ದರ್ವಾಜಾ ಅನಿಲ ಕುಳಿ – ದಡೋರ್‌ಟು ಹೆಲ್

Share Button

ದರ್ವಾಜ ಅನಿಲ ಕುಳಿ ಇರುವುದು ತುರ್‍ಕ್ಮೇನಿಸ್ಥಾನದಲ್ಲಿ. ಸ್ಥಳೀಯವಾಗಿ ಇದನ್ನು ದಡೋರ್‌ಟು ಹೆಲ್ ಅಥವಾ ಗೇಟ್ಸ್‌ ಆಫ್ ಹೆಲ್ ಎಂಥಲೂ ಕರೆಯುತ್ತಾರೆ.ನರಕದ ಹೆಬ್ಬಾಗಿಲು‌ ಅನ್ನುವುದು‌ ಇದರರ್ಥ.ಅಷ್ಟು ಭಯಾನಕ‌ ಇದು.ಈ ಭೂಗತ ಗುಹೆಯು ನೈಸರ್ಗಿಕ ಅನಿಲದ‌ ಆಗರ. ಭೂ ವಿಜ್ಞಾನಿಗಳು ಉದ್ದೇಶ ಪೂರ್ವಕವಾಗಿ‌ ಇಲ್ಲಿಂದ ಹೊರ ಹೊಮ್ಮುವ ಮೀಥೇನ್ ಅನಿಲ ಗಾಳಿಯಲ್ಲಿ ಬೆರೆತು ಸುತ್ತ ಮುತ್ತಲಿನ ಪ್ರದೇಶಗಳಿಗೆ ಹರಡುವುದನ್ನು ತಡೆಗಟ್ಟಲು ಬೆಂಕಿ ಹಚ್ಚುವ ಕ್ರಮ ಕೈಗೊಂಡರು. ಇದರಿಂದ ಪರಿಸರಕ್ಕಾಗಲಿ, ಸುತ್ತ ಮುತ್ತು ವಾಸಿಸುವವರಿಗಾಗಲಿ ಆಗಬಹುದಾಗಿದ್ದ ತೊಂದರೆಯನ್ನು ಶಾಶ್ವತವಾಗಿ ತಪ್ಪಿಸಲು ಈ ಕ್ರಮ‌ ಅಗತ್ಯವಾಗಿತ್ತು. 1971 ರಿಂದ ಇಲ್ಲಿಂದ ಹೊರಹೊಮ್ಮುತ್ತಿರುವ ಮೀಥೇನ್ ಅನಿಲ ನಿರಂತರವಾಗಿ ‌ಉರಿಯುತ್ತಿದೆ.ಈ ಅನಿಲ ಕುಳಿಯ ಒಟ್ಟು ವಿಸ್ತೀರ್ಣ 5350 ಚದರ ಮೀಟರ್.

ಈ ಅನಿಲ ಕುಳಿ ಇರುವುದು ಕರಕುರಮ್ ಮರುಭೂಮಿಯ ಮಧ್ಯದಲ್ಲಿ. ತುರ್‍ಕ್ಮೇನಿಸ್ಥಾನದ ರಾಜಧಾನಿ ಅಶ್ಗಾಬತ್‌ನಿಂದ‌ ಉತ್ತರಕ್ಕೆ‌ ಎರೆಡು ನೂರಾ ‌ಅರವತ್ತು ಕಿಲೋಮೀಟರ್‌ ದೂರದಲ್ಲಿ. ಕರಕಕುರಮ್ ಮರಭೂಮಿಯಲ್ಲಿ ಕಂಡು ಬಂದ ಈ ಅನಿಲ ನಿಕ್ಷೇಪ ವಿಶ್ವದಲ್ಲೇ ‌ಅತಿ ದೊಡ್ಡದು‌ ಎಂದು ಪರಿಗಣಿಸಲಾಗಿದೆ.  ಸ್ಥಳೀಯರಿಂದ ನರಕದ ಹೆಬ್ಬಾಗಿಲು ಎನಿಸಿಕೊಂಡಿರುವ ಈ ಕುಳಿಯ ವ್ಯಾಸ ‌ಎಪ್ಪತ್ತು ಮೀಟರ್‌ನಷ್ಟಿದೆ.ಇದರಲ್ಲಿ ಬೆಂಕಿಯ ಜ್ವಾಲೆ‌ ಅರವತ್ತು ಮೀಟರ್‌ನಷ್ಟು ವ್ಯಾಸ ಹಾಗೂ ‌ಅರವತ್ತಾರು ಮೀಟರ್‌ನಷ್ಟು ಆಳವಿರುವ ಪ್ರದೇಶದ ತುಂಬಾವ್ಯಾಪಿಸಿದೆ.

ಈ ತಾಣವನ್ನು ಸೋವಿಯತ್ ಇಂಜಿನಿಯರುಗಳು 1971 ರಲ್ಲಿ ಗುರುತಿಸಿದ್ದರು ಎಂದು ತುರ್‍ಕ್ಮೇನಿಸ್ಥಾನದ ಭೂವಿಜ್ಞಾನಿ ಅನಾಟೊಲಿ ಬುಷ್ಮಾಕಿನ್‌ ದಾಖಲಿಸುತ್ತಾರೆ. ಆ ಇಂಜಿನಿಯರುಗಳ ಪ್ರಕಾರ‌ ಇದು‌ ಅತ್ಯಂತ ಪ್ರಶಸ್ತ ಗಣನೀಯ ತೈಲ ನಿಕ್ಷೇಪದ ಕ್ಷೇತ್ರ‌ ಎಂದು ಭಾವಿಸಲಾಗಿತ್ತು. ಅವರುಗಳು ಈ ಕ್ಷೇತ್ರದಲ್ಲಿ ಲಭ್ಯವಿರುವ ತೈಲದ ಪ್ರಮಾಣವನ್ನು‌ಅಂದಾಜಿಸಲು ಭೂಮಿಯನ್ನು ರಿಗ್ಗಳ ಮೂಲಕ ಕೊರೆಯುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಭೂಮಿಯನ್ನು ಕೊರೆಯಲು ಪ್ರಾಥಮಿಕವಾಗಿ ಪ್ರಾರಂಭಿಸಿದ ಕೂಡಲೇ, ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆಯಾಯಿತು.ಭೂಮಿಯನ್ನು ಕೊರೆದ ಕಾರಣ ಅನಿಲ ಹೊರಬಂದು, ಅದರ‌ ಅಡಿಯಲ್ಲಿದ್ದ ಭೂ ಪ್ರದೇಶ ಕುಸಿಯಿತು. ಕೊರೆಯುವರಿಗ್ ಮತ್ತು‌ ಅದರ ಉಪಕರಣಗಳನ್ನು ಶೇಖರಿಸಿಟ್ಟುಕೊಳ್ಳಲು ನಿರ್ಮಿಸಿದ್ದ ಡೇರೆಗಳು ಸಹ ಅದರ ಜೊತೆ ಪಾತಾಳ ಸೇರಿ ಸಮಾಧಿಯಾಯಿತು.

ಕುಳಿಯಂದ ಹೊರ ಹೊಮ್ಮಿದ ವಿಷಕಾರಿ ಅನಿಲಗಳಿಂದ ಹತ್ತಿರದ ಸುತ್ತಮುತ್ತಲಿನ ಹಳ್ಳಿ ಮತ್ತು ಪಟ್ಟಣಗಳಲ್ಲಿ ಜೀವಿಸುವುದು ಕಷ್ಟ ಎಂದು ನಿರೀಕ್ಷಿಸಿದ ಇಂಜಿನಿಯರುಗಳು, ಅನಿಲಕ್ಕೆ ಬೆಂಕಿ ಹಚ್ಚುವುದೇ ಲೇಸೆಂಬುದು‌ ಅವರ ಅನಿಸಿಕೆಯಾಗಿತ್ತು. ಅವರುಗಳ ಅಂದಾಜಿನ ಪ್ರಕಾರ‌ಅಲ್ಲಿ ಶೇಕರಣೆಯಾಗಿರುವ ಅನಿಲ ಕೆಲವೇ ವಾರಗಳಲ್ಲಿ ಪೂರ್ಣವಾಗಿ‌ ಉರಿದು ಖಾಲಿಯಾಗುತ್ತದೆ, ನಂತರ ತಮ್ಮ ಮುಂದಿನ ಕೆಲಸವನ್ನು ಸರಾಗವಾಗಿ ನಡೆಸಬಹುದು‌ ಎಂದು ಭಾವಿಸಿದ್ದರು. ಆದರೆ, ಅಂದು ಹಚ್ಚಿದ ಕಿಡಿ, ಇಂದಿಗೂ, ಅಂದರೆ ಹೆಚೂ ಕಡಿಮೆ ‌ಐದು ದಶಕಗಳು ಭಯಂಕರ ಜ್ವಾಲೆಯಾಗಿ ‌ಉರಿಯುತ್ತಲೇ‌ ಇರುವುದು ವಿಪರ್ಯಾಸ.

ಹಲವು ಭೂ ವಿಜ್ಞಾನಿಗಳು ಈ ಕುಳಿಯ ಆರಂಭಿಕ‌ ಇತಿಹಾಸದ ಬಗ್ಗೆ ತಮ್ಮ ಅನಿಸಿಕೆಗಳಲ್ಲಿ ಅಲ್ಲೆಗೆಳೆದಿದ್ದಾರೆ. ಸ್ಥಳೀಯ ಭೂ ವಿಜ್ಞಾನಿಗಳು, 1960 ರ ದಶಕದಲ್ಲೇ ಭೂ ಕುಸಿತದಿಂದ ಈ ಕುಳಿ ಉಂಟಾಗಿತ್ತು. ನಂತರ‌ ಎರ‌ಡು ದಶಕಗಳವರೆಗೆ, ಅಂದರೆ 1980 ರವರೆಗೂ ಇಲ್ಲಿಂದ ಹೊರ ಹೊಮ್ಮುತ್ತಿರುವ ಅನಿಲಕ್ಕೆ ಬೆಂಕಿ ಹಚ್ಚಿರಲಿಲ್ಲ ಎಂದು ವಾದಿಸುತ್ತಾರೆ. ಯಾವುದು ಸತ್ಯ ಯಾವುದು ಮಿಥ್ಯ‌ ಎಂದು‌ ಅರಿಯಲು, ಸೋವಿಯತ್ ನವರ‌ ಅನಿಸಿಕೆಗಾಗಲಿ, ತುರ್‍ಕ್ಮೇನಿಸ್ಥಾನದವರ ಹೇಳಿಕೆಗಾಗಲಿ ಯಾವುದೇ ದಾಖಲೆಗಳು ಲಭ್ಯವಿಲ್ಲ.

ಈ ಕುಳಿಯಲ್ಲಿ ಹತ್ತಿ‌ಉರಿಯುತ್ತಿರುವ ಬೆಂಕಿಗೆ ಆಹಾರವಾದ ಅನಿಲದ ಪ್ರಾಮಾಣ‌ ಎಷ್ಟಿರಬಹುದು?  ಎಂದು ‌ಅಂದಾಜಿಸಲು ತುರ್‍ಕ್ಮೇನಿಸ್ಥಾನದ ಭೂವಿಜ್ಞಾನಿಗಳಾಗಲಿ, ಇಂಜಿನಿಯರುಗಳಾಗಲಿ ಪ್ರಯತ್ನಿಸಿಲ್ಲ.

ಏಪ್ರಿಲ್,  2010 ರಲ್ಲಿ ತುರ್‍ಕ್ಮೇನಿಸ್ಥಾನದ ‌ಅದ್ಯಕ್ಷರಾದ ಗುರ್ಬಾಂಗಿಲಿ ಬರ್ಡಿಮುಹಮೆಡೋ ‌ಇಲ್ಲಿಗೆ ಭೇಟಿ ನೀಡಿದ್ದಾಗ, ಈ ಕುಳಿಯಲ್ಲಿ ಉರಿಯುತ್ತಿರುವ ಬೆಂಕಿ, ಇದರ ಹತ್ತಿರ‌ ಇರುವ ತೈಲ ಮತ್ತು ಅನಿಲ ನಿಕ್ಷೇಪ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಧಕ್ಕೆ ತರುತ್ತದೆ ಎಂಬ ಕಾರಣದಿಂದ ಕುಳಿಯನ್ನು ಮುಚ್ಚಲು ಯೋಜನೆಯನ್ನು ತಯಾರಿಸುವಂತೆ ಸ್ಥಳೀಯ ಅಧಿಕಾರಗಳಿಗೆ ಆದೇಶಕೊಟ್ಟಿದ್ದರು. ಇದು ಕಾರ್ಯಗತವಾಗದ ಕಾರಣ 2013 ರಲ್ಲಿ ಕರಕುರಮ್ ಮರುಭೂಮಿಯಲ್ಲಿನ ಕುಳಿಯಿರುವ ಈ ಪ್ರದೇಶವನ್ನು ನೈಸರ್ಗಿಕ ಮೀಸಲು ಕ್ಷೇತ್ರ‌ ಎಂದು ಘೋಷಿಸಲಾಯಿತು.

ಈ ಕುಳಿ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಲಿದೆ‌ ಎಂದು ತುರ್ಕಮೆನ್ ಸರ್ಕಾರ ಆಶಿಸಿದೆ. ಇದರ ಸುತ್ತ ಮುತ್ತಲಿನ ಪ್ರದೇಶವು ಮರುಭೂಮಿಯಲ್ಲಿ ಬೀಡುಬಿಡಲು ಪ್ರಶಸ್ತ ಸ್ಥಳವಾಗಿದೆ.

-ಕೆ.ವಿ.ಶಶಿಧರ

(ಚಿತ್ರಕೃಪೆ: ಅಂತರ್ಜಾಲ)

4 Responses

  1. ಬಿ.ಆರ್.ನಾಗರತ್ನ says:

    ಮಹತ್ವದ ಮಾಹಿತಿ ಚೆನ್ನಾಗಿ ಮೂಡಿ ಬಂದಿದೆ.ಅಭಿನಂದನೆಗಳು ಸಾರ್.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ ಸರ್. ಮಾಹಿತಿ ಪೂರ್ಣ ಬರಹ.

  3. ASHA nooji says:

    SUPER

  4. ಶಂಕರಿ ಶರ್ಮ says:

    ವಿಶೇಷ ಮಾಹಿತಿಯನ್ನೊಳಗೊಂಡ ಲೇಖನ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: