ಪತ್ರಿಕೆಗೆ ಬರೆಯುವ ಮುನ್ನ…..ಭಾಗ 3

Share Button

ಬರಹಕ್ಕೆ ಆಕರ್ಷಕವಾದ ಶೀರ್ಷಿಕೆ ಅಗತ್ಯ

ಸಾಮಾನ್ಯವಾಗಿ ಪತ್ರಿಕೆಯನ್ನು ಓದುವಾಗ, ಚೆಂದದ ಶೀರ್ಷಿಕೆಯೇ ನಮ್ಮ ಗಮನ ಸೆಳೆಯುತ್ತದೆ. ಬಹಳಷ್ಟು ಬಾರಿ, ಲೇಖನ ಚೆನ್ನಾಗಿದ್ದರೂ, ಶೀರ್ಷಿಕೆ ಸುಮಾರಾಗಿದ್ದರೆ, ನಾವು ಲೇಖನವನ್ನು ಪೂರ್ಣವಾಗಿ ಓದದೆ ಪುಟ ತಿರುಗಿಸುತ್ತೇವೆ. ಹಾಗಾಗಿ, ಬರಹಗಾರರು ಲೇಖನಕ್ಕೆ ಕೊಡುವಷ್ಟೇ ಪ್ರಾಧಾನ್ಯತೆಯನ್ನು ಶೀರ್ಷಿಕೆಗೂ ಕೊಡಬೇಕು. ಕೆಲವರು ಬರಹಗಳನ್ನು ಚೆನ್ನಾಗಿ ಬರೆದಿದ್ದರೂ, ಅಚಾತುರ್ಯದಿಂದಲೋ, ಅರಿವಿಲ್ಲದೆಯೋ ಆಯಾ ಬರಹಕ್ಕೆ ಸೂಕ್ತವಾದ ಶೀರ್ಷಿಕೆಯನ್ನು ಕೊಡಲು ಮರೆತಿರುತ್ತಾರೆ. ಇದು ಸರ್ವಥಾ ಸಲ್ಲದು. ಪತ್ರಿಕೆಯವರು ತಾವೇ ಶೀರ್ಷಿಕೆ ಕೊಡುತ್ತಾರೆ ಎಂಬ ನಂಬಿಕೆಯಿಂದ  ಅಥವಾ ಹೇಗೂ ಬದಲಾಯಿಸುತ್ತಾರೆ ಎಂಬ ಭಾವನೆಯಿಂದ, ಬರಹಗಾರರು ಶೀರ್ಷಿಕೆ ಕೊಡದೇ ಲೇಖನಗಳನ್ನು ಕಳುಹಿಸಿದರೆ. ಅಂತಹ ಬರಹಗಳು ಅಸ್ವೀಕೃತವಾಗುವ ಸಾಧ್ಯತೆಗಳೇ ಹೆಚ್ಚು.

ಆಕರ್ಷಕವಾದ ಶೀರ್ಷಿಕೆ ಬರೆಯುವುದು ಒಂದು ಕಲೆ.  ಶೀರ್ಷಿಕೆ ಬರೆಯುವುದಕ್ಕೆ ನಿರ್ಧಿಷ್ಟ ರೂಪುರೇಷೆಗಳನ್ನು ಹೇಳಲಾಗದು. ಇಲ್ಲಿ ಕ್ರಿಯಾಶೀಲತೆ ಅಗತ್ಯ. ಶೀರ್ಷಿಕೆಯು ಓದುಗರ ಗಮನ ಸೆಳೆಯುವಂತಿರಬೇಕು. ಸಾಂದರ್ಭಿಕವಾಗಿ, ಅರ್ಥವತ್ತಾಗಿ, ಲೇಖನಕ್ಕೆ ಪೂರಕವಾಗಿ. ತೀರಾ ಚಿಕ್ಕದೂ ಅಲ್ಲದ, ಅತಿ ದೊಡ್ಡದೂ ಅಲ್ಲದ ನಾಲ್ಕಾರು ಪದಗಳ ಗುಚ್ಚವಾಗಿದ್ದರೆ ಸಾಕು. ಇತ್ತೀಚಿನ ದಿನಗಳಲ್ಲಿ ಬೇರೆ ಭಾಷೆಯ ಪದಗಳನ್ನು ಸಾಂದರ್ಭಿಕವಾಗಿ ಬಳಸಿ ಚೆಂದದ ಶೀರ್ಷಿಕೆ ಬರೆಯುವುದೂ ಇದೆ. ಅದೊಂದು ತರ ‘ಪಂಚಿಂಗ್’ ಆಗಿರುತ್ತದೆ. ಹಾಗೆಂದು, ಪರಭಾಷೆಯ ಪದಗಳು ಲೇಖನಕ್ಕೆ ಸರಿಹೊಂದದಿದ್ದರೆ ಬಳಸಬಾರದು.

