ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 5

Share Button

*ಕೋನಾರ್ಕಿನೆಡೆಗೆ..*

ಎರಡನೇ ದಿನದ ನಮ್ಮ ಬೆಳಗು ರಾಜೇಶಣ್ಣನವರ ಸುಪರ್ ಫಲಾಹಾರದೊಂದಿಗೆ ಶುಭಾರಂಭಗೊಂಡಿತು. ಒಂಭತ್ತು ಗಂಟೆಗೆ ಸರಿಯಾಗಿ ಎಲ್ಲರೂ ತಯಾರಾಗಿರಲು ಗಣೇಶಣ್ಣನವರ ಸೂಚನೆಯಾಗಿತ್ತು. ಸಮಯಕ್ಕೆ ಸರಿಯಾಗಿ ಎಲ್ಲರೂ ಬಸ್ಸಿನಾಸನದಲ್ಲಿ ಆರೂಢರಾದಾಗಲೇ ಗಣೇಶಣ್ಣ ಎಲ್ಲರ ತಲೆ ಲೆಕ್ಕ ಮಾಡಲು ಆರಂಭ.. ಬಸ್ಸು ಹೊರಟಾಗ ಎಲ್ಲರ ಉತ್ಸಾಹ ಮುಗಿಲು ಮುಟ್ಟಿತ್ತು. ಮಹೇಶಣ್ಣನ ವಿನಂತಿ ಮೇರೆಗೆ ಹಿಂದಿನ ದಿನ ತಮ್ಮ ಪರಿಚಯ ಹೇಳದೆ ಉಳಿದವರ ಸರದಿ ಸುರು…ಹಿರಿಯ ವಿದ್ವಾಂಸರೂ, ಯೋಗ ಗುರುಗಳೂ ಆದ ದಿವಾಣ ಕೇಶವಣ್ಣ, ಯಕ್ಷಗಾನ ಪ್ರಿಯ ಗೋಪಾಲಕೃಷ್ಣಣ್ಣ, ನಮ್ಮ ಈ ಪ್ರವಾಸದ ಮುಖ್ಯ ರೂವಾರಿ ನಾರಾಯಣಣ್ಣ, ಪ್ರೆಸ್ ನಡೆಸುವುದರ ಜೊತೆಗೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಹಲವಾರು ಬಗೆಯ ತರಕಾರಿ, ಹಣ್ಣು ಹಂಪಲುಗಳನ್ನು ಬೆಳೆಸುತ್ತಿರುವ ಅವರ ಪತ್ನಿ ವೀಣಕ್ಕ, ಹೀಗೆ ಎಲ್ಲರ ಪರಿಚಯಾತ್ಮಕ ನುಡಿಗಳಿಗೆ ಪ್ರೋತ್ಸಾಹಕ ಕರತಾಡನ ನಡೆದಿತ್ತು. ಭುವನೇಶ್ವರದಿಂದ 80ಕಿ.ಮೀ. ದೂರದಲ್ಲಿರುವ  ಅಪರೂಪದ ಸೂರ್ಯ ದೇವಾಲಯ *ಕೋನಾರ್ಕ್* ನೋಡಲು  ಎಲ್ಲರೂ ಕಾತುರರಾಗಿದ್ದೆವು.

ಬಸ್ಸಿನಲ್ಲಿದ್ದ ಪುಟ್ಟ ತೊಂದರೆಯೆಂದರೆ, ಅದರಲ್ಲಿದ್ಧ ಮೈಕ್ ಬರೇ ಅರ್ಧ ಬಸ್ಸಿಗೆ ತಲಪುತ್ತಿತ್ತಷ್ಟೆ. ಆದರೆ ಅದು ನಮಗೆಲ್ಲ  ತೊಂದರೆ ಎನಿಸಲೇ ಇಲ್ಲ. ನಾವೆಲ್ಲ  ಹಿರಿಯ ನಾಗರಿಕರ ಮಧ್ಯೆ ನಾಲ್ಕು ಉತ್ಸಾಹೀ ಮಕ್ಕಳ( ಅಶ್ವಿನಿ, ಚಿರಾಯು, ನಿಧಿ, ಮೇಧಾ, ಮಧುಕೇಶ) ಕಲರವವು ಕಳೆಗಟ್ಟಿತ್ತು. ಮೈಕಿನಲ್ಲಿ ಮಹೇಶಣ್ಣ “ಮಕ್ಕಳೆಲ್ಲಾ ಮುಂದೆ ಬನ್ನಿ… ವಿವಿಧ ವಿನೋದಾವಳಿ ಪ್ರಾರಂಭಿಸಿ..ಮೈಕ್ ಅಲ್ಲಿಗೆ ಬರುವುದಿಲ್ಲ ..ಜಲ್ದಿ..ಜಲ್ದಿ ಮುಂದೆ ಬನ್ನಿ ಎಲ್ರೂ!!”  ಹಾಗೆಯೇ ಸುರುವಾಯ್ತು ನೋಡಿ ..ಅಶ್ವಿನಿ, ಮೇಧಾ,ನಿಧಿಯರ ಸುಶ್ರಾವ್ಯ ಗಾಯನ. ಚಿರಾಯು, ಮಧುಕೇಶರ ಕ್ವಿಝ್,  ಇತ್ಯಾದಿಗಳು ನಮ್ಮೆಲ್ಲರನ್ನು ಇನ್ನೂ ಚಿಕ್ಕವರನ್ನಾಗಿಸಿದ್ದು ಸುಳ್ಳಲ್ಲ. ಇವುಗಳೆಲ್ಲರ ಜೊತೆಗೆ ಗೋಪಾಲಣ್ಣನವರು ತಮ್ಮ ಜಾಣ್ಮೆ ಲೆಕ್ಕಗಳ ಹುಳ ಬಿಟ್ಟು ನಮ್ಮೆಲ್ಲರ ತಲೆ ಹನ್ನೆರಡಾಣೆ ಮಾಡಿದ್ದಂತೂ ನಿಜ. ವೀಣಕ್ಕನ ತೋಟದ ರುಚಿಕರವಾದ ಹಣ್ಣುಗಳ ಸಮಾರಾಧನೆ ಒಂದೆಡೆಯಾದರೆ ಗಣೇಶಣ್ಣನ ತಿಂಡಿಗಳ ಭಂಡಾರದ ಬುತ್ತಿ ಬಿಚ್ಚಿ ಎಲ್ಲರ  ಹೊಟ್ಟೆ ಬಿರಿಯಲಾರಂಭಿಸಿದ್ದು ಹದಿನಾರಾಣೆ ಸತ್ಯ!

10 ಗಂಟೆ ಹೊತ್ತಿಗೆ ಕೋನಾರ್ಕ್ ತಲಪಿದ್ದೇ ಗೊತ್ತಾಗಲಿಲ್ಲ…ಹಾಗಿತ್ತು ನಮ್ಮ ಪ್ರಯಾಣ! ಬಸ್ಸಿಳಿದ ಕೂಡಲೇ ಯಥಾ ಪ್ರಕಾರ ಬಾಲಣ್ಣನವರಿಂದ ಎಲ್ಲರಿಗೂ ಬೊಂಡ ಸೇವೆ. ನಾವೆಲ್ಲ ಎಷ್ಟು ಖುಷಿಯಲ್ಲಿದ್ದರೂ, ಅಲ್ಲಿಯೂ ಚಂಡಮಾರುತದಿಂದುಂಟಾದ ತೀವ್ರ ತರ ಹಾನಿ, ಅದರಿಂದಾಗಿ ಅಲ್ಲಿಯ ಜನರ ದೈನಂದಿನ ಜೀವನದಲ್ಲಾಗಿರುವ ಏರುಪೇರುಗಳೆಲ್ಲಾ ನಮ್ಮನ್ನು ಕಂಗೆಡುವಂತೆ ಮಾಡಿತ್ತು. ದೇವಾಲಯದ ಬಳಿ ಹೋಗಲು ಅನುಮತಿ ಸಿಗಲಿಲ್ಲವಾದ್ದರಿಂದ ದೂರದಿಂದಲೇ  ನೋಡಿ ಸಮಾಧಾನ ಪಡುವಂತಾಯಿತು. ನಮಗಾಗಿ ನಿಯೋಜಿಸಿದ್ದ ಗೈಡ್ ಬಳಿ ನಾವೆಲ್ಲ ಸ್ವಲ್ಪ ವಿನಂತಿಸಿಕೊಂಡರೂ ಬಿಲ್ ಕುಲ್ ಒಪ್ಪದೆ “ನಿನ್ನೆ ಇದನ್ನು ನೋಡುವುದಕ್ಕೋಸ್ಕರ ವಿಮಾನದಲ್ಲಿ ಬಂದಿದ್ದ ನಾಲ್ಕು ಮಂದಿ ದೊಡ್ಡ ಮನುಷ್ಯರಿಗೂ ನೋಡಲಾಗದೆ ಹಾಗೇ ಹಿಂತಿರುಗಿದರು. ನಮ್ಮ ಕೈಲಿ ಏನೈತೆ ಸ್ವಾಮಿ..ಎಲ್ಲಾ ಅವನಿಚ್ಛೆ”  ಎಂದು ಕೈ ಮೇಲೆ  ತೋರಿಸಿಬಿಟ್ಟರು.

ದೇವಸ್ಥಾನದ ಸುತ್ತಲೂ ರಿಪೇರಿ ಕೆಲಸ ನಡೆಯುತ್ತಿದ್ದುದರ ಕುರುಹಾಗಿ ಆಧಾರ ಕಂಬಗಳನ್ನು ನೆಟ್ಟಿದ್ದರು. ನಾವೇನಾದರೂ ಒಳಗೆ ಹೋದರೂ ಅವುಗಳೇನಾದರೂ ನಮ್ಮ ತಲೆ ಮೇಲೆ ಬೀಳಬಹುದೆಂಬ ಭಯವೂ ಸ್ವಲ್ಪ ಕಾಡಿತು. ಆಗಲಿ, ಇಷ್ಟಾದರೂ ದಕ್ಕಿದ್ದು ನಮ್ಮ ಭಾಗ್ಯವೆಂದೆಣಿಸಿದೆಣಿಸದೆ ಬೇರೆ ದಾರಿ ಇರಲಿಲ್ಲ. ಗೈಡ್ ಮಾತ್ರ ದೂರದಿಂದಲೇ ಪ್ರದಕ್ಷಿಣೆ ಸುತ್ತಿಸಿ ತುಂಬಾ ಚೆನ್ನಾಗಿ ವಿವರಣೆ ನೀಡಿ ನಮ್ಮ ಕುತೂಹಲ ತಣಿಸಿದರು.

ಸಾಧಾರಣ 13ನೇ ಶನಮಾನದಲ್ಲಿ ನರಸಿಂಗದೇವ ರಾಜನಿಂದ ಕಳಿಂಗ ಶಿಲ್ಪ ಕಲಾ ಶೈಲಿಯಲ್ಲಿ ಕಟ್ಟಲ್ಪಟ್ಟ ಅತೀ ಅಪರೂಪದ ಈ ಸೂರ್ಯ ದೇವಾಲಯವು 100 ಅಡಿಗಳಷ್ಟು ಎತ್ತರದ, ತಿಂಗಳಿಗೆರಡರಂತೆ(ಶುಕ್ಲಪಕ್ಷ ಮತ್ತು ಕೃಷ್ಣಪಕ್ಷ)  12ತಿಂಗಳುಗಳನ್ನು ಪ್ರತಿನಿಧಿಸುವ 24 ಚಕ್ರಗಳನ್ನು ಹೊಂದಿರುವ, ವಾರದ 7 ದಿನಗಳನ್ನು ಪ್ರತಿನಿಧಿಸುವಂತೆ 7 ಕುದುರೆಗಳನ್ನು ಹೂಡಿದ ರಥದಾಕೃತಿಯಲ್ಲಿದೆ.  ಒಂದು ಚಕ್ರದ ಎತ್ತರವೇ 12 ಅಡಿಗಳಷ್ಟು ಎತ್ತರವಿದೆ. 12ಎಕರೆಗಳಷ್ಟು ವಿಸ್ತಾರವಾದ ಜಾಗವನ್ನು ಆವರಿಸಿಕೊಂಡಿರುವ ಈ ದೇಗುಲ  ಸಮುಚ್ಚಯದಲ್ಲಿ ಸೂರ್ಯನ ಪತ್ನಿ(ಸಂಧ್ಯಾ) ಛಾಯಾಳ ದೇಗುಲದೊಂದಿಗೆ ಮುಖ ಮಂಟಪ, ನಾಟ್ಯ ಮಂಟಪಗಳಿವೆ. ಮೊದಲೆಲ್ಲಾ, ಸೂರ್ಯದೇವನ ಮೂರ್ತಿ ಮೇಲೆ ಉಜ್ವಲವಾದ ರತ್ನವಿದ್ದು, ಸೂರ್ಯ ಕಿರಣವು ಅದರ ಮೇಲೆ ಬಿದ್ದಾಗ ಇಡೀ ದೇವಾಲಯದೊಳಗೆ  ಬೆಳಕು ಹರಡುತ್ತಿತ್ತಂತೆ. ಮನುಷ್ಯನ ಜೀವನ ಚಕ್ರವಾದ ಬಾಲ್ಯ, ಯೌವನ ಮತ್ತು ವೃದ್ಧಾಪ್ಯವನ್ನು  ಸೂರ್ಯನ ಚಲನೆಗೆ ಹೋಲಿಸಿ ದೇವಾಲಯದ ಮೇಲ್ಭಾಗದಲ್ಲಿ ಕಟೆದಿರುವ, ಕುದುರೆಯೇರಿ ಕುಳಿತಿರುವ ಮಾನವನ ಮೂರ್ತಿ ಚಿಂತನೆಗೆ ಒಳಮಾಡುವಂತಿದೆ. ದೇಗುಲದ ಆವರಣದಲ್ಲಿರುವ, ಮಾನವನನ್ನು ಕೆಳಕ್ಕೆ ದಬ್ಬಿ ಹಿಡಿದಿರುವ ಸಿಂಹ, ಕೆಟ್ಟ ಗುಣಗಳನ್ನು ನಾಶಮಾಡಲು ಹೊರಟಂತಿದೆ. ರಥಕ್ಕೆ ಮುಂಭಾಗದಿಂದ ಮಾತ್ರ ಬಾಗಿಲಿರುವಂತೆ, ದೇವಸ್ಥಾನವು ರಥದಾಕೃತಿಯಲ್ಲಿರುವುದರಿಂದ ಮುಂಭಾಗದಲ್ಲಿ ಮಾತ್ರ ಬಾಗಿಲಿದೆ..ಹಿಂಭಾಗದಲ್ಲಿಲ್ಲ. ಕೋನಾರ್ಕ್ ಕಪ್ಪು ಪಗೋಡವೆಂದೂ ಪ್ರಸಿದ್ಧ. ಸಾಗರ ತಟದಲ್ಲಿರುವ ಇದರ ಅತೀ ಎತ್ತರದ ಗೋಪುರವು ಸಮುದ್ರ ನಾವಿಕರ  ದಿಕ್ಸೂಚಿಯಾಗಿ ಗುರುತಿಸಲ್ಪಡುತ್ತಿತ್ತು. ದೇಗುಲದಲ್ಲಿ ದೈನಂದಿನ ಪೂಜೆ ಪುನಸ್ಕಾರಗಳು ಇಲ್ಲದಿದ್ದರೂ ಪ್ರತೀ ವರ್ಷ ಫೆಬ್ರುವರಿ ತಿಂಗಳಲ್ಲಿ ಜನರೆಲ್ಲ ಸಮೀಪದ ಚಂದ್ರಭಾಗಾ ನದಿಯಲ್ಲಿ ಮುಳುಗೆದ್ದು ದೇವಾಲಯಕ್ಕೆ ಬಂದು ಸಂಭ್ರಮದ ಮೇಳ ನಡೆಸುತ್ತಾರೆ.

ಗೈಡ್ ನಮ್ಮ ಪಕ್ಕದಲ್ಲಿ ಬಿದ್ದಿದ್ದ ದೊಡ್ಡದಾದ ಕಬ್ಬಿಣದ ಕಂಬವನ್ನು ತೋರಿಸಿ, ಮೊದಲು ದೇಗುಲದ ಒಳಗೆ ಆ ಕಂಬವು ಬಲವಾದ ಆಯಸ್ಕಾಂತದೊಂದಿಗಿದ್ದು, ಅದರಿಂದಾಗಿ ಒಳಗಿದ್ದ ಮೂರ್ತಿ ಗಾಳಿಯಲ್ಲಿ ತೇಲಾಡುತ್ತಿತ್ತಂತೆ. ಆಯಸ್ಕಾಂತವು ಕಳವಾದ ಬಳಿಕ ಮೂರ್ತಿಯನ್ನು ಪುರಿ ಜಗನ್ನಾಥ ದೇವಾಲಯದಲ್ಲಿ ಇರಿಸಲಾಗಿದೆ. ಆ ಬಳಿಕ ಕಬ್ಬಿಣದ ಕಂಬ ಸಹಿತ ದೇವಾಲಯದ ಕಲ್ಲು ಜೋಡಣೆಗಳು ಕುಸಿದು ಬೀಳತೊಡಗಿವೆ. ಜೊತೆಗೆ ಮುಸ್ಲಿಮರ ಧಾಳಿ, ಆಗಾಗ ಬರುವ ಪ್ರಾಕೃತಿಕ ವಿಕೋಪಗಳಿಗೆ ಸಿಲುಕಿ ಕೋನಾರ್ಕ್ ತನ್ನ ಅಂದವನ್ನು ಕಳೆದುಕೊಳ್ಳುತ್ತಿರುವುದು ಖೇದಕರ ವಿಷಯ.

ಮುಖ್ಯ ದೇಗುಲದ ಹಿಂಭಾಗದಲ್ಲಿರುವ ಛಾಯಾದೇವಿಯ ದೇವಸ್ಥಾನವಂತೂ ಪೂರ್ತಿ ನಶಿಸಿರುವುದು ಕಂಡಾಗ ಮನ ಮುದುಡುತ್ತದೆ. ದೇಗುಲದಿಂದ ಸ್ವಲ್ಪ ದೂರದಲ್ಲಿ ಅದರ ಅವಶೇಷಗಳು ರಾಶಿ ರಾಶಿ ಹರಡಿ ಬಿದ್ದಿರುವುದು ಕಂಡಾಗ ನಮಗನ್ನಿಸಿದ್ದು, ಅದು ಚಂಡಮಾರುತದ  ಪ್ರಭಾವವಿದ್ದಿರಬಹುದೆಂದು.  ಆದರೆ ಅದು, ತನ್ನಿಂದ ತಾನಾಗಿಯೇ ದೇಗುಲವು ನಶಿಸುತ್ತಿರುವ ಭಾಗಗಳಾಗಿದ್ದುವು. ದೇಗುಲದ ಜೀರ್ಣೋದ್ಧಾರಕ್ಕಾಗಿ ಪುರಾತತ್ವ ಇಲಾಖೆಯ ಕೆಲಸವು ತುಂಬಾ ನಿಧಾನಗತಿಯಲ್ಲಿ ಸಾಗುತ್ತಿರುವಂತೆನಿಸಿತು. ಗ್ರೂಪ್ ಫೋಟೋ ತೆಗೆದು ಹಿಂತಿರಗುವಲ್ಲಿ ತಿಂದ ಎಳೆ ಸೌತೆ ಎಲ್ಲರನ್ನೂ ತಂಪಾಗಿಸಿತು. ದೈನಂದಿನ ಜೀವನಕ್ಕಾಗಿ ಮಣಿಹಾರ, ನೆನಪಿನ ಉಡುಗೊರೆಳನ್ನು ಮಾರುವವರ  ಕಷ್ಟಗಳನ್ನು ಕೇಳಿದಾಗ ನಮಗೆ ಖರೀದಿಗಾಗಿ ಅವರೊಡನೆ ಚರ್ಚೆ ಮಾಡುವ ಮನಸ್ಸಾಗದೇ ಸ್ವಲ್ಪ ಹೆಚ್ಚಿನ ದುಡ್ಡನ್ನು ಅವರ ಕೈಗಿಟ್ಟೆವು. ಇವುಗಳೆಲ್ಲದರ ನಡುವೆಯೂ ಇತಿಹಾಸ ಪ್ರಸಿದ್ಧ ಕೋನಾರ್ಕ್ ದೇವಸ್ಥಾನವನ್ನು  ಕಂಡ ಧನ್ಯತಾಭಾವ ನಮ್ಮದಾಗಿತ್ತು.
ಮುಂದಿನ ನಮ್ಮ ಪ್ರಯಾಣ ಧವಳಗಿರಿ ಅಶೋಕ ಶಾಂತಿ ಸ್ಥೂಪದತ್ತ…

ಹಿಂದಿನ ಪುಟ ಇಲ್ಲಿದೆ:   ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 4                             (ಮುಂದುವರಿಯುವುದು..)

-ಶಂಕರಿ ಶರ್ಮ, ಪುತ್ತೂರು.

6 Responses

  1. Raghupathi Thamankar says:

    ಉತ್ತಮ ವಿವರಣೆ

  2. ನಯನ ಬಜಕೂಡ್ಲು says:

    Beautiful. ಎಲ್ಲರೂ ಜೊತೆಗೂಡಿ ಹೀಗೆ ಪ್ರವಾಸಕ್ಕೆ ಹೋಗುವುದೂ ಒಂದು ಸಂಭ್ರಮ . ಕೋನಾರ್ಕ್ ದೇವಾಲಯದ ಕುರಿತಾಗಿ ಹಲವಾರು ವಿಸ್ಮಯ ಭರಿತ ವಿಚಾರಗಳನ್ನು ಒಳಗೊಂಡಂತಹ ಲೇಖನ .

  3. ವಿಜಯಾಸುಬ್ರಹ್ಮಣ್ಯ , says:

    ಶಂಕರಿ ಶರ್ಮ ಅವರ ಪ್ರವಾಸ ಕಥನ ಸೂಪರ್. ಬರುತ್ತಾಇರಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: