ಅತ್ತೆ-ಅತ್ತಿಗೆ ಪಾತ್ರಗಳು ಎಂದಿಗೂ ಒಳ್ಳೆಯವರಾಗಿರಲು ಸಾಧ್ಯವೇ ಇಲ್ಲವೆ?

Share Button

Hema trek Aug2014

 

ಇತ್ತೀಚೆಗೆ, ಮಾಧ್ಯಮವೊಂದರಲ್ಲಿ ಪ್ರಕಟವಾಗಿದ್ದ ಬರಹವೊಂದು ಮೊನ್ನೆಯಿಂದಲೂ ತಲೆಯೊಳಗೆ ಗುಯಿಂಗುಡುತ್ತಾ ಕಾಡುತ್ತಿದೆ. ಅಂದ ಮಾತ್ರಕ್ಕೆ ಆ ಬರಹದಲ್ಲಿ ಅಂಥಹಾ ಘನವಿಚಾರವೇನಿದೆ ಅಂದುಕೊಂಡರೆ , ಏನೂ ಇಲ್ಲ. ಧಾರಾವಾಹಿಗಳಲ್ಲಿ ಬರುವ ಸ್ಟೀರಿಯೋಟೈಪ್ ಪಾತ್ರಗಳಾದ ‘ಅತೀ’ ಸದ್ಗುಣಿಯಾದ ಸೊಸೆ, ಹೊಸಿಲು ತುಳಿದಾಗಿನಿಂದ ಕೊನೆಯ ವರೆಗೂ ‘ಅತಿ ಸೌಜನ್ಯವತಿ’ಯಾದ ಸೊಸೆಯನ್ನು ಬೆಂಬಿಡದೆ ಕಾಡುವ ಕೂಡು ಕುಟುಂಬದ ಸದಸ್ಯರು, ‘ಅತಿ’ಯಾಗಿ ತವರಿಗೆ ಭೇಟಿ ಕೊಡುತ್ತಾ ಅಲ್ಲಲ್ಲಿ ಚಾಡಿ ಹೇಳಿ ಕಿಚ್ಚು ಹತ್ತಿಸುವ ‘ಅತಿ ಕ್ರೂರ’ ಅತ್ತಿಗೆಯರು ಮತ್ತು ಅವಿವೇಕಿಗಳಾದ ಅವರ ಮಕ್ಕಳು….ಹೀಗೆ..ಮುಂದುವರಿಯುತ್ತಾ ಇರುತ್ತದೆ.

ಈ ಜಗತ್ತಿನಲ್ಲಿ ಯಾರೂ ಅಪ್ಪಟ ಸದ್ಗುಣಿಗಳಾಗಿರುವುದಿಲ್ಲ.ತೀರಾ ಕ್ರೂರಿಗಳಾಗಿಯೂ ಇರುವುದಿಲ್ಲ (ಕೆಲವು ಮಾನಸಿಕೆ ವಿಕೃತಿಗಳನ್ನು ಹೊರತುಪಡಿಸಿ). ಒಂದು ವೇಳೆ ಇದ್ದರೂ , ಈಗಿನ ಗಡಿಬಿಡಿಯ ಜಗತ್ತಿನಲ್ಲಿ ಜನರಿಗೆ ತಮ್ಮದೇ ಆದ ಕೆಲಸೆ ಕಾರ್ಯ ಗಳಿರುವುದಿಲ್ಲವೇ? ಸದಾ ತವರಿಗೆ ಬಂದು ಕೂತು ‘ಸದ್ಗುಣಿ ಸಂಪನ್ನೆ’ಯಾದ ‘ಮನೆಸೊಸೆ’ ಯನ್ನು ಹುರಿದು ಮುಕ್ಕಲು ನಿಜಕ್ಕೂ ಸಮಯವಿರುತ್ತದೆಯೇ ? ಇದಕ್ಕೂ ಮೀರಿ ಕಾಟ ಕೊಡುತ್ತಾರೆಂದೇ ಭಾವಿಸಿದರೂ, ಆ ಸದ್ಗುಣಿ ಸಂಪನ್ನೆ ಸೊಸೆಗೆ, ತನ್ನ ವಿದ್ಯಾ-ಬುದ್ಧಿ-ಸಾಮರ್ಥ್ಯದಿಂದ ಸಂದರ್ಭವನ್ನು ನಿಭಾಯಿಸುವ ಪ್ರಯತ್ನ ಮಾಡಬಹುದಲ್ಲ ? ಸಂಘ-ಸಂಸ್ಥೆಗಳ ನೆರವು ಪಡೆಯಹುದಲ್ಲ ?

ತಾವು ಸೃಷ್ಟಿಸುವ ಕಾಲ್ಪನಿಕ ಪಾತ್ರಗಳಲ್ಲಿ, ಜನಸಾಮಾನ್ಯರಲ್ಲಿ ಅಪರೂಪವಾದ ಅತಿಯಾದ ಒಳ್ಳೆಯತನವನ್ನು ಆವಾಹಿಸಿ, ಕಂಡೂ ಕಾಣದಂತೆ ಅದರಲ್ಲಿ ತನ್ನನ್ನು ಗುರುತಿಸಿಕೊಂಡು, ಈ ಮೂಲಕ ತನ್ನ ‘ಅತ್ತೆ-ಅತ್ತಿಗೆ-ನಾದಿನಿ-ಅವರ ಮಕ್ಕಳ’ ಬಗ್ಗೆಯೂ ಪರಿಚಿತರ ವಲಯದಲ್ಲಿ ಕೆಟ್ಟ ಭಾವನೆ ಬರುವಂತೆ ಮಾಡುವ ಕಲೆ ಅವರಿಗೆ ಸಿದ್ಧಿಸಿರುತ್ತದೆ. ಇವರ ಬರಹಗಳಲ್ಲಿ ಸಾಂದರ್ಭಿಕವಾಗಿ ತಳಕುಹಾಕಿಕೊಂಡ ಕಾಲ್ಪನಿಕ ಅತ್ತಿಗೆ-ನಾದಿನಿ-ಅವರ ಮಕ್ಕಳ ‘ಕ್ರೂರ, ಕಪಟ’ ಪಾತ್ರಗಳಿಂದಾಗಿ , ನಿಜವಾದ ಸಮೀಪವರ್ತಿಗಳು ವಿನಾ ಕಾರಣ ‘ವಿಲನ್’ ಆಗಿ ಪರಿಚಿತರ ವಲಯದಲ್ಲಿ ಗುರುತಿಸಲ್ಪಡುವ ಅಪಾಯವಿದೆ.

 

Sister in laws

ದುರ್ಬುದ್ದಿಯುಳ್ಳ ಅತ್ತೆ,ಅತ್ತಿಗೆ-ನಾದಿನಿ-ಅವರ ಮಕ್ಕಳು ಇರುವುದನ್ನು ಅಲ್ಲಗಳೆಯಲಾಗದು. ಹಾಗೆಯೇ ಬಹಳ ಅನ್ಯೋನ್ಯತೆಯಿಂದ, ಅಣ್ಣ-ತಮ್ಮಂದಿರ ಮಕ್ಕಳನ್ನು ತನ್ನ ಮಕ್ಕಳಂತೆಯೇ ಪ್ರೀತಿಸುವ ಸೋದರತ್ತೆಯರಿರುತ್ತಾರೆ. ತವರು ಮನೆಗೆ ಬರುವಾಗ, ಅಣ್ಣ-ತಮ್ಮಂದಿರ ಸಂಸಾರಕ್ಕೆಂದು ಹೂವು-ಹಣ್ಣು-ತಿಂಡಿ ಹೊತ್ತು ತರುವ ಹೆಣ್ಣುಮಕ್ಕಳಿದ್ದಾರೆ. ಹಾಗೆ ಬಂದವರು ಅಸೌಖ್ಯತೆಯಲ್ಲಿರುವ ವೃದ್ಧ ತಂದೆ-ತಾಯಿಯರನ್ನು ಮಾತನಾಡಿಸಿ, ಬೇಕಿದ್ದರೆ ಔಷಧಿ ಕೊಡಿಸಿ ಹೋಗುವುದೂ ಇದೆ. ಬದಲಾಗುತ್ತಿರುವ ಕಾಲಮಾನದಲ್ಲಿ, ಮದುವೆಯಾಗಿ ಹೋದ ಉದ್ಯೋಗಸ್ಥ ಹೆಣ್ಣುಮಕ್ಕಳು, ತವರಿನ ಖರ್ಚುವೆಚ್ಚಗಳಿಗೆ ಹೆಗಲು ಜೋಡಿಸಿ ಜವಾಬ್ದಾರಿ ಹೊರುವ ಪ್ರಸಂಗಗಳು ಹಲವಾರು ಇವೆ.

ಅದರೆ ಹೆಚ್ಚಿನ ನಕಾರಾತ್ಮಕ ದೃಷ್ಟಿಯಿಂದ ಸೃಷ್ಟಿಸಿದ ಬರಹ-ಧಾರಾವಾಹಿಗಳಲ್ಲಿ ಅತ್ತಿಗೆ-ನಾದಿನಿಯರು ತವರಿನಿಂದ ಮಾತ್ರ ಸಂಪತ್ತನ್ನು, ವಸ್ತುಗಳನ್ನು ಕುಯುಕ್ತಿಯಿಂದ ಬಾಚಿ ಅಥವಾ ಕದ್ದಾದರೂ ಕೊಂಡೊಯ್ಯುತ್ತಾರೆ. ತಪ್ಪಿಯೂ ತವರಿಗೆ ಏನೂ ಕೊಡುವುದಿಲ್ಲ! ಹಾಗಾದರೆ, ‘ಪರಮ ಸದ್ಗುಣಿಯಾದ ಸೊಸೆ’ಯೂ ತನ್ನ ತವರಿನಿಂದ ಹಾಗೆಯೇ ಮಾಡುತ್ತಿರಬಹುದೆ? ಯಾಕೆಂದರೆ ಆ ಮನೆಗೆ ಈಕೆಯೂ ‘ಅತ್ತಿಗೆ’ ಅಲ್ಲವೇ? ತಾನು ತವರಿನಿಂದ ಏನಾದರೂ ತಂದರೆ ಅದು ‘ಅವರು ಪ್ರೀತಿಯಿಂದ ಮನೆಮಗಳಿಗಾಗಿ ಅರಶಿನ-ಕುಂಕುಮದೊಂದಿಗೆ ಕೊಟ್ಟ ಊಡುಗೊರೆ’. ಅದೇ ತನ್ನ ಗಂಡನ ಮನೆಯ ಹೆಣ್ಣುಮಕ್ಕಳಿಗೆ ಪತಿ ಅಥವಾ ಅತ್ತೆ ಏನಾದರೂ ಕೊಟ್ಟರೆ ಅದು ‘ಅತ್ತಿಗೆ-ನಾದಿನಿ’ಯರು ಹೊಂಚು ಹಾಕಿ ಕಬಳಿಸುವ ಸೊತ್ತು! ಈ ವಿತಂಡವಾದಕ್ಕೆ ಏನನ್ನೋಣ?

ಅತ್ತೆ-ಅತ್ತಿಗೆಯಾಗಿರುವವರು ಯಾವಾಗಲೂ ದುಷ್ಟರಾಗಿರುವುದಿಲ್ಲ.ಹಾಗೆಂದು ಮನೆಯ ಸೊಸೆ ಯಾವಾಗಲೂ ಆದರ್ಶ ಮಹಿಳೆಯಾಗಿರುವುದಿಲ್ಲ. ಆದರದಿಂದ ಅಡುಗೆ ಮಾಡಿ ಉಣಬಡಿಸುವ ಅತ್ತಿಗೆಯೂ, ತನ್ನ ಅತ್ತಿಗೆ-ನಾದಿನಿಯರು ಬರುವಾಗ ತನಗೆ ಉಷಾರಿಲ್ಲವೆಂದೋ, ಮಗು ರಚ್ಚೆ ಹಿಡಿಯುತ್ತಿದೆಯೆಂದೋ ಅಡುಗೆಕೋಣೆಗೆ ಬಾರದೇ ಇರುವ ಅತ್ತಿಗೆಯೂ ಒಂದೇ ನಾಣ್ಯದ ಎರಡು ಮುಖದಂತೆ ಕಾಣಸಿಗುತ್ತಾರೆ. ಚುಚ್ಚು ಮಾತಿನಲ್ಲಿ ತಿವಿಯುವ ಅತ್ತೆಯರ ನೆರಳಿನಲ್ಲಿಯೇ , ‘ಸೊಸೆಯೆಂದರೆ ಮಗಳಿಂದಲೂ ಹೆಚ್ಚು’ ಎನ್ನುವ ಅತ್ತೆಯರೂ ಇರುತ್ತಾರೆ. ಒಟ್ಟಾರೆ ಈ ಜಂಜಾಟದಲ್ಲಿ, ಶಬ್ದಕ್ಕೆ ನಿಲುಕದ, ಯಾವುದೇ ಕೌಟುಂಬಿಕ ದೌರ್ಜನ್ಯದ ಪರಿಧಿಗೆ ಬಾರದ ಸಮಸ್ಯೆಗಳಿವೆ

ಹಿಂದೆ ಶಾಲಾ ಕಾಲೇಜುಗಳು ಸಮೀಪದಲ್ಲಿ ಇಲ್ಲದಿದ್ದ ಕಾಲದಲ್ಲಿ, ಹಾಸ್ಟೆಲ್ ಸೌಲಭ್ಯ ಇಲ್ಲದ ಸಂದರ್ಭದಲ್ಲಿ ಅಥವಾ ಇದ್ದರೂ ಫೀಸ್ ಭರಿಸಲು ಸಾಧ್ಯವಾಗದ ಅನಿವಾರ್ಯತೆಯಿಂದಾಗಿ ಹಳ್ಳಿಯ ಕೂಡುಕುಟುಂಬದ ಮನೆಗಳಲ್ಲಿ , ನೆಂಟರಿಷ್ಟರ ಮನೆಯಲ್ಲಿ ಓದಲೆಂದು ಇರುವ ಪದ್ಧತಿಯಿತ್ತು. ಇದನ್ನು ಆ ಮನೆಯವರು            ” ವಿದ್ಯಾರ್ಥಿಗೆ ಸಹಾಯವಾಗಲಿ.. ಜೀವನದಲ್ಲಿ ಮುಂದೆ ಬರಲಿ, ಅದೇ ಸಂತೋಷ “ ಎಂಬ ದೃಷ್ಟಿಯಿಂದ ಪರಿಗಣಿಸುತ್ತಿದ್ದರೇ ಹೊರತು , ಅದೇ ವಿಷಯವನ್ನೇ ಪದೇಪದೇ ನೇರವಾಗಿ/ಓರೆಯಾಗಿ ಪ್ರಸ್ತಾಪಿಸುತ್ತಾ ತನ್ನ ಶ್ರೇಷ್ಠತೆಯನ್ನು ಹೊಗಳಿಕೊಳ್ಳುತ್ತಾ, ಅತ್ತಿಗೆ-ನಾದಿನಿಯ ಮಕ್ಕಳಿಂದಾಗಿ ನಮಗೆ ಖರ್ಚಾಯಿತು, ಕಿರಿಕಿರಿಯಾಯಿತು ಎಂದೆಲ್ಲಾ ಸಾರುತ್ತಿರಲಿಲ್ಲ. ಸಹಜವಾಗಿಯೇ ಆಶ್ರಯ ಕೊಟ್ಟ ಮನೆಯ ಬಗ್ಗೆ, ಊಟವಿಕ್ಕಿದ ಮಾತೆಯರ ಬಗ್ಗೆ ಗೌರವವಿರುತ್ತಿತ್ತು.

ಕೂಡುಕುಟುಂಬದ ಕೊನೆಯ ಸೊಸೆಯಾಗಿ, ಪ್ರಸ್ತುತ ನಗರದಲ್ಲಿರುವ ನನ್ನ ಅನುಭವದ ವ್ಯಾಪ್ತಿಯಲ್ಲಿ, ಬಹಳಷ್ಟು ಸಹಾಯಮಾಡುವ ಮನೋಭಾವವುಳ್ಳ ಅತ್ತೆ-ಅತ್ತಿಗೆ-ನಾದಿನಿಯರನ್ನು ನೋಡಿದ್ದೇನೆ. ನಮ್ಮ ಕುಟುಂಬದಲ್ಲಿಯೇ, ತಾಯಿಯಿಲ್ಲದ ತವರಿನಿಂದ ಬಂದಿದ್ದ ವಾರಗಿತ್ತಿಯೊಬ್ಬರ ಬಾಣಂತನಗಳನ್ನು, ಈಗ ದಿವಂಗತರಾಗಿರುವ ನಮ್ಮ ಅತ್ತೆಯವರೇ ತಾಯಿಗಿಂತ ಮಿಗಿಲಾದ ಕಾಳಜಿಯಿಂದ ನಿರ್ವಹಿಸಿದ್ದರೆಂದು ಹೇಳುವಾಗ ಅವರಿಗೆ ಮನತುಂಬಿ ಬರುತ್ತದೆ. ಮನೆಯ ಮಕ್ಕಳು ಶಾಲೆಗೆ ಹೋಗಲು ಬಸ್ %B

5 Responses

  1. Vasantha Srinivas says:

    ನಾನು ಒಳ್ಳೆಯ ಅತ್ತಿಗೆ ಅಂತ ನಿರೂಪಿಸಿಕೊಂಡಾಯ್ತು ಮೇಡಂ

  2. Sainath Naikal says:

    ಇಲ್ಲಿ ಒಳ್ಳೆಯವರಾಗಿರಲು ಎಲ್ಲರಿಗೂ ಇಷ್ಟವಿದೆ. ಆದರೆ ಯಾಕೆ ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಎನ್ನುವುದೇ ಕುತೂಹಲಕರವಾದ ಪ್ರಶ್ನೆ. ನಮ್ಮ ಸಿಟ್ಟು, ನಮ್ಮ ಅಹಂಕಾರ, ನಮ್ಮ ಕ್ರೌರ್ಯ ಮತ್ತು ನಮ್ಮ ಹುಚ್ಚುತನಗಳಿಗೆ ಒಂದು ಕಾರಣ .

  3. Deepa says:

    ಕೆಲವರು ಹಾಗೆ ಮೇಡಂ..ಬಹಳ ಸಜ್ಜನ ಪಾತ್ರಗಳನ್ನು ಸೃಷ್ಟಿಸುವವರು ತಮ್ಮ ನಿಜಜೀವನದಲ್ಲಿ ತಾವೇ ಖಳನಾಯಕರಾಗಿರುತ್ತಾರೆ. ಹಳೆಯ ಕನ್ನಡ ಸಿನೆಮಾಗಳಲ್ಲಿ ಅತಿಸಭ್ಯ ‘ಗಂಡ’ನಾಗಿ ಮೆರೆದ ನಟ, ಮೆರೆಸಿದ ನಿರ್ದೇಶಕರ ಅಸಲಿ ಕಥೆ ಬೇರೇನೋ ಇತ್ತು. ಹಾಗೆಯೇ ತೆರೆಮೇಲಿನ ಘಟವಾಣಿ , ಖಳನಾಯಕರು ನಿಜಜೀವನದಲ್ಲಿ ಅತಿ ಸಜ್ಜನರಾಗಿರುವುದ್ದೂ ಇದೆ.

  4. sangeetha raviraj says:

    ವಾಸ್ತವ ಕೆ ಹತ್ತಿರದ ಬರಹ.ಇಷ್ಟವಾಯಿತು

  5. ಬರಹದಲ್ಲಿ ಪ್ರಸ್ತುತ ಪಡಿಸಿದ ವಿಚಾರಗಳು ಚಿಂತನೆಗೆ ಹಚ್ಚುವಂಥದು . ನಾವು ಸರಿಯಾಗಿದ್ದರೆ ಯಾರೇನು ಮಾಡುವಂತಿದೆ . ವಿಷಯ ಭಿನ್ನವಾಗಿ ಮನೆ ಮನೆಯವರು ಅವಲೋಕಿಸುವ ಹಾಗಿದೆ. ಒಳ್ಳೆಯ ವಿಚಾರಧಾರೆಯನ್ನು ಕೊಟ್ಟಿದ್ದಕ್ಕೆ ಸುರಹೊಂನೆಗೆ ಮೆಚ್ಚುಗೆ ಗಳು.

Follow

Get every new post on this blog delivered to your Inbox.

Join other followers: