ಉಪ್ಪಿನಕಾಯಿಯ ಭರಣಿಯೊಳಗಿಂದ…
ನನ್ನ ಬಾಲ್ಯದ ನೆನಪಿನ ಉಪ್ಪಿನಕಾಯಿಯ ಭರಣಿಯನ್ನು ನಿಮ್ಮ ಮುಂದೆ ತಂದಿದ್ದೇನೆ. 1980-85 ಕಾಲ ಅದು. ಕೇರಳದ ಕರಾವಳಿಯ ಕಾಸರಗೋಡಿನ ಕುಂಬಳೆ ಎಂಬ ಹಳ್ಳಿಯ ಗ್ರಾಮೀಣ ಬದುಕಿನ ಚಿತ್ರಣವಿದು. ಪಶ್ಚಿಮ ಕರಾವಳಿಯ ಗಾಳಿಗೆ ತಲೆದೂಗುವ ತೆಂಗು-ಕಂಗು ಬೆಳೆಗಳ ತೋಟ ಹಾಗೂ ಗುಡ್ಡ ಬೆಟ್ಟಗಳ ನಡುವೆ ಅಲ್ಲಲ್ಲಿ ಕಾಣಿಸುವ, ಮಂಗಳೂರು ಹೆಂಚು ಹೊದಿಸಿದ ಒಂಟಿಮನೆಗಳು. ಆ ಮನೆಗಳಿಗೆ ಹೊಂದಿಕೊಂಡಂತೆ ಇರುವ ಕಾಡಿನಲ್ಲಿ ತರಾವರಿ ಸಸ್ಯ ಸಿರಿ. ಸಾಮಾನ್ಯವಾಗಿ ಮಾರ್ಚ್ ತಿಂಗಳ ಆರಂಭದಲ್ಲಿ, ಆ ಕಾಡಿನ ಮರಗಳನ್ನು ಸೋಕಿ ಬರುವ ಗಾಳಿಯು ಮಾವಿನ ಹೂಗಳ ವಿಶಿಷ್ಟ ನರುಗಂಪನ್ನು ಹೊತ್ತು ಮನೆಯಂಗಳದಲ್ಲಿ ಸುಳಿದಾಡಿ, ಕಾಡಿನಲ್ಲಿ ಮಾವಿನ ಹೂ ಬಿಟ್ಟಿದೆ ಎಂಬ ಸಂದೇಶವನ್ನು ಮನೆಯ ಗೃಹಿಣಿಯರಿಗೆ ರವಾನಿಸುತ್ತಿತ್ತು.
ಆಮೇಲೆ ಅಜ್ಜಿ, ಅಮ್ಮ, ಚಿಕ್ಕಮ್ಮ ‘ ಓಹೋ ಕಾಡಲ್ಲಿ ಮಾವಿನ ಹೂ ಬಿಟ್ಟಿದೆ….ಹೋಗಿ ನೋಡಬೇಕು..ಮಿಡಿ ಉಪ್ಪಿನಕಾಯಿಗೆ ಸಿದ್ಧತೆ ಮಾಡಬೇಕು’ ಅಂತ ಚರ್ಚಿಸಲಾರಂಭಿಸುತ್ತಿದರು. ಮುಂದಿನ ಕೆಲವು ದಿನಗಳ ವರೆಗೆ ಆಗಾಗ ಕಾಡಿನಲ್ಲಿ ಸುತ್ತು ಹಾಕುತ್ತಾ, ಯಾವ ಮಾವಿನ ಮರದಲ್ಲಿ ಹೂ ಬಿಟ್ಟಿದೆ,ಎಷ್ಟು ಮಿಡಿ ಸಿಗಬಹುದು? ಗಾತ್ರ ಈಗ ಕಡಲೇ ಕಾಳಿನಷ್ಟಿದ್ದರೆ ಇನ್ನೆರಡು ವಾರದಲ್ಲಿ ಮಿಡಿ ಉಪ್ಪಿನಕಾಯಿಗೆ ಹದವಾಗಿ ಬೆಳೆಯಬಹುದು, ಮಿಡಿ ಕೊಯ್ಯುವ ಆಳಿಗೆ ಹೇಳಿ ಕಳುಹಿಸಬೇಕು, ಎತ್ತರದ ಮಾವಿನ ಮರವನ್ನೇರಲು ಏಣಿ ತರಿಸಬೇಕು. ಮಿಡಿ ಮಾವನ್ನು ನೆಲಕ್ಕೆ ಬೀಳದಂತೆ ಜೋಪಾನವಾಗಿ ಕೆಳಗಿಳಿಸಬೇಕು. (ಮರದಲ್ಲಿಯೇ ಗೊಂಚಲುಗಳನ್ನು ಕಿತ್ತು, ಬುಟ್ಟಿಯಲ್ಲಿ ಹಾಕಿ, ಬುಟ್ಟಿಗೆ ಹಗ್ಗ ಕಟ್ಟಿ ನೆಲಕ್ಕಿಳಿಸುವ ಪದ್ಧತಿ. ಕಾರಣ ನೆಲಕ್ಕೆ ಬಿದ್ದು ಜಜ್ಜಿಹೋದ ಮಿಡಿಗಳನ್ನು ಬಳಸಿದರೆ ಉಪ್ಪಿನಕಾಯಿ ಬೇಗನೇ ಕೆಡುತ್ತದೆ).
ಫೆಬ್ರವರಿ-ಮಾರ್ಚ್ ತಿಂಗಳ ಸಮಯದಲ್ಲಿ ಅಕ್ಕಪಕ್ಕದ ಮಹಿಳೆಯರು, ನೆಂಟರುಗಳು ಭೇಟಿಯಾದಾಗ ಕೇಳುವ ಕುಶಲೋಪರಿಯಲ್ಲಿ ಮಿಡಿಮಾವಿನಕಾಯಿಗೆ ಪ್ರಾಶಸ್ತ್ಯವಿರುತ್ತದೆ.
‘ನಿಮಗೆ ಮಿಡಿ ಉಪ್ಪಿನ್ಕಾಯಿ ಹಾಕಿ ಆಯಿತಾ’
‘ಇಲ್ಲ, ಇನ್ನೂ ಮಿಡಿ ಬೆಳೆದಿಲ್ಲ’
‘ನಮ್ಮಲ್ಲಿ ಈ ವರ್ಷ ಗೋಮಾವು ಬೆಳೆದಿದೆ…ಕಡಿಭಾಗ/ಕೆತ್ತೆ ಉಪ್ಪಿನಕಾಯಿ (ಮಾವಿನ ಹೋಳು ಉಪ್ಪಿನಕಾಯಿಗಳ ವೈವಿಧ್ಯ) ಹಾಕುಲೆ ಅಡ್ಡಿ ಇಲ್ಲ..ಮಿಡಿಗೆ ಆಗದು’
‘ಆ ಮರದ ಮಿಡಿ ಉಪ್ಪಿನ್ಕಾಯಿಗೆ ಬಲು ರುಚಿ ..ಆದರೆ ಎತ್ತರದಲ್ಲಿ ಇರುವುದು…ಕೊಯ್ಯುವುದು ದೊಡ್ಡ ಸಾಹಸ…ಮರದ ತುಂಬಾ ಕೆಂಜುಗ (ಇರುವೆ ಜಾತಿ..ಕಡಿದರೆ ತುಂಬಾ ಉರಿಯುತ್ತದೆ)..’
‘ಈ ಬಾರಿ ಮಾವಿನ ಹೂ ಬಿಟ್ಟಿದ್ದೇ ಕಡಿಮೆ…ಅಮೇಲೆ ಮೋಡ ಇತ್ತಲ್ಲಾ..ಹೂ ಕರಟಿ ಹೋಗಿದೆ’
‘ನಮ್ಮ ಕಾಡಲ್ಲಿ ಮಾವಿನ ಮಿಡಿ ಒಳ್ಳೆ ಬೆಳೆ..ನಾಳೆ ಕೊಯ್ಯಿಸುತ್ತೇವೆ…ನಿಮಗೆ ಸಿಕ್ಕಿಲ್ವಾ. ನಮ್ಮನೆ ಕಡೆಗೆ ನಾಳೆ-ನಾಡಿದ್ದು ಬನ್ನಿ.. ಸ್ವಲ್ಪ ಮಿಡಿ ತೆಕ್ಕೊಂಡು ಹೋಗುವಿರಂತೆ’
ಇತ್ಯಾದಿ ಸ್ನೇಹಾಚಾರದ ಮಾತುಗಳು, ಕೊಡು ಕೊಳ್ಳುವಿಕೆಗಳು, ಮರಗಳ ಗುಣಾವಗುಣಗಳ ವಿಶ್ಲೇಷಣೆಯೊಂದಿಗೆ, ಒಂದು ದಿನ ಮಾವಿನ ಮಿಡಿ ಕೊಯ್ಯಲು ಸ್ಪೆಷಲಿಸ್ಟ್ ಆಗಿರುವವರು ಬಂದು ಮರ ಹತ್ತುತ್ತಾರೆ. ಮರ ಹತ್ತುವಾಗ ತನ್ನ ಸೊಂಟಕ್ಕೆ ಹಗ್ಗವನ್ನು ಕಟ್ಟಿಕೊಂಡಿರುತ್ತಾರೆ.ಅವರು ಮರದ ಮೇಲೆ ಹೋಗಿ ಕೊಂಬೆಯೊಂದರಲ್ಲಿ ಕುಳಿತ ಮೇಲೆ ಕೆಳಗೆ ಇರುವವರು ಬುಟ್ಟಿ ಮತ್ತು ಕೊಕ್ಕೆಯನ್ನು ಹಗ್ಗದ ಇನ್ನೊಂದು ತುದಿಗೆ ಕಟ್ಟುತ್ತಾರೆ. ಮರವೇರಿದವರು ಹಗ್ಗವನ್ನೆಳೆದು, ಬುಟ್ಟಿ, ಕೊಕ್ಕೆ ಪಡೆದುಕೊಂಡು, ಸಾಧ್ಯವಾದಷ್ಟು ಗೊಂಚಲುಗಳನ್ನು ಕಿತ್ತು ಬುಟ್ಟಿಯನ್ನು ಇಳಿಸುತ್ತಾರೆ. ಹೀಗೆ ಹಲವಾರು ಬಾರಿ ಪುನರಾವರ್ತನೆ ಆಗಿ ಮಾವಿನಮಿಡಿಗಳನ್ನು ಕೊಯಿದು ಮನೆಯಂಗಳಕ್ಕೆ ತಂದರೆ ಮಿಡಿ ಉಪ್ಪಿನಕಾಯಿ ತಯಾರಿಯ ಪೂರ್ವಾರ್ಧ ಸಂಪನ್ನವಾದಂತೆ.
ಆಮೇಲೆ ಮನೆಯೊಡತಿಯರು ಮಾವಿನ ಮಿಡಿಗಳ ಗೊಂಚಲುಗಳನ್ನು ಜಗಲಿಯ ಮೇಲೆ ಶುಚಿಯಾದ ಬಟ್ಟೆ/ಚಾಪೆಯ ಮೇಲೆ ಹರಡಿ, ಪ್ರತಿ ಕಾಯಿಗಳ ತೊಟ್ಟು ಮುರಿದು, ಬುಟ್ಟಿಗೆ ಹಾಕುತ್ತಾರೆ. ಕೆಲವರು ಉಪ್ಪಿನಕಾಯಿಯ ಘಮ ಹೆಚ್ಚಿಸಲು ಮಾವಿನಕಾಯಿಯ ಸೊನೆಯನ್ನೂ ಸಂಗ್ರಹಿಸುತ್ತಾರೆ. ಈ ಸೊನೆಯು ಆಕಸ್ಮಿಕವಾಗಿ ಮೈಗೆ, ಕಣ್ಣಿಗೆ ಸಿಡಿದರೆ ತುರಿಕೆ,vಉರಿ ಬರುತ್ತದೆ. ಹಾಗಾಗಿ ಮಕ್ಕಳಿಗೆ ಆ ಸಂದರ್ಭದಲ್ಲಿ ಜಗಲಿಗೆ ಬರಬಾರದೆಂದು ಸೀಲ್ ಡೌನ್ ಘೋಷಣೆಯಾಗಿರುತ್ತದೆ!
ತೊಟ್ಟು ತೆಗೆದ ಮಾವಿನಕಾಯಿಗಳನ್ನು ನೀರಿನಲ್ಲಿ ಒಮ್ಮೆ ತೊಳೆದು ಗಾಳಿಗೆ ಆರಲು ಬಿಡುತ್ತಾರೆ ಅಥವಾ ಬಟ್ಟೆಯಲ್ಲಿ ಒರೆಸುತ್ತಾರೆ. ಅವುಗಳಲ್ಲಿ ಬಲಿತಿದ್ದ ಕಾಯಿಗಳಿದ್ದರೆ ಬೇರ್ಪಡಿಸಿ ತಕ್ಷಣದ ಉಪಯೋಗಕ್ಕೆ ಆಗುವಂತಹ ಹೋಳು ಉಪ್ಪಿನಕಾಯಿ ಮಾಡುತ್ತಾರೆ. ಮಿಡಿ ಹಾಕಲು ಹದವಾದ, ಇನ್ನೂ ಗೊರಟು ಮೂಡಿರದ ಸಣ್ಣ ಅಡಿಕೆ ಗಾತ್ರದ ಮಾವಿನಕಾಯಿಗಳಿಗೆ ರಾಜಮರ್ಯಾದೆ. ಈ ಮಿಡಿಗಳಿಗೆ ಕಣ್ಣಂದಾಜಿನ ಮೇರೆಗೆ ಕಲ್ಲುಪ್ಪು ಬೆರೆಸಿ, ಪಿಂಗಾಣಿಯ ದೊಡ್ಡ ಭರಣಿಗಳಲ್ಲಿ ಹಾಕಿ ಮುಚ್ಚಳ ಹಾಕುತ್ತಾರೆ. ಮುಂದಿನ 10 ದಿನಗಳ ವರೆಗೆ ದಿನಾಲು ಅಮ್ಮ ಅಥವಾ ಅಜ್ಜಿ ಭರಣಿಗಳ ಮುಚ್ಚಳ ತೆಗೆದು ಉಪ್ಪು ಸಾಕಾಗಿಯೇ, ಮಿಡಿಯ ಬಣ್ಣ ಮಾಸಿದೆಯೇ ಇತ್ಯಾದಿ ಗಮನಿಸಿ, ಬೇಕಿದ್ದರೆ ಉಪ್ಪು ಪುನ: ಹಾಕುತ್ತಾರೆ. ಮಿಡಿ ಉಪ್ಪಿನಕಾಯಿಯ ತಯಾರಿಯ ಹಂತದಲ್ಲಿ, ಬಳಸುವ ಪದಾರ್ಥಗಳು, ಸೌಟು ಇತ್ಯಾದಿಗಳಲ್ಲಿ ನೀರಿನಂಶ ಇರಬಾರದೆಂಬುದು ಮುಖ್ಯ ಅಂಶ. ಯಾಕೆಂದರೆ ಸರಿಯಾಗಿ ತಯಾರಾದ ಮಿಡಿ ಉಪ್ಪಿನಕಾಯಿಯು , ಯಾವುದೇ ಪ್ರಿಸರ್ವೇಟಿವ್ ಇಲ್ಲದೆಯೂ 2 ವರ್ಷಕ್ಕೂ ಕೆಡುವುದಿಲ್ಲ. ಹಾಗಾಗಿ, ಉಪ್ಪು ಬೆರೆಸಿದ ಮಾವಿನಕಾಯಿಯನ್ನು ತಿನ್ನಲು ಹವಣಿಸುವ ಮಕ್ಕಳು ಹತ್ತಿರ ಬರಬಾರದು, ಚೇಷ್ಟೆಗಾಗಿ ಅಥವಾ ಗೊತ್ತಿಲ್ಲದೆ ಒದ್ದೆ ಕೈಯಲ್ಲಿ ಮಿಡಿ ಮುಟ್ಟಬಾರದು ಎಂಬ ಅಲಿಖಿತ ಕಾನೂನಿನ ಪಾಲನೆಗಾಗಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿತ್ತು. ಆದರೂ, ಕೊರೊನಾ ವೈರಸ್ ನಂತೆ ಹೇಗೋ ಸೀಲ್ ಡೌನ್ ಏರಿಯಕ್ಕೆ ಪ್ರವೇಶ ಪಡೆದು, ಹದವಾಗಿ ಉಪ್ಪು ಬೆರೆತ ಮಿಡಿ ಮಾವಿನಕಾಯಿಯನ್ನು ತಿಂದೇ ಬೆಳೆದವರು ನಾವು!
ಉಪ್ಪು ಹೀರಿದ ಮಾವಿನ ಮಿಡಿಗಳು ಸುಕ್ಕಾಗಿ, ಆ ರಸದಲ್ಲಿಯೇ ಮಿಡಿಗಳು ತೇಲುತ್ತಿವೆಯೆಂದಾದರೆ ಉಪ್ಪು ಹದವಾಗಿದೆ ಎಂದು ಅರ್ಥ. ಇದಕ್ಕೆ ಸಾಮಾನ್ಯವಾಗಿ ಒಂದು ವಾರದಿಂದ 10 ದಿನಗಳು ಬೇಕು. ಈ ನಡುವೆ ಉಪ್ಪಿನಕಾಯಿಯ ತಯಾರಿಕೆಗೆ ಬೇಕಾಗುವ ಇತರ ಸಾಮಗ್ರಿಗಳಾದ ಸಾಸಿವೆ, ಅರಶಿನ, ಒಣಮೆಣಸಿನಕಾಯಿ, ಮೆಂತೆ…ಇವುಗಳನ್ನು ಗುಣಮಟ್ಟದ ಬಗ್ಗೆ ನಂಬಿಕೆಯುಳ್ಳ ಅಂಗಡಿಗಳಿಂದಲೇ ತರಿಸಿರುತ್ತಾರೆ. ಅವುಗಳನ್ನು ಶುಚಿಗೊಳಿಸುವುದು, ಒಣಗಿಸುವುದು, ಒರಳಲ್ಲಿ ಹಾಕಿ ಕುಟ್ಟುವುದು, ರುಬ್ಬುವುದು ಇತ್ಯಾದಿ ಕೆಲಸಗಳೂ ಸಾಂಗವಾಗಿ ನೆರವೇರಿ, ಉಪ್ಪಿನಕಾಯಿಯ ಮಸಾಲೆ ಸಿದ್ಧಪಡಿಸುತ್ತಾರೆ. ಇದರ ಪ್ರಮಾಣಗಳು ಬುಟ್ಟಿಗಟ್ಟಲೆ ಮಾವಿನಕಾಯಿ, ಸೇರುಗಟ್ಟಲೆ ಉಪ್ಪು, ಮೆಣಸಿನಕಾಯಿ…ಹೀಗೆ ಇರುತ್ತಿದ್ದುದರಿಂದ ನನ್ನ ಅರಿವಿಗೆ ನಿಲಕದು.
ಹದಗೊಡ ಮಾವಿನಮಿಡಿಗೆ , ಕುಟ್ಟಿದ ಮಸಾಲೆ ಬೆರೆಸಿ, ಮಿಶ್ರ ಮಾಡಿದರೆ ಉಪ್ಪಿನಕಾಯಿ ಸಿದ್ಧವಾದಂತೆ. ಮಿಡಿ ಉಪ್ಪಿನಕಾಯಿಯನ್ನು ತಯಾರಿಸಿದ ತಕ್ಷಣವೇ ಉಪಯೋಗಿಸುತ್ತಿರಲಿಲ್ಲ. ಘಮಘಮಿಸುವ ಮಿಡಿ ಉಪ್ಪಿನಕಾಯಿಯನ್ನು ನಾಲ್ಕಾರು ದೊಡ್ಡ ಭರಣಿಗಳಲ್ಲಿ ಹಾಕಿ, ಮುಚ್ಚಳ ಮುಚ್ಚಿ, ಮೇಲಿನಿಂದ ಮುಂಡಾಸು ಸುತ್ತುವಂತೆ ಬಟ್ಟೆಯನ್ನು ಬಿಗಿಯಾಗಿ ಸುತ್ತಿ, ಅಡುಗೆಮನೆಯ ಮೇಲೆ ಇರುವ ‘ಹೊಗೆ ಅಟ್ಟ’ದಲ್ಲಿ ಇರಿಸಿದರೆ ಸದ್ಯದ ಕೆಲಸ ಆದಂತೆ. ಆಗ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರು, ಅಡುಗೆಮನೆಯ ಮೇಲೆ ಹೊಗೆಅಟ್ಟ ಎಂಬ ಜಾಗದಲ್ಲಿ ಬೆಚ್ಚಗೆ ಇಡಬೇಕಾದ ಆಹಾರ ಸಾಮಗ್ರಿಗಳಿಗೆ ರಿಸರ್ವ್ಡ್ ಸೀಟ್ . ಕರಾವಳಿಯ ಮುಸಲಧಾರೆ ಮಳೆ ಹಾಗೂ ತೇವದಿಂದ ಆಹಾರ ವಸ್ತುಗಳು ಕೆಡದಂತೆ ಸಂರಕ್ಷಿಸಿ ಇಡುವ ಪರಿ ಇದು.
ಸುಮಾರು ಒಂದು ತಿಂಗಳು ಆದ ಮೇಲೆ, ಅಂದರೆ ಮಿಡಿ ಉಪ್ಪಿನಕಾಯಿಗೆ ಖಾರ ಹಿಡಿದ ಮೇಲೆ ಊಟಕ್ಕೆ ಬಳಸುತ್ತಾರೆ. ಕುಸುಬುಲಕ್ಕಿಯ ಬಿಸಿ ಅನ್ನಕ್ಕೆ, ತುಪ್ಪ, ನೆಂಚಿಕೊಳ್ಳಲು ಮಿಡಿ ಉಪ್ಪಿನಕಾಯಿ, ಬೇಕಿದ್ದರೆ ಯಾವುದಾದರೂ ಚಟ್ನಿ/ಪಲ್ಯ/ಮೊಸರು ಇಷ್ಟಿದ್ದರೆ ‘ಸ್ವರ್ಗಕ್ಕೆ ಕಿಚ್ಚು’ ಹತ್ತಿರುತ್ತದೆ! ಮನೆಯಲ್ಲಿ ಬಡಿಸಿದ ಮಿಡಿ ಉಪ್ಪಿನಕಾಯಿಯ ರುಚಿ, ಬಣ್ಣ, ಸುವಾಸನೆ ಹಾಗೂ ದೀರ್ಘಾವಧಿ ಬಾಳಿಕೆಯು ಮನೆಯೊಡತಿಯ ಪಾಕ ಕೌಶಲ್ಯದ ಸಂಕೇತವಾಗಿರುತ್ತಿತ್ತು. ‘ನಿಂಗಳ ಮನೆ ಉಪ್ಪಿನ್ಕಾಯಿ ಸೂಪರ್ ಅಕ್ಕಾ’ ಅನ್ನುತ್ತಾ ಉಂಡರೆ, ಮನೆಯೊಡತಿಯ ಮುಖ ಹಿಗ್ಗುತ್ತದೆ. ಇನ್ನು ಮನೆಗೆ ಬಂದ ಹತ್ತಿರದ ನೆಂಟರಿಗೆ ಸ್ಯಾಂಪಲ್ ಎಂಬಂತೆ ತಾವು ಕೈಯಾರೆ ಮಾಡಿದ ಉಪ್ಪಿನಕಾಯಿಯನ್ನು ಕೊಡುವುದರದಲ್ಲಿ ಗೃಹಿಣಿಯರಿಗೆ ಬಲು ಸಡಗರ. ಅವರೂ ‘ ಬೇಡಾಗಿತ್ತು…’ ಅನ್ನುತ್ತಲೇ ತಮ್ಮ ಬ್ಯಾಗ್ ಗೆ ಸೇರಿಸಿಕೊಳ್ಳತ್ತಾರೆ. ಮನೆಮಗಳು ಕೂಡ ತವರಿನಿಂದ ಹೋಗುವಾಗ ‘ಇದು ಅಜ್ಜಿ ಮಾಡಿದ ಉಪ್ಪಿನಕಾಯಿ, ಇದು ಚಿಕ್ಕಮ್ಮನ ಮನೆ ಉಪ್ಪಿನಕಾಯಿ…..’ ಹೀಗೆ ಉಪ್ಪಿನಕಾಯಿಯ ಜೊತೆಗೆ ಬಾಂಧವ್ಯವನ್ನು ಬೆಸೆಯುತ್ತಾಳೆ.
ಈಗ ಅಬ್ಬಬ್ಬಾ ಅಂದರೆ 4-5 ಕಿಲೋ ಉಪ್ಪಿನಕಾಯಿ ಮಾಡಲು ಧೈರ್ಯ ಇರುವ ನನ್ನ ಮಿತಿಗೆ ನಿಲುಕಿದಷ್ಟನ್ನೇ ಬರೆದಿದ್ದೇನೆ ಅಷ್ಟೆ. ನಗರದಲ್ಲಿ, ಈಗಿನ ಅಭಿರುಚಿಗೆ ತಕ್ಕಂತೆ ಸಣ್ಣ ಪ್ರಮಾಣದಲ್ಲಿ ವಿವಿಧ ಉಪ್ಪಿನಕಾಯಿಗಳನ್ನು ನಾನೂ ತಯಾರಿಸುತ್ತೇನೆ. ನನ್ನ ಬಿ.ಪಿ ಮಾಪನದಲ್ಲಿ ಮೇಲಿನ ಸ್ತರದಲ್ಲಿ ಸೂಚ್ಯಂಕ ಇದ್ದರೂ, ಡಾಕ್ಟರ್ ಉಪ್ಪು ಕಡಿಮೆ ಬಳಸಿ ಅಂದರೂ, ಯಾವುದೇ ಬಗೆಯ ಉಪ್ಪಿನಕಾಯಿ ನನ್ನ ಕಣ್ಣಿಗೆ ಕಂಡರೆ ಮೊದಲಿಗಳಾಗಿ ತಟ್ಟೆಗೆ ಹಾಕಿಸಿಕೊಳ್ಳುವ ಆತುರ ನನಗೆ. “ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಉಪ್ಪಿನಕಾಯಿಯಂ!”
-ಹೇಮಮಾಲಾ.ಬಿ, ಮೈಸೂರು
ಉಪ್ಪಿನಕಾಯಿ ಪ್ರಿಯೆ ಯಾದ ನನಗೆ ಲೇಖನ ಬಹಳ ಇಷ್ಟವಾಯಿತು.ಹಾಸ್ಯದ ಲೇಪನ ಮನಕ್ಕೆ ಮುದ ನೀಡಿತು..
ಮೆಚ್ಚುಗೆಗೆ ಧನ್ಯವಾದಗಳು .
ಉಪ್ಪಿನಕಾಯಿ ಆಹಾ ಎಂಥಾ ರುಚಿ.. ಹಾಗೆ ಲೇಖನವೂ ಸೊಗಸಾಗಿ ತಿಳಿಯಾದ ಹಾಸ್ಯ ಲೇಪನ ಮಾಡಿಕೊಂಡು ಮೂಡಿಬಂದಿದೆ.ಅಭಿನಂದನೆಗಳು ಮೇಡಂ.
ಮೆಚ್ಚುಗೆಗೆ ಧನ್ಯವಾದಗಳು..
ಉಪ್ಪಿನಕಾಯಿ ಯಷ್ಟೇ ರುಚಿ ರುಚಿಯಾಗಿದೆ ಬರಹ. ಆಹಾ… ಉಪ್ಪಿನಕಾಯಿ ಯ ಚಿತ್ರಣ ಮನದಲ್ಲಿ ಮೂಡಿ ಬಾಯಿಯಲ್ಲಿ ನೀರೂರಿತು. ಹಳೆಯ ದಿನಗಳ ಸುಂದರ ಚಿತ್ರಣವೂ ಮನಸಿನ ಪಟಲದಲ್ಲಿ ಮೂಡಿತು.
ಮೆಚ್ಚುಗೆಗೆ ಧನ್ಯವಾದಗಳು ..
ಉಪ್ಪಿನಕಾಯಿ ತಯಾರಿ ಅನ್ನುವುದು ದೊಡ್ಡ ಯಜ್ಞವೇ ಸರಿ. ತಾಳ್ಮೆ ಹಾಗೂ ಅನುಭವ ಎರಡನ್ನೂ ಬೇಡುವ ಕೆಲಸ. ಚಂದದ ಲೇಖನ
ಮೆಚ್ಚುಗೆಗೆ ಧನ್ಯವಾದಗಳು .
ಯಬ್ಬಾ ನೋಡುವಾಗಲೇ ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿ …ಉಪ್ಪಿನಕಾಯಿ ಇಲ್ಲದೆ ಊಟ ಇಲ್ಲ. ಎಷ್ಟು ಪದಾರ್ಥ ವಿದ್ದರೂ ಕೊನೆಗೆ ಉಪ್ಪಿನಕಾಯಿ ಮೊಸರಯಾ ಮಜ್ಜಿಗೆ ಯಲ್ಲಿ ಊಟಮಾಡದೇ ಆಗದು
ಚಂದದ ಉಪ್ಪಿನಕಾಯಿ ಬರಹ
ಮೆಚ್ಚುಗೆಗೆ ಧನ್ಯವಾದಗಳು .
ಆಹಾ… ಉಪ್ಪಿನಕಾಯಿಯಷ್ಟೇ ರುಚಿಯಾಗಿದೆ ಅದರ ಲೇಖನ. ಪೂರಕ ಫೋಟೋಗಳಂತೂ ಸೂಪರ್.
ಮೆಚ್ಚುಗೆಗೆ ಧನ್ಯವಾದಗಳು .
ಉಪ್ಪಿನಕಾಯಿ ಪ್ರಿಯರಿಗೆ ಬಾಯಲ್ಲಿ ನೀರೂರಿಸುವಂತಿದೆ
ನಿನ್ನ ಬರವಣಿಗೆಯ ಒಕ್ಕಣೆ.
ಉಪ್ಪಿನಕಾಯಿಯ ರುಚಿಕಟ್ಟಾದ ವೃತ್ತಾಂತದೊಂದಿಗೆ ನಿಮ್ಮೂರ ಪರಿಸರ, ಜನರ ಸರಳ ರೀತಿ ನೀತಿಗಳನ್ನು ಪರಿಚಯಿಸಿದ ಪರಿ ಸೊಗಸಾಗಿದೆ. ಮಿಡಿಯ ರುಚಿ ನಾಲಿಗೆಯಲ್ಲಿ ನೀರೂರಿಸುತ್ತಿದೆ.
Mouth watering article!