ಬರೆದು ಬಿಡಬೇಕು ಏನನ್ನಾದರೂ..

Share Button

ಬರೆದು ಬಿಡಬೇಕು ಏನನ್ನಾದರೂ ಅಂತ ಹೇಳುತ್ತಲೇ ತನಗೆ ಗೊತ್ತೇ ಆಗದಂತೆ ಅದೆಷ್ಟೋ ಕವಿತೆಗಳನ್ನು ಬರೆದು ಇನ್ನೂ ಬರೆಯಬೇಕೆನ್ನುವ ತುಡಿತದಲ್ಲಿರುವ ಕವಯತ್ರಿ ರೇಣುಕಾ ರಮಾನಂದ. ಇದು ಒಳ್ಳೆಯ ಬೆಳವಣಿಗೆ. ಇಂತಹ ತುಡಿತ ಹೊಂದಿರುವುದರಿಂದಲೇ ನಮ್ಮ ಸಮಕಾಲೀನ ಪ್ರಮುಖ ಕವಯತ್ರಿಯರಲ್ಲಿ ರೇಣುಕಾರವರು ಕೂಡ ಒಬ್ಬರು. ಇಲ್ಲಿ ತನಕ ನಾನು ನೋಡಿಯೇ ಇರದ, ಅವರ ಬಿಡಿ ಬಿಡಿ ಕವಿತೆಗಳ ಮೂಲಕವಷ್ಟೇ ಅವರನ್ನು ಕಂಡುಕೊಂಡಿದ್ದ ನನಗೆ ಮೊನ್ನೆ ಅವರು ಆಕಸ್ಮಿಕವಾಗಿ ಎದುರಾದದ್ದು ‘ಮೀನು ಪೇಟೆಯತಿರುವಿನಲ್ಲಿ ಸಾಗಿದಾಗಲೇ. ಮೊನ್ನೆ ಮೊನ್ನೆ ಗೆಳತಿ ಸಂಗೀತ ರವಿರಾಜ್‌ರವರ ಕೈಯಲ್ಲಿದ್ದ ಪುಸ್ತಕವನ್ನು ಕಂಡು ಒಂದೇ ದಿನದಲ್ಲಿ ಓದಿ ಹಿಂದಿರುಗಿಸುವೆನೆಂದು ಭರವಸೆಯಿತ್ತು ಒಂದೇ ಗುಕ್ಕಿಗೆ ಓದಿ ಹಿಂದಿರುಗಿಸಿದೆ ಕೂಡ. ಮೀನು ಪೇಟೆಯ ತಿರುವಿನಲ್ಲಿ ಅವರ ಎಲ್ಲಾ ಕವಿತೆಗಳನ್ನು ನೋಡುವ,ಓದುವ,ಆಸ್ವಾದಿಸುವ ಭಾಗ್ಯ. ಆ ನಡುವಲ್ಲಿ ದಕ್ಕಿದ್ದನ್ನು ಎದೆಗಿಳಿಸಿಕೊಂಡೆ. ಅದಕ್ಕಾಗಿ ಮೊದಲನೆಯದಾಗಿ ಅವರಿಗೆ ಅಭಿನಂದನೆಗಳು.

ತಬ್ಬಿಕೊಂಡು ಗೋಗೆರೆಯುವ ಅವರ ಹಚ್ಚಿಕೊಂಡ ಸಮುದ್ರ ಓದುವಾಗಲೆಲ್ಲಾ, ಆ ಸಮುದ್ರದ ಅಲೆಗಳು ಇಲ್ಲಿ ತನಕವೂ ಬಂದು ನೂರಾರು ಕವಿತೆಗಳನ್ನು ದಡಕ್ಕೆ ತಂದಿಟ್ಟಂತೆ ಭಾಸವಾಗಿ, ಅವರ ಹಚ್ಚಿಕೊಂಡ ಸಮುದ್ರ ನೂರಾರು ಬಗೆಯಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ‘ ಭತ್ತ ಬೆಳೆಯುವುದೆಂದರೆ‘ ಎಂಬ ಕವಿತೆಯ ಮೂಲಕ ಅನಾವರಣಗೊಳ್ಳುವುದು ಒಂದು ಕೃಷಿ ಪರಂಪರೆ. ಪ್ಯಾಕೀಟಿನೊಳಗೆ ತುಂಬಿಬಂದ ಅಕ್ಕಿಯಿಂದಷ್ಟೇ ಅನ್ನವಾಗುತ್ತದೆ ಅಂತ ಗೊತ್ತಿರುವ ಇಂದಿನ ಯುವ ಪೀಳಿಗೆಗೆ ಭತ್ತವೆಂದರೆ ಅರಿವಿಗೆ ನಿಲುಕದ ಸಂಗತಿ. ಭತ್ತ ಬೆಳೆಯುವ ಹಂತ ಹಂತದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ದಕ್ಕುವ ಭಾವ ಅನನ್ಯ. ಅದು ಸ್ವಾವಲಂಬನೆಯ ಪ್ರತೀಕ ಕೂಡ. ಒಂದು ಸರಳ ಕವಿತೆಯ ಮೂಲಕ ಬದುಕಿನ ಗಹನವಾದ ಸತ್ಯ ಮತ್ತು ಸತ್ವವನ್ನು ಹಿಡಿದಿಟ್ಟ ಕವಿತೆ.

ಮಿಡಿ ಉಪ್ಪಿನಕಾಯಿಯೊಂದು ಮನದ ಭಾವವನ್ನು ಆರ್ಧ್ರವಾಗಿ ಕಟ್ಟಿಕೊಡುತ್ತದೆ. ತೀರಿಕೊಂಡ ಅವ್ವನಿಗಾಗಿ ಭರವಸೆಯಿಂದ ಕಾಯುವ ಬೆಕ್ಕಿನ ನಿಜವಾದ ಪ್ರೀತಿಯ ತಹತಹಿಕೆಯನ್ನ ಕಂಡಾಗ ಕೊನೆಗೊಮ್ಮೆ ಅವ್ವ ಮತ್ತು ಬೆಕ್ಕು ಬೇರೆ ಬೇರೆಯಲ್ಲ ಅಂತ ಅನ್ನಿಸಲಿಕ್ಕೆ ಶುರುವಾಗುತ್ತದೆ. ಬದಲಾದ ಕಾಲದಲ್ಲಿ ನವಿರು ಪ್ರೇಮದ ಸೆಳಕೊಂದು ಹೇಗೆ ಪಲ್ಲಟಗೊಳ್ಳಬಲ್ಲುದು ಎಂಬುದನ್ನ ‘ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ’ ಅಂತ ತಾಕುವಂತೆ ಬರೆಯಬಲ್ಲರು. ಹಾಗೇ ಎಲ್ಲಕ್ಕಿಂತ ಹೆಚ್ಚಾಗಿ ಕವಿತೆಯೆಂಬುದು ಈ ಜಗತ್ತಿನಲ್ಲಿ ಎಲ್ಲಕ್ಕಿಂತ ಸುಖ ಕೊಡುವ ಪ್ರಿಯವಾದ ಸಂಗತಿಯೆಂಬುದನ್ನ ಅಷ್ಟೇ ನವಿರಾಗಿ ನಿರೂಪಿಸುತ್ತಾರೆ.

ತುಕ್ಕು ಹಿಡಿದ್ದದ್ದು ಕೂಡ ಚಿಗುರಬಲ್ಲದು. ಒಂದಷ್ಟು ಛಲ ಮತ್ತು ಅಪರಿಮಿತ ಆತ್ಮವಿಶ್ವಾಸ ಬೇಕು ಅನ್ನುವಂತದ್ದನ್ನ ಅವರ ಕವಿತೆಗಳು ಕಟ್ಟಿಕೊಡುತ್ತಾ,ಮರೆತವರಿಗೆ ಕೊರಗದೆ,ಅಲ್ಲಿ ಹಸಿರೊಂದನ್ನ ಅರಳಿಸಿ ನಿಸೂರಾಗಿಬಿಡುತ್ತಾರೆ. ಬರಡು ಬದುಕನ್ನು ಚಿಗುರಿಸುವುದು, ಅರಳಿಸುವುದು ಕವಿತೆಯಿಂದಲಷ್ಟೇ ಸಾಧ್ಯ ಅನ್ನು ವಂತದ್ದು ಮನದಟ್ಟಾಗುತ್ತದೆ. ಅವರ ಕವಿತೆಯೊಳಗೆ ಬರುವ ಮರವೊಂದರ ಪ್ರಲಾಪ ಅದೆಷ್ಟೋ ಮೂಕ ದನಿಗಳ ರೋದನದಂತಿದೆ. ಹೆಣ್ಣೊಬ್ಬಳು ಸಂಬಂಧಗಳ ನಾನಾ ರೂಪಗಳಲ್ಲಿ ತೆರೆದುಕೊಳ್ಳುತ್ತಲೇ ಇರುತ್ತಾಳೆ. ಅದಕ್ಕೆ ಮಗಳು ಕವಯತ್ರಿಗೆ ಅವ್ವನಂತೆ ಗೋಚರಿಸುತ್ತಾ, ಎಲ್ಲಾ ಅಪ್ಪಂದಿರಿಗೂ ಕುಡಿ ಬಾಳೆಯಂತ ಮಗಳಿರಬೇಕು ಎಂದು ಮನ ಹಂಬಲಿಸುವುದು.

ರೇಣುಕಾರವರ ತುಂಬಾ ಕಾಡುವ ಕವಿತೆಗಳಲ್ಲಿ ‘ಸುತ್ತು‘ ಕವಿತೆ ಒಂದು. ಕಾಲ ಬೆರಳಿಗೆ ಕಚ್ಚುತ್ತದೆಯೆಂದು ತೆಗೆದಿರಿಸಿದ ಕಾಲುಂಗುರವೊಂದು ಅವರಿವರ ಮನವನ್ನು ಕಚ್ಚಲು ಶುರು ಮಾಡಿ ಬಿಡುತ್ತದೆ. ಬದುಕಿನ ಅನೇಕ ಇಂತಹ ನಿದರ್ಶನಗಳಿಗೆ ಕಾಲುಂಗುರವೊಂದು ರೂಪಕದಂತೆ ಗೋಚರಿಸುತ್ತದೆ. ರೇಣುಕಾರ ಕವಿ ಹೃದಯ ಹೇಗೆ ಎಲ್ಲಾ ಸಂದರ್ಭಗಳಲ್ಲಿ ಮಿಡಿಯುತ್ತದೆ ಮತ್ತು ಸೂಚ್ಯವಾಗಿ ಕೆಲವೊಂದು ಸಂಗತಿಗಳಿಗೆ ಮನಸು ಪ್ರತಿರೋದಿಸುತ್ತದೆ ಎಂಬುದನ್ನು ‘ಮಕ್ಕಳ ದಿನದಂದೇ ಕಂಡ ಮುಖ’ ನಿರೂಪಿಸುತ್ತದೆ. ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಚೌಕಾಶಿ ಮಾಡದೇ ಕೊಂಡು ಕೊಳ್ಳುವ ನಾವುಗಳು ,ಜಾತ್ರೆಯಲ್ಲಿ ಕಂಡ ಮಗುವೊಂದು ತನ್ನ ಹಸಿವು ಇಂಗಿಸಲು ಮಾರುವ ಅತೀ ಕಡಿಮೆ ಬೆಲೆಯ ಆಟಿಕೆಗೆ ಚೌಕಾಶಿ ಮಾಡಿ ಕ್ವಾಲಿಟಿ ನೆಪ ಹೇಳಿ ಕೊಳ್ಳದೇ ಇರುವುದು, ಇವತ್ತಿನ ಪ್ರಸ್ತುತ ಸಮಾಜದ ಮನೋಭಾವಕ್ಕೆ ಹಿಡಿದ ಕನ್ನಡಿಯಂತಿದೆ. ಈ ಸಂಕಟ,ನೋವು ಸೂಕ್ಷ್ಮ ಮನಸಿಗಷ್ಟೇ ತಾಕಲು ಸಾಧ್ಯ. ಆದುದರಿಂದಲೇ ರೇಣುಕಾರವರಿಗೆ ಅದನ್ನು ಕವಿತೆಯಲ್ಲಿ ಹಿಡಿದಿಡಲು ಸಾಧ್ಯವಾಗಿದೆ.
ಅಂದು ಕೊಳ್ಳುವುದು ಮತ್ತು ಅರಿತುಕೊಳ್ಳುವುದು ಎರಡು ಬೇರೆಯೇ ಅನ್ನುತ್ತಾ, ಒಂದು ಅದೃಶ್ಯ ಪ್ರೀತಿಯ ಹಿಂದೆ ಕೇಳಿಕೊಳ್ಳುವ ಪ್ರಶ್ನೆಗಳಿಗಳಿಗೆ ಉತ್ತರವಿರುವುದಿಲ್ಲ ಅನ್ನುವ ಪ್ರಶ್ನೆಯೊಂದನ್ನ ಓದುಗನೊಳಗೂ ಹುಟ್ಟು ಹಾಕುತ್ತಾರೆ. ಹಾಗೇ ವಯಸ್ಸಾದಂತೆ ಮಾಗಿಕೊಳ್ಳುವ ಸಂಬಂಧಗಳ ನೈಜ್ಯ ಚಿತ್ರಣವನ್ನ ‘ಅಪ್ಪ’ ಕವಿತೆಯಲ್ಲಿ ಹೌದಲ್ವಾ! ಅಂತ ಬೆರಗುಗೊಳ್ಳುವಂತೆ ತೆರೆದಿಡುತ್ತಾರೆ.

ಕೆಲವೊಂದು ಸಂಗತಿಗಳನ್ನು ವರ್ಣಿಸಲು ಪದಗಳೆ ಇಲ್ಲದಿರುವುದು, ಇದ್ದರೂ ಅದನ್ನು ಅನಾವರಣ ಗೊಳಿಸಲು ಸಾಧ್ಯವಾಗದೇ ಇರುವುದರ ತೊಳಲಾಟ ಬಹುಷ; ಅವರಂತೆ ಎಲ್ಲರದ್ದು. ಆದರೂ ಎಲ್ಲಾ ಹಮ್ಮು ತೊರೆದು ಕವಿತೆಯೊಡನೆ ಮಾತಿಗೆ ಕೂರುವ ಸುಖವೇ ಬೇರೆ ಅನ್ನುವಂತದ್ದು ಅವರ ಎಲ್ಲಾ ಕವಿತೆಗಳ ಒಟ್ಟು ಆಶಯ. ವಿನಾಕಾರಣ ಗೊತ್ತಿಲ್ಲದೇ ತುಟಿಯಂಚಿನಲ್ಲಿ ನಗುವೊಂದು ಸುಳಿದು ಸುಖಾ ಸುಮ್ಮನೆ ಇಷ್ಟವಾಗುವ ಕವಿತೆ ‘ಮೀನು ಫ್ರೈ’.

ಬಹುಷ; ಎಲ್ಲಾ ಕವಯತ್ರಿಯರ ಕತೆಯೇ ಇಷ್ಟು, ಅಕ್ಷರದ ಮೋಹಕ್ಕೆ ಸಿಲುಕಿ ಹಾಕಿಕೊಂಡರೆ ಮುಗಿಯಿತು. ಅದು ಗುಂಗಿ ಹುಳುವಿನಂತೆ ನಮ್ಮನ್ನು ಕೊರೆಯುತ್ತಲೇ ಇರುತ್ತದೆ. ಪ್ರತೀ ಕೆಲಸಗಳನ್ನು ಕೈಗೆತ್ತಿಕೊಂಡಾಗಾಲೆಲ್ಲಾ ಕಾಯುತ್ತಾ ಕುಳಿತ ಓದಲೇ ಬೇಕಾದ ಪುಸ್ತಕಗಳ ಕನವರಿಕೆ, ಹಾಗೂ ಅಕ್ಷರಗಳಾಗಲು ಹವಣಿಸುವ ಎದೆಯ ಭಾವಗಳು. ಎಷ್ಟೇ ಅವಸರಿಸಿದರೂ ಕೆಲಸ ಮುಗಿಯುವುದೂ ಇಲ್ಲ; ಚಡಪಡಿಕೆ ತಪ್ಪುವುದೂ ಇಲ್ಲ.

ಕವಿತೆಯ ಹುಚ್ಚು ಹತ್ತಿಕೊಂಡರೆ ಮುಗಿಯಿತು, ಬದುಕಿನ ಎಲ್ಲಾ ಸಂಗತಿಯೂ ಕವಿತೆಗೆ ವಸ್ತುವೇ. ಆ ಕಾರಣದಿಂದಲೇ ಲೋಭಾನದ ಘಾಟು, ಕಾವಲಿಯ ಮೇಲೆ ತೇಲುವ ಮೀನು, ರೇಣೂಕಾರವರಿಗೆ ಕಾಡುವ ಭಾವಗಳಾದದ್ದು. ಪಚ್ಚೆ ಕದಿರಿನ ಗಿಡದಲ್ಲಿ ಬಿಟ್ಟ ಎರಡೇ ಎರಡು ಎಲೆ ಕವಿತೆಯಾಗಿ ರೂಪು ತಳೆದದ್ದು.

ಕಾಲ ಕಾಯದೇ ಇದ್ದರೂ, ಬದಲಾದ ಕಾಲಕ್ಕೆ ಒಮ್ಮಿಂದೊಮ್ಮೆಗೇ ಪೂರಾ ತೆರೆದುಕೊಳ್ಳಲು ಸಾಧ್ಯವಾಗದೇ ಇದ್ದರೂ ಒಳಗೊಳಗೆ ತೆರೆದುಕೊಳ್ಳಲು ಇಚ್ಚಿಸುವ ಮನದ ಭಾವಗಳನ್ನು ಕವಿತೆಯೊಂದಿಗಷ್ಟೆ ತೆರೆದಿಡಲು ಸಾಧ್ಯ.
ರೇಣುಕಾರವರ ಕಾವ್ಯಯಾನ ನಿರಂತರವಾಗಿರಲಿ. ಮತ್ತೊಮ್ಮೆ ಮೀನು ಪೇಟೆಯ ತಿರುವಿನೊಳಗೋ, ಅವರು ಹಚ್ಚಿಕೊಂಡ ಸಮುದ್ರದಂಚಿನ ಕಿನಾರೆಯಲ್ಲೋ ಮತ್ತಷ್ಟು ತಾಜಾ ತಾಜ ಕವಿತೆಯೊಂದಿಗೆ ನಾವುಗಳು ಮುಖಾಮುಖಿಯಾಗುವಂತಾಗಲಿ.

-ಸ್ಮಿತಾ ಅಮೃತರಾಜ್. ಸಂಪಾಜೆ.

5 Responses

  1. Shankar says:

    ತುಂಬಾ ಸೊಗಸಾದ ಭಾವನೆಗಳನ್ನು ಒಬ್ಬ ಕವಯಿತ್ರಿ ಇನ್ನೊಬ್ಬ ಕವಯಿತ್ರಿ ಬಗ್ಗೆ ಹೇಳಿದ್ದು. ಕವಿತೆಯ ಹಾಗೆಯೇ ಈ ಪರಿಚಯಾತ್ಮಕ ಲೇಖನವಾಗಿದೆ. ಅಭಿನಂದನೆ ಸ್ಮಿತಾರವರಿಗೆ.

  2. Karthik Palangaya says:

    Dear Smithakka,
    Nice written.well noted.

  3. ಕುತ್ಯಾಳ ನಾಗಪ್ಪ ಗೌಡ(ಕಿರಣ) says:

    ಸಮುದ್ರ ಕಾಡದ ಕವಿಗಳಿಲ್ಲ.ಅಳುವ ಕಡಲೊಳು ತೇಲಿ ಬರುತಲಿದೆ-ಅಡಿಗರ ಜನಪ್ರಿಯ ಕವಿತೆ .ಶೇಕ್ಸಪಿಯರನ ನಾಟಕ, ಟಿಮೊನ್ ಆಫ್ ಎಥೆನ್ಸ್ ನಲ್ಲಿ ಟಿಮೊನ್ ಉದಾರಿ ಶ್ರೀಮಂತ.ದಾನ ಮಾಡಿ ದೀನನಾದ. ಸಹಾಯ ಪಡೆದವರು ಯಾರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಸಮುದ್ರಕ್ಕೆ ಹಾರಿ ಪ್ರಾಣ ತ್ಯಾಗ ಮಾಡಿದ. ಸಮುದ್ರ ಸೇರಿದ ಟಿಮೊನ್ ಈಗಲೂ ಕೃತಘ್ನರನ್ನು ನೋಡಿ ಕೋಪದಿಂದ ಅಳುತ್ತಿದ್ದಾನೆ !

  4. ಆನಂದ್ ಋಗ್ವೇದಿ says:

    “ಕವಿಗೆ ಕವಿ ಮುನಿವಂ'” ಎಂಬ ರೂಢಿಗತ ಮಾತನ್ನು ನಿರಾಕರಿಸುವಂತಹ ಕವಯತ್ರಿ ಸ್ಮಿತಾರವರ ನಿರ್ವಾಜ್ಯ ಕಾವ್ಯ ಪ್ರೀತಿಯ ಬರಹ ಅವರನ್ನು ಎತ್ತರಕ್ಕೇರಿಸಿದೆ.ರೇಣುಕಾ ರಮಾನಂದರ ಕವಿತೆಗಳನ್ನು ಮತ್ತಷ್ಟು ಆಪ್ತವಾಗಿಸಿದೆ.

  5. ರೇಣುಕಾ ರಮಾನಂದ says:

    ಸ್ಮಿತಾ ನಿಮ್ಮ ಪ್ರೀತಿಗೆ ಏನು ಹೇಳಲಿ.ಸ್ವತಃ ಅತ್ಯುತ್ತಮ ಕವಯತ್ರಿಯಾಗಿದ್ದುಕೊಂಡು ಕೂಡ ನನ್ನ ಕವಿತಾ ಪುಸ್ತಕವನ್ನು ಓದಿ ಅದರ ಕುರಿತಾಗಿ ಚಂದದ ಸಾಲುಗಳಲ್ಲಿ ನಿಮ್ಮ ಪ್ರೀತಿಯನ್ನು ಧಾರೆಯೆರೆದಿರುವಿರಿ..ನಿಮ್ಮ ಮುಗ್ಧ ಮನಸ್ಸಿಗೂ ಈ ಚಂದದ ಲೇಖನಕ್ಕೂ ಶರಣೆನ್ನುವೆ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: