ನಾನೂ ಪರೀಕ್ಷೆ ಬರೆದೆ
ಕೆ ಜಿ ತರಗತಿಗಳು ನಮ್ಮ ಹಳ್ಳಿಗೆ ಬಂದು ಮಕ್ಕಳನ್ನೆಲ್ಲಾ ತಕ್ಕಡಿಯೊಳಗಿಟ್ಟು ತೂಗಿಕೊಳ್ಳುವ ಮೊದಲೇ ನಾವುಗಳು ನೇರವಾಗಿ ಒಂದನೇಯ ತರಗತಿಯ ಬೆಂಚಿನ ಮೇಲೆ ಸ್ಲೇಟು, ಬಳಪ ಹಿಡಿದು, ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಕುಳಿತ್ತಿದ್ದೆವು. ಸಾಮಾನ್ಯವಾಗಿ ನಾವುಗಳು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಹೆಚ್ಚು ಕಡಿಮೆ 5 ವರ್ಷ ಕಳೆದಂತೆ ಶಾಲೆಗೆ ಸೇರಿಸುವುದು ರೂಡಿ. ಎಲ್ಲರೂ ಇದೇ ಪ್ರಾಯಕ್ಕೆ ಸೇರಿಸಿ ಬಿಡುತ್ತಿದ್ದರು ಅಂತೇನಿಲ್ಲ. ಅವರವರ ಅನುಕೂಲಕ್ಕೆ ತಕ್ಕ ಹಾಗೆ 6,7,8 ಹೀಗೆ ಯಾವುದೇ ನಿರ್ಬಂಧನವಿಲ್ಲದೆ ಶಾಲೆಗೆ ಸೇರಿಸುತ್ತಿದ್ದರು. ಅದಕ್ಕೇ ಇರಬೇಕು ಕೆಲವರಿಗೆಲ್ಲಾ 5ನೇ ತರಗತಿಗೆ ಬರುವ ಹೊತ್ತಿಗಾಗಲೇ ಚಿಗುರು ಮೀಸೆ ಕೊನರಲು ಶುರುವಾಗುತ್ತಿತ್ತು. ಇನ್ನು ಕೆಲ ಹುಡುಗಿಯರಂತು ಒಂದೇ ತರಗತಿಯಲ್ಲಿ ಪದೇ ಪದೇ ಡುಂಕಿ ಹೊಡೆದು ನಮಗೆಲ್ಲ ಅಕ್ಕಂದಿರಂತೆ, ಅಮ್ಮಂದಿರಂತೆ ಮಾರ್ಗದರ್ಶಕರಾಗುತ್ತಿದ್ದರು. ಇನ್ನು ಶಾಲೆಯಲ್ಲಿ ಗುರುಗಳು ಅವರ ಅಂಕ ನೋಡುವಾಗ ಮಾತ್ರ ಅವರಿಗೆ ಕೆಂಗಣ್ಣು ಮಾಡಿ ಗದರಿ, ಬೆತ್ತ ಪ್ರಸಾದವೋ, ಅಥವಾ ತರಗತಿಯ ಮುಂದೆ ದ್ವಾರಪಾಲಕರಂತೆ ನಿಲ್ಲಿಸುತ್ತಿದ್ದರೇ ವಿನ: ಉಳಿದಂತೆ ಅವರು ಅವರ ಪ್ರೀತಿ ಪಾತ್ರರಾದ ಶಿಷ್ಯರೇ. ಕಾರಣ ಇಷ್ಟೆ, ಎಲ್ಲಾ ವಿದ್ಯಾರ್ಥಿಗಳಿಗಿಂತ ಬಹುಕಾಲ ಅವರು ಶಾಲೆಯಲ್ಲಿಯೇ ಇರುವ ಕಾರಣ, ಶಾಲೆಯ ಸಮಸ್ತ ಆಗು ಹೋಗುಗಳನ್ನು ಬಹು ಸೂಕ್ಷ್ಮವಾಗಿ ಅವರು ಅರಿತಿರುವ ಕಾರಣ ಶಾಲೆಯ ಉಸ್ತುವಾರಿಯೆಲ್ಲಾ ಒಂದು ರೀತಿಯಲ್ಲಿ ಅವರ ಕೈಯಲ್ಲೇ ಇರುತ್ತಿತ್ತು ಅಂತ ಹೇಳಬಹುದು. ಬೆಳಗ್ಗೆ ಬಂದು ಶಾಲೆಯ ಗೇಟಿನ ಮತ್ತು ಕೊಠಡಿಗಳ ಬಾಗಿಲಿನ ಬೀಗವನ್ನು ತೆಗೆಯುವಲ್ಲಿಂದ ಹಿಡಿದು ಶಾಲೆಯ ಕೊನೇಯ ಪಿರಿಯೆಡ್ ಮುಗಿದು ಮತ್ತೆ ಎಲ್ಲವನ್ನು ಜೋಪನವಾಗಿ ಬಂದೋಬಸ್ತ್ ಮಾಡುವುದು ಅವರ ಜವಾಬ್ದಾರಿಗೆ ಒಳಪಡುತ್ತಿತ್ತು. ಆ ಕಾರಣಕ್ಕಾಗಿಯೇ ಅವರು ಶಾಲೆಯ ಎಲ್ಲಾ ಮಕ್ಕಳಿಂದ ಪುಕ್ಕಟೆ ಗೌರವ ಗಿಟ್ಟಿಸಿಕೊಳ್ಳುತ್ತಿದ್ದದ್ದು. ಅಂತೂ ಇಂತೂ ನಾವುಗಳೆಲ್ಲಾ ದೇವರ ದಯೆಯಿಂದ ಪ್ರತೀ ವರುಷ ಮುಂದಿನ ತರಗತಿಗೆ ಭಡ್ತಿ ಹೊಂದುತ್ತಾ ಹಾಗೂ ಹೀಗೂ ಹೇಗೋ ಡಿಗ್ರಿಯೊಂದನ್ನು ಕೈಯಲ್ಲಿ ಬೆಚ್ಚಗೆ ಹಿಡಿದುಕೊಂಡು ಹಾಗೇ ನೇರವಾಗಿ ಅಡುಗೆ ಮನೆಗೇ ವರ್ಗಾವಣೆ ಹೊಂದಿ ಬಿಟ್ಟಿದ್ದೆವು. ಈಗ ನೋಡಿದರೆ ಆಗ ಕಲಿತ ಯಾವ ಪಠ್ಯಗಳೂ, ಪೆಟ್ಟು ತಿಂದು ಬಿಡಿಸಿದ ಲೆಕ್ಕಗಳು ಇಲ್ಲಿ ತಾಳೆಯಾಗದೆ ಇರುವಾಗ ನಿಜಕ್ಕೂ ಯಾಕಪ್ಪಾ ಅಷ್ಟೊಂದು ಉರು ಹೊಡೆದು, ನಿದ್ದೆ ಗೆಟ್ಟು, ಪಾಸಾಗುವ ಜಿದ್ದಿಗೆ ಬಿದ್ದದ್ದು ಅಂತ ಅನ್ನಿಸದೇ ಇರಲಿಲ್ಲ. ಅದೇನೇ ಇರಲಿ, ಆಗ ನಾವುಗಳು ಶಾಲೆಗೆ ಹೋಗುತ್ತಿದ್ದುದರ ಹಿಂದೆ ಯಾವುದೇ ಉದ್ದೇಶವಿರುತ್ತಿರಲಿಲ್ಲ. ಮನೆಯವಲ್ಲಿ ಕಳುಹಿಸುತ್ತಿದ್ದರು, ಅಕ್ಕಪಕ್ಕದ ಮನೆಯವರು ಹೋಗುತ್ತಿದ್ದರು, ಹಾಗೇ ನಾವು ಕೂಡ ಅವರೊಂದಿಗೆ ಬಿಳಿಯ ರವಿಕೆ, ಹಸಿರು ಲಂಗ, ಒಂದು ಕೊಂಡೆ ಎಣ್ಣೆ ಬಳಿದು ಎರಡು ಬಿಗಿಯಾದ ಜಡೆ ಹೆಣೆದು, ಅದಕ್ಕೆ ಹಬ್ಬಂತಿಗೆ ಮಾಲೆ ಮುಡಿದು ಬರಿಯಗಾಲಿನಲ್ಲಿ ಹಾರುತ್ತಾ ಕುಣಿಯುತ್ತಾ ಸಾಗುತ್ತಿದ್ದೆವು. ಹುಡುಗರಿಗೆ ಬಿಳಿಯ ಅಂಗಿ ಮತ್ತು ಖಾಕಿ ಚಡ್ಡಿ. ಪ್ರತಿ ದಿನ ಸಮವಸ್ತ್ರ ಧರಿಸಲೇ ಬೇಕೆಂಬ ಕಡ್ಡಾಯ ಕೂಡ ಇರಲಿಲ್ಲ. ಆದರೆ ಬಣ್ಣದ ಅಂಗಿಯ ಕೊರತೆ ಇದ್ದ ಕಾರಣ ವಾರವಿಡೀ ಹೆಚ್ಚಿನವರಿಗೆ ಸಮವಸ್ತ್ರ ಅನಿವಾರ್ಯವಾಗಿ, ಅದು ಒಂದು ವರದಾನವಾದದ್ದು ಸುಳ್ಳಲ್ಲ.
ಒಮ್ಮೆ ಹೀಗೆ ಪಾಠದ ನಡುವೆ ನಮ್ಮನ್ನು ಒಬ್ಬರನ್ನಾಗಿ ನಿಲ್ಲಿಸಿ ನೀವೆಲ್ಲಾ ಮುಂದೆ ಓದಿ ಏನಾಗುತ್ತೀರೋ? ಅಂತ ಟೀಚರ್ ಕೇಳಿದ್ದಕ್ಕೆ, ನಾನು ಸಂಭ್ರಮದಿಂದ ಟೈಲರ್ ಆಗುತ್ತೇನೆ ಅಂತ ಉತ್ತರಿಸಿದ್ದೆ. ಆದರೆ ಟೀಚರೋ ನೀನು ಕಲಿಯುವುದರಲ್ಲಿ ಜಾಣೆ ಇದ್ದೀಯ ಹಾಗಾಗಿ ಡಾಕ್ಟರೋ, ಇಂಜಿನೀಯರೋ, ಟೀಚರೋ ಆಗಬೇಕೆಂದು ಬುದ್ದಿವಾದ ಹೇಳಿದ್ದನ್ನು ನಾನು ಆಗಲೇ ತಲೆ ಅಲ್ಲಾಡಿಸಿ ಕೊಡವಿ ಬಿಟ್ಟಿದ್ದೆ. ಹೀಗೆ ಒಬ್ಬೊಬ್ಬರು ಒಂದೊಂದು ಗುರಿಗಳನ್ನು ಪಟ್ಟಿ ಮಾಡುತ್ತಲೇ ಇದ್ದರು. ಅವರೆಲ್ಲಾ ಈಗ ಎಲ್ಲಿದ್ದಾರೋ? ಏನು ಮಾಡುತ್ತಿದ್ದಾರೋ ಒಂದೂ ಗೊತ್ತಿಲ್ಲ. ನಾನಂತು ಅತ್ತ ಟೈಲರು ಆಗದೆ ಅಥವಾ ಟೀಚರ್ ಹೇಳಿದ್ದು ಆಗದೆ ನಡುವೆ ಚಡಪಡಿಸುತ್ತಾ ಓದಿಗೆ ವಿದಾಯ ಹೇಳಿ ,ಲಕ್ಷಣವಾಗಿ ಮದುವೆಯಾಗಿ ಸುಮ್ಮಗೆ ಅದು ಇದು ಗೀಚೋಕೆ ಶುರು ಮಾಡಿದ್ದು ಈಗ ಇತಿಹಾಸಕ್ಕೆ ಸಂದ ವಿಷಯ.
ಓದುವ ಸಮಯದಲ್ಲಿ ಓದುವುದೆಂದರೆ ಯಾರಿಗೆ ತಾನೇ ಪ್ರಿಯವಾಗುತ್ತದೆ?. ಪರೀಕ್ಷೆ ಎಂದರೆ ಅದೊಂದು ಪೆಡಂಭೂತದಂತೆ. ಶಾಲೆಯ ಪರೀಕ್ಷೆಗೂ, ವೈದ್ಯರ ಪರೀಕ್ಷೆಗೂ ಹೆದರಿದಷ್ಟು ಮಕ್ಕಳು ಇನ್ಯಾವುದಕ್ಕೂ ಹೆದರುವುದಿಲ್ಲವೇನೋ. ಇದೆರಡು ಪರೀಕ್ಷೆಯ ಪಲಿತಾಂಶದಲ್ಲಿ ಕೆಂಪು ಶಾಯಿಯ ಗುರುತು ಎಂದಾದರೆ ಬೆತ್ತ, ಇಂಜೆಕ್ಷನ್ ಇದ್ದೇ ಇದೆಯಲ್ಲ. ಹಾಗಿರುವಾಗ ಭಯವೊಂದು ಗೊತ್ತಿಲ್ಲದೇ ಆವರಿಸಿ ಬಿಡುತ್ತದೆ. ಈ ಪರೀಕ್ಷೆಯ ಅರ್ಧ ಹೆದರಿಕೆಗೆಯೇ ಓದಿದ್ದು ಮರೆತು ಹೋಗಿ, ಮನಸು ಖಾಲಿಯಾಗಿ, ಉತ್ತರ ಪತ್ರಿಕೆಯಲ್ಲಿ ಜಾಳು ಜಾಳು ಬರೆದು ಚಡಪಡಿಸುವ ಪ್ರಸಂಗ ಬರುತ್ತಿದ್ದದ್ದು. ಅದೇನೋ ಗೊತ್ತಿಲ್ಲ, ಪರೀಕ್ಷೆ ಅಂದರೆ ಎಲ್ಲರೂ ಭಯ ಬೀಳುತ್ತಾರೆ ಮತ್ತು ಎಷ್ಟೇ ವಯಸ್ಸಿನ ನಂತರ ಪರೀಕ್ಷೆ ಬರೆಯಲು ಕುಳಿತರೂ ಆ ಹೆದರಿಕೆ ಮಾತ್ರ ಹೋಗುವುದಿಲ್ಲವೆಂಬುದು ಮೊನ್ನೆ ಮೊನ್ನೆಯಂತು ಖಾತ್ರಿಯಾಗಿ ಬಿಟ್ಟಿತ್ತು.
ಯಾಕೋ ಏನೋ ಗೊತ್ತಿಲ್ಲ. ಕೆಲವೊಮ್ಮೆ ಹೊತ್ತಲ್ಲದ ಹೊತ್ತಿನಲ್ಲಿ ಕೆಲವೊಂದು ಆಸೆಗಳು ಹುಟ್ಟಿಕೊಂಡು ಬಿಡುತ್ತವೆ. ಅಂತೆಯೇ ನನಗೂ ಕಾಲೇಜು ಬಿಟ್ಟು ಬರೋಬ್ಬರಿ ೧೮ ವರುಷಗಳು ನಿರಾಂತಕವಾಗಿ ಕಳೆದ ಮೇಲೆ ಎಂ.ಎ. ಮಾಡಬೇಕು ಅನ್ನೋ ಬಲವಾದ ಹುಕಿ ಶುರುವಾಗಿ ಬಿಟ್ಟಿತ್ತು. ಈ ಹುಚ್ಚು ಮೊದಲೇ ಸಣ್ಣ ಮಟ್ಟದಲ್ಲಿತ್ತು. ಯಾಕೆ ಇನ್ನು ಓದು, ಪರೀಕ್ಷೆ ಅಂತ ಇಲ್ಲದ ಉಸಾಬರಿಯನ್ನು ಮೈ ಮೇಲೆ ಹೊದೆದು ಕೊಳ್ಳುವುದು ಅಂತ ನಾನೇ ತೆಪ್ಪಗಾಗಿದ್ದೆ. ಅದೂ ಅಲ್ಲದೇ ಈಗ ಮಕ್ಕಳೆಲ್ಲಾ ದೊಡ್ಡವರಾಗುತ್ತಿದ್ದಾರೆ, ಅವರ ಅಂಕಗಳ ಬಗ್ಗೆ ತಕಾರು ಮಾಡುವ ನಾನು , ನನ್ನ ಅಂಕ ನೋಡಿ ಅವರು ಚಕಾರ ಎತ್ತಬಾರದಲ್ಲ?. ಅದೂ ಅಲ್ಲದೆ ಏನೂ ಮಾಡೋಕಾಗದೆ ಒಂದೆರಡು ಬರಹ ಬರೆದು ಹೆಸರು ಮಾಡಿದ್ದ ನಾನು ಮಕ್ಕಳ ಕಣ್ಣಲ್ಲಿ ಮಹಾ ಬುದ್ದಿವಂತೆ ಅಂತ ಅನ್ನಿಸಿಕೊಂಡಿದ್ದೆ. ನನ್ನ ತರಗತಿಯ ಎಲ್ಲಾ ಸಹಪಾಠಿಗಳ ಅಮ್ಮಂದಿರು ಟೀಚರ್ಸು, ಲೆಕ್ಚರು. ನೀನು ಮಾತ್ರ ಬರೇ ಅದೇ ಮಾಮೂಲು ಡಿಗ್ರಿ ತಗಲಿಸಿಕೊಂಡು ಕುಂತಲ್ಲೇ ಕುಕ್ಕರು ಬಡಿದಿದ್ದೀಯ . ಇನ್ನು ನೀನು ಜಾಬ್ ಮಾಡೋದು ಬೇಡ, ಆದರೆ ಎಂ. ಎ. ನಾದ್ರೂ ಪಾಸ್ ಮಾಡಬೇಕು ಆಯ್ತಾ ಅಂತ ಮಗಳ ಒತ್ತಾಯ ಜೋರಾಗಿ ಬಿಟ್ಟಿತ್ತು. ಅದೂ ಅಲ್ಲದೇ ಹೀಗೆ ಒಮ್ಮೆ ಯಾವುದೋ ಕಾಲೇಜಿನ ಸಮಾರಂಭಕ್ಕೆ ಭಾಷಣ ಮಾಡೋಕೆ ಹೋಗಿದ್ದ ನನ್ನನ್ನು ಆ ಕಾಲೇಜಿನ ಉಪನ್ಯಾಸಕರಿಗೆ ನಾನು ಬರೇ ಡಿಗ್ರೀ ಹೋಲ್ಡರ್ ಅಂತ ಗೊತ್ತಾಗಿ ನೀವೊಂದು ಕನ್ನಡ ಎಂ. ಎ. ಯಾಕೆ ಮಾಡಬಾರದು? ಹೇಗೂ ಅದೂ ಇದೂ ಅಂತ ಬರೀತೀರಿ, ಹಾಗಾಗಿ ಪರೀಕ್ಷೆ ಬರೆಯೋದು ನಿಮಗೆ ಅಷ್ಟು ಕಷ್ಟವಾಗಲಾರದು ಅಂತ ಮೆಲ್ಲನೆ ಗಾಳಿ ಊದಿದ್ದರು. ನನಗೋ ಎಂ.ಎ. ಮಾಡಬೇಕು ಅಂತ ಬೆಟ್ಟದಷ್ಟು ಆಸೆ ಇದೆ. ಆದರೆ ಪರೀಕ್ಷೆ ಬರೆಯೋದು? ಮಾರ್ಕ್ಸ್ ತೆಗೆಯೋದು ಅಂದರೆ ಈಗಲೂ ಕೈ ಕಾಲು ಬಿದ್ದು ಹೋಗುತ್ತದೆ. ಅದೂ ಅಲ್ಲದೆ ನಾನು ಸಾಮಾನ್ಯ ಬುದ್ದಿಮತ್ತೆಯ ವಿದ್ಯಾರ್ಥಿ. ಇಂತಹ ವೀಕ್ ನೆಸ್ಗಳನ್ನು ಎಲ್ಲರ ಬಳಿ ಹೇಳಿಕೊಂಡು ನಾನು ಹಗುರವಾಗಿ ನಗೆಪಾಟಲಿಗೀಡಾಗುವುದು ನಂಗೆ ಇಷ್ಟ ಇಲ್ಲ. ಅಂತೂ ಇಂತೂ ಎಲ್ಲರ ಒತ್ತಾಯದ ಮೇರೆಗೆ ನಾನು ಎಂ. ಎ, ಓದೋದು ಅಂತ ಗಟ್ಟಿಯಾದ ನಿರ್ಧಾರ ಮಾಡಿದೆ.
ನಮ್ಮಂತ ಕೃಷಿಕ ಮಹಿಳೆಯರಿಗೆ ಅಡುಗೆ, ದನ,ಹಟ್ಟಿ,ತೋಟ ಇವುಗಳ ಮದ್ಯೆ ರೆಗ್ಯುಲರ್ ತರಗತಿಯ ಕನಸು ಮಾಯೆಯೇ ದಿಟ. ಹಾಗಾಗಿ ಅಂಚೆ ತೆರಪಿನ ಮೂಲಕ ಓದುವುದೆಂದು ತೀರ್ಮಾನಿಸಿದೆ. ಮೊದ ಮೊದಲಿಗೆ ಅದೇನೊ ಹಿಂಜರಿಕೆ. ಇಷ್ಟು ವರ್ಷದ ಬಳಿಕ ಎಂ. ಎ. ಮುಗಿಸಿ ಯಾರನ್ನು ಉದ್ದಾರ ಮಾಡಲಿಕ್ಕೆ ಉಂಟು?. . ಇತ್ಯಾದಿ ತರೇವಾರಿ ಆಲೋಚನೆಗಳು. ನಾನು ಎಂ. ಎ. ಮಾಡುತ್ತೇನೆ ಅಂದಾಗ ಮೂಗು ಮುರಿದವರ ಜೊತೆ ಧೈರ್ಯ ತುಂಬಿದವರು ಅಷ್ಟೇ ಇದ್ದರು. ೫೦ ವರುಷದ ನಂತರ, ೭೦ ವರುಷದ ನಂತರ ಎಂ. ಎ ಬರೆದವರ ಉದಾಹರಣೆಗಳನ್ನು ನೀಡುತ್ತಾ , ಈ ವಯಸ್ಸಿನಲ್ಲಿ ಇನ್ನು ಬರೆಯೋಕೆ ನಿನಗೇನು ಮಹಾ? ಅಂತ ನನ್ನ ಎಂ. ಎ. ಓದಿಗೆ ಇಂಬು ನೀಡತೊಡಗಿದರು.
ಅಂಚೆಯ ಮೂಲಕ ಪುಸ್ತಕ ಬಂದದ್ದೇ ತಡ, ಪುಸ್ತಕಗಳನ್ನೆಲ್ಲಾ ನನ್ನ ಮುಂದೆ ಹರವಿಕೊಂಡು ಕುಳಿತಾಗ, ಮಕ್ಕಳಿಗೆ ನನ್ನ ಸಮಯ ಸಿಗದೆ ಒಮ್ಮೆ ನಿನ್ನ ಎಂ. ಎ. ಮುಗಿದರೆ ಸಾಕಿತ್ತಪ್ಪಾ.. ಅಂತ ಬಡ ಬಡಿಸುತ್ತಾ ರಾಗ ಕೊಯ್ಯೋಕೆ ಶುರು ಮಾಡಿದ್ದರು. ಅದೂ ಅಲ್ಲದೆ ನಿನ್ನ ಹಾಗೆ ನಾವು ಹೊತ್ತಲ್ಲದ ಹೊತ್ತಿನಲ್ಲಿ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ಕುಳಿತರೆ ರ್ಯಾಂಕ್ ಖಂಡಿತ ಅಂತ ಹೇಳಿಕೊಂಡು ಮುಸಿ ಮುಸಿ ನಕ್ಕಾಗ ,ನಿಜಕ್ಕೂ ನನ್ನ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಹೊರಟು ಹೋಗಿ ಬೆಪ್ಪು ತಕ್ಕಡಿಯಂತಾದರೂ ಈಗ ವಯಸ್ಸಾದ ಮೇಲೆ ಓದೋಕೆ ಆಗೋದಿಲ್ಲ ಗೊತ್ತುಂಟಾ? .ಓದಿದ್ದೆಲ್ಲಾ ಬಹು ಬೇಗನೇ ಮರೆತು ಹೋಗುತ್ತೆ ಅಂತ ಸಮಾಜಾಯಿಷಿ ಕೊಟ್ಟಿದ್ದಕ್ಕೆ, ನನ್ನ ಮಗನೋ ಅಪಾರ ಕನಿಕರದಿಂದ ನಾಳೆ ಬೆಳಗ್ಗೆಯಿಂದ ಯಾವಾಗಲೂ ತಿಮರೆ ತಿನ್ನು ಅಮ್ಮ, ಇದು ನೆನಪಿನ ಶಕ್ತಿಗೆ ಒಳ್ಳೆದು ಅಂತ ನನ್ನದೇ ಸಲಹೆಯನ್ನು ನನಗೆ ಹಾಗೇ ಉಚಿತವಾಗಿ ರವಾನಿಸಿದ್ದ. ಈ ಪಠ್ಯ ಪುಸ್ತಕಗಳನ್ನು ಓದಿಕೊಂಡು ಕುಳಿತುಕೊಳ್ಳುವುದಕ್ಕಿಂತ ಓದಲು ಬಾಕಿಯಿಟ್ಟಿರುವ ಪ್ರಿಯವಾದ ಸಾಹಿತ್ಯ ಕೃತಿಗಳನ್ನಾದರೂ ಓದಿ ಮುಗಿಸಿ ಬಿಡಬಹುದಿತ್ತು ಎಂಬ ಆಲೋಚನೆ ಕೂಡ ಬಂದದ್ದಿದೆ. ಯಾಕೆಂದರೆ ಈ ಎಂ. ಎ. ಪರೀಕ್ಷೆಗೆ ಓದೋ ನೆಪದಲ್ಲಿ ಬೇರೆ ಯಾವ ಕೆಲಸಗಳನ್ನು ನಿಗಾವಹಿಸಿ ಮಾಡೋಕೆ ಆಗುತ್ತಿರಲಿಲ್ಲ. ಓದೋಕೆ ಎಷ್ಟು ಬಾಕಿ ಇದೆಯಲ್ಲಾ? ಅನ್ನುವುದೇ ಬಹು ದೊಡ್ದ ಕೊರೆಯುವ ಸಂಗತಿ. ಹಾಗೂ ಹೀಗೂ ಪರೀಕ್ಷೆ ಬರೆಯುವ ಹೊತ್ತಲ್ಲಿ, ಏನು ಬರೆಯಬೇಕೋ ಅದು ಬರೆಯದೆ, ಎಂತದೋ ಕತೆ ಕಟ್ಟಿ ಬಂದಂತೆ ಅನ್ನಿಸಿ ಭಯದಲ್ಲೂ ನಗು ತೇಲಿ ಹೋಗುತ್ತಿತ್ತು. ಅದೂ ಅಲ್ಲದೇ, ಎಂ. ಎ. ಪರೀಕ್ಷೆಯಲ್ಲಿ ಪುಟಗಟ್ಟಲೆ ಬರೆಯಲೇ ಬೇಕು , ಅದಿಲ್ಲದಿದ್ದರೆ ಮಾರ್ಕು ದಕ್ಕುವುದಿಲ್ಲ ಅಂತ ಅವರಿವರು ಹೇಳಿದ ಟಿಪ್ಪಣಿಗಳನ್ನು ಕಿವಿಯೊಳಗಿಟ್ಟುಕೊಂಡು, ಪುಟ ತುಂಬಿಸುವುದೊಂದೇ ನನ್ನ ಏಕ ಮೇವ ಗುರಿಯೆಂಬಂತೆ ಬರೆಯಲು ತೊಡಗಿದಾಗ ಅಕ್ಷರಗಳೆಲ್ಲಾ ದೇವನಾಗರಿ ಲಿಪಿಯಂತಾಗಿ, ನಾನು ಬರೆದ ನನ್ನದೇ ಅಕ್ಷರವನ್ನು ನನಗೇ ಓದೋಕೆ ಆಗದೆ ಹೆಣಗಾಡುವಂತಾಗಿ, ಭಗವಂತಾ! ನನ್ನ ಉತ್ತರ ಪತ್ರಿಕೆ ಮೌಲ್ಯ ಮಾಪನ ಮಾಡುವವರಿಗೆ ವಿಶೇಷ ದಿವ್ಯ ದೃಷ್ಠಿ ಕರುಣಿಸಪ್ಪಾ.. ಅಂತ ಮನಸಾರೆ ಅಡ್ಡಬಿದ್ದಿದ್ದೆ. ಪರೀಕ್ಷೆ ಕೊಠಡಿಯಿಂದ ಹೊರ ಬರುವುದೊಂದೇ ತಡ, ಎಲ್ಲರದ್ದು ಒಂದೇ ಪ್ರಶ್ನೆ, ನೀವೆಷ್ಟು ಪುಟ ಬರೆದ್ರಿ?. ತಮಾಷೆಯ ಸಂಗತಿಯೆಂದರೆ ನನ್ನಂತೆ ಪರೀಕ್ಷೆ ಬರೆಯಲು ಬರುತ್ತಿದ್ದ ನನಗಿಂತ ತುಂಬಾ ಚಿಕ್ಕವಳಾಗಿದ್ದ, ಕತೆ ಕವಿತೆ ಹೇಗಕ್ಕಾ ಬರೆಯೋದು ಹೇಳಿಕೊಡಿ ಅಂತ ದುಂಬಾಲು ಬೀಳುತ್ತಿದ್ದ ಹುಡುಗಿಯೊಬ್ಬಳು, ಪರೀಕ್ಷೆ ಮುಗಿಸಿ ನೇರ ನನ್ನ ಬಳಿಗೆ ಬಂದು ಬಲು ಉತ್ಸಾಹದಲ್ಲಿ, ನಾನು ಮಹಾನ್ ಲೇಖಕಿಯಂತೆ ಪುಟಗಟ್ಟಲೆ ವಿಮರ್ಶೆ ಬರೆದು ಬಂದಿರುವೆ ಅಕ್ಕಾ ಅಂತ ಹೇಳಿದಾಗ..ನಾನೋ ಮುಂದೊಮ್ಮೆ ನೀನು ಮಹಾನ್ ಲೇಖಕಿಯಾಗುತ್ತೀಯ ಅಂತ ಹರಸಿದ್ದೆ.
ಇನ್ನು ಪರೀಕ್ಷೆ ಹಾಲಿನೊಳಗೆ ಹೋಗುವಲ್ಲಿಯವರೆಗೆ ಯಾರದ್ದೂ ಓದಿ ಮುಗಿಯುತ್ತಿರಲಿಲ್ಲ. ಇಷ್ಟು ದಿನ ಮನೆಯಲ್ಲಿ ಅವರು ಅದೇನು ಕಡಿದು ಹಾಕುತ್ತಿದ್ದರೋ ಅಂತ ಪ್ರಶ್ನಿಸಿದರೆ, ಅವರೆಲ್ಲಾ ವೃತ್ತಿಯಲ್ಲಿರುವವರಾದ ಕಾರಣ, ನಮಗೆ ದಿನಾ ಡ್ಯೂಟಿ ನಿಮಗೆ ಗೃಹಿಣಿಯರಿಗೆ ಎಷ್ಟು ಚೆಂದ ಅಲ್ವಾ ಅಂತ ಅವಲತ್ತು ಕೊಳ್ಳುವಾಗ, ನಮಗೋ ಮನೆ ದನ ಕರು ಕೆಲಸ ನಿಭಾಯಿಸಿ ಬರುವ ತುರ್ತು ಅವರಿಗೆ ಗೊತ್ತಾಗಲಿಕ್ಕಿಲ್ಲವೇನೋ ಅಂತ ನಕ್ಕು ಸುಮ್ಮನಾಗಿದ್ದೆ. ನಾನು ಕೃಷಿಕ ಮಹಿಳೆ ಅಂತ ಗೊತ್ತಾದ ತಕ್ಷಣ ಅಲ್ಲಿಗೆ ಬಂದ ಟೀಚರೊಬ್ಬಳು, ಬಾಯಿ ಬಿಟ್ಟು ಕಣ್ಣಗಲಿಸಿ, ಅಬ್ಬಾ! ಯಾಕೆ ತೊಂದರೆ ತಕೊಂಡು ಓದ್ತೀರ? ಏನು ಪ್ರಯೋಜನ ಅಂತ ಕೇಳಿ ಬಿಡಬೇಕೇ?. ಆ ಟೀಚರ ಮುಂದೆ ನನ್ನ ಕನಸುಗಳು, ಆಸೆಗಳನ್ನು ಹೇಳಿಕೊಂಡರೆ ವ್ಯರ್ಥ ಹಳಹಳಿಕೆ ಆಗಿ ಬಿಡಬಹುದೇನೋ ಅನ್ನಿಸಿ, ಹೌದು ! ಬೇಡಾಗಿತ್ತು, ಫೀಸು ಕಟ್ಟಿ ಕೆಟ್ಟೆ ಅಂದೆ.
ಪರೀಕ್ಷೆ ಅನ್ನೋ ಭಯ ಎಲ್ಲರಿಗೂ ಇದ್ದದ್ದೇ. ಇದಕ್ಕೆ ಯಾರೂ ಹೊರತಾಗಿಲ್ಲ. ಈ ಬದುಕೇ ಅನ್ನುವಂತದ್ದು ಬಹುದೊಡ್ದ ಪರೀಕ್ಷೆ. ಎಲ್ಲರು ಕೂಡ ಇಂತಹ ಪರೀಕ್ಷೆಯನ್ನು ಎದುರಿಸಿ ಬಂದದ್ದು ಮತ್ತು ಎದುರಿಸುತ್ತಲೇ ಇರುವುದು. ಹೀಗೆ ಅಡಿಗಡಿಗೆ ಎಷ್ಟೊಂದು ಪರೀಕ್ಷೆಗಳು ನಮ್ಮನ್ನು ಹೆದರಿಸಿ ಕಂಗೆಡಿಸುವುದಿಲ್ಲ?. ಬದುಕಿನಲ್ಲಿ ವಿಧಿ ತಂದೊಡ್ಡುವ ಪರೀಕ್ಷೆಗಳು ಹಲವಾರು. ಆದರೆ ಇಂತಹ ಪರೀಕ್ಷೆಗಳು ಬದುಕಿನಲ್ಲಿ ಅಚಾನಕ್ ಆಗಿ ಬಂದೆರಗಿ ಬಿಡುವಂತದ್ದು. ಹಾಗಾಗಿ ನೀರಿಗೆ ಬಿದ್ದ ಮೇಲೆ ಈಜುವ ಪ್ರಯತ್ನವನ್ನು ಮಾಡಿಯೇ ಮಾಡುತ್ತಾರೆ. ಆದರೆ ಬಹುಷ: ಎಲ್ಲರನ್ನೂ ಹೆದರಿಸಿ ಹಾಕಿ ಬಿಡುವಂತದ್ದು ಶಾಲಾ ಪರೀಕ್ಷೆ ಒಂದೇ. ಇಂತದೊಂದು ಪರೀಕ್ಷೆ ಇದ್ದೇ ಇದೆ, ಇದರ ಪಲಿತಾಂಶ ಎಲ್ಲರಿಗೂ ಗೊತ್ತಾಗಿಯೇ ಆಗುತ್ತದೆ, ಆ ಮೂಲಕ ನಮ್ಮ ಅಸ್ತಿತ್ವ ರೂಪುಗೊಳ್ಳುತ್ತದೆ ಅನ್ನುವ ಅವ್ಯಕ್ತ ಭಯ ಒಂದು ಕಡೆಯಾದರೆ, ಮನೆಯಲ್ಲಿ, ಶಾಲೆಯಲ್ಲಿ, ವೃತ್ತಿಯ ಏರುವಿಕೆಯಲ್ಲಿ,ಪರೀಕ್ಷೆ ಅಂದರೆ ಅದೊಂದು ದೊಡ್ಡ ಯುದ್ದವೇ. ಅದರಲ್ಲಿ ಜಯ ಗಳಿಸಲೇ ಬೇಕು ಅನ್ನುವ ಒತ್ತದ ಎಲ್ಲಾ ಕಡೆಯಿಂದಲೂ ಬತ್ತಳಿಕೆಯೊಳಗಿನ ಬಾಣದಂತೆ ಚುಚ್ಚಿಕೊಂಡು ಬರುವ ಕಾರಣವೇ ಇರಬೇಕು, ಈ ಶಾಲಾ ಪರೀಕ್ಷಾ ಭಯ ಎಲ್ಲರನ್ನು ಬಿಡದೇ ಕಾಡುವುದು. ನಾವು ಎಷ್ಟೇ ದೊಡ್ದವರಾಗಲಿ, ಅದೆಷ್ಟೋ ಪರೀಕ್ಷೆ ಬರೆದು ಜಯಶೀಲರಾದರೂ ಬಹುಷ; ಇದನ್ನು ಹಬ್ಬದಂತೆ ಆಚರಿಸಿ , ಸಂಭ್ರಮಿಸಿ ಗೆದ್ದವರು ತೀರಾ ಕಡಿಮೆಯೇ. ಅದೇನೇ ಇರಲಿ,ಸಧ್ಯ !ನಾನಂತು ಎಂ. ಎ. ಪರೀಕ್ಷೆ ಬರೆದು ನಿರಾಳವಾಗಿರುವೆ.
-ಸ್ಮಿತಾ ಅಮೃತರಾಜ್. ಸಂಪಾಜೆ.
ಓಹ್ ಗ್ರೇಟ್. ಫಲಿತಾಂಶ ಚೆನ್ನಾಗೆ ಬರುತ್ತೆ ಬಿಡಿ. ತುಂಬಾ ಚಂದ ಬಂದಿದೆ ಲಹರಿ.
ತುಂಬಾ ಚಂದವವಾದ ಲೇಖನ.
ಚೆಂದದ ಲಹರಿ..ನಾನೂ ಇದೇ ರೀತಿ, ಉದ್ಯೋಗಕ್ಕೆ ಸೇರಿದ ಮೇಲೆ ಎಮ್.ಬಿ.ಎ ಮಾಡಿದ್ದೆ. ಆ ಪರಿಪಾಡಲು ನೆನಪಾಯಿತು.
ನೈಸ್. ಸ್ಕೂಲ್ , ಕಾಲೇಜು ದಿನಗಳು ಎಲ್ಲರ ನೆನಪಲ್ಲು ಹಚ್ಚ ಹಸುರಾಗಿ ಉಳಿಯುವಂತಹ ಸುಂದರ ದಿನಗಳು. ಅದರಲ್ಲೂ ಓದಿನ ಟಚ್ ಬಿಟ್ಟು ಎಷ್ಟೋ ಸಮಯದ ನಂತರ ಪುನಃ ಅದರಲ್ಲಿ ತೊಡಗಿ ಪದವಿ ಪಡೆಯೋದು ಸಾಧನೆಯೇ ಸರಿ . ಅಭಿನಂದನೆಗಳು ಮೇಡಂ ನಿಮ್ಮ ಸಾಧನೆಗೆ .
ಥ್ಯಾಂಕ್ಸ್ ನಯನ ಮೇಡಂ.ಪ್ರತೀಭಾರಿ ನನ್ ಬರಹಗಳನ್ನು ತಾಳ್ಮೆಯಿಂದ ಓದುವಿರಿ.
ಥ್ಯಾಂಕ್ಸ್. ಪ್ರಕಟಿಸಿದ ಸುರಹೊನ್ನೆಗೂ,ಪ್ತತಿಕ್ರಿಯಿಸಿದ ನಿಮಗೆಲ್ಲರಿಗೂ
ನನ್ನ ಶ್ರೀಮತಿ ಗಿರಿಜಾಶಾಸ್ತ್ರಿ ಮದುವೆಯಾದ ಎಂಟುವರುಷಗಳಾದ ಮೇಲೆ ಸೊಂಟ ಮುರಿದ ಮಲಗಿದಾಗ ನೆಟ್ ಪರೀಕ್ಷೆ ಕಟ್ಟಿ ಮೂರು ತಿಂಗಳು ಮಲಗಿದಲ್ಲೇ ಓದಿ ಮೂರು ದಶಕಗಳ ಹಿಂದೆ ಪಾಸಾಗಿ ಕೇಂದ್ರ ಸರ್ಕಾರದ ಶಿಷ್ಯವೇತನ ಪಡೆದು ನಾಲ್ಕು ವರ್ಷಗಳ ಕಾಲ ಸಂಶೋಧನೆ ನಡೆಸಿ ಪಿ.ಎಚಡಿ ಪದವಿ ಮು.ವಿ.ವಿ ಪಡೆದದ್ದರ ನೆನಪಾಯಿತು
ವಾವ್.ಗ್ರೇಟ್.ಅಭಿನಂದನೆ ತಿಳಿಸಿ
ಸ್ಮಿತಾ ಮೇಡಂ ,ಸುಂದರ ಬರಹ. ನನ್ನ ಬಾಲ್ಯ ನೆನಪಾಗಿ …ಬರೆಯೋಣ ಅನ್ನಿಸ್ತಾ ಇದೆ.
ಶಂಕರೀ ಮೇಡಂ.Thanks
so nice one