ಮೊದಲಿಗೆ ಮನದಲ್ಲೆ ಹುಡುಕು(ನುಡಿಮುತ್ತು-6)
ನಾನಾಗ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದ ಕಾಲ. ವಿವಾಹವಾಗಿಲ್ಲ.ಅಡಿಗೆಯೋ ಮನೆಕೆಲಸವೋ ದನದಹಾಲು ಹಿಂಡುವ ಕಲಿಕೆಯೋ ಮಗಳಿಗೆ ಕಲಿಸುವ ಉಮೇದು ಅಮ್ಮನಿಗೆ. ತಿಂಗಳ ರಜೆಯ ಮೂರುದಿವಸ ಅಡಿಗೆಮಾಡುವುದಾಗಲೀ ಇತರರನ್ನು ಸ್ಪರ್ಶಿಸುವುದಾಗಲೀ ದೇವರಕೋಣೆ, ಅಡಿಗೆಕೋಣೆ ಪ್ರವೇಶಗಳೆಲ್ಲ ನಿಷಿದ್ಧದ ಕಾಲವಾಗಿತ್ತದು!!. ಅಮ್ಮ ರಜೆಯಾದರೆ ನಾನೇ ಅಡಿಗೆ ಮಾಡಬೇಕಿತ್ತು. ಹೀಗೊಂದು ದಿನ ಆ ಜವಾಬ್ದಾರಿ ನನ್ನ ಮೇಲೆ. ಅಡಿಗೆ ಜವಾಬ್ದಾರಿ ಸಿಕ್ಕಿದರೆ ; ಅದೇನೋ ಪರ್ವತ ತಲೆಯಮೇಲೆ ಬಿದ್ದಂತೆ ಆಗುತ್ತಿದ್ದ ದಿನಗಳವು!. ಮನೆಯಲ್ಲಿ ಊಟಕ್ಕೆ ಎಂಟ್ಹತ್ತು ಮೆಂಬರುಗಳು. ಅಮ್ಮ ಒಳಗೆ ಬರಬೇಕಿದ್ದರೆ ಇನ್ನೆಷ್ಟು ದಿನ? ಎಷ್ಟು ಗಂಟೆ ಎಂದು ಲೆಕ್ಕಹಾಕಿ ನಿಟ್ಟುಸಿರು ಬಿಡುವ ಕಾಲವಾಗಿತ್ತು!!. ಈಗವೋ ನೋ ಪ್ರಾಬ್ಲಮ್.
ಒಮ್ಮೆ ಸಂಜೆ ಇಂತಹ ಪರಿಸ್ಥಿತಿಯಲ್ಲಿ ಇದ್ದಕ್ಕಿದ್ದ ಹಾಗೆ ಗಾಳಿ-ಮಳೆ ಸುರುವಾಯ್ತು!. ನಾನು ರಾತ್ರಿಯ ಊಟಕ್ಕೆ ಒಂದು ಸಾರು ಮಾಡುವ ತಯಾರಿಯಲ್ಲಿದ್ದೆ. ಅಮ್ಮ ದೂರದಲ್ಲಿದ್ದುಕೊಂಡು ಮಾಹಿತಿ ಕೊಡುತ್ತಿದ್ದರು.ದೀಪ ನಂದಿಹೋಯ್ತು.
“ಛೇ…ಅಮ್ಮಾ ನಾನು ಒಲೆಕಟ್ಟೆ ಮೇಲೆ ಇದ್ದೇನೆ. ಇಂಗಿನ ಕುಡಿಕೆ ಹುಡುಕುವುದು ಹೇಗೆ?”
“ಮೊದಲು ಮನದಲ್ಲೆ ಹುಡುಕು. ಉಪ್ಪಿನ ಮರಿಗೆಯಿಂದ ಹಿಂದೆ ಇದೆ. ಕೈಯಲ್ಲಿ ತಡಕಾಡು“ ಇಂಗಿನಕುಡಿಕೆಯ ಆಕಾರ ಮನದಲ್ಲಿದೆ. ಅಮ್ಮ ಹೇಳಿದಾಗ ಹಾಗೇ ಮಾಡಿದೆ. ಸಿಕ್ಕಿಬಿಟ್ಟಿತು. ಮೆಲ್ಲಗೆ ಕಟ್ಟೆಯಿಂದ ಕೆಳಗಿಳಿದೆ. ಅಷ್ಟರಲ್ಲಿ ಬೆಂಕಿಕಡ್ಡಿ ಗೀರಿ ಚಿಮಿಣಿ ದೀಪ ಉರಿಸಿದಳು ತಂಗಿ.
ಹೌದು.. ಮನದಲ್ಲೆ ಹುಡುಕಿ ಕಾರ್ಯ ಸಿದ್ಧಿಸುವುದು ಒಳ್ಳೆಯ ಸಂದೇಶ. ಬರವಣಿಗೆಯಾಗಲಿ ,ಇತರ ಕೆಲಸ ಕಾರ್ಯಗಳಾಗಲಿ ಮೊದಲು ಮನದಲ್ಲಿ ಹುಡುಕಿ ಅದಕ್ಕೆ ರೂಪುರೇಶೆ ಕೊಟ್ಟು,ಕಾರ್ಯರೂಪಕ್ಕೆ ತಂದುಕೊಂಡರೆ ಯಶಸ್ಸು!.
ಈ ಕಿವಿಮಾತು ನಮ್ಮ ಜೀವನದ ಬಹುಭಾಗದಲ್ಲಿ ಅಳವಡಿಸಿಕೊಂಡರೆ ಯಶಸ್ಸು.ಏನು ಹೇಳ್ತೀರಿ?
-ವಿಜಯಾ ಸುಬ್ರಹ್ಮಣ್ಯ
ಜೀವನದಲ್ಲಿ ಸಮಸ್ಯೆಗಳು ಬಂದಾಗೆಲ್ಲಾ ಈ ರೀತಿಯ ಬೇರೆ ಬೇರೆ ಸಂದೇಶಗಳನ್ನು ಅನ್ವಯಿಸುವುದು ಒಳ್ಳೆಯದು. ಆದರೆ ನಾವು ಅನ್ವಯಿಸುವಲ್ಲಿ ಬಹಳ ಜಾಗರೂಕರಾಗಿರಬೇಕು. ಯಶಸ್ಸು ನಾವು ಎಷ್ಟು ಚೆನ್ನಾಗಿ ಅನ್ವಯಿಸಿದ್ದೇವೆ ಅನ್ನುವುದರ ಮೇಲೆ ಇರುತ್ತದೆ. ಈ ಬರಹ ನನ್ನಲ್ಲಿ ಒಂದಷ್ಟು ಚಿಂತನೆ ಹೆಚ್ಚಿಸಿದೆ. ಧನ್ಯವಾದಗಳು.
“ಮೊದಲಿಗೆ ಮನದಲ್ಲೆ ಹುಡುಕು” ಲೌಕಿಕದಿಂದ ಆಧ್ಯಾತ್ಮದವರೆಗೂ ಇದೇ ಗಟ್ಟಿ ಸಂದೇಶ. ಚೆನ್ನಾಗಿದೆ
ವಾ….ಹ್, ಎಷ್ಟು ಒಳ್ಳೆಯ ಸಂದೇಶ . ಇಲ್ಲಿ ಮುಖ್ಯವಾಗಿ ತಾಳ್ಮೆ ಬೇಕು ಅನ್ನೋದು ಎದ್ದು ಕಾಣಿಸುತಿದ್ದೆ .
ವಿಶ್ವ ನಾಥ ಕಾನ+ಲಲಿತಾ ಗೋಪಾಲಕೃಷ್ಣ+ನಯನಾ ಬಜಕೂಡ್ಳು ಇವರಿಗೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ ಎಲ್ಲರಿಗೂ ವಂದನೆಗಳು.