ಆಹಾರ ಸಮತೋಲನ ಕಾಪಾಡುವುದು ಅಗತ್ಯ
ಯಾವುದೇ ಅನಾರೋಗ್ಯಕ್ಕೆ ಆಹಾರ ಹದಗೆಟ್ಟಿರುವುದೇ ಕಾರಣ ಎನ್ನುವರು ಆಯುರ್ವೇದ ತಜ್ಞರು. *”ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ”*.ಎಂಬ ನಾಣ್ಣುಡಿಯನ್ನು ಮರೆಯುವಂತಿಲ್ಲ. ಯಾವ ಆಹಾರ ಏರು-ಪೇರಿನಿಂದಾಗಿ ಸ್ವಾಸ್ಥ್ಯ ಹದಗೆಟ್ಟಿದೆ ಎಂಬುದನ್ನು ಹಿಂದಿನಕಾಲದಲ್ಲಿ ಅನುಭವದಿಂದ ಅರಿತುಕೊಂಡು ಯಾವ ನಾರು-ಬೇರು ಅದಕ್ಕೆ ಪರಿಹಾರ ಎಂಬುದಾಗಿ ಯೋಚಿಸಿ; ಈ ನಿಟ್ಟಿನಲ್ಲಿ ವನೌಷಧಿ ಕೊಡುತ್ತಿದ್ದರಂತೆ. ಕೆಲವು ರೋಗಕ್ಕೆ ಅದಕ್ಕೆ ಅದೇ ಮದ್ದು ಎನ್ನುವಂತೆ ; ಅದು ರಾಮಬಾಣದಂತೆ ತಾಗುತ್ತಿದ್ದುವಂತೆ. ಆದರೆ ಈಗಿನ ಆಧುನಿಕ ಅಲೋಪತಿ ಕಾಲದಲ್ಲಿ ನಾರು-ಬೇರನ್ನೇ ನಂಬಿ ಮುಂದುವರಿಯುವಲ್ಲಿ ವಿಶ್ವಾಸ ಯಾರಿಗಿದೆ ಹೇಳಿ! ಹಾಗೆಂದರೂ ಅಲ್ಲೋ ಇಲ್ಲೋ ಎನ್ನುವಂತೆ ಕೆಲವರು ನಂಬಿ ನಡೆಯುವವರೂ ಇದ್ದಾರೆ ಎನ್ನಿ!!.
ಪಥ್ಯ:–ಯಾವದೇ ಅನಾರೋಗ್ಯ ಕಾಣಿಸಿಕೊಂಡಾಗ ಅದಕ್ಕೆ ಪಥ್ಯ ಅನಿವಾರ್ಯ. ಅಂದರೆ…ರೋಗ ಶಮನಕ್ಕಾಗಿ ಪಥ್ಯ. ಉದಾ:-ಉಷ್ಣ ಬೇಧಿಯಾದರೆ ಅದಕ್ಕೆ ತಂಪು ಆಹಾರ ಪಥ್ಯ. ಶೀತ ಬೇಧಿಯಾದರೆ ಉಷ್ಣ ಆಹಾರ ಸೇವನೆ ಅಗತ್ಯ. ಶೀತಜ್ವರ ಕಾಣಿಸಿಕೊಂಡರೆ ಶೀತಲ ನೀರು ಹಾಗೂ ತಣ್ಣಗಿನ ಆಹಾರ ಸಲ್ಲದು. ಹೀಗೆ ಪಥ್ಯವೇ ಔಷಧಿಗಿಂತ ಹೆಚ್ಚು ಪರಿಣಾಮಕಾರಿ ಎನ್ನುವರು ಅನುಭವಿಗಳು. ಇನ್ನು ಆರೋಗ್ಯ ಕಾಪಾಡುವಿಕೆಯಲ್ಲಿ ;ಸಮತೂಕದ ಆಹಾರ ಎಂಬುದೇ ವೈದ್ಯರುಗಳ ಸಲಹೆ. ಸಮತೂಕ ಎಂದರೇನು?.ನಾವು ತೂಕಮಾಡಿ ಊಟಮಾಡುವುದೇ?. ಅಲ್ಲ.., ಹೊಟ್ಟೆಗೆ ಸಾಕು ಎಂದಾಗ ಅದರ ಇತಿ-ಮಿತಿ ಮನಸ್ಸು ಅರಿಯುತ್ತದೆ. ಅಂತೆಯೇನಾವು ಸೇವಿಸುವ ಆಹಾರವು ‘ಅತಿ’ ಯೂ ಆಗಬಾರದು. ‘ಅಲ್ಪ’ ವೂ ಆಗಬಾರದು. ಹಾಗೆಯೇ ಆಹಾರ ಸೇವಿಸುವ ಸಮಯಕ್ಕೂ ಪ್ರಾಮುಖ್ಯತೆ ಇದೆ.ಅವೇಳೆಯಲ್ಲಿ ಆಹಾರ ಸೇವನೆಯೂ ಆರೋಗ್ಯ ಹಾಳಾಗಲು ಕಾರಣವಾಗಬಹುದು.
ಆಹಾರದ ಸಮತೋಲನ ತಪ್ಪದಂತೆ ಜಾಗ್ರತೆವಹಿಸುವುದೇ ಆರೋಗ್ಯ ಕಾಪಾಡುವ ಪ್ರಮುಖ ಆದ್ಯತೆಗಳಲ್ಲೊಂದು. ಸಂಸ್ಕ್ರತಿ-ಸಂಸ್ಕಾರ ಕಲಿಸುವ ಶಾಲೆಗಳ ಸಮೂಹ ಭೋಜನದ ವೇಳೆ ಹಾಗೂ ಆರಾಧನಾ ಪಂಕ್ತಿಯಲ್ಲಿ “ಅನ್ನಪೂರ್ಣೇ ಸದಾಪೂರ್ಣೆ ಶಂಕರ ಪ್ರಾಣವಲ್ಲಭೆ|ಜ್ಞಾನ ವೈರಾಗ್ಯ ಸಿದ್ಧಿಯರ್ಥಮ್ ಭಿಕ್ಷಾಂ ದೇಹೀಚ ಪಾರ್ವತಿ” ಎಂದು ಅನ್ನಪೂರ್ಣೆಯನ್ನು ಸ್ಮರಿಸುತ್ತಾ ಊಟಮಾಡುವುದು ಊಟದ ಸಂಸ್ಕಾರಗಳಲ್ಲಿ ಒಳಪಟ್ಟಿದ್ದು ದೇಹ-ಮನಸ್ಸುಗಳಿಗೆ ಹಿತವನ್ನುಂಟುಮಾಡುತ್ತದೆ. ನನ್ನ ಬಾಲ್ಯದಲ್ಲಿ ನನ್ನ ಅಪ್ಪ ಹೇಳುತ್ತಿದ್ದ ಮಾತು ಊಟದ ವೇಳೆ ನೆನಪಿಗೆ ಬರುತ್ತಿರುತ್ತದೆ. ಅದೆಂದರೆ….,”ಅನ್ನದಗುಳನ್ನು ತಟ್ಟೆಯ ಬದಿಗೆ ಚೆಲ್ಲಿಹೋಗದಂತೆ ಹಾಗೂ ಹೆಚ್ಚಾಯಿತೆಂದು ಬಿಟ್ಟು ಏಳುವುದಾಗಲೀ ಮಾಡಬಾರದು. ಹಾಗೆ ಮಾಡಿದರೆ..; ಗದ್ದೆ ಉತ್ತ ಎತ್ತುಗಳಿಗೆ ಗೊತ್ತಾಗಿ ಹಟ್ಟಿಯಲ್ಲಿ ಕಣ್ಣೀರು ಹಾಕುತ್ತವೆ”. ಎಂದು ಮಕ್ಕಳಿಗೆ ಎಚ್ಚರಿಕೆ ಕೊಡುತ್ತಿದ್ದರು.
ಊಟಮಾಡುವಾಗ ಗಮನಿಸಬೇಕಾದ ಕೆಲವು ಸಲಹೆಗಳು. ಊಟಮಾಡುವಾಗ ಪ್ರಥಮತಃ ಒಂದ್ಚೂರು ಸಿಹಿ,(ಇದಕ್ಕಾಗಿ ಬ್ರಾಹ್ಮಣರ ವಿಶೇಷ ಭೋಜನದಲ್ಲಿ ಮೊದಲು ಒಂದ್ಚೂರು ಪಾಯಸ ಇಕ್ಕುವುದು ವಾಡಿಕೆ). ಮುಂದೆ ಪಲ್ಯ, ಸಾಸಿವೆ, ಸಾರು,ಹಪ್ಪಳ, ಸಾಂಬಾರು ವಗೈರೆ. ಕೊನೆಗೆ ಮಜ್ಜಿಗೆ ಅಥವಾ ಮೊಸರು-ಉಪ್ಪಿನಕಾಯಿ.
ಕಿವಿಮಾತು:–1. ಕೆಲವು ಮದುವೆ, ಉಪನಯನಾದಿ ಸಮಾರಂಭಗಳಲ್ಲಿ ಮನೆಯವರೋ ಹಿತೈಷಿಗಳೋ ಬಡಿಸುವವರಿಗೆ; ಊಟಮಾಡುವವರು ಸಾಕು ಇನ್ನು ಬೇಡವೆಂದು ಕೈ ಸೂಚನೆಯಿಂದ ಹೇಳಿದರೂ ಅವರ ಕೈಯನ್ನು ಅಡ್ಡ ತಳ್ಳಿ ಅವರಿಗೆ ತಿನ್ನಲೂ ಆಗದೆ ಬಾಳೆಲೆಯಲ್ಲಿ ಬಿಟ್ಟೇಳುವುದಕ್ಕೂ ಮನಸ್ಸು ಬಾರದೆ ಅವರ ಉದರವೆಂಬ ಗುಡಾಣಕ್ಕೆ ತಳ್ಳುವಂತೆ ತಿನ್ನುವುದನ್ನು ಅದೆಷ್ಟೋ ಬಾರಿ ನೋಡಿದ್ದೇನೆ. ಈ ಉಪಚಾರ ಖಂಡಿತ ಸಲ್ಲದು. ಇದರಿಂದಾಗಿ ಒತ್ತಾಯದಿಂದ ತಿನ್ನುವವರ ಉದರವೂ ಹಾಳು, ಮಾಡಿದ ಭಕ್ಷ್ಯಗಳೂ ಹಾಳು. ಆ ಸಿಹಿತಿಂಡಿಯನ್ನು ತಿನ್ನಲು ಆಸೆ ಪಡುವ ಗತಿಹೀನರಿಗೆ ಅಥವಾ ಗೋಮಾತೆಗೆ ಭಕ್ತಿಯಿಂದ ನೀಡಿದಲ್ಲಿ ಅದೆಷ್ಟೋ ಸತ್ಫಲ ಸಿಗಬಹುದೆಂದು ನನ್ನ ಅನಿಸಿಕೆ.
2. ಊಟಕ್ಕೆ ಕುಳಿತಿರುವಾಗ; ಚಿಂತೆ, ದುಗುಡ ,ಅಸಮಾಧಾನ ಮೊದಲಾದ ಮಾನಸಿಕ ತುಮುಲಕ್ಕೂ ಆಸ್ಪದ ಕೊಡಬಾರದು.
3.ಅನ್ನಕ್ಕೆ ಕಾರಣಳಾದ ಅನ್ನಪೂರ್ಣೆಯನ್ನೂ ಅಡುಗೆ ಮಾಡಿಹಾಕಿದ ಮಾತೆಗೂ ಕೃತಜ್ಞತೆಯಿರಬೇಕು. ಇದೆಲ್ಲವೂ ಸಮತೋಲನ ಆಹಾರಕ್ಕೆ ಪೂರಕ ಕ್ರಿಯೆಗಳು.
ಇನ್ನು ಮುಖ್ಯವಾಗಿ ಕೆಲವು ಮನೆ ಮದ್ದುಗಳನ್ನು ಇಲ್ಲಿ ಬರೆಯಲು ಇಚ್ಛಿಸುವೆ.
ರಕ್ತಬೇಧಿಗೆ:-ಒಂದು ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿ ಒಂದು ಸ್ಪೂನು ಆಕಳ ತುಪ್ಪದಲ್ಲಿ ಕೆಂಬಣ್ಣಕ್ಕೆ ಬಾಡಿಸಿಕೊಂಡು , ಒಂದು ತುತ್ತು ಕುಸುಲಕ್ಕಿ ಅನ್ನದೊಂದಿಗೆ ಊಟದ ಮೊದಲಿಗೆ ಮೂರುಹೊತ್ತು ಸೇವಿಸಿದರೆ ರಕ್ತಬೇಧಿ ಶಮನವಾಗುವುದು. ಹಾಗೆಯೇ 2 ಚಮಚ ಕೂವೆಹುಡಿಯನ್ನು ಆಕಳ ಹಾಲಿನಲ್ಲಿ ಕದಡಿ ದಿನಕ್ಕೆರಡು ಬಾರಿಯಂತೆ ಒಂದೆರಡು ದಿನ ಕುಡಿಯುವುದೂ ಒಳ್ಳೆಯ ಔಷಧಿ.
ಅಜೀರ್ಣ ಬೇಧಿಗೆ:-ನೆಲ್ಲಿಕಾಯಿ ಮೊರಬ್ಬ(ನೆಲ್ಲಿಂಡಿ)ವನ್ನು ದನದ ಮಜ್ಜಿಗೆಯಲ್ಲಿ ಕದಡಿ ದಿನಕ್ಕೆ ಮೂರುಬಾರಿಯಂತೆ ಮೂರುದಿನ ಸೇವನೆ.
ಆಮಾತಿಸಾರಕ್ಕೆ:- ನೆಗಡಿಯಂತೆ ಮಲವಿಸರ್ಜನೆಯಾದರೆ; ಕಾಡು ಕೇಪುಳ ಹೂವನ್ನು ತಂದು ಆಯ್ದು ತಂದು; ಸಣ್ಣ ಉರಿಯಲ್ಲಿ ಬಾಡಿಸಿಕೊಂಡು ದನದ ಮಜ್ಜಿಗೆಯೊಂದಿಗೆ ಅರೆದು ತಂಬುಳಿಮಾಡಿ ಊಟಮಾಡುವುದು ದಿನಕ್ಕೆರಡು ಬಾರಿ.
-ವಿಜಯಾಸುಬ್ರಹ್ಮಣ್ಯ, ಕುಂಬಳೆ.
ಧನ್ಯವಾದಗಳು ಹೇಮಮಾಲಾ.
ಒಳ್ಳೆಯ ಲೇಖನದ ಜೊತೆಗೆ ಮನೆ ಮದ್ದು.. ಧನ್ಯವಾದಗಳು ವಿಜಯಕ್ಕ.
ಉತ್ತಮ ಸಲಹೆಗಳಿಂದ ಕೂಡಿದ ಬರಹ .ಚೆನ್ನಾಗಿದೆ ಮೇಡಂ
ಧನ್ಯವಾದಗಳು.
ಮನೆಮದ್ದು ಇನ್ನೂ ಬರೆಯಬಹುದಿತ್ತು. ಆದರೆ ನನ್ನ ಕಣ್ಣು ಸರ್ಜರಿಯಾಗಿ ಒಂದು ವಾರವಾಯಿತಷ್ಟೆ. ಹಾಗಾಗಿ ಬೇಗ ಬೇಗ ಮುಗಿಸಿದ ಏರ್ಪಾಡು ನನ್ನದು.
ಇನ್ನೊಮ್ಮೆ ಮನೆಮದ್ದು ಬರೆಯುವ ಹಂಬಲವಿದೆ ಶಂಕರಿಯಕ್ಕ.
ಉತ್ತಮವಾದ ಸಲಹೆಗಳು ಮೇಡಂ…ನಿಮ್ಮ ಆರೋಗ್ಯವು ಶೀಘ್ರವಾಗಿ ಸುಧಾರಿಸಲಿ ಎಂದು ಪ್ರಾರ್ಥಿಸುತ್ತೇನೆ