ಸಾಗರ ಕಟ್ಟೆ
‘ಸಾಗರ ಕಟ್ಟೆ’ ನಾನು ಮೈಸೂರಿಗೆ ಬಂದಾಗಿನಿಂದ ಆ ಹೆಸರು ಕೇಳಿದರೆ ಏನೋ ಕುತೂಹಲ ಅಷ್ಟೇ ಖುಷಿ ,ಯಾಕೆ ಅಂತ ಗೊತ್ತಿಲ್ಲ ಇಂದಿಗೂ ಹಾಗೆ. ಆದರೆ ಅದನ್ನು ಹುಡುಕಿಕೊಂಡು ಹೋಗಬೇಕು, ನೋಡಬೇಕು ಅನ್ನುವ ತೀವ್ರತೆಯನ್ನು ಬೆಳೆಸಿಕೊಳ್ಳಲಿಲ್ಲ. ಆ ಹೆಸರು ಕೇಳಿದಾಗಲೆಲ್ಲಾ ಮನಸ್ಸು ನನ್ನ ಕಲ್ಪನೆಯ ಸಾಗರ ಕಟ್ಟೆಯಲ್ಲಿ ವಿಹರಿಸಿದುಂಟು.ಹೌದು ಸಾಗರಕಟ್ಟೆ , ಕೃಷ್ಣ ರಾಜಸಾಗರದ ಹಿನ್ನೀರಿನ ಒಂದು ಭಾಗ.ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಪಕ್ಷಿ ವೀಕ್ಷಣೆಗೆ ಗೆಳೆಯ ಚಂದ್ರಶೇಖರ್ (ಚಂದು) ಜೊತೆ ಒಂದೆರೆಡು ಸಲ ಬೈಕ್ ನಲ್ಲಿ ಹೋಗಿದ್ದೆ ಅದಕ್ಕೂ ಮೊದಲು ಒಮ್ಮೆ ಹೋಗಿದ್ದ ಮಾಸಲು ನೆನಪು. ನಿಜ ಅದು ನನ್ನ ಕಲ್ಪನೆಯ ಸಾಗರಕಟ್ಟೆಯೇ ಆಗಿತ್ತು ,ಇನ್ನೂ ಊರಿನ ಒಳಗೆ ಹೋಗಿಲ್ಲ ಅದರ ಬಗ್ಗೆ ಅಂತಾ ಕಲ್ಪನೆಯು ಕಟ್ಟಿ ಕೊಂಡಿಲ್ಲ. ಕಟ್ಟಿ ಕೊಂಡಿದ್ದು ಹಿನ್ನೀರಿನ ಬಗ್ಗೆ. ಅದಕ್ಕೊಂದು ಸುಂದರ ಹೆಸರು ‘ಸಾಗರ ಕಟ್ಟೆ’.ಈಗ ವಿಷಯಕ್ಕೆ ಬರೋಣ ‘ಚಾರಣ’ ಹಲವು ರೀತಿಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಿರುವುದು ಮುಂದಿನ ತಲೆಮಾರಿಗೆ ಬೇರೆಯದೆ ರೂಪದಲ್ಲಿ ಪ್ರಕೃತಿಗೆ ಇನ್ನಷ್ಟು ಮಾನಸಿಕವಾಗಿ ಹತ್ತಿರವಾಗಲು, ಇನ್ನಷ್ಟು ಆಳವಾಗಿ ತಿಳಿಯಲು ಅದರ ಅವಶ್ಯಕತೆ ಅರಿಯಲು ಸಹಕಾರಿಯಾಗುತ್ತದೆ.
9-02-2020 ರಂದು ಯೂತ್ ಹಾಸ್ಟೆಲ್ ಗಂಗೋತ್ರಿ ಘಟಕದ ಆಯೋಜಿಕರಾದ ವೈದ್ಯನಾಥನ್ ಮತ್ತು ನಾಗೇಂದ್ರ ಪ್ರಸಾದ್ ಆಯೋಜಿಸಿದ್ದ ಅವರ ಐವತ್ತು ಮೂರನೇ ಕಾರ್ಯಕ್ರಮ ಪರಿಸರ ಸ್ನೇಹಿ ನಡಿಗೆ ಧ್ಯಾನಧಾಮ ಫಾರಂ ಹೌಸ್ ಗೆ. ಕೆ ಆರ್ ನಗರಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಡೋರ್ನಹಳ್ಳಿಯಲ್ಲಿ ಇಳಿದು ಐದು ಕಿಲೋಮೀಟರ್ ನಡೆದು ಹೋದರೆ ನಾವು ತಲುಪಬೇಕಿದ್ದ ಸ್ಥಳ .
ಮೈಸೂರಿನಿಂದ ಬೆಳಗ್ಗೆ ರೈಲಿನಲ್ಲಿ ಪ್ರಯಾಣ, ಪರಿಚಯದವರನ್ನೆ ಇನ್ನಷ್ಟು ಪರಿಚಯಿಸಿ ಕೊಳ್ಳುತ್ತಾ ಮೂವತ್ತು ಮೂರು ಚಾರಣಿಗರು ಹೊರಟೆವು. ನನಗೆ ಮತ್ತೆ ಸಾಗರ ಕಟ್ಟೆ ನೋಡುತ್ತೇನೆ ಅನ್ನುವ ಖುಷಿ ಒಳಗೊಳಗೆ. ಮಾತು ಹಲವು ವಿಷಯಗಳನ್ನು ತಾಕಿ ರೈಲಿನ ಜೊತೆಯಲ್ಲೇ ಸಾಗುತ್ತಿತ್ತು.ಸಹ ಪ್ರಯಾಣಿಕ ಕುಟುಂಬ ಒಂದು ನಮ್ಮ ಜೊತೆ ಮಾತಿಗೆ ಸೇರಿಕೊಂಡಿತು ಅವರು ಅಕ್ಕಿ ಹೆಬ್ಬಾಳಿಗೆ ಹೊರಟಿದ್ದರು. ದಿವಂಗತ ಎ. ಎನ್. ಮೂರ್ತಿರಾಯರ ಊರಿಗೆ, ದೇವರನ್ನು ನಂಬದ, ದೇವರಿಲ್ಲ ಎನ್ನುವ ವಿಷಯ ಇಟ್ಟುಕೊಂಡು ‘ದೇವರು’ ಎನ್ನುವ ಪುಸ್ತಕವನ್ನು ಬರೆದು ಅದೇ ಪುಸ್ತಕಕ್ಕೆ ಪಂಪ ಪ್ರಶಸ್ತಿ ಪಡೆದು ನೂರುವರುಷಕ್ಕು ಹೆಚ್ಚು ಕಾಲ ಅದೇ ನಂಬಿಕೆಯಲ್ಲಿ ಬದುಕ್ಕಿದ್ದವರು ಎ.ಎನ್.ಮೂರ್ತಿರಾಯರು, ನನ್ನ ಅದೇ ನಂಬಿಕೆಗೆ ಬೆನ್ನಾಗಿತ್ತು ಅವರ ‘ದೇವರು’ ಪುಸ್ತಕ ಅಂದಿಗೆ.
ಒಮ್ಮೆ ಸುಬ್ರಮಣ್ಯಕ್ಕೆ ಹೋಗಿದ್ದಾಗ ಜೊತೆಯಲ್ಲಿ ಬಂದವರು ದೇವರ ದರ್ಶನಕ್ಕೆ ಕಾಯುತ್ತಿದ್ದರು.ನಾನು ಅಲ್ಲಿನ ಪ್ರಾಂಗಣದಲ್ಲಿ ಸುತ್ತು ಹೊಡೆಯುತ್ತಿದ್ದೆ ಅಲ್ಲಿ ದೇವರ ಭಕ್ತಿ ಗೀತೆಗಳ,ಪುರಾಣ ಕತೆಗಳ ಪುಸ್ತಕಗಳನ್ನು ಮಾರಾಟಕ್ಕೆ ಇಟ್ಟಿದ್ದರು ಮಧ್ಯೆದಲ್ಲಿ ‘ದೇವರು’ ಎ .ಎನ್.ಮೂರ್ತಿರಾಯರ ಪುಸ್ತಕ.ಅದನ್ನು ನೋಡಿ ವೈಚಾರಿಕ ಮನಸ್ಸಿಗೆ ಸಿಕ್ಕ ಗೌರವ ಅನಿಸಿತು. ಸಾಗರ ಕಟ್ಟೆಗೆ ಮೊದಲೇ ಹಿನ್ನೀರಿನ ದರುಶನವಾಗ ತೊಡಗಿತು. ಬೇಸಿಗೆ ಕಾಲ ಸನಿಹದಲ್ಲಿ ಇದ್ದರು.ಹಟ ಬಿಡದೆ ನೀರು ನೆಲ ಕಾಣಿಸದಷ್ಟು ದೂರ ಹರಡಿ ಕೊಂಡಿತ್ತು.ಆಗ ನೆನಪಾಯಿತು ಸೀಗಲ್(seagull) ಚಳಿಗಾಲದಲ್ಲಿ ಕೃಷ್ಣರಾಜ ಸಾಗರದ ಹಿನ್ನೀರಿನಲ್ಲಿ ಕಾಣಿಸಿಕೊಳ್ಳುವ ಈ ವಲಸೆ ಹಕ್ಕಿಗಳು ನೋಡಲು ತುಂಬಾ ಮುದ್ದಾಗಿ ಕಾಣುತ್ತವೆ.
ರೈಲು ಸಾಗರ ಕಟ್ಟೆ ಸ್ಟೇಷನ್ ದಾಟಿ ಸೇತುವೆ ಮೇಲೆ ಬಂತು ಎರಡೂ ಇಕ್ಕೆಲಗಳಲ್ಲಿ ದೂರಕ್ಕೂ ನೀರು. ಚಂದು ಜೊತೆಯಲ್ಲಿ ಬಂದಾಗ ಇದೇ ಸೇತುವೆ ಮೇಲೆ ಕೆಳಗೆ ಓಡಾಡಿದ್ದ ನೆನಪು ಆಗ ನೀರು ಒಣಗಿ ಡ್ಯಾಂನ ಕಡೆ ಮಾತ್ರ ಇತ್ತು ಅಲ್ಲಿ ಸಿಕ್ಕಿದ್ದೆ ಈ ಸೀಗಲ್ಗಳು ಸಣ್ಣ ನಡುಗಡ್ಡೆ ಮೇಲೆ ನೀರುಕಾಗೆ ಪಕ್ಷಿಗಳ ಜೊತೆ black and white combination ನಲ್ಲಿ ವಿಶ್ರಮಿಸುತ್ತಿದ್ದದನ್ನು ತೆವಳಿಕೊಂಡು ಹೋಗಿ ಫೋಟೋ ತೆಗೆದಿದ್ದೆವು.
ದಾರಿ ಉದ್ದಕ್ಕೂ ಪಕ್ಷಿಗಳನ್ನು ನೋಡುತ್ತಾ ಗುರುತಿಸುತ್ತಾ ಜೊತೆಯಲ್ಲಿ ಇದ್ದ ಆಸಕ್ತರಿಗೆ ವಿವರಣೆ ಕೊಡುತ್ತಿದ್ದೆ, ಸಹ ಪ್ರಾಮಾಣಿಕ ಕುಟುಂಬಕ್ಕು ಆಸಕ್ತಿ ಕೆರಳಿ ಅವರು ಕೇಳಿಸಿ ಕೊಳ್ಳತೊಡಗಿದರು. ಬಂತು ಡೋರ್ನಹಳ್ಳಿ. ರೈಲಿನಿಂದ ಇಳಿದು ಜೊತೆಯಲ್ಲಿ ಪ್ರಯಾಣಿಸಿದ ಕುಟುಂಬಕ್ಕೆ ಟಾಟಾ ಮಾಡಿ ನಮ್ಮ ನಡಿಗೆಯನ್ನು ಪ್ರಾರಂಭಿಸಿದೆವು. ದಾರಿ ಉದ್ದಕ್ಕೂ ಬಹಳಷ್ಟು ಕಡೆ ಬತ್ತದ ಗದ್ದೆಗಳು ಕುಯಿಲು ಮುಗಿಸಿ ದೇಹ ಒಣಗಿಸಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ನೀರು ಹಾಯಿಸಿ ಕೊಂಡು ನಾಟಿಗೆ ಸಿದ್ದಗೊಳ್ಳುತ್ತಿದ್ದವು. ಒಟ್ಟಾರೆ ಬಟಂಬಯಲು. ಅಲ್ಲಲ್ಲಿ ಕೆಲವು ಮರಗಳು ಹಣ್ಣೆಲೆ ಕಳಚಿಕೊಂಡು ಚಿಗುರು ಹಸಿರು ಮೈತುಂಬಿ ಕೊಂಡಿದ್ದವು ಭಿನ್ನ ಭಿನ್ನ ಹಕ್ಕಿಗಳ ದರುಶನವಾಗುತ್ತಿತ್ತು ಮರವೊಂದರ ತುತ್ತತುದಿಯಲ್ಲಿ ಗೂಡುಕಟ್ಟಿ ಹದ್ದೊಂದು ಅದನ್ನು ನೋಡಿ ಕಣ್ಣು ತುಂಬಿಕೊಳ್ಳುತ್ತಿತ್ತು.ಎರಡು ಕಿಲೋಮೀಟರ್ ನಡೆದ ಮೇಲೆ ಕಾಲುವೆ ಒಂದರ ಪಕ್ಕ ಬೆಳೆದಿದ್ದ ಮರಗಳ ನೆರಳಲ್ಲಿ ಉಪಹಾರದ ವ್ಯವಸ್ಥೆ ಮಾಡಿದ್ದರು, ಫಾರಂ ಹೌಸ್ ನ ಒಡೆಯ ಮುರಳಿ ಮತ್ತು ಕುಟುಂಬ ಮುಂದೆ ನಿಂತು ಎಲ್ಲರಿಗೂ ಬಡಿಸಿದರು, ಸಂತೃಪ್ತಿಯಾಗಿ ತಿಂದು ಮತ್ತೆ ನಡಿಗೆ ಶುರು ಮಾಡಿದೆವು.ಬೆಳಗ್ಗೆಯಿಂದ ಮುನಿಸಿಕೊಂಡು ನಮಗೆ ಸಹಕರಿಸುತ್ತಿದ್ದ ಸೂರ್ಯ ಮುನಿಯಲು ಶುರು ಮಾಡಿದ್ದ.ಮತ್ತೆ ದಾರಿ ಉದ್ದಕ್ಕೂ ಪಕ್ಷಿಗಳನ್ನು ನೋಡುತ್ತಾ ದೂರದಲ್ಲಿ ಅರಳಿ ನಿಂತಿದ್ದ ಮುತ್ತುಗದ(flame of forest) ಹೂವಿನ ಮರಗಳು ನಮ್ಮ ಗಮನವನ್ನು ತಮ್ಮತ್ತ ಸೆಳೆದು ಕೊಂಡವು, ಬೇಸಿಗೆಯ ಮುನ್ಸೂಚನೆ.
ಮತ್ತೆ ಎದುರಿಗೆ ದೂರದಲ್ಲಿ ಹಿನ್ನೀರು ಅದರ ಮೇಲೆ ಆಗಾಗ ಹಾದು ಬರುವ ಗಾಳಿ ತಂಪಾಗಿ ನಮಗೆ ಹಿತ ಸಿಂಚನ ಮಾಡುತ್ತಿತ್ತು.ರಸ್ತೆ ಮತ್ತು ಹಿನ್ನೀರಿನ ಮಧ್ಯೆ ಕುಯಿಲು ಮುಗಿಸಿದ್ದ ಬತ್ತದ ಗದ್ದೆ. ಆಗ ಕಾಣಿಸಿದ್ದು ಧ್ಯಾನಧಾಮ ಫಾರಂ ಹೌಸ್ ಹಸಿರಿನಿಂದ ಕಂಗೊಳಿಸುತ್ತಿದ್ದ ಒಂದೇ ಒಂದು ತೋಟ. ಹಿಂದೆ ಇಲ್ಲಿ ಮನೆಗಳಿದ್ದವಂತೆ ಕೃಷ್ಣ ರಾಜಸಾಗರದ ನಿರ್ಮಾಣದ ಸಮಯದಲ್ಲಿ ಹಿನ್ನೀರಿನಲ್ಲಿ ಮುಳುಗಡೆ ಆಗಿ ಊರನ್ನು ಸ್ವಲ್ಪ ಹಿಂದಕ್ಕೆ ನಿರ್ಮಿಸಿ ಕೊಂಡರಂತೆ ಈಗ ಹಿನ್ನೀರು ಅಲ್ಲಿನ ಜನತೆಯ ಜೀವನಾಡಿ.
ಒಂಬತ್ತು ಎಕರೆ ಜಾಗದಲ್ಲಿ ವಿವಿಧ ನೂರು ಜಾತಿಯ ಹೂ ,ಹಣ್ಣಿನ ಮರಗಳನ್ನು ಮೂರು ವರುಷದ ಹಿಂದೆ ನೆಟ್ಟು ಬೆಳೆಸಿದ್ದಾರೆ.ಮುರಳಿಯವರು ಪ್ರತಿ ಮರವನ್ನು ಪರಿಚಯಿಸುತ್ತಾ ಅವುಗಳ ಮಹತ್ವದ ಬಗ್ಗೆ ಹೇಳಿದರು ಅದರಲ್ಲಿ ಇಂಗು ( asafitidea), ವರುಷ ಪೂರಾ ಬಿಡುವ ಮಾವು, ಸೇಬು, ಕಿತ್ತಳೆ,ಗೇರುಬೀಜ(ಗೊಡಂಬಿ)…..ಗೇರು ಬೀಜದ ಜೊತೆಗಿದ್ದ ಗೇರು ಹಣ್ಣು ಒಂದು ಕೊಟ್ಟರು ಬಾಲ್ಯದಲ್ಲಿ ಶಾಲೆಗಳ ಮುಂದೆ ಮಾರುತ್ತಿದ್ದರು ಅದರಲ್ಲಿ ರಸ ಮಾವಿನ ಹಣ್ಣಿನತರ ತುಂಬಿಕೊಂಡಿರುತ್ತದೆ. ಕಚ್ಚಿ ಹೀರುತ್ತಿದ್ದರೆ ಹಣ್ಣಿನಿಂದ ಚಿಮ್ಮಿ ರಸತೊಟ್ಟಿಕ್ಕುತ್ತದೆ. ಮತ್ತೆ ಆ ಅನುಭವವನ್ನು ಪಡೆಯುವ ಅವಕಾಶ ಸಿಕ್ಕಿತು ಎಲ್ಲರೂ ಗಂಟಲಲ್ಲಿ ಕೆರೆತ ಬರುತ್ತದೆ ಉಪ್ಪು ಹಾಕಿ ತಿನ್ನಬೇಕು ಎಂದು ಸಲಹೆ ಕೊಡುತ್ತಿದ್ದರು ಏನಾದರೂ ಆಗಲಿ ಒಂದು ಕೈ ನೋಡೆ ಬಿಡುವ ಎಂದು ರಸವ ಹೀರಿ ಆನಂದಿಸಿದೆ ಏನು ಆಗಲಿಲ್ಲ.
ಇದಕ್ಕೆ ಮೊದಲು ಮುರಳಿಯವರು ಧ್ಯಾನದ ಬಗ್ಗೆ ಮಾಹಿತಿ ನೀಡಿ ಮೂವತ್ತು ನಿಮಿಷದ ಧ್ಯಾನ ಮಾಡಿಸಿದರು. ತೋಟದ ಮಧ್ಯೆ ಮರಗಳ ನೆರಳಲ್ಲಿ ಕುಳಿತು ಕೆಲವರು ಧ್ಯಾನಿಸಿದರೆ ಉಳಿದವರು ನಿದ್ರಿಸಿದರು ನಾನು ಧ್ಯಾನಿಸುತ್ತಾ ನಿದ್ರೆಗೆ ಜಾರಿದೆ ಆದರೆ ಸುಪ್ತ ಮನಸ್ಸು ಎಚ್ಚರವಾಗಿತ್ತಾ ಗೊತ್ತಿಲ್ಲ ಅವರು ನೀಡುತ್ತಿದ್ದ ಸೂಚನೆಗಳು ಅಂತಿಮ ಘಟ್ಟಕ್ಕೆ ಬಂದಾಗ ಎರಡೂ ಹಸ್ತಗಳನ್ನು ಉಜ್ಜಿ ಅವರು ಹೇಳಿದ ದೇಹದ ಏಳು ಚಕ್ರಗಳ ಮೇಲೆ ಹಸ್ತವನ್ನು ಇಡುತ್ತಾ ನಿಧಾನವಾಗಿ ಕಣ್ಣು ತೆರೆದು ಧ್ಯಾನದಿಂದ ಹೊರ ಬಂದೆ ನಡೆದು ಬಂದ ಆಯಾಸ ಮಾಯವಾಗಿತ್ತು.
ತೋಟಕ್ಕೆ ಬಂದವರು ಇಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಫೋನ್ ಬಳಸಬಾರದು. ಮೌನಕ್ಕೆ ಇಲ್ಲಿ ಆಧ್ಯತೆ ಹೆಚ್ಚು ಹೌದು ನಿರ್ಜನರಿರುವ ಈ ಜಾಗದ ಏಕಾಂತವನ್ನು ಪ್ರಕೃತಿಯ ಸೌಂದರ್ಯ ಹಾಗೂ ಅದರ ಸಂಗೀತವನ್ನು ಅನುಭವಿಸಲು ಮೌನ ಅನಿವಾರ್ಯ.
ಊಟದ ಮನೆಯನ್ನು ವಿಶೇಷವಾಗಿ ಬಾಗಿಲಿಗೆ ಹುರುಳಿಕಾಯಿ ತೋರಣ,ತಾರಸಿಗೆ ವಿವಿಧ ತರಕಾರಿಗಳನ್ನು ನೇತು ಹಾಕಿ ಅಲಂಕರಿಸಿದ್ದರು ಆಕರ್ಷಕವಾಗಿತ್ತು.ವಿಶೇಷ ಪಾನಕ, ವಿಧವಿಧವಾದ ಹಣ್ಣುಗಳು,ಹಸಿತರಕಾರಿ,ಜೊಳದ ರೊಟ್ಟಿ, ಬದನೆಕಾಯಿ ಗೊಜ್ಜು, ಫ್ರೈಡ್ ರೈಸ್, ಕೆಂಪಕ್ಕಿ ಅನ್ನ, ತಿಳಿಸಾರು,ಕಲಸಿದ ಮೊಸರನ್ನ, ಸಾಬೂಧಾನ್ ಪಾಯಸ ಹೀಗೆ ಅಡುಗೆಯನ್ನು ಅಚ್ಚುಕಟ್ಟಾಗಿ ತಯಾರಿಸಿದ್ದರು. ಪುಷ್ಕಳವಾಗಿ ತಿಂದು ನೇತು ಹಾಕಿದ್ದ ಬಾಳೆ ಗೊನೆಯಿಂದ ಹಣ್ಣು ಕಿತ್ತು ತಿಂದು ಮುಗಿಸುವಷ್ಟರಲ್ಲಿ ಸಮಯ ಮಧ್ಯಾಹ್ನ ಮೂರು ಮೂವತ್ತು ಮುಟ್ಟಿತ್ತು. ಸಂಜೆ ನಾಲ್ಕರ ವರೆಗೂ ಹಿನ್ನೀರಿನ ಬಳಿ ಹೋಗಿ ಸ್ವಲ್ಪ ಸಮಯ ಕಳೆದೆವು ನಾನು ಕೆಲವರೊಟ್ಟಿಗೆ ಸೀಗಲ್ ನ ಫೋಟೋ ತೆಗೆಯಲು ಅಲ್ಲೆ ಪಕ್ಕದಲ್ಲಿ ಅವುಗಳು ಇದ್ದ ಕಡೆ ಹೋದೆವು. ಬಹಳ ಸೂಕ್ಷ್ಮವಾಗಿದ್ದ ಅವು ನಮ್ಮ ಶಬ್ದ ಕೇಳುತಿದಂತೆ ನಮ್ಮಿಂದ ಇನ್ನಷ್ಟು ದೂರ ಹೋದವು. ಹೆಜ್ಜಾರ್ಲೆ,ಸಣ್ಣ ಮತ್ತು ದೊಡ್ಡ ನೀರು ಕಾಗೆ, ಮರಗಾಲಕ್ಕಿ, ರಿವರ್ಟರ್ನ್ ಮತ್ತೊಂದು ಅಷ್ಟು ಪಕ್ಷಿಗಳನ್ನು ನೋಡಿಕೊಂಡು ಮತ್ತೆ ಫಾರಂ ಗೆ ಬಂದು ವಿಶೇಷ ಪಾನಕ ಕುಡಿದು ಮುರಳಿ ಮತ್ತು ಕುಟುಂಬದವರಿಗೆ ಧನ್ಯವಾದ ಹೇಳಿ ಮತ್ತೆ ಐದು ಕಿಲೋಮೀಟರ್ ದೂರದ ಡೋರ್ನ ಹಳ್ಳಿ ರೈಲ್ವೆ ನಿಲ್ದಾಣದ ಕಡೆ ನಮ್ಮ ನಡಿಗೆ ಶುರುವಾಯಿತು.
ನಗರಗಳಲ್ಲಿ ಪಕ್ಕದ ಮನೆಯವರ ಪರಿಚಯವೇ ಇರುವುದಿಲ್ಲ ಇನ್ನು ಬೀದಿಗೆ ಬಂದವರ ಪರಿಚಯವಿರುತ್ತದೆಯೇ? ಚಾರಣಕ್ಕೆ ಬಂದರು ಎಲ್ಲರನ್ನೂ ಮಾತು ಆಡಿಸುವುದಿಲ್ಲ ನಮ್ಮದೆ ಗುಂಪಿನೊಳಗೆ ಕಳೆದು ಹೋಗುತ್ತೇವೆ ಆದರೆ ಹಳ್ಳಿಗಳು ನಗರೀಕರಣಗೊಳ್ಳುತ್ತಿದ್ದರು ಇನ್ನೂ ಊರಿಗೆ ಬಂದವರ ಬಗ್ಗೆ ಕುತೂಹಲ ಉಳಿಸಿಕೊಂಡಿರುವುದು ಖುಷಿಯ ವಿಷಯ. ಫಾರಂ ಹೌಸ್ ಗೆ ಹೋಗುವಾಗಲು, ಬರುವಾಗಲೂ ದಾರಿಯಲ್ಲಿ ಸಿಗುವ ಊರಿನವರ ಪ್ರಶ್ನೆ ,ಎಲ್ಲಿಯವರು?, ಎಲ್ಲಿಗೆ ಹೋಗುತ್ತಿದ್ದಿರೀ?, ನೀವೆಲ್ಲಾ ಒಂದೇ ಊರಿನವರ? ಅಲ್ಲಿಗೆ ಯಾಕೆ? ಅಲ್ಲಿ ಏನು ವಿಶೇಷ? ಊಟಕ್ಕೆ ಏನು ಮಾಡಿದಿರಿ?ಓ ಇಷ್ಟು ಜನಕ್ಕೂ ಅವರೇ ಅಡುಗೆ ಮಾಡಿದ್ದರೆ?… ನಡೆದು ಹೋಗುವವರು,ಜಮೀನಿನಲ್ಲಿ ಕೆಲಸ ಮಾಡುವವರು, ಬೈಕ್ ನಲ್ಲಿ ಹೋಗುವವರು, ಮನೆಯಿಂದ ಹೊರಗೆ ಓಡಿ ಬಂದು ಕೇಳಿದವರು, ಕಾರಿನಲ್ಲಿ ಹೋಗುತ್ತಿದ್ದವರು ನಿಲ್ಲಿಸಿ ಕೇಳುತ್ತಿದ್ದರು,ಮನೆಯ ಮುಂದೆ, ಅಂಗಡಿಯಲ್ಲಿ ಕುಳಿತವರು ಎಲ್ಲರಿಗೂ ಕುತೂಹಲ , ಪ್ರಶ್ನೆ. ಮನುಷ್ಯ ಸಂಘಜೀವಿ ಆದರೆ ನಗರದ ಜನ ಒಳಗೆ ಒಂಟಿ?.
ಅಚ್ಚು ಕಟ್ಟಾದ, ಶಿಸ್ತು ಬದ್ಧವಾದ, ಜವಾಬ್ದಾರಿಯುತವಾದ, ಕಾಳಜಿಯ, ಸರಳ, ನವಿರಾದ ಭಿನ್ನ ಕಾರ್ಯಕ್ರಮ ಆಯೋಜಿಸಿದ್ದ ವೈದ್ಯನಾಥನ್ ಮತ್ತು ನಾಗೇಂದ್ರರವರಿಗೆ ಧನ್ಯವಾದಗಳು ಮತ್ತು ಸಹ ಚಾರಣಿಗರಿಗೂ ವಂದನೆಗಳು.
-ಶೈಲಜೇಶ, ಮೈಸೂರು
ತುಂಬಾ ಚೆನ್ನಾಗಿದೆ ಬರಹ. ಓದುತ್ತಾ ಓದುತ್ತಾ ಕುಳಿತಲ್ಲೇ ಮನಸಲ್ಲಿ ಸುಂದರ ಪ್ರಕೃತಿ ಯ ದೃಶ್ಯ ಮೂಡಿತು. ಜೊತೆಗೊಂದು ಒಳ್ಳೆಯ ಪುಸ್ತಕದ ಪರಿಚಯ ನೀಡಿದ ರೀತಿಯೂ ಚೆನ್ನಾಗಿದೆ.