ಪರಶಿವನ ಒಲುಮೆ ಬೇಕೆ?

Share Button

Vijaya Subrahmanya

ಶಿವದರುಶನ ನಮಗಾಯಿತು ಕೇಳೈ|ಶಿವರಾತ್ರಿಯ ಜಾಗರಣೆ ನಮದಾಯಿತು ಕೇಳೈ||    ಶಿವ ದರ್ಶನ ಅಥವಾ ಶಿವನ ಕೃಪೆ ಮಾನವನಿಗೆ ಸಿಗಬೇಕಾದರೆ,ಶಿವರಾತ್ರಿಯಂದು ಜಾಗರಣೆ ಮಾಡಬೇಕಂತೆ. ಅಂದರೆ..ರಾತ್ರಿಯಿಡೀ ನಿದ್ದೆಮಾಡದೆ ಭಜನೆಯೋ ಪೂಜೆಯೊ ಪಾರಾಯಣವೋ ರುದ್ರಜಪವೋ ಮೊದಲಾದ ಶಿವೋಪಾಸನೆ ಮಾಡಬೇಕೆಂದು ಹೇಳಿದ್ದಾರೆ.

ಪೌರಾಣಿಕ ಹಿನ್ನಲೆಯುಳ್ಳ ಭಾರತೀಯ ಭಕ್ತಿಪರಂಪರೆಯಲ್ಲಿ,ಶಿವರಾತ್ರಿಯಂದು ಶಿವನಿಗೆ ವಿಶೇಷ ಪೂಜಾದಿನವೆಂದು ಪರಿಗಣಿಸಿ ಆ ದಿನವನ್ನು ಭಕ್ತಿ-ಶ್ರದ್ಧೆಯಿಂದೊಡಗೂಡಿ ಹಬ್ಬವನ್ನಾಗಿಆಚರಿಸುತ್ತಾರೆ. ಪ್ರತಿ ತಿಂಗಳ ಕೃಷ್ಣಪಕ್ಷದ ಚತುರ್ದಶಿಯಂದು ’ಮಾಸಶಿವರಾತ್ರಿ’ ಎಂದು ಕರೆದರೆ ಮಾಘಬಹುಳ ಚತುರ್ದಶಿಗೆ ಮಹಾಶಿವರಾತ್ರಿ ಎಂಬ ಹೆಗ್ಗಳಿಕೆಯಿದೆ.ಶಿವರಾತ್ರಿಯು ಕಾಲ- ಕಾಲನಾದ,ಶಿವನಕಾಲ. ಹರ,ಈಶ್ವರ, ನಂದಿಕೇಶ್ವರ,ಪರಮೇಶ್ವರ, ಸದಾಶಿವ, ಪಾರ್ವತೀರಮಣ, ಶಿವಶಂಕರ, ಅವಿನಾಶ, ನಟೇಶ, ಮಹಾಬಲೇಶ್ವರ, ಮುಂತಾದ ಸಹಸ್ರನಾಮಗಳನ್ನು ಹೇಳಿ, ಬಿಲ್ವಪತ್ರೆಗಳಿಂದ ಪೂಜಿಸಿ ಶಿವನನ್ನು ಅನನ್ಯ ನೆನೆಯುತ್ತಾರೆ. ಹಾಗೆಯೇ ಶಿವರಾತ್ರಿಯಂದು ಶಿವನು ಸರ್ವ ಲಿಂಗಗಳಲ್ಲೂ ಸನ್ನಿಹಿತನಾಗುವನಂತೆ.

’ಓಂನಮಃ ಶಿವಾಯ’ ಎಂಬ ಪಂಚಾಕ್ಷರಿ ಮಂತ್ರ  ಬಹಳ ಶಕ್ತಿಯುತವೂ ಭಕ್ತಿಪ್ರದವೂ ಆಗಿದೆ.ಪಂಚಾಕ್ಷರೀ ಮಂತ್ರ ಜಪಿಸುತ್ತಾ  ದಿನವೂ ಮುಸ್ಸಂಜೆಗೆ ಭಸ್ಮಧಾರಣೆ ಮಾಡಿದಲ್ಲಿ  ಅಂದು ತಿಳಿಯದೇ ಮಾಡಿದಂತಹ ಪಾಪವಿದ್ದಲ್ಲಿ ಭಸ್ಮವಾಗಿ ನಾಶವಾಗುವುದೆಂಬ  ನಂಬಿಕೆ.  ಶಿವನು  ’ಪಿನಾಕ’  ಎಂಬ ಹೆಸರಿನ ಬಿಲ್ಲನ್ನು  ಧರಿಸಿರುವುದರಿಂದ ಅವನಿಗೆ ’ಪಿನಾಕಿ’ ಎಂಬ ಹೆಸರೂ ಇದೆ. ಶಿವನ ವಾಹನವು  ’ನಂದಿ’ .ಪರಶಿವನು ಆದಿಕಿರಾತ ಎನಿಸಿಕೊಂಡು ಅರ್ಜುನನಿಗೊಲಿದ ಕತೆ ಮಹಾಭಾರತದ ’ಕಿರಾತಾರ್ಜುನೀಯ’ ಎಂಬ ಪರ್ವದಲ್ಲಿ ವೇದ್ಯ.ದೇವರದಾಸಿಮಯ್ಯ ಎಂಬ ಶಿವಶರಣನು ನೇಯ್ಗೆಯ ಕಾಯಕ ಮಾಡುತ್ತಿದ್ದಾಗ  ಭಿಕ್ಷುಕ ರೂಪದಿಂದ ಬಂದ ಶಿವಶರಣನಿಗೆ ಬಟ್ಟೆಯನ್ನು ನೀಡಿ ತವನಿಧಿಯನ್ನು ಪಡೆದ ವಿಚಾರ ಬಸವಣ್ಣನವರ ವಚನದಿಂದ ಲಭ್ಯ.ಶಿವಭಕ್ತನಾದ ಜೇಡರ ಕಣ್ಣಪ್ಪನಿಗೆ ಶಿವ ಒಲಿಯುವುದೂ ಒಂದು ಕುತೂಹಲಕಾರೀ ಪ್ರಸಂಗ. ತನ್ನ ಬಾಯಿಯಿಂದಲೇ ಶಿವಲಿಂಗ ತೊಳೆದು ಮತ್ತೆ ತನ್ನ ಕಣ್ಣನ್ನೇ ಕಿತ್ತು ಲಿಂಗಕ್ಕರ್ಪಿಸುವ ಪರಿಶುದ್ಧ ಭಕ್ತಿಗೆ ಸರಿಸಾಟಿಯಿದೆಯೇ?.ಶಿವನನ್ನು ಆರಾಧಿಸಿ ಒಲಿಸಿಕೊಂಡು ಅಕ್ಕಮಹಾದೇವಿ  ಅದೆಷ್ಟೋ ನೀತಿವಚನಗಳನ್ನು ಸಮಾಜಕ್ಕೆ ನೀಡಿದ್ದಾಳೆ.ಹೀಗೆ ಪರಶಿವನು ನಾನಾಬಗೆಯಲ್ಲಿ ನಾನಾಜನರಿಗೆ ಒಲಿದಿದ್ದಾನೆ.

Shivaratri

ಶಿವರಾತ್ರಿದಿನ :- ಶಿವರಾತ್ರಿಯಂದು ಪ್ರಕೃತಿಯ ಪ್ರತಿಯೊಂದು ಚರಾ-ಚರ ವಸ್ತುಗಳಲ್ಲೂ  ಶಿವನ ಸಾನ್ನಿಧ್ಯವಿದೆಯಂತೆ.ಪ್ರತಿ ಸಂಧ್ಯಾಕಾಲವನ್ನು ಪ್ರದೋಷಕಾಲ ಎನ್ನುವರು.ಈ ಸಮಯ ಶಿವೋಪಾಸನೆಗೆ ಪ್ರಶಸ್ತಕಾಲ.ಮಾಘಬಹುಳ ಚತುರ್ದಶಿಗೆ  ಬರುವ ಮಹಾಶಿವರಾತ್ರಿಗೆ; ಹೆಸರೇ ಸೂಚಿಸುವಂತೆ ಶಿವನಿಗೆ ಅತ್ಯಂತ ಪ್ರಿಯವಾದ ಕಾಲ. ಈ ದಿನ ಸ್ನಾನಮಾಡಿ ಶುಚಿರ್ಭೂತರಾಗಿ ಶಿವಲಿಂಗದ ಮುಂದೆ ದೀಪ ಬೆಳಗಬೇಕು.ತುಪ್ಪದ ದೀಪವಾದರೆ ವಿಶೇಷ!. ಗಂಧ ಪುಷ್ಪಾದಿಗಳನ್ನು ಅರ್ಪಿಸಿ ಶಿವನ ಶತನಾಮಗಳನ್ನು ಭಕ್ತಿ ಪೂರ್ವಕವಾಗಿ ಹೇಳಬಹುದು.ತೀರ ಸರಳವಾಗಿ ಎಂದರೆ.ಒಂದೇ ಬಿಲ್ವಪತ್ರೆಯಿಂದ ಭಕ್ತಿಯಲ್ಲಿ ಏಕೋಧ್ಯಾನದಲ್ಲಿ ಶಿವನ ಸೇವೆ ಮಾಡಿದಲ್ಲಿ ಭಕ್ತರ ಮನೋರಥಗಳು ಈಡೇರುವುದು ಎಂಬುದು ಸನಾತನೀಯ ನಂಬಿಕೆ.

 –  ವಿಜಯಾಸುಬ್ರಹ್ಮಣ್ಯ, ಕುಂಬಳೆ

4 Responses

  1. Nayana Bajakudlu says:

    ಬಹಳಷ್ಟು ಮಾಹಿತಿಗಳನ್ನೊಳಗೊಂಡ ಲೇಖನ, ಸೊಗಸಾಗಿದೆ

  2. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

    ನಯನ ಬಜಕ್ಕೂಡ್ಲು ಸಹಿತ ಓದಿ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು.

  3. Shankari Sharma says:

    ಶಿವರಾತ್ರಿಯ ಮಹತ್ವ ಸಾರುವ ಸಕಾಲಿಕ ಲೇಖನ ಚೆನ್ನಾಗಿದೆ ವಿಜಯಕ್ಕ.

  4. ಶಿವಮೂರ್ತಿ ಹೆಚ್ says:

    ಭಕ್ತಿ ಪರಾವಶವಾಗಿಸಿತು ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: