ಚೆನ್ನೈ ಚಿತ್ರಗಳು
ಇತ್ತೀಚೆಗೆ ಚೆನ್ನೈಗೆ ಪ್ರವಾಸ ಹೋಗಿದ್ದೆವು. ಪ್ರವಾಸವೆನ್ನುವುದು ನಮ್ಮ ಮನಸ್ಸಿನ ಜಡತೆಯನ್ನು ಹೊಡೆದೋಡಿಸಿ ಪ್ರಫ಼ುಲ್ಲಗೊಳಿಸುವುದು ಸತ್ಯ. ಹಾಗೆ ನೋಡಿದರೆ ಮಂಗಳೂರಿನ ಸುಡು ಬಿಸಿಲಿಗೂ ಚೆನ್ನೈಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಹಾಗಿದ್ದರೂ ಚೆನ್ನೈ ಮಹಾನಗರ ತನ್ನದೇ ಆದ ವೈಶಿಷ್ಟ್ಯತೆಯಿಂದ ಮನ ಸೆಳೆಯುತ್ತದೆ. ಮೊದಲನೆಯದಾಗಿ ಈಗ ಚೆನ್ನೈ ಆಗಿರುವ ಮದ್ರಾಸ್, ದಕ್ಷಿಣ ಭಾರತದ ಅತಿ ಪ್ರಮುಖ ನಗರ. ಬ್ರಿಟಿಷರ ಕಾಲದಲ್ಲಿ, ಅಷ್ಟೇಕೆ ಈಗಲೂ ಕೂಡ ಉತ್ತರಭಾರತದವರು ದಕ್ಷಿಣ ಭಾರತದವರನ್ನು ‘ಮದ್ರಾಸಿಗಳು’ ಎಂದೇ ಕರೆಯುತ್ತಾರೆ. ಮಂಗಳೂರಿನಿಂದ ಚೆನ್ನೈಗೆ 892 ಕಿ.ಮೀ. ದೂರ. ಒಂದು ರಾತ್ರಿ ಟ್ರೈನ್ ಪಯಣದ ನಂತರ ಚೆನ್ನೈಗೆ.
ಚೆನ್ನೈ ಒಂದು ರೀತಿಯಲ್ಲಿ ಮುಂಬೈ, ಮೈಸೂರು, ಬೆಂಗಳೂರಿನ ಕಾಂಬಿನೇಶನ್ ನಂತೆಯೇ ನನಗನಿಸುತ್ತದೆ. ಮೈಸೂರಿನಂತೆಯೇ ವಿಶಾಲವಾದ ಬೀದಿಗಳು, ಹಳದಿ ಹೂ ಉದುರಿಸುವ ಮರಗಳು, ಬೀದಿ ಬದಿಯಲ್ಲಿ ಆರಾಮಾಗಿ ವ್ಯಾಪಾರ ಕುದುರಿಸುವ ಜನತೆ, ಕಟ್ಟು ಮಸ್ತಾಗಿ ಆಟೋ ಓಡಿಸುವ, ರಜನೀಕಾಂತ್ ಸ್ಟೈಲ್ ನಲ್ಲಿ ಡೈಲಾಗ್ ಹೊಡೆಯುವ ಗೈಡ್ ಗಳು. ಇನ್ನು ಸಾಲು ಸಾಲು ದೇವಾಲಯಗಳು, ಅವುಗಳ ಮುಂದೆ ಮರುಗ ಮೊಲ್ಲೆ ಜಾಜಿ ಸಂಪಿಗೆ ಬಿಲ್ವ ಮಲ್ಲಿಗೆ ಎಂದೆಲ್ಲ ಹೂವುಗಳು, ಅಂಗೈಯಗಲ ದಪ್ಪದ ಹಾರಗಳು.
ಇನ್ನು ಊಟ ತಿಂಡಿಯಲ್ಲಿಯೂ ಕೊಂಚ ವಿಶಿಷ್ಠತೆ. ‘ಸಂಗೀತಾ ರೆಸ್ಟೋರಂಟ್’ ಎನ್ನುವಲ್ಲಿ ಶುಚಿ ರುಚಿಯಾದ ಊಟವಿತ್ತು.ತಮಿಳರ ಸಾಂಬಾರಿಗೆ, ರಸಂಗೆ ಹುಳಿ ರುಚಿ ಜಾಸ್ತಿ ಎನ್ನುವುದು ನನ್ನ ಸಂಶೋಧನೆ ಇರಬೇಕು! ,ಮುರುಗನ್ ಇಡ್ಲಿ ಶಾಪ್’ ಎಂಬಲ್ಲಿ ಮಲ್ಲಿಗೆಯಷ್ಟೇ ಮೆದುವಾದ ಇಡ್ಲಿ ಸವಿದೆವು. ತಮಿಳರ ಚಟ್ನಿ ಪುಡಿಯೂ ಚಂದ. ಇಡ್ಲಿಯ ಮೈಗೆ ತುಪ್ಪ ಮತ್ತು ಚಟ್ನಿ ಪುಡಿ ನೀಟಾಗಿ ಸವರಿ ಕೊಟ್ಟ ‘ಪೊಡಿ ಇಡ್ಲಿ’ಯೂ ಅಚ್ಚುಕಟ್ಟಾಗಿ ರುಚಿಯಾಗಿತ್ತು. (ಹಾಗೂ ಅವರ ಮಾರ್ಕೆಟಿಂಗ್ ಚುರುಕುತನಕ್ಕೆ ಖುಶಿ ಕೂಡ. ) ಮೈಸೂರಿನ ಮಾನಸ ಗಂಗೋತ್ರಿ ಬಳಿ ಉಪ್ಪು ಖಾರ ಹಚ್ಚಿದ ಸೀಬೆ ಕಾಯಿ, ಸೌತೆಕಾಯಿ ತಿಂದು ಅಭ್ಯಾಸವಿದ್ದ ನನಗೆ ಚೆನ್ನೈನ ಬೀದಿಗಳಲ್ಲಿನ ವಾಂಗಿಯನ್ನು ಹೋಲುವ ಅತಿ ತೆಳ್ಳನೆಯ ಸೌತೆಕಾಯಿಗಳು, ಹುಣಸೆಕಾಯಿಯನ್ನು ಹೋಲುವ ಆದರೆ ಹುಳಿಯಿಲ್ಲದ, ಪಿಂಕ್ ತಿರುಳಿನ ಹಣ್ಣುಗಳು ಭಿನ್ನವಾಗಿತ್ತು.
ಮೊದಲನೆಯ ದಿನ ಮಹಾಬಲಿಪುರಂನತ್ತ ಹೋದೆವು. ಅಲ್ಲಿ ಪ್ರಖ್ಯಾತವಾದ ‘ಶೋರ್ ಟೆಂಪಲ್’ ಇದೆ. ಪಲ್ಲವರ ಕಾಲದ ಅತ್ಯುತ್ತಮ ಶಿಲ್ಪ ಕಲೆಯ, ಕಡಲಲೆಗಳ ಲಾಸ್ಯವಿರುವ ತಾಣ ಇದು. ಗೋವಾದಂತೆಯೇ ಇಲ್ಲಿ ಕೂಡ ಹ್ಯಾಟ್, ಬೋಟಿಂಗ್ , ಎಂದೆಲ್ಲ ಆಕರ್ಷಣೆ. ಚಿಪ್ಪಿನಿಂದ ತಯಾರಿಸಿದ ಅನೇಕ ಆಕರ್ಷಕ ಅಲಂಕಾರಿಕ ಸಾಮಗ್ರಿಗಳು ಇಲ್ಲಿ ಲಭ್ಯ. ಇಲ್ಲಿನ ಇನ್ನೊಂದು ಆಕರ್ಷಣೆ ಕುದುರೆ ಸವಾರಿ. ‘ಜಸ್ಟ್ ಫ಼ಾರ್ ಎ ಛೇಂಜ್ ಕುದುರೆ ಸವಾರಿ ಮಾಡಿ ಸಂಭ್ರಮಿಸಬಹುದು. ಶಿಲ್ಪ ಕಲೆಯನ್ನು, ಚರಿತ್ರೆಯನ್ನು ಅಧ್ಯಯನ ಮಾಡುವವರಿಗೆ ಅನೇ ಕ ಮಹತ್ವದ ಹೊಳಹುಗಳು ಲಭಿಸಬಹುದು.ಇಲ್ಲಿನ ಬೋಟಿಂಗ್ ಅಂತು ಸೂಪರ್. ಇಲ್ಲಿನ ಕಾಲುವೆಯ ಹೆಸರೇನು ಎಂದು ನನ್ನ ಗಂಡ ಕೇಳಿದಾಗ ಅದು ‘ಬಂಕಿಂಗ್ ಹ್ಯಾಮ್ ಕಾಲುವೆ ‘ ಎಂದು ಗೈಡ್ ಉತ್ತರಿಸಿದಾಗ ಇವರು ಅದು ಲಂಡನ್ ನಲ್ಲಿರುವುದು ಅಲ್ವೇ? ಎಂದು ಕೇಳಿದ್ದು ಸ್ವಾರಸ್ಯಕರವಾಗಿತ್ತು).
ಇದು ಹೆಚ್ಚು ಕಡಿಮೆ ರಂಗನತಿಟ್ಟು, ಹೊಗೇನಕಲ್ ಜಲಾಶಯವನ್ನು ನೆನಪಿಸುವಂತೆ ಇದೆ. ವಿಸ್ತಾರವಾದ ಈ ಜಲಾಶಯದಲ್ಲಿ ಬೆಳ್ಳಕ್ಕಿ, ಪೆಲಿಕನ್, ಬಾತುಗಳು, ಜುಳು ಜುಳನೆ ಹರಿಯುವ ನೀರು, ತಣ್ಣನೆಯ ಗಾಳಿಯಲ್ಲಿ, ನಾಲ್ಕು ಕ್ಷಣವಾದರೂ ನಿಸರ್ಗದ ಮಡಿಲಿನ ಅನುಭವ ಪಡೆಯಬಹುದು. ನಂತರ ಕ್ರೋಕೋಡೈಲ್ ಪಾರ್ಕ್ ಗೆ ಹೊರಟೆವು. ಭಾರತದಲ್ಲೇ ಅತಿ ದೊಡ್ಡ ಮೊಸಳೆ ಪಾರ್ಕ್ ಇದು. 8.5 ಎಕರೆ ವಿಸ್ತೀರ್ಣದಲ್ಲಿ, ಮೊಸಳೆಗಳಿಗೆ ಆರಾಮಾಗಿ ಬದುಕಲು ಸಕಲ ಸೌಲಭ್ಯಗಳಿರುವ ಪಾರ್ಕ್. ಇಲ್ಲಿ 14 ವಿಧದ ಮೊಸಳೆಗಳು, 10 ವಿಧದ ಆಮೆಗಳು, ಅಲ್ಲದೆ 60 ಕ್ಕೂ ಮೀರಿ ಹಕ್ಕಿಗಳು.. ಹೀಗೆ ಅದೊಂದು ಜ಼ುವಾಲಜಿ ಸ್ವರ್ಗ. ಮೊಸಳೆ ಚಿತ್ರದ ಟಿ-ಶರ್ಟ್ ಗಳು, ಕಾರ್ಟೂನ್ ಗಳು.. ಪೇಪರ್ ವೈಟ್ ನಿಂದ ಹಿಡಿದು ಡಸ್ಟ್ ಬಿನ್ ವರೆಗೆ ಅವರ ಮೊಸಳೆಗಳ ಬಗೆಗಿನ ಪ್ರೀತಿ ಮೆಚ್ಚತಕ್ಕದ್ದು. ಅಲ್ಲಿ ಮೊಸಳೆಗಳು, ಇಗ್ವಾನಗಳು, ಆಮೆಗಳು ನಮ್ಮ ಕಣ್ಣಿಗೂ ಮುದ್ದಾಗಿ ಕಾಣಿಸುತ್ತವೆ!
‘ದಕ್ಷಿಣ ಚಿತ್ರಮ್’ ಎನ್ನುವುದು ಚೆನ್ನೈ ನ ಪ್ರಖ್ಯಾತ ಮ್ಯೂಸಿಯಮ್, ಹೆರಿಟೇಜ್ ತಾಣ ಎನ್ನಬಹುದು. ಇಲ್ಲಿ ದಕ್ಷಿಣ ಭಾರತದ ಅನೇಕ ಪಂಗಡಗಳ, ಜಾತಿಗಳ ಮನೆಗಳನ್ನು, ಅವರ ಜೀವನ ಶೈಲಿಯನ್ನು ಪ್ರತಿಫಲಿಸುವಂತೆ ನಿರ್ಮಿಸಲಾಗಿದೆ ಹಾಗೂ ಒಂದು ಕ್ಷಣ ನಾವು ಹಳ್ಳಿ ಜೀವನದ, ಗ್ರಾಮ್ಯ ಬದುಕಿನ ಸುಖ ದು:ಖವನ್ನು ನೆನಪಿಸಿಕೊಳ್ಳುತ್ತೇವೆ. ಅನೇಕ ಆರ್ಟಿಸ್ಟ್ ಗಳು ಇಲ್ಲಿ ದುಡಿದಿರುವುದು ಸ್ಪಷ್ಟ. ಬಂಗಾಳದ ಬಳೆ, ಇನ್ನೆಲ್ಲಿಯದೋ ಟ್ರೈಬಲ್ ಪೈಂಟಿಂಗ್.. ಹೀಗೆ ನಮ್ಮ ಬಜೆಟ್ ಗೆ ಅನುಗುಣವಾಗಿ ಅನೇಕ ವಸ್ತುಗಳನ್ನು ಕೊಂಡುಕೊಳ್ಳಲು, ಬೇಕಾದರೆ ನಾವೇ, ಕುಂಬಾರಿಕೆ , ಇನ್ನಿತರ ಕಲೆ ಕಲಿಯಲೂ ಅಲ್ಲಿ ಅವಕಾಶ ಇದೆ. ಅನಂತರ ಅಭಿರಾಮಿ’ ಥಿಯೇಟರ್ ನಲ್ಲಿ 7-ಡಿ ಸಿನೆಮಾ ನೋಡಿದೆವು. ಅದು ಥ್ರೀ-ಡಿ ಸಿನೆಮಾಕ್ಕಿಂತ ಹೆಚ್ಚು ಭಿನ್ನವಾಗೇನು ಇರಲಿಲ್ಲ. ‘ಮೂರ್ ಮಾರ್ಕೆಟ್’ ಎಂಬಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳದ್ದೇ ಒಂದು ಬೀದಿ, ಶಾಪಿಂಗ್ ಕಾಂಪ್ಲೆಕ್ಸ್ ಎಲ್ಲ ಇದೆ. (ಹೆಚ್ಚಿನ ಪುಸ್ತಕಗಳು ಸೈನ್ಸ್ ಗೆ ಸಂಬಂಧಿಸಿದ್ದು, ಭಾರತದ ಮಧ್ಯಮ ವರ್ಗದ ಡಿಮ್ಯಾಂಡ್ ಮತ್ತು ಸಪ್ಪ್ಲೈ ಯ ಕನ್ನಡಿಯಂತೆಯೇ ನನಗೆ ಕಂಡಿತು.
ಮಾರನೆಯ ದಿನ ನಮ್ಮ ಪಯಣ ಕಾಂಚೀಪುರಂ ನತ್ತ. ಪ್ರಖ್ಯಾತ ಕಂಚಿ ಕಾಮಾಕ್ಷಿ ಹಾಗೂ ಕಂಚಿ ಸಿಲ್ಕ್ ಸೀರೆಗಳಿಗೆ ಖ್ಯಾತವಾದ ನಗರಿ ಇದು. ಅಲ್ಲಿಗೆ ಹೋಗುವ ದಾರಿಯಲ್ಲಿ ಶ್ರೀ ಪೆರಂಬದೂರಿನಲ್ಲಿರುವ ರಾಜೀವ ಗಾಂಧಿ ಸ್ಮಾರಕವನ್ನು ಸಂದರ್ಶಿಸಿದೆವು. ತಮಿಳು ನಾಡಿನ ಹೆಚ್ಚಿನ ದೇವಾಲಯಗಳು (ವರದ ರಾಜ ದೇವಳ, ವೈಕುಂಠ ಪೆರುಮಾಳ್ ದೇವಳ.. ಹೀಗೆ ವೈಷ್ಣವ ಪಂಥದ ಪ್ರತೀಕದಂತೆಯೇ ಕಂಡು ಬಂದವು. (ಪುಳಿಯೋಗರೆ,ಪೊಂಗಲ್ ಪ್ರಸಾದ, ನಾಮ ಧಾರಿ ಅರ್ಚಕರು ಹೀಗೆ). ಕಾಂಚೀಪುರಂ ನಲ್ಲಿ ಪುನರ್ ನಿರ್ಮಾಣದ ಕಾರ್ಯಗಳು ನಡೆಯುತಿದ್ದವು. ಕಾಂಚೀಪುರಂ ಸೀರೆಗಳ ಮಳಿಗೆಗಳು ಅಲ್ಲಿ ಒಂದು ದೊಡ್ಡ ಕಮರ್ಷಿಯಲ್ ಉದ್ಯಮವೇ ಆಗಿದೆ. ‘ಕಾಂಚೀ ಪುರಂ’ ಸಿನೆಮಾ ನೋಡಿದ (ಪ್ರಕಾಶ್ ರೈ ನಟಿಸಿರುವ, ರಾಷ್ಟ್ರಪತಿ ಅವಾರ್ಡ್ ಪಡೆದ ಸಿನೆಮಾ) ಹಿನ್ನೆಲೆಯಲ್ಲಿ ‘ನೇಕಾರರ ಕಾಲನಿ’ ನೋಡಬೇಕೆಂದು ಬಯಸಿದಾಗ ಅಲ್ಲಿನ ಅಂಗಡಿಯವರು ಜಾಣತನದಿಂದ ಅಲ್ಲಿಗೆ ಹೋಗದಂತೆ ತಡೆಯುತ್ತಿದ್ದುದು ವಿಶೇಷವಾಗಿತ್ತು. ಏನೇ ಇರಲಿ, ಎರಡು ಸಾವಿರದಿಂದ ಒಂದೂವರೆ ಲಕ್ಷದ ವರೆಗೆ ಬೆಲೆಯಿರುವ ಈ ಸೀರೆಗಳು ತಮ್ಮ ಕುಸುರಿ ಕೆಲಸದಿಂದ, ಬಣ್ಣಗಳ ನೇಯ್ಗೆಯಿಂದ ಕಲಾತ್ಮಕವಾಗಿವೆ. ನಾನು ಒಂದೆರಡು ಮಗ್ಗಗಳ, ಒಂದೂವರೆ ಲಕ್ಷ ಬೆಲೆಯ ಸೀರೆಯ ಫೋಟೊ ತೆಗೆದು ಕೃತಾರ್ಥಳಾದೆ.ಅಷ್ಟಿಷ್ಟು ಸೀರೆಗಳನ್ನೂ ತೆಗೆದುಕೊಂಡೆವೆನ್ನಿ. ಆ ನಂತರ ‘ವಂದನಲ್ಲೂರ್ ಝೂ ‘ಗೆ ಹೋದೆವು. ಹೆಚ್ಚು ಕಡಿಮೆ ಮೈಸೂರು ಜೂನಂತೆಯೆ ಇದೆ. ಲಯನ್ ಸಫ಼ಾರಿ ಇಲ್ಲಿನ ಆಕರ್ಷಣೆ. ತಮಿಳರ ಭಾಷಾಭಿಮಾನದಿಂದಾಗಿ ಅಲ್ಲಿ ವ್ಯವಹರಿಸಲು ಕಷ್ಟವೇ ಆಯಿತು. ಕಾರಿನ ಡ್ರೈವರನ್ನೂ ಸೇರಿಸಿ ಹೆಚ್ಚಿನವರಿಗೆ ತಮಿಳು ಬಿಟ್ಟು ಇಂಗ್ಲಿಷ್ ಅರಿಯದು.
ಮೂರನೆಯ ದಿನ ನಾವು ಚೆನ್ನೈನ ಲೋಕಲ್ ಟೂರ್ ಗೆ ಅಣಿಯಾದೆವು. ‘ವಡ ಪಳನಿಯಲ್ಲಿನ ‘ಮುರುಗನ್’, ಅಂದರೆ ಕಾರ್ತಿಕೇಯ ಸನ್ನಿಧಿ ಆಪ್ಯಾಯಮಾನವಾಗಿತ್ತು. ಹಾಗೆಯೇ ಅಷ್ಟ ಲಕ್ಷ್ಮಿಯರ ದೇವಾಲಯ ಕೂಡ. ಎಲ್ಲ ಕಡೆಯೂ ಹೂವಿನ ದಪ್ಪ ಹಾರಗಳು ಆಕರ್ಷಣೆ. ತುಳಸಿಯಿಂದ ಹಿಡಿದು ರೆಂಜೆ, ಬಕುಳ, ಗುಲಾಬಿ, ಸಂಪಿಗೆ ಹೀಗೆ ಹೂ ಹಾರಗಳಿಗೆ ಪ್ರಾಶಸ್ತ್ಯ. ಅನೇಕ ವಿಶಿಷ್ಠ ರೀತಿಯ ಸೇವೆಗಳನ್ನೂ ನೋಡಿದೆವು. ತೀರ್ಥ ಕ್ಷೇತ್ರಗಳು ಹಿಂದೂ ಧರ್ಮದ ಚಿರಂತನತೆಯನ್ನು, ಜನ ಜೀವನದಲ್ಲಿ ಧರ್ಮ ಯಾವ ರೀತಿ ಹಾಸು ಹೊಕ್ಕಾಗಿದೆ ಎನ್ನುವುದನ್ನು ನಮ್ಮ ಗಮನಕ್ಕೆ ತರುತ್ತದೆ. ಎಷ್ಟೇ ಪಾಶ್ಚಾತ್ಯೀಕರಣ ಇರಲಿ, ಮನುಷ್ಯ ಕಷ್ಟಗಳಿಗೆ ಹೆದರುತ್ತಾನೆ ಹಾಗೂ ದೈವದ ಮೊರೆ ಹೋಗುತ್ತಾನೆ. ಇದು ಜೀವನದ ಸತ್ಯ. ತಮಿಳು ನಾಡಲ್ಲಿ ಆಸ್ತಿಕರ , ಸಂಪ್ರದಾಯಸ್ಥರ ಸಂಖ್ಯೆ ಜಾಸ್ತಿಯೇ ಎಂದು ನನಗನಿಸಿತು. ಬಟ್ಟೆ ಬರೆಯಲ್ಲೂ ಕೂಡ ಜೀನ್ಸ್, ಟಿ ಶರ್ಟ್ ಎಂದೆಲ್ಲ ಮಾಡ್ ಡ್ರೆಸ್ ಧರಿಸಿದವರು ಅಷ್ಟಾಗಿ ಕಂಡು ಬರಲಿಲ್ಲ. ಆಕರ್ಷಕ ಕೆತ್ತನೆಯ , ನೀಲಿ , ಹಸಿರು ಮಿಶ್ರಿತ ಪ್ರತಿಮೆಗಳನ್ನೊಳಗೊಂಡ ಗೋಪುರಗಳು, ಹಾದಿ ಬದಿಯ ದ್ರಾವಿಡ ಶೈಲಿಯ ಪುಟ್ಟ ಗುಡಿಗಳು, ಹೀಗೆ ಕಲೆ ಅಲ್ಲಿನ ಜೀವನದ ಅವಿಭಾಜ್ಯ ಅಂಗವೇ ಆಗಿರುವುದು ನನ್ನ ಅನುಭವಕ್ಕೆ ಬಂದ ಇನ್ನೊಂದು ಅಂಶ. ಎಲ್ಲ ಕಡೆ ಬೀದಿಗಳಲ್ಲಿ ಕಾಣುವ ರಂಗೋಲಿಗಳು, ಬೀದಿ ಬದಿಯಲ್ಲಿ ಬೇರೆ ಬೇರೆ ಶೈಲಿಯ ಪೋಸ್ಟರ್ ಗಳು, ಕಟ್ ಔಟ್ಗಳು, ಅಂಗಡಿ, ಮಾಲ್ ಗಳಲ್ಲಿನ ಕ್ರಿಯೇಟಿವ್ ಅಲಂಕಾರಗಳು ಹೀಗೆ ಕಲೆ, ಸಂಪ್ರದಾಯ, ಆಧುನಿಕತೆ ಅಲ್ಲಿ ಮಿಳಿತವಾಗಿದೆ. (ಭಾರತದ ಹೆಚ್ಚಿನ ನಗರಗಳಂತೆ).
ಕೊನೆಯಾದಾಗಿ ನಾವು ಮೆರಿನಾ ಬೀಚ್ ಹಾಗೂ ಎಲಿಯಟ್ ಬೀಚ್ ಗೆ ಹೋದೆವು .ಎಲಿಯಟ್ ಬೀಚಿಗೆ ಮಟ ಮಟ ಮಧ್ಯಾಹ್ನ ಹೋದ ಕಾರಣ ಪ್ರೇಮಿಗಳನ್ನು ಹೊರತು ಪಡಿಸಿ ಆ ಸ್ಥಳ ನಿರ್ಜನವಾಗಿತ್ತು. ಮೆರಿನಾ ಬೀಚಿನ ವಿಸ್ತಾರ, ಅಲ್ಲಿನ ಅಂಗಡಿಗಳ ಅಂಗಡಿಗಳ ಸಾಲು, ಸಾಲು, ಶಂಖ ಚಿಪ್ಪಿನಿಂದ ಅಯಾರಿಸಿದ ಬೇರೆ ಬೇರೆ ಕಲಾಕೃತಿಗಳು, ಸಂಜೆಯಾಗುತ್ತಿದ್ದಂತೆ ಝಗ್ಗನೆ ಹೊತ್ತಿಕೊಳ್ಳುವ ದೀಪಗಳ ಸಾಲುಸಾಲು, ಪ್ರವಾಸಿಗರ ಜಂಗುಳಿ.. ಹೀಗೆ ಅದೊಂದು ಸಿನೆಮಾ ಸೆಟ್ ನಂತೆಯೇ ಇದೆ. ಮುಂಬೈ, ಮೈಸೂರು, ಹೈದರಾಬಾದಿನಂತೆಯೇ ಚೆನ್ನೈ ಕೂಡ ಒಂದು ರೀತಿಯ ಬೆಚ್ಚನೆ ಆಪ್ತತೆಯನ್ನು, ಅಲ್ಲಿನ ಸೊಗಸಾದ ಫ಼ಿಲ್ಟರ್ ಕಾಫ಼ಿಯಂತೆಯೇ ಕಟು ಮಧುರ ರುಚಿಯನ್ನು ಹೊಂದಿದೆ’
.
– ಜಯಶ್ರೀ ಬಿ ಕದ್ರಿ
ಚೆನ್ನೈ ಪ್ರವಾಸ ಕಥನ ಚೆನ್ನಾಗಿದೆ…
ಚೆನ್ನೈ ಬಗ್ಗೆ ಇದಕ್ಕಿಂತಲೂ ಚೆನ್ನಾಗಿ ಹಾಗು ರಸವತ್ತಾಗಿ ಬರೆಯಲು ಸಾಧ್ಯವೆ ಇಲ್ಲ ,ನೋಡಬೇಕಾದ ಸ್ಥಳ, ಅನುಭವಿಸಬೇಕಾದ ಸಂಗತಿಗಳ ಹಾಗು ಇನ್ನಿತರ ಸ್ಥಳಗಳ ಕುರಿತಾಗಿ ( ಪೋಡಿ ಇಡ್ಲಿ. , ಮಹಾಬಲಿಪುರ, ಚಿತ್ರಮಂದಿರದ ಅನುಭವ ಮುಂತಾದವುಗಳ
ವಿವರಣೆ ಚೆನ್ನಾಗಿ ಲಿಖಿತ ರೂಪದಲ್ಲಿ ಸಕಾಲಿಕ ಚಿತ್ರಗಳೊಂದಿಗೆ ಮೂಡಿ ಬಂದಿದ್ದು, ಚೆನ್ನೈ ಶಹರದ ಕಡುಬಿಸಿಲಿನಲ್ಲಿ ಇಂಥ
ಲೇಖನ ಹೇಗೆ ಒಡ ಮೂಡಿತು ? ಧನ್ಯವಾದಗಳು ಶ್ರೀಮತಿ ಜಯಕ್ಕ, ಕದ್ರಿ.. . ರಂಗಣ್ಣ ನಾಡಗೇರ್ . ಹುಬ್ಬಳ್ಳಿ.
Thank you Shankari Sharma and Ranganna Nadgir. So nice of you.
ಚೆನ್ನೈ ಪ್ರವಾಸ ಅನುಭವ ಬಹಳ ಚೆನ್ನಾಗಿತ್ತು
Thank you Savtiri Bhat. Nice of you.
ತುಂಬಾನೇ ಚೆನ್ನಾಗಿತ್ತು ಕಳೆದ ವರ್ಷ ಬಿಸಿಲಿನಲ್ಲಿ ಮದ್ರಾಸಿಗೆ ಹೋಗಿದ್ದೆ. ನಿಮ್ಮ ಲೇಖನ ಓದಿ ಎಷ್ಟೇಲ್ಲಾ ನೋಡದೇ ಬಂದೆನಲ್ಲ ಅಂತ ಬೇಸರವಾಯ್ತು. ಆದರೆ ಸಮಯದ ಅಭಾವವು ಇತ್ತು ಎನ್ನಿವುದೂ ನೆನಪಾಯ್ತು..ನೀವು ಹೇಳಿದ ಹಾಗೆ ಲಕ್ಷ ಲಕ್ಷ ಸೀರೆ ನೋಡಿಕೊಂಡು ಮಡದಿಗೆ ಅಲ್ಲಿಂದ ನಳ್ಳಿ ಸೀರೆಯೊಂದು ತಂದಿದ್ದೆ.
ಲೇಖನ ಓದಲು ಮುದ ತರಿಸಿತು. ಧನ್ಯವಾದಗಳು.