ಪುಸ್ತಕ , ಮಕ್ಕಳು ಹಾಗೂ ನಾನು
ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿದ್ಯಾಸಂಸ್ಥೆಯಾದ ಕುಂಬಳೆ ಸಮೀಪದ ಮುಜುಂಗಾವು ವಿದ್ಯಾಪೀಠದಲ್ಲಿ ಗ್ರಂಥಪಾಲಿಕೆಯಾಗಿ ನಾನು 19 ವರ್ಷದಿಂದ ಸೇವೆ ಮಾಡುತ್ತಾ ಇದ್ದೇನೆ. ನನಗೆ ಚಿಕ್ಕಂದಿನಿಂದಲೂ ಪುಸ್ತಕ ಪ್ರೀತಿ ಬಹಳ. ನಮ್ಮ ಗ್ರಂಥಭಂಡಾರದಲ್ಲಿ ಹನ್ನೆರಡೂವರೆ ಸಾವಿರ ಪುಸ್ತಕಗಳೂ ಒಂದಷ್ಟು ತಾಳೆಗರಿ ಗ್ರಂಥಗಳೂ ನನ್ನ ಮೇಲ್ತನಿಕೆಯಲ್ಲಿವೆ. ಹೆಚ್ಚಿನವೂ ಶ್ರೀಸಂಸ್ಥಾನದವರ ಯೋಜನೆಯಂತೆ 2002 ರಲ್ಲಿ ಗ್ರಂಥಾಭಿಯಾನ ಎಂಬ ನೆಲೆಯಲ್ಲಿ ಬಂದರೆ; ಕೆಲವಷ್ಟು ವಿದ್ಯಾರ್ಥಿಗಳ ಪಾಠಕ್ಕೆ ಸಂಬಂಧ ಪಟ್ಟಂತೆ ಖರೀದಿಸಿದವುಗಳಾಗಿವೆ.
ನಮ್ಮ ಶಾಲೆಯಲ್ಲಿ 3 ನೇ ತರಗತಿಯಿಂದ ಎಸ್.ಎಸ್.ಎಲ್.ಸಿ ವರೆಗಿನ ಮಕ್ಕಳಿಗೆ ವಾರದಲ್ಲಿ ಒಂದು ದಿನ ಲೈಬ್ರೆರಿ ಫಿರೆಡ್ ಇದೆ. ಹಾಗೂ ಮದ್ಯಾಹ್ನ ಬಿಸಿಯೂಟದ ಬಳಿಕ ಅಪರಾಹ್ನದ ತರಗತಿಗಳು ಪ್ರಾರಂಭವಾಗುವ ತನಕ ಮಕ್ಕಳು ಲೈಬ್ರೆರಿಗೆ ಬಂದು ಅವರಿಗಿಷ್ಟವಾದ ಪುಸ್ತಕ ಆಯ್ಕೆ ಮಾಡಿಕೊಂಡು ಓದುತ್ತಾರೆ.
ಕೆಲವು ಪುಟ್ಟಮಕ್ಕಳ ಪ್ರಶ್ನೆಗಳು-1. “ಇಲ್ಲಿರುವ ಎಲ್ಲಾ ಕಪಾಟುಗಳಲ್ಲಿರುವ ಅದಷ್ಟು ಪುಸ್ತಕಗಳನ್ನೂ ನೀವು ಓದಿದ್ದೀರಾ ಮಾತಾಶ್ರೀ?”.(ಇಲ್ಲಿ ಟೀಚರನ್ನು ಮಾತಾಶ್ರೀ ಎನ್ನುವ ರೂಢಿ)
“ನಾನು ಎಲ್ಲವನ್ನೂ ಓದಿಲ್ಲ”. ನಾನು ಓದಿಮುಗಿಸಿದರೆ ಮತ್ತೆ ನಿಮಗೆ ಬೇಡವೇ?”. ಎಂದಾಗ . “ ಇಲ್ಲಾ..,ಮಾತಾಶ್ರೀ ಓದಿದರೆ ಪುಸ್ತಕ ಮುಗಿಯುವುದಿಲ್ಲ!”.
“ಹಾಂ…,ಅದೇ ನೋಡಿ; ಉಪಯೋಗಿಸಿದಷ್ಟೂ ಹೆಚ್ಚಾಗುವ ವಸ್ತು ಎಂದರೆ..ಯಾವುದು..? ಓದಿದರೆ ಪುಸ್ತಕ ಮುಗಿಯದೆ ಹೆಚ್ಚಾಗುವುದು ನಮ್ಮ ಮಂಡೆಯಲ್ಲಿ ಶೇಖರವಾಗುವ ಜ್ಞಾನರಾಶಿ!!.”.ಎಂದಾಗ ಒಂದು ಮಗು “ಒಂದು ಒಗಟು ಸಿಕ್ಕಿತು…” ಎಂದು ಕುಣಿಯುತ್ತದೆ.
ಕರ್ಕಟಕ ಮಾಸದಲ್ಲಿ(ಜುಲಾಯಿ)ನಮ್ಮ ಶಾಲೆಯಲ್ಲಿ ಬೆಳಗ್ಗಿನ ಪ್ರಾರ್ಥನೆ ಮುಗಿದಬಳಿಕ ಸಾಮೂಹಿಕವಾಗಿ ಹದಿನೈದು ನಿಮಿಷಗಳ ಕಾಲ ರಾಮಾಯಣ ಕತೆ ಮಕ್ಕಳಿಗೆ ಹೇಳುವ (ನಿಗದಿಪಡಿಸಿದವರು) ಪರಿಪಾಠವಿದೆ.ತಿಂಗಳ ಕೊನೆಗೆ ಅದರ ಸಮಾರೋಪವೂ ಇದೆ. ಈ ಅವಧಿಯಲ್ಲಿ ಆಯಾಯ ದಿನದ ಕತೆಗೆ ಆಧರಿಸಿ ಮಕ್ಕಳಿಗೆ ಲೈಬ್ರೆರಿ ತರಗತಿಯಲ್ಲಿ ನಾನು ರಸಪ್ರಶ್ನೆ ಕೇಳುವ ಪರಿಪಾಠವಿದೆ. ಈ ಪ್ರಶ್ನೋತ್ತರಕ್ಕೆ ಮಕ್ಕಳನ್ನು ಗ್ರೂಫ್ ಮಾಡಿಕೊಂಡು ಹೆಚ್ಚು ಅಂಕ ಪಡೆದವರ ಗ್ರೂಫಿನ ಮಕ್ಕಳಿಗೆ ತಲಾ ಒಂದೊಂದು ಪುಸ್ತಕ ಕೊಡುವ ಪರಿಪಾಠ ಇಟ್ಟುಕೊಂಡಿದ್ದೇನೆ, ಇದಕ್ಕೆ ಮಕ್ಕಳು ಹೆಚ್ಚು ಸ್ಪಂದಿಸುತ್ತಾರೆ.
ಗ್ರಂಥಾಲಯದ ಮಹತ್ವ- “ಒಂದುವೇಳೆ ಗ್ರಂಥಗಳಿಲ್ಲದಿದ್ದರೆ ದೇವರೇ ಮೂಕನಾಗಿ ಬಿಡುತ್ತಾನಂತೆ. ನ್ಯಾಯದೇವತೆ ನಿದ್ರಿಸುತ್ತಾಳೆ. ವಿಜ್ಞಾನದೇವತೆ ವಿಶ್ರಾಂತಿ ಪಡೆಯುತ್ತಾಳೆ. ತತ್ವಜ್ಞಾನ ಕುಂಟುತ್ತದೆ.ಸಾಹಿತ್ಯವು ಬಾಯಿಗೆ ಬೀಗಹಾಕಿಕೊಂಡು ಬಿಡುತ್ತದೆ. ಉಳಿದೆಲ್ಲವೂ ಅಂಧಕಾರವಾಗಿ ಬಿಡುತ್ತದೆ”. ಎಂದು ಥಾಮಸ್ ಬಾರ್ಥೋಲಿನ್ ಎಂಬ ಡೆನ್ಮಾರ್ಕ್ ದೇಶದ ಗ್ರಂಥಪಾಲಕನೊಬ್ಬ 1672 ರಲ್ಲಿಯೇ ಸಾರಿಹೇಳಿದ್ದಾನತೆ.
ಬರಹದ ಬೆಳವಣಿಗೆಃ- ಕ್ರಿ.ಪೂ 14 ನೇ ಶತಮಾನದಲ್ಲಿ ಮಾನವ; ಎಲುಬುಗಳ ಮೇಲೆ ಬರೆಯುತ್ತಿದ್ದನಂತೆ. ಶತಮಾನಗಳು ಉರುಳಿದಂತೆ ಆತ ತನ್ನ ಬರಹಕ್ಕಾಗಿ ಚರ್ಮ, ಹುಲ್ಲು, ತೊಗಟೆ, ತಾಮ್ರಪಟ, ತಾಳೆಗರಿ, ಭೂರ್ಜಪತ್ರ, ಅರಿವೆ, ರೇಶಿಮೆ ಬಟ್ಟೆ, ಬಿದಿರು, ಫಲಕ, ಕಬ್ಬಿಣ, ಹಿತ್ತಾಳೆ, ಬೆಳ್ಳಿ, ಬಂಗಾರಗಳ ಪಟ, ಹಸ್ತಿದಂತ ಮುಂತಾದುವುಗಳನ್ನು ಅಣಿಮಾಡಿಕೊಂಡು ಉಪಯೋಗಿಸತೊಡಗಿದ. ಮುಂದೆ ಕಾಲಕ್ರಮದಲ್ಲಿ ಕಾಗದ ತಯಾರಿಕೆಯನ್ನೂ ಮುದ್ರಣಕಲೆಯನ್ನೂ ತಿಳಿದು ಕೊಂಡ.
ಗ್ರಂಥಾಲಯದ ಪಂಚಶೀಲ ತತ್ವಃ-
1,ಗ್ರಂಥಗಳಿರುವುದು ಉಪಯೋಗಕ್ಕೆ.
2.ಪ್ರತಿಯೊಂದು ಪುಸ್ತಕಕ್ಕೆ ಒಬ್ಬ ಓದುಗನಿದ್ದಾನೆ.
3.ಪ್ರತಿಯೊಬ್ಬ ಓದುಗನಿಗೆ ಒಂದು ಪುಸ್ತಕವಿದೆ.
4.ಓದುಗನ ಸಮಯ ಅಮೂಲ್ಯ.
5.ಗ್ರಂಥಾಲಯ ಬೆಳೆಯುವ ಸಂಸ್ಥೆ.
ಒಂದು ಶಿಕ್ಷಣ ಸಂಸ್ಥೆಯು ನಿಗದಿಪಡಿಸಿದ ತರಗತಿಗಳು ಕೊನೆಗೊಂಡರೆ, ಅದರ ಸೀಮಾರೇಖೆ ಅಲ್ಲಿಗೆ ಮುಗಿಯುತ್ತದೆ. ಆದರೆ ಅಲ್ಲಿಯ ಗ್ರಂಥಾಲಯವು ಹಾಗಲ್ಲ. ಅದು ಬೆಳೆದು ಮುಗಿಯುವ ಪ್ರಶ್ನೆಯೇ ಇಲ್ಲ. ಒಂದಲ್ಲ ಒಂದುದಿನ ಮನುಷ್ಯ ಮಾಯವಾಗುತ್ತಾನೆ. ಆದರೆ ತನ್ನ ಜೀವನಕ್ಕೆ ಜ್ಯೋತಿಯಾಗಿದ್ದ ಪುಸ್ತಕ ಚಿರಂಜೀವಿಯಾಗಿರುತ್ತದೆ. ಗ್ರಂಥಗಳು ನಮ್ಮ ನಾಗರಿಕತೆಯ ತಳಹದಿ. ನಮ್ಮ ಸಂಸ್ಕೃತಿಯ ಪ್ರತಿನಿಧಿ. ನಮ್ಮ ಬಾಳಿನ ಬೆಳಕು. ಓದು ಹಾಗೂ ಬರವಣಿಗೆಯ ಹವ್ಯಾಸವಿದ್ದವನಿಗೆ ಅನಾಥ ಪ್ರಜ್ಞೆ ಕಾಡದು ಎಂಬುದೂ ಸತ್ಯ.
-ವಿಜಯಾಸುಬ್ರಹ್ಮಣ್ಯ ಕುಂಬಳೆ
ಧನ್ಯವಾದ ಹೇಮಮಾಲಾ .ಹಾಗೂ ಓದುಗರಿಗೆ.
ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬಿತ್ತುತ್ತಿರುವ ನಿಮಗೆ ಅಭಿನಂದನೆಗಳು. ಚೆಂದದ ಬರಹ .
ಇತ್ತೀಚೆಗೆ ಹೀಗೆ ಜ್ಞಾನ ವೃದ್ಧಿಸುವ ಇತರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಯಾವ ಶಾಲೆಗಳಲ್ಲೂ ಹುರಿದುಂಬಿಸುವುದಿಲ್ಲ… ಏನಿದ್ದರೂ ಮಾರ್ಕ್ಸ್ ಸ್ಕೋರ್ ಮಾಡಲು ಪರೀಕ್ಷೆಗೆ ತಯಾರಿ ಅಷ್ಟೇ… ತುಂಬಾ ಒಳ್ಳೆಯ ಪಠದ ಕ್ರಮ …
ಧನ್ಯವಾದ ಜಯಾ ಕುಕ್ಕಿಲ ಹಾಗೂ ಹೇಮಮಾಲಾ.
SUPER
ಗ್ರಂಥಪಾಲಕಿಯಾಗಿ ಮಕ್ಕಳ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತಿರುವ ನಿಮಗೆ ಅಭಿನಂದನೆಗಳು ವಿಜಯಕ್ಕ.
ಸೂಪರ್ ಮೇಡಂ. ಇವತ್ತು ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ಶಾಲೆಗಳಿಂದಲೇ ಬಿತ್ತಬೇಕಾಗಿದೆ. ಕಂಪ್ಯೂಟರ್ ಯುಗದಲ್ಲಿ ಪುಸ್ತಕಗಳು ಅಳಿವಿನಂಚಿಗೆ ತಲುಪದಿದ್ದರೆ ಸಾಕಾಗಿದೆ. ತುಂಬಾ ಚೆನ್ನಾಗಿದೆ ಲೇಖನ