ಪುಸ್ತಕ-ನೋಟ, “ತೆರೆದಂತೆ ಹಾದಿ”
ಚಿಂತನೆ, ವಿಚಾರಧಾರೆ, ಯೋಚನೆಗೆ ತಳ್ಳುವಂತಹ ವೈಚಾರಿಕ ಬರಹಗಳ ಗುಚ್ಛ ಜಯಶ್ರೀ ಬಿ ಕದ್ರಿಯವರ “ತೆರೆದಂತೆ ಹಾದಿ”. ಎಷ್ಟೇ ಮಹಿಳಾ ಸಬಲೀಕರಣ, ಸ್ತ್ರೀ ಸ್ವಾತಂತ್ರ್ಯಗಳು ದೊರೆತಿವೆ ಎಂದರೂ, ಹೆಣ್ಣು ಎಷ್ಟೇ ದೊಡ್ಡ ಹುದ್ದೆ, ಕೆಲಸದಲ್ಲಿದ್ದರೂ ಮನೆ, ಸಂಸಾರ ಎಂಬ ಚೌಕಟ್ಟಿನೊಳಗೆ ತಲೆ ತಲಾಂತರಗಳಿಂದ ಸದಾ ಇಂದಿನವರೆಗೂ ಬಂಧಿ ಅನ್ನುವ ಸತ್ಯ ಇಲ್ಲಿ ಹಲವು ಕಡೆ ಅನಾವರಣಗೊಂಡಿದೆ.
ಮಹಿಳಾ ಪರ ಇರುವ ಯೋಜನೆಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಹಾಗೂ ಕೆಲವರು ಇದರ ಫಲಾನುಭವಿಗಳಾದೆ ವಂಚಿತರಾಗಲು ಕಾರಣಗಳೇನು ಅನ್ನುವುದರ ಮೇಲೊಂದು ನೋಟ. ಅಜ್ಞಾನ, ನಿರ್ಲಕ್ಷ್ಯ ಧೋರಣೆಗಳೇ ಮಹಿಳಾ ಸಬಲೀಕರಣ ಬಲಗೊಳ್ಳದಿರಲು ಮುಖ್ಯ ಕಾರಣ ಅನ್ನುವುದಂತೂ ಸ್ಪಷ್ಟ. ಅಂಬೇಡ್ಕರ್ ಅವರು ಮಹಿಳೆಯರ ಪರ ಜಾರಿಗೆ ತಂದಿರುವ ಹಲವಾರು ನಿಯಮಗಳು ತೆರೆಮರೆಗೆ ಸರಿದಿದ್ದು ಬದಲಾದ ಕಾಲಘಟ್ಟದಲ್ಲಿ ಅಧಿಕಾರ ವ್ಯವಸ್ಥೆಯಲ್ಲಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.
ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡಿದ ಅವೆಷ್ಟೋ ಹೆಣ್ಣುಮಕ್ಕಳು ತಮ್ಮ ಸಾಮರ್ಥ್ಯದ ಅರಿವಿದ್ದೂ ಹೇಗೆ ಸಂಸಾರವೆಂಬ ಬಂಧನದೊಳಗೆ ಇವೆಲ್ಲವನ್ನೂ ಮರೆತಂತೆ ಕೇವಲ ಮನೆ ಕೆಲಸಗಳನ್ನು ಮಾಡುತ್ತಾ ಕಳೆದು ಹೋಗುತ್ತಾರೆ ಅನ್ನುವುದನ್ನು ವಿಮರ್ಶಿಸಲ್ಪಟ್ಟ ಒಂದು ಲೇಖನ. ಇಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯಾಗಲಿ, ಗೃಹಿಣಿಯಾಗಲಿ ಇಬ್ಬರೂ ಅವರವರದ್ದೇ ಆದ ರೀತಿಯಲ್ಲಿ ಹೇಗೆ ಸಂಸಾರಕ್ಕೋಸ್ಕರ ತ್ಯಾಗ ಮಾಡುತ್ತಾರೆ ಅನ್ನುವ ಅಂಶವನ್ನು ಚರ್ಚಿಸಲಾಗಿದೆ. ಇಬ್ಬರೂ ಅವರವರ ಜಾಗದಲ್ಲಿ ಶ್ರೇಷ್ಠರೇ. ಸಾಕಷ್ಟು ತ್ಯಾಗ ಮಾಡಿದರೂ ಗೃಹಿಣಿಯರು ಆ ತ್ಯಾಗ ಬೆಳಕಿಗೆ ಬರುವುದನ್ನು ತಡೆದು ಯಾಕೆ ಮುಚ್ಚಿಡಬೇಕು ಅನ್ನುವ ಪ್ರಶ್ನೆ. ಯಾಕೆಂದರೆ ಈ ಜಗದ ವ್ಯವಸ್ಥೆಯೇ ಹಾಗಿದೆ ಅನ್ನುವುದೊಂದೇ ಉತ್ತರ.
ಹದಿಹರೆಯದವರ ಸಮಸ್ಯೆಗಳ ಕುರಿತಾಗಿ ಒಂದು ಅವಲೋಕನ. ಚಿಕ್ಕ ಕ್ಷುಲ್ಲಕ ವೆನಿಸುವ ಕಾರಣಗಳಿಗೂ ಆತ್ಮಹತ್ಯೆಯಂತಹ ಘೋರ ನಿರ್ಧಾರ ತೆಗೆದುಕೊಳ್ಳುತ್ತಿರುವ ಯುವಜನಾಂಗ, ಕೆಲವೊಮ್ಮೆ ಕೆಟ್ಟ ಚಟಗಳ ದಾಸರಾಗಿ, ಮತ್ತೆ ಕೆಲವೊಮ್ಮೆ ಕಲಿಕೆಯಲ್ಲಿ ಹೆತ್ತವರ ಒತ್ತಾಯಕ್ಕೆ ಬಲಿಯಾಗಿ ಜೀವ ಕಳೆದುಕೊಳ್ಳುವಂತಹ ಟೀನೇಜರ್ಸ್ ಇಂತಹ ಸ್ಥಿತಿಯಲ್ಲಿ ಇರುವವರೆಲ್ಲ ರಲ್ಲಿ ಬದುಕಿನ ಕುರಿತಾಗಿ ಸ್ಪಷ್ಟವಾದ ದಾರಿ ತೋರಿಸಬೇಕಾದ ಅನಿವಾರ್ಯತೆ ಇಂದು ಹೆತ್ತವರು ಹಾಗೂ ಸಮಾಜದ ಮೇಲಿದೆ. ಬದುಕು ದೊರೆತಿರುವುದು ಚೆನ್ನಾಗಿ ಬಾಳಲು, ಇಲ್ಲಿ ಕೇವಲ ವಿದ್ಯಾರ್ಥಿಗಳಿಗೆ ಹಾಗೂ ಯುವ ಜನಾಂಗಕ್ಕೆ ಮಾರ್ಕ್ಸ್ ಹಾಗೂ ಆಸ್ತಿ ಪಾಸ್ತಿ ಯಷ್ಟೇ ಬದುಕಿನ ಮಾನದಂಡವಲ್ಲ. ಇವೆಲ್ಲದರ ಹೊರತಾದ ಒಂದು ಸುಂದರ ಬದುಕು ಇದೆ, ಅನ್ನುವ ಸತ್ಯವನ್ನು ಮನದಟ್ಟಾಗಿಸುವ ಪ್ರಯತ್ನ ನಡೆದಿದೆ. ಆದರೂ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಿದ್ಯೆ ಬಹಳ ಮುಖ್ಯ. ಹಿಡಿತಕ್ಕೆ ಸಿಗದೆ ಕುದುರೆಯಂತೆ ಓಡುವ ಮನಸ್ಸಿಗೆ ಲಗಾಮು ಹಾಕಿ ಸಂಯಮ ತಾಳ್ಮೆಯಿಂದ ಬದುಕಿನ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುತ್ತಾ ಸಾಗುವಂತಹ ಪ್ರೋತ್ಸಾಹ ಉತ್ಸಾಹ ಇಂದಿನ ಜನಾಂಗದವರಲ್ಲಿ ತುಂಬಬೇಕಾದ ಅನಿವಾರ್ಯತೆಯಿದೆ. ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ಎಲ್ಲರಲ್ಲಿ ಮೂಡಬೇಕಾಗಿದೆ .ಇಂತಹ ಒಂದು ಬದಲಾವಣೆ ಆದಲ್ಲಿ ಆತ್ಮಹತ್ಯೆಯಂತಹ ನಕಾರಾತ್ಮಕ ಬೆಳವಣಿಗೆಗೆ ತೆರೆ ಬೀಳಬಹುದೇನೋ.
“ಪ್ರೀತಿ” ಎಂಬ ಭಾವ ಕೇವಲ ಕಥೆ, ಕಾದಂಬರಿ, ಕವಿತೆ, ಸಿನಿಮಾ, ಧಾರಾವಾಹಿಗಳಲ್ಲಿ ಅಷ್ಟೇ ಒಂದು ಕಾಲದಲ್ಲಿ ವ್ಯಕ್ತವಾಗುತ್ತಿದ್ದ ಭಾವ .ಈ ಪ್ರೀತಿ ಸುಂದರ ನಿಜ. ಆದರೆ ವಾಸ್ತವ ಬದುಕಿನಲ್ಲಿ ಇದನ್ನು ಒಪ್ಪಿಕೊಳ್ಳುತ್ತಿದ್ದವರು ವಿರಳ. ಆದರೆ ಕಥೆ ಕಾದಂಬರಿಗಳಲ್ಲಿ ಇದನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಿದ್ದರು .ಬಹುಶಃ ವಾಸ್ತವದಲ್ಲಿ ಪಡೆಯಲಾಗದ್ದನ್ನು ಈ ಮೂಲಕ ಕಲ್ಪನೆಯಲ್ಲೇ ಪಡೆಯುವ ಹಂಬಲವಿರಬಹುದೇನೊ? ಇತ್ತೀಚೆಗೆ ಬದಲಾದ ಕಾಲ ಗತಿಯಲ್ಲೂ ಪ್ರೀತಿಯನ್ನು ಒಪ್ಪಿಕೊಳ್ಳುವ ವಿಷಯದಲ್ಲಿ ದೊಡ್ಡ ಸ್ತರದಲ್ಲಿ ಬದಲಾವಣೆಗಳೇನೂ ಆಗಿಲ್ಲ ಆದರೂ ಪ್ರೀತಿಯನ್ನು ಅಪರಾಧ ಎನ್ನುವ ದೃಷ್ಟಿಯಲ್ಲಿ ನೋಡುವುದು ಕಮ್ಮಿಯಾಗಿದೆ ಅನ್ನುವ ಅಭಿಪ್ರಾಯ ಲೇಖಕಿಯದು.
ದಿನನಿತ್ಯದ ಜಂಜಾಟಗಳನ್ನು ಮರೆಯಲು ಓದುವ ಹವ್ಯಾಸ ಇರುವವರು ಕೈಗೆತ್ತಿಕೊಳ್ಳುವ ಸಾಹಿತ್ಯಗಳಲ್ಲಿ ಪ್ರೀತಿ, ಪ್ರೇಮ, ಸಾಂಸಾರಿಕ ಜೀವನದ ಆಗು ಹೋಗುಗಳಿಗೆ ಸಂಬಂಧಪಟ್ಟ ಸಾಹಿತ್ಯಗಳೇ ಹೆಚ್ಚಾಗಿರುತ್ತವೆ ಎನ್ನುತ್ತಾರೆ ಲೇಖಕಿ. ಗಂಭೀರ ಸಾಹಿತ್ಯದತ್ತ ನೋಟ ಬೀರುವವರು ಬಹಳ ಕಮ್ಮಿ .ಬದುಕು ಭ್ರಾಮಕ ಜಗತ್ತು ಅಲ್ಲ. ಇಲ್ಲಿ ಕಲ್ಪನೆಗಳಿಂದ ಹೊರತಾದ ಅವೆಷ್ಟೋ ವಿಚಾರಗಳಿವೆ. ಇವುಗಳನ್ನು ಆಲೋಚಿಸಿ ಪ್ರಜ್ಞಾಪೂರ್ವಕವಾಗಿ ಸ್ವೀಕರಿಸುವ ಛಾತಿ ಹೊಂದಿದಾಗ ಬದುಕೆಂಬ ನಂದನವನ ಅರಳುವ ಪರಿಯನ್ನು ಬಹಳ ಸುಂದರವಾಗಿ ಇಲ್ಲಿ ಶಬ್ದಗಳಲ್ಲಿ ಹಿಡಿದಿಡಲಾಗಿದೆ.
ಮಹಿಳೆಯರನ್ನು ಮೀರಿಸುವ “ಮಾತು” ಕೆಲವು ಗಂಡಸರಿಗಿದ್ದರೂ ಹೇಗೆ ವಾಚಾಳಿ ಅನ್ನುವ ಪಟ್ಟವನ್ನು ಮಹಿಳೆಯರಿಗಷ್ಟೇ ಮೀಸಲಿಡುತ್ತಾರೆ ಅನ್ನುವುದರ ಒಳಹೊರಗನ್ನು ತೆರೆದಿಟ್ಟ ಲೇಖನ. ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಮಾತು ಬೇಕು, ಆದರೆ ಅದು ಯಾವತ್ತೂ ಅತಿಯಾಗಬಾರದು. ಅದು ಅತಿ ಆದಾಗಲೇ ಕೇಳುಗರಿಗೆ ಹಿಂಸೆ ಅನ್ನಿಸಿ ಇಲ್ಲ ಸಲ್ಲದ ಗಾಳಿ ಸುದ್ದಿಗಳು ಹಬ್ಬುತ್ತವೆ. ಹಾಗೆಂದು ಮಾತನಾಡಬೇಕಾದ ಸಂದರ್ಭದಲ್ಲಿ ಮೌನವಾಗಿದ್ದಾಗ ಅದೂ ತೊಂದರೆ, ಹಾಗಾಗಿ ಮಾತು ಮೌನಗಳೆರಡೂ ಹಿತಮಿತವಾಗಿ ಹೇಗೆ ನಮ್ಮೊಳಗಿರಬೇಕು ಅನ್ನುವುದನ್ನು ತಿಳಿ ಹೇಳುವಂತಹ ಒಂದು ಬರಹ.
ನೋವಿನ ಅಲೆಗಳ ಮೇಲೆಯೇ ತೇಲುತ್ತಾ ಸಾಗುವುದು ಬದುಕಲ್ಲ . ನಮ್ಮ ಚಿಂತೆ ನೋವುಗಳನ್ನು ಮರೆಯಲು ಇಲ್ಲಿರುವ ದಾರಿಗಳು ಹಲವು ಆಧ್ಯಾತ್ಮ ಪುಸ್ತಕಗಳು, ವ್ಯಕ್ತಿತ್ವ ವಿಕಸನದ ಭಾಷಣಗಳು ಇವೆಲ್ಲ ನಮ್ಮ ಮನಸ್ಸಿನ ಕ್ಲೇಶವನ್ನು ದೂರ ಗೊಳಿಸುವಲ್ಲಿ ಸಹಕಾರಿ ಎನ್ನುವ ಅಂಶವನ್ನು ಪರಿಚಯಿಸುವ ಒಂದು ಲೇಖನ -“ಕಬಿ ಖುಷಿ ಕಬಿ ಗಮ್ “.
ಹೆಣ್ಣು, ಅವಳ ತವಕ ತಲ್ಲಣಗಳು, ರಾಜಕೀಯ, ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಣ್ಣಿನ ಪಾತ್ರ, ಆಧುನಿಕ ಜಗತ್ತಲ್ಲೂ ಸಂಸಾರ, ಕುಟುಂಬದ ವಿಚಾರ ಇಣುಕಿದಾಗ ಹೆಣ್ಣು ಹೆಜ್ಜೆ ಹಿಂದಿಡುವ ಪರಿ, ಯುವಜನತೆಯ ಆಚಾರ ವಿಚಾರ, ಬದಲಾದ ವಿಚಾರಧಾರೆಗಳು, ಮುಗ್ಧ ಮಕ್ಕಳು, ಅವರ ಪ್ರಪಂಚ, ಎಲ್ಲ ವಿಚಾರಗಳನ್ನು ಒಳಗೊಂಡ ಒಂದು ಸುಂದರವಾದ, ಅದ್ಭುತವಾದ, ಸರಾಗವಾಗಿ ಓದಿಸಿಕೊಂಡು ಹೋಗುವ ಲೇಖನ ಮಾಲೆ ಈ “ತೆರೆದಂತೆ ಹಾದಿ”. ಇಲ್ಲಿ ನಮಗೆ ನಮ್ಮದೇ ಬದುಕಿನ ಇಡೀ ಚಿತ್ರಣ, ಬದುಕಿನ ಆಗುಹೋಗುಗಳು ಕಾಣಸಿಗುತ್ತವೆ. ಈ ಪುಸ್ತಕದ ಕುರಿತಾಗಿ ಬರೆದಷ್ಟೂ ಮುಗಿಯದು. ಈ ಪುಸ್ತಕದ ಇನ್ನೊಂದು ವಿಶೇಷ ಶುರುವಿನಿಂದ ಕೊನೆವರೆಗೂ ತಮ್ಮ ಬರಹದ ನಡುವೆ ಲೇಖಕಿ ಹಲವಾರು ಪ್ರಸಿದ್ಧ ಲೇಖಕರು, ಚಿಂತಕರು ಹಾಗೂ ಅವರ ಪ್ರಸಿದ್ಧ ಕೃತಿಗಳ ಪರಿಚಯ ನೀಡಿದ್ದು.
-ನಯನ ಬಜಕೂಡ್ಲು
ಏನೇ ಓದಿದರೂ, ವಿವರವಾಗಿ ಅಚ್ಚುಕಟ್ಟಾಗಿ ಬರೆಯುವ ನಿಮ್ಮ ಲೇಖನಿಗೆ, ತಾಳ್ಮೆಗೆ ಶರಣು.
Thank you Hemakka
ಜಯಶ್ರೀಯವರ ಪುಸ್ತಕದಂತೆಯೇ ನಯನರವರ ವಿಮರ್ಶಾತ್ಮಕ ಲೇಖನವೂ ತುಂಬಾ ಚೆನ್ನಾಗಿದೆ.
ಧನ್ಯವಾದಗಳು ಮೇಡಂ
ಥ್ಯಾಂಕ್ಸ್ ನಯನ ಅವರೇ. ನಿಮ್ಮ ನಲ್ಮೆಗೆ, ಸಹೃದಯತೆಗೆ.
ಚಿಕ್ಕ, ಚೊಕ್ಕ ಪರಿಚಯ ನಯನಾ..