ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 6
ಹೆಲಿಕಾಫ್ಟರ್ ಏರಿದ ಮೊದಲ ಅನುಭವ
ಕೇದಾರಕ್ಕೆ ಹೋಗುವ ಮಾರ್ಗದಲ್ಲಿ ನಾಲ್ಕಾರು ಕಡೆ ಬೇರೆ ಬೇರೆ ಕಂಪನಿಯ ಹೆಲಿಪ್ಯಾಡ್‌ಗಳಿವೆ. ನಾರಾಯಣಕಟ್ಟ ಎಂಬ ಊರಿನಲ್ಲಿ ಆರ್ಯನ್ ಎಂಬ ಕಂಪನಿಯ ಹೆಲಿಪ್ಯಾಡ್ ಇರುವ ಸ್ಥಳದಲ್ಲಿ ನಮ್ಮ ಬಸ್ ನಿಲ್ಲಿಸಿದರು ಮಂಗಾರಾಮ. ಅಲ್ಲಿ ಎರಡು ಹೆಲಿಪ್ಯಾಡ್ ಇದೆ. ಅವರಿಗೆ ಅಲ್ಲಿ ಕಮಿಶನ್ ಇರಬೇಕು. ೧೧.೩೫ಕ್ಕೆ ಅಲ್ಲಿ ತಲಪಿದೆವು. ಅಲ್ಲಿ ನಮ್ಮ ತೂಕ ನೋಡಿ ಬರೆದುಕೊಂಡು, ರೂ. ೩೫೦೦ ಕೊಟ್ಟು ಟಿಕೆಟ್ ಪಡೆದೆವು. ನಮ್ಮ ಲಗೇಜಿನ ತೂಕ ೨ ಕಿಲೋಗಿಂತ ಜಾಸ್ತಿ ಇರಬಾರದಂತೆ. ಕೇದಾರಕ್ಕೆ ಕೊಂಡೋಗಲು ಹಾಕಿಟ್ಟಿದ್ದ ಒಂದೊಂದೇ ವಸ್ತುಗಳು ಚೀಲದಿಂದ ವಾಪಾಸು ಬಸ್ ಸೇರಿತು. ನಮ್ಮ ಚೀಲ ೨ ಕಿಲೋಗಿಂತ ಜಾಸ್ತಿ ತೂಕವಿತ್ತು. ತೀರ ಅವಶ್ಯವಾದ ಸ್ವೆಟರ್, ಟೋಪಿ, ಒಣಹಣ್ಣು ಬಿಟ್ಟು ಬೇರೇನೂ ಒಯ್ಯಲಿಲ್ಲ. ಒಂದೊಂದು ಕಂಪನಿಯಲ್ಲೂ ಒಂದು ಟಿಕೆಟಿಗೆ ಬೇರೆ ಬೇರೆ ದರಗಳಿವೆಯಂತೆ. ಅಲ್ಲಿ ಅದಾಗಲೆ ಸುಮಾರು ಮಂದಿ ಕಾಯುತ್ತಿದ್ದರು. ಹವಾಮಾನ ಚೆನ್ನಾಗಿದ್ದರೆ ಮಾತ್ರ ಹೆಲಿಕಾಫ್ಟರ್ ಹಾರುತ್ತಿತ್ತು. ೧೨ ಗಂಟೆಯಿಂದ ಸಂಜೆ ನಾಲ್ಕರ ತನಕ ಕಾದೆವು. ಸಮಯ ಹೋಗದೆ ಕೆಲವರು ಕೂತಲ್ಲೇ ತೂಕಡಿಸಿದರು. ನಾವು ಕೆಲವರು ಹೊಟ್ಟೆಗೆ ಏನಾದರೂ ಹಾಕೋಣ ಎಂದು ಕೆಳಗೆ ಇರುವ ಏಕೈಕ ಹೊಟೇಲ್ ಜೋಪಡಿಯಲ್ಲಿ ಮ್ಯಾಗಿ ತಿಂದೆವು. ಅದಾದರೆ ಬೇಗ ಮಾಡಿ ಆಗುತ್ತದೆ. ಎಲ್ಲಾದರೂ ಹೆಲಿಕಾಫ್ಟರ್ ಹತ್ತಲು ಕರೆ ಬಂದರೆ ಎಂದು ಮ್ಯಾಗಿನೂಡಲ್ಸ್ ತೆಗೆದುಕೊಂಡದ್ದು. ಮಕ್ಕಳಿಗೆ ಅದನ್ನು ತಿನ್ನಬೇಡಿ ಎಂದು ಹೇಳಿ ನಾವೀಗ ಇದನ್ನು ತಿನ್ನುತ್ತಿದ್ದೇವೆ ಎಂದು ಹೇಮಮಾಲಾ ಹೇಳಿಕೊಂಡರು.
ಅಂತೂ ನಾಲ್ಕಕ್ಕೆ ನಮಗೆ ಕರೆ ಬಂತು. ನಾವು ಆರು ಮಂದಿ ಮೊದಲು ಹೋದೆವು. ನಮಗೆ ಬಾಕಿದ್ದವರು ಎಲ್ಲ ಶುಭ ಹಾರೈಸಿದರು. ಹೆಲಿಪ್ಯಾಡ್ ಸ್ಥಳಕ್ಕೆ ಹೋಗಿ ಕೂತಾಗ, ಇಲ್ಲ, ಹವಾಮಾನ ಸರಿಯಾಗಿಲ್ಲ. ಕೆಳಗೆ ಹೋಗಿ ಕಾಯಿರಿ ಎಂದರು! ಅಂತೂ ಹವಾಮಾನ ತಿಳಿಯಾಗಿ ನಾವೆಲ್ಲರೂ ಹೆಲಿಕಾಫ್ಟರ್ ಏರಿದೆವು. ನಾನು ಹೆಕಾಫ್ಟರ್ ಏರಿದ್ದು ಇದೇ ಪ್ರಥಮ ಬಾರಿ. ಕೆಳಗೆ ಬೆಟ್ಟ ಗುಡ್ಡ, ಕಾಲು ದಾರಿ ಎಲ್ಲ ಚೆನ್ನಾಗಿ ಕಂಡಿತು. ವೀಡಿಯೋ ಮಾಡಿದೆ. ಸವಿತ ಪೈಲೆಟ್ ಪಕ್ಕ ಮಿಸುಕಾಡದೆ ಕೂತಳು. ಫೋಟೋ ತೆಗೆಯಬಾರದೆಂದು ಹತ್ತುವ ಮೊದಲು ಅವಳಿಗೆ ಹೇಳಿದ್ದರಂತೆ. ಕೇವಲ ಏಳುನಿಮಿಷದಲ್ಲಿ ಕೇದಾರ ತಲಪಿದೆವು. ಒಂದು ಸೆಕೆಂಡಿನಲ್ಲಿ ಹತ್ತಬೇಕು, ಅಷ್ಟೇ ಸಮಯದಲ್ಲಿ ಇಳಿಯಬೇಕು. ಇಳಿದು ಕೂಡಲೇ ಆಚೆ ಬರಬೇಕು. ಅದರ ಪಂಕದ ಗಾಳಿಗೆ ಸಣಕಲಾಗಿದ್ದರೆ ಹಾರಿಹೋದೇವು. ಅಷ್ಟು ಗಾಳಿ. ಪುಣ್ಯಕ್ಕೆ ಹವಾಮಾನ ಸರಿಯಾಗಿದ್ದು ನಮ್ಮ ತಂಡದವರೆಲ್ಲರೂ ಕೇದಾರ ತಲಪಿದೆವು.ಹೆಲಿಕಾಫ್ಟರ್ ಸುಖ ಅುಭವಿಸುವ ಮೊದಲೆ ಕೆಳಗೆ ಇಳಿದಿದ್ದೆವು! ಇಳಿದು ಬಂದಾಗ ಚಳಿ ಆವರಿಸಿತು. ಬೆಚ್ಚಗೆ ತಲೆಗೆ ಟೊಪ್ಪಿ ಏರಿಸಿದೆವು. ಸ್ವೆಟರ್ ಹಾಕಿಕೊಂಡೆವು.
ಕೇದಾರನಾಥನ ದರ್ಶನ
ಹೆಲಿಪ್ಯಾಡಿನಿಂದ ದೇವಾಲಯಕ್ಕೆ ಹೋಗಲು ೫೦೦ಮೀಟರು ನಡೆಯಬೇಕು. ೨೦೦೧೩ರಲ್ಲಿ ಮೇಘಸ್ಫೋಟ ಪ್ರವಾಹದಿಂದಾಗಿ ಕೇದಾರ ಕೊಚ್ಚಿ ಹೋಗಿತ್ತು. ಅದರ ಅವಶೇಷಗಳಾಗಿ ಅರ್ಧ ಮುರಿದ ಮನೆಗಳು, ಅಲ್ಲಲ್ಲಿ ಬಂಡೆಗಲ್ಲುಗಳು ಕಾಣುತ್ತವೆ. ದೇವಾಲಯದ ಎದುರು ಭಾಗದಲ್ಲಿ ಸುಮಾರು ಕಟ್ಟಡಗಳು ಇದ್ದುವಂತೆ. ಈಗ ಅಲ್ಲಿ ಕಟ್ಟಡ ಕಟ್ಟಲು ಅನುಮತಿ ಕೊಡುವುದಿಲ್ಲವಂತೆ. ದೇವಾಲಯದ ಸುತ್ತ ಪರ್ವತ ಸಾಲುಗಳ ಬಳಿ ಪ್ರವಾಹ ಹರಿದು ಬರದಂತೆ? ತಡೆಗೋಡೆ ಕಟ್ಟುವ ಕೆಲಸ ನಡೆಯುತ್ತಲಿತ್ತು. ನಾವು ದೇವಾಲಯದ ಬಳಿ ನಿಂತು ಭಾವಚಿತ್ರ ತೆಗೆಸಿಕೊಂಡೆವು. ಸಂಜೆ ಐದು ಗಂಟೆಗೆ ಒಳಗೆ ಹೋಗಿ ದೇವರ ದರ್ಶನ ಮಾಡಿದೆವು. ಹತ್ತಿರವೇ ಇರುವ ವಸತಿಗೃಹದಲ್ಲಿ ತಂಗಿದೆವು. ಕೋಣೆಯಲ್ಲಿ ಸಂಜೆ ಏಳರವರೆಗೆ ಭಜನೆ, ಸ್ತೋತ್ರಪಠಣ, ಭಕ್ತಿಗೀತೆ ಎಲ್ಲ ಹಾಡಿದರು. ತಂಗಿ ಸವಿತ ಉತ್ಸಾಹದಿಂದಲೇ ಹಾಡಿದಳು. ರಾತ್ರಿ ಆರತಿ ನೋಡಿದೆವು. ಒಂದು ಗಂಟೆ ದೇವರಿಗೆ ಆರತಿ ನಡೆಯುತ್ತದೆ. ಅರ್ಚಕರು ವಿಶಿಷ್ಟವಾಗಿ ಮಣಿ ಆಡಿಸುತ್ತ, ಆರತಿ ಎತ್ತುತ್ತಾರೆ. ದೇವಾಲಯದ ಹೊರಗೆ ನಂದಿಗೆ, ದೂರದಲ್ಲಿ ಕಾಣುವ ಭೈರವಬೆಟ್ಟದಲ್ಲಿರುವ ಭೈರವನಿಗೆ ಇಲ್ಲಿಂದಲೇ ಆ ದಿಕ್ಕಿನತ್ತ ಕೈ ಎತ್ತಿ ಆರತಿ ಮಾಡುತ್ತಾರೆ. ಅಲ್ಲಿಯ ಪ್ರಧಾನ ಅರ್ಚಕರ ಹೆಸರು ಶಂಕರಲಿಂಗ ಪುರೋಹಿತ. ಕರ್ನಾಟಕದವರು. ಜಗಮಗ ಬಟ್ಟೆ ಧರಿಸಿ ನೋಡಲು ಸ್ವಲ್ಪ ರುದ್ರಾವತಾರವಾಗಿಯೇ ಕಾಣುತ್ತಾರೆ. ವಿಠಲರಾಜು ಅವರಿಗೆ ಅರ್ಚಕರ ಪರಿಚಯ ಇದೆ. ಪೂಜೆ ಬಳಿಕ ಅವರ ಮನೆಗೆ ರಾತ್ರಿ ಹೋದೆವು. ಅಲ್ಲಿ ಅವರಿಗೆ ನಮಸ್ಕರಿಸಿದಾಗ ನಮಗೆಲ್ಲ ಒಂದು ರುದ್ರಾಕ್ಷಿ ಇರುವ ಮಾಲೆ ಕೊಟ್ಟರು. ಅವರಿಗೆ ಎಲ್ಲರೂ ಯತಾನುಶಕ್ತಿ ಕಾಣಿಕೆ ಹಾಕಿದರು.
ಕಂಡೆನಾ ಬೃಹತ್ ಬಂಡೆಯಾ
ದೇವಾಲಯದ ಹಿಂಭಾಗಕ್ಕೆ ಬರುವಾಗ ಅನತಿ ದೂರದಲ್ಲೇ ಬೃಹತ್ ಗಾತ್ರದ ಬಂಡೆಗಲ್ಲೊಂದು ಅಡ್ಡವಾಗಿ ಬಿದ್ದಿರುವುದು ಕಾಣುತ್ತದೆ. ಪರ್ವತದಿಂದ ಉರುಳುರುಳಿ ಬಿದ್ದ ಬಂಡೆಯದು. ಅಂಥ ಬೃಹತ್ ಗಾತ್ರದ ಬಂಡೆ ಉರುಳಿ ಬರಬೇಕಾದರೆ ಎಂಥ ಪ್ರವಾಹ ಬಂದಿರಬಹುದು ಎಂದು ಆ ಬಂಡೆ ಕಣ್ಣಾರೆ ನೋಡಿದರೂ ಊಹಿಸಲೂ ಸಾಧ್ಯವಾಗುವುದಿಲ್ಲ. ಆ ಕಲ್ಲು ದೇವಾಲಯವನ್ನು ಉಳಿಸಿದ್ದು ನಿಜಕ್ಕೂ ಅದ್ಭುತ ಪವಾಡವೇ ಸರಿ. ಈ ಪರಮಸತ್ಯವನ್ನು ಇಸವಿ ೨೦೧೩ರಲ್ಲಿ ಪತ್ರಿಕೆಗಳಲ್ಲಿ ಓದಿದ್ದನ್ನು ಇಲ್ಲಿ ಕಣ್ಣಾರೆ ಕಂಡೆವು. ಕಂಡು ಮೂಕವಿಸ್ಮಿತರಾದೆವು.
ಕೇದಾರನಾಥದ ಬಗ್ಗೆ ಪುರಾಣಕಥೆ
ಮಹಾಭಾರತದ ಕುರುಕ್ಷೇತ್ರದಲ್ಲಿ ಕೌರವರನ್ನು (ಬ್ರಾಹ್ಮಣರನ್ನು) ಹತ್ಯೆ ಮಾಡಿದ ಪಾಪಕ್ಕೆ ಪಾಂಡವರು ಗುರಿಯಾದರು. ಆ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮುಂದಾದರು. ಅದಕ್ಕೆ ಶಿವನನ್ನು ಸಂಪ್ರೀತಗೊಳಿಸಿ, ಆತನ ಆಶಿರ್ವಾದ ಪಡೆಯಲು ನಿಶ್ಚಯಿಸಿದರು. ಆದರೆ ಪಾಂಡವರ ಘನಘೋರ ಪಾತಕ ಕೃತ್ಯದ ವಿರುದ್ಧ ಶಿವ ಕೋಪಗೊಂಡಿದ್ದ. ಕೋಪೋದ್ರಿಕ್ತ ಶಿವ ಪಾಂಡವರತ್ತ ಕೃಪಾಕಟಾಕ್ಷ ಬೀರಲಿಲ್ಲ.
ಶಿವನನ್ನು ಒಲಿಸಿಕೊಳ್ಳಳು ಪಾಂಡವರು ಶಿವನ ಸಾಮ್ರಾಜ್ಯವಾದ ಹಿಮಾಲಯಕ್ಕೇ ತೆರಳುತ್ತಾರೆ. ಆದರೆ ಪಾಂಡವರಿಂದ ವಿಮುಖಗೊಂಡಿದ್ದ ಶಿವ ಕೇದಾರದಲ್ಲಿ ಕಣ್ಮರೆಯಾಗುತ್ತಾನೆ. ಆದರೆ ಶಿವನ ಆಶೀರ್ವಾದ ಪಡೆಯಲೇಬೇಕು ಎಂದು ದೃಢನಿಶ್ಚಯ ಮಾಡಿದ್ದ ಪಾಂಡವರು ಶಿವನ ಸುಳಿವರಿತು ಕೇದಾರಕ್ಕೆ ಬರುತ್ತಾರೆ.
ಕೇದಾರ ಜಾನುವಾರುಗಳ ನೆಲೆವೀಡಾಗಿರುತ್ತದೆ. ಶಿವ ಇಲ್ಲೊಂದು ಉಪಾಯ ಮಾಡುತ್ತಾನೆ. ಪಾಂಡವರ ಕಣ್ಣಿಗೆ ಬೀಳಬಾರದೆಂದು ನಂದಿ ರೂಪಧಾರಿಯಾಗಿ ಜಾನುವಾರುಗಳ ಮಂದೆಯಲ್ಲಿ ಸೇರಿಕೊಳ್ಳುತ್ತಾನೆ. ಪಾಂಡವರಿಗೆ ಈ ಸುಳಿವು ಸಿಗುತ್ತದೆ. ದೈತ್ಯದೇಹಿ ಭೀಮ ಮತ್ತಷ್ಟು ಬೃಹದಾಕಾರ ತಾಳಿ ಎರಡು ಬೃಹತ್ ಬೆಟ್ಟಗಳಾಗಿ ಮಾರ್ಪಡುತ್ತಾನೆ. ಆಗ ಸಾಮಾನ್ಯ ಜಾನುವಾರುಗಳು ಬೆಟ್ಟಗಳ ನಡುವೆ ಅಂದರೆ ಭೀಮನ ಕಾಲುಗಳ ನಡುವೆ ತಮ್ಮ ಅರಿವಿಗೆ ಬಾರದೆ ನುಸುಳುತ್ತವೆ. ಆದರೆ ಪರಮಾತ್ಮನಾದ ಶಿವನಿಗೆ ಹಾಗೆ ಹೋಗಲು ಸಾಧ್ಯವಾಗುವುದಿಲ್ಲ. ಶಿವನ ರೂಪದಲ್ಲಿದ್ದ ನಂದಿ ಭೀಮನಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತದೆ. ಆಗ ಭೀಮ ನಂದಿಯ ಮೇಲೆ ಬಿದ್ದು ಹಿಡಿಯಲು ಹೋಗುತ್ತಾನೆ. ಆ ಸಂದರ್ಭದಲ್ಲಿ ಭೀಮ ನಂದಿಯ ಹಿಂಭಾಗದ ತ್ರಿಭುಜಾಕೃತಿಯನ್ನು ಕೈಯಲ್ಲಿ ಹಿಡಿದುಬಿಡುತ್ತಾನೆ. ತ್ರಿಭುಜಾಕೃತಿಯ ಬೆನ್ನುಹೊತ್ತ ನಂದಿ ರೂಪದಲ್ಲಿದ್ದ ಶಿವ, ತಮ್ಮ ಗುರಿಯನ್ನು ಸಾಧಿಸಿದ ಪಾಂಡವರ ವಿರುದ್ಧ ಕೋಪ ಬಿಟ್ಟು, ಅವರ ಪಾಪಗಳಿಗೆ ಮುಕ್ತಿ ಕರುಣಿಸಲು ನಿಜ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ಅದುವೇ ಕೇದಾರನಾಥ. ಮುಂದೆ ಲೋಕಕಲ್ಯಾಣಾರ್ಥ ಭೀಮನ ಕೈಗೆ ನಂದಿ ಸಿಕ್ಕಿದ ಜಾಗದಲ್ಲಿ ತ್ರಿಭುಜಾಕೃತಿಯ ಬೆನ್ನುಹೊತ್ತ ನಂದಿ ರೂಪದ ಶಿವನನ್ನು ಪ್ರತಿಷ್ಠಾಪಿಸುತ್ತಾರೆ. ಅಲ್ಲಿಂದ ಮುಂದಕ್ಕೆ ಪಾಂಡವರು ಹಿಮಾಲಯದ ಮೂಲಕ ಸ್ವರ್ಗದ ಹಾದಿ ಹಿಡಿಯುತ್ತಾರೆ ಎಂಬುದು ಕಥೆ. ಪಂಚಕೇದಾರಗಳು ಪಶುಪತಿನಾಥ, ಕೇದಾರನಾಥ, ತುಂಗನಾಥ, ರುದ್ರನಾಥ, ಕಲ್ಪನಾಥ. ಈ ಪಂಚಕೇದಾರಗಳಲ್ಲಿ ಒಂದೊಂದುಕಡೆ ಶಿವನ ಒಂದೊಂದು ಭಾಗ ಪೂಜಿಸಲ್ಪಡುತ್ತದೆ. ಪಶುಪತಿನಾಥನಲ್ಲಿ ಶಿರಭಾಗ, ಕೇದಾರದಲ್ಲಿ ಬೆನ್ನು, ತುಂಗಾನಾಥದಲ್ಲಿ ಕೈ, ಭುಜ, ರುದ್ರನಾಥದಲ್ಲಿ ಮುಖದಭಾಗ, ಕಲ್ಪನಾಥದಲ್ಲಿ ಜಟೆಭಾಗ.
ದೇವಾಲಯದ ಒಳಗೆ ಪಾಂಡವರ ಮೂರ್ತಿಗಳನ್ನೂ ಕಾಣಬಹುದು.
ಕೇದಾರನಾಥ ಕಣಿವೆಯಲ್ಲಿ ಹರಿಯುವ ಗಂಗಾ ಉಪನದಿಯಾದ ಮಂದಾಕಿನಿ ಇಲ್ಲಿನ ಜೀವನದಿ. ಕೆಳಗೆ ಹರಿಯುತ್ತಾ ಅದು ರುದ್ರಪಯಾಗದಲ್ಲಿ ಅಲಕನಂದ ನದಿಯನ್ನು ಸೇರಿಕೊಳ್ಳುತ್ತದೆ.
ನಾವು ತಂಗಿದ ವಸತಿಗೃಹದಲ್ಲಿ ರಾತ್ರಿ ೮.೩೦ ಗಂಟೆಗೆ ಅನ್ನ ಸಾರು, ಚಪಾತಿ ಊಟ ಮಾಡಿ, ರಜಾಯಿ ಹೊದ್ದು ಬೆಚ್ಚಗೆ ಮಲಗಿದೆವು.
ಬೆಳಗಿನ ಅಭಿಷೇಕ
ಬೆಳಗ್ಗೆ ೧೮-೯-೨೦೧೬ರಂದು ಸುಖನಿದ್ದೆಯಲ್ಲಿದ್ದಾಗ ೨.೧೫ಕ್ಕೆ ಅಲರಾಂ ಬಡಿದೆಚ್ಚರಿಸಿತು. ಸರೋಜ ಸುಖವಾದ ಕನಸಿನ ಲೋಕದಲ್ಲಿ ಅವರ ಯಜಮಾನರೊಡನೆ ವಿಹರಿಸುತ್ತ, (ಯಜಮಾನರು ಇಲ್ಲಿಗೆ ಏಕೆ ಬಂದರು ಎಂದು ಆಶ್ಚರ್ಯಚಕಿತರಾಗಿ ಚಿಂತಿಸುತ್ತಲೇ) ನಮ್ಮನ್ನೆಲ್ಲ ಅವರಿಗೆ ಪರಿಚಯಿಸುತ್ತ ಇದ್ದರಂತೆ! ಆಗ ಈ ಅಲರಾಂ ಬಡಿದೆಚ್ಚರಿಸಿ ಸ್ವಪ್ನಲೋಕದಿಂದ ಹೊರಬಂದರಂತೆ! ೨.೩೦ಗೆ ದೇವಾಲಯದ ಬಳಿ ಬಂದೆವು. ಅರ್ಚಕರೂ ಅವರ ಸಹಾಯಕರೂ ದೇವಾಲಯದ ಬಾಗಿಲು ತೆರೆದರು. ಬೆಳಗಿನ ಝಾವದ ಅಭಿಷೇಕವನ್ನು ವಿಶೇಷವಾಗಿ ನಮ್ಮ ೧೭ ಜನರ ಕೈಯಲ್ಲಿ ಮಾಡಿಸಿದರು. ಗಂಧ, ತುಪ್ಪ, ಹಾಲು, ನೀರು ಹಾಕಿ ಅಭಿಷೇಕ ಮಾಡಿದೆವು. ಒಂದಷ್ಟು ಹಿರಿಮೊತ್ತ ಅರ್ಚಕರಿಗೆ ಕೊಟ್ಟರೆ ಇಂಥ ಭಾಗ್ಯ ದೊರೆಯುತ್ತದಂತೆ. ೩ರಿಂದ ೩.೩೦ರ ತನಕ ಮಾತ್ರ ಅಭಿಷೇಕ ಮಾಡಿಸಿದರು. ಆಹಾ ಇದು ಭಾಗ್ಯ ಇದು ಭಾಗ್ಯವಯ್ಯ ಯಾರಿಗುಂಟು ಇಂಥ ಭಾಗ್ಯ ಎಂದು ಎಲ್ಲರೂ ಅಭಿಷೇಕದ ಗುಂಗಿನಲ್ಲೇ ಅಲ್ಲಿಂದ ವಸತಿಗೃಹಕ್ಕೆ ಬಂದು ಮಲಗಿದೆವು.
…………ಮುಂದುವರಿಯುವುದು
ಈ ಪ್ರವಾಸಕಥನದ ಹಿಂದಿನ ಭಾಗಗಳು ಇಲ್ಲಿವೆ : http://52.55.167.220/?p=13135
– ರುಕ್ಮಿಣಿಮಾಲಾ, ಮೈಸೂರು