ಹಲಸಿನ ಸಿಹಿಹಲ್ವ, ಖಾರ ಸೋಂಟೆ
ಬಿರುಬೇಸಗೆಯಲ್ಲಿ ಬಲಿತ ಹಲಸಿನಕಾಯಿಗಳು ಇದ್ದರೆ, ಬಿಸಿಲನ್ನೇ ಸದುಪಯೋಗಪಡಿಸಿಕೊಂಡು ಹಪ್ಪಳ ತಯಾರಿಸಿಟ್ಟುಕೊಂಡರೆ ತಿನ್ನಲೂ ಚೆನ್ನಾಗಿರುತ್ತದೆ, ಪ್ರೀತಿಪಾತ್ರರಿಗೆ ಹಂಚಲೂ ಖುಷಿಯಾಗುತ್ತದೆ, ವ್ಯರ್ಥವಾಗಿ ಹೋಗುವ ಹಲಸಿನಕಾಯಿಗಳನ್ನು ಇನ್ನಷ್ಟು ದಿನಗಳ ಬಳಕೆಗಾಗಿ ಶೇಖರಿಸುವ ಮೌಲ್ಯವರ್ಧನೆಯೂ ಆಗುತ್ತದೆ. ಕರಾವಳಿಯಲ್ಲಿ ಮಳೆಗಾಲದಲ್ಲೂ ಧಾರಾಳವಾಗಿ ಹಲಸಿನ ಕಾಯಿ/ಹಣ್ಣುಗಳು ಲಭ್ಯ. ಮಳೆ ಇರುವುದರಿಂದ ಹಪ್ಪಳ ಮಾಡಲಾಗದಿದ್ದರೂ, ಹಲಸಿನ ಹಣ್ಣಿನ ಸಿಹಿಹಲ್ವ ಮತ್ತು ನೆಂಚಿಕೊಳ್ಳಲು ಖಾರದ ಸೋಂಟೆ ಮಾಡಿ ತಿನ್ನಬಹುದು.
ಹಲಸಿನ ಕಾಯಿಯ ಸೋಂಟೆ :
ಹಲಸಿನ ಕಾಯಿಯ ಸೊಳೆ ಯನ್ನು ಚಿಪ್ಸ್ ಗೆ ಬೇಕಾಗುವಂತೆ ಸೀಳಿ .ಅದಕ್ಕೆ ರುಚಿಗೆ ಬೇಕಾಗುವಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿ .ಅದಕ್ಕೆ ಒಂದು ಸೌಟು ಕಡಲೇ ಹಿಟ್ಟು ,ಖಾರ ಪುಡಿ, ಇಂಗು , ಓಮ ಸೇರಿಸಿ ಚೆನ್ನಾಗಿ ಕಲೆಸಿ. ಇದನ್ನು ಕಾದಎಣ್ಣೆ ಯಲ್ಲಿ ಕರಿದರೆ ‘ಹಲಸಿನ ಕಾಯಿ ಸೋಂಟೆ’ ತಿನ್ನಲು ಸಿದ್ಧ.
ಹಲಸಿನ ಹಣ್ಣಿನ ಹಲ್ವ :
ಬೀಜ ಬೇರ್ಪಡಿಸಿ, ಆಯ್ದ ಹಲಸಿನ ಹಣ್ಣಿನ ಸೊಳೆಗಳನ್ನು ಮಿಕ್ಸಿಯಲ್ಲಿ ರುಬ್ಬಬೇಕು. ನಾಲ್ಕು ಕಪ್ ನಷ್ಟು ರುಬ್ಬಿದ ಹಣ್ಣಿಗೆ 2 ಕಪ್ ಬೆಲ್ಲ ಸೇರಿಸಿ ಸಣ್ಣ ಉರಿಯಲ್ಲಿ ತಿರುವಿ. ಅರ್ಧ ಕಪ್ ತುಪ್ಪ ಸೇರಿಸಿ ಪುನ: ಕಾಯಿಸಿ .ನಂತರ ಸ್ವಲ್ಪ ಏಲಕ್ಕಿ ಪುಡಿ,ಗೋಡಂಬಿ ಸೇರಿಸಿ ಚೆನ್ನಾಗಿ ಬೆರೆಸಿ. ಹಲ್ವ ಮುದ್ದೆಯಾಗಿ ತಳ ಬಿಟ್ಟಾಗ ತಟ್ಟೆಗೆ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ ಸವಿಯಿರಿ.
ಈ ತಿಂಡಿಗಳು ಒಂದು ವಾರದ ವರೆಗೆ ಕೆಡುವುದಿಲ್ಲ.
– ಸಾವಿತ್ರಿ ಭಟ್ ಪುತ್ತೂರು
ವಾಹ್! ಸೂಪರ್! 🙂
ಸೋಂಟೆ…ಹಲ್ವ…ಮಳೆಗೆ ತಿನ್ನಲು ಬಹಳ ರುಚಿ…ಧನ್ಯವಾದಗಳು ಸಾವಿತ್ರಿ ಅಕ್ಕ..