ಓದು-ಉದ್ಯೋಗದ ಗೊಂದಲದ ನಡುವೆ.
ನಾವೆಲ್ಲಾ ದೊಡ್ಡ ಪರೀಕ್ಷೆ ಹತ್ತಿರ ಬಂತು ಅಂದಾಗಲೇ ಬಿಸಿ ಮುಟ್ಟಿಸಿಕೊಂಡಂತೆ ಓದಲು ಕುಳಿತುಕೊಳ್ಳುತ್ತಿದ್ದೆವು.ಯಾವುದೇ ಗೊತ್ತು ಗುರಿಯಿಲ್ಲದೆ ಓದುತ್ತಿದ್ದೆವು.ಆ ಪರೀಕ್ಷೆಯಲ್ಲಿ ಪಾಸು ಆಗುವುದಷ್ಟೇ ಆ ಕ್ಷಣಕ್ಕೆ ನಮ್ಮ ಎದುರಿಗಿದ್ದ ದೊಡ್ಡ ಗುರಿ.ನಿನಗೆಷ್ಟು ಅಂಕ? ಯಾರು ತರಗತಿಯಲ್ಲಿ ಮೊದಲು?ಇಂತಹ ಪ್ರಶ್ನೆಗಳೆಲ್ಲಾ ಸಾಮಾನ್ಯವಾಗಿ ಯಾರೂ ಕೇಳುತ್ತಿರಲಿಲ್ಲ.ಒಟ್ಟಾರೆಯಾಗಿ ಪಾಸೋ ,ಫೈಲೋ ಇವಷ್ಟೇ ಅಲ್ಲಿ ಮುಖ್ಯ ಸಂಗತಿಯಾಗಿತ್ತು. ಆ ತರಗತಿಯಲ್ಲಿ ಪಾಸು ಆಗುವುದೊಂದೇ ಎಲ್ಲರ ದೃಷ್ಠಿಯಲ್ಲಿ ಗೌರವಾದರ ತರುವ ಸಂಗತಿಯಾಗಿತ್ತು.ಹಾಗಾಗಿ ನಾವುಗಳೆಲ್ಲಾ ಡಾಕ್ಟರ್,ಇಂಜಿನಿಯರ್,ಫೈಲಟ್..ಇಂತಹ ಹುದ್ದೆಗಳ ಕನಸುಗಳನ್ನು ಯಾರೂ ಕಾಣುತ್ತಿರಲಿಲ್ಲ.ಅವೆಲ್ಲವೂ ಅಸಮಾನ್ಯ ದೇವಲೋಕದಿಂದ ರೂಪುಗೊಂಡ ಪ್ರತಿಭೆಗಳಿಗಾಗಿಯೇ ಇರಬೇಕೆಂದು,ಅದನ್ನು ಕಿವಿಯಿಂದಲೇ ಕೇಳಿ ತಂಪು ಮಾಡಿಕೊಂಡು ತೆಪ್ಪಗಾಗುತ್ತಿದ್ದೆವು. ಆದರೆ ಅಸಲಿಗೆ ನಮ್ಮ ಓರಗೆಯವರೆಲ್ಲಾ ಏನು ಆಗಬೇಕೆಂದು ಅಂದುಕೊಳ್ಳದೆಯೇ ಅದೆಲ್ಲವೂ ಆಗಿದ್ದಾರೆಂಬುದೇ ದೊಡ್ಡ ವಿಸ್ಮಯ. ಆದರೆ ಈಗ ಮಕ್ಕಳನ್ನು ಶಾಲೆಗೆ ಸೇರಿಸಿದೊಂದೇ ಗೊತ್ತು,ಹೆತ್ತವರಿಗೆ ದಿಗಿಲು ಶುರುವಾಗುತ್ತದೆ.ವಾರಕ್ಕೊಮ್ಮೆ ಸಿದ್ಧಗೊಳ್ಳುವ ಪರೀಕ್ಷೆಗಳು,ಅದಕ್ಕೆ ಪೂರಕವಾಗಿ ಮಕ್ಕಳ ಜೊತೆಗೆ ಹೆತ್ತವರೂ ತಯಾರಿ ನಡೆಸಬೇಕಾದ ಅನಿವಾರ್ಯತೆ.ಪರೀಕ್ಷೆ ಮಕ್ಕಳಿಗೋ ,ಹೆತ್ತವರಿಗೋ ಅಂತ ಗೊತ್ತಾಗದಷ್ಟು ದಿಗಿಲಿನ ವಾತಾವರಣ ನಿರ್ಮಾಣ ಆಗಿಬಿಟ್ಟಿದೆ.ಪ್ರತಿದಿನ ಓದು,ಟ್ಯೂಷನ್.ಉಳಿದಂತೆ ಟಿ.ವಿ,ಕಂಪ್ಯೂಟರ್,ಮೊಬೈಲ್.ನಮ್ಮ ಮಕ್ಕಳು ಅದೇನು ಆಗಬೇಕೆಂಬುದನ್ನ ನಾವು ಅದಾಗಲೇ ನಿರ್ಧರಿಸಿ ಬಿಟ್ಟಿರುತ್ತೇವೆ.ಇದು ಸರಿಯೋ,ತಪ್ಪೋ ಒಂದೂ ಅರ್ಥವಾಗುತ್ತಿಲ್ಲ.ಬದಲಾದ ಕಾಲದ ಜೊತೆಗೆ ನಮ್ಮ ಭಾವನೆಗಳನ್ನ,ವಿಚಾರಗಳನ್ನ,ನಿರ್ಣಯಗಳನ್ನ ರೂಪಾಂತರಗೊಳಿಸಿಕೊಂಡಿದ್ದೇವೆ ಅಂತ ಹೇಳಬಹುದಷ್ಟೆ.
ಭವಿಷ್ಯವೆನ್ನುವುದು ನಮ್ಮ ಕೈಯಲ್ಲಿದೆಯಾ..?ಅಕಾಸ್ಮಾತ್,ಅಂದುಕೊಂಡದ್ದು ಆಗದೇ ಹೋದರೆ ಏನಾಗಬಹುದು?.ಬದುಕು ಯಾಕಿಷ್ಟೊಂದು ಯಾಂತ್ರಿಕವಾಗಿ ಜಿದ್ದಿಗೆ ಬಿದ್ದಂತೆ ಓಡುತ್ತಿದೆಯೆಂದು ನೆನೆದರೆ ಗಲಿಬಿಲಿಯಾಗುತ್ತದೆ.ಎಲ್ಲರೂ ಉನ್ನತ ಉದ್ಯೋಗದ ಬೆನ್ನು ಹತ್ತಿ ಓದುತ್ತಾರೆಂದಾದರೆ..ಈ ಜಗತ್ತಿನಲ್ಲಿ ಅವೆಲ್ಲವೂ ಆಗಲು ಸಾಧ್ಯವಾ..?ಮೆಡಿಕಲ್ ಸೀಟ್ ಸಿಗಲಿಲ್ಲವೆಂದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು,ಆಚೆ ಮನೆಯಯ ಹುಡುಗನ ಬುದ್ಧಿವಂತಿಕೆಯನ್ನ ಹೋಲಿಕೆ ಮಾಡುತ್ತರೆಂದು ಈಚೆ ಮನೆಯ ಹುಡುಗ ಖಿನ್ನತೆಗೆ ಜಾರುವುದು.ಇದರಾಚೆಗೂ ಉತ್ತಮ ಬದುಕು ಬದುಕಲು ಸಾಧ್ಯವಿದೆ ಅಂತ ಯಾಕೆ ಯಾರಿಗೂ ತೀಳಿಯುವುದಿಲ್ಲ?.ಪ್ರತಿಭೆ ಇದೊಂದೇ ಅಂತ ತೀರ್ಪುಕೊಡಲಿಕ್ಕೆ ಸಾಧ್ಯವೇ?.ಪ್ರತಿಬಾ ಕೌಶಲ್ಯ ಬದುಕಿನ ಪ್ರತಿಯೊಂದು ಚಟುವಟಿಕೆಗಳಲ್ಲೂ ಇದೆ ಅಂತ ಅರ್ಥೈಸಿಕೊಂಡಾಗಲಷ್ಟೆ ಯಾವುದೇ ಕೀಳರಿಮೆಗೆ,ಭೇದ ಭಾವಕ್ಕೆ ಅವಕಾಶಗಳಿರುವುದಿಲ್ಲ ಎಂಬುದನ್ನು ನಾವ್ಯಾರು ಮನನ ಮಾಡಿಕೊಳ್ಳುತ್ತಿಲ್ಲವಷ್ಟೆ.
ಈಗಿನ ವಾತಾವರಣಕ್ಕಿಂತ ಭಿನ್ನವಾಗಿ ನಾವೆಲ್ಲಾ ಯಾವಾಗ ದೊಡ್ಡ ಪರೀಕ್ಷೆ ಮುಗಿಯುತ್ತದೋ ಅಂತ ಕಾಯುತ್ತಿದ್ದೆವು.ನಾವು ಶಾಲೆಗೆ ಹೋಗುವ ಉದ್ದೇಶವೇ ದೊಡ್ಡ ರಜೆಯನ್ನು ಮಜವಾಗಿ ಅನುಭವಿಸಲು ಎಂಬಂತಿತ್ತು.ಯಾಕೆಂದರೆ ಆ ದೊಡ್ಡ ರಜೆಯಲ್ಲಿ ನಮಗೆ ಮಾಡಿ ಮುಗಿಸಲು ಅದಕ್ಕಿಂತ ದೊಡ್ಡ ದೊಡ್ಡ ಕೆಲಸಗಳಿರುತ್ತಿದ್ದವು.ಅಜ್ಜಿಯ ಮನೆಯಲ್ಲೊಂದಷ್ಟು ದಿನ ಠಿಕಾಣಿ ಹೂಡಿ ಅದೇನೋ ಘನಂದಾರಿ ಕೆಲಸ ಮಾಡಲಿರುತ್ತಿತ್ತು.ಹಾಗೆಯೇ ನದಿಗೆ ಧುಮುಕಿ ಈ ಸಲವಾದರೂ ಈಜು ಕಲಿಯಬೇಕೆನ್ನುವ ಉಮೇದು,ಹಾಗೆಯೇ ಈ ಸಾರಿ ಪಕ್ಕದ ಮನೆಯವರಿಗಿಂತ ಹೆಚ್ಚಿಗೆ ಹಪ್ಪಳ,ಸಂಡಿಗೆ, ಮಾಂಬಳ ಮಾಡಿಬಿಡಬೇಕೆನ್ನುವ ಅತೀ ಉತ್ಸಾಹ,ಅದರ ಜೊತೆಗೆ ಮದುವೆ,ಜಾತ್ರೆ,ನೇಮ,ಕೋಲ ಅಂತ ಇರುವ ಒಂದೇ ಒಂದು ಫ್ರಿಲ್ ಇರುವ ಪಿಂಕ್ ಹೂವಿನ ಗುಲಾಬಿ ಬಣ್ಣದ ಉದ್ದನೆಯ ಲಂಗದ ನಿರಿಗೆಯನ್ನು ವಯ್ಯಾರದಿಂದ ಅಲ್ಲಾಡಿಸಿಕೊಂಡು ಹೋಗುವಾಗಿನ ಸಂಭ್ರಮವೇ ಹೆಚ್ಚು ಮುದ ಕೊಡುತ್ತಿತ್ತು.ನನ್ನ ಜೊತೆ ಒಂದು ಕೆಂಪು ಬಿಳಿ ಕಳ್ಳಿ ಕಳ್ಳಿ ಚೆಂದದ ಅಂಗಿ ಇತ್ತು.ಅದಕ್ಕೆ ಸೊಂಟಕ್ಕೆ ಕಟ್ಟಲು ಬಿಳಿಯ ನಡು ಪಟ್ಟಿ ಇತ್ತು.ನನ್ನ ಅಮ್ಮ ಯಾವುದೋ ಸಮಾರಂಭಕ್ಕೆ ಹೊರಡುವಾಗ ಆ ಅಂಗಿಯನ್ನು ಧರಿಸಲು ಹೇಳಿ,ಅದರ ಬಿಳಿಯ ಲಾಡಿಯನ್ನು ಎಳೆದು ಹಿಂದಕ್ಕೆ ಕಟ್ಟಿದರೆ,ನಾನು ಬಿಡದೆ ಹಠ ಹಿಡಿದು ಮುಂದಕ್ಕೆ ಕಟ್ಟಿಕೊಂಡು ಖುಷಿಯಿಂದ ಓಲಾಡಿದ್ದನ್ನು ಈಗ ಹಿತವಾಗಿ ಮೆಲುಕು ಹಾಕಲು ಸಾಧ್ಯವಿದೆ.ಆದರೆ ನಮ್ಮ ಮಕ್ಕಳಿಗೆ ಇಂತಹ ಖುಶಿಯನ್ನೆಲ್ಲಾ ಅನುಭವಿಸಲು ಸಮಯವೆಲ್ಲಿದೆ?.ಡಾನ್ಸ್,ಸಂಗೀತ,ಕರಾಟೆ..ತರೇವಾರಿ ತರಗತಿಗಳು.ಅವು ಬಿಡಿ,ಇನ್ನು ಹತ್ತನೇ ತರಗತಿ ಅಥವಾ ಪಿ.ಯು.ಸಿ ಗೆ ಬಂದರೆಂದರೆ ಮುಗಿಯಿತು.ಅವರಿಗೆ ವರ್ಷಕ್ಕೆ ಮೊದಲೇ ಪೂರ್ವ ತಯಾರಿಗಳು,ಪೂರ್ವ ತರಗತಿಗಳು ಶುರುವಾಗಿ ಆದಿತ್ಯವಾರವೂ ಅವರಿಗೆ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ.ಅಥವಾ ನಾವೇ ಸಾಧ್ಯ ಮಾಡಿ ಕೊಡುತ್ತಿಲ್ಲವೋ ಗೊತ್ತಿಲ್ಲ.ನಾವೊಂದು ಭಿನ್ನವಾಗಿ ನಿಂತು ನಮ್ಮ ಮಕ್ಕಳ ಭವಿಷ್ಯವನ್ನು ನಾವು ನಮ್ಮ ಕೈಯಾರೆ ಹಾಳು ಮಾಡಿ ಬಿಡುತ್ತೇವೋ ಎನ್ನುವ ಆತಂಕ ಪದೇ ಪದೇ ನಮ್ಮನ್ನು ಕಾಡದೇ ಇರಲಾರದು.ನಮ್ಮ ಎಳೆಯ ಮಕ್ಕಳನ್ನು ನೀವು ಏನು ಆಗುತ್ತೀರಿ ಅಂತ ಒಮ್ಮೆ ಕೇಳಿ ನೋಡಿದರೆ ಗೊತ್ತಾಗುತ್ತದೆ.ಅವರೇನು ಆಗುತ್ತಾರೋ ಇಲ್ಲವೋ ಅದು ಮುಂದಿನ ಪ್ರಶ್ನೆ.ಆದರೆ ಪ್ರಾಥಾಮಿಕ ಶಾಲೆಯಲ್ಲಿಯೇ,ಅವರು ಅದಾಗಲೇ ತಾವು ಏನಾಗಬೇಕೆಂಬುದನ್ನ ನಿರ್ಧರಿಸಿ ಬಿಟ್ಟಿರುತ್ತಾರೆ.ಬಹುಷ: ಇವತ್ತಿನ ವಾತಾವರಣ ಅವರನ್ನು ಹಾಗೆ ರೂಪಿಸಿರಬಹುದೇನೋ.
ನನ್ನನ್ನೊಮ್ಮೆ ಎರಡನೇ ತರಗತಿಯ ಪೂವಮ್ಮ ಟೀಚರ್,ನೀ ಮುಂದೆ ಏನಾಗುತ್ತೀಯ ಅಂತ ಕೇಳಿದ್ದಕ್ಕೆ, ಏನು ಹೇಳಬೇಕೆಂದು ಗೊತ್ತಾಗದೆ,ಪಕ್ಕದ್ಮನೆ ಲಲಿತಕ್ಕನಂತೆ ಬಣ್ಣ ಬಣ್ಣದ ಅಂಗಿ ಹೊಲಿಯುವ ಟೈಲರ್ ಆಗಬೇಕೆಂದು ಕಣ್ಣರಳಿಸಿ ಹೇಳಿದ ನೆನಪು.ಇದನ್ನೆಲ್ಲಾ ನೆನೆದುಕೊಳ್ಳುವ ಹೊತ್ತಿಗೆ ನಗೆಯೂ ಬರುತ್ತದೆ,ಜೊತೆಗೆ ವಿಷಾದವೂ.ಅಥವಾ ನನ್ನಂತವರೆಲ್ಲಾ ಓದು,ಪರೀಕ್ಷೆ ಅಂತ ವಿಪರೀತ ಭಯ ಹುಟ್ಟಿಸಿಕೊಳ್ಳದೆ ಹೀಗೇ ಮೂಲೆಗುಂಪಾಗಿ ಬಿಟ್ಟೆವೇನೋ ಎಂಬ ಅಳುಕು ಕೂಡ ಸಣ್ಣಗೆ ಹಾದು ಹೋಗುತ್ತಿದೆ. ಆದರೆ ಈ ಓದು, ಉದ್ಯೋಗ,ಸ್ಪರ್ಧೆ ಇವುಗಳ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನನ್ನೊಳಗಿನ ಕವಿತೆ ಮಾತ್ರ ಆರಾಮವಾಗಿ ಓಡಾಡಿಕೊಂಡು ತನ್ನಷ್ಟಕ್ಕೇ ಗುನುಗಿಕೊಂಡು ಆರಾಮವಾಗಿದೆ.ಕವಿತೆಯ ಸುಖವನ್ನು ನೆನೆದು ಈ ಹೊತ್ತಲ್ಲಿ ನನಗೆ ಅಸೂಯೆಯಾಗುತ್ತಿದೆ.
– ಸ್ಮಿತಾ ಅಮೃತರಾಜ್.ಸಂಪಾಜೆ
ಮನಸ್ಸಿಗೆ ತುಂಬಾ ಹತ್ತಿರವಾದ ಬರಹ.. ಅಪ್ಪಟ ಸತ್ಯ!
ಬರಹ ತುಂಬಾ ಆಪ್ತವೆನಿಸಿತು….ನನ್ನ ಬಾಲ್ಯ ನೆನಪಿಸುವಂತೆ ಮಾಡಿತು…
ನಿಮ್ಮ ಅನಿಸಿಕೆ, ಅನುಭವ ಬದುಕಿಗೆ ಹತ್ತಿರವಾಗಿದ್ದು
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಬಾಲ್ಯದಲ್ಲಿ ಇಂಥ
ಪ್ರಸಂಗಗಳು ಬಂದಿರುತ್ತವೆ, ನಿಮ್ಮ ಕೊನೆಯ ಪ್ಯಾರಕ್ಕೆ
ಪೂರಕವಾಗಿ —-
ಟೀಚರ್__ ಒಬ್ಬ ವಿದ್ಯಾರ್ಥಿಗೆ ಕೇಳುತ್ತಾರೆ , ಮುಂದೆ ಎನಾಗಲು ಬಯಸುವೆ.
ವಿದ್ಯಾರ್ಥಿ– ನಾನು ಪ್ರಧಾನ ಮಂತ್ರಿ ಆಗುವೆ .
ಇನ್ನೊಬ್ಬ,- ನಾನು ಇಂಜಿನಿಯರ್, ಮತ್ತೊಬ್ಬ ಡಾಕ್ಟರ ಎಂದು ಹೇಳುತ್ತಾರೆ .
ವಿದ್ಯಾರ್ಥಿನಿ — ನಾನು ಎರಡು ಮಕ್ಕಳ ತಾಯಿ ಆಗುವೆ ಎಂದಾಗ, ಟೀಚರ್ ಅದು ಸರಿ,
ಈಗ ಭಾರತದಲ್ಲಿ ಕುಟುಂಬ ಯೋಜನೆ ಜಾರಿಯಲ್ಲಿದೆ, ಮುಂದಿನ ವಿದ್ಯಾರ್ಥಿ — ನಾನು
ಆ ಎರಡು ಮಕ್ಕಳ ತಂದೆ ಆಗಬಯಸುತ್ತೇನೆ ಎಂದಾಗ ಕ್ಲಾಸ್ ತುಂಬಾ ನಗೆ ಹರಡಿತು,
ಒಹ್…ಚೆನ್ನಾಗಿದೆ 🙂
ಸ್ಮಿತಾ ಮೇಡಂ ಚೆನ್ನಾಗಿದೆ..ಇಷ್ಟವಾಯಿತು…:)