ನಾನು ಐ.ಎ.ಎಸ್ ಆಗಿದ್ದು . . . .
ಬೆಂಗಳೂರಿನಿಂದ ಅಕ್ಕ ಫೋನ್ ಮಾಡಿ ನಿನಗೆ ಐ.ಎ.ಎಸ್ ಆಗಿದ್ದಕ್ಕ್ಕೆ ಹೃದಯಪೂರ್ವಕ ಶುಭಾಶಯಗಳು ಎಂದಾಗ ಅವಳ ಮಾತಿನ ತಲೆ ಬುಡ ಅರ್ಥವಾಗಲಿಲ್ಲ. ಒಂದು ಕ್ಷಣ ಬಿಟ್ಟು ಅಕ್ಕ – ಅಯ್ಯೋ ಪೆದ್ದಿ ಗೊತ್ತಾಗಲಿಲ್ವಾ – ಇಂಡಿಯನ್ ಆಯಾ ಸರ್ವಿಸ್ಗೆ – ನೀನು ಸೇರ್ಪಡೆಯಾಗಿದ್ದಕ್ಕೆ ಶುಭಾಶಯಗಳು ಅಂದಾಗ ನಗು ತಡೆಯಲಾಗಲಿಲ್ಲ.ಭಾರತೀಯರು ತಮ್ಮ ಮಕ್ಕಳನ್ನು ಡಾಕ್ಟರ್ ಅಥವಾ ಇಂಜಿನಿಯರ್ ಮಾಡಿ ವಿದೇಶಗಳಿಗೆ ರಫ್ತು ಮಾಡಿ, ಅವರಿಗೆ ಮದುವೆ ಮಾಡಿ, ಮೊಮ್ಮಕ್ಕಳಾದಾಗ – ಬಾಣಂತನ ಮಾಡಲು ಧಾವಿಸುವ ಅಮ್ಮಂದಿರಿಗಿಟ್ಟ ಅನ್ವರ್ಥನಾಮವೇ ಇದು.
ಮಗ, ಮಗಳು ದೊಡ್ಡವರಾಗಿದ್ದು ಗೊತ್ತಾಗಲೇ ಇಲ್ಲ. ಅವರ ಓದು, ಮದುವೆ ಮುಗಿದಾಗ – ನಮ್ಮ ಆತಂಕ, ಕರ್ತವ್ಯ ಎಲ್ಲಾ ಒಂದು ಹಂತಕ್ಕೆ ಬಂತು, ಇನ್ನು ನಾವು ನಿರಾಳವಾಗಿ ಉಸಿರಾಡಬಹುದು, ಹೇಗೂ ನಿವೃತ್ತಿಯಾಯಿತು. ಪಿಂಚಣಿ ಹಣ ಸಾಕು ಮುಂದಿನ ಜೀವನದ ಭದ್ರತೆಗೆ ಎಂದುಕೊಳ್ಳುತ್ತಿರುವಾಗಲೇ ಐ.ಎ.ಎಸ್ ಆಗಿ ಎಲ್ಲಾ ಅಯೋಮಯವಾಗಿತ್ತು. ಪತಿದೇವರು ಬಹಳ ಉದಾರ ಮನೋಭಾವದಿಂದ ‘ನೀನು ವಿದೇಶಕ್ಕೆ ಹೋಗಿ ಬಾ, ಇಲ್ಲಿ ಮನೆ, ತೋಟ ಎಲ್ಲಾ ನಾನು ನೋಡಿಕೊಳ್ಳುವೆ’ ಎಂದಾಗ ಮಾತಿಲ್ಲದೆ ಮೌನಕ್ಕೆ ಜಾರಿದೆ.
ಮಗನ ಒತ್ತಡಕ್ಕೆ ಮಣಿದು ಪಾಸ್ಪೋರ್ಟ್ ಮಾಡಿಸಿ ಆಗಿತ್ತು. ಆ ಪಾಸ್ಪೋರ್ಟ್ಗೆ ಕೊಡುವ ಫೋಟೋದಲ್ಲಿ ಎರಡೂ ಕಿವಿ ಕಾಣುವಂತಿರಬೇಕು ಎಂದಾಗ ಯಾಕೋ, ಮುಖ ಲಕ್ಷಣವಾಗಿ ಕಾಣಲೆಂದೇ ಮನೆ ಬಳಿ ಬಂದ ಪೊಲೀಸ್ ನಮ್ಮ ವಿಳಾಸದ ತಪಾಸಣೆ ಮಾಡಿ, ನೆರೆಹೊರೆಯವರ ಜೊತೆ ನಮ್ಮ ಚಾರಿತ್ರ್ಯದ ಬಗ್ಗೆ ವಿಚಾರಿಸಿದಾಗ ಹೃದಯವೇ ಬಾಯಿಗೆ ಬಂದಂತೆನಿಸಿತು. ಏನೋ ಗಾಬರಿ! ನಾವು ಮರ್ಯಾದೆಯಿಂದ ಬಾಳಿದವರು – ಎಂದೂ ಮನೆ ಬಳಿ ಪೊಲೀಸ್ ಬಂದಿರಲಿಲ್ಲ ಎಂಬ ಭಾವ. ನಂತರದ ತೊಡಕು ವೀಸಾದ್ದು, ಮಗ ಕಳುಹಿಸಿದ ದಾಖಲೆಗಳ ಜೊತೆಗೆ ನಮ್ಮ ಜೀವನದ ಎಲ್ಲಾ ವಿವರಗಳನ್ನು ನೀಡುವ ದಾಖಲೆಗಳನ್ನು ಜೋಡಿಸುವ ಹೊತ್ತಿಗೆ ಹದಿನೈದು ದಿನ ಬೇಕಾಯಿತು. ಇನ್ನು ವೀಸಾ ಕಛೇರಿಗೆ ನಿಗದಿತ ಸಮಯಕ್ಕೆ ಹೋದಾಗ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಹರಸಾಹಸ ಪಡಬೇಕಾಯಿತು. (ನಾನು 35 ವರ್ಷಗಳ ಕಾಲ ಉಪನ್ಯಾಸಕಳಾಗಿ ಸೇವೆ ಸಲ್ಲಿಸಿದ್ದರೂ) ಅವರ ಪ್ರಶ್ನೆಗಳೆಲ್ಲಾ ಒಂದು ವಿಷಯದ ಸುತ್ತ ಗಿರಕಿ ಹೊಡೆಯುವಂತಿದ್ದವು. ಎಲ್ಲಿ ನಾವು ಅವರ ಸಂಪದ್ಭರಿತ ನಾಡಿನಲ್ಲಿ ಠಿಕಾಣಿ ಹಾಕಿಬಿಡುವೆವೋ, ಅವರ ದೇಶದ ಸಂಪತ್ತನ್ನೆಲ್ಲಾ ದೋಚಿ ಬಿಡುವೆವೋ ಎಂಬಂತೆ ಟಿಕೆಟ್ ಆಗಿದೆಯಾ?, ವಾಪಾಸ್ ಬರಲೂ ಟಿಕೆಟ್ ಕೊಂಡಿದ್ದೀರಾ? ಎಂಬೆಲ್ಲಾ ಪ್ರಶ್ನೆಗಳು, ತಮಾಷೆ ಎಂದರೆ, ವೀಸಾ ಸಿಗದಿದ್ದಲ್ಲಿ ಟಿಕೆಟ್ ವ್ಯರ್ಥ. ಟಿಕೆಟ್ ಇಲ್ಲದೆ ವೀಸಾ ಸಿಗುವುದು ದುರ್ಲಭ.
ಇನ್ನು ಪ್ರಯಾಣದ ಉದ್ದೇಶ ಏನು ಎಂದಾಗ ‘ಮಗಳು ಗರ್ಭಿಣಿ, ಮೊಮ್ಮಗು/ಮೊಮ್ಮಗಳ ಆರೈಕೆ ಮಾಡಲು, ಬಾಣಂತನ ಮಾಡಲು ಎಂದು ಸತ್ಯ ನುಡಿದುಬಿಟ್ಟಿರೋ, ಅಲ್ಲಿಗೆ ನೂರಕ್ಕೆ ನೂರು ವೀಸಾ ಸಿಗುವುದಿಲ್ಲ‘ ಹಿರಿಯ ಐ.ಎ.ಎಸ್ ಅದವರ ಅನುಭವದ ಮಾತುಗಳಿಂದ ಬಂದ ಉತ್ತರಗಳು. ಸುಂದರವಾದ ಲಂಡನ್ ನಗರ ನೋಡಲು / ಮಗಳ ಜನ್ಮದಿನ ಆಚರಿಸಲು / ಮಗನ ಮದುವೆ ಅನಿವರ್ಸರಿ ಆಚರಿಸಲು. . . . ಈ ರೀತಿಯ ಸಬೂಬುಗಳನ್ನು ಹೇಳಿದಾಗ ವೀಸಾ ಸಿಗುವುದು ಖಾತ್ರಿ. ವೀಸಾ ಸಿಕ್ಕಿದ್ದು …. ಎವರೆಸ್ಟ್ ಪರ್ವತಾರೋಹಣ ಮಾಡಿದ್ದ ಹಿಲೇರಿ, ತೇನ್ಸಿಂಗ್ಗೆ ಆದಷ್ಟೇ ಖುಷಿ ಆಯಿತು. ಇನ್ನು ಯಮಗಾತ್ರದ ಸೂಟ್ಕೇಸ್ಗಳು- ಅದರಲ್ಲಿ ಇಡಬಹುದಾದಂತಹ ಸಾಮಾನುಗಳ ಪಟ್ಟಿ. ಎಲ್ಲವೂ ಸೇರಿ ಇಪ್ಪತ್ಮೂರು ಕೆಜಿ. ಅಷ್ಟೆ. ಸೂಟ್ಕೇಸ್ನ ತೂಕವೇ ಐದು ಕೆಜಿ ಗಿಂತ ಮೇಲಿದೆ. ಇನ್ನು ಕ್ಯಾಬಿನ್ ಬ್ಯಾಗ್ನಲ್ಲಿ ಎಂಟು ಕೆಜಿ ಇಡಬಹುದು. ಚೆಕ್-ಇನ್-ಬ್ಯಾಗ್ ಒಮ್ಮೊಮ್ಮೆ ಮಿಸ್ ಆಗಬಹುದು. ಒಂದು ಜೊತೆ ಬಟ್ಟೆ ಔಷಧಿ, ಮುಂತಾದ ಅತೀ ಅವಶ್ಯಕ ವಸ್ತುಗಳನ್ನೆಲ್ಲಾ ಕ್ಯಾಬಿನ್ ಬ್ಯಾಗ್ನಲ್ಲಿ ಇಟ್ಟುಕೋ ಅಂತ ಗೆಳತಿಯರು ಹೇಳಿದಾಗ ಹಾಗೇ ಮಾಡಿದೆ. …. ಇನ್ನು ಒಣಕೊಬ್ಬರಿ ಬಿಡಲ್ಲ, ಗಸಗಸೆ ತಗೊಂಡು ಹೋದರೆ ‘ಡ್ರಗ್’ ಅಂತ ಜೈಲಿಗೆ ಹಾಕಬಹುದು …. ಹಾಗಾದ್ರೆ ಬಾಣಂತಿಗೆ ಕೊಡಲು ಅಂಟಿನುಂಡೆ ಹೇಗೆ ಮಾಡಲಿ? ಅನ್ನುವ ಚಿಂತೆ. ನೂರುಗ್ರಾಂ ಗಿಂತ ಹೆಚ್ಚಿನ ದ್ರವ ಪದಾರ್ಥ ಬಿಡಲ್ಲ, ಹೆಚ್ಚಿನ ಮಾತ್ರೆ ತಗೊಂಡು ಹೋದರೆ ವೈದ್ಯರ ಚೀಟಿ ಕೇಳುತ್ತಾರೆ. ಮಗ ಖಡಕ್ಕಾಗಿ ಹೇಳಿದ್ದ ಇಲ್ಲಿ ವೈದ್ಯರ ಚೀಟಿ ಇಲ್ಲದೆ ಔಷಧಿ ಅಂಗಡಿಗಳಲ್ಲಿ ಯಾವ ಮಾತ್ರೇನೂ ಕೊಡಲ್ಲ ಅಂತ. ನೀನು ನಿತ್ಯ ತೆಗೆದುಕೊಳ್ಳುವ ಮಾತ್ರೆಗಳನ್ನು ತಪ್ಪದೇ ತಾ.
ಇನ್ನು ಬಹು ಪ್ರಮುಖವಾದ ಸಮಸ್ಯೆ – ಯಾವ ಸೀರೆ ಉಡಲಿ ಅಥವಾ ಚೂಡಿದಾರ ಹಾಕಲೇ? ಅಂತೂ ಹೆಣ್ಣಾಗಿ ಹುಟ್ಟಿದ ಮೇಲೆ ‘ಬ್ಯೂಟಿ ಪಾರ್ಲರ್’ ಭೇಟಿ ತಪ್ಪಿಸಲು ಸಾಧ್ಯವೇ- ಆಗ ತಾನೇ ಡ್ರೈಕ್ಲೀನಿಂಗ್ನಿಂದ ಬಂದ ಗರಿಗರಿಯಾದ ಸಿಲ್ಕ್ ಸೀರೆ ಉಟ್ಟು ವಿಮಾನ ನಿಲ್ದಾಣ ಪ್ರವೇಶಿಸಿದರೆ, ಅಲ್ಲಿ ಹೆಚ್ಚಿನ ಜನ ಕೆದರಿದ ಕೂದಲು, ಸುಕ್ಕು ಸುಕ್ಕಾದ ಉಡುಪು, ಮಂಡಿ ಹತ್ತಿರ ಹರಿದ ಜೀನ್ಸ್ – ಇವರೆಲ್ಲರನ್ನು ನೋಡಿ ನಾನು ದಂಗಾಗಿ ಹೋದೆ. ವಿಮಾನದಲ್ಲಿ ಪಯಣಿಸುವವರೆಲ್ಲಾ ‘ಮಾಡೆಲ್ಗಳಂತೆ’ ಇರುವವರು ಎಂಬ ಅನಿಸಿಕೆ ಶುದ್ಧ ಸುಳ್ಳಾಯಿತು.
ಇನ್ನು ಟ್ರಾಲಿಯಲ್ಲಿ ಸೂಟ್ಕೇಸ್ಗಳನ್ನು ಪೇರಿಸಿ ಅದನ್ನು ದೂಡುತ್ತಾ ವಿಮಾನ ನಿಲ್ದಾಣದ ಒಳಹೊಕ್ಕಾ ಬೀಳ್ಕೊಡಲು ಬಂದ ಪತಿದೇವರು ‘ಬೈ’ ಹೇಳುತ್ತಾ ಹಿಂದೆ ಸರಿದರು. ಬಸ್ಸ್ಟ್ಯಾಂಡ್ನಲ್ಲಿ, ರೈಲ್ವೆ ನಿಲ್ದಾಣದಲ್ಲಿ ಕೂಲಿಯವರ ಮೇಲೆ ಹೊರಿಸಿಕೊಂಡು ಬೀಗುತ್ತಾ ಹೋಗುವವರು ಇಲ್ಲಿ ತಮ್ಮ ತಮ್ಮ ಭಾರವಾದ ಲಗೇಜನ್ನು ತಾವೇ ಎಳೆಯುತ್ತಾ ಹೋಗುತ್ತಿದ್ದರು. ಮಕ್ಕಳನ್ನು ತಳ್ಳುಗಾಡಿಗಳಲ್ಲಿ ಕೂರಿಸಿದ್ದರು. ಕೆಲವರು ಹಸುಗೂಸುಗಳನ್ನು ನಮ್ಮೂರ ದೊಂಬರ ಹಾಗೆ ಕುತ್ತಿಗೆಗೆ ಒಂದು ನಮೂನೆ ಚೀಲದಲ್ಲಿ ಕಟ್ಟಿಕೊಂಡಿದ್ದರೆ, ಇನ್ನು ಕೆಲವರು ಮಕ್ಕಳನ್ನು ಹೆಗಲ ಮೇಲೆ ಕೂರಿಸಿ ಸಾಗುತ್ತಿದ್ದರು. ಹಳ್ಳಿಯ ಜಾತ್ರೆಗಳಲ್ಲಿ ಅಪ್ಪನ ಹೆಗಲ ಮೇಲೆ ಸವಾರಿ ಮಾಡುವ ಪೋರರ ನೆನಪಾಯಿತು.
ಇಮ್ಮಿಗ್ರೇಷನ್ನಲ್ಲಿ ಹಸ್ತ ಸಾಮುದ್ರಿಕೆ ನೋಡುವವರೆ ಹಾಗೆ ಎಲ್ಲ ಬೆರಳ ತುದಿಯ ಚಿತ್ರ, ಕಣ್ಣಿನ ಚಿತ್ರ, ಎಲ್ಲಾ ಪರೀಕ್ಷಿಸುವಾಗ, ‘ನಾನೇನು ಇವರ ಕಣ್ಣಿಗೆ ಆತಂಕವಾದಿಯ ಹಾಗೆ ಕಾಣುತ್ತೀನಾ.. !??’ ಎನ್ನುವ ಭಾವ ತೇಲಿತು. ಎಲ್ಲ ಬಗೆಯ ತಪಾಸಣೆ ನಂತರ ಒಂದು ಬಗೆಯ ಉಲ್ಲಾಸ ಮೂಡಿತು. ಬಾಯಾರಿಕೆ ಆಗಲು ನೀರು ಹುಡುಕಿ ಹೊರಟಾಗ ಕಂಡದ್ದು ನೀರಿನ ಚಿಲುಮೆ. ನೀರು ಕುಡಿಯುವ ಹೊತ್ತಿಗೆ ಮುಖ, ಮೈ ಎಲ್ಲ ಒದ್ದೆ- ಬಾಲ್ಯದಲ್ಲಿ ಬೊಗಸೆಯಲ್ಲಿ ನೀರು ತುಂಬಿ ಕುಡಿಯುತ್ತಿದ್ದುದು ನೆನಪಾಯಿತು. ಅಂತೂ ಇಂತೂ ವಿಮಾನ ಹತ್ತುವ ಸಮಯವಾಯಿತು. ಪ್ರಯಾಣಿಕರನ್ನು ಮುಗುಳ್ನಗೆಯಿಂದ ಸ್ವಾಗತಿಸಿದ ವಿಮಾನ ಸಿಬ್ಬಂದಿ, ಅಲ್ಲಿನ ಆಸನ ವ್ಯವಸ್ಥೆ ನೋಡಿ ಖುಷಿಯಾಯಿತು. ಆದರೆ ನನ್ನ ಸೀಟಿನ ನಂಬರ್ ಹುಡುಕುತ್ತಾ ಮುಂದೆ ಹೋದ ಹಾಗೆ ಸಂತಸದ ಬಲೂನು ಠುಸ್ಸೆಂದಿತು. ಕಾರಣ, ಮೊದಲು ನೋಡಿದ್ದ ಆಸನಗಳು ಮೊದಲನೇ ಮತ್ತು ಎರಡನೇ ತರಗತಿಯವು. ನನ್ನದು ಎಕಾನಮಿ ಕ್ಲಾಸ್ – ಬಹಳ ಇಕ್ಕಟ್ಟಾದ, ಚಿಕ್ಕದಾದ ಆಸನಗಳು. ಮುಂದಿನವರು ಸೀಟನ್ನು ಹಿಂದೆ ಬಾಗಿಸಿದಾಗ ನಾನು ಚಪ್ಪಟ್ಟೆ ಆಗುವುದೊಂದೇ ಬಾಕಿ. ಇನ್ನೂ ಹತ್ತು ಗಂಟೆಗಳ ಕಾಲ ಹೇಗಪ್ಪಾ ಈ ಸಂದಿಯಲ್ಲಿ ಕೂರೋದು ಅನ್ನೋ ಹೊತ್ತಿಗೆ ಇನ್ನೂ ಆತಂಕ ಹುಟ್ಟಿಸುವ ಪ್ರಕಟಣೆಗಳು – ಆಮ್ಲಜನಕ ಕಡಿಮೆಯಾದಾಗ ನಿಮ್ಮ ಸೀಟಿನ ಬಳಿ ಇರುವ ಮಾಸ್ಟ್ ಧರಿಸಿ, ನೀವು ಮೊದಲು ಮಾಸ್ಕ್ ಧರಿಸಿ, ನಂತರ ಬೇರೆಯವರ ನೆರವಿಗೆ ಧಾವಿಸಿ. ದಿಢೀರ್ ಅಂತ ವಿಮಾನ ನಿಲುಗಡೆ ಮಾಡುವ ಸಂದರ್ಭ ಬಂದಾಗ ಎಕ್ಸಿಟ್ ಅಂತ ಇರುವ ಕಡೆ ಹೋಗಿ ಹೊರಗಡೆ ಜಾರುವುದು ಹೇಗೆ – ಒಂದು ಪಕ್ಷ ನೀರಿನಲ್ಲಿ ಇಳಿದರೆ ಜಾಕೆಟ್ ಹಾಕಿ ಅದರಲ್ಲಿ ಗಾಳಿತುಂಬಿ ನೀರಲ್ಲಿ ತೇಲುವುದು ಹೇಗೆ – ಇಷ್ಟೆಲ್ಲಾ ರಿಸ್ಕ್ ಇರುವಂತಹ ಈ ವಿಮಾನದಲ್ಲಿ ಹೇಗಪ್ಪಾ ನನ್ನ ಪಯಣ? ಶಿವಾ ನನ್ನ ಕಾಪಾಡಪ್ಪಾ – ನಾನು ಕ್ಷೇಮವಾಗಿ ಲಂಡನ್ ತಲುಪಿದರೆ ನಿನಗೆ ರುದ್ರಾಭಿಷೇಕ ಮಾಡಿಸುವೆ ಎಂದು ಪ್ರಾರ್ಥಿಸಿದೆ. ವಿಮಾನ ಮೇಲೇರುವಾಗ ಉಂಟಾದ ಕಿವಿನೋವು ಈ ಪ್ರಕಟಣೆಗಳಿಂದ ಮಾಯವಾಯಿತು.
ನಿಧಾನವಾಗಿ ಅಕ್ಕಪಕ್ಕದವರನ್ನು ಪರಿಚಯಿಸಿಕೊಂಡು ಸ್ವಲ್ಪ ಆರಾಮವಾಗಿ ಕುಳಿತೆ. ಕಾಫಿ, ಟೀ, ಜ್ಯೂಸ್, ವೈನ್ ಅಂತ ಗಗನಸಖಿಯರು ಬಳಿ ಬಂದಾಗ ಇನ್ನೂ ಖುಷಿ ಆಯಿತು. ಆದರೆ ಸಕ್ಕರೆ, ಹಾಲಿಲ್ಲದ ಆ ಕಾಫಿ ಟೀ ಎಲ್ಲವನ್ನೂ ಬೆರೆಸಿಕೊಳ್ಳುವ ಹೊತ್ತಿಗೆ ನೀರು ನೀರಾದ ತಣ್ಣಗಾಗಿದ್ದ ಕಾಫಿಯನ್ನು ಕುಡಿಯಲಾರದೆ ಕುಡಿದೆ. ಅರ್ಧಗಂಟೆಯ ನಂತರ ಉಪಾಹಾರ ನೀಡಿದಾಗ ಅದೇನು ಅಂತ ಗೊತ್ತಾಗಲೇ ಇಲ್ಲ. ಬಿಸಿಬಿಸಿಯಾದ ದೋಸೆ ಮೇಲೆ ಸುರಿದ ಸಾಂಬಾರ್ (ಯಾವತ್ತೋ ತಂಗಳ ಪೆಟ್ಟಿಗೆಯಲ್ಲಿಟ್ಟು ಇಂದು ಬಿಸಿ ಮಾಡಿದ ಉಪಾಹಾರ) ಕೊನೆಗೆ ಅದರ ಜೊತೆ ಇದ್ದ ಮೊಸರು, ಹಣ್ಣಿನ ತುಂಡು ನನ್ನ ಹಸಿವನ್ನು ತಣಿಸಿತು. ಸ್ವಲ್ಪ ಹೊತ್ತಿನಲ್ಲಿ ಗಗನಸಖಿಯರು ಎಲ್ಲಾ ಕಿಟಕಿಗಳನ್ನು ಬಂದ್ ಮಾಡಿಸಿದರು. ಇನ್ನು ಎಲ್ಲೆಡೆ ಕತ್ತಲು, ಅವರವರ ಸೀಟಿಗೆ ಹೊಂದಿಕೊಂಡಂತಹ ಪುಟ್ಟ ಟಿ.ವಿ.ಗಳನ್ನು ನೋಡಬೇಕಷ್ಟೆ. ನಾನು ಅದರಲ್ಲಿ ವಿಮಾನ ಹಾರುತ್ತಿರುವ ಎತ್ತರ, ವೇಗ, ಗಾಳಿಯ ಒತ್ತಡ, ಯಾವ ಯಾವ ದೇಶದ ಮೇಲೆ ಹಾರುತ್ತಿದೆ ಅಂತೆಲ್ಲಾ ವಿವರಗಳನ್ನು ನೋಡುತ್ತಾ ಕುಳಿತೆ.
ಇನ್ನು ಟಾಯ್ಲೆಟ್ಗೆ ಹೋಗುವ ಅಂದರೆ …. ಬಾಗಿಲು ತೆರೆಯಲು ಬರಲೇ ಇಲ್ಲ …. ಅಲ್ಲೇ ಇದ್ದ ಒಬ್ಬ ಪುಣ್ಯಾತ್ಮ ನೆರವಿಗೆ ಬಂದ. ಇನ್ನು ಫ್ಲಷ್ ಮಾಡಿದಾಗ ಅದರ ಸದ್ದಿಗೆ ಗಾಬರಿಯಾಗಿ ಹೊರಗೋಡಿ ಬಂದೆ. ಈ ವಿಮಾನದ ಸಹವಾಸ ಸಾಕಪ್ಪಾ ಸಾಕು ಎಂದೆನಿಸಿತು. ಇನ್ನೂ 7, 8 ಗಂಟೆಗಳ ಕಾಲ ಪಯಣ. … ಅದೇ ಬಸ್ ಅಥವಾ ರೈಲಿನ ಪಯಣ ಆಗಿದ್ದಿದ್ದರೆ ಕಿಟಕಿಯಿಂದಾಚೆ ಕಾಣುವ ಬೆಟ್ಟಗುಡ್ಡಗಳು, ತೋಟ ಗದ್ದೆಗಳು, ಊರು ಕೇರಿ, ಜನ ಜಾನುವಾರು … ಅಲ್ಲಲ್ಲಿ ಇಳಿಯುವ, ಹತ್ತುವ ಪ್ರಯಾಣಿಕರು, ಹೊತ್ತು ಹೋಗಿದ್ದೇ ಗೊತ್ತಾಗುತ್ತಿರಲಿಲ್ಲ. ಮಸಾಲೆ ಮಂಡಕ್ಕಿ, ಮದ್ದೂರು ವಡೆ ಮೆಲ್ಲುತ್ತಾ, ಬಿಸಿ ಬಿಸಿ ಕಾಫಿ ಕುಡಿಯುತ್ತಾ, ಸಹಪ್ರಯಾಣಿಕರ ಜೊತೆ ಹರಟುತ್ತಾ ಊರು ಬಂದದ್ದೇ ತಿಳಿಯುತ್ತಿರಲಿಲ್ಲ.
ಹಾಗೇ ಮಂಪರು….. ವಿಮಾನ ಚಲಿಸುತ್ತಲೇ ಇಲ್ಲವೇನೋ ಅನ್ನುವ ಹಾಗೆ ಎನ್ನಿಸುತ್ತಿತ್ತು. ಇದ್ದಕ್ಕಿದ್ದಂತೆ ವಿಮಾನ ಜೋರಾಗಿ ಅಲುಗಾಡತೊಡಗಿತು. ಗಗನಸಖಿಯರು ಚುರುಕಾಗಿ ಓಡಾಡುತ್ತಾ ಎಲ್ಲರೂ ನಿಮ್ಮ ನಿಮ್ಮ ಸೀಟಿಗೆ ಹಿಂದಿರುಗಿ, ಬೆಲ್ಟ್ ಹಾಕಿಕೊಳ್ಳಿ – ಟರ್ಬುಲೆನ್ಸ್ – ಅಂತ ಪ್ರಕಟಣೆಯಲ್ಲಿ ತಿಳಿಸಿದರು. ಸ್ವಲ್ಪ ಹೊತ್ತಿನಲ್ಲಿ ವಿಮಾನ ಸಮಸ್ಥಿತಿಯಲ್ಲಿ ಹಾರಾಟ ಮಾಡಲಾರಂಭಿಸಿದಾಗ ಶಿವಧ್ಯಾನ ನಿಲ್ಲಿಸಿದೆ. ಶಿವನಿಗೂ ಸಾಕಾಗಿರಬೇಕು …… ನನ್ನ ಕರೆ ಕೇಳಿ ಕೇಳಿ. ನನಗೆ ನಿದ್ರೆ ಕರುಣಿಸಿದ. ಮತ್ತೆ ನಕ್ಷತ್ರಿಕರಂತೆ ಬಂದ ಗಗನಸಖಿಯರು ಊಟದ ಟ್ರೇ ನೀಡಲು ಆರಂಭಿಸಿದರು…. ಯಥಾ ಪ್ರಕಾರ ಮೊಸರು, ಜ್ಯೂಸ್ ಕುಡಿದು ಊಟದ ಶಾಸ್ತ್ರ ಮುಗಿಸಿ ನನ್ನ ಗಂಡನ ಜಾಣತನ ನೆನೆಸಿಕೊಂಡು ತಲೆದೂಗಿದೆ. ಸ್ನೇಹಿತರು, ಬಂಧು ಬಳಗದವರ ಶುಭಕಾರ್ಯಗಳಿಗೆ ಹೊರಟಾಗ ಎಲ್ಲ ಬಗೆಯ ಅಡ್ಡಿ ಮಾಡುವ ಪತಿರಾಯ ಈಗ ತುಂಬು ಹೃದಯದಿಂದ ‘ಹೋಗಿ ಬಾ’ ಎಂದು ಕಳುಹಿಸಿಕೊಟ್ಟಿದ್ದರ ಮರ್ಮ ಅರಿವಾಯಿತು. ವಿಮಾನ ಪಯಣದ ಪರಮಸುಖ ಅನುಭವಿಸಿದಾಗ ತಿಳಿಯಿತು. ಎತ್ತಿನ ಬಂಡಿ /ಜಟಕಾ ಪಯಣವೇ ಸೊಗಸು, ದೇಹಕ್ಕೆ ಚೈತನ್ಯ, ಲವಲವಿಕೆ ಮೂಡಿಸುವ, ಮನಸ್ಸಿಗೆ ಮುದ ನೀಡುವ ಆ ಪಯಣಗಳು ಸ್ವರ್ಗಸಮಾನ. ಬಾಲ್ಯದಲ್ಲಿ ವಿಮಾನದ ಸದ್ದಾದ ತಕ್ಷಣ ಹೊರಗೋಡಿ ಬಂದು ನೀಲ ಆಗಸದಲ್ಲಿ ಮೋಡಗಳ ಮಧ್ಯೆ ತೇಲುತ್ತಾ ಸಾಗುವ ವಿಮಾನಗಳನ್ನು ಕನಸು ಕಣ್ಗಳಿಂದ ನೋಡುತ್ತಿದ್ದೆ – ನನಗೂ ಹಾಗೆ ಹಕ್ಕಿಯ ಹಾಗೆ ವಿಮಾನದಲ್ಲಿ ಹಾರುವ ಅದೃಷ್ಟ ಒಲಿಯುವುದೇ ಎಂದು, ಇಂದು ಕನಸು ನನಸಾಗಿತ್ತು ಆದರೆ ರೆಕ್ಕೆ ಬಿಚ್ಚಿ ಹಾರುವ ಪಕ್ಷಿಯಂತೆ ಅಲ್ಲ- ಪುಕ್ಕ ಮುದುರಿ ಕುಳಿತ ಗುಬ್ಬಚ್ಚಿಯಂತೆ.
ಕೊನೆಗೂ ನನ್ನ ಪಯಣದ ಕೊನೆ ಬಂತು. ವಿಮಾನದ ಪ್ರವೇಶ ದ್ವಾರದಲ್ಲಿ ನಿಂತ ಗಗನಸಖಿಯರು ನಿಮ್ಮ ಪ್ರಯಾಣ ಸುಖಕರವಾಗಿತ್ತು ಎಂದು ಭಾವಿಸುತ್ತೇವೆ, ನಮ್ಮ ವಿಮಾನದಲ್ಲಿ ಪಯಣಿಸಿದ್ದಕ್ಕೆ ಧನ್ಯವಾದಗಳು ಎಂದಾಗ ‘ವಂದನೆಗಳು’ ಎಂದು ಹೇಳಿ ಹೊರಬಿದ್ದೆ. ಎಲ್ಲೆಡೆ ವಿವರವಾದ ಮಾರ್ಗಸೂಚಿ ಫಲಕಗಳು ಇದ್ದುದರಿಂದ ಯಾವುದೇ ಗಲಿಬಿಲಿ ಇಲ್ಲದೆ ಕ್ಯಾಬಿನ್ ಬ್ಯಾಗ್ ಎಳೆಯುತ್ತಾ ಸಾಗಿದೆ.
ಅಲ್ಲಿ ಪುನಃ ‘ಸೆಕ್ಯುರಿಟಿ ಚೆಕ್’ ಇತ್ತು. ಯಾವುದೇ ರಾಷ್ಟ್ರದಿಂದ ನಿರ್ಗಮಿಸುವ ನಿಲ್ದಾಣ ಅಥವಾ ಪ್ರವೇಶಿಸುವ ನಿಲ್ದಾಣದಲ್ಲಿ ಈ ‘ಸೆಕ್ಯುರಿಟಿ ಚೆಕ್’ ಇರುತ್ತದೆ. ಸ್ವೆಟರ್, ಶೂ, ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಂದು ಟ್ರೇಯಲ್ಲಿ ಇಟ್ಟು ತಪಾಸಣೆಗೆ ಒಡ್ಡುವರು. ನಾನು ಆ ದ್ವಾರದಲ್ಲಿ ಪ್ರವೇಶಿಸಿದಾಗ ಟೊಯ್.. . . ಟೊಯ್. . . . ಎಂಬ ಸಪ್ಪಳವಾದ್ದರಿಂದ ನನ್ನನ್ನು ಪಕ್ಕಕ್ಕೆ ನಿಲ್ಲಿಸಿ. . . . ಚಿನ್ನದ ಸರ, ಬಳೆ, ಬೆಳ್ಳಿ ಕರಡಿಗೆ ಎಲ್ಲ ತೆಗೆಸಿದರು. ನನಗೋ ಮಾಂಗಲ್ಯ ತೆಗೆದಿಡಲು ತುಂಬಾ ಮಾನಸಿಕ ವೇದನೆಯಾಯಿತು. ನಂತರ ನನ್ನ ಎಲ್ಲ ಆಭರಣಗಳನ್ನು ಟ್ರೇಯಲ್ಲಿ ನೋಡಿ ಸಮಾಧಾನವಾಯಿತು. ಅಲ್ಲಿಂದ ಇಮ್ಮಿಗ್ರೇಷನ್ ಕೌಂಟರ್ ಗೆ ಹೋಗಬೇಕು. ಭರ್ತಿ ಮಾಡಿದ್ದ ಲ್ಯಾಂಡಿಂಗ್s ಪಾಸ್ ನೀಡಿದೆ. ಮತ್ತೆ ಅದೇ ಪ್ರಶ್ನೆಗಳು ಎಲ್ಲಿಗೆ ಹೋಗುತ್ತಿರುವಿರಿ? ಉದ್ದೇಶ? ಅಲ್ಲಿ ಯಾರಿದ್ದಾರೆ? ಯಾವಾಗ ವಾಪಾಸ್ ಹೋಗುವಿರಿ? … ಒಂದೆಡೆ ಹಸಿವಿನಿಂದ ಕಂಗಾಲಾಗಿದ್ದೆ, ಇನ್ನೊಂದೆಡೆ – ‘ನೀವು ಯಾಕೆ ನಮ್ಮ ದೇಶಕ್ಕೆ ಬರುತ್ತಿದ್ದೀರಾ….? ಎನ್ನುವ ಪ್ರಶ್ನೆ. ಪುನಃ ಕೈ ಬೆರಳಿನ ಹಾಗೂ ಕಣ್ಣಿನ ಫೋಟೋಗಳನ್ನು ಕ್ಲಿಕ್ಕಿಸಿದರು. ಅಲ್ಲಿಂದ ನನ್ನ ಲಗೇಜ್ ಕಡೆಗೆ …. ಎಲ್ಲಾ ಸೂಟ್ಕೇಸ್ಗಳು ರೊಯ್ಯಂತ ಸುತ್ತುವ ಬೆಲ್ಟ್ ಮೇಲೆ ಬರುತ್ತಿರುತ್ತವೆ. ಆದರೆ ಎಲ್ಲವೂ ಕೆಂಪು / ಕಪ್ಪು / ಅಥವಾ ಕಡುನೀಲಿ. ನಾನು ಮೊದಲೇ ಮಿರಮಿರ ಮಿಂಚುವ ಕೆಂಪು ರಿಬ್ಬನ್ ಸುತ್ತಿದ್ದರಿಂದ ನನ್ನ ಸೂಟ್ಕೇಸ್ ಚಕ್ಕನೆ ಗುರುತಿಸಿದೆ. ಅದನ್ನು ಎಳೆದುಕೊಳ್ಳಲು ಒದ್ದಾಡುತ್ತಿರುವಾಗ, ಪಕ್ಕದಲ್ಲೇ ಇದ್ದವರು ನೆರವಿಗೆ ಬಂದರು. ಅವರಿಗೆ ವಂದನೆ ತಿಳಿಸಿ ಹೊರಬಂದೆ. ಹೊರಗೆ ನನಗಾಗಿ ಕಾಯುತ್ತಿದ್ದ ಮಗನನ್ನು ನೋಡಿ ಪುರ್ನಜನ್ಮ ಬಂದಂತಾಯಿತು. ಆ ವಿಶಾಲವಾದ ವಿಮಾನ ನಿಲ್ದಾಣ, ಎಲ್ಲ ವರ್ಣದ ಜನರು ಹಲವು ಭಾಷೆಗಳ ಮಾತಾಡುತ್ತಾ ಸಾಗುತ್ತಿದ್ದ ಪ್ರಯಾಣಿಕರು ಎಲ್ಲವನ್ನೂ ಬೆರಗಿನಿಂದ ನೋಡಿದೆ.
ಲಂಡನ್ – ಯುಕೆಯ ರಾಜಧಾನಿ. ಈ ಪುಟ್ಟ ದೇಶ ಹೇಗೆ ಎಲ್ಲಾ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡಿ ತನ್ನ ಮುಷ್ಟಿಯಲ್ಲಿರಿಸಿಕೊಂಡಿತು? ವ್ಯಾಪಾರಿಗಳಾಗಿ ಬಂದವರು ಎಷ್ಟು ದೇಶಗಳ ಮೇಲೆ ತಮ್ಮ ಅಧಿಕಾರ ಸ್ಥಾಪಿಸಿದರು? ಹೇಗೆ ಎಲ್ಲರನ್ನೂ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ದಾಸ್ಯದಲ್ಲಿ ಬಂಧಿಸಿದರು? ಜೊತೆಜೊತೆಗೇ ಸಾಕಷ್ಟು ಜನರನ್ನು ಕ್ರಿಶ್ಚಿಯನ್ನರಾಗಿ ಮತಾಂತರಿಸಿದರು. ತಮ್ಮ ದೇಶವನ್ನು ‘ಗ್ರೇಟ್ ಬ್ರಿಟನ್, ಎಂದೂ ಸೂರ್ಯ ಅಸ್ತಮಿಸದ ರಾಜ್ಯ’ ಘೋಷಿಸಿದರು. ಅವರ ಅಧಿಕಾರ ದಾಹಕ್ಕೆ ಸಾಕ್ಷಿಯಾಗಿ ‘ರೇವನ್’ ಎನ್ನುವ ಪಕ್ಷಿ ಅವರ ಕೋಟೆಯ ಮ್ಯೂಸಿಯಂ ನಲ್ಲಿದೆ. ಅದಕ್ಕೆ ನಿತ್ಯ ಶತೃಗಳ ಬಿಸಿಯಾದ ರಕ್ತ ಉಣಿಸುತ್ತಿದ್ದರಂತೆ. ‘ರೇವನ್’ ಪಕ್ಷಿಯ ಸಂತತಿ ಕ್ಷೀಣಿಸಿದರೆ ಅದು ಅವರ ಅವನತಿಯ ಕುರುಹು ಎಂದು ಅವರ ನಂಬಿಕೆ. ಅಲ್ಲಿರುವ ‘ಕೊಹಿನೂರು ವಜ್ರ’ದ ಮುಂದೆ ಭಾರತದ ಚಕ್ರವರ್ತಿಯ ಉಡುಗೊರೆ ಎಂಬ ಉಲ್ಲೇಖ ಕಾಣಿಸಿತು. ನನ್ನ ಮಗ – ಇದು ಟ್ರಾಫಲ್ಘರ್ ಸ್ಕ್ವೇರ್, ಗ್ಲೋಬ್ ಥಿಯೇಟರ್, ಟವರ್ ಬ್ರಿಡ್ಜ್, ಲಂಡನ್ ಐ, ಬಕಿಂಗ್ ಹ್ಯಾಮ್ ಅರಮನೆ – ಅಂತೆಲ್ಲಾ ವಿವರಣೆ ನೀಡುತ್ತಾ ಈ ಭವ್ಯವಾದ, ಸುಂದರವಾದ ಸ್ವಚ್ಛವಾದ ನಗರವನ್ನು ಹೆಮ್ಮೆಯಿಂದ ತೋರಿಸುತ್ತಾ ಸಾಗಿದಾಗ… ನನ್ನ ಮನದಲ್ಲಿ ದ್ವಂದ್ವ ನಡೆದಿತ್ತು. ನಮ್ಮ ಸಂಪತ್ತನ್ನೆಲ್ಲಾ ದೋಚಿದ ಬಿಳಿದೊರೆಗಳು ಕಟ್ಟಿರುವ ಸಾಮ್ರಾಜ್ಯ . …
ಆದರೆ ಹೇಗೆ ಹೇಳಲಿ ಮಗನಿಗೆ…ನಾನು ಬಂದಿದ್ದು -ನಿನ್ನನ್ನು ಕಾಣಲು, ಹುಟ್ಟಲಿರುವ ಮೊಮ್ಮಗನನ್ನು ಮುದ್ದಾಡಲು – ಈ ಭವ್ಯವಾದ ನಗರ ನೋಡಿ ನನಗೇನೂ ಅನಿಸುತ್ತಲೇ ಇಲ್ಲ. ನಾನು ‘ಐ ಎ ಎಸ್’ ಆಗಲು ಕಾತರಿಸುತ್ತಿದ್ದೆ. ಆದರೆ ಒಂದು ಬದಲಾವಣೆ — ವಿದೇಶಿಗರ ಭಾವನೆಯಂತೆ ‘Indian Ayah Service’ ಅಲ್ಲವೇ ಅಲ್ಲ, ನಾನು ನಮ್ಮ ಬದುಕಿನ ಸಾರ್ಥಕತೆಯ ಕ್ಷಣ ಇದನ್ನು ‘Indian Ajji Service’ ‘ ಎನ್ನಬಹುದೇನೋ, ಏನಂತೀರಾ ……
–ಡಾ.ಗಾಯತ್ರಿ ಸಜ್ಜನ್, ಶಿವಮೊಗ್ಗ
ಸೂಪರ್ ಹಾಸ್ಯ ಬರಹ….. ‘ಹೀಗೂ’ ಐ.ಎ.ಎಸ್ ಪದವಿ ಸಿಗುತ್ತದೆ ಅಂತ ತಿಳಿಸಿದ್ದಕ್ಕೆ ಧನ್ಯವಾದಗಳು…
ನಾನು ಐ.ಎ.ಎಸ್.ಆದಾಗ ಲೇಖನ ಬಹಳ ಅರ್ಥಪೂರ್ಣ ವಾಗಿದೆ.ವಿದೇಶಕ್ಕೆ ಹೋಗಲು ಬೇಕಾದ ತಯಾರಿ ಆಗ ಅದು ಮಾನಸಿಕ ಕಸಿವಿಸಿ ನಂತರ ವಿಮಾನ ನಿಲ್ದಾಣ ದ ಚಿತ್ರ ತದನಂತರ ವಿಮಾನ ಯಾನ ದ ಅನುಭವ ವಿದೇಶೀಯರು ನಮ್ಮ ದೇಶದ ಮೇಲೆ ಸಾಧಿಸಿದ ಹಿಡಿತ ವಾವ್ ಎಲ್ಲಾ ವಿಷಯಗಳು ಮೇಳೈಸಿದೆ ಅಭಿನಂದನೆಗಳು ಮೇಡಂ.
ಸೊಗಸಾಗಿದೆ. ಕೂತಲ್ಲೇ ವಿದೇಶ ಪ್ರಯಾಣದ ಸಿದ್ಧತೆ, ಏರ್ಪೋರ್ಟ್ ಅಲ್ಲಿ ಅನುಸರಿಸಬೇಕಾದ ನಿಯಮಗಳು, ಕ್ರಮಗಳನ್ನು,ತಿಳಿದುಕೊಳ್ಳುವಂತಾಯಿತು. ಹಾಸ್ಯದ ಮೂಲಕ ವಿವರಿಸಿದ ರೀತಿ ಇಷ್ಟವಾಯಿತು.
ತಮ್ಮ ಲಂಡನ್ ಪ್ರಯಾಣದ ತಿಳಿಹಾಸ್ಯ ಭರಿತ ನಿರೂಪಣೆ ಬಹಳ ಇಷ್ಟವಾಯ್ತು. ನಾನು ಅಮೇರಿಕಾಕ್ಕೆ ಹೋದ ಘಟನೆಗಳು ನೆನಪಾಗಿ ನಗುಬಂತು. ಸೊಗಸಾದ ಬರಹ..ಧನ್ಯವಾದಗಳು ಮೇಡಂ.
ತುಂಬಾ ತುಂಬಾ ಚೆನ್ನಾಗಿದೆ..ಯಾವುದೇ ತಡೆ ಇಲ್ಲದೆ, ತಮ್ಮ ಮನಸ್ಸಿಗೆ ಅನಿಸಿದ ಭಾವನೆಗಳನ್ನು ತಿಳಿ ಹಾಸ್ಯ ಬೆರೆಸಿ, ಪ್ರಸ್ತುತ ಪಡಿಸಿದ ರೀತಿ ಸೂಪರ್….
ಒಳ್ಳೆಯ ಪ್ರಬಂಧ. ಮೇಡಂ ನೀವು ವಿವರಿಸಿದ ವಿವರಗಳೆಲ್ಲ ಸ್ವಾನುಭವದಂತೆ ಅನಿಸಿತು.ಸೂಪರ್ ಲೇಖನ.
ತುಂಬಾ ಚೆನ್ನಾಗಿತ್ತು