ಕಾಜಾಣಗಳ ಹೊಂಚು.. ಮಿಂಚುಳ್ಳಿಗಳ ಸಂಚು

Share Button
 

ಬೆಳ್ಳಂಬೆಳಿಗ್ಗೆ ಎದ್ದಿದ್ದೆ .ರೆಡಿಯಾಗಿ ಕಾಫಿ ಹೀರಿ ಹೊರಟಿದ್ದು ಸಮೀಪದಲ್ಲಿದ್ದ ರಾಗಿ ಹೊಲಕ್ಕೆ. ಕಾಜಾಣಗಳ ಗುಂಪೊಂದು ಕಂಬದ ಮುಳ್ಳುತಂತಿಯ ಮೇಲೆ ಕುಳಿತು ಬೇಟೆಗಾಗಿ ಹೊಂಚು ಹಾಕುತ್ತಿತ್ತು. ಒಂದಂತೂ ಚಂಗನೆ ಹಾರಿ ಚಿಟ್ಟೆಯನ್ನು ಹಿಡಿದೇ ಬಿಟ್ಟಿತು. ಸ್ಚಲ್ಪ ದೂರದಲ್ಲಿ ಕೂತು ನುಂಗಿದ ನಂತರ ಗುಂಪಿನ ಬಳಿ ಬಂದಿದ್ದೆ ತಡ ಕಿಚ ಪಿಚ ಕಿಚ ಪಿಚ ಗಲಾಟೆ, ಅಲ್ಲೆ ಅವುಗಳ ಮಧ್ಯೆಯೇ ಏನೋ ಕಿರಿ ಕಿರಿ, ವೈಮನಸ್ಸೆನೋ, ಒಂದರನೊಂದು ಬೈದಂತೆ, ಏನೋ ಅದರ ಬಾಷೆಯಲ್ಲಿ ಸಾಕಷ್ಟು ವಾದವಿವಾದಗಳು, ಅದರ ಮಧ್ಯೆ ನನ್ನಿರುವಿಕೆಗೆ ಕ್ಯಾರೆ ಎನ್ನುವಷ್ಟು ಗಮನವೂ ಇಲ್ಲ (ಇಲ್ಲವಿದ್ದಲ್ಲಿ ಮನುಷ್ಯರನ್ನು ಕಂಡಂತೆ ತುಸು ದೂರ ಹಾರಿಹೋಗುವ ಹಕ್ಕಿ ಅದು). ನನಗಂತು ಅಲ್ಲೇನೋ ಅವುಗಳ ಮಧ್ಯೆ ಬಿನ್ನಾಭಿಪ್ರಾಯವಿದೆ ಅಷ್ಟೆಂಬುದು ಮಾತ್ರ ಅರ್ಥವಾಗುತ್ತಿದೆ ಹೊರತು ಅವು ಏನು ಮಾತಾಡುತ್ತಿವೆ ತಿಳಿಯುತ್ತಿಲ್ಲ, ತಿಳಿಯಲು ಆಸೆ, ಕಾತುರ ಆದರೆ ಸಾಧ್ಯವಾಗುತ್ತಿಲ್ಲ.

ಸ್ವಲ್ಪ ಸಮಯದ ನಂತರ ಆ ಗುಂಪಿನಲ್ಲಿದ್ದ ಹಕ್ಕಿಗಳು ತಮ್ಮಪಾಡಿಗೆ ಏನೋ ಒಂದು ಒಪ್ಪಂದ ಮಾಡಿಕೊಂಡ ಹಾಗೆ ಸುಮ್ಮನಾಗಿ ವಿಭಾಗವಾಗಿ ಬೇರೆ ಬೇರೆ ಕಂಬಗಳ ಮೇಲೆ ಬೇಟೆಗಾಗಿ ಕುಳಿತು ಸುಮ್ಮನಾದವು. ಹಾಗೆ ಆ ಗುಂಪಿನಿಂದ ಹಾರಿದ ಒಂದು ಹಕ್ಕಿಯನ್ನು ಹಿಂಬಾಲಿಸ ಹೋದದ್ದೇ ಆ ಹೊಲಕ್ಕೆ ಅಂಟಿಕೊಂಡಿದ್ದ ಸರ್ವೇತೋಪಿನತ್ತ ! ಆ ಪ್ರದೇಶಕ್ಕೆ ಬೇರೆ ಯಾವ ಹಕ್ಕಿ ಹೋಗಬೇಕಾದರೂ ಎರಡೆರಡು ಗುಂಡಿಗೆ ಬೇಕು, ಕಾರಣ ಆಜಾಗ ಗಿಡುಗಗಳ ಅಡ್ಡೆ! ಹೆಚ್ಚುಕಡಿಮೆ ಯಾಮಾರಿದರೆ ಯಾವುದಾದರೊಂದರ ಬೆಳಗ್ಗಿನ ತಿಂಡಿಯಾಗಬೇಕಾಗುತ್ತದೆ! ಗಿಡುಗಗಳಿಗೇ ಚಳ್ಳೆಹಣ್ಣು ತಿನ್ನಿಸುವ ಕಾಗೆ, ಕಾಜಾಣಗಳಿಗೆ ಮಾತ್ರ ಈ ರೀತಿ ದುಸ್ಸಾಹಸ ಯೋಗ್ಯ…. ನಾ ಹೋದದ್ದೆ ಕೆಳಗೆ ಸಣ್ಣಕಂಬದ ಮೇಲೆ ಕಾಜಾಣ, ಮೇಲೆ ಮರದ ಟೊಂಗೆಯಲ್ಲಿ ಭಾರಿಗಾತ್ರದ ಚುಕ್ಕೆ ಗಿಡುಗ! ಆ ದಿನ ಸಾರ್ಥಕ…. ಸರಿ ಒಳ್ಳೆಯ ವೀಕ್ಷಣೆಯಾಯಿತೆಂದು ಹಿಂದಿರುಗಿ ಬರುವಾಗ ದಾರಿಯಲ್ಲಿ ಮಿಂಚುಳ್ಳಿ – ಸಂಧರ್ಭ ತಕ್ಷಣ ನೆನಪಿಸಿದ್ದು ಗೆಜ್ಜೆನಾದ ಸಿನೆಮಾದ ಹಾಡು –

“ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ಕಾಜಾಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡಿ ಇದೆತರಾ
ಇದ್ದರೆಷ್ಟು ಚೆನ್ನ ಚೆನ್ನ
ಏಳಿ ಏಳಿ ಎಲ್ಲ
ಈ ಭೂಮಿಗಾಯ್ತು ಮೆಲ್ಲ
ಆ ದಿನಾಕರನ ಉದಯ
ದಿವಾಕರನ ಉದಯ” ………..

ಅಲ್ಲೊಂದು ಎರಡು ಗಂಟೆ ಗೊತ್ತಿಲ್ಲದೆ ಕಳೆದುಹೋಯಿತು ಮಿಂಚುಳ್ಳಿಯ ಚಟುವಟಿಕೆ ನೋಡುತ್ತಾ…… ಮುಂದೆ  ಮಿಂಚುಳ್ಳಿಯಿಂದ ಸ್ವಾರಸ್ಯ ಕಾದಿತ್ತು ……ಆ ಸಮಯದಲ್ಲಿ ಮಿಂಚುಳ್ಳಿ ಹಕ್ಕಿಯ ಮೊದಲ ಆಧ್ಯತೆ ಬೇಟೆಯಾಗಿತ್ತು, ಎರಡು ತನ್ನ ಸುರಕ್ಷತೆ ಹಾಗು ಮೂರನೆಯದು ತನ್ನ ಪ್ರಾಂತ್ಯದಲ್ಲಿ ಬೇರೆ ಮಿಂಚುಳ್ಳಿ ಬಾರದ ಹಾಗೆ ಎಚ್ಚರವಿರುವುದು! ಎರಡುಗಂಟೆಗಳಲ್ಲಿ ಕೇವಲ ಎರಡೇ ಜಿಗಿತ ಹಿಡಿದಿದ್ದು ಎರಡು ಹುಳು ಮಾತ್ರ – ಶೆಖಡ 100% ಯಶಸ್ವಿ ಪ್ರಯತ್ನ!

ಅದನ್ನು ಗಮನಿಸಿದಾಗ ನೋಡಿದ್ದು, ಹಕ್ಕಿಯಿಂದ ಕಲಿತದ್ದು-
  1. ಅಗಾಧವಾದ ತಾಳ್ಮೆ, ಏಕಾಗ್ರತೆ ಹಾಗು ತನ್ನಕೆಲಸದ ಮೇಲೆ ತೀವ್ರನಿಗ (ಫೊಕಸ್),
  2. ಪಟ್ಟುಹಿಡಿದು ಕೂತಲ್ಲೇ ಕುಳಿತು ತನ್ನ ಕಾರ್ಯಸಾಧನೆ (ಪರ್ಸಿಸ್ಟನ್ಸ್) – ಬೇಟೆಯಾಡುವುದಕ್ಕೆ ಎಷ್ಟು ಕೌಶಲ್ಯವಿರುತ್ತದೋ, ಬೇಟೆಗೆ ತಪ್ಪಿಸಿಕೊಳ್ಳಲು ಅದಕ್ಕಿಂತ ಹೆಚ್ಚು ಮಾರ್ಗಗಳಿರುತ್ತದೆ – ಇವಕ್ಕೆ ಹೊಟ್ಟೆಪಾಡಾದರೆ ಅದಕ್ಕೆ ಸಾವು ಬದುಕಿನ ಪ್ರಶ್ನೆ.
  3. ಪ್ರಕೃತಿಯಲ್ಲಿ ದುರ್ಬಲತೆಗೆ ಜಾಗವಿಲ್ಲ, ಅಲ್ಲಿ ನೂರಾರು ಹುಳುಗಳಿದ್ದು ಯಾವುದೋ ದುರ್ಬಲ ಹುಳ ಮಿಂಚುಳ್ಳಿಗೆ ಆಹಾರವಾಗಿ ನಶಿಸಿಹೋಗಿತ್ತು.

ಈ ಮಧ್ಯೆ ಇನ್ನೊಂದು ಮಿಂಚುಳ್ಳಿ ಹತ್ತಿರ ಬಂದೇಬಿಟ್ಟಿತು. ತಾನು ಪ್ರಬಲವಾಗಿದ್ದರಿಂದ ಅದರ ಪ್ರಾಂತ್ಯ ಪ್ರವೇಶಿಸಿದ ಇನ್ನೊಂದು ಮಿಂಚುಳ್ಳಿಯನ್ನು ಓಡಿಸುವಲ್ಲಿ ಯಶಸ್ವಿಯಾಗಿ ತನ್ನ ಜಾಗವನ್ನು ರಕ್ಷಿಸಿಕೊಂಡಿತು, ಇಲ್ಲವಾದಲ್ಲಿ ತನ್ನ ಜಾಗ ತನ್ನ ಜೀವನೋಪಾಯವನ್ನು ಇನ್ನೊಂದು ಹಕ್ಕಿ ಲಪಟಾಯಿಸಿಬಿಡುತ್ತಿತ್ತು!

ಈ ನಿಯಮ ನಮಗೂ ಅನ್ವಯ, ಕಾರ್ಯಸಾಧನೆಗಾಗಿ ಅಗಾಧವಾದ ತಾಳ್ಮೆ, ಏಕಾಗ್ರತೆ ಹಾಗು ಹಿಡಿದ ಕೆಲಸ ಮುಗಿಸುವವರೆಗೂ ಏನೇ ಅಡೆತಡೆಗಳು ಬಂದರೂ ಮಧ್ಯೆ ಬಿಡದೆ ನಿರಂತರ ಪರಿಶ್ರಮ, ಎಲ್ಲದಕ್ಕಿಂತ ಹೆಚ್ಚು ಮಾನಸಿಕ ಪ್ರಾಬಲ್ಯತೆಯ ಅಗತ್ಯವಿದೆ!

 – ಸ್ವರೂಪ್ ಭಾರದ್ವಾಜ್

2 Responses

  1. ಹಕ್ಕಿ-ಪಿಕ್ಕಿಗಳನ್ನು ನೋಡಿ ನಮಗೂ ಅಂಥಾ ಸ್ವಾತಂತ್ರ್ಯದ ಜೀವನ ಬೇಕಿತ್ತು ಎಂದುಕೊಳ್ಳುವ ಅವುಗಳ ಜೀವನದ ಪಾಡು ತಿಳಿಯುವುದೇ ಇಲ್ಲವಲ್ಲ! ತಮ್ಮ ಪಕ್ಷಿವೀಕ್ಷಣೆಯ ಸವಿಯನ್ನೂ, ಅದರೊಂದಿಗೆ ನಾವೂ ಅಳವಡಿಸಿಕೊಳ್ಳಬಹುದಾದ ನೀತಿಗಳನ್ನೂ ಸೊಗಸಾಗಿ ನಿರೂಪಿಸಿದ್ದೀರಿ. ನೆನಪಿನಲ್ಲುಳಿಯುವ, ಜೀವನಪ್ರೀತಿಯನ್ನುಣಿಸುವ, ಧನಾತ್ಮಕ ಲೇಖನ. ಧನ್ಯವಾದಗಳು.

  2. Pallavi Bhat says:

    ನಮ್ಮದು ಜೀವನಕ್ಕಾಗಿರುವ ಹೋರಾಟವಾದರೆ ಹಕ್ಕಿಗಳದ್ದು ಜೀವಕ್ಕಾಗಿರುವ ಹೋರಾಟ. ಸುಂದರ ವಿಶ್ಲೇಷಣೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: