ನರಮೇಧದ ನೆರಳಿನಲ್ಲಿ …ಅಂಡಮಾನ್ ನ ‘ರೋಸ್ ಐಲೆಂಡ್’
ಅಂಡಮಾನ್ ದ್ವೀಪ ಸಮೂಹದಲ್ಲಿ ರಾಕ್ ಐಲೆಂಡ್ ಗೆ ವಿಶಿಷ್ಟ ಸ್ಥಾನ. ಸಾಗರದ ಮೇಲೆ ಶಿಪ್ ಮೂಲಕ ಪ್ರಯಾಣ.ಫಿರ್ಜಾನ್ ಆಲಿ ಎನ್ನುವ ಮುಸಲ್ಮಾನ, ಪತ್ನಿ ಸಹಿತ ಮೊದಲಿಗೆ ಅಲ್ಲಿಗೆ ಬಂದಿದ್ದರು. ಇದು ಗೈಡ್ ಉವಾಚ. ಅಂಡಮಾನದ ಆದಿವಾಸಿಗಳ ನೆಲೆ ರಾಕ್ ದ್ವೀಪ. ಅವರನ್ನು ನಿಷ್ಕರುಣೆಯಿಂದ ಕೊಂದು ನಿರ್ಮೂಲ ಮಾಡಿ ಬ್ರಿಟಿಶರು ಜಾಗವನ್ನು ಆಕ್ರಮಿಸಿದರು. ಅವರೇ ಇಟ್ಟ ಹೆಸರು ರೋಸ್ ಐಲಂಡ್. ಈಗ ರಾಕ್ ಐಲೆಂಡ್ ಅನ್ನುವ ಹೆಸರು ಅಲ್ಲಿಗಿಲ್ಲ.
ರೋಸ್ ಐಲೆಂಡ್ ನ ನಾಲ್ಕೂ ಕಡೆ ಸಮುದ್ರ. ಬಲು ಪುಟ್ಟ ದ್ವೀಪ. ಇಲ್ಲಿ ಮೂರು ಶತಮಾನ ಹಿಂದಿನ ಪವರ್ ಹೌಸ್ ಇದೆ. ಪ್ರಿಂಟಿಂಗ್ ಪ್ರೆಸ್, ಫಿರಂಗಿ ಇದೆ. ಸಮುದ್ರ ಮಟ್ಟದಿಂದ ಬಲು ಎತ್ತರದ ತಾಣ ರೋಸ್ ಐಲೆಂಡ್. ನಾವು ನಿಂತಲ್ಲಿಂದ ಅರುವತ್ತು ಅಡಿ ಕೆಳಗೆ ಬಂಡೆಗಳಿಂದ ಕೂಡಿದ ಬೀಚ್ ಇದೆ. ಬಾಂಬ್ ಧಾಳಿಯಿಂದ ಅರೆಮುರಿದ ಕಟ್ಟಡಗಳಿವೆ. ಇಲ್ಲಿನ ಮರಳಿಗೆ ಅಪರೂಪದ ಕಲರ್. ಅದು ಸಿಲ್ವರ್ ಬಣ್ಣ. ಮೇಲಿಂದ ಸಾಗರದ ನೀರನ್ನು ಕಾಣುವಾಗ ಅಲ್ಲಲ್ಲಿ ನೀರಿನ ಬಣ್ಣದಲ್ಲಿ ವ್ಯತ್ಯಾಸ ಗುರುತಿಸಬಹುದು. ಇಲ್ಲಿ ಕೇವಲ ಬ್ರಿಟಿಷರಿಗಾಗಿ ಮೀಸಲಾದ ಸ್ವಿಮಿಂಗ್ ಪೂಲ್ ಕಾಣಬಹುದು. ಅದರ ಉದ್ದ ಐವತ್ತು ಅಡಿ ಆದರೆ ಅಗಲ ಹದಿನೈದು ಅಡಿಗಳು.ಪುಟ್ಟ ದ್ವೀಪದಲ್ಲಿ ಅಂದಿಗೆ ಇಟ್ಟ ನಾಲ್ಕು ಫಿರಂಗಿಗಳನ್ನು ಗಮನಿಸಬಹುದು . ಮೂಲನಿವಾಸಿಗಳನ್ನು ಕೊಂದು ದ್ವೀಪದಲ್ಲಿ ಬೀಡುಬಿಟ್ಟ ಬ್ರಿಟಿಷರಿಗೆ ಸಮೀಪದಲ್ಲಿರುವ ಇತರ ದ್ವೀಪದ ಆದಿವಾಸಿಗಳು ಆಕ್ರಮಿಸಿ ತಮ್ಮನ್ನು ಕೊಲ್ಲುವ ಭೀತಿ ಇತ್ತು. ಸ್ನಾನಕ್ಕೆ, , ಶೌಚಕ್ಕೆ , ಒಗೆಯಲು, ಕುಡಿಯಲು ಬಿಸ್ಲೇರಿ ನೀರು; ಮೂಲನಿವಾಸಿಗಳು ಯಾವ ಹೊತ್ತಿಗೂ ತಮ್ಮ ಮೇಲೆ ಆಕ್ರಮಣ ಮಾಡಿ ಕೊಲ್ಲುವ ಭಯದಿಂದಾಗಿ ದ್ವೀಪಕ್ಕೂ ಅನ್ಯ ದ್ವೀಪದ ಮಣ್ಣಿಗೂ ಮಧ್ಯೆ ಇರುವ ಸಾಗರ ಕ್ಕೆ ಸೇತುವೆ ಮಾಡಿದ್ದರು. ತಮ್ಮ ಉಪಯೋಗ ಮುಗಿದ ತಕ್ಷಣ ಸೇತುವೆ ಸಂಪರ್ಕ ತೆಗೆದುಬಿಡುತ್ತಿದ್ದರು. ಆಗ ಸೇಫ್.
ತಮ್ಮದೇ ನೆಲದಿಂದ ತಮ್ಮ ಮಾರಣಹೋಮ ನಡೆಸಿ ಆಕ್ರಮಿಸಿದ ಆಂಗ್ಲರ ಮೇಲೆ ಅಪಾರ ದ್ವೇಷ ಹೊಂದಿದ್ದ ಮೂಲನಿವಾಸಿಗಳಿಗೆ ಇವರ ಸ್ವಾರ್ಥ ಹಿಡಿಸದು. ಅವರ ಪ್ರಕಾರ ಭೂಮಿ ಮತ್ತು ನೀರು ದೇವರಿತ್ತ ವರ. ಅಲ್ಲಿ ಸ್ವಾಧೀನ ಸಲ್ಲದು. ಇಲ್ಲಿನ ಸಮುದ್ರದ ನೀರು ಚರ್ಮರೋಗಕ್ಕೆ ಔಷಧವೆನ್ನುತ್ತಾರೆ. ಪ್ರವಾಸಿಗರ ಆಕರ್ಷಣೆಗಾಗಿ ನವಿಲುಗಳನ್ನು, ದೊಡ್ಡ ಗಾತ್ರದ ಕೋಳಿಗಳನ್ನು ಸಾಕಿದ್ದಾರೆ. ಗೈಡ್ ಕರೆದಾಗ ಓಡಿ ಬರುವ ಹಾಗೆ ಅವರಿಗೆ ತರಬೇತಿ ಇದೆ. ಆಕೆ ಆಹಾರ ಹಾಕಿ ಹೋಗು ಅಂದ ಕೂಡಲೇ ಅವು ಹಿಂದಿರುಗುವುದೇ ಚೆಂದ. ಅಲ್ಲಲ್ಲಿ ಮುರಿದ ಕೋಟೆ ಕುರುಹುಗಳಿದೆ. ತೆಂಗಿನ ಮರ ಸಾಕಷ್ಟಿದೆ. ಆಂಗ್ಲ ಅಧಿಕಾರಿಗಳಿಗಾಗಿ ಇಲ್ಲಿ ಬೇಕರಿ,
ಕುಕ್ ಹೌಸ್ ಇತ್ತು. ಅವರವರ ಅಧಿಕಾರಕ್ಕೆ ತಕ್ಕ ಹಾಗೆ ಮನೆಗಳಿವೆ. ಮಕ್ಕಳಿಗೆ ಉದ್ಯಾನ, ತೂಗುಯ್ಯಾಲೆಗಳಿವೆ. ಬೀಚಿದೆ.ಕ್ಲಬ್ ಕಾಣಬಹುದು. ಎತ್ತರದ ಜಾಗದಲ್ಲಿ ಈಗ ಮುರುಕಲಾದ ಚರ್ಚ್ ನೋಡಬಹುದು. ಅಧಿಕಾರಿಗಳಿಗೆ ಪ್ರತ್ಯೇಕ ಮೆಸ್ ಉಂಟು. ಇಲ್ಲಿ ಒಮ್ಮೆಗೆ ನೂರಾಅರುವತ್ತೈದು ಜನ ಆಹಾರ ಸೇವಿಸುತ್ತಿದ್ದರು. ವೈಶಿಷ್ಟ್ಯವೇನೆಂದರೆ ಈ ದ್ವೀಪ ನಮ್ಮ ಕಡೆಯ ಗುಡ್ಡಗಳ ಹಾಗೆ ಎತ್ತರ, ತಗ್ಗಾಗಿದೆ ಮೇಲಿಂದ ನೋಡಿದರೆ ಸಮುದ್ರದ ನೀರು ಹಸಿರು, ನೀಲ, ತಿಳಿ ಬಿಳುಪಾಗಿ ಕಾಣುತ್ತದೆ.
ದ್ವೀಪದ ತುದಿಯಿಂದ ಸಮುದ್ರದ ದಡಕ್ಕೆ ಇಳಿಯಲು ಅಗಲಗಲದ ಮೆಟ್ಟಲಿದೆ. ಅಲ್ಲಿ ಆಳ ಕಮ್ಮಿ ಎನ್ನುತ್ತಾರೆ. ಆ ಭಾಗ ಮುಳುಗಡೆ ಆದ ನೆಲದ ತುದಿಭಾಗವಂತೆ . ಒಂದೊಮ್ಮೆ ಇನ್ನೂರು ಎಕರೆ ಇದ್ದ ನೆಲ ಈಗ ಸಮುದ್ರ ನುಗ್ಗಿ ನಲವತ್ತು ಎಕರೆಗೆ ಇಳಿದಿದೆ. ದ್ವೀಪದ ತುತ್ತ ತುದಿಯಲ್ಲಿ ಮೃತರ ಸಮಾಧಿ ಕಾಣಬಹುದು. ದ್ವೀಪದ ಮಧ್ಯೆ ಅರ್ಧ ಎಕರೆ ಜಾಗ ಆಕ್ರಮಿಸಿರುವ ಸಿಹಿ ನೀರ ಕೆರೆ ಇದೆ. ಸುತ್ತ ಕೂರಲು (ಅಂಗ್ಲರಿಗೆ) ಕಲ್ಲಿನ ಆಸನಗಳಿವೆ. ಒಂದಡಿಗೂ ಮೀರಿದ ಗಾತ್ರದ ಮೀನುಗಳನ್ನು ಗಮನಿಸಬಹುದು. ಒಂದೊಮ್ಮೆ ಮೂಲನಿವಾಸಿಗಳ ಮಾರಣ ಹೋಮ ನಡೆಸಿ ತಮ್ಮ ಸುರಕ್ಷತೆಗೆ ನಾಲ್ಕು ಕಡೆಯಲ್ಲಿ ಸಮುದ್ರದಿಂದ ಆವೃತವಾದ ದ್ವೀಪದಲ್ಲಿ ತಂಗಿರುತ್ತಿದ್ದ ಬ್ರಿಟಿಷರಿಗೆ ಅವರ ಹೆದರಿಕೆ ಸಾಕಷ್ಟಿತ್ತು. ಘೋರ ವಿಷ ಲೇಪಿತ ಬಾಣ ಹಿಡಿದೇ ಆಂಗ್ಲರನ್ನು ಕೊಲ್ಲಲು ಹಾತೊರೆಯವ ಆದಿವಾಸಿಗಳಿಗೆ ಭಯಪಡುತ್ತ ಇದ್ದರು. ಒಂದೊಮ್ಮೆ ರಕ್ತದೋಕುಳಿ ಹರಿಸಿ ಕಿತ್ತುಕೊಂಡಿದ್ದ ದ್ವೀಪ ಈಗ ನಿರ್ಮಾನುಷ್ಯವಾಗಿದೆ. ರಾತ್ರೆ ಒಬ್ಬರೂ ಉಳಿಯುವುದಿಲ್ಲ ಅಲ್ಲಿ. ಪ್ರವಾಸಿಗರು ಒಬ್ಬರೂ ಅಲ್ಲಿ ಬಾಕಿಯಾಗದಂತೆ ನೋಡಿ ಹೊರಡಿಸಿ ಸಂಪರ್ಕದ ಸೇತುವೆ ತೆಗೆದಿಡುತ್ತಾರೆ. ಜಾಪಾನಿಯರು ಹಾಳುಗೆಡವಿದ್ದಾರೆ ಎಂದು ಗೈಡ್ ವಿವರಿಸುತ್ತಾರೆ.
ಅಂಡಮಾನ್ ದ್ವೀಪಗಳಲ್ಲಿ ತಮ್ಮಷ್ಟಕ್ಕೆ ತಾವು ಜೀವಿಸುತ್ತಿದ್ದ ಅಲ್ಲಿನ ಮೂಲನಿವಾಸಿಗಳನ್ನು ಗನ್ ಬಳಸಿ ಕೊಂದು ನೆತ್ತರ ಕಾಲುವೆ ಹರಿಸಿ ಬ್ರಿಟಿಷರು ತಮಗೆ ಬೇಕಾದ ಹಾಗೆ ರೆಸಾರ್ಟ್ ಆಗಿ ಬದಲಾಯಿಸಿಕೊಂಡಿದ್ದರು. ಕುಡಿಯುವುದರಿಂದ ಹಿಡಿದು ಪ್ರತಿಯೊಂದಕ್ಕೂ ಬ್ರಿಟನ್ ನಿಂದ ನೀರು ತರಿಸುತ್ತಿದ್ದರು. ಈಗ ಇದು ರೋಸ್ ಐಲಂಡ್ ಆಗಿ ಪ್ರವಾಸಿತಾಣವಾಗಿದೆ. ಸ್ವಲ್ಪ ಮಟ್ಟಿಗಿನ ಮರಗಳನ್ನು ಬಿಟ್ಟರೆ ಬ್ರಿಟಿಷರು ಬಳಸಿದ ಕೆರೆ, ಬಂಗಲೆಗಳು ಮಾತ್ರಾ ಇಲ್ಲಿವೆ. ಸಮುದ್ರ ಮೂರು ಬಣ್ಣಗಳಲ್ಲಿ ಕಾಣಬಹುದು. ಅದೆಲ್ಲವನ್ನು ಮೀರಿ ಕಣ್ಣಿಗೆ ರಾಚುವುದು ನೆಲದ ಸ್ವಾಧೀನಕ್ಕೆ ಹರಿದ ರಕ್ತದೋಕುಳಿ! ದೂರದಲ್ಲಿ, ಸಮುದ್ರದಾಚೆಗಿನ, ಏನೂ ಬೆಳೆಯದ ನೆಲದಲ್ಲಿ ನಿರುಪದ್ರವಿಗಳಾಗಿ ತಮ್ಮ ಪಾಡಿಗೆ ಇದ್ದವರನ್ನು ಅಮಾನುಷತೆಯಿಂದ ಕೊಂದು ನೆತ್ತರು ಚೆಲ್ಲಿದ ದ್ವೀಪ ಅದು.
ಅದೆಷ್ಟು ಮುಗ್ಧರ ರಕ್ತತರ್ಪಣವಾದ ಆ ದ್ವೀಪದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಬೇಕೇ ವಿನಹಾ ಬ್ರಿಟಿಷರ ವೈಭೋಗದ ಬದುಕಿನ ಚಿತ್ರಣದ ಹರಕಲನ್ನು ಪ್ರವಾಸಿತಾಣವೆಂದು ಒಪ್ಪಿಕೊಳ್ಳಲು ಮನಸ್ಸು ಒಡಂಬಡಲೇ ಇಲ್ಲ.
– ಕೃಷ್ಣವೇಣಿ ಕಿದೂರು,ಕಾಸರಗೋಡು.
ನಾನೂ ‘ರೋಸ್ ಐಲೆಂಡ್’ ಗೆ ಹೋಗಿದ್ದೆ. ಅಲ್ಲಿಯ ಚರಿತ್ರೆ ಕೇಳಿದಾಗ ಮನಸ್ಸು ಅತ್ಯಂತ ಭಾರವಾಗುತ್ತದೆ.