪರೀಕ್ಷೆ. ‘ಆಟಕ್ಕುಂಟು, ಲೆಕ್ಕಕ್ಕಿಲ್ಲ’ ಎನ್ನುವ ಹಾಗೆ ಆ ಪರೀಕ್ಷೆಗೆ ಯಾವ ಮಾನ್ಯತೆಯೂ ಇರುತ್ತಿರಲಿಲ್ಲ. ಹುಡುಗಿಯರಂತೂ ಪರಿಕ್ಷಾ ಕೊಠಡಿಗಳಲ್ಲಿ ಅರ್ಧ ಗಂಟೆಗಿಂತ ಹೆಚ್ಚು ಹೊತ್ತು ಕೂರುತ್ತಿರಲಿಲ್ಲ. ಇನ್ನು ಎರಡನೇ ವರ್ಷದ ಕೊನೆಗೆ ಇಂಗ್ಲಿಷ್, ಕನ್ನಡ, ಸಾಮಾನ್ಯ ವಿಜ್ಞಾನ ಹಾಗೂ ನಮ್ಮ ಆಯ್ಕೆಯಾದ ಒಂದು ಮೈನರ್ ವಿಷಯದ ಪರೀಕ್ಷೆಗಳು ನಡೆಯುತ್ತಿದ್ದವು. ಪ್ರತೀ ವಿಷಯದಲ್ಲೂ ಎರಡೆರಡು ಪೇಪರ್ ಇರುತ್ತಿದ್ದವು. ಬಹಳಷ್ಟು ಮಂದಿ ಇಂಗ್ಲಿಷಿನಲ್ಲಿ ಫೇಲ್ ಆಗುತ್ತಿದ್ದರು. ಕೆಲವೇ ಮಂದಿ ಎಲ್ಲ ವಿಷಯದಲ್ಲೂ ತೇರ್ಗಡೆಯಾಗುತ್ತಿದ್ದರು. ಅಂತವರನ್ನು ‘ಕುಡುಮಿಗಳೆಂದೂ, ಅವರು ಕಾಲೇಜಿನಲ್ಲಿರಲು ನಾಲಾಯಕ್ಕೆಂದೂ ಅಲಿಖಿತ ನಿಯಮವಾಗಿತ್ತು.‘ ಇನ್ನು ಎಲ್ಲಾ ವಿಷಯಗಳಲ್ಲಿ ಫೇಲ್ ಆದವರು ‘ನನ್ನದು ವಾಷ್ಔಟ್’ ಎಂದು ಹೆಮ್ಮೆಯಿಂದ ಬೀಗುತ್ತಿದ್ದರು. ಅವರೇ ಅಂದಿನ ಹಿರೋಯಿನ್ಸ್. ಮೂರನೆಯ ವರ್ಷದ ಕೊನೆಗೆ ಎರಡು ಮೇಜರ್ ವಿಷಯಗಳ ಪರೀಕ್ಷೆ. ಪ್ರತೀ ವಿಷಯದಲ್ಲಿ ನಾಲ್ಕು ಪೇಪರ್ಗಳು. ಎಲ್ಲ ಪ್ರಶ್ನ ಪತ್ರಿಕೆಯಲ್ಲೂ ಐದು ಪ್ರಶ್ನೆಗೆ ಉತ್ತರಿಸಬೇಕಿತ್ತು. ಒಂದೊಂದು ಪ್ರಶ್ನೆಗೂ ಐದಾರು ಪುಟ ಉತ್ತರ ಬರೆಯಬೇಕಿತ್ತು. ಪರೀಕ್ಷೆ ಮುಗಿದ ತಕ್ಷಣ ಸ್ನೇಹಿತರೊಟ್ಟಿಗೆ ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲು ಹತ್ತಿ ದೇವಿಯ ದರ್ಶನ ಮಾಡುವುದನ್ನು ಎಂದೂ ತಪ್ಪಿಸುತ್ತಿರಲಿಲ್ಲ.
ಈಗಿನ ಹಾಗೆ ತಿಂಗಳಿಗೊಮ್ಮೆ ಟೆಸ್ಟ್ ಆಗಲಿ, ನಾಲ್ಕು ತಿಂಗಳಿಗೊಮ್ಮೆ ಪರೀಕ್ಷೆ ಆಗಲಿ ಇರಲಿಲ್ಲ. ಯಾವುದೇ ವಿಷಯವನ್ನು ಆಳವಾಗಿ ಅಧ್ಯಯನ ಮಾಡಲು ಸಾಕಷ್ಟು ಕಾಲಾವಕಾಶ ಇರುತ್ತಿತ್ತು. ಓದುಗರ ಬಳಗದಲ್ಲಿ ನಾವು ಓದಿದ ಪುಸ್ತಕಗಳು ನಮ್ಮ ಮುಂದಿನ ಓದಿಗೆ ಭದ್ರವಾದ ಬುನಾದಿ ಹಾಕಿದ್ದವು. ನಾನು ಬಿ.ಎ. ವ್ಯಾಸಂಗ ಮುಗಿಸಿ ಐವತ್ತು ವರ್ಷಗಳು ಕಳೆದಿವೆ. ಕಾಲೇಜಿನ ವಿಧ್ಯಾರ್ಥಿ ಜೀವನ ನಿಜವಾಗಿಯೂ ಬಂಗಾರದ ಬದುಕೇ.
ಅಪ್ಪ ಹೇಳಿದ್ದ ಮಾತು ‘ಓದು ಒಂದು ತಪಸ್ಸು’ ಎಂಬುದರ ಅರ್ಥ ನಿಧಾನವಾಗಿ ಆಗತೊಡಗಿತ್ತು. ಕಾಲೇಜಿನಲ್ಲಿ ಕ್ಲಾಸಿಗೆ ಚಕ್ಕರ್ ಹೊಡೆಯುತ್ತಿದ್ದವಳು ಉಪನ್ಯಾಸಕಳಾದ ಮೇಲೆ ವಿಧ್ಯಾರ್ಥಿಗಳಿಗೆ ಶಿಸ್ತಿನ ಪಾಠ ಹೇಳಿದ್ದೇ. ಟೀಚರ್ಸ್ನ ಚುಡಾಯಿಸುತ್ತಿದ್ದವಳು ವಿಧ್ಯಾರ್ಥಿಗಳಿಗೆ, ‘ಗುರು ಬ್ರಹ್ಮ, ಗುರು ವಿಷ್ಣು..’ ಎಂದು ಬೋಧಿಸಿದ್ದೇನೆ. ಕಾಲೇಜು ಎಂದರೆ ಮನರಂಜನೆಗಾಗಿಯೇ ಇರುವುದು ಎಂದು ಭಾವಿಸಿದವಳು ಈಗ ಕಾಲೇಜು ಎಂದರೆ ವಿಧ್ಯಾರ್ಥಿಗಳ ಭವಿಷ್ಯವನ್ನು ಸುಂದರವಾಗಿ ರೂಪಿಸುವ ಸಂಸ್ಥೆ ಎನ್ನವ ಅರಿವು ಮೂಡಿದೆ. ಕಾಲಾಯ ತಸ್ಮೈ ನಮಃ.
ಈ ಸಿಹಿ ಕಹಿ ನೆನಪುಗಳ ಬುತ್ತಿಯನ್ನು ಮುಗಿಸುವ ಮೊದಲು ಒಂದು ಮಾತು. ಸಿಹಿ ನೆನಪುಗಳು ಸಂತಸವನ್ನು ನೀಡಿದ್ದರೆ ಕಹಿ ನೆನೆಪುಗಳು ಬದುಕಿನ ಮಾರ್ಗದರ್ಶಕರಾಗಿ ನಿಂತಿವೆ.
-ಡಾ.ಗಾಯತ್ರಿದೇವಿ ಸಜ್ಜನ್
ಅರ್ಥಪೂರ್ಣವಾದ ಬರಹ. ಧನ್ಯವಾದಗಳು
ನಿಮ್ಮ ಸಿಹಿ ಕಹಿ ಯ ನೆನಪು ನನ್ನ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿತು . ಚೆನ್ನಾಗಿ ಮೂಡಿ ಬಂದಿದೆ ಮೇಡಂ.ಅಭನಂದನೃಗಳು.
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು
ನೆನಪಿನ ಬುತ್ತಿ ತುಂಬಾ ರಸರಸ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಪ್ರಾಮಾಣಿಕ, ರಸಭರಿತ ಬರಹ ತುಂಬಾ ಇಷ್ಟವಾಯಿತು…
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು
ಒಂದು ರೌಂಡ್ ಕಾಲೇಜು ದಿನಗಳ ಒಳಗೆ ಸುತ್ತಿ ಬಂತು ಮನಸ್ಸು. Nice one
ನಿಮ್ಮ ಕಾಲೇಜಿನ ನೆನಪುಗಳ ಲೇಖನ ತುಂಬಾ ಚೆನ್ನಾಗಿದೆ
ತಮ್ಮ ಕಾಲೇಜಿನ ಬಂಗಾರದ ದಿನಗಳನ್ನು ನೆನಪಿಸಿದ ಸೊಗಸಾದ ಲೇಖನವು ನಮ್ಮನ್ನೂ ಬಾಲ್ಯಕ್ಕೆ ಒಯ್ಯುವುದರಲ್ಲಿ ಸಫಲವಾಯಿತು.
ನನ್ನ ಕಾಲೇಜ್ ದಿನಗಳು ನೆನಪಾಗುತ್ತಿವೆ. ಹಾಗು ನಿಮ್ಮ ಸರಳತೆ ಮತ್ತು ನಿಮ್ಮ ಆಂಗ್ಲ ಭಾಷೆ ತರಗತಿಗಳೂ, ನೀವು English ನಲ್ಲಿ ಮಾತಾಡ್ತಾ ಇದ್ರೆ, ನಮಗೆಲ್ಲಾ English ಅಂದ್ರೆ ಇಷ್ಟು ಸರಳನ ಅಂತ annistittu madam. Thank you so much mam..