ಹವ್ಯಾಸಕ್ಕಾಗಿ ಬರೆಯುವವರು, ಉತ್ತಮ ಶೀರ್ಷಿಕೆ ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಸುಲಭೋಪಾಯ ಎಂದರೆ, ಪ್ರತಿದಿನ ಕನಿಷ್ಟ ಎರಡು/ಮೂರು ದಿನಪತ್ರಿಕೆಗಳ ಮುಖಪುಟ ಬರಹಗಳ ಶೀರ್ಷಿಕೆಯನ್ನು ಗಮನಿಸುವುದು. ಸಾಮಾನ್ಯವಾಗಿ, ಪತ್ರಿಕೆಗಳ ಮುಖಪುಟದಲ್ಲಿ ಹಿಂದಿನ ದಿನ ದೇಶ ಅಥವಾ ರಾಜ್ಯದಲ್ಲಿ ಸಂಭವಿಸಿರುವ ಪ್ರಮುಖ ಘಟನೆಗಳ ಬಗ್ಗೆ ವರದಿಗಳಿರುವುದರಿಂದ, ವಿಷಯಗಳಲ್ಲಿ ಸಾಮ್ಯತೆ ಇರುತ್ತದೆ. ಆದರೆ ಶೀರ್ಷಿಕೆಯು ಬರೆದವರ ಆಸಕ್ತಿ ಹಾಗೂ  ಕ್ರಿಯಾಶೀಲತೆಯ ಪ್ರತೀಕವಾಗಿ, ವಿಭಿನ್ನವಾಗಿರುತ್ತವೆ. ಹಾಗಾಗಿ, ಒಂದೇ ವಿಷಯಕ್ಕೆ ಬೇರೆ ಬೇರೆ ಶೀರ್ಷಿಕೆ ಕೊಟ್ಟಿರುವುದನ್ನು ಗಮನಿಸಲು ನಮಗೆ ಸಾಧ್ಯವಾಗುತ್ತದೆ.

ಹನಿಗವನಕ್ಕೆ ಪುಟ್ಟ ಶೀರ್ಷಿಕೆ ಇದ್ದರೆ ಪರವಾಗಿಲ್ಲ. ಆದರೆ 7-8 ಸಾಲುಗಳಿಗಿಂತ ಹೆಚ್ಚಿರುವ ಕವನ ಅಥವಾ ಬರಹಗಳಿಗೆ ಕೇವಲ ಎರಡು ಅಕ್ಷರದ ಶೀರ್ಷಿಕೆ ಚೆನ್ನಾಗಿ ಕಾಣಿಸುವುದಿಲ್ಲ. ಉದಾ: ‘ಮರ’ ಎಂಬ ಶೀರ್ಷಿಕೆಯ ಬದಲು ‘ಕುಡಿಯೊಡೆದ ಮರ’ ಉತ್ತಮ. ಅದೇ ರೀತಿ ವಾಕ್ಯದಂತಹ, ಆಡುಭಾಷೆಯ, ಅತಿ ಸರಳ ಪದಗಳು ಶೀರ್ಷಿಕೆಯಲ್ಲಿದ್ದರೆ ಆಕರ್ಷಕ ಎನಿಸುವುದಿಲ್ಲ. ಉದಾ:’ನಮ್ಮ ಊರಿನ ಜಾತ್ರೆಯ ರಥೋತ್ಸವದ ಬಗ್ಗೆ ನೆನಪು’. ಇದು ತೀರಾ ಸರಳ ಶೀರ್ಷಿಕೆಯಾಗಿದೆ. ಇದನ್ನು ‘ಮನಸಿನ ಪುಟದಲ್ಲಿ ನೆನಪಿನ ಸಾಲುಗಳು’ ಅಂತಲೋ ‘ಜಾತ್ರೆಯೊಂದಿಗೆ ಬೆಸೆದ ಸಂಭ್ರಮ’ ಅಂತಲೋ ಬರೆದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ.

ನನ್ನ ಅನುಭವಗಳನ್ನು ಹೇಳುವುದಾದರೆ, ಒಮ್ಮೆ ನಾನು ‘ಹುರುಳಿಕಾಳನ್ನು’ ಬಳಸಿ ತಯಾರಿಸಬಹುದಾದ ವೈವಿಧ್ಯಮಯ ಅಡುಗೆಗಳನ್ನು ತಯಾರಿಸಿ, ‘ಹುರುಳಿಕಾಳಿನ ರುಚಿ ವೈವಿಧ್ಯ’ ಎಂಬ ಶೀರ್ಷಿಕೆಯ ಬರಹವನ್ನು, ಸಂಬಂಧಿತ ಚಿತ್ರಗಳನ್ನು ಲಗತ್ತಿಸಿ, ಪತ್ರಿಕೆಯೊಂದರ ಮಹಿಳಾ ವಿಭಾಗಕ್ಕೆ ಕಳುಹಿಸಿದ್ದೆ. ಆ ಬರಹವು ‘ಹುರುಳಿಕಾಳಲ್ಲಿ ಹುರುಳುಂಟು’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾಯಿತು. ಈ ಶೀರ್ಷಿಕೆಯು ಎಷ್ಟು ಸೊಗಸಾಗಿದೆ ಹಾಗೂ ಅರ್ಥವತ್ತಾಗಿದೆ ಅನಿಸಿತು. ನನ್ನ ಮುಂದಿನ ಬರಹಗಳಿಗೆ, ಸಾಧ್ಯವಾದಷ್ಟು ಮಟ್ಟಿಗೆ ಪ್ರಾಸಬದ್ಧವಾದ, ಆದರೆ ಅರ್ಥಕ್ಕೆ ಚ್ಯುತಿ ಬಾರದ ಶೀರ್ಷಿಕೆ ಕೊಡಬೇಕೆಂದು ಅಂದೇ ನಿರ್ಧರಿಸಿದೆ. ಈ ಕಲಿಕೆಯೇ ಪ್ರೇರಣೆಯಾಗಿ ‘ಬದರಿಯ ದಾರಿ ಬೆದರಿಸಿದಾಗ’ , ‘ ಕಛ್ ದೇಖಿಯೆ, ಕುಚ್ ಗುಜಾರಿಯೇ‘ ಮೊದಲಾದ ಶೀರ್ಷಿಕೆಯುಳ್ಳ ಪ್ರವಾಸಕಥನಗಳನ್ನು ಬರೆದೆ. ಈ ಬರಹಗಳು, ಯಾವುದೇ ಬದಲಾವಣೆಯಿಲ್ಲದೆ ಪ್ರಕಟವಾದಾಗ, ನನ್ನ ಗಮನಿಸುವಿಕೆ ಸರಿಯೆನಿಸಿತು. (ಶೀರ್ಷಿಕೆಯಲ್ಲಿ ಪ್ರಾಸವಿರಬೇಕಾದುದು ಅಗತ್ಯವಲ್ಲ, ಅದು ನನ್ನ ವೈಯುಕ್ತಿಕ ಆಸಕ್ತಿ).

ಒಟ್ಟಿನಲ್ಲಿ, ನಿರಂತರ ಕಲಿಕೆ ಅಗತ್ಯ ಎಂಬುದನ್ನು ಇದು ಸೂಚಿಸುತ್ತದೆ.

(ಮುಂದುವರಿಯುವುದು)

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ :   ಪತ್ರಿಕೆಗೆ ಬರೆಯುವ ಮುನ್ನ…..ಭಾಗ 2

-ಹೇಮಮಾಲಾ.ಬಿ. ಮೈಸೂರು

4 Responses

  1. ASHA nooji says:

    ಸರಿಯಗಿ ಹೇಳಿದಿರಿ ,

  2. ನಯನ ಬಜಕೂಡ್ಲು says:

    Superb. ನಿಜ ಹೇಮಕ್ಕ ,ಬರಹಗಳಿಗೆ ಶೀರ್ಷಿಕೆ ನೀಡುವುದು ಒಂದು ಕಲೆ . ನಿಮ್ಮ ಪ್ರವಾಸ ಕಥನ ಚಾರ್ ಧಾಮ್ ಅಲ್ಲೂ ಶೀರ್ಷಿಕೆಗಳೇ ಆಕರ್ಷಕವಾಗಿವೆ .

  3. ಹರ್ಷಿತಾ says:

    ಬರಹದ ಶೀರ್ಷಿಕೆ ಆಸಕ್ತಿದಾಯಕವಾಗಿದ್ದರೆ ಬೇಗನೆ ಗಮನ ಸೆಳೆಯುತ್ತದೆ..ಉತ್ತಮವಾದ ಸಲಹೆಗಳು

  4. Shankari Sharma says:

    ಚಿಂತನಯೋಗ್ಯ ಸವಿವರ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ‌.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